Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಟಿಪ್ಪು ಕಾಲದಲ್ಲಿ ಹಿಂದೂಗಳು ಮತ್ತು...

ಟಿಪ್ಪು ಕಾಲದಲ್ಲಿ ಹಿಂದೂಗಳು ಮತ್ತು ಕ್ರೈಸ್ತರು

ಡಾ. ಬಾರ್ಕೂರು ಉದಯಡಾ. ಬಾರ್ಕೂರು ಉದಯ11 Nov 2025 9:54 AM IST
share
ಟಿಪ್ಪು ಕಾಲದಲ್ಲಿ ಹಿಂದೂಗಳು ಮತ್ತು ಕ್ರೈಸ್ತರು

ಭಾಗ - 2

ಟಿಪ್ಪು ಕೊಡಗು ಮತ್ತು ಮಲಬಾರುಗಳಲ್ಲಿ ಎಷ್ಟು ಜನರನ್ನು ಬಲವಂತವಾಗಿ ಇಸ್ಲಾಮ್ ಧರ್ಮಕ್ಕೆ ಮತಾಂತರಿಸಿದನು ಎಂದು ಖಚಿತವಾಗಿ ಹೇಳುವುದು ಕಷ್ಟ. ಇದಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳು ಇಂಗ್ಲಿಷರ ಬರವಣಿಗೆಯಲ್ಲಿ ದಾಖಲಾಗಿವೆ. ಆದರೆ, ಅವರು ಯಾವಾಗಲೂ ಟಿಪ್ಪುವನ್ನು ದುಷ್ಟನೆಂದು, ಅವನ ವಿರುದ್ಧ ಅಪಪ್ರಚಾರವನ್ನೇ ಮಾಡಿರುವುದರಿಂದ ಅವರ ಹೇಳಿಕೆಗಳನ್ನು ನಂಬಲು ಅಸಾಧ್ಯ ಅಥವಾ ಮುಸ್ಲಿಮ್ ಆಧಾರಗಳು ಯಾವಾಗಲೂ ಸುಲ್ತಾನನನ್ನು ಇಸ್ಲಾಮ್ ಧರ್ಮದ ವೀರನೆಂದೇ ಚಿತ್ರಿಸಲು ಪ್ರಯತ್ನಿಸಿರುವುದರಿಂದ, ಅವೂ ಕೂಡ ಸತ್ಯವೆಂದು ನಂಬುವುದು ಅಸಾಧ್ಯ. ಅವು ಟಿಪ್ಪುವಿನ ಸುತ್ತ ಒಂದು ಧಾರ್ಮಿಕ ಪ್ರಭಾಮಂಡಲವನ್ನು ವಿರಚಿಸಿ, ಒಬ್ಬ ಧಾರ್ಮಿಕ ಮಹಾವೀರನಂತೆ ಟಿಪ್ಪುವನ್ನು ಮೇಲಕ್ಕೆತ್ತುವ ಪ್ರತೀಕ್ಷೆಯಿಂದ ಕೂಡಿದವುಗಳು. ಉದಾಹರಣೆಗೆ, ಇಂಥ ವರ್ಗಕ್ಕೆ ಸೇರಿದ ಒಂದು ದಾಖಲೆಯು ಟಿಪ್ಪು ಸುಲ್ತಾನನು ಕೊಡಗಿನಲ್ಲಿ 70,000 ಹಿಂದೂಗಳನ್ನು ಇಸ್ಲಾಮಿಗೆ ಮತಾಂತರಗೊಳಿಸಿದನೆಂದು ಹೇಳುತ್ತದೆ. ಆದರೆ, ಆ ಕಾಲದಲ್ಲಿ ಕೊಡಗಿನ ಜನಸಂಖ್ಯೆಯು ಈ ಸಂಖ್ಯೆಗಿಂತ ಅತ್ಯಂತ ಕಡಿಮೆಯಾಗಿದ್ದುದರಿಂದ ಈ ಹೇಳಿಕೆಯು ಅರ್ಥಶೂನ್ಯವಾದುದು. ಈ ಸಂಖ್ಯೆಯನ್ನು ಮಿಲ್ಫ್ 70,000ವೆಂದು ಹೇಳಿದರೂ, ರೈಸ್ 85,000ವೆಂದು ಅಂದಾಜಿಸಿದ್ದಾನೆ. ಕೊಡಗಿನಲ್ಲಿ ಆ ಕಾಲದ ಜನಸಂಖ್ಯೆಯೇ ಈ ಅಂಕೆಗಳಷ್ಟು ಇರದಿರುವುದರಿಂದ ಇದು ವಿವೇಚನಾಶೂನ್ಯವಾದುದು. 1836ರಲ್ಲಿ ಕೊಡಗಿನ ಜನಸಂಖ್ಯೆಯನ್ನು 65,437 ಎಂದೆಣಿಸಲಾಗಿದೆ. ಅದರ ಜೊತೆಗೆ ‘ಪುಂಗನೂರಿ’ಯ ರಾಮಚಂದ್ರರಾಯನ ಪ್ರಕಾರವಾಗಿ ಕೊಡಗಿನಲ್ಲಿ ಕೇವಲ 500 ಹೆಂಗಸರು, ಗಂಡಸರನ್ನು ಮಾತ್ರ ಮತಾಂತರಗೊಳಿಸಿ, ಅವರನ್ನು ಗುಂಪುಗಳಲ್ಲಿ ಶ್ರೀರಂಗಪಟ್ಟಣ, ಬೆಂಗಳೂರು ಮತ್ತಿತರ ಕೋಟೆಗಳಿಗೆ ಕಳುಹಿಸಲಾಯಿತು. ಇಷ್ಟೆಲ್ಲಾ ಆಗಿಯೂ, ಟಿಪ್ಪುವಿನ ನೀತಿಯನ್ನು ಹಲವು ಮುಖಗಳಲ್ಲಿ ವಿಮರ್ಶಿಸಿರುವ ಮೂರ್, ಕೊಡಗಿನ ಈ ಧಾರ್ಮಿಕ ಚಿತ್ರಹಿಂಸೆಯ ವಿಷಯವಾಗಿ ಏನನ್ನೂ ಹೇಳುವುದಿಲ್ಲ.

ಟಿಪ್ಪುವಿನ ಧಾರ್ಮಿಕ ನೀತಿಯನ್ನು ಕುರಿತು ಮಾತನಾಡುವಾಗ, ಸಾಧಾರಣವಾಗಿ ಅನೇಕ ಮತಾಂತರಗಳು ಸ್ವಯಂಮೇಚ್ಛೆಯಿಂದಾದುವೆಂಬುದನ್ನು ಮರೆಯಲಾಗುತ್ತದೆ. ಹೀಗೆ ಉದಾಹರಣೆಗೆ, ತಲೆ ಮರೆಸಿಕೊಂಡಿದ್ದ ಕೊಡಗಿನ ನಾಯಕರಲ್ಲೊಬ್ಬನಾದ ರಂಗನಾಯರ್ ಎಂಬಾತನು ಟಿಪ್ಪುವಿನ ಆಹ್ವಾನದ ಮೇಲೆ ಹಿಂದಿರುಗಿ ಇಸ್ಲಾಮ್ ಮತವನ್ನು ಸ್ವೀಕರಿಸಿದನು. ಇದಲ್ಲದೆ, ಆ ಕಾಲದಲ್ಲಿ ಕೊಡಗಿನ ಜನತೆಯ ಬಹುಮುಖ್ಯ ಭಾಗವಾದ ಕೆಳವರ್ಗದ ಜನರನ್ನು ಕೊಡವರು ಕೀಳು ದೃಷ್ಟಿಯಿಂದ ನೋಡಿ, ಗುಲಾಮರಂತೆ ನಡೆಯಿಸಿಕೊಂಡುದರಿಂದ, ಅವರು ಇಸ್ಲಾಮ್ ಮತವನ್ನನುಸರಿಸಿರಬೇಕು. ಮಲಬಾರಿನಲ್ಲೂ ಇದೇ ಅನ್ವಯಿಸುತ್ತದೆ. ಅವರೂ ಕೂಡ ಈ ಸನ್ನಿವೇಶವನ್ನು ಪ್ರಯೋಗಿಸಿಕೊಂಡು ಇಸ್ಲಾಮ್ ಧರ್ಮವನ್ನು ಸ್ವೀಕರಿಸಿ ತಮ್ಮ ಸಾಮಾಜಿಕ ಸ್ಥಾನಮಾನಗಳನ್ನು ವೃದ್ಧಿಸಿಕೊಂಡಿರಬೇಕು. ಕೆಲವೊಮ್ಮೆ ಸುಲ್ತಾನನ್ನು ತೃಪ್ತಿಪಡಿಸುವುದಕ್ಕೋಸ್ಕರ ಅನೇಕ ದಂಗೆಕೋರರು ಇದೇ ರೀತಿಯಾಗಿ ಮತಾಂತರ ಹೊಂದಿರಬಹುದು ಎಂಬ ವಿಷಯವನ್ನು ತಳ್ಳಿ ಹಾಕುವಂತಿಲ್ಲ. ಕೊಡಗು ಮತ್ತು ಮಲಬಾರುಗಳನ್ನು ಬಿಟ್ಟರೆ, ಟಿಪ್ಪು ತನ್ನ ಸಾಮ್ರಾಜ್ಯದ ಬೇರೆ ಯಾವ ಭಾಗದಲ್ಲಿಯೂ, ಮತಾಂತರ ಕಾರ್ಯವನ್ನು ಮಾಡಿಲ್ಲ ಎಂಬುದನ್ನು ನಾವು ಗಮನಿಸಬೇಕು. ಏಕೆಂದರೆ ಈ ಎರಡು ಭಾಗಗಳು ಬಿಟ್ಟು, ಉಳಿದೆಲ್ಲಿಯೂ ದಂಗೆಗಳು ನಿರಂತರವಾಗಿ ನಡೆದಿರಲಿಲ್ಲ. ಉಳಿದ ಪ್ರಾಂತಗಳಲ್ಲಿ ಎಲ್ಲೋ ಅಪರೂಪಕ್ಕೊಮ್ಮೆ ನಡೆಯುತ್ತಿದ್ದವು.

ಇವೆಲ್ಲವನ್ನು ಪರಿಗಣಿಸಿದಾಗ, ಟಿಪ್ಪು ಹಿಂದೂ ಪ್ರಜೆಗಳನ್ನು ದೊಡ್ಡ ಹುದ್ದೆಗಳಲ್ಲಿರಿಸಿ, ಬ್ರಾಹ್ಮಣರಿಗೆ ಮತ್ತು ದೇವಾಲಯಗಳಿಗೆ ಭೂಮಿಯನ್ನು ಉಂಬಳಿಯಾಗಿ ಕೊಟ್ಟು, ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಸಂಪತ್ತನ್ನು ದಾನ ಕೊಟ್ಟು, ಹಿಂದೂ ಧಾರ್ಮಿಕಾಚಾರಣೆಗಳ ಪರಿಣಾಮಗಳಲ್ಲಿ ನಂಬಿಕೆಯನ್ನಿಟ್ಟು, ತನ್ನ ರಾಜ್ಯದಲ್ಲೆಲ್ಲ ಹರಡಿರುವ ಭವ್ಯ ದೇವಸ್ಥಾನಗಳ ಗೊಡವೆಗೆ ಹೋಗದೆ ಹಿಂದೂ ಪ್ರಜೆಗಳ ರಕ್ಷಣೆಗೆ ಪೂರಕವಾದ ಧಾರ್ಮಿಕ ನೀತಿಯನ್ನು ಆಡಳಿತದಲ್ಲಿ ಅಳವಡಿಸಿರುವುದು ಬೆಳಕಿಗೆ ಬರುತ್ತದೆ. ಅಂಥ ಸಹನೆ ಮತ್ತು ಔದಾರ್ಯಗಳಿಂದಲೂ ಮತ್ತು ವಿಶಾಲದೃಷ್ಟಿಯಿಂದಲೂ ಕೂಡಿದ್ದ ರಾಜನೊಬ್ಬನು ಹಿಂದೂಗಳನ್ನು ಧಾರ್ಮಿಕ ಚಿತ್ರಹಿಂಸೆಗೆ ಗುರಿಮಾಡಿದನೆಂದು ಹೇಳುವುದು ಕೀರ್ತಿಕರವಾದುದಲ್ಲ.

ಟಿಪ್ಪು ಮತ್ತು ಕ್ರೈಸ್ತ ಸಮುದಾಯ

ಟಿಪ್ಪು ಸುಲ್ತಾನನು ಕ್ರೈಸ್ತ ಪ್ರಜೆಗಳನ್ನೂ ಧಾರ್ಮಿಕವಾಗಿ ಚಿತ್ರಹಿಂಸೆಗೆ ಗುರಿಪಡಿಸಿದ್ದನೆಂಬ ಆಪಾದನೆ ಇದ್ದರೂ, ಅದರ ಸತ್ಯಾಸತ್ಯಗಳನ್ನು ತಿಳಿಯಲು ನಂಬಿಕೆಗರ್ಹವಾದ ಆಧಾರ ಸಾಮಗ್ರಿಗಳಿಲ್ಲ. ಹಿಂದೂ ಪ್ರಜೆಗಳ ಬಗ್ಗೆ ತಳೆದಿರುವ ಅವನ ಧೋರಣೆಯಂತೆ, ಕ್ರೈಸ್ತರ ವಿಚಾರವಾಗಿಯೂ ರಾಜಕೀಯ ಕಾರಣವೇ ಹೊರತು ಧಾರ್ಮಿಕ ಕಾರಣಗಳಿಗಾಗಿಯಲ್ಲ. ಸಾಮಾನ್ಯವಾಗಿ ಅವರನ್ನು ಟಿಪ್ಪು ಔದಾರ್ಯ ಮತ್ತು ಸಹನೆಯಿಂದಲೇ ನೋಡಿಕೊಂಡಿದ್ದನು. ಆದರೆ, ಅವರಲ್ಲಿ ನೀಚತನದ ತಪ್ಪನ್ನು ಗಮನಿಸಿದಾಗ ಅಂಥವರಿಗೆ ತೀವ್ರತರನಾದ ಶಿಕ್ಷೆ ನೀಡಿರುವುದು ನಿಜ.

ಟಿಪ್ಪು ಅಧಿಕಾರದ ವ್ಯಾಪ್ತಿಗೆ ಒಳಪಟ್ಟ ಕರಾವಳಿ ಕ್ರೈಸ್ತರು ಎರಡನೇ ಆಂಗ್ಲ-ಮೈಸೂರು ಕದನದಲ್ಲಿ ಇಂಗ್ಲಿಷರಿಗೆ ಅಮೂಲ್ಯವಾದ ಸಹಕಾರವನ್ನು ನೀಡಿದ್ದರು. ಬಾಂಬೆಯಿಂದ ಬಂದ ಬ್ರಿಟಿಷ್ ಅಧಿಕಾರಿ ಮ್ಯಾಥ್ಯೂಸನು ಪಡುವಣ ಕೆರೆಯನ್ನು ಮುತ್ತಿದಾಗ, ಅವನಿಗೆ ಕ್ರೈಸ್ತರು ಗೂಢಚಾರಿಗಳಾಗಿ ಮತ್ತು ಸ್ಥಳೀಯ ಮಾರ್ಗದರ್ಶಕರಾಗಿದ್ದರು. ನಂತರ ಅವನು ಮಂಗಳೂರು ಮತ್ತು ಬಿದನೂರು ಪ್ರಾಂತಗಳನ್ನು ಗೆಲ್ಲಲು ಸಹಕರಿಸಿದರು. ಆಗ ಟಿಪ್ಪು ಸೇನೆಯಲ್ಲಿದ್ದ ಸುಮಾರು ಮೂವತ್ತು ಮಂದಿ ಕ್ರೈಸ್ತರು ಬ್ರಿಟಿಷ್ ಸೇನೆಯನ್ನು ಸೇರಿ ಕೊಂಡರು. ಬ್ರಿಟಿಷರಿಗೆ ಆರ್ಥಿಕ ಸಹಾಯವನ್ನೂ ಮಾಡಿದ್ದರು.

ಟಿಪ್ಪು ಮಂಗಳೂರನ್ನು ಮುತ್ತಿಗೆ ಹಾಕಿದಾಗ ಕರಾವಳಿ ಕ್ರೈಸ್ತರು ರಹಸ್ಯವಾಗಿ ಕ್ಯಾಂಬೆಲ್ಲನಿಗೆ ನೇರವಾಗಿ, ಟಿಪ್ಪುವನ್ನುರುಳಿಸಲು ಇಂಗ್ಲಿಷರೊಡನೆ ಒಳಸಂಚನ್ನು ನಡೆಸಲು ಸಂಚುಕೋರರೊಂದಿಗೆ ಸೇರಿಕೊಂಡರು. ಪಾ. ಮಿರಾಂಡ ಬರೆದ ಪತ್ರದ ಪ್ರಕಾರ ಕ್ರೈಸ್ತರು ಬ್ರಿಟಿಷ್ ಸೇನೆಗೆ ಸಹಕರಿಸಿ ಸುಮಾರು ಎರಡೂ ಸಾವಿರ ಮೂಟೆ ಅಕ್ಕಿಯನ್ನು ಬ್ರಿಟಿಷರಿಗೆ ಒದಗಿಸಿದ್ದನ್ನು ತಿಳಿಸುತ್ತದೆ. ಕ್ರೈಸ್ತರ ಪರವಾಗಿ ಪಾ. ಮಿರಾಂಡ ಮಧ್ಯವರ್ತಿಯಾಗಿ, ಸೆರೆಹಿಡಿದ 150 ಮಂದಿ ಕ್ರೈಸ್ತರನ್ನು ಬಿಡುಗಡೆಗೊಳಿಸುವಾಗ, ಪಾ. ಮಿರಾಂಡನನ್ನು ಕ್ಷಮಿಸಿ, ಗೌರವದಿಂದ ಸ್ವಾಗತಿಸಿದನು. ಅಲ್ಲದೆ, ಸೆರೆಯಾಳುಗಳನ್ನು ಹಿಂಸಿಸಬಾರದೆಂದು ಪಾ. ಮಿರಾಂಡ ಟಿಪ್ಪುವನ್ನು ಕೇಳಿಕೊಂಡಾಗ ಅದಕ್ಕೆ ಒಪ್ಪಿ, ಅವರೆಲ್ಲರನ್ನು ಬಿಡುಗಡೆ ಮಾಡಿದನೆಂದು ಅವನ ಪತ್ರದಲ್ಲಿ ತಿಳಿಸುತ್ತಾನೆ.

ಇಂಥ ಕೃತ್ಯಗಳನ್ನು ಎಸಗಿ ಟಿಪ್ಪುವಿನ ವಿರುದ್ಧ ಕಾರ್ಯಾಚರಣೆ ನಡೆಸಿರುವುದರಿಂದ ಕರಾವಳಿ ಕ್ರಿಶ್ಚಿಯನ್ನರನ್ನು ಶಿಕ್ಷಿಸಿದುದು. ಪಾ. ಮಿರಾಂಡನನ್ನು ಕೋಟೆಯೊಂದರಲ್ಲಿ ದಿಗ್ಬಂಧನದಲ್ಲಿರಿಸಿ, ವಿಶೇಷ ಮಂಡಳಿಯೊಂದರಿಂದ ವಿಚಾರಣೆ ನಡೆಸಿ, ಮೌಂಟ್ ಮೇರಿಯನ್‌ನ ಎಲ್ಲ ಕ್ರೈಸ್ತರನ್ನು ಕೊಚ್ಚಿಗೆ ಗಡಿಪಾರು ಮಾಡಿಸಿದನು. ಕೆಲವು ಕ್ರೈಸ್ತರನ್ನು ಗೋವೆಗೆ ಗಡಿಪಾರು ಮಾಡಿಸಿದನು. ಉಳಿದವರನ್ನು ಸೆರೆಯಾಳುಗಳನ್ನಾಗಿಸಿ, ಶ್ರೀರಂಗಪಟ್ಟಣ ಮತ್ತು ಚಿತ್ರದುರ್ಗಗಳಿಗೆ ಕಳುಹಿಸಿದನು. ಮುಹಮ್ಮದಾಲಿ ಮತ್ತು ಕಾಸಿಂ ಆಲಿಯವರುಗಳೊಡನೆ ಸಂಚಿನಲ್ಲಿ ಸೇರಿಕೊಂಡಿದ್ದವನೊಬ್ಬನನ್ನು ಗಲ್ಲಿಗೇರಿಸಿದನು. ಇಂಥ ಶಿಕ್ಷೆಗೆ ಗುರಿಪಟ್ಟವರ ಸಂಖ್ಯೆಯನ್ನು ನಿರ್ದಿಷ್ಟವಾಗಿ ಹೇಳುವುದು ಕಷ್ಟ. ಆದರೆ, ಗೋವೆಯ ವೈಸರಾಯನು ರಾಜ್ಯಗಳ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ, ಅದು 20,000 ಎಂದು ಹೇಳುತ್ತದೆ. ನಂತರದ ಪತ್ರದಲ್ಲಿ ಟಿಪ್ಪು 40,000 ಜನರನ್ನು ಗಡಿಪಾರು ಮಾಡಿದನೆಂದು ಹೇಳಿದೆ. ಇನ್ನೊಂದು, 30,000 ಎಂದು ತಿಳಿಸುತ್ತದೆ. ವಿಲ್ಫ್ 60,000 ಮಂದಿಯನ್ನು ಓಡಿಸಿದನೆಂದು ಹೇಳುತ್ತಾನೆ.

ಟಿಪ್ಪುವಿನಿಂದ ಸಾಮ್ರಾಜ್ಯದ ಎಲ್ಲಾ ಕ್ರೈಸ್ತರೂ ನೋವನ್ನನುಭವಿಸಿದರೆಂದು ಊಹಿಸಲಾಗದು. ಕರಾವಳಿ ಕ್ರೈಸ್ತರನ್ನು ಮಾತ್ರ ಕ್ರೂರವಾಗಿ ನಡೆಸಿಕೊಂಡಿರುವುದು ನಿಜ. ಅವರಲ್ಲಿ ಹೆಚ್ಚಿನವರು ಗೋವೆಯಿಂದ ಬಂದವರು. ಅವರು ಗೋವೆಯ ಆರ್ಚ್ ಬಿಷಪ್ಪರ ಹಳೆಯೊಡಂಬಡಿಕೆಯ ಪಂಥಕ್ಕೆ ಸೇರಿದವರಾಗಿದ್ದು, ಪೋರ್ಚುಗೀಸರೊಡನೆ ಅವನ ಸಂಬಂಧವೂ ಸೌಹಾರ್ದಯುತವಾಗಿರಲಿಲ್ಲವಾದ್ದರಿಂದ ಟಿಪ್ಪು ಅವರನ್ನು ನಂಬಲಿಲ್ಲ. ಅದರ ಜೊತೆಗೆ ಅವರು ಮೈಸೂರು ಸರಕಾರಕ್ಕೆ ನಿಷ್ಠೆಯನ್ನು ತೋರಿಸಿದ ಕೆಲಸವನ್ನು ಆಗಾಗ ಮಾಡುತ್ತಲೇ ಇದ್ದರು. ಹೈದರನು ಅವರ ಜೊತೆಗೆ ತುಂಬಾ ಔದಾರ್ಯದಿಂದಿದ್ದರೂ, ಇಂಗ್ಲಿಷರು 1768ರಲ್ಲಿ ಮಂಗಳೂರನ್ನು ಜಯಿಸಿಕೊಂಡಾಗ ಅವರು ಇಂಗ್ಲಿಷರಿಗೆ ಸಹಾಯ ಮಾಡಿದರು. ಟಿಪ್ಪು ಆಡಳಿತಕ್ಕೆ ಬಂದ ಮೇಲೆ ಅವರು ದ್ರೋಹಕಾರ್ಯಗಳನ್ನೆಸಗಿದರು. ಅವರಿಂದ ರಾಜ್ಯಕ್ಕೆ ಅಪಾಯವಿರಬಹುದೆಂದು ಅವರನ್ನು ಓಡಿಸಿರಬಹುದಾದರೂ ಸಿರಿಯನ್ ಕ್ರೈಸ್ತರನ್ನು ಟಿಪ್ಪು ಚೆನ್ನಾಗಿ ನಡೆಸಿಕೊಂಡನು. ಅದೇ ರೀತಿಯಾಗಿ ಅರ್ಮೇನಿಯ ವರ್ತಕರು ಬಂದು ಮೈಸೂರಿನಲ್ಲಿ ನೆಲೆಸುವಂತೆ ಪ್ರೋತ್ಸಾಹಿಸಿದ್ದನು ಮತ್ತು ಎಲ್ಲಾ ಸೌಲಭ್ಯಗಳನ್ನೂ ಅವರಿಗೆ ಒದಗಿಸಿದ್ದನು. ಸೇನೆಯಲ್ಲಿ ಸೇವೆಗಿದ್ದ ಅನೇಕ ಮಂದಿ ಕ್ರೈಸ್ತರಿಗೆ ಆರಾಧನಾ ಸ್ವಾತಂತ್ರ್ಯ ಕಲ್ಪಿಸಿದ್ದನು. ಅಪರಾಧ ಮಾಡಿದ ಕರಾವಳಿ ಕ್ರೈಸ್ತರೂ ಕೂಡ, ಇಂಗ್ಲಿಷರು ಮಂಗಳೂರನ್ನು ಗೆದ್ದುಕೊಂಡಾಗ, ಅವರಿಗೆ ಸಹಾಯ ಮಾಡಿರುವುದರಿಂದ ಸುಮಾರು ಮೂರು ಕೋಟಿ ರೂಪಾಯಿಗಳ ನಷ್ಟವಾಗಿದೆ ಎಂದು ಟಿಪ್ಪು ತಿಳಿದಿದ್ದು, ಅದನ್ನು ಬರಿಸುವುದಾದರೆ, ಅವರೂ ಕೂಡ ತನ್ನ ರಾಜ್ಯದಲ್ಲಿರಬಹುದೆಂದು ಹೇಳಿದನು.

ತನ್ನ ಆಧಿಪತ್ಯವನ್ನು ಗೌರವಿಸುವುದಾದರೆ ಗೋವಾದಿಂದ ಹೊಸಬರೂ ಬಂದು ತನ್ನ ಸಾಮ್ರಾಜ್ಯದಲ್ಲಿ ನೆಲೆಸಬಹುದೆಂದು ತಿಳಿಸಿದ್ದನು. ಈ ಎಲ್ಲಾ ಕ್ರಮಗಳು, ಟಿಪ್ಪು ತನ್ನ ರಾಜ್ಯದಲ್ಲಿ ಕ್ರೈಸ್ತರಿಗೆ ತೋರಿದ ನಡತೆಗಳು, ರಾಜಕೀಯ ಉದ್ದೇಶದಿಂದ ಕೂಡಿದವುಗಳೇ ಹೊರತು, ಮತಾಂಧತೆಯಿಂದ ಕೂಡಿರಲಿಲ್ಲವೆಂಬುದನ್ನು ಎತ್ತಿ ಹಿಡಿಯುತ್ತವೆ. ಕರಾವಳಿ ಕ್ರೈಸ್ತರನ್ನು ಶಿಕ್ಷಿಸಿದುದು ಅವರು ಕ್ರೈಸ್ತರಾದುದರಿಂದಲ್ಲ ಅಥವಾ ಅವರು ಕ್ರೈಸ್ತ ಧರ್ಮದ ಅನುಯಾಯಿಗಳು ಎಂಬ ಉದ್ದೇಶದಿಂದಲ್ಲ; ಬದಲಾಗಿ ಅವರು ಇಂಗ್ಲಿಷರಿಗೆ ಸಹಕರಿಸಿದುದರಿಂದ. ಅವರೊಂದು ವೇಳೆ ಸುಲ್ತಾನನಿಗೆ ನಿಷ್ಠೆಯಿಂದಿದ್ದರೆ, ಚಿತ್ರ ಹಿಂಸೆಗೆ ಗುರಿ ಪಡಿಸುತ್ತಿದ್ದನೆಂದು ಅಭಿಪ್ರಾಯಪಡಲಾಗುವುದಿಲ್ಲ.

ಟಿಪ್ಪು ಬಲವಂತವಾಗಿ ಕ್ರೈಸ್ತರನ್ನು ಇಸ್ಲಾಮ್ ಧರ್ಮಕ್ಕೆ ಮತಾಂತರಗೊಳಿಸಿದನೆಂಬ ಆಪಾದನೆಗಳಿಗೂ ಲಭ್ಯವಿರುವ ಆಧಾರಗಳು ಉತ್ಪ್ರೇಕ್ಷೆಯಿಂದ ಕೂಡಿರಲು ಸಾಧ್ಯವಿದೆ. ಇಸ್ಲಾಮ್ ಧರ್ಮಕ್ಕೆ ಮತಾಂತರವಾಗಿರುವುದರಲ್ಲಿ ಸತ್ಯವಿದೆ. ಆದರೆ, ಸೆರೆವಾಸದಿಂದ ಬಿಡುಗಡೆಗೊಳ್ಳಲು ಹಾಗೆ ಮಾಡಿರಬಹುದು. ಅಂಥವರನ್ನು ಸೆರೆಯಿಂದ ಬಿಡಿಸಿದ ನಂತರ ಅವರಿಗೆ ಅರಮನೆಯಲ್ಲಿಯೂ ಮತ್ತು ಸೇನೆಯಲ್ಲಿಯೂ ಉನ್ನತ ಹುದ್ದೆಗಳನ್ನು ಟಿಪ್ಪು ನೀಡಿದ್ದನು. ಬಹುಸಂಖ್ಯೆಯವರನ್ನು ಶ್ರೀರಂಗಪಟ್ಟಣ ಮತ್ತು ಚಿತ್ರದುರ್ಗಗಳಲ್ಲಿಯೇ ಸೆರೆಯಲ್ಲಿರಿಸಿ, ಅವರು ಧಾರ್ಮಿಕ ಸಂಪ್ರದಾಯಗಳನ್ನು ಅನುಸರಿಸಲು ಅನುಮತಿ ನೀಡಿದ್ದನು. 1789ರಲ್ಲಿ ಗೋವೆಗೆ ಒಂದು ನಿಯೋಗವನ್ನು ಕಳುಹಿಸಿ, ಸೆರೆಯಲ್ಲಿರುವ ಕ್ರೈಸ್ತರು ತಮ್ಮ ಧಾರ್ಮಿಕ ಆಚರಣೆಗಳನ್ನು ಕಡೆಗಣಿಸಿರುವುದರಿಂದ, ಅವರಿಗಾಗಿ ವಿಶೇಷ ಪುರೋಹಿತರನ್ನು (ಪಾದ್ರಿಗಳನ್ನು) ಕಳುಹಿಸಲು, ಅಲ್ಲಿಯ ವೈಸರಾಯನೂ ಆದ ಆರ್ಚ್ ಬಿಷಪ್‌ರನ್ನು ಕೇಳಿಕೊಂಡಿದ್ದನು. ನಾಶಪಡಿಸಲಾಗಿದ್ದ ಚರ್ಚ್‌ಗಳನ್ನು ಕಟ್ಟಿಸಿ ಕೊಡುವುದಾಗಿಯೂ ಮಾತುಕೊಟ್ಟಿದ್ದನು. ಅನೇಕ ಪಾದ್ರಿಗಳನ್ನು ಕ್ಷಮಿಸಿ (ಗೋವೆಯ ವೈಸರಾಯನು ಅವರ ಪರವಾಗಿ ಮಧ್ಯವರ್ತಿಕೆ ಮಾಡಿರುವುದರಿಂದಲೋ ಅಥವಾ ಅವರು ಕ್ಷಮಾಪಣೆಯನ್ನು ಕೇಳಿಕೊಂಡುದರಿಂದಲೋ), ಬಿಡುಗಡೆ ಮಾಡಿ ಗೋವೆಗೆ ಕಳುಹಿಸಿಕೊಡಲಾಯಿತು. ಈ ಎಲ್ಲಾ ಕೃತ್ಯಗಳು ಹೆಚ್ಚಾಗಿ ಹೈದರಲಿ-ಟಿಪ್ಪು ಆಕ್ರಮಿಸಿಕೊಂಡ ಪ್ರದೇಶಗಳಾದ-ಬಿದನೂರು, ಮಂಗಳೂರು, ಮಲಬಾರ್, ಕೊಚ್ಚಿನ್, ತಿರುವಾಂಕೂರು, ಕೊಡಗು ಇತ್ಯಾದಿ ಸ್ಥಳಗಳಲ್ಲಿ ಮಾತ್ರ ಕಂಡು ಬರುತ್ತವೆ. ತಾವು ಆಕ್ರಮಿಸಿಕೊಂಡ ಪ್ರದೇಶಗಳಲ್ಲಿಯ ಜನರು ನಿರಂತರವಾಗಿ ವಿರೋಧ ವ್ಯಕ್ತಪಡಿಸಿರುವುದರ ಜೊತೆಗೆ, ಆಗಾಗ ದಂಗೆಗಳನ್ನೂ ಟಿಪ್ಪು ವಿರುದ್ಧ ಸಂಘಟಿಸಿದ್ದರು. ಅವನ ಅಧಿಕಾರ/ಪ್ರಭುತ್ವವನ್ನು ನಿರಾಕರಿಸುವ ಜೊತೆಗೆ ನಾನಾ ರೀತಿಯ ಪಿತೂರಿಗಳನ್ನು ಮಾಡಿದ್ದರು. ಕೆಲವೊಮ್ಮೆ ಹೊರಗಿನವರೊಂದಿಗೆ ಶಾಮೀಲಾಗಿಯೂ ಟಿಪ್ಪು ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡರು. ಈ ಎಲ್ಲಾ ದಂಗೆಕೋರರು ಸ್ಥಳೀಯರೇ ಆಗಿದ್ದು ಟಿಪ್ಪು ಆಧಿಪತ್ಯವನ್ನು ಗೌರವಿಸದೆ ಪರಕೀಯರೊಂದಿಗೆ ಸೇರಿರುವುದು ಪ್ರಚೋದನಕಾರಿಯಾಗಿತ್ತು. ಆದ ಕಾರಣ, ಇಂಥ ಪ್ರಾಂತಗಳಲ್ಲಿ ಟಿಪ್ಪುವಿನ ಇನ್ನೊಂದು ಮುಖವನ್ನು ಕಾಣಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಇದನ್ನು ತಿಳಿದುಕೊಳ್ಳುವಾಗ ಟಿಪ್ಪು ಸಾಮ್ರಾಜ್ಯದ ಸೀಮೆಯೊಳಗೆ ಪಾಲಿಸಿರುವ ಧಾರ್ಮಿಕ ಧೋರಣೆಗಳನ್ನು ಆಕ್ರಮಿತ ಪ್ರದೇಶಗಳಿಂದ ಪ್ರತ್ಯೇಕಿಸಬೇಕು. ಸಾಮ್ರಾಜ್ಯದೊಳಗೆ ಧಾರ್ಮಿಕ ಸಹಿಷ್ಣುತೆಯನ್ನು ಕಾಪಾಡಿಕೊಳ್ಳಲು ಟಿಪ್ಪು ಯಶಸ್ಸು ಕಂಡಿರುವುದು ಸತ್ಯ. ಆದರೆ, ಇದಕ್ಕೆ ವಿರುದ್ಧವಾದ ಧೋರಣೆಯನ್ನು ಆಕ್ರಮಿತ ಪ್ರಾಂತಗಳಲ್ಲಿ ಟಿಪ್ಪು ಪಾಲಿಸುತ್ತಾನೆ. ಅದಕ್ಕೆ ಕಾರಣಗಳನ್ನು ಈಗಾಗಲೇ ಚರ್ಚಿಸಲಾಗಿದೆ. ಹಾಗಾಗಿ ಟಿಪ್ಪುವಿನ ಧಾರ್ಮಿಕ ನೀತಿಯನ್ನು ಚರ್ಚಿಸುವಾಗ ಆಕ್ರಮಿತ ಪ್ರಾಂತಗಳನ್ನು ಅವನ ಸಾಮ್ರಾಜ್ಯದ ಗಡಿರೇಖೆಗಳಿಂದ ಪ್ರತ್ಯೇಕಿಸಿಕೊಂಡು ಪ್ರತಿಯೊಂದು ಆಕ್ರಮಿತ ಪ್ರಾಂತಗಳಲ್ಲಿ ಟಿಪ್ಪು ವಿಭಿನ್ನ ಧೋರಣೆ ತಳೆಯಲು ಕಾರಣಗಳೇನು ಎಂಬುದನ್ನು ಚಿತ್ರಿಸಬೇಕು.

share
ಡಾ. ಬಾರ್ಕೂರು ಉದಯ
ಡಾ. ಬಾರ್ಕೂರು ಉದಯ
Next Story
X