ಹೀಲಿಯಂ ಬಿಕ್ಕಟ್ಟು: ಭಾರತದ ತಂತ್ರಜ್ಞಾನಕ್ಕೆದುರಾದ ಅಪಾಯ

ಗಲ್ಫ್ ಪ್ರದೇಶದ ಪರಿಸ್ಥಿತಿ ಇನ್ನೊಮ್ಮೆ ಹದಗೆಟ್ಟರೆ, ಭಾರತಕ್ಕೆ ಎರಡೆರಡು ಹೊಡೆತ ಬೀಳಲಿದೆ. ರೋಗಿಗಳಿಗೆ ಎಂಆರ್‌ಐ ಸ್ಕ್ಯಾನಿಂಗ್‌ಗೆ ಸಮಸ್ಯೆಯಾದರೆ, ಇನ್ನೊಂದೆಡೆ ಸರಕಾರ ಹೆಚ್ಚಿನ ಆದ್ಯತೆ ನೀಡಿರುವ ಸೆಮಿಕಂಡಕ್ಟರ್ ಮಿಷನ್ ಸಹ ನಿಧಾನಗೊಳ್ಳಲಿದೆ. ಇನ್ನು ಸಣ್ಣ ನಗರಗಳ ಆಸ್ಪತ್ರೆಗಳಿಗೆ ಅತಿದೊಡ್ಡ ಹೊಡೆತ ಬೀಳಲಿದೆ.
ಇರಾನ್ ಮತ್ತು ಅಮೆರಿಕಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ್ದರೂ, ಮಧ್ಯ ಪೂರ್ವದಲ್ಲಿ ವಾರಗಟ್ಟಲೆ ನಡೆದ ಯುದ್ಧದ ತೊಂದರೆಗಳಂತೂ ಸದ್ಯದಲ್ಲಿ ಪರಿಹಾರ ಕಾಣುವಂತೆ ತೋರುತ್ತಿಲ್ಲ. ಈ ಯುದ್ಧದ ಕಾರಣದಿಂದ ಜಾಗತಿಕ ತೈಲ ಪೂರೈಕೆ, ನೈಸರ್ಗಿಕ ಅನಿಲ, ವಿಮಾನ ಇಂಧನ, ಟಂಗ್‌ಸ್ಟನ್, ಗಂಧಕ ಮತ್ತು ರಸಗೊಬ್ಬರಗಳ ಜಾಗತಿಕ ಪೂರೈಕೆಯೇ ಅಸ್ತವ್ಯಸ್ತಗೊಂಡಿದೆ. ಆದರೆ, ಇನ್ನೊಂದು ವಸ್ತುವೂ ಭಾರೀ ತೊಂದರೆಗೆ ಸಿಲುಕಿದ್ದು, ಅದರ ಕುರಿತು ನಮ್ಮಲ್ಲಿ ಬಹುತೇಕರು ಆಲೋಚಿಸಿಯೇ ಇಲ್ಲ. ಅದುವೇ ಹೀಲಿಯಂ!
ಹುಟ್ಟುಹಬ್ಬದ ಬಲೂನುಗಳನ್ನು ತೇಲುತ್ತಾ ಸಾಗುವಂತೆ ಮಾಡುವ, ಧ್ವನಿಗಳನ್ನು ವಿಚಿತ್ರವಾಗಿ, ಹಾಸ್ಯಮಯವಾಗುವಂತೆ ಮಾಡುವ ಹೀಲಿಯಂ ಅತ್ಯಂತ ಮಹತ್ವದ ವಸ್ತುವಾಗಿದ್ದು, ಆಧುನಿಕ ಜೀವನಕ್ಕೆ ಬಳಕೆಯಾಗುವ ಅತ್ಯವಶ್ಯಕ ವಸ್ತುಗಳಲ್ಲಿ ಒಂದಾಗಿದೆ. ಹೀಲಿಯಂ ಇಲ್ಲದಿದ್ದರೆ, ಆಸ್ಪತ್ರೆಯ ಎಂಆರ್‌ಐ ಯಂತ್ರಗಳು ಕೆಲಸ ಮಾಡಲು ಸಾಧ್ಯವಿಲ್ಲ. ಸ್ಮಾರ್ಟ್ ಫೋನ್‌ಗಳ ಚಿಪ್‌ಗಳನ್ನು ತಯಾರಿಸಲು ಸಾಧ್ಯವಿಲ್ಲ. ಇನ್ನು ರಾಕೆಟ್‌ಗಳು, ಕ್ಷಿಪಣಿಗಳು, ಫೈಬರ್ ಆಪ್ಟಿಕ್ಸ್ ಮೂಲ ಎಐ ಡೇಟಾ ಸೆಂಟರ್‌ಗಳು ಹೀಲಿಯಂ ಆಧಾರದಲ್ಲೇ ಕಾರ್ಯಾಚರಿಸುತ್ತವೆ. ಹೀಲಿಯಂ ಪೂರೈಕೆ ಅಪಾಯಕ್ಕೆ ಸಿಲುಕಿದಾಗ, ಸಂಪೂರ್ಣ ಆಧುನಿಕ ಜಗತ್ತು ಇದರ ಆಘಾತಕ್ಕೆ ಒಳಗಾಗುತ್ತದೆ.
ಯಾಕೆ ಹೀಲಿಯಂ ಇಷ್ಟೊಂದು ವಿಶಿಷ್ಟ?
ಹೀಲಿಯಂ ಒಂದು ವರ್ಣರಹಿತ ಮತ್ತು ಗಾಳಿಗಿಂತಲೂ ಹಗುರವಾದ ವಸ್ತುವಾಗಿದ್ದು, -289 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಮಾತ್ರ ದ್ರವ ರೂಪದಲ್ಲಿರುತ್ತದೆ. ಈ ಅತಿಯಾದ ತಣ್ಣನೆಯ ಗುಣದ ಕಾರಣದಿಂದ ಹೀಲಿಯಂ ಅನಿಲಕ್ಕೆ ಮಾತ್ರ ಎಂಆರ್‌ಐ ಯಂತ್ರದ ಒಳಗಿನ ಶಕ್ತಿಶಾಲಿ ಅಯಸ್ಕಾಂತಗಳನ್ನು ಮತ್ತು ಕ್ವಾಂಟಮ್ ಕಂಪ್ಯೂಟರ್‌ಗಳನ್ನು ತಣ್ಣಗಿಡಲು ಸಾಧ್ಯವಾಗುತ್ತದೆ. ಇನ್ನು ಸೆಮಿಕಂಡಕ್ಟರ್ ಕಾರ್ಖಾನೆಗಳಲ್ಲಿ ಹೀಲಿಯಂ ಅನ್ನು ಸಿಲಿಕಾನ್ ವೇಫರ್‌ಗಳನ್ನು ಒಂದು ಸ್ಥಿರ ತಾಪಮಾನದಲ್ಲಿ ಇಡಲು ಬಳಸಲಾಗುತ್ತದೆ. ಸಿಲಿಕಾನ್ ವೇಫರ್‌ಗಳು ತೆಳ್ಳಗಿನ ವೃತ್ತಾಕಾರದ ನೆಲೆಯಾಗಿದ್ದು, ಇದರ ಮೇಲೆಯೇ ಚಿಪ್‌ಗಳನ್ನು ತಯಾರಿಸಲಾಗುತ್ತದೆ. ಇದು ಚಿಪ್ ನಿರ್ಮಾಣದ ಸಂದರ್ಭದಲ್ಲಿ ಉಂಟಾಗುವ ಸಣ್ಣಪುಟ್ಟ ಕಂಪನಗಳನ್ನು ತಡೆಗಟ್ಟಿ, ಗಾಳಿಯಲ್ಲಿರುವ ಅನಗತ್ಯ ಅಶುದ್ಧತೆಗಳನ್ನು ನಿವಾರಿಸುತ್ತದೆ. ಚಿಪ್ ತಯಾರಕರಿಗೆ ಹೀಲಿಯಂನ ನಿರಂತರ ಪೂರೈಕೆ ಬೇಕಾಗಿದ್ದು, ಅದಕ್ಕೆ ಯಾವುದೇ ಅಡೆತಡೆ ಉಂಟಾಗಬಾರದು. ಯಾಕೆಂದರೆ, ಹೀಲಿಯಂ ಪೂರೈಕೆಯಲ್ಲಿ ಒಂದು ಸಣ್ಣ ಅಡಚಣೆಯೂ ಸಹ ಮಿಲಿಯನ್‌ಗಟ್ಟಲೆ ಚಿಪ್‌ಗಳಿಗೆ ಹಾನಿ ಉಂಟುಮಾಡುತ್ತದೆ.
ಹೀಲಿಯಂ ಸಾಗಣೆ ಹೇಗೆ?
ಹೀಲಿಯಂ ಅನ್ನು ಸಾಗಿಸುವುದು ಸುಲಭದ ಕಾರ್ಯವಲ್ಲ. ಇದು ಜಲಜನಕದ ನಂತರ ಅತ್ಯಂತ ಹಗುರವಾದ ಅನಿಲವಾಗಿದ್ದು, ಇದನ್ನು ಮೊದಲು ಮೈನಸ್ 269 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ತಂಪುಗೊಳಿಸಿ, ಬಳಿಕ ದ್ರವರೂಪಕ್ಕೆ ಪರಿವರ್ತಿಸಲಾಗುತ್ತದೆ. ಈ ದ್ರವರೂಪದ ಹೀಲಿಯಂ ಅನ್ನು ಎರಡು ಗೋಡೆಗಳ, ಐಎಸ್‌ಒ ಕ್ರಯೋಜನಿಕ್ ಟ್ಯಾಂಕ್‌ಗಳು ಅಥವಾ ದೆವಾರ್ಸ್ ಎನ್ನುವ ವಿಶೇಷ ಸಂಗ್ರಾಹಕಗಳಲ್ಲಿ ಸಂಗ್ರಹಿಸಿಡಲಾಗುತ್ತದೆ. ಇವು ಬೃಹತ್ತಾದ, ಹೈಟೆಕ್ ಥರ್ಮೋಸ್ ಫ್ಲಾಸ್ಕ್‌ಗಳಂತೆ ಕಾರ್ಯಾಚರಿಸುತ್ತವೆ. ಈ ಸಂಗ್ರಾಹಕಗಳು ನಿರ್ವಾತ ಇನ್ಸುಲೇಶನ್ ಮೂಲಕ ಹೀಲಿಯಂ ಅನ್ನು ಅತ್ಯಂತ ತಣ್ಣಗೆ ಇರಿಸುತ್ತವೆ. ಬಳಿಕ ಇವುಗಳನ್ನು ಹಡಗುಗಳು, ಟ್ರಕ್‌ಗಳು ಮತ್ತು ರೈಲುಗಳಿಗೆ ತುಂಬಿ, ದೂರ ದೂರದ ಪ್ರದೇಶಗಳಿಗೆ ರವಾನಿಸಲಾಗುತ್ತದೆ. ಅತ್ಯಂತ ಉತ್ತಮ ಗುಣಮಟ್ಟದ ಸಂಗ್ರಾಹಕಗಳಲ್ಲೂ ಸಣ್ಣ ಪ್ರಮಾಣದ ಹೀಲಿಯಂ ಪ್ರತಿದಿನವೂ ತಪ್ಪಿಸಿಕೊಳ್ಳುತ್ತದೆ. ಇದನ್ನು ‘ಬಾಯಿಲ್ ಆಫ್’ ಎಂದು ಕರೆಯಲಾಗುತ್ತದೆ. ಆದ್ದರಿಂದಲೇ ಹೀಲಿಯಂ ಅನ್ನು ತರಕಾರಿ ಅಥವಾ ಹಾಲಿನಂತೆ ಬೇಗನೆ ಹಾಳಾಗುವ ವಸ್ತುವಿನಂತೆ ಪರಿಗಣಿಸಲಾಗುತ್ತದೆ. ಇದು ತನ್ನ ಉದ್ದೇಶಿತ ಗುರಿಗೆ ಬೇಗನೆ ತಲುಪಬೇಕಾಗುತ್ತದೆ. ಜಗತ್ತಿನಲ್ಲಿ ಅತ್ಯಂತ ಕಡಿಮೆ ಸಂಗ್ರಹಣಾ ವ್ಯವಸ್ಥೆಗಳಿದ್ದು, ಯಾವುದೇ ಪೂರೈಕೆ ವ್ಯತ್ಯಯ ಅತ್ಯಂತ ಸಮಸ್ಯೆ ಉಂಟುಮಾಡುತ್ತದೆ.
ಹೀಲಿಯಂ ಬಿಕ್ಕಟ್ಟು ಸೃಷ್ಟಿಸಿದ ಗಲ್ಫ್ ಯುದ್ಧ
ಜಗತ್ತಿನ ಬಹುಪಾಲು ಹೀಲಿಯಂ ನೈಸರ್ಗಿಕ ಅನಿಲದ ಉಪ ಉತ್ಪನ್ನವಾಗಿ ಲಭಿಸುತ್ತದೆ. ಜಗತ್ತಿನ ಎರಡನೇ ಅತಿದೊಡ್ಡ ಎಲ್‌ಎನ್‌ಜಿ ಉತ್ಪಾದಕನಾದ ಖತರ್, ಯುದ್ಧ ಆರಂಭಗೊಳ್ಳುವ ಮುನ್ನ ಜಗತ್ತಿನ ಮೂರನೇ ಒಂದು ಪಾಲು ಹೀಲಿಯಂ ಪೂರೈಸುತ್ತಿತ್ತು. ಇರಾನ್ ಜಗತ್ತಿನ ಅತಿದೊಡ್ಡ ಎಲ್‌ಎನ್‌ಜಿ ಘಟಕವಾದ ರಾಸ್ ಲಫಾನ್ ಮೇಲೆ ದಾಳಿ ನಡೆಸಿದ ಬಳಿಕ, ಖತರ್ ಎನರ್ಜಿ ಸಂಸ್ಥೆ ಉತ್ಪಾದನೆಯನ್ನು ಸ್ಥಗಿತಗೊಳಿಸಿ, ತನ್ನ ವಾರ್ಷಿಕ ಹೀಲಿಯಂ ರಫ್ತನ್ನು ಶೇ. 14 ಕಡಿಮೆಗೊಳಿಸಿತು.
ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವಂತೆ, ಖತರ್‌ನ ಹೀಲಿಯಂ ಕೇವಲ 21 ಮೈಲಿ ಅಗಲವಿರುವ ಸಮುದ್ರ ಮಾರ್ಗವಾದ ಹಾರ್ಮುಝ್ ಜಲಸಂಧಿಯ ಮೂಲಕ ಹಾದು ಬರಬೇಕಾಗುತ್ತದೆ. ಆದರೆ, ಯುದ್ಧದ ಪರಿಣಾಮವಾಗಿ ಹಾರ್ಮುಝ್ ಜಲಸಂಧಿ ಮುಚ್ಚಲ್ಪಟ್ಟಿದೆ. ಈಗ ಕದನ ವಿರಾಮ ಜಾರಿಯಲ್ಲಿದ್ದರೂ, ಹಾರ್ಮುಝ್ ಜಲಸಂಧಿ ಇನ್ನೂ ಮುಚ್ಚಿಯೇ ಇದೆ. ಒಂದು ವೇಳೆ ಜಲಸಂಧಿ ಇಂದೇ ತೆರೆಯಲ್ಪಟ್ಟರೂ, ಪೂರೈಕೆಗಳು ಸಹಜ ಸ್ಥಿತಿಗೆ ಮರಳಲು ಕನಿಷ್ಠ ನಾಲ್ಕರಿಂದ ಆರು ತಿಂಗಳ ಅವಧಿ ಬೇಕಾಗಬಹುದು ಎಂದು ಉದ್ಯಮ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೀಲಿಯಂ ದರಗಳಂತೂ ಕಳೆದ ತಿಂಗಳಲ್ಲಿ ಬಹುತೇಕ ಎರಡು ಪಟ್ಟು ಹೆಚ್ಚಾಗಿವೆ.
ಭಾರತ ಏಕೆ ಚಿಂತಿಸಬೇಕು?
ಭಾರತ ಗಮನಾರ್ಹ ಪ್ರಮಾಣದಲ್ಲಿ ಹೀಲಿಯಂ ಉತ್ಪಾದನೆ ನಡೆಸುತ್ತಿಲ್ಲ. ನಾವು ಬಳಸುವ ಶೇ. 100 ಹೀಲಿಯಂ ಸಹ ಆಮದಾಗುತ್ತಿದ್ದು, ಇದರಲ್ಲಿ ಬಹುದೊಡ್ಡ ಪಾಲು ಖತರ್‌ನಿಂದ ಹಾರ್ಮುಝ್ ಜಲಸಂಧಿಯ ಮಾರ್ಗದ ಮೂಲಕವೇ ಬರುತ್ತದೆ. ನಮ್ಮ ಆಸ್ಪತ್ರೆಗಳು ಎಂಆರ್‌ಐ ಸ್ಕ್ಯಾನಿಂಗ್ ನಡೆಸಲು ಹೀಲಿಯಂ ಮೇಲೆ ಅವಲಂಬಿತವಾಗಿವೆ. ಭಾರತ ಸೆಮಿಕಂಡಕ್ಟರ್ ಉತ್ಪಾದನೆಯ ಕನಸು ಕಾಣುತ್ತಿದ್ದು, ಗುಜರಾತ್ ಮತ್ತು ಅಸ್ಸಾಮಿನ ನೂತನ ಚಿಪ್ ಉತ್ಪಾದನಾ ಘಟಕಗಳಿಗೂ ಅಪಾರ ಪ್ರಮಾಣದ ಹೀಲಿಯಂ ಅಗತ್ಯವಿದೆ. ಇನ್ನು ನಮ್ಮ ಬಾಹ್ಯಾಕಾಶ ಯೋಜನೆಗಳ ವಿಚಾರಕ್ಕೆ ಬಂದರೆ, ಇಸ್ರೋ ರಾಕೆಟ್ ಇಂಧನ ಟ್ಯಾಂಕ್‌ನಲ್ಲಿ ಒತ್ತಡ ಸೃಷ್ಟಿಸಲು ಹೀಲಿಯಂ ಬಳಸುತ್ತದೆ. ವೆಲ್ಡಿಂಗ್, ಫೈಬರ್ ಆಪ್ಟಿಕ್ಸ್ ಮತ್ತು ಇಲೆಕ್ಟ್ರಾನಿಕ್ಸ್ ಉದ್ಯಮಗಳೂ ಹೀಲಿಯಂ ಮೇಲೆ ಅವಲಂಬಿತವಾಗಿವೆ.
ಗಲ್ಫ್ ಪ್ರದೇಶದ ಪರಿಸ್ಥಿತಿ ಇನ್ನೊಮ್ಮೆ ಹದಗೆಟ್ಟರೆ, ಭಾರತಕ್ಕೆ ಎರಡೆರಡು ಹೊಡೆತ ಬೀಳಲಿದೆ. ರೋಗಿಗಳಿಗೆ ಎಂಆರ್‌ಐ ಸ್ಕ್ಯಾನಿಂಗ್‌ಗೆ ಸಮಸ್ಯೆಯಾದರೆ, ಇನ್ನೊಂದೆಡೆ ಸರಕಾರ ಹೆಚ್ಚಿನ ಆದ್ಯತೆ ನೀಡಿರುವ ಸೆಮಿಕಂಡಕ್ಟರ್ ಮಿಷನ್ ಸಹ ನಿಧಾನಗೊಳ್ಳಲಿದೆ. ಇನ್ನು ಸಣ್ಣ ನಗರಗಳ ಆಸ್ಪತ್ರೆಗಳಿಗೆ ಅತಿದೊಡ್ಡ ಹೊಡೆತ ಬೀಳಲಿದೆ.
ಭಾರತ ಹುಡುಕಬಹುದಾದ ಪರ್ಯಾಯ ಆಯ್ಕೆಗಳು
ಮೊದಲಿಗೆ, ಭಾರತ ತನ್ನ ಹೀಲಿಯಂ ಆಮದನ್ನು ವೈವಿಧ್ಯಮಯಗೊಳಿಸಬೇಕು. ಅಮೆರಿಕ ಜಗತ್ತಿನ ಬಹುತೇಕ ಶೇ. 43 ಹೀಲಿಯಂ ಉತ್ಪಾದಿಸುತ್ತಿದ್ದು, ಅದು ಅತ್ಯಂತ ಸುರಕ್ಷಿತ ಪೂರೈಕೆ ಆಯ್ಕೆಯಾಗಿದೆ. ರಶ್ಯದ ಆಮುರ್ ಗ್ಯಾಸ್ ಯೋಜನೆ, ಅಲ್ಜೀರಿಯ, ಆಸ್ಟ್ರೇಲಿಯ ಮತ್ತು ಟಾಂಜಾನಿಯಗಳೂ ಹೊಸ ಹೀಲಿಯಂ ಮೂಲಗಳಾಗಿ ಹೊರಹೊಮ್ಮಿವೆ. ವಿವಿಧ ದೇಶಗಳೊಡನೆ ದೀರ್ಘಾವಧಿಯ ಒಪ್ಪಂದ ಮಾಡಿಕೊಳ್ಳುವುದರಿಂದ ನಮ್ಮ ಅಪಾಯವೂ ಕಡಿಮೆಯಾಗಬಹುದು.
ಎರಡನೆಯದಾಗಿ, ವಿಶಾಖಪಟ್ಟಣ ಮತ್ತು ಮಂಗಳೂರಿನಲ್ಲಿ ನಮ್ಮ ಕಾರ್ಯತಂತ್ರದ ತೈಲ ಸಂಗ್ರಹಾಗಾರಗಳು ಇರುವಂತೆ ಕಾರ್ಯತಂತ್ರದ ಹೀಲಿಯಂ ಸಂಗ್ರಹಣಾ ವ್ಯವಸ್ಥೆಯನ್ನೂ ಕೈಗೊಳ್ಳಬೇಕು. ಅಮೆರಿಕದ ಬಳಿ 1925ರಿಂದಲೂ ಇಂತಹ ಒಂದು ಸಂಗ್ರಹಾಗಾರವಿದ್ದು, ಅದನ್ನು ಅಮೆರಿಕ 2024ರಲ್ಲಿ ಮಾರಾಟ ಮಾಡಿತು. ಈಗ ಅಮೆರಿಕದ ತಜ್ಞರೂ ಈ ನಿರ್ಧಾರಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾರೆ. ಭಾರತ ಅಮೆರಿಕದ ತಪ್ಪಿನಿಂದ ಪಾಠ ಕಲಿಯಬೇಕಿದೆ.
ಮೂರನೆಯ ಅಂಶವೆಂದರೆ, ಭಾರತವು ರಾಜಸ್ಥಾನ ಮತ್ತು ಕೃಷ್ಣಾ-ಗೋದಾವರಿ ನದಿ ಜಲಾನಯನ ಪ್ರದೇಶಗಳಲ್ಲಿ ತನ್ನ ನೈಸರ್ಗಿಕ ಅನಿಲ ಘಟಕಗಳಿಂದ ಹೀಲಿಯಂ ಕಲೆಹಾಕುವ ಹೆಚ್ಚಿನ ಸಾಮರ್ಥ್ಯ ಹೊಂದಿದೆ. ಒಎನ್‌ಜಿಸಿ ಮತ್ತು ಜಿಎಐಎಲ್‌ನಂತಹ ಸಂಸ್ಥೆಗಳು ಹೀಲಿಯಂ ಸಂಗ್ರಹಣಾ ಘಟಕಗಳಲ್ಲಿ ಹೂಡಿಕೆ ಮಾಡಬೇಕು.
ಅಂತಿಮವಾಗಿ, ಆಸ್ಪತ್ರೆಗಳು, ಸಂಶೋಧನಾ ಪ್ರಯೋಗಾಲಯಗಳು ಮತ್ತು ಚಿಪ್ ಕಾರ್ಖಾನೆಗಳಲ್ಲಿ ಹೀಲಿಯಂ ಮರುಬಳಕೆಯನ್ನು ಕಡ್ಡಾಯಗೊಳಿಸಬೇಕು. ಬಹಳಷ್ಟು ಆಧುನಿಕ ರಾಷ್ಟ್ರಗಳು ಈಗಾಗಲೇ ಶೇ. 90 ಹೀಲಿಯಂ ಅನ್ನು ಮರುಬಳಕೆ ಮಾಡುತ್ತಿವೆ. ಭಾರತದ ಉದ್ಯಮಗಳೂ ಸರಿಯಾದ ನೀತಿಯಿಂದ ಇದೇ ಕ್ರಮ ಕೈಗೊಳ್ಳಬಹುದು.
ಹೀಲಿಯಂ ಬಿಕ್ಕಟ್ಟು ಒಂದು ಮೌನವಾದ ಎಚ್ಚರಿಕೆಯಾಗಿದ್ದು, ಭಾರತ ಈಗಲೇ ಕ್ರಮ ಕೈಗೊಳ್ಳಬೇಕು. ಮುಂದೆ ಇನ್ನೊಂದು ಬಿಕ್ಕಟ್ಟು ಎದುರಾಗುವಂತೆ ಭಾರತ ಮಾಡಿಕೊಳ್ಳಬಾರದು.






