ಹರಪನಹಳ್ಳಿಯೊಂದಿಗೆ ಗಾಂಧೀಜಿ ನಂಟಿನ ಸಾಮರಸ್ಯಕ್ಕೆ ಧಕ್ಕೆ
ಮಹಾತ್ಮಾ ತಂಗಿದ್ದ ಕೊಠಡಿಯಿಂದ ಏಕಶಿಲಾ ಪ್ರತಿಮೆ ತೆರವು: ಸಾರ್ವಜನಿಕರ ಆಕ್ರೋಶ

ಹರಪನಹಳ್ಳಿ : ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಅವರು ಹರಪನಹಳ್ಳಿ ಪಟ್ಟಣಕ್ಕೆ ಭೇಟಿ ನೀಡಿ ಒಂದು ರಾತ್ರಿ ವಾಸ್ತವ್ಯ ಹೂಡಿದ್ದರೆನ್ನಲಾದ ಸ್ಥಳದಲ್ಲಿದ್ದ ಸ್ಮಾರಕದ ಮೂಲ ಸ್ವರೂಪ ಬದಲಿಸಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು (ಅಂದಿನ ಸರಕಾರಿ ಪ್ರೌಢಶಾಲೆ) ಕಟ್ಟಡದ ಕೊಠಡಿಯಲ್ಲಿ ಗಾಂಧೀಜಿ ಅವರು ವಾಸ್ತವ್ಯ ಹೂಡಿದ್ದರು ಎನ್ನಲಾಗಿದ್ದು, ಅವರ ಭೇಟಿಯ ನೆನಪನ್ನು ಮುಂದಿನ ಪೀಳಿಗೆಗೆ ಉಳಿಸುವ ಉದ್ದೇಶದಿಂದ ಅಂದಿನ ಶಾಸಕ ದಿ. ಎಂ.ಪಿ. ರವೀಂದ್ರ ಅವರು ಆ ಕೊಠಡಿಯನ್ನು ಸ್ಮಾರಕವಾಗಿ ರೂಪಿಸಿದ್ದರು. ಗಾಂಧೀಜಿ ವಿಶ್ರಾಂತಿ ಪೆಯುತ್ತಿರುವ ಭಂಗಿಯ ಏಕಶಿಲಾ ಪ್ರತಿಮೆಯನ್ನು ಅಲ್ಲಿಯೇ ಪ್ರತಿಷ್ಠಾಪಿಸಲಾಗಿತ್ತು.
ಆದರೆ, ಇತ್ತೀಚೆಗೆ ಕಾಲೇಜಿನಲ್ಲಿ ಕೈಗೊಂಡ ನವೀಕರಣ ಕಾಮಗಾರಿಯ ಸಂದರ್ಭದಲ್ಲಿ ಮೂಲ ಗಾಂಧೀಜಿ ಸ್ಮಾರಕ ಕೊಠಡಿಯ ಸ್ವರೂಪ ಬದಲಿಸಲಾಗಿದ್ದು, ಅಲ್ಲಿದ್ದ ಏಕಶಿಲಾ ಪ್ರತಿಮೆಯನ್ನು ಮತ್ತೊಂದು ಕೊಠಡಿಗೆ ಸ್ಥಳಾಂತರಿಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಇದರಿಂದ ಗಾಂಧೀಜಿ ವಾಸ್ತವ್ಯ ಹೂಡಿದ್ದರೆನ್ನಲಾದ ಮೂಲ ಸ್ಥಳದ ಐತಿಹಾಸಿಕ ಮಹತ್ವ ಹಾಗೂ ಸ್ಮಾರಕದ ಹಿಂದಿನ ವಿನ್ಯಾಸ ಸಾರ್ವಜನಿಕರ ಗಮನಕ್ಕೆ ಬಾರದಂತಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ಕಾಲೇಜಿನ ಅಭಿವೃದ್ಧಿ ಹಾಗೂ ಮೂಲಸೌಕರ್ಯಗಳ ನವೀಕರಣ ಅಗತ್ಯವಿದ್ದರೂ, ಐತಿಹಾಸಿಕ ಮಹತ್ವ ಹೊಂದಿರುವ ಸ್ಮಾರಕದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಕಾಮಗಾರಿ ಕೈಗೊಳ್ಳಬೇಕಿತ್ತು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಗಾಂಧೀಜಿ ಹರಪನಹಳ್ಳಿಗೆ ಭೇಟಿ ನೀಡಿದ್ದ ಘಟನೆ ಪಟ್ಟಣದ ಇತಿಹಾಸದ ಜತೆಗೆ ಈ ಭಾಗಕ್ಕೂ ಸ್ವಾತಂತ್ರ್ಯ ಚಳವಳಿಗೂ ಇದ್ದ ನಂಟಿನ ಪ್ರಮುಖ ನೆನಪಾಗಿದೆ. ಹೀಗಾಗಿ ಗಾಂಧೀಜಿ ವಾಸ್ತವ್ಯ ಹೂಡಿದ್ದರೆನ್ನಲಾದ ಮೂಲ ಕೊಠಡಿಯನ್ನು ಪುನರ್ಸ್ಥಾಪಿಸಿ, ಏಕಶಿಲಾ ಪ್ರತಿಮೆಯನ್ನು ಅಲ್ಲಿಯೇ ಮರುಪ್ರತಿಷ್ಠಾಪಿಸಬೇಕು. ಜತೆಗೆ, ಗಾಂಧೀಜಿ ಅವರ ಹರಪನಹಳ್ಳಿ ಭೇಟಿಗೆ ಸಂಬಂಧಿಸಿದ ಛಾಯಾಚಿತ್ರಗಳು, ಮಾಹಿತಿ, ವಿವರಣಾ ಫಲಕಗಳು ಹಾಗೂ ಹಿಂದೆ ಅಳವಡಿಸಲಾಗಿದ್ದ ಕಲಾಕೃತಿಗಳನ್ನು ಪುನರ್‌ಸ್ಥಾಪಿಸಿ ಸಮಗ್ರ ಸ್ಮಾರಕವಾಗಿ ಅಭಿವೃದ್ಧಿಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಐತಿಹಾಸಿಕ ಸ್ಮಾರಕಗಳು ಕೇವಲ ಕಟ್ಟಡಗಳಲ್ಲ. ಅವು ಹಿಂದಿನ ಘಟನೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜೀವಂತ ಸಾಕ್ಷಿಗಳಾಗಿವೆ. ಆದ್ದರಿಂದ ಕಾಲೇಜಿನ ಅಭಿವೃದ್ಧಿ ಕಾಮಗಾರಿಗಳ ಜತೆಗೆ ಗಾಂಧೀಜಿ ಸ್ಮಾರಕದ ಐತಿಹಾಸಿಕ ಮಹತ್ವವನ್ನೂ ಸಂರಕ್ಷಿಸುವತ್ತ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಗಮನಹರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಶಾಸಕರ ಸ್ಪಷ್ಟನೆಗೆ ಸಾರ್ವಜನಿಕರ ನಿರೀಕ್ಷೆ :
ಗಾಂಧೀಜಿ ಸ್ಮಾರಕದ ಮೂಲ ಸ್ವರೂಪ ಬದಲಾವಣೆ ಹಾಗೂ ಪ್ರತಿಮೆ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳು ಮೂಡಿವೆ. ಕಾಲೇಜಿನ ಅಭಿವೃದ್ಧಿ ಹಾಗೂ ಮೂಲಸೌಕರ್ಯಗಳ ನವೀಕರಣ ಅಗತ್ಯವಿದ್ದರೂ, ಐತಿಹಾಸಿಕ ಸ್ಮಾರಕದ ಸ್ವರೂಪಕ್ಕೆ ಧಕ್ಕೆಯಾಗದಂತೆ ಕಾಮಗಾರಿ ಕೈಗೊಳ್ಳಬೇಕಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಈ ಕುರಿತು ಸ್ಥಳೀಯ ಶಾಸಕರ ನಿಲುವು ಹಾಗೂ ಕಾಮಗಾರಿಯ ಉದ್ದೇಶದ ಬಗ್ಗೆ ಮಾಹಿತಿ ಪಡೆಯಲು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ, ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಶಾಸಕರ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಸ್ಮಾರಕದ ಸ್ವರೂಪ ಬದಲಾವಣೆ ಹಾಗೂ ಪ್ರತಿಮೆ ಸ್ಥಳಾಂತರಕ್ಕೆ ಕಾರಣವೇನು ಎಂಬುದರ ಕುರಿತು ಶಾಸಕರು ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬ್ರಿಟಿಷರ ಕಾಲದ ಶಾಲೆಯ ಅಭಿವೃದ್ಧಿ ಹಾಗೂ ಮೂಲಸೌಕರ್ಯಗಳ ನವೀಕರಣ ಅಗತ್ಯವಿದೆ. ಆದರೆ ಐತಿಹಾಸಿಕ ಮಹತ್ವ ಹೊಂದಿರುವ ಗಾಂಧೀಜಿ ಸ್ಮಾರಕದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕಿತ್ತು. ಉದ್ದೇಶಪೂರ್ವಕವಾಗಿ ಸ್ಮಾರಕದ ಸ್ವರೂಪ ಬದಲಿಸಲಾಗಿದೆ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡಿದೆ. ಈ ಕುರಿತು ಶಾಸಕರು ಸಾರ್ವಜನಿಕರಿಗೆ ಸ್ಪಷ್ಟ ಉತ್ತರ ನೀಡಬೇಕು.
-ಗುಡಿಹಳ್ಳಿ ಹಾಲೇಶ್, ವಿಜಯನಗರ ಜಿಲ್ಲಾಧ್ಯಕ್ಷ, ಅಖಿಲ ಭಾರತ ಕಿಸಾನ್ ಸಭಾ
ಮಹಾತ್ಮ ಗಾಂಧೀಜಿ ಅವರು ವಾಸ್ತವ್ಯ ಹೂಡಿದ್ದ ಮೂಲ ಕೊಠಡಿಯಲ್ಲಿದ್ದ ಏಕಶಿಲಾ ಪ್ರತಿಮೆಯನ್ನು ಬೇರೆ ಕೊಠಡಿಗೆ ಸ್ಥಳಾಂತರಿಸಿರುವುದು ಗಾಂಧೀಜಿ ಅವರ ಹೆಸರಿಗೆ ಮಾಡಿದ ಅಪಮಾನವಾಗಿದೆ. ಗಾಂಧೀಜಿ ಅವರ ಹೋರಾಟದ ಹಾದಿಯಲ್ಲಿ ಹರಪನಹಳ್ಳಿಗೂ ಮಹತ್ವದ ಸ್ಥಾನವಿದ್ದು, ಮೂಲ ಕೊಠಡಿಯನ್ನು ಇಲ್ಲಿನ ಜನರು ಭಾವನಾತ್ಮಕವಾಗಿ ಗೌರವಿಸುತ್ತಿದ್ದಾರೆ. ಶಾಸಕರು ಕೂಡಲೇ ಕ್ರಮ ಕೈಗೊಂಡು ಪ್ರತಿಮೆಯನ್ನು ಮೂಲ ಸ್ಥಳದಲ್ಲಿಯೇ ಪುನರ್‌ಸ್ಥಾಪಿಸಿ, ಸ್ಮಾರಕವನ್ನು ಅಭಿವೃದ್ಧಿಪಡಿಸಬೇಕು.
-ಕಾಂ.ಹೆಚ್.ಎಂ. ಸಂತೋಷ್, ಸಿಪಿಐ ಜಿಲ್ಲಾ ಕಾರ್ಯದರ್ಶಿ






