ನಮ್ಮ ಸಮಾಜದಲ್ಲಿ ಜಾತಿ ಎಂಬ ಗುರುತು ನಿಜವಾಗಿಯೂ ಅಳಿದಿದೆಯೆ?

ಜಾತಿ ಕುರಿತ ಚರ್ಚೆ ಬಂದ ಕೂಡಲೇ ಜನರು ಈಗ ಓದಿದವರಾಗಿದ್ದಾರೆ. ಅವರು ಈಗೆಲ್ಲ ಜಾತಿಯನ್ನು ನಂಬುವುದಿಲ್ಲ ಎನ್ನಲಾಗುತ್ತದೆ.
ನಗರಗಳಲ್ಲಿ ಜಾತಿ ಎನ್ನುವುದು ಅಪ್ರಸ್ತುತ ಎನ್ನಲಾಗುತ್ತದೆ. ಆಧುನಿಕ ಮನಸ್ಥಿತಿಯ ಯುವಜನರಿಗೆ ಜಾತಿ ಗೀತಿ ಎಲ್ಲ ಗೊತ್ತೇ ಇಲ್ಲ ಎನ್ನಲಾಗುತ್ತದೆ.
ಜನ ಬಹಳ ಮುಂದುವರಿದಿದ್ದಾರೆ, ಜಾತಿ ತಾರತಮ್ಯ ಈಗ ಎಲ್ಲೂ ಇಲ್ಲ ಎಂದೂ ಹೇಳಲಾಗುತ್ತದೆ. ಆದರೆ, ನಮ್ಮ ಎದುರಿರುವ ಕಟು ವಾಸ್ತವ ಏನು?
ಇಲ್ಲಿ ಓದಿದವರು, ವಿದ್ಯಾವಂತರು ಎನ್ನಿಸಿಕೊಂಡವರೇ ದಲಿತರನ್ನು ದೂರವಿಡುತ್ತಾರೆ. ಹಳ್ಳಿಗಳಿಗಿಂತಲೂ ನಗರ ಪ್ರದೇಶಗಳಲ್ಲಿಯೇ ಈ ತಾರತಮ್ಯ ಇನ್ನೂ ಹೆಚ್ಚಿದ್ದು, ದಲಿತರು ಪಡಬಾರದ ಪಾಡು ಪಡಬೇಕಿದೆ.
ಆಡಳಿತ ವರ್ಗಗಳಲ್ಲಿ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ, ಕಾರ್ಪೊರೇಟ್ ಕಚೇರಿಗಳಲ್ಲಿ, ಅತ್ಯಾಧುನಿಕ ವಾತಾವರಣ ದಲ್ಲೇ ಈ ಜಾತಿ ತಾರತಮ್ಯ ಢಾಳಾಗಿ ಎದ್ದು ಕಾಣುತ್ತಿದೆ.
ಈ ದೇಶದಲ್ಲಿ, ಸಹಬಾಳ್ವೆ ನಡೆಸುತ್ತಿರುವ ಮುಸ್ಲಿಮರಿಗೆ ಮನೆಗಳನ್ನು ಬಾಡಿಗೆಗೆ ಕೊಡಲಾಗುತ್ತಿಲ್ಲ. ಅವರು ತಮ್ಮ ನೆರೆಯಲ್ಲಿ ಮನೆ ಖರೀದಿಸುವುದಕ್ಕೂ ಜನರು ಬಿಡುತ್ತಿಲ್ಲ.
ಇದೇ ಸ್ಥಿತಿಯನ್ನು ಈ ದೇಶದ ದಲಿತರು ಕೂಡ ಅನುಭವಿಸುತ್ತಿದ್ದಾರೆ.
ಅವರಿಗೂ ಬಾಡಿಗೆಗೆ ಮನೆ ಕೊಡಲಾಗುವುದಿಲ್ಲ.ಮೇಲ್ಜಾತಿಯವರು ಎನ್ನಿಸಿಕೊಂಡವರ ನೆರೆಯಲ್ಲಿ ಅವರಿಗೆ ಬದುಕುವ ಅವಕಾಶವಿಲ್ಲ.
ಹಾಗಾದರೆ ಜಾತಿ ಎನ್ನುವ ವಿಷಯದಲ್ಲಿ ಭಾರತದಲ್ಲಿ ಏನು ಬದಲಾಗಿದೆ?
ದಲಿತರು ದಿಲ್ಲಿ ಯೂನಿವರ್ಸಿಟಿಯಿಂದ ಹಿಡಿದು ವಿಮಾನಯಾನ ಸಂಸ್ಥೆಗಳವರೆಗೆ ಅವಮಾನವನ್ನೇ ಎದುರಿಸುವುದು ನಡೆಯುತ್ತಿದೆ. ದಲಿತರು ತಮ್ಮ ಹಕ್ಕುಗಳಿಗಾಗಿ ಈಗಲೂ, ಇವತ್ತಿಗೂ ಹೋರಾಡಬೇಕಿದೆ. ಅಂದರೆ, ಹೇಳಲಾಗುತ್ತಿರುವ ಕಥೆಗಳು ಮತ್ತು ಅಬ್ಬರದ ಭಾಷಣಗಳಿಗೂ, ವಾಸ್ತವಕ್ಕೂ ಅಜಗಜಾಂತರ ಇದೆಯೆಂದಾಯಿತಲ್ಲವೆ?
ದಲಿತರು ಓದಿದವರಾಗಿದ್ದಾರೆ ಎಂದ ಮಾತ್ರಕ್ಕೆ ಅವರಿಗೆ ಸಿಗಬೇಕಾದ ಗೌರವ, ಘನತೆಯ ಬದುಕು ಸಿಕ್ಕಿಬಿಟ್ಟಿದೆ ಎಂದುಕೊಂಡರೆ ಅದು ದೊಡ್ಡ ಭ್ರಮೆ. ಅವರು ಈಗಲೂ ತಮ್ಮ ಮೂಲಭೂತ ಹಕ್ಕುಗಳಿಗಾಗಿ ಕೇಳಿಕೊಳ್ಳುವ ಸ್ಥಿತಿಯಿದೆ.
ದಿಲ್ಲಿ ವಿಶ್ವವಿದ್ಯಾನಿಲಯದ ದಲಿತ ಪ್ರಾಧ್ಯಾಪಕರೊಬ್ಬರು ತಮ್ಮ ಸ್ಥಿತಿ ಹೇಳಿಕೊಂಡಾಗಲಂತೂ, ಜಾತಿಯ ಕರಾಳತೆ ಹೇಗಿದೆ ಎಂಬುದು ಬಯಲಾಗಿದೆ. ಅವರು, ತಾವು ಇವತ್ತಿಗೂ ಎದುರಿಸುತ್ತಿರುವ ಜಾತಿ ಆಧಾರಿತ ತಾರತಮ್ಯದ ಬಗ್ಗೆ ಹೇಳಿಕೊಂಡಿದ್ದಾರೆ.
ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶ್ರೇಣಿಯ ಹುದ್ದೆಯಲ್ಲಿರುವ ಅವರಿಗೇ ಅಲ್ಲೊಂದು ಕಚೇರಿ ಕೊಡಲಾಗಿಲ್ಲ ಎಂದರೆ ವಿದ್ಯಾವಂತರೆನ್ನಿಸಿಕೊಂಡವರು ಒಬ್ಬ ದಲಿತ ವ್ಯಕ್ತಿಯನ್ನು ನಡೆಸಿಕೊಳ್ಳುತ್ತಿರುವ ರೀತಿ ಎಷ್ಟು ಅಮಾನವೀಯವಾಗಿದೆ ಎಂಬುದನ್ನು ಗ್ರಹಿಸಬಹುದು.
ಅವರು ರಜೆ ಕೂಡ ಸಿಗದ ಸ್ಥಿತಿಯಲ್ಲಿ ಒದ್ದಾಡಿರುವುದು ಬೆಳಕಿಗೆ ಬಂದಿದೆ. ರಜೆ ತೆಗೆದುಕೊಳ್ಳಲು ಹೈಕೋರ್ಟ್‌ಗೆ ಹೋಗಬೇಕಾಯಿತು ಎಂದು ಹೇಳಿಕೊಂಡಿದ್ದಾರೆ. ತಮ್ಮ ಇಡೀ ವೃತ್ತಿಜೀವನವೇ ಕಳಂಕಿತವಾಗಿದೆ ಎಂಬ ತೀವ್ರ ಸಂಕಟ ಅವರದು.
ಏನೇ ಸಾಧಿಸಿದರೂ, ವಿಶ್ವದ ಅತಿದೊಡ್ಡ ಪ್ರಶಸ್ತಿಯನ್ನೇ ಗೆದ್ದರೂ, ಜಾತಿಯಿಂದ ದಲಿತರಾಗಿದ್ದರೆ, ಈ ಸಮಾಜಕ್ಕೆ ಅದಾವುದೂ ಲೆಕ್ಕಕ್ಕಿಲ್ಲ. ಜಾತಿ ಎಂಬುದು ಒಬ್ಬ ವ್ಯಕ್ತಿಯನ್ನು ಹೀಗೆ ನಿಕೃಷ್ಟನನ್ನಾಗಿಸಿಬಿಡುತ್ತದೆ. ಆತ ಇತರರಿಗಿಂತ ಕಡಿಮೆ ಎಂದು ನೋಡುತ್ತದೆ.
ಹಾಗಾದರೆ, ಈ ದೇಶದಲ್ಲಿ ಏನು ಬದಲಾಗಿದೆ?
ಇತ್ತೀಚಿನ ದಿನಗಳಲ್ಲಿ, ಭಾರತದಾದ್ಯಂತ ಜಾತಿ ಆಧಾರಿತ ಹಿಂಸಾಚಾರ ಮತ್ತು ತಾರತಮ್ಯದ ಹಲವಾರು ಘಟನೆಗಳು ಮತ್ತೆ ಮತ್ತೆ ಸುದ್ದಿಯಾಗುತ್ತಲೇ ಇರುತ್ತವೆ.
ಮೇಲ್ಜಾತಿಯವರು ವಾಸಿಸುತ್ತಿರುವಲ್ಲಿಂದ ದಲಿತರ ಮದುವೆಯ ಮೆರವಣಿಗೆಯೂ ಹೋಗುವ ಹಾಗಿಲ್ಲ ಎಂಬ ಸ್ಥಿತಿಯಿದೆ. ಹಾಗೆ ದಲಿತರ ಮದುವೆ ಮೆರವಣಿಗೆ ತಮ್ಮ ಪ್ರದೇಶದೊಳಗೆ ಹಾದುಹೋದರೆ, ಅದಕ್ಕಾಗಿ ಅವರ ಮೆಲೆ ಹಲ್ಲೆ ನಡೆಸುವ ನಿದರ್ಶನಗಳು ಬೇಕಾದಷ್ಟಿವೆ.
ಹಲ್ಲೆ, ಜಾತಿ ನಿಂದನೆ ಎಲ್ಲವನ್ನೂ ಅವರು ಎದುರಿಸಬೇಕಾಗುತ್ತದೆ. ದಲಿತರು ಏನು ಮಾಡಿದರೂ ತಪ್ಪು ಎನ್ನುವಂತೆ ಅವಮಾನ ಎದುರಿಸಬೇಕಾಗುತ್ತದೆ.
ದಲಿತನೊಬ್ಬ ಬೈಕ್‌ನಲ್ಲಿ ತಮ್ಮನ್ನು ಓವರ್‌ಟೇಕ್ ಮಾಡಿದ್ದಕ್ಕೆ ಅಡ್ಡಗಟ್ಟಿ ನಡುರಸ್ತೆಯಲ್ಲೇ ಥಳಿಸಿದ್ದೂ ಇದೆ. ಜಾತಿ ತಾರತಮ್ಯ ಇನ್ನೂ ಹೋಗಿಲ್ಲ ಎನ್ನುವುದಕ್ಕೆ ಇವೆಲ್ಲ ಮತ್ತೆ ಮತ್ತೆ ಸಿಗುವ ನಿದರ್ಶನಗಳು.
ಜಾತಿ ಎನ್ನುವುದು ವಸಾಹತುಶಾಹಿ ಅವಶೇಷವಷ್ಟೆ ಎಂದು ಹೇಳಲಾಗುತ್ತದೆ. ಆದರೆ, ಅದು ಕಟು ವಾಸ್ತವವನ್ನು ಮರೆಮಾಚುವ ಪೊಳ್ಳು ಹೇಳಿಕೆ ಮಾತ್ರ.
ಭಾರತದ ಸಮಾಜದಲ್ಲಿ ಇವತ್ತಿಗೂ ಜಾತಿ ಆಳವಾಗಿ ಬೇರೂರಿದೆ. ಜಾತಿ ತಾರತಮ್ಯ ಹೆಜ್ಜೆಹೆಜ್ಜೆಗೂ ಕೆಳಜಾತಿಯವರಿಗೆ ತೊಡರುತ್ತಲೇ ಇದೆ.
ಈ ದೇಶದ ಇತಿಹಾಸದಲ್ಲಿ ಜಾತಿ ಕರಾಳತೆ ಎಂಥದು ಎನ್ನುವುದನ್ನು ಕಂಡಿದ್ದೇವೆ.
ಅದು ಜನವರಿ 1913.
ಈ ದೇಶದ ಒಬ್ಬ ಯುವಕ ವಿದೇಶದಲ್ಲಿ ಅಧ್ಯಯನ ಮಾಡಿದ ನಂತರ ಭಾರತಕ್ಕೆ ಮರಳಿದಾಗಲೂ, ಜಾತಿ ಹಿನ್ನೆಲೆ ಬೆನ್ನು ಬಿಡುವುದಿಲ್ಲ. ಆ ಯುವಕ ಬರೋಡಾ ಸಚಿವಾಲಯದಲ್ಲಿ ಕೆಲಸ ಪಡೆದಾಗ, ಒಬ್ಬ ಪ್ಯೂನ್ ಕೂಡ ಫೈಲುಗಳನ್ನು ದೂರದಿಂದಲೇ ಎಸೆಯುತ್ತಿದ್ದುದನ್ನು ಆ ಯುವಕ ಕಾಣಬೇಕಾಯಿತು. ಅಸ್ಪಶ್ಯತೆಯ ಕರಾಳತೆಯನ್ನು ಅನುಭವಿಸಬೇಕಾಯಿತು.
ಅವರು ಡಾ. ಬಿ.ಆರ್. ಅಂಬೇಡ್ಕರ್.
ಅದಾಗಿ 112 ವರ್ಷಗಳೇ ಕಳೆದಿವೆ.ಅದರ ನಂತರವೂ, ಈ ಸ್ವತಂತ್ರ ಭಾರತದಲ್ಲೂ ಏನಾದರೂ ಬದಲಾಗಿದೆಯೆ?
ಹೇಳಿಕೊಳ್ಳುವುದಕ್ಕೆ ದಲಿತರು ಮತ್ತು ಆದಿವಾಸಿಗಳನ್ನು ರಾಷ್ಟ್ರಪತಿ ಹುದ್ದೆಯಲ್ಲಿ ಕೂರಿಸಲಾಗಿದೆ.
ಪ್ರಧಾನಿ ಹೋಗಿ ಪೌರ ಕಾರ್ಮಿಕರ ಕಾಲು ತೊಳೆಯುತ್ತಾರೆ. ಆದರೆ, ವಾಸ್ತವದಲ್ಲಿ ತಳಮಟ್ಟದಲ್ಲಿ ಜನರ ನಡುವೆ ಜಾತಿ ತಾರತಮ್ಯ ಇನ್ನೂ ಹೋಗಿಲ್ಲ.
ಮೊನ್ನೆ ಮೊನ್ನೆಯ ಘಟನೆ.
ಇಂಡಿಗೋದಲ್ಲಿ ಕೆಲಸ ಮಾಡುತ್ತಿರುವ 35 ವರ್ಷದ ದಲಿತ ತರಬೇತಿ ಪೈಲಟ್ ಅವಮಾನ ಎದುರಿಸಬೇಕಾಯಿತು. ಆ ಸಂಸ್ಥೆಯ ಗುರುಗ್ರಾಮ್ ಕಚೇರಿಯಲ್ಲಿ ಮೂವರು ಹಿರಿಯ ಅಧಿಕಾರಿಗಳು ಅವನನ್ನು ತಾತ್ಸಾರದಿಂದ ಕಂಡರು.
ಜಾತಿಯ ಹೆಸರಲ್ಲಿ ಆತನನ್ನು ಕರೆದು, ‘‘ನೀನು ವಿಮಾನ ಹಾರಿಸಲು ಯೋಗ್ಯನಲ್ಲ, ಹೋಗಿ ಚಪ್ಪಲಿಯನ್ನೇ ಹೊಲಿ, ಇಲ್ಲಿ ವಾಚ್‌ಮನ್ ಆಗಿರುವುದಕ್ಕೂ ಯೋಗ್ಯನಲ್ಲ’’ ಎಂದು ಹೀಗಳೆಯಲಾಯಿತು.
ಜಾತಿ ಆಧಾರಿತ ಕಿರುಕುಳಕ್ಕಾಗಿ ಆ ತರಬೇತಿ ಪೈಲಟ್ ಪೊಲೀಸ್ ದೂರು ದಾಖಲಿಸಿದ್ದಾರೆ. ಎಫ್‌ಐಆರ್ ಪ್ರಕಾರ, ಎಪ್ರಿಲ್ 28, 2025ರಂದು ನಡೆದ ಸಭೆಯಲ್ಲಿ ಆ ಪೈಲಟನ್ನು ಅರ್ಧ ಗಂಟೆ ಕಾಲ ಜಾತಿ ಹೆಸರಲ್ಲಿ ನಿಂದಿಸಲಾಯಿತು. ‘‘ಹೋಗಿ ಚಪ್ಪಲಿ ಹೊಲಿ’’ ಎಂದು ಹೇಳಿದ್ದಷ್ಟೇ ಅಲ್ಲ, ಸಂಬಳ ಕಡಿತ, ಪುನಃ ಮರುತರಬೇತಿಯ ಬೆದರಿಕೆಗಳನ್ನೂ ಹಾಕಲಾಯಿತು. ಕಡೆಗೆ, ರಾಜೀನಾಮೆ ನೀಡುವಂತೆಯೂ ಒತ್ತಾಯಿಸಲಾಯಿತು ಎಂದು ಆ ಪೈಲಟ್ ಆರೋಪಿಸಿದ್ದಾರೆ.
ನೀತಿ ಸಮಿತಿ ಮತ್ತು ಹಿರಿಯ ಆಡಳಿತ ಮಂಡಳಿಯನ್ನು ಸಂಪರ್ಕಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ವರದಿಗಳು ಹೇಳುತ್ತಿವೆ.
ಇಂಡಿಗೋ ತನ್ನ ಹೇಳಿಕೆಯಲ್ಲಿ ಆ ಎಲ್ಲ ಆರೋಪಗಳನ್ನು ನಿರಾಕರಿಸಿತು. ಜಾತಿ ತಾರತಮ್ಯವನ್ನು ಸಹಿಸುವುದಿಲ್ಲ ಎಂದು ಹೇಳಿತು.ಆದರೆ, ಅದನ್ನೆಲ್ಲ ಅಲ್ಲಿಯೇ ಅನುಭವಿಸಿದ ವ್ಯಕ್ತಿಯ ಪಾಡು ಎಂತಹದಿರಬಹುದು?
ಶಿಕ್ಷಣದಿಂದ ಎಲ್ಲವೂ ಬದಲಾಗುತ್ತದೆ ಎಂಬುದು ಕೂಡ ಸುಳ್ಳಾಗಿದೆ. ಶಿಕ್ಷಣ ಕ್ಷೇತ್ರದಲ್ಲೂ ಜಾತಿ ಭೂತ ಕಾಡುತ್ತಿದೆ.
ಭೌತಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಮತ್ತು ವಿಶ್ವವಿದ್ಯಾನಿಲಯದ ಅಗ್ರ ಐವರು ವಿಜ್ಞಾನಿಗಳಲ್ಲಿ ಸ್ಥಾನ ಪಡೆದಿರುವ ದಿಲ್ಲಿ ಯೂನಿವರ್ಸಿಟಿ ಪ್ರೊಫೆಸರ್ ಡಾ. ಅಶೋಕ್ ಕುಮಾರ್ ಅವರಿಗೆ ಭಡ್ತಿ ನೀಡಲು ನಿರಾಕರಿಸಲಾಯಿತು. ಅವರು ಅದಕ್ಕೆ ಸೂಕ್ತ ಅಲ್ಲ ಎಂದು ಹೇಳಿಬಿಡಲಾಯಿತು. ಇದಕ್ಕೆ, ತಾವು ಪರಿಶಿಷ್ಟ ಜಾತಿಗೆ ಸೇರಿರುವುದೇ ಕಾರಣ ಎಂಬ ನೋವು ಅವರಿಗಿದೆ.
ಹಲವಾರು ಅಂಕಿಅಂಶಗಳನ್ನು ನೋಡಿಕೊಂಡರೂ, ಜಾತಿ ತಾರತಮ್ಯವನ್ನೆ ಸಾಬೀತು ಮಾಡುವ ಪುರಾವೆಗಳೇ ಸಿಗುತ್ತವೆ.
ಐಐಟಿ ಬಾಂಬೆಯ ಶೇ. 91 ಅಧ್ಯಾಪಕರು ಮೀಸಲಾತಿ ರಹಿತ ಮೇಲ್ವರ್ಗಗಳಿಗೆ ಸೇರಿದವರಾಗಿದ್ದಾರೆ. ಕೇವಲ ಶೇ. 0.88 ಮಾತ್ರ ಎಸ್‌ಟಿ ಹಿನ್ನೆಲೆಯಿಂದ ಬಂದವರಿದ್ದಾರೆ.
ಏಳು ಐಐಟಿಗಳಲ್ಲಿ, ಎಸ್‌ಟಿ ಅಧ್ಯಾಪಕರು ಒಟ್ಟು ಸಿಬ್ಬಂದಿಯಲ್ಲಿ ಶೇ. 1ಕ್ಕಿಂತ ಕಡಿಮೆ ಇದ್ದಾರೆ.
ಐಐಎಂ ಇಂದೋರ್‌ನಲ್ಲಿ ಶೇ. 97ಕ್ಕಿಂತ ಹೆಚ್ಚು ಅಧ್ಯಾಪಕರು ಸಾಮಾನ್ಯ ವರ್ಗ ಮತ್ತು ಮೀಸಲಾತಿ ರಹಿತ ವರ್ಗಕ್ಕೆ ಸೇರಿದವರಾಗಿದ್ದಾರೆ. ಒಬ್ಬನೇ ಒಬ್ಬ ಎಸ್‌ಸಿ ಅಥವಾ ಎಸ್‌ಟಿ ಪ್ರಾಧ್ಯಾಪಕರಿಲ್ಲ.
ಇನ್ನು ಸಾಮಾಜಿಕವಾಗಿ, ಧಾರ್ಮಿಕವಾಗಿ ಕಾಣಿಸುವ ತಾರತಮ್ಯಗಳಿಗೂ ಕಡಿಮೆಯಿಲ್ಲ.
ಉತ್ತರ ಪ್ರದೇಶದ ಇಟಾವಾದಲ್ಲಿ ಬ್ರಾಹ್ಮಣರ ಪ್ರದೇಶದಲ್ಲಿ ಧರ್ಮೋಪದೇಶ ನೀಡಿದ್ದಕ್ಕಾಗಿ ಯಾದವ ಸಮುದಾಯದ ಧರ್ಮೋಪದೇಶಕರೊಬ್ಬರ ಮೇಲೆ ಹಲ್ಲೆ ನಡೆಸಲಾಯಿತು.
ಮಧ್ಯಪ್ರದೇಶದ ಜಬಲ್ಪುರದಲ್ಲಿ ಪಟೇಲ್ ಸಮುದಾಯದ ಮಹಿಳೆಯೊಬ್ಬರಿಗೆ ಭಾಗವತ್ ಕಥಾ ವಾಚನಕ್ಕೆ ಅವಕಾಶ ನೀಡದಂತೆ ನಿರ್ಬಂಧ ಹೇರಲಾಯಿತು. ಹಾಗೆ ಮಾಡಲು ಅವರು ಬ್ರಾಹ್ಮಣ ವ್ಯಕ್ತಿಯನ್ನು ಮದುವೆಯಾಗಬೇಕು ಎಂದು ಹೇಳಲಾಯಿತು.
ದಲಿತ ವರನ ಮದುವೆ ಮೆರವಣಿಗೆ ಠಾಕೂರರ ಪ್ರದೇಶದ ಮೂಲಕ ಹಾದು ಹೋಗಿದ್ದಕ್ಕಾಗಿ ಮೆರವಣಿಗೆ ಮೇಲೆ ಕಲ್ಲು ತೂರಲಾಯಿತು.
ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಹಸು ಕಳ್ಳಸಾಗಣೆ ಆರೋಪ ಹೊತ್ತ ಇಬ್ಬರು ದಲಿತರನ್ನು 30,000 ರೂ. ಕೊಡಲು ಒಪ್ಪದೇ ಇದ್ದಾಗ, ಕ್ರೂರವಾಗಿ ಥಳಿಸಲಾಯಿತು.ಅವರ ತಲೆ ಅರ್ಧ ಬೋಳಿಸಲಾಯಿತು. ಮೊಣಕಾಲುಗಳ ಮೇಲೆ ತೆವಳುವಂತೆ, ಹುಲ್ಲು ತಿನ್ನುವಂತೆ, ಚರಂಡಿ ನೀರು ಕುಡಿಯಲು ಒತ್ತಾಯಿಸಲಾಯಿತು.
ಇವೆಲ್ಲವೂ ಏನು?
ಎನ್‌ಸಿಆರ್‌ಬಿ ಪ್ರಕಾರ,
2018ರಲ್ಲಿ ದಲಿತರ ವಿರುದ್ಧ ದೇಶದಲ್ಲಿ 42,793 ಪ್ರಕರಣಗಳು ದಾಖಲಾಗಿವೆ. 2022ರಲ್ಲಿ 57,582 ಪ್ರಕರಣಗಳು. ಅಂದರೆ, ಹಿಂದಿನ ವರ್ಷಕ್ಕಿಂತ ಶೇ. 13 ಹೆಚ್ಚಳವಾಗಿದೆ.
ಜಾತಿ ಸಮಸ್ಯೆಗಳು ಇಲ್ಲ ಎಂದು ಹೇಳಿದ ತಕ್ಷಣ, ವಾಸ್ತವದಲ್ಲಿ ಹಾಗಿಲ್ಲ. ದೇಶದಲ್ಲಿ ಇಂದು ನಡೆಯುತ್ತಿರುವ ಪ್ರತಿಯೊಂದು ಘಟನೆ ಆ ಕಟು ಸತ್ಯವನ್ನು ಹೇಳುತ್ತಿದೆ. ಪ್ರತಿಯೊಂದು ಸಂಖ್ಯೆ ಆ ಕರಾಳತೆಯನ್ನು ಕಾಣಿಸುತ್ತಿದೆ. ಪ್ರತಿಯೊಂದು ಧ್ವನಿಯೂ ಅದನ್ನು ನಮ್ಮ ಕಿವಿಗೆ ಮುಟ್ಟಿಸುತ್ತಲೇ ಇದೆ.
ಅದೇನೆಂದರೆ, ಜಾತಿ ತಾರತಮ್ಯ ಈ ದೇಶದಲ್ಲಿ ಜೀವಂತವಾಗಿದೆ ಮತ್ತು ಅದು ಎಲ್ಲೆಡೆ ಇದೆ.







