ಹರಿಣಿ ಶಿಖಾರಿ, ಪಾರ್ದಿ, ಅಡವಿಚೆಂಚರು, ಹಕ್ಕಿಪಿಕ್ಕಿ...

1921ರ ಬ್ರಿಟಿಷ್ ಸರಕಾರದ ಆಡಳಿತದ ಸಂದರ್ಭದಲ್ಲಿ, ಗದಗದಲ್ಲಿ ವಾಸಿಸುತ್ತಿದ್ದ ಹರಿಣಿ ಶಿಖಾರಿ ಸಮುದಾಯದ ಜತೆ ಕಂಜರ್ ಬಾಟ್, ಕೊರವ, ಘಂಟಿಚೋರ್, ಚಪ್ಪರ್ ಬಂದ್‌ನಂತಹ ಐದು ಸಮುದಾಯಗಳನ್ನು ಸೇರಿಸಿ ಇವರನ್ನು ಅಪರಾಧಿ ಬುಡಕಟ್ಟುಗಳು, ಗುನೆಗಾರ್ ಎಂದು ಪರಿಗಣಿಸಿ, ಈ ಸಮುದಾಯಗಳಿಗಾಗಿಯೇ ಒಂದು ಸ್ಪೆಷಲ್ ಜೈಲ್ ಮಾಡಿ ಇದರ ಸುತ್ತು ಮುಳ್ಳಿನ ತಂತಿಯ ಬೇಲಿಯನ್ನು ಹಾಕಿದ್ದರು. Denotified criminal tribes ಎಂದು ಕರೆದರೂ ಪೊಲೀಸರ ದೃಷ್ಟಿಯಲ್ಲಿ ಇಂದಿಗೂ ಇವರು ಕ್ರಿಮಿನಲ್ ಟ್ರೈಬ್ಸ್ ಆಗಿಯೇ ಉಳಿದು ಬಿಟ್ಟಿದ್ದಾರೆ.
ಈಚೆಗೆ ನಮ್ಮ ಅಲೆಮಾರಿ ಬುಡಕಟ್ಟು ಮಹಾಸಭಾದ ಸಭೆಗೆ ಕಂಪ್ಲಿ, ಶಿವಮೊಗ್ಗ, ಬನ್ನೇರುಘಟ್ಟ ಮುಂತಾದೆಡೆಯಿಂದ ಬಂದಿದ್ದ ಹರಿಣಿ ಶಿಖಾರಿ ಸಮುದಾಯದ ಜನ ನನ್ನೊಂದಿಗೆ ಮಾತನಾಡುತ್ತಿದ್ದರು. ಅವರಲ್ಲೊಬ್ಬ ಮಲ್ಲಶೆಟ್ಟಿ ಎನ್ನುವ ವ್ಯಕ್ತಿ ಯಾವುದೋ ಕಾರಣಕ್ಕೆ ತನ್ನ ಆಧಾರ್ ಕಾರ್ಡ್ ತೋರಿಸಿದ. ಅವನ ತಂದೆ ಹೆಸರು ‘ಇಂಗ್ಲಿಷ್’ ಎಂದಿತ್ತು. ‘‘ನಾನು ಕುತೂಹಲದಿಂದ ನಿಮ್ಮ ತಂದೆ ಹೆಸರು ಇಂಗ್ಲಿಷೆ..?’’ ಅಂದೆ. ‘‘ಹೌದು ಸರ್.. ನಮ್ಮಲ್ಲಿ ಈ ರೀತಿಯ ಹೆಸರುಗಳನ್ನೇ ಇಟ್ಟುಕೊಳ್ಳುತ್ತಾರೆ’’ ಅಂದ. ಅಷ್ಟರಲ್ಲಿ ಹರಿಣಿ ಶಿಖಾರಿಗಳ ಹೋರಾಟದ ನಾಯಕತ್ವ ವಹಿಸಿದ್ದ ಜಗ್ಗು ‘‘ನಮ್ಮ ಕಡೆ ಏರೋಪ್ಲೇನ್, ರೇಡಿಯೊ, ಗ್ಲೂಕೋಸ್ ಮುಂತಾಗಿ ಹೆಸರಿಟ್ಟುಕೊಳ್ಳುತ್ತಾರೆ ಸರ್..’’ ಎಂದ. ಈ ರೀತಿ ಹೆಸರಿಟ್ಟುಕೊಳ್ಳಲು ಕಾರಣ ಕೇಳಿದರೆ ಅವರಿಗೆ ತಿಳಿದಿಲ್ಲ. ಚಾಲ್ತಿಯಲ್ಲಿರುವ, ಇವರ ಕಿವಿಗೆ ಆಗಾಗ ಬೀಳುವ ಯಾವುದೇ ಆಧುನಿಕ ಉಪಕರಣದ ಹೆಸರುಗಳನ್ನು ಇಟ್ಟುಕೊಳ್ಳುತ್ತಾರಂತೆ!
ಸುಮಾರು ನಲುವತ್ತು ವರ್ಷಗಳ ಹಿಂದೆ ಕೋಲಾರ ಜಿಲ್ಲೆಗೆ ಸೇರಿದ ಶ್ರೀನಿವಾಸಪುರ ತಾಲೂಕಿನ ಆಂಧ್ರದ ಗಡಿಭಾಗದಲ್ಲಿದ್ದ ಕುಕ್ಕಮೂತಿ ಕೊಂಡ, ಮುದುಮೊಡಗು ಬೆಟ್ಟಗಳ ನಡುವೆ ಕಾಡಿನಲ್ಲಿ ಹಕ್ಕಿಪಿಕ್ಕಿಗಳ ತಂಡವೊಂದು ಗುಡಾರ ಹಾಕಿಕೊಂಡು ನಾಲ್ಕೈದು ಗುಂಟೆ ಜಮೀನಿನಲ್ಲಿ ಕೃಷಿ ಮಾಡುತ್ತಿತ್ತು. ಅವರನ್ನು ಎಕ್ಕ ಎಬ್ಬಿಸಲು ಅರಣ್ಯ ಇಲಾಖೆಯವರು ಅವರಿಗೆ ಕೊಡಬಾರದ ಕಷ್ಟ ಕೊಡುತ್ತಿದ್ದರು. ಹೇಗೋ ಆ ವಿಷಯವನ್ನರಿತ ಲಂಕೇಶರು ಆಗ ‘ಲಂಕೇಶ್ ಪತ್ರಿಕೆ’ಯ ವರದಿಗಾರನಾಗಿದ್ದ ನನ್ನನ್ನು ವರದಿ ಮಾಡಲು ಕಳಿಸಿದರು. ನಾನು ನನ್ನೊಂದಿಗೆ ಕೋಲಾರದ ಕವಿ ಮತ್ತು ಬರಹಗಾರರಾಗಿದ್ದ ಗೆಳೆಯ ಎಚ್ಚೆನ್ ಸೋಮಶೇಖರ ಗೌಡರೊಂದಿಗೆ ಹೊರಟು, ಪಡಬಾರದ ಪಾಡನ್ನೆಲ್ಲ ಪಟ್ಟು ಅರಣ್ಯದಲ್ಲಿದ್ದ ಹಕ್ಕಿಪಿಕ್ಕಿಗಳ ತಾಣವನ್ನು ಬಿರುಬಿಸಿಲಲ್ಲಿ ನಡೆಯುತ್ತಲೇ ತಲುಪಿದೆವು. ಅವರ ಸಂಕಷ್ಟಗಳನ್ನೆಲ್ಲ ಸುದೀರ್ಘವಾಗಿ ಕೇಳಿ, ಅಲ್ಲಿಂದ ಹೊರಟಾಗ ಸಂಜೆ ನಾಲ್ಕು ಗಂಟೆ, ಭಯಂಕರ ಹಸಿವು, ಕಾಡಿನಿಂದ ಹೊರಟು ಬಸ್ ರಸ್ತೆ ತಲುಪಲು ಕನಿಷ್ಠ ಆರೇಳು ಕಿ.ಮೀ. ನಡೆಯಬೇಕು. ಆ ಸಂದರ್ಭದಲ್ಲಿ ನಮ್ಮ ಹಸಿದ ಮುಖಗಳನ್ನು ಕಂಡ ಹಕ್ಕಿಪಿಕ್ಕಿ ಸಮುದಾಯದ ಮುದುಕಪ್ಪನೊಬ್ಬ ‘‘ಸೋಮೆ, ನಾವು ಮಾಡಿದ್ದು ತಿಂತೀರ..’’ ಎಂದು ಕೇಳಿದರು. ನಾವು ‘‘ಯಾರೇ ಮಾಡಿದರೂ ತಿಂತೀವಿ’’ ಅಂದೆವು. ‘‘ಕೋಳಿ ತಿಂತೀರ..’’ ಅಂದರು, ‘‘ಕೋಳಿ, ಕುರಿ, ಆಡು, ಹಂದಿ, ದನ, ಕೋಣ.. ಏನು ಕೊಟ್ಟರೂ ತಿಂತೀವಿ’’ ಎಂದೆವು. ಅಲ್ಲೇ ಓಡಾಡುತ್ತಿದ್ದ ಕೋಳಿಯೊಂದನ್ನು ಹಿಡಿದು ನಮ್ಮ ಮುಂದೆಯೇ ಕುಯ್ದು, ಬಂಡೆಯ ಮೇಲೆ ಮಸಾಲೆ ಅರೆದು, ಮೂರು ಕಲ್ಲುಗಳನ್ನಿಟ್ಟ ಕಟ್ಟಿಗೆ ಒಲೆಯಲ್ಲಿ ಕೆಲವೇ ನಿಮಿಷಗಳಲ್ಲಿ ಸಾರು ಮಾಡಿ, ಎರಡು ತಲೆಗಾತ್ರದ ರಾಗಿಮುದ್ದೆಗಳನ್ನು ಅಲ್ಲೇ ತೊಳಿಸಿ, ಎರಡು ಸಿಲಿವಾರ ತಟ್ಟೆಗಳ ತುಂಬ ಸಾರು ಹಾಕಿ ನಮಗೆ ಉಣ್ಣಲು ಕೊಟ್ಟರು. ಬಹುಶಃ ನನ್ನ ಜೀವಮಾನದಲ್ಲೇ ಇಷ್ಟೊಂದು ರುಚಿಯಾದ ಕೋಳಿಸಾರು ಮುದ್ದೆ ತಿಂದಿರಲಿಲ್ಲ! ಈ ಕಾರಣಕ್ಕೆ ಈ ಮುದ್ದೆದಾತರಾದ ಹಕ್ಕಿಪಿಕ್ಕರು ನನ್ನ ಸ್ಮತಿಪಟಲದಲ್ಲಿ ಸ್ಥಿರವಾಗಿ ಉಳಿದುಬಿಟ್ಟಿದ್ದಾರೆ. ನಾನು ‘ಲಂಕೇಶ್ ಪತ್ರಿಕೆ’ಯಲ್ಲಿ ‘‘ಸುಂದರ ಹಕ್ಕಿಪಿಕ್ಕರನ್ನು ಎಕ್ಕ ಎಬ್ಬಿಸುವ ಅಧಿಕಾರಿಗಳು’’ ಎಂಬ ತಲೆಬರಹದಲ್ಲಿ ಲೇಖನ ಬರೆದ ಮೇಲೆ ಅರಣ್ಯ ಇಲಾಖೆಯವರು ಇವರ ತಂಟೆಗೇ ಹೋಗಲಿಲ್ಲವಂತೆ! ಆ ಕಾಲದ ಲಂಕೇಶ್ ಪತ್ರಿಕೆಯ ಪವರ್ ಅದು.
ಹರಿಣಿ ಶಿಖಾರಿ, ಹಕ್ಕಿಪಿಕ್ಕಿ, ಪಾರ್ದಿ, ರಾಜಪಾರ್ದಿ, ಹಾಸ್ ಪಾರ್ದಿ, ವಾಘ್ರಿ, ತಾಕಣಿಕೆ, ಹರನ್ ಶಿಕಾರ್, ಚಿಗರಿ, ಬೇಟೆಗಾರ, ನೀರ್ ಶಿಕಾರಿ, ಪಾರ್ಶಿಚಾರಿ, ಅಡವಿಚೆಂಚರು, ಶಿಕಾರೊಳ್ಳು, ಗುವ್ವಲೊಳ್ಳು ಎಂದೆಲ್ಲಾ ಕರೆಯಲಾಗುವ ಇವರು ಮೂಲತಃ ಬೇಟೆಗಾರರು, ಬೇಟೆಗೆ ಹೋಗಿ ಹಕ್ಕಿ, ಮೊಲ, ಕಾಡುಬೆಕ್ಕು, ಕಾಡುಕುರಿ, ಜಿಂಕೆ, ಕೋಣ ಮುಂತಾದ ಪ್ರಾಣಿಗಳನ್ನು ಬೇಟೆಯಾಡಿ ಹೊಟ್ಟೆಹೊರೆಯುತ್ತಿದ್ದರು, ಇವರನ್ನು ಅರಣ್ಯ ಇಲಾಖೆಯವರು ಕಾಡಿನಿಂದ ಅಟ್ಟಿದ ಮೇಲೆ ನೆಲೆ ಕಳಕೊಂಡ ಇವರು ಹೊಟ್ಟೆಪಾಡಿಗಾಗಿ ಏನನ್ನೂ ಮಾಡಲು ತೋಚದೆ ಸಣ್ಣಪುಟ್ಟ ಕಳ್ಳತನಕ್ಕೆ ಇಳಿದರು, ಈ ಕಾರಣಕ್ಕೆ ಇವರನ್ನು ಬ್ರಿಟಿಷರು ‘ಕ್ರಿಮಿನಲ್ ಟ್ರೈಬ್ಸ್’ ಎಂದು ಪರಿಗಣಿಸಿ ‘ಸೆಟಲ್ಮೆಂಟ್’ಗಳಲ್ಲಿ ಇಟ್ಟು ಪೊಲೀಸ್ ಪಹರೆಯಲ್ಲಿ ಸದಾ ಕಾಡತೊಡಗಿದರು. ಅಪರಾಧಿ ಬುಡಕಟ್ಟುಗಳೆಂಬ ಕಳಂಕ ಹೊತ್ತ ಈ ಅಸಹಾಯಕರನ್ನು ಇಂದಿಗೂ ಎಲ್ಲೇ ಕಳ್ಳತನ, ದರೋಡೆಗಳಾದರೂ, ಆ ಕೃತ್ಯವನ್ನು ಯಾರೇ ಮಾಡಿದ್ದರೂ ಇವರನ್ನು ಹಿಡಿದು ಕರೆತರುವ ಪೊಲೀಸರು ಹೊಡೆದು ಬಡಿದು ಹಿಂಸಿಸುತ್ತಾರೆ! ಇವರ ಮೇಲೆ ಸುಳ್ಳು ಕೇಸುಗಳನ್ನು ಜಡಿಯುತ್ತಾರೆ.
ಇವರಲ್ಲಿ ಸುಮಾರು ಏಳು ಉಪಜಾತಿಗಳಿವೆ. ಸಾವಡಿಯ, ಪಿಂಪ್ಪಳಾಜ್, ಕೊಡಿಯಾರ್, ಕೂರ್ಬಿಯ, ಇಕೋತಿಯ, ಆರ್ಕುತಿಯ ಮತ್ತು ಮಲ್ಲಿದೇವಿ ಎಂದು ಗುರುತಿಸುತ್ತಾರೆ. ಇವರು ರಾಜಸ್ಥಾನದಿಂದ ಬಂದವರಾಗಿದ್ದು ರಾಣಾಪ್ರತಾಪಸಿಂಹನ ಸೈನ್ಯದಲ್ಲಿ ಸೇರಿದರು. ಪ್ರತಾಪಸಿಂಹ ಮತ್ತು ರಜಪೂತರ ನಡುವೆ ಯುದ್ಧವಾಗಿ ಪ್ರತಾಪಸಿಂಹ ಸೋತ ಮೇಲೆ ತಲೆಮರೆಸಿಕೊಳ್ಳಲು ಮತ್ತೆ ಕಾಡು ಸೇರಿದರು. ಕ್ರಮೇಣ ಜೀವನವನ್ನರಸಿ ದೇಶಾದ್ಯಂತ ವಲಸೆ ಹೋದರು. ಹಾಗೆ ಹೊರಟವರು ಕರ್ನಾಟಕದ ಗದಗ, ವಿಜಯಪುರ, ಬಾಗಲಕೋಟೆ ಮುಂತಾದೆಡೆಗೆ ಬಂದು ನೆಲೆಸಿದರು. ನಂತರ ಬಳ್ಳಾರಿ, ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ ಮುಂತಾದೆಡೆ ಪಸರಿಸಿದರು.
ಒಂದು ವಿಶೇಷತೆಯೆಂದರೆ 1921ರ ಬ್ರಿಟಿಷ್ ಸರಕಾರದ ಆಡಳಿತದ ಸಂದರ್ಭದಲ್ಲಿ, ಗದಗದಲ್ಲಿ ವಾಸಿಸುತ್ತಿದ್ದ ಹರಿಣಿ ಶಿಖಾರಿ ಸಮುದಾಯದ ಜತೆ ಕಂಜರ್ ಬಾಟ್, ಕೊರವ, ಘಂಟಿಚೋರ್, ಚಪ್ಪರ್ ಬಂದ್‌ನಂತಹ ಐದು ಸಮುದಾಯಗಳನ್ನು ಸೇರಿಸಿ ಇವರನ್ನು ಅಪರಾಧಿ ಬುಡಕಟ್ಟುಗಳು, ಗುನೆಗಾರ್ ಎಂದು ಪರಿಗಣಿಸಿ, ಈ ಸಮುದಾಯಗಳಿಗಾಗಿಯೇ ಒಂದು ಸ್ಪೆಷಲ್ ಜೈಲ್ ಮಾಡಿ ಇದರ ಸುತ್ತು ಮುಳ್ಳಿನ ತಂತಿಯ ಬೇಲಿಯನ್ನು ಹಾಕಿದ್ದರು. Denotified criminal tribes ಎಂದು ಕರೆದರೂ ಪೊಲೀಸರ ದೃಷ್ಟಿಯಲ್ಲಿ ಇಂದಿಗೂ ಇವರು ಕ್ರಿಮಿನಲ್ ಟ್ರೈಬ್ಸ್ ಆಗಿಯೇ ಉಳಿದು ಬಿಟ್ಟಿದ್ದಾರೆ.
ಸಾಂಸ್ಕೃತಿಕವಾಗಿ ಇನ್ನೂ ಆದಿವಾಸಿ ಹಬ್ಬ ಹರಿದಿನಗಳನ್ನು ಆಚರಿಸುತ್ತಿರುವ ಇವರು ಈಗಲೂ ಅಲ್ಲಲ್ಲಿ ಕೆಲವು ಕ್ರೂರ ಆಚರಣೆಗಳನ್ನು ಮುಂದುವರಿಸಿದ್ದಾರೆ. ಉದಾಹರಣೆಗೆ ರೇಣುಕಮ್ಮನ ಹಬ್ಬದ ದಿನ ಕೋಣವನ್ನು ತಂದು ಅದರ ಮೈಗೆ ಎಣ್ಣೆಯಲ್ಲಿ ಕಲಸಿದ ಹರಿಶಿನ ಹಚ್ಚುತ್ತಾರೆ. ನಂತರ ಅದರ ನಾಲ್ಕೂ ಕಾಲುಗಳನ್ನು ಬಲವಾಗಿ ಕಟ್ಟಿ, ಅದನ್ನು ಮಲಗಿಸಿ ಒಂಭತ್ತು ತುಪ್ಪದ ದೀಪಗಳನ್ನು ಹಚ್ಚಿ, ದೇವರನ್ನು ತಂದು ಕೋಣದ ತಲೆಯ ಬಳಿ ಇಟ್ಟು, ಚೂಪಾದ ಕತ್ತಿಯಿಂದ ಕೋಣದ ಕತ್ತಿನ ಬಳಿ ಮನುಷ್ಯನ ಬಾಯಿಡುವಷ್ಟು ಚರ್ಮ ಸುಲಿದು ಅಲ್ಲಿ ಚಿಮ್ಮುವ ನೆತ್ತರನ್ನು ಹೀರಿ ಕುಡಿಯುತ್ತಾರಂತೆ!! ನಂತರ ಆ ಭಾಗವನ್ನು ಕುಯ್ಯುತ್ತಾ ದೊಡ್ಡದು ಮಾಡುತ್ತಾ ಎರಡೂ ಅಂಗೈ ಹಿಡಿಸುವಂತಹ ಹೊಂಡ ಮಾಡಿ ಬೊಗಸೆಯಲ್ಲಿ ನೆತ್ತರು ಬಸಿದು ಬಿಸಿ ನೆತ್ತರು ಕುಡಿಯುತ್ತಾರೆ!! ಇದನ್ನು ಕೇಳುತ್ತಿದ್ದಂತೆ ಆ ಸಂದರ್ಭದಲ್ಲಿ ಕೋಣದ ನೋವಿನ ಒದ್ದಾಟವನ್ನು ನೆನೆದು ನಾನು ದಂಗು ಬಡಿದುಹೋದೆ. ‘‘ನೀನು ಆ ಸಮುದಾಯದ ನಾಯಕನಾಗಿ ಹರಣಿ ಶಿಕಾರಿಗಳ ಪ್ರತಿನಿಧಿಯಾಗಿ ನಮ್ಮ ಸಂಘಟನೆಯಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಬೇಕೆಂದರೆ ಮೊದಲು ಈ ಕ್ರೂರ ಪದ್ಧತಿಯನ್ನು ನಿಲ್ಲಿಸು..’’ ಎಂದು ಸಮುದಾಯದ ನಾಯಕ ಜಗ್ಗುಗೆ ಹೇಳಿದೆ. ಆತ ನಗುತ್ತಾ ‘‘ಸರಿ ಸರ್.. ಈಗಾಗಲೇ ಈ ಪದ್ಧತಿ ಕಡಿಮೆಯಾಗಿದೆ. ಸಂಪೂರ್ಣ ನಿಲ್ಲಿಸಲು ನಮ್ಮ ಸಂಘದಲ್ಲಿ ಮಾತನಾಡಿ ನಿಲ್ಲಿಸುತ್ತೇವೆ.’’ ಅಂದ. ಮನುಷ್ಯ ಮೂಲತಃ ಮಾಂಸಾಹಾರಿ, ಒಂದು ಜೀವವನ್ನು ಕೊಂದು ಇನ್ನೊಂದು ಜೀವ ಬದುಕುವುದು ನಿಸರ್ಗ ನಿಯಮ. ವೈಜ್ಞಾನಿಕವಾಗಿ ಇದನ್ನು ಜೀವ ಸರಪಳಿ ಎನ್ನುತ್ತೇವೆ. ಪ್ರಾಣಿಯನ್ನು ಒಂದೇ ನಿಮಿಷದಲ್ಲಿ ಕಡಿಯುವುದು ಬೇರೆ, ಆದರೆ ಹೀಗೆ ಗಾಯಗೊಳಿಸಿ ಚಿತ್ರಹಿಂಸೆ ನೀಡಿ ಆ ಪ್ರಾಣಿ ಸುದೀರ್ಘವಾಗಿ ಹಿಂಸೆ ಪಡುತ್ತಾ ಅಸಹಾಯಕವಾಗಿ ಸಾಯುವುದು ಮನುಷ್ಯನ ಕ್ರೌರ್ಯದ ಪರಮಾವಧಿ. ಇದನ್ನು ಯಾವುದೇ ಕಾರಣಕ್ಕೂ ಮುಂದುವರಿಸಬಾರದು.
ಹಿಂದೊಮ್ಮೆ ಇದೇ ರೀತಿ ಹಕ್ಕಿಪಿಕ್ಕಿಯೊಬ್ಬ ಕಾಡಲ್ಲಿ ಬೇಟೆಯಾಡಿ ಕೊಂದ ಮೊಲದ ಮಾಂಸದ ಸಾರನ್ನು ಮೈಸೂರು ಕಡೆಯಿಂದ ಬೆಳಗ್ಗೆಯೇ ಬಸ್ ಹತ್ತಿ ನನಗಾಗಿ ತಂದಿದ್ದ. ಅವನಿಗೂ ‘‘ಇದು ತಪ್ಪು, ಬೇಟೆ ಈಗ ಕಾನೂನುಬಾಹಿರ’’ ಎಂದು ಬುದ್ಧಿಹೇಳಿ ವಾಪಸ್ ಕಳಿಸಿದ್ದೆ. ನಾವು ಇಂತಹ ಸಮುದಾಯಗಳ ಹಕ್ಕುಗಳ ಬಗ್ಗೆ ಹೋರಾಡುವುದರೊಂದಿಗೆ ಅವರನ್ನು ತಮ್ಮ ಕರ್ತವ್ಯಗಳ ಬಗ್ಗೆ ಮತ್ತು ಸಂವಿಧಾನ ಮತ್ತು ಕಾನೂನುಗಳ ಬಗ್ಗೆಯೂ ಅರಿವು ಮೂಡಿಸುವ ಜವಾಬ್ದಾರಿ ನಮಗೆ ಇರಬೇಕಾಗುತ್ತದೆ.
ಇದೆಲ್ಲವನ್ನೂ ಹೊರತುಪಡಿಸಿ ಹೇಳಬೇಕಾದರೆ ಮೂಲತಃ ಹರಿಣಿ ಶಿಖಾರಿಗಳು ಮುಗ್ಧರು, ಕಡುಬಡವರು ಮತ್ತು ಅನಕ್ಷರಸ್ಥರಾಗಿದ್ದಾರೆ. ಈ ಸಮುದಾಯದ ಕುರಿತು ಇವರ ಸಮುದಾಯದವರೇ ಆದ ಲಕ್ಷ್ಮಣ ಗಾಯಕವಾಡ್ ಬರೆದ ‘ಪಾರ್ದೀ’ ಪುಸ್ತಕ ಅತ್ಯಂತ ಜನಪ್ರಿಯ ಮತ್ತು ಈ ಪುಸ್ತಕ ಬಹುತೇಕ ಭಾರತೀಯ ಭಾಷೆಗಳಿಗೆ ಅನುವಾದವಾಗಿದೆ.
ಸದ್ಯಕ್ಕೆ ಒಂದೆರಡು ಕಡೆ ಈ ಸಮುದಾಯದ ಕುಟುಂಬವೊಂದಕ್ಕೆ ಎರಡು ಎಕರೆ ಭೂಮಿ ಕೊಡಿಸುವ ಹೋರಾಟವನ್ನು ನಮ್ಮ ಸಂಘಟನೆಯಿಂದ ಮುಂದುವರಿದಿದೆ. ಬನ್ನೇರುಘಟ್ಟ ಬಳಿಯ ರಾಗಿಹಳ್ಳಿಯಲ್ಲಿ ಸುಮಾರು 118 ಕುಟುಂಬಗಳಿಗೆ ಸುದೀರ್ಘ ಹೋರಾಟದ ಮೂಲಕ ಕುಟುಂಬವೊಂದಕ್ಕೆ ಎರಡೆರಡು ಎಕರೆ ಭೂಮಿ ಸಿಕ್ಕಿದೆ. ಇನ್ನು 26 ಕುಟುಂಬಗಳಿಗಷ್ಟೇ ಸಿಗಬೇಕಿದೆ. ಇದೇ ರೀತಿ ರಾಮನಗರ ಮತ್ತು ಪಾಂಡವಪುರಗಳಲ್ಲೂ ಭೂಮಿಗಾಗಿ ಹೋರಾಟ ಮುಂದುವರಿದಿದೆ. ಮಿಕ್ಕೆಲ್ಲ ಕಡೆಗಳಲ್ಲಿ ಈ ಸಮುದಾಯಕ್ಕೆ ಶಿಕ್ಷಣ, ಆರೋಗ್ಯ ಮತ್ತು ಸೂರು ಸಿಗಬೇಕಿದೆ. ಈ ಎಲ್ಲದರ ಬಗ್ಗೆ ಹೋರಾಟವಂತೂ ಮುಂದುವರಿದಿದೆ.







