ಕಾಯಕವಿಲ್ಲದ ಜೀವನ, ಮೇಘವಿಲ್ಲದ ಗಗನ : ಪರಿಶ್ರಮವೇ ಮನುಜ ಜೀವನದ ಪ್ರಾಣ ಸರ್ವಜ್ಞ
ಮೂಲ ಸೌಕರ್ಯಗಳ ಕೊರತೆಯಿಂದ ಅದೆಷ್ಟು ಸರಕಾರಿ ಶಾಲೆ, ಕಾಲೇಜುಗಳು ಮುಚ್ಚುತ್ತಿವೆ. ರಸ್ತೆ ವಿದ್ಯುತ್ ಸಾರಿಗೆ ಸೌಕರ್ಯಗಳಿಲ್ಲದೆ ಜನ ಹಳ್ಳಿಗಳನ್ನು ಬಿಟ್ಟು ದೊಡ್ಡ ದೊಡ್ಡ ನಗರಗಳಿಗೆ ತೆರಳುತ್ತಿದ್ದಾರೆ. ಹೀಗಾಗಿ ನಿರುದ್ಯೋಗ ಸಮಸ್ಯೆಯಿಂದ ನಮ್ಮ ಕಲ್ಯಾಣ ಕರ್ನಾಟಕ ಭಾಗ ಬಳಲುತ್ತಿದೆ.
‘ಕೆಲಸ ಮಾಡಿದವನೇ ದೇವರಿಗೆ ಹಿತ, ಆಲಸ್ಯ ಹಿಡಿದವನು ಲೋಕಕ್ಕೂ ಅಹಿತ’ ಎಂಬ ಎರಡು ಸರ್ವಜ್ಞನ ವಚನಗಳು ನಮ್ಮ ಯಾದಗಿರಿ ಜಿಲ್ಲೆಯ ಜನರ ಮೇಲೆ ಪ್ರಭಾವ ಬೀರಬೇಕಾಗಿದೆ.
ಕಲ್ಯಾಣ ಕರ್ನಾಟಕದ ಅತ್ಯಂತ ಪುಟ್ಟ ಜಿಲ್ಲೆಯಾದ ಹಲವು ಪ್ರವಾಸಿ ತಾಣಗಳನ್ನು ತನ್ನತ್ತ ಕೈಬೀಸಿ ಕರೆಯುತ್ತಿರುವ ಕಲೆ ಸಂಸ್ಕೃತಿ ಮತ್ತು ಸಾಹಿತ್ಯದ ವಿಷಯದಲ್ಲಿ ಹೆಮ್ಮೆ ಪಡಬಹುದಾದ ಇತಿಹಾಸ ಹೊಂದಿರುವ ನಮ್ಮ ಯಾದಗಿರಿ ಗಿರಿನಾಡು ಎಂತಲೇ ಖ್ಯಾತಿಯಾಗಿದೆ.
ಕಾಲಜ್ಞಾನ ವಚನಕಾರ ಕೊಡೆಕಲ್ ಚನ್ನಬಸವೇಶ್ವರ, ಜೈಮಿನಿ ಭಾರತ ಕೃತಿ ರಚನಕಾರ ದೇವಪುರದ ಲಕ್ಷ್ಮೀಶ, ಕೆಲೇರಿಯಾ ಕೇತಯ್ಯ, ಮುದನೂರಿನ ಆದ್ಯ ವಚನಕಾರ ದಾಸಿಮಯ್ಯ, ರಸ್ತಾಪುರದ ಶರಭಲಿಂಗೇಶ್ವರರು, ಚಿಂತನಹಳ್ಳಿ ಗವಿಸಿದ್ದಲಿಂಗೇಶ್ವರರು, ಶಹಾಪುರದ ಚರಬಸವೇಶ್ವರರು, ದಿಗ್ಗಿಯ ಸಂಗಮನಾಥ, ಬಿ. ಗುಡಿಯ ಬಲ ಭೀಮೇಶ್ವರ, ಗುಡ್ಡದ ಸಿದ್ದಲಿಂಗೇಶ್ವರ ವೇಣುಗೋಪಾಲಸ್ವಾಮಿ ಮಂದಿರ ಅಲ್ಲದೆ ವಿಶ್ವವನ್ನೇ ಬೆರಗುಗೊಳಿಸಿರುವ ಬುದ್ಧ ಮಲಗಿರುವ ದೃಶ್ಯ, ಇಂತಹ ಅನೇಕ ಅದ್ಭುತ ಗೊಳಿಸುವ ಸ್ಥಳಗಳು ಇರುವ ಶರಣರು ನಡೆದಾಡಿದ ಪುಣ್ಯಭೂಮಿ ನಾಡಿದು.
ಇಂತಹ ನಾಡಿನಲ್ಲಿ ಶೂರರಿಗೆ, ಧೀರರಿಗೆ, ಮಹಾರಾಜರಿಗೆ ಕೊರತೆ ಇಲ್ಲ. ಅದೆಲ್ಲ ಹೆಮ್ಮೆಪಡುವ ಸಂಗತಿ. ಆದರೆ ಮತ್ತೊಂದೆಡೆ ನಮ್ಮ ಜಿಲ್ಲೆಯ ಜನತೆ ಹಲವಾರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅದರಲ್ಲೂ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಯಾದಗಿರಿ ಜಿಲ್ಲೆಯ ಒಟ್ಟು ಅಂದಾಜು ಜನಸಂಖ್ಯೆ 13.38ಲಕ್ಷ (13,37,730) ಇದೆ. ಕೃಷಿ ಕಾರ್ಮಿಕರು ಶೇ.43, ಕೃಷಿಕರುಶೇ.29, ಇತರ ಕೆಲಸಗಾರರು ಶೇ. 26 ಮತ್ತು ಶೇ.53ರಷ್ಟು ನಿರುದ್ಯೋಗಳಿದ್ದಾರೆ. ಇಲ್ಲಿಯ ಬಹುತೇಕ ಜನ ಕೃಷಿಯತ್ತ ಮುಖ ಮಾಡಿದ್ದು, ಕೃಷಿಯನ್ನೇ ಅವಲಂಬಿಸಿರುವ ಕುಟುಂಬಗಳಿವೆ. ಕೃಷಿಯು ಮಳೆಯಾಧಾರಿತವಾಗಿದೆ. ನೀರಾವರಿಸೌಲಭ್ಯಗಳು ಸರಿಯಾಗಿ ದೊರೆಯದಿರುವುದು ಮತ್ತು ಕೃಷಿ ಅರೆಕಾಲಿಕ ಉದ್ಯೋಗ ಒದಗಿಸುತ್ತಿರುವುದು ಅರೆಕಾಲಿಕ ನಿರುದ್ಯೋಗಿಗಳನ್ನು ಸೃಷ್ಟಿ ಮಾಡುತ್ತಿದೆ. ಈ ಭಾಗದಲ್ಲಿ ದೊಡ್ಡ ಮಟ್ಟದ ಕೈಗಾರಿಕೆಗಳೆಲ್ಲದಿರುವುದು ಉತ್ಪಾದನಾ ಘಟಕಗಳು ಆಹಾರ ಸಂಸ್ಕರಣ ಘಟಕಗಳು ಮತ್ತು ವಿಜ್ಞಾನ ತಂತ್ರಜ್ಞಾನದ ಕಾಲೇಜುಗಳು ಸೂಕ್ತವಾಗಿಲ್ಲದಿರುವುದು ನಿರುದ್ಯೋಗಕ್ಕೆ ಮತ್ತಷ್ಟು ಕಾರಣವಾಗಿದೆ.
ಕೌಶಲ ಆಧಾರಿತ ಸೂಕ್ತ ತರಬೇತಿಗಳಿಲ್ಲದೆ ಯುವಕರು ದೂರದ ಬೆಂಗಳೂರು, ಪುಣೆ ಬಾಂಬೆ ಮತ್ತು ಹೈದರಾಬಾದ್‌ಗಳಿಗೆ ದುಡಿಯಲು ವಲಸೆ ಹೋಗುತ್ತಿದ್ದಾರೆ. ಇದಕ್ಕೆ ಹಲವು ಕಾರಣಗಳಿವೆ. ಗುಣಮಟ್ಟದ ಶಿಕ್ಷಣ ಇಲ್ಲದೆ ಶೈಕ್ಷಣಿಕ ಸೌಕರ್ಯಗಳ ಕೊರತೆ ಉತ್ತಮವಾದ ಕಲಿಕಾ ವಾತಾವರಣವಿಲ್ಲದಿರುವುದು, ಔದ್ಯೋಗಿಕ ಮತ್ತು ಸ್ಪರ್ಧಾತ್ಮಕ ಮನೋಭಾವದ ಕೊರತೆ ಇರುವುದು ಶಿಕ್ಷಣದ ಮಹತ್ವವನ್ನು ಅರಿಯದಿರುವುದು ಹೀಗೆ ಅನೇಕ ಅಂಶಗಳು ನಿರುದ್ಯೋಗಕ್ಕೆ ಕಾರಣವಾಗಿವೆ. ಅರ್ಧಂಬರ್ಧ ಕಲಿತವರು ಉದ್ಯೋಗ ನಿರೀಕ್ಷೆಯಲ್ಲಿದ್ದಾರೆ. ಅದಕ್ಕೆ ತಕ್ಕ ಪೂರ್ವ ತಯಾರಿ ಸಿದ್ಧತೆ ಕೌಶಲ ಇಲ್ಲದೆ ನಿರುದ್ಯೋಗಿಗಳಾಗುತ್ತಿದ್ದಾರೆ. ಆದ್ದರಿಂದ ವಿವಿಧ ಸರಕಾರಿ ಕಚೇರಿಗಳಲ್ಲಿ ಬ್ಯಾಂಕುಗಳಲ್ಲಿ ಸಂಘ ಸಂಸ್ಥೆಗಳಲ್ಲಿ ಹೊರರಾಜ್ಯದವರು ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದರಿಂದ ಜಿಲ್ಲೆಯ ಯುವಜನತೆ ಉದ್ಯೋಗ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಸೂಕ್ತ ಮಾರ್ಗದರ್ಶನದ ಕೊರತೆ, ತರಬೇತಿಯ ಕೊರತೆ ಉದ್ಯೋಗವಕಾಶಗಳಿಂದ ಯುವಕರು ವಂಚಿತರಾಗುತ್ತಿದ್ದಾರೆ. ವಿವಿಧ ಹುದ್ದೆಗಳಿಗೆ ಸರಕಾರ ನೇಮಕಾತಿ ಮಾಡಿಕೊಳ್ಳಬೇಕೆಂದು ಬಯಸಿದ್ದರೂ, ಅದಕ್ಕೆ ತಕ್ಕಂತೆ ಅರ್ಹತೆ ಹೊಂದಿದ ಅಭ್ಯರ್ಥಿಗಳು ಇಲ್ಲದೆ ಎಷ್ಟೋ ಕೆಲಸಗಳು ಖಾಲಿ ಉಳಿಯುತ್ತಿವೆ. ಇದು ನಮ್ಮಲ್ಲಿರುವ ಸಾಮರ್ಥ್ಯ ಕೌಶಲದ ಕೊರತೆಯನ್ನು ಎತ್ತಿ ತೋರಿಸುತ್ತದೆ.
ಈ ಸಮಸ್ಯೆಯಿಂದ ಮುಕ್ತವಾಗಲು ಕೃಷಿಗೆ ವೈಜ್ಞಾನಿಕತೆಯ ಸ್ಪರ್ಶ ಮೂಡಿಸಬೇಕಾಗಿದೆ. ಹೆಚ್ಚು ಪ್ರೋತ್ಸಾಹ ನೀಡಬೇಕಾಗಿದೆ. ಅಲ್ಲದೆ ಜೈವಿಕ ಕೃಷಿ, ವಿಶೇಷ ಕೈಗಾರಿಕೆಗಳ ಸ್ಥಾಪನೆ, ಬೆಳೆ ವೈವಿಧ್ಯೀಕರಣ, ದನ, ಮೇಕೆ, ಪಕ್ಷಿ, ರೇಷ್ಮೆ, ಕೋಳಿ ಮುಂತಾದ ಸಾಕಣೆಗಳಿಗೆ ಉತ್ತೇಜನ ಕೊಡಬೇಕು. ಕೌಶಲ ಆಧಾರಿತ ಕೋರ್ಸ್‌ಗಳನ್ನು ಪರಿಚಯಿಸಿ ತರಬೇತಿಯೊಂದಿಗೆ ಉದ್ಯೋಗಗಳನ್ನು ಸೃಷ್ಟಿಸಬೇಕಾಗಿದೆ. ಉದಾಹರಣೆಗೆ ಐಟಿಐ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳನ್ನು ಬಲಪಡಿಸಬೇಕಾಗಿದೆ. ಕಂಪ್ಯೂಟರ್ ಮಷಿನ್‌ಆಪರೇಟರ್ ಕೋರ್ಸ್, ರೋಬೋಟಿಕ್ಸ್ ಡಿಜಿಟಲ್ ಮಾರ್ಕೆಟಿಂಗ್ ತರಬೇತಿಗಳು ಕಲ್ಯಾಣ ಕರ್ನಾಟಕ ಭಾಗದವರಿಗೆ ದೊರೆಯುವಂತಾಗಬೇಕು. ಸ್ವಯಂ ಉದ್ಯೋಗಕ್ಕೆ ಸರಕಾರದಿಂದ ಪ್ರೋತ್ಸಾಹಗಳನ್ನು ನೀಡಬೇಕು. ಪ್ರವಾಸೋದ್ಯಮ ಇಲಾಖೆಯನ್ನು ಜಿಲ್ಲಾಮಟ್ಟದಲ್ಲಿ ಅಭಿವೃದ್ಧಿಗೊಳಿಸಿ ಅನೇಕ ಉದ್ಯೋಗಗಳನ್ನು ಸೃಷ್ಟಿಸಬೇಕು.







