65 ರೂ. ಸಂಬಳದ ಶೌಚಾಲಯ ಸ್ವಚ್ಛಗೊಳಿಸುವ ಕೆಲಸಕ್ಕೆ ನೇಮಕ: ಲಕ್ಷಾಂತರ ರೂ. ವೇತನದ ಬ್ಯಾಂಕ್ನ ವ್ಯವಸ್ಥಾಪಕಿಯಾಗಿ ನಿವೃತ್ತಿ
ಬದುಕಿನ ಕಠಿಣ ಸವಾಲುಗಳನ್ನು ಎದುರಿಸಿ ಗೆದ್ದ ಮಹಿಳೆಯ ಸ್ಫೂರ್ತಿದಾಯಕ ಯಾತ್ರೆ!

ಪ್ರತೀಕ್ಷಾ ಟೋಂಡ್ವಾಲ್ಕರ್
ಬದುಕಿನಲ್ಲಿ ಸಂಕಷ್ಟಗಳು ಎದುರಾದಾಗ ಹೆಚ್ಚಿನ ಜನರು ಎದೆಗುಂದುತ್ತಾರೆ. ಆದರೆ ಕೆಲವರು ಮಾತ್ರ ಆ ಕಷ್ಟಗಳನ್ನೇ ತಮ್ಮ ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಳ್ಳುತ್ತಾರೆ. ವಿಧಿಯ ಕಠಿಣ ಪರೀಕ್ಷೆಗಳನ್ನು ತನ್ನ ಇಚ್ಛಾಶಕ್ತಿಯಿಂದ ಎದುರಿಸಿದ ಪ್ರತೀಕ್ಷಾ ಟೋಂಡ್ವಾಲ್ಕರ್ ಅಂತಹವರ ಸಾಲಿಗೆ ಸೇರುತ್ತಾರೆ.
ಒಂದು ಕಾಲದಲ್ಲಿ ಬ್ಯಾಂಕೊಂದರ ನೆಲ ಒರೆಸುವ, ಶೌಚಾಲ ಯಗಳನ್ನು ಸ್ವಚ್ಛ ಮಾಡುವ ಕೆಲಸಕ್ಕೆ ಸೇರಿದ್ದ ಅವರು ವರ್ಷಗಳ ನಂತರ ಅದೇ ಬ್ಯಾಂಕ್ನ ಉನ್ನತ ಹುದ್ದೆಗೆ ಏರಿದರು. ಬೆಳೆದು ಬಂದ ಪರಿಸರ, ಬಡತನ, ವಯಸ್ಸು ಸಾಧನೆಗೆ ಅಡ್ಡಿಯಲ್ಲ. ಬದಲಾಗಿ ಕಠಿಣ ಪರಿಶ್ರಮ, ಶಿಕ್ಷಣವಿದ್ದರೆ ಜಗತ್ತೇ ನಮ್ಮ ಕಾಲ ಕೆಳಗೆ ನಿಲ್ಲುತ್ತದೆ ಎಂಬುದನ್ನು ಅವರು ತನ್ನ ಬದುಕಿನ ಮೂಲಕ ಸಾಧಿಸಿ ತೋರಿಸಿದರು.
1964ರಲ್ಲಿ ಪುಣೆಯ ಒಂದು ಸಾಧಾರಣ ಕುಟುಂಬದಲ್ಲಿ ಜನಿಸಿದ್ದ ಪ್ರತೀಕ್ಷಾ, ಬಡತನದ ಕಾರಣದಿಂದಾಗಿ ಏಳನೆ ತರಗತಿಯಲ್ಲಿ ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಬೇಕಾಗಿ ಬಂತು. ಇದರ ಜೊತೆಗೇ ತುಂಬಾ ಸಣ್ಣ ವಯಸ್ಸಿನಲ್ಲಿಯೇ ಅವರ ಮದುವೆ ಕೂಡ ನಡೆದು ಹೋಯಿತು. ಮುಂಬೈಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬುಕ್ ಬೈಂಡರಾಗಿ ಕೆಲಸ ಮಾಡುತ್ತಿದ್ದ ಸದಾಶಿವ್ ಕಾಡು ಅವರನ್ನು ಪ್ರತೀಕ್ಷಾ ವಿವಾಹವಾದರು.
ಮದುವೆಯಾಗಿ ಮೂರು ವರ್ಷಗಳು ಮಾತ್ರ ಕಳೆದಿದ್ದವು. ಆಗ ಪ್ರತೀಕ್ಷಾರ ಬದುಕಿನಲ್ಲಿ ಆ ದುರಂತ ನಡೆದು ಹೋಯಿತು. ಸ್ವಂತ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದಾಗ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪತಿ ಸದಾಶಿವ್ ಸತ್ತು ಹೋದರು. ಹಾಗೆ 20ನೆ ವಯಸ್ಸಿನಲ್ಲಿ ಪ್ರತೀಕ್ಷಾ ಗಂಡನನ್ನು ಕಳೆದುಕೊಂಡರು.
‘ಏನಾದರೊಂದು ಸಣ್ಣ ಕೆಲಸ ಕೊಡಿ...’
ಗಂಡನ ಸಾವಿನ ಬಳಿಕ ಬದುಕಲು ಯಾವುದೇ ದಾರಿ ಕಾಣಿಸದಿದ್ದಾಗ ಪ್ರತೀಕ್ಷಾ ಮಗನೊಂದಿಗೆ ಮುಂಬೈಗೆ ತೆರಳಿದರು. ಗಂಡನಿಗೆ ಬ್ಯಾಂಕ್ನಿಂದ ಸಿಗಬಹುದಾದ ಸವಲತ್ತುಗಳನ್ನು ಪಡೆ ಯುವ ಸಲುವಾಗಿ ಅವರು ಎಸ್ಬಿಐ ಶಾಖೆಗೆ ಹೋದರು. ಚೆಕ್ ಪಡೆದ ಬಳಿಕ ಅವರು ಶಾಖೆಯ ಮ್ಯಾನೇಜರನ್ನು ಭೇಟಿಯಾದರು.
ಅಂದು ಅವರು ಆ ಬ್ಯಾಂಕ್ನ ವ್ಯವಸ್ಥಾಪಕರ ಮುಂದೆ ಕಣ್ಣೀರಿನೊಂದಿಗೆ ಒಂದು ಬೇಡಿಕೆಯಿಟ್ಟರು. ‘ಬ್ಯಾಂಕ್ನಿಂದ ಸಿಕ್ಕಿದ ಈ ಮೊತ್ತ ದೀರ್ಘಕಾಲಕ್ಕೆ ನನಗೆ ಸಾಕಾಗುವುದಿಲ್ಲ. ನನಗೆ ನೆರವಾಗಲು ಯಾರೂ ಇಲ್ಲ. ನನಗೆ ಮಗುವಿದೆ, ನನಗೆ ನನ್ನ ಸ್ವಂತ ಕಾಲಲ್ಲಿ ನಿಲ್ಲಬೇಕು. ಆದ್ದರಿಂದ ದಯವಿಟ್ಟು ಏನಾದರೊಂದು ಸಣ್ಣ ಕೆಲಸ ಕೊಡಿ...’ ಪ್ರತೀಕ್ಷಾರ ಪರಿಸ್ಥಿತಿಯನ್ನು ಅರಿತ ಬ್ಯಾಂಕ್ನ ಅಧಿಕಾರಿಗಳು ಐದು ತಿಂಗಳುಗಳ ಬಳಿಕ ಅವರನ್ನು ಕೆಲಸಕ್ಕೆ ಕರೆದರು. ಅದುವರೆಗೆ ಪ್ರತೀಕ್ಷಾ ಒಂದು ಪಾದರಕ್ಷೆಯ ಕಾರ್ಖಾನೆ ಯಲ್ಲಿ ಕೆಲಸ ಮಾಡುತ್ತಿದ್ದರು.
ತಿಂಗಳಿಗೆ 65 ರೂಪಾಯಿ ಸಂಬಳ; ಶೌಚಾಲಯ ಸ್ವಚ್ಛಗೊಳಿಸುವುದರಿಂದ ಆರಂಭ
1985ರಲ್ಲಿ ಪ್ರತೀಕ್ಷಾ ಎಸ್ಬಿಐನಲ್ಲಿ ಅರೆಕಾಲಿಕಾ ಸ್ವಚ್ಛತಾ ಸಿಬ್ಬಂದಿಯಾಗಿ ಸೇರಿಕೊಂಡರು. ಪ್ರತಿ ತಿಂಗಳು 60ರಿಂದ 65ರೂ.ವರೆಗೆ ಸಂಬಳ ಸಿಗುತ್ತಿತ್ತು. ಬ್ಯಾಂಕ್ನ ಆವರಣ ಗುಡಿಸಿ ಸ್ವಚ್ಛಗೊಳಿಸುವುದು, ಪೀಠೋಪಕರಣಗಳನ್ನು ಒರೆಸುವುದು, ಶೌಚಾಲಯಗಳನ್ನು ತೊಳೆಯುವುದು ಅವರ ಕೆಲಸದಲ್ಲಿ ಸೇರಿತ್ತು. ಆದರೆ ಅವರಿಗೆ ಸಿಗುತ್ತಿದ್ದ ಸಂಬಳ ಮಗುವನ್ನು ಸಾಕಲು ಸ್ವಲ್ಪವೂ ಸಾಕಾಗುತ್ತಿರಲಿಲ್ಲ. ಮುಂಜಾನೆಯೇ ಅವರು ಕೆಲಸ ಆರಂಭಿಸಬೇಕಿತ್ತು. ಬೆಳಗ್ಗೆ 5 ಗಂಟೆಗೆ ಎದ್ದು 6 ಗಂಟೆಗಾಗಲೇ ಅವರು ಬ್ಯಾಂಕ್ ತಲುಪುತ್ತಿದ್ದರು. ಬ್ಯಾಂಕ್ ತೆರೆಯುವ ಮೊದಲೇ ಮೂರು ಅಂತಸ್ತುಗಳ ಆ ದೊಡ್ಡ ಕಟ್ಟಡವನ್ನು ಅವರು ಒಬ್ಬರೇ ಗುಡಿಸಿ ಒರೆಸಬೇಕಿತ್ತು. ಜೊತೆಗೆ ಎಂಟು ಶೌಚಾಲಯಗಳನ್ನೂ ಸ್ವಚ್ಛಗೊಳಿಸುತ್ತಿದ್ದರು.
ಬೆಳಗ್ಗೆ 8:30ರೊಂದಿಗೆ ಬ್ಯಾಂಕ್ನ ಕೆಲಸ ಮುಗಿಸಿದ ಬಳಿಕ ಅವರು ಮತ್ತೆ ಶೂ ಕಾರ್ಖಾನೆಗೆ ಕೆಲಸಕ್ಕೆ ಹೋಗುತ್ತಿದ್ದರು. ಅಲ್ಲಿ ಬಿಸಿಯಾದ ಯಂತ್ರಗಳನ್ನು ಬಳಸಿ ಮಕ್ಕಳ ಪಾದರಕ್ಷೆಗಳಿಗೆ ಅಡಿಭಾಗಗಳನ್ನು ಜೋಡಿಸುತ್ತಿದ್ದರು. ಅವರು ತನ್ನ ಮಗುವನ್ನು ಹತ್ತಿರದಲ್ಲಿ ಕುಳ್ಳಿರಿಸಿ ಈ ಕೆಲಸವನ್ನು ಮಾಡುತ್ತಿದ್ದರು.
ಬದುಕು ಬದಲಿಸಿದ ರಾತ್ರಿ ಕಾಲೇಜು ಶಿಕ್ಷಣ
ಬ್ಯಾಂಕ್ನಲ್ಲಿ ಕೆಲಸ ಮಾಡು ತ್ತಿರುವ ನಡುವೆಯೇ ಪ್ರತೀಕ್ಷಾ, ತನ್ನ ಸುತ್ತಲಿರುವ ಸುಶಿಕ್ಷಿತರಾದ ಸಿಬ್ಬಂದಿಯನ್ನು ಸದಾ ಗಮನಿಸುತ್ತಿದ್ದರು. ತನ್ನ ಈ ದಯನೀಯ ಅವಸ್ಥೆಯಿಂದ ಪಾರಾಗಲು ಶಿಕ್ಷಣವೊಂದೇ ಏಕೈಕ ದಾರಿ ಎಂಬುದನ್ನು ಅವರು ಅರಿತರು. ಕಲಿಯಲು ವಯಸ್ಸೋ, ಪರಿಸ್ಥಿತಿಯೋ ಅಡ್ಡಿಯಲ್ಲ ಎಂದು ಅವರು ನಂಬಿದರು. ಹಾಗೆ, ಕೆಲಸದ ಬಳಿಕ ಮುಂಬೈನ ವಿಖ್ರೋಲಿಯಲ್ಲಿರುವ ರಾತ್ರಿ ಕಾಲೇಜೊಂದಕ್ಕೆ ಅವರು ಸೇರಿದರು. ಕೊನೆಗೆ ಕಠಿಣ ಪರಿಶ್ರಮದಿಂದ ಅವರು ಹನ್ನೆರಡನೆ ತರಗತಿ ಉತ್ತೀರ್ಣರಾದರು. ಅವರು ಅಷ್ಟಕ್ಕೇ ನಿಲ್ಲಿಸಲಿಲ್ಲ. ರಾತ್ರಿ ಕಾಲೇಜಿನಿಂದಲೇ ಸೈಕಾಲಜಿಯಲ್ಲಿ ಪದವಿಯನ್ನೂ ಪಡೆದರು. ಪ್ರತೀಕ್ಷಾರ ಶೈಕ್ಷಣಿಕ ಅರ್ಹತೆಯಲ್ಲಿ ಏರಿಕೆ ಕಂಡುಬಂದ ಕಾರಣ, ಬ್ಯಾಂಕ್ ಅವರನ್ನು ಸ್ವಚ್ಛಗೊಳಿಸುವ ಕೆಲಸದಿಂದ ಮೆಸೆಂಜರ್ ಹುದ್ದೆಗೆ ಭಡ್ತಿ ನೀಡಿತು. ಪದವಿ ಪಡೆದ ಬಳಿಕವಂತೂ ಅವರು ಬ್ಯಾಂಕ್ನಲ್ಲಿ ಗುಮಾಸ್ತೆ ಮತ್ತು ನಗದು ನಿರ್ವಹಣೆಯ ಕೆಲಸವನ್ನು ನೋಡಿಕೊಳ್ಳತೊಡಗಿದರು.
ಬೆಂಬಲವಾಗಿ ನಿಂತ ಪ್ರಮೋದ್
1993ರಲ್ಲಿ ಪ್ರಮೋದ್ ಟೋಂಡ್ವಾಲ್ಕರ್ ಎಂಬವರು ಪ್ರತೀಕ್ಷಾರ ಜೀವನದಲ್ಲಿ ಪ್ರವೇಶಿಸಿದರು. ಅವರು ಎರಡನೆ ಬಾರಿ ವಿವಾಹವಾದರು. ಪದವಿ ಪೂರ್ಣಗೊಂಡ ಬಳಿಕವೇ ವಿವಾಹ ನಡೆಯಬೇಕು, ತನ್ನ ಮಗನನ್ನು ಸ್ವಂತ ಮಗನಂತೆ ನೋಡಿಕೊಳ್ಳಬೇಕು, ಪ್ರಮೋದ್ ಕೂಡ ಉನ್ನತ ಶಿಕ್ಷಣ ಪಡೆಯಬೇಕು ಎಂಬ ಮೂರು ಷರತ್ತುಗಳನ್ನು ಅವರು ಮದುವೆಗೆ ಮುಂಚೆ ಪ್ರಮೋದ್ರ ಮುಂದಿಟ್ಟಿದ್ದರು.
ಪ್ರಮೋದ್ ಈ ಎಲ್ಲ ಷರತ್ತುಗಳನ್ನು ಸಂತೋಷದಿಂದ ಒಪ್ಪಿಕೊಂಡದ್ದಲ್ಲದೆ, ಪ್ರತೀಕ್ಷಾರ ಬದುಕಿನಲ್ಲಿ ಅತ್ಯಂತ ದೊಡ್ಡ ಬೆಂಬಲವಾಗಿ ನಿಂತರು. ಅಷ್ಟೇ ಅಲ್ಲದೆ ಬ್ಯಾಂಕ್ನಲ್ಲಿ ಆಂತರಿಕ ಭಡ್ತಿಗಾಗಿ ನಡೆಯುವ ಪರೀಕ್ಷೆಗಳನ್ನು ಬರೆಯಲು ಪ್ರಮೋದ್ ಪ್ರತೀಕ್ಷಾಗೆ ಆತ್ಮವಿಶ್ವಾಸವನ್ನೂ ನೀಡಿದರು.
ಆ ವಿಜಯಾರೋಹಣ...!
ಪತಿಯ ಬೆಂಬಲದೊಂದಿಗೆ ಸ್ವಂತ ಪರಿಶ್ರಮವೂ ಸೇರಿದಾಗ ಪ್ರತೀಕ್ಷಾರಿಗೆ ಮತ್ತೆಂದೂ ಹಿಂದುರುಗಿ ನೋಡಬೇಕಾಗಿ ಬರಲಿಲ್ಲ. ಕಠಿಣವಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದ ಬಳಿಕ ಬ್ಯಾಂಕ್ನಲ್ಲಿ ತರಬೇತಿ ಅಧಿಕಾರಿಯಾಗಿ ಅವರು ನೇಮಕ ಗೊಂಡರು. ಮುಂದುವರಿದು ಹಂತ ಹಂತಗಳಾಗಿ ಅವರ ಹುದ್ದೆಗಳು ಏರುತ್ತಲೇ ಹೋದವು. ಕೊನೆಗೆ ಡೆಪ್ಯುಟಿ ಜನರಲ್ ಮ್ಯಾನೇಜರ್ (ಡಿಜಿಎಂ) ಹುದ್ದೆಯನ್ನೂ ಅಲಂಕರಿಸಿದ ಪ್ರತೀಕ್ಷಾ, 2022ರಲ್ಲಿ ಜೂನಿಯರ್ ಅಸಿಸ್ಟಂಟ್ ಜನರಲ್ ಮ್ಯಾನೇಜರ್ (ಎಜಿಎಂ) ಆಗಿ ನೇಮಕಗೊಂಡರು.
ಒಂದೊಮ್ಮೆ ಅವರಿಗೆ ಎಲ್ಲಿ ನೆಲ ಒರೆಸುವ, ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಕೆಲಸ ನೀಡಲಾಗಿತ್ತೋ ಈಗ ಅದೇ ಬ್ಯಾಂಕ್ನಲ್ಲಿ ಅತ್ಯಂತ ಉನ್ನತವಾದ ಹುದ್ದೆಯನ್ನು ಪ್ರತೀಕ್ಷಾ ಅಲಂಕರಿಸಿದರು. ವರದಿಗಳ ಪ್ರಕಾರ ಪ್ರತೀಕ್ಷಾ ಟೋಂಡ್ವಾಲ್ಕರ್ ಅವರು ಇದೀಗ ತಮ್ಮ ಬ್ಯಾಂಕಿಂಗ್ ಸೇವೆಯಿಂದ ನಿವೃತ್ತರಾಗಿದ್ದಾರೆ.
ಕೃಪೆ: manoramaonline






