ರಸ್ತೆಯಲ್ಲೇ ಧಾನ್ಯ ರಾಶಿ: ವಾಹನ ಸವಾರರಿಗೆ ಅಪಘಾತದ ಭೀತಿ

ಕನಕಗಿರಿ : ಗಂಗಾವತಿ-ಲಿಂಗಸೂಗೂರು ಹಾಗೂ ಕನಕಗಿರಿ ರಸ್ತೆಗಳಲ್ಲಿ ರೈತರು ಬೆಳೆದ ಬೆಳೆಗಳನ್ನು ರಸ್ತೆಯಲ್ಲೇ ಒಣಗಿಸಿ, ಶುಚಿಗೊಳಿಸುತ್ತಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.
ತಿಪ್ಪನಾಳ, ಸೂಳೇಕಲ್, ಅರಳಿಹಳ್ಳಿ ಗ್ರಾಮಗಳಿಂದ ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರದವರೆಗಿನ ಸುಮಾರು 20 ಕಿ.ಮೀ. ರಸ್ತೆಯುದ್ದಕ್ಕೂ ರೈತರು ಸೂರ್ಯಕಾಂತಿ, ಭತ್ತ, ಮೆಕ್ಕೆಜೋಳ, ಸಜ್ಜೆ ಸೇರಿದಂತೆ ವಿವಿಧ ಬೆಳೆಗಳ ರಾಶಿ ಹಾಕಿ ರಸ್ತೆಯಲ್ಲೇ ಶುಚಿಗೊಳಿಸುತ್ತಿದ್ದಾರೆ.
ರಸ್ತೆಯ ಒಂದು ಬದಿಯಲ್ಲಿ ಧಾನ್ಯದ ಬೃಹತ್ ರಾಶಿಗಳನ್ನು ಹಾಕಿರುವುದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಆದರೆ, ಈ ಬಗ್ಗೆ ಲೋಕೋಪಯೋಗಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಾಹನ ಸವಾರರು ಆರೋಪಿಸಿದ್ದಾರೆ.
ಬೆಳೆಗಳನ್ನು ಕಟಾವು ಮಾಡಿ ರಸ್ತೆಯಲ್ಲಿ ತೂರುವಾಗ ಹಾರುವ ಕಸ, ಕಡ್ಡಿ ಹಾಗೂ ಧೂಳು ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರ ಕಣ್ಣಿಗೆ ಬೀಳುತ್ತಿದೆ. ಇದರಿಂದ ಕಣ್ಣಿನ ಸಮಸ್ಯೆ ಎದುರಿಸುತ್ತಿದ್ದು, ಚಿಕಿತ್ಸೆಗಾಗಿ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಆರೇಳು ವರ್ಷಗಳಿಂದ ರಸ್ತೆಯಲ್ಲೇ ಬೆೆಗಳನ್ನು ಶುಚಿಗೊಳಿಸುವುದು ಮುಂದುವರಿದಿದೆ. ಈ ಅವಧಿಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಹತ್ತಾರು ದ್ವಿಚಕ್ರ ವಾಹನ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಯುವ ಮುಖಂಡ ನೀಲಕಂಠ ಬಡಿಗೇರ ತಿಳಿಸಿದ್ದಾರೆ.
ರಸ್ತೆಯ ಒಂದು ಬದಿಯನ್ನು ಆಕ್ರಮಿಸಿಕೊಂಡು ಧಾನ್ಯಗಳ ರಾಶಿ ಹಾಕಿ ಶುಚಿಗೊಳಿಸುವುದರಿಂದ ವಾಹನ ಸವಾರರು ಭಯದಿಂದಲೇ ಸಂಚರಿಸುವಂತಾಗಿದೆ. ಬಸ್, ಲಾರಿ ಹಾಗೂ ಟ್ರ್ಯಾಕ್ಟರ್ಗಳಂತಹ ದೊಡ್ಡ ವಾಹನಗಳು ಎದುರಾದಾಗ ದ್ವಿಚಕ್ರ ವಾಹನ ಸವಾರರು ಮತ್ತು ಕಾರು ಚಾಲಕರು ಮುಂದೆ ಸಾಗಲು ಪರದಾಡಬೇಕಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ಸಂಭವಿಸುವ ಸಾಧ್ಯತೆಯಿದೆ ಎಂದು ಸ್ಥಳೀಯರಾದ ರಾಕೇಶ್ ಸುಳೇಕಲ್ ಆತಂಕ ವ್ಯಕ್ತಪಡಿಸಿದ್ದಾರೆ.
ವಿಶೇಷವಾಗಿ ರಾತ್ರಿ ವೇಳೆ ರಸ್ತೆಯಲ್ಲಿ ಧಾನ್ಯಗಳ ರಾಶಿ ಇರುವುದು ವಾಹನ ಸವಾರರಿಗೆ ಮತ್ತಷ್ಟು ಅಪಾಯ ತಂದೊಡ್ಡುತ್ತಿದೆ. ಸಂಬಂಧಪಟ್ಟ ಇಲಾಖೆಗಳು ತಕ್ಷಣ ಗಮನಹರಿಸಿ ರಸ್ತೆಯಲ್ಲಿ ಬೆಳೆಗಳನ್ನು ಒಣಗಿಸುವುದು ಮತ್ತು ಶುಚಿಗೊಳಿಸುವುದನ್ನು ನಿಯಂತ್ರಿಸಬೇಕು. ವಾಹನ ಸಂಚಾರಕ್ಕೆ ಸುರಕ್ಷಿತ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.






