ನಾಯಕತ್ವದ ಕಿರೀಟ ಇಳಿಸಿದ ಹರ್ಮನ್ ಪ್ರೀತ್ ಕೌರ್: ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ನಾಯಕತ್ವದ ಪಯಣಕ್ಕೆ ತೆರೆ

ಭಾರತೀಯ ಮಹಿಳಾ ಕ್ರಿಕೆಟ್‌ನ ನಾಯಕತ್ವದ ಹೊಣೆ ಹೊತ್ತು, ತಂಡವನ್ನು ವಿಶ್ವದ ದೊಡ್ಡ ವೇದಿಕೆಯಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ದ ಹರ್ಮನ್ ಪ್ರೀತ್ ಕೌರ್ ಅ.6ರಂದು ನಾಯಕತ್ವಕ್ಕೆ ವಿದಾಯ ಹೇಳಿದ್ದಾರೆ.
2025ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತಕ್ಕೆ ಚೊಚ್ಚಲ ವಿಶ್ವ ಕಿರೀಟ ತಂದುಕೊಟ್ಟ ನಾಯಕಿ ಎಂಬ ಹೆಗ್ಗಳಿಕೆಯೊಂದಿಗೆ ಹರ್ಮನ್ ಪ್ರೀತ್ ಹೊಸ ನಾಯಕತ್ವಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಇನ್ನು ಮುಂದೆ ಆಟಗಾರ್ತಿಯಾಗಿ ಮುಂದುವರಿಯಲಿದ್ದು, ಇದೀಗ ಭಾರತ ಮಹಿಳಾ ತಂಡದ ನೂತನ ನಾಯಕಿಯಾಗಿ ಸ್ಮೃತಿ ಮಂಧಾನ ಆಯ್ಕೆಯಾಗಿದ್ದಾರೆ.
ಮೂಲತಃ ಪಂಜಾಬಿನ ಮೊಗಾದಲ್ಲಿ ಜನಿಸಿದ ಇವರು ವಾಲಿಬಾಲ್ ಮತ್ತು ಬ್ಯಾಸ್ಕೆಟ್‌ಬಾಲ್ ಆಟಗಾರ ಹರ್ಮನ್ ಸಿಂಗ್ ಮತ್ತು ಸತ್ವಿಂದರ್ ಕೌರ್ ದಂಪತಿಯ ಪುತ್ರಿ. 37ರ ವಯಸ್ಸಿನಲ್ಲಿ ಭಾರತ ತಂಡಕ್ಕೆ ನಾಲ್ಕು ಮಹಿಳಾ ಏಶ್ಯಕಪ್ ಪ್ರಶಸ್ತಿಗಳ ಗೆಲುವಿನಲ್ಲಿ ನಾಯಕತ್ವವಹಿಸಿದ್ದಾರೆ. 2017ರಲ್ಲಿ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಿಂದ ಪ್ರತಿಷ್ಠಿತ ಅರ್ಜುನ್ ಪ್ರಶಸ್ತಿ ನೀಡಲಾಯಿತು. 2026ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.
ಜಿಯಾನ್ ಜ್ಯೋತಿ ಸ್ಕೂಲ್ ಅಕಾಡಮಿಯಲ್ಲಿ ಕಮಲ್ಟೀರ್ ಸಿಂಗ್ ಸೋಧಿ ಮಾರ್ಗದರ್ಶನದಲ್ಲಿ ಇವರ ಕ್ರಿಕೆಟ್ ಬದುಕು ಪ್ರಾರಂಭವಾಯಿತು. ಹರ್ಮನ್ ತನ್ನ ವೃತ್ತಿಜೀವನದ ಆರಂಭದ ದಿನಗಳಲ್ಲಿ ಪುರುಷರೊಂದಿಗೆ ಮೈದಾನಕ್ಕೆ ಇಳಿದರು. 2014ರಲ್ಲಿ ಅವರು ಮುಂಬೈಗೆ ತೆರಳಿ ಭಾರತೀಯ ರೈಲ್ವೆಯಲ್ಲಿ ಕೆಲಸ ಆರಂಭಿಸಿದರು.
ತಮ್ಮ 20ನೇ ವಯಸ್ಸಿನಲ್ಲಿ ಚೊಚ್ಚಲ ಏಕದಿನ ಪಂದ್ಯವನ್ನು ಬ್ರಾಡ್ಮನ್ ಓವಲ್‌ನಲ್ಲಿ 2009ರಲ್ಲಿ ನಡೆದ ಮಹಿಳಾ ಕ್ರಿಕೆಟ್ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಮಹಿಳಾ ತಂಡದ ವಿರುದ್ಧ ಆಡಿದ್ದರು.
ಜೂನ್ 2009ರಲ್ಲಿ ತನ್ನ ಚೊಚ್ಚಲ ಅಂತರ್‌ರಾಷ್ಟ್ರೀಯ ಪಂದ್ಯವನ್ನು ಐಸಿಸಿ ವುಮೆನ್ಸ್ ವರ್ಲ್ಡ್ ಟ್ವೆಂಟಿ -20ಯಲ್ಲಿ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧ ಆಡಿದ್ದರು. 2010ರಲ್ಲಿ ಮುಂಬೈನಲ್ಲಿ ನಡೆದ ಟ್ವೆಂಟಿ-20 ಪಂದ್ಯವೊಂದರಲ್ಲಿ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧ ವೇಗವಾಗಿ 33 ರನ್ ಗಳಿಸಿದ್ದರಿಂದ, ಅವರ ರಭಸವಾಗಿ ಚೆಂಡನ್ನು ಹೊಡೆಯುವ ಸಾಮರ್ಥ್ಯ ಎಲ್ಲರ ಗಮನ ಸೆಳೆಯಿತು.
ನಾಯಕಿ ಮಿಥಾಲಿ ರಾಜ್ ಮತ್ತು ಉಪನಾಯಕಿ ಜುಲಾನ್ ಗೋಸ್ವಾಮಿ ಗಾಯಗಳಿಂದಾಗಿ ಔಟ್ ಆಗಿದ್ದರಿಂದ, 2012 ರ ಮಹಿಳಾ ಟ್ವೆಂಟಿ -20 ಏಶ್ಯಕಪ್ ಫೈನಲಿಗೆ ಭಾರತದ ಮಹಿಳಾ ನಾಯಕಿಯಾಗಿ ಅವರು ಆಯ್ಕೆಯಾದರು. ಪಾಕಿಸ್ತಾನ ಮಹಿಳಾ ತಂಡದ ವಿರುದ್ಧ ಅವರು ನಾಯಕಿಯಾಗಿ ಮೊದಲ ಪಂದ್ಯವಾಡಿದರು. ಅಲ್ಲಿ ಭಾರತವು 81 ರನ್‌ಗಳಿಂದ ಜಯವನ್ನು ತನ್ನದಾಗಿಸಿಕೊಂಡು ಏಶ್ಯಕಪ್‌ನ್ನು ತನ್ನ ಮುಡಿಗೇರಿಸಿಕೊಂಡಿತು.
ಮಾರ್ಚ್ 2013ರಲ್ಲಿ ಭಾರತಕ್ಕೆ ಬಾಂಗ್ಲಾದೇಶ ಮಹಿಳಾ ತಂಡ ಪ್ರವಾಸ ಕೈಗೊಂಡಾಗ ಭಾರತ ಮಹಿಳಾ ತಂಡದ ಏಕದಿನದ ನಾಯಕಿಯಾಗಿದ್ದರು. ಸರಣಿಯಲ್ಲಿ ಕೌರ್ ತನ್ನ ಎರಡನೇ ಏಕದಿನ ಶತಕವನ್ನು 2ನೇ ಏಕದಿನದಲ್ಲಿ ಗಳಿಸಿದರು. ಈ ಸರಣಿಯಲ್ಲಿ 97.50 ಸರಾಸರಿಯಲ್ಲಿ ಒಂದು ಅರ್ಧಶತಕ ಮತ್ತು ಒಂದು ಶತಕ ಸಹಿತ 195 ರನ್‌ಗಳನ್ನು ಗಳಿಸಿದರು. ಅಲ್ಲದೇ 2 ವಿಕೆಟ್‌ಗಳನ್ನು ಪಡೆದುಕೊಂಡರು.
ಆಗಸ್ಟ್ 2014ರಲ್ಲಿ ಸರ್ ಪಾಲ್ ಗೆಟ್ಟಿಸ್ ಗ್ರೌಂಡ್‌ನಲ್ಲಿ ನಡೆದ ಇಂಗ್ಲೆಂಡ್‌ನ ಮಹಿಳಾ ಕ್ರಿಕೆಟ್ ತಂಡದ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆಗೈದ ಎಂಟು ಮಹಿಳೆಯರಲ್ಲಿ ಒಬ್ಬರಾಗಿದ್ದರು.
ನವೆಂಬರ್ 2015 ರಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡದ ವಿರುದ್ಧ ಮೈಸೂರಿನ ಗಂಗೋತ್ರಿ ಗ್ಲೇಡ್ಸ್ ಕ್ರಿಕೆಟ್ ಮೈದಾನದಲ್ಲಿ ಆಡಿದ ಟೆಸ್ಟ್ ಪಂದ್ಯವೊಂದರಲ್ಲಿ 9 ವಿಕೆಟ್‌ಗಳನ್ನು ಪಡೆದರು. ಅವರ ಈ ಪ್ರದರ್ಶನದಿಂದಾಗಿ ಭಾರತಕ್ಕೆ ಇನಿಂಗ್ಸ್ ಮತ್ತು 34 ರನ್‌ಗಳಿಂದ ಗೆಲ್ಲಲು ನೆರವಾಯಿತು.
ನಾಯಕಿಯಾಗಿ ಬೆಳೆದಂತೆ ಅವರ ಆಟದ ಮತ್ತೊಂದು ಮುಖವೂ ಪರಿಚಯವಾಯಿತು. ಅದುವೇ ತಂಡವನ್ನು ಮುನ್ನಡೆಸುವ ಅವರ ಸಾಮರ್ಥ್ಯ. ಅದರಲ್ಲೂ ಕ್ರಿಕೆಟ್ ಎಂಬ ಅನಿಶ್ಚಿತತೆಯ ಆಟದ ಒತ್ತಡದ ಕ್ಷಣಗಳಲ್ಲಿ ನಾಯಕಿ ಅನಿಸಿಕೊಳ್ಳುವುದು ಸಾಮಾನ್ಯ ವಿಷಯವಲ್ಲ. ಆದರೆ ಹರ್ಮನ್ ಪ್ರೀತ್‌ರಲ್ಲಿದ್ದ ಹೋರಾಟದ ಮನೋಭಾವ, ಪರಿಸ್ಥಿತಿಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುವ ಧೈರ್ಯ, ಆಟಗಾರರ ಮೇಲೆ ನಂಬಿಕೆ ಇಡುವಂತಹ ಗುಣ ಅವರನ್ನು ಈಗ ವಿಶ್ವದ ಶ್ರೇಷ್ಠನಾಯಕಿಯರಲ್ಲಿ ಒಬ್ಬರನ್ನಾಗಿಸಿದೆ. ಭಾರತಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟಿರುವ ಅವರ ನಾಯಕತ್ವ ಕೊನೆಗೊಂಡಿದೆ. ಆದರೆ ಅವರ ಆಟದೊಂದಿಗೆ ನಾಯಕತ್ವದ ಕೌಶಲ್ಯಗಳು ಹೊಸಬರಿಗೆ ಸದಾ ಸ್ಫೂರ್ತಿಯಾಗಲಿವೆ.
ನಾಯಕಿಯಾಗಿ ನಾನು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿ ಬಂದಿತ್ತು. ಆ ನಿರ್ಧಾರಗಳು ಯಾವಾಗಲೂ ಎಲ್ಲರಿಗೂ ಅರ್ಥವಾಗುವಂತಿರಲಿಲ್ಲ ಅಥವಾ ಸುಲಭವಾಗಿರಲಿಲ್ಲ. ಕೆಲವೊಮ್ಮೆ ಅವುಗಳಿಗೆ ವೈಯಕ್ತಿಕ ಬೆಲೆಯನ್ನು ತೆರಬೇಕಾಯಿತು. ಆದರೆ ನಾನು ತೆಗೆದುಕೊಂಡ ಪ್ರತಿಯೊಂದು ನಿರ್ಧಾರದ ಹಿಂದೆಯೂ ಒಂದೇ ಉದ್ದೇಶವಿತ್ತು. ತಂಡವನ್ನು ಇನ್ನಷ್ಟು ಉತ್ತಮಪಡಿಸುವುದು, ಇತರ ಆಟಗಾರ್ತಿಯರು ಬೆಳೆಯಲು, ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇರಿಸಲು ಹಾಗೂ ಅತ್ಯುತ್ತಮವಾದುದನ್ನು ಕಂಡುಕೊಳ್ಳಲು ಅವಕಾಶ ಕಲ್ಪಿಸಿಕೊಡುವುದಾಗಿತ್ತು’
-ಹರ್ಮನ್‌ಪ್ರೀತ್ ಕೌರ್.






