ಆರೋಗ್ಯ ಇಲಾಖೆಯ ಹೊರ ಗುತ್ತಿಗೆ ಕಾರ್ಮಿಕರಿಗೆ 8 ತಿಂಗಳ ವೇತನ ಬಾಕಿ
ಸಂಕಷ್ಟದಲ್ಲಿ ಜೀವನ ನಿರ್ವಹಣೆ

ರಾಯಚೂರು: ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಡಿ.ಗ್ರೂಪ್ ನೌಕರರು, ಡಾಟಾ ಎಂಟ್ರಿ ಆಪರೇಟರ್, ಆ್ಯಂಬುಲೆನ್ಸ್ ಚಾಲಕರು ಸೇರಿದಂತೆ ಸುಮಾರು 300 ಸಿಬ್ಬಂದಿಗೆ 7-8 ತಿಂಗಳಿನಿಂದ ವೇತನ ಪಾವತಿ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ರಾಯಚೂರು ತಾಲೂಕಿನ ಸಿರವಾರ, ಕವಿತಾಳ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮೈಸೂರಿನ ಸ್ವಿಸ್ ಎಂಬ ಗುತ್ತಿಗೆ ಕಂಪೆನಿಯ ಅಡಿಯಲ್ಲಿ ಕೆಲಸ ಮಾಡುತ್ತಿರುವ ಸುಮಾರು 300 ಸಿಬ್ಬಂದಿಗೆ 2024 ಸೆಪ್ಟೆಂಬರ್ ನಿಂದ ಇಂದಿನವರೆಗೂ ವೇತನ ಪಾವತಿ ಮಾಡಿಲ್ಲ. ಇದರಿಂದಾಗಿ ಮಕ್ಕಳ ಶಾಲಾ ಶುಲ್ಕ, ಕುಟುಂಬ ನಿರ್ವಹಣೆ ಮಾಡಲು ಆಗುತ್ತಿಲ್ಲ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.
ಈ ಹಿಂದೆ ರಾಯಚೂರಿನ ಎಂಆರ್‌ಸಿ ಗುತ್ತಿಗೆ ಏಜೆನ್ಸಿ ಅಡಿಯಲ್ಲಿ ಸಿಬ್ಬಂದಿಗೆ ನೇಮಕ ಮಾಡಿಕೊಳ್ಳಲಾಗಿತ್ತು. ಈಗ ಮೈಸೂರು ಮೂಲದ ಸ್ವಿಸ್ ಕಂಪೆನಿ ಗುತ್ತಿಗೆ ಪಡೆದಿದೆ. ಎಎನ್ ಆರ್ ಕಂಪೆನಿ 4 ತಿಂಗಳ ವೇತನ ಬಾಕಿ ಇಟ್ಟು ಪಾವತಿ ಮಾಡದೇ ಕೈತೊಳೆದುಕೊಂಡಿದ್ದು , ನಂತರ ಬಂದ ಸ್ವಿಸ್ ಏಜೆನ್ಸಿ ಕೆಲವರಿಗೆ ಎರಡು ತಿಂಗಳ ಬಾಕಿ ವೇತನ ಪಾವತಿ ಮಾಡಿ ನಂತರ ಇದುವರೆಗೆ ವೇತನ ಪಾವತಿಯ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಸಿಬ್ಬಂದಿಯ ಆರೋಪವಾಗಿದೆ.
ಗುತ್ತಿಗೆ ಪಡೆದ ಮೈಸೂರಿನ ಸ್ವಿಸ್ ಜಿಲ್ಲೆಯ ಉಸ್ತುವಾರಿ ಹೇಮಂತ್ ಎಂಬವರ ಬಳಿ ವೇತನ ನೀಡುವಂತೆ ಕೇಳಿದರೆ ಬಜೆಟ್ ಬಂದಿಲ್ಲ ಎಂದು ತಮ್ಮ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದಾರೆ. ಇಲಾಖೆಯ ಅಧಿಕಾರಿಗಳಿಗೆ ಬಿಲ್‌ಗಳನ್ನು ಕೊಟ್ಟರು ಕೂಡ ವೇತನ ಪಾವತಿಗೆ ಮುಂದಾಗುತ್ತಿಲ್ಲ ಗುತ್ತಿಗೆ ಏಜೆನ್ಸಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ಹಗ್ಗಜಗ್ಗಾಟದಲ್ಲಿ ಹೊರ ಗುತ್ತಿಗೆ ನೌಕರರು ಬಡವಾಗಿದ್ದಾರೆ. ಒಬ್ಬರಿಗೊಬ್ಬರು ಆರೋಪ, ಪ್ರಾತ್ಯಾರೋಪ ಮಾಡುತ್ತಾ ಇರುವುದರಿಂದ ಸಿಬ್ಬಂದಿಯ ಜೀವನ ಸಂಕಷ್ಟಕರವಾಗಿದೆ.
ಹಟ್ಟಿ, ಸಿಂಧನೂರು ನೌಕರರಿಗೆ ವೇತನ ಪಾವತಿ: ಜಿಲ್ಲಾ ಕೇಂದ್ರದಲ್ಲಿ ಮುಖ್ಯ ಲೆಕ್ಕ ಅಧಿಕಾರಿ ಶ್ರೀಧರ್ ಮತ್ತು ತಾಲೂಕು ಆರೋಗ್ಯ ಕಚೇರಿಯಲ್ಲಿ ರಾಘವೇಂದ್ರ ಎಂಬವವರು ತಮಗೆ ಬೇಕಾದವರಿಗೆ ವೇತನ ಪಾವತಿ ಮಾಡಿದ್ದಾರೆ. ಆ ಮೂಲಕ ಸಿಬ್ಬಂದಿಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಿಂಧನೂರು ತಾಲೂಕಿನ ಆಸ್ಪತ್ರೆ ಹಾಗೂ ಕೆಲ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹೊರ ಗುತ್ತಿಗೆ ಸಿಬ್ಬಂದಿಗೆ ಶಾಸಕರ, ವಿಧಾನಪರಿಷತ್ ಸದಸ್ಯರ ಮೌಖಿಕ ಆದೇಶದ ಮೇರೆಗೆ ವೇತನ ಪಾವತಿ ಮಾಡಿದ್ದು ಉಳಿದ ಕಡೆ ಹಾಜರಾತಿ ಸಲ್ಲಿಸಿಲ್ಲ, ಬಜೆಟ್ ಇಲ್ಲ ಹಾಗೂ ಇತರ ತಾಂತ್ರಿಕ ಕಾರಣಗಳನ್ನು ನೀಡಿ ವೇತನ ಪಾವತಿಸಿಲ್ಲ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.
ಸಿಂಧನೂರು, ಲಿಂಗಸುಗೂರು, ಹಟ್ಟಿ ಹಾಗೂ ಬಹುತೇಕ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ವೇತನ ಪಾವತಿಸಲಾಗಿದೆ. ಇತ್ತೀಚೆಗೆ ಸಿಬ್ಬಂದಿಗೆ 80 ಲಕ್ಷ ರೂ. ವೇತನ ಪಾವತಿಸಲಾಗಿದೆ. ಹಾಜರಾತಿ ಸಲ್ಲಿಕೆಯಲ್ಲಿ ವಿಳಂಬ, ಯುಟಿಆರ್, ಆಧಾರ್ ಮಿಸ್ ಮ್ಯಾಚ್ ಹಾಗೂ ಇತರ ತಾಂತ್ರಿಕ ಕಾರಣಗಳಿಂದ ಕೆಲವರಿಗೆ ವೇತನ ಪಾವತಿಯಾಗಿಲ್ಲ, ಶೀಘ್ರವೇ ಈ ಬಗ್ಗೆ ಪರಿಶೀಲಿಸಿ ವೇತನ ಪಾವತಿಗೆ ಕ್ರಮ ವಹಿಸಲಾಗುವುದು.
-ಡಾ.ಸುರೇಂದ್ರ ಬಾಬು, ಜಿಲ್ಲಾ ಆರೋಗ್ಯಾಧಿಕಾರಿ, ರಾಯಚೂರು
ರಾಯಚೂರು ಜಿಲ್ಲೆಯ ಆರೋಗ್ಯ ಇಲಾಖೆಯ ಹೊರ ಗುತ್ತಿಗೆ ಕಾರ್ಮಿಕರಿಗೆ ಎಂಆರ್‌ಸಿ ಕಂಪೆನಿಯಿಂದ 4 ತಿಂಗಳು ಹಾಗೂ ಮೈಸೂರಿನ ಸ್ವಿಸ್ ಏಜೆನ್ಸಿಯಿಂದ 8ತಿಂಗಳ ವೇತನ ಬಾಕಿ ಇದೆ. ನೇಮಕ ಪತ್ರ ಮಾತ್ರ ನೀಡಿದ್ದು, ಇಎಸ್‌ಐ, ಪಿಎಫ್ ಹಾಗೂ ಇತರ ಸಾಮಾಜಿಕ ಭದ್ರತೆ ಸೌಲಭ್ಯ ನೀಡುತ್ತಿಲ್ಲ. ವೇತನ ಪಾವತಿ ಮಾಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಸಂಬಳ ಬಾರದ ಕಾರಣ ನನ್ನ ಮಗನಿಗೆ ಒಂದು ತಿಂಗಳು ತಡವಾಗಿ ಶಾಲೆಗೆ ದಾಖಲಿಸಿದ್ದೇನೆ. ಜೀವನ ಮಾಡುವುದೇ ಕಷ್ಟಕರವಾಗಿದೆ. ನಮ್ಮ ಪರಿಸ್ಥಿತಿ ಹೀಗಿರುವಾಗ ವೇತನ ಪಾವತಿಯ ಬಗೆ ಒತ್ತಾಯಿಸಿದರೆ ಕೆಲಸದಿಂದ ತೆಗೆಯುತ್ತೇವೆ ಎಂದು ಬೆದರಿಕೆ ಹಾಕಲಾಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಆ್ಯಂಬುಲೆನ್ಸ್ ಚಾಲಕ ಹಾಗೂ ಡಾಟಾ ಎಂಟ್ರಿ ಆಪರೇಟರ್ ಬೇಸರವ್ಯಕ್ತಪಡಿಸಿದ್ದಾರೆ.







