ಐತಿಹಾಸಿಕ ತುಂಗಾ ಸೇತುವೆ ಕೆಡವಲು ಇತಿಹಾಸ ತಜ್ಞರ ವಿರೋಧ

ಶಿವಮೊಗ್ಗ: ಅಭಿವೃದ್ಧಿ ಹೆಸರಿನಲ್ಲಿ ಶಿವಮೊಗ್ಗ ನಗರದ ಐತಿಹಾಸಿಕ ಹಳೆಯ ತುಂಗಾ ಸೇತುವೆಯನ್ನು ಕೆಡವಿ ಅದೇ ಸ್ಥಳದಲ್ಲಿ ನೂತನ ಸೇತುವೆ ನಿರ್ಮಾಣ ಮಾಡಲು ರಾಜ್ಯ ಸರಕಾರಕ್ಕೆ ಸಲ್ಲಿಕೆಯಾಗಿರುವ ಪ್ರಸ್ತಾವಕ್ಕೆ ಶಿವಮೊಗ್ಗದಲ್ಲಿ ಇತಿಹಾಸ ತಜ್ಞರು ವಿರೋಧ ವ್ಯಕ್ತಪಡಿಸಿದ್ದಾರೆ.
ನಗರದ ಅಭಿವೃದ್ಧಿ ಮತ್ತು ಸಾರ್ವಜನಿಕರ ಸಂಚಾರದ ದೃಷ್ಟಿಯಿಂದ ಹೊಸ ಸೇತುವೆ ನಿರ್ಮಾಣದ ಬೇಡಿಕೆ ಹೆಚ್ಚಾಗಿದ್ದರೆ ಮತ್ತೊಂದು ಕಡೆ ಇತಿಹಾಸದ ಜೀವಂತಕ್ಕೆ ಸಾಕ್ಷಿಯಾಗಿರುವ ಪುರಾತನವಾದ ಈ ಸೇತುವೆಯನ್ನು ಉಳಿಸಿಕೊಳ್ಳಬೇಕು ಎಂಬ ಬೇಡಿಕೆ ಹೆಚ್ಚಾಗಿದೆ.
175 ವರ್ಷಗಳ ಇತಿಹಾಸದ ತುಂಗಾ ಸೇತುವೆ ಜಾಗದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ತುಂಬಾ ಹಳೆಯ ಸೇತುವೆಯಾಗಿರುವ ಕಾರಣಕ್ಕೆ ಅದನ್ನು ಕೆಡವಿ ಹೊಸ ಸೇತುವೆ ಮಾಡಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪಬಯಸಿ, ಹೊಸ ಯೋಜನೆ ರೂಪಿಸುವಂತೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಎರಡೆರಡು ಬಾರಿ ಮನವಿ ಸಲ್ಲಿಸಿದ್ದರು. ಇದಕ್ಕೆ ರಾಜ್ಯ ಸರಕಾರವೂ ಸಕಾರಾತ್ಮಕವಾಗಿ ಸ್ಪಂದಿಸಿದ್ದು, 40 ಕೋಟಿ ರೂ. ಬಿಡುಗಡೆ ಮಾಡಿದೆ.
ಶಿವಮೊಗ್ಗ ಬಹಳ ಹಿಂದಿನಿಂದಲೂ ಅರಣ್ಯ, ಕೃಷಿ, ತೋಟಗಾರಿಕೆ ಉತ್ಪನ್ನಗಳು, ಸಂಬಾರು ಪದಾರ್ಥಗಳಿಂದ ಸಮೃದ್ಧವಾಗಿ ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿತ್ತು. ಮೈಸೂರು ರಾಜ್ಯದಲ್ಲಿ ನಾಲ್ಕೇ ಪ್ರಮುಖ ಸೇತುವೆಗಳು ಇದ್ದವು. ನಂಜನಗೂಡು, ಶ್ರೀರಂಗಪಟ್ಟಣ, ಶಿವಸಮುದ್ರ ಮತ್ತು ಕ್ಲೋಸ್‌ಪೇಟೆ. ನಂತರ ಅಂದಿನ ಆಡಳಿತದಲ್ಲಿ ಫ್ರೇಸರ್‌ಪೇಟೆ, ಮದ್ದೂರು, ಹೊಸಕೋಟೆ, ಬೆಂಕಿಪುರ (ಇಂದಿನ ಭದ್ರಾವತಿ), ಶಿವಮೊಗ್ಗ ಮತ್ತು ಹಿರಿಯೂರಿನಲ್ಲಿ ಹೊಸ ಸೇತುವೆಗಳು ನಿರ್ಮಾಣಗೊಂಡವು. ಆದ್ದರಿಂದ ತುಂಗಾ ಸೇತುವೆ ಕೇವಲ ಒಂದು ಹಳೆಯ ಕಟ್ಟಡವಲ್ಲ, ಅದು ಮಲೆನಾಡಿನ ಆಧುನಿಕ ನಾಗರಿಕ ಮೂಲಸೌಕರ್ಯದ ಆರಂಭದ ಸಂಕೇತವಾಗಿದೆ.
ಅಂದಿನ ಮೈಸೂರು ಲೋಕೋಪಯೋಗಿ ಇಲಾಖೆಯಿಂದ ಲಾರ್ಡ್ ಕಬ್ಬನ್ ಅವರ ಆಡಳಿತಾವಧಿಯಲ್ಲಿ ಶಿವಮೊಗ್ಗದ ತುಂಗಾ ನದಿಯ ಮೇಲಿನ ತುಂಗಾ ಸೇತುವೆ ಕಾಮಗಾರಿ 1859ರಲ್ಲಿ 1,07,538 ರೂ. ವೆಚ್ಚದಲ್ಲಿ ಪೂರ್ಣಗೊಂಡಿತು. ಈ ಸೇತುವೆಯೂ ಸಂಪೂರ್ಣ ಇಟ್ಟಿಗೆ ನಿರ್ಮಿತವಾಗಿದ್ದು, ನದಿ ಮಟ್ಟದಿಂದ 50 ಅಡಿ ಎತ್ತರ, 800 ಅಡಿ ಉದ್ದ, 24.06ಅಡಿ ಅಗಲವಿದೆ. ಇದಕ್ಕೆ ಒಟ್ಟು 16 ಕಮಾನುಗಳಿದ್ದು, ಎರಡು ಕಮಾನಿನ ನಡುವಿನ ಅಂತರ 50 ಅಡಿ ಇದೆ. ಈ ಸೇತುವೆ ಬೆಂಗಳೂರು-ಹೊನ್ನಾವರ ಮುಖ್ಯ ರಸ್ತೆಯ ಪ್ರಮುಖ ಭಾಗವಾಗಿತ್ತು ಎಂಬುದು ವಿಶೇಷ.
ಸರಕಾರದ ನಿಯಮ ಪ್ರಕಾರ ಯಾವುದೇ ಸಾರ್ವಜನಿಕ ಕಟ್ಟಡವು ಶತಮಾನದ ಬಳಿಕ ಐತಿಹಾಸಿಕ ಎನಿಸಿ ಪಾರಂಪರಿಕವಾಗುತ್ತದೆ. ಅಂತಹ ಕಟ್ಟಡವನ್ನು ಶಾಶ್ವತವಾಗಿ ಉಳಿಸಿಕೊಂಡು ಸ್ಮಾರಕವಾಗಿಸಬಹುದು. ಸ್ವಾತಂತ್ರ್ಯ ಪೂರ್ವದಲ್ಲಿ ಶಿವಮೊಗ್ಗದಲ್ಲಿ ನಿರ್ಮಾಣವಾದ ಮೊಟ್ಟ ಮೊದಲ ನ್ಯಾಯಾಲಯ(ಜಯನಗರ ಪೊಲೀಸ್ ಠಾಣೆ) ಕಟ್ಟಡ, ಕೋರ್ಪಲಯ್ಯನ ಛತ್ರ ಸೇರಿದಂತೆ ಹಲವು ಐತಿಹಾಸಿಕ ಕಟ್ಟಡಗಳು ನೆಲಸಮಗೊಂಡು ಅವುಗಳ ಜಾಗದಲ್ಲಿ ಹೊಸ ಕಟ್ಟಡಗಳು ನಿರ್ಮಾಣವಾಗಿವೆ. ಶಿವಮೊಗ್ಗದ ಇಂತಹ ಹಳೆಯ ಪಾರಂಪರಿಕ ಸೇತುವೆಯನ್ನು ಉಳಿಸಲು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಯೋಚಿಸಬೇಕಿದೆ ಎಂಬುದು ಇತಿಹಾಸ ತಜ್ಞರ ಅಭಿಪ್ರಾಯ.
ತಜ್ಞರ ಅಭಿಪ್ರಾಯಕ್ಕೆ ಮನ್ನಣೆ ನೀಡಿ :
ನೂರಾರು ವರ್ಷಗಳ ಇತಿ ಹಾಸವಿರುವ ಶಿವಮೊಗ್ಗದ ತುಂಗಾ ಸೇತುವೆ ಕೆಡವಿ ಹೊಸ ಸೇತುವೆ ನಿರ್ಮಾಣಕ್ಕೂ ಮೊದಲು ವಿವಿಧ ಕ್ಷೇತ್ರಗಳ ಸ್ಥಳೀಯ ತಜ್ಞರೊಂದಿಗೆ ಸಭೆ ನಡೆಸಿ ಪರ್ಯಾಯ ಮಾರ್ಗಗಳನ್ನು ಪರಿಶೀ ಲಿಸುವಂತೆ ಆಗ್ರಹಿಸುತ್ತಾರೆ ಇತಿಹಾಸ ತಜ್ಞ ಅಜಯ ಕುಮಾರ್ ಶರ್ಮಾ.
1856ರಲ್ಲಿ ಸಾರ್ವಜನಿಕ ಕಾಮಗಾರಿಗಳ ಇಲಾಖೆ ಸ್ಥಾಪನೆಯಾದ ನಂತರ ಶಿವಮೊಗ್ಗ ಜಿಲ್ಲೆಯಲ್ಲಿ ಅನೇಕ ಪ್ರಮುಖ ಕಾಮಗಾರಿಗಳು ಕೈಗೊಳ್ಳಲ್ಪಟ್ಟವು. ಇನ್‌ಸ್ಪೆಕ್ಷನ್ ಬಂಗಲೆ, ವಿಭಾಗೀ ಯ ಕಚೇರಿ, ಹೈಸ್ಕೂಲ್, ಅಂಚೆ ಕಚೇರಿ, ಜಿಲ್ಲಾ ಮತ್ತು ತಾಲೂಕು ಕಚೇರಿಗಳು, ನ್ಯಾಯಾಲಯಗಳು, ಶಿವಮೊಗ್ಗ ಜಿಲ್ಲಾ ಕಾರಾಗೃಹ, ಶಾಲೆಗಳು, ಆಸ್ಪತ್ರೆಗಳು, ಔಷಧಾಲಯಗಳು ಹಾಗೂ ಕಾರ್ಯ ನಿರ್ವಾಹಕ ಇಂಜಿನಿಯರ್‌ಗಳ ಕಚೇರಿಗಳು ನಿರ್ಮಿಸಲ್ಪಟ್ಟವು. ಇದೇ ಅವಧಿಯಲ್ಲಿ ತುಂಗಾ ಮತ್ತು ಭದ್ರಾ ನದಿಗಳ ಮೇಲಿನ ಸೇತುವೆಗಳ ನಿರ್ಮಾಣವೂ ನಡೆದಿದೆ. ಶಿವಮೊಗ್ಗ ಮತ್ತು ಬೆಂಕಿಪುರ (ಈಗಿನ ಭದ್ರಾವತಿ) ಸೇತುವೆಗಳ ಕಾಮಗಾರಿಗಳು 1856ರ ನಂತರ ಆರಂಭಗೊಂಡವು. ಶಿವಮೊಗ್ಗದ ತುಂಗಾ ಸೇತುವೆಯ ಪಾರಂಪರಿಕ ಮೌಲ್ಯವನ್ನು ಆತ್ಮಾವಲೋಕನ ಮಾಡುವುದಕ್ಕೆ ಇದು ಅತ್ಯಂತ ಸೂಕ್ತ ಸಮಯವಾಗಿದೆ. ಹೀಗಾಗಿ ತಜ್ಞರ ಅಭಿಪ್ರಾಯಕ್ಕೆ ಮನ್ನಣೆ ನೀಡುವಂತೆ ಅಜಯ ಕುಮಾರ್ ಶರ್ಮಾ ಆಗ್ರಹಿಸಿದ್ದಾರೆ.
ನೂರಾರು ವರ್ಷಗಳ ಇತಿಹಾಸವಿರುವ ಶಿವಮೊಗ್ಗದ ತುಂಗಾ ಸೇತುವೆ ಕೆಡವಿ ಹೊಸ ಸೇತುವೆ ನಿರ್ಮಾಣಕ್ಕೂ ಮೊದಲು ವಿವಿಧ ಕ್ಷೇತ್ರಗಳ ಸ್ಥಳೀಯ ತಜ್ಞರೊಂದಿಗೆ ಸಭೆ ನಡೆಸಿ ಪರ್ಯಾಯ ಮಾರ್ಗಗಳನ್ನು ಪರಿಶೀಲಿಸಬೇಕು.
-ಅಜಯ ಕುಮಾರ್ ಶರ್ಮಾ, ಇತಿಹಾಸ ತಜ್ಞ
ಹೊಸ ಸೇತುವೆಯ ಉದ್ದೇಶವೇನು?
2019ರಲ್ಲಿ ಸುರಿದ ಭಾರೀ ಮಳೆಯಿಂದಾಗಿ ತುಂಗಾ ನದಿ ತುಂಬಿ ಹರಿದ ಪರಿಣಾಮ ಸೇತುವೆಯ ದಡ ಅಪಾಯದ ಸ್ಥಿತಿಯಲ್ಲಿತ್ತು. ಅಲ್ಲದೇ ಸೇತುವೆಯ ಕೆಳ ಭಾಗದಲ್ಲಿ ಗಿಡಗಂಟಿಗಳು ಬೆಳೆದು ದುರ್ಬಲಗೊಂಡಿತ್ತು. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯು ವಾಹನಗಳ ಸಂಚಾರವನ್ನು ನಿಷೇಧಿಸಿ ಸೇತುವೆ ದುರಸ್ತಿ ಮಾಡಿತು. ಅದಾದ ಬಳಿಕ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ದ್ವಿಚಕ್ರ ವಾಹನ ಮತ್ತು ಕಾರುಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ತುಂಗಾ ಹಳೆ ಸೇತುವೆ ಶಿಥಿಲವಾಗುತ್ತಿದ್ದು, ಹೊಸ ಸೇತುವೆ ನಿರ್ಮಿಸುವಂತೆ ಒತ್ತಾಯ ಕೇಳಿಬಂದಿದೆ.






