ಪ್ರವಾಸಿಗರನ್ನು ಆಕರ್ಷಿಸುವ ಬೆಳಗಾವಿಯ ಐತಿಹಾಸಿಕ ತಾಣಗಳು

ಕರ್ನಾಟಕದ ಉತ್ತರ ತುದಿಯಲ್ಲಿರುವ ಬೆಳಗಾವಿ ಜಿಲ್ಲೆಯು ರಾಜ್ಯದ ಕಿರೀಟ ಎಂದೇ ಪರಿಗಣಿತ. ಐತಿಹಾಸಿಕ ಪಡಿಯಚ್ಚಿನ ಮೇಲೆ ಬೆಳೆದ ಈ ಜಿಲ್ಲೆ ಅತ್ಯಾಧುನಿಕ ಪ್ರಪಂಚದ ಎಲ್ಲ ಆಯಾಮಗಳಲ್ಲೂ ಬೆಳೆದಿದೆ. ಅಧಿಕೃತ ಮುದ್ರೆಯ ಹಂಗಿಲ್ಲದೆಯೇ ಕರ್ನಾಟಕದ ಎರಡನೇ ರಾಜಧಾನಿಯ ಪಟ್ಟವನ್ನೂ ಗಿಟ್ಟಿಸಿಕೊಂಡಿದೆ. ಅದರ ಕುರುಹು ಎಂಬಂತೆ ಸುವರ್ಣ ವಿಧಾನಸೌಧ ಬೆಳೆದು ನಿಂತಿದೆ.
ರಾಜ್ಯದ ಯಾವುದೇ ರಾಜಕೀಯ ಚಟುವಟಿಕೆಗಳಿಗೆ ತಿರುವು ನೀಡಬಲ್ಲ ಶಕ್ತಿಕೇಂದ್ರವೂ ಈ ಜಿಲ್ಲೆ ಎಂಬುದು ವಿಶೇಷ. ರಾಜಕೀಯವಾಗಿ ಮಾತ್ರವಲ್ಲ; ಐತಿಹಾಸಿಕ, ಸಾಂಸ್ಕೃತಿಕ, ಪ್ರಾಕೃತಿಕ ಹಾಗೂ ಪ್ರವಾಸೋದ್ಯಮದಲ್ಲೂ ಬೆಳಗಾವಿ ಬೆಳಗುತ್ತಲೇ ಇದೆ.
ಕನ್ನಡ, ಮರಾಠಿ-ಉರ್ದು-ಸಂಸ್ಕೃತಿಗಳನ್ನು ಸಮನಾಗಿ ಪೋಷಿಸಿಕೊಂಡು ಬಂದ ಈ ನೆಲ ಸಾಂಸ್ಕೃತಿಕ ಕೂಡಲಸಂಗಮವೇ ಸರಿ. ಕನ್ನಡಿಗರ ಹಸಿರು ಸೀರೆ, ಹಸಿರು ಬಳೆ, ಕುಂಕುಮ, ಮಲ್ಲಿಗೆಯ ಘಮಲಿನ ಜತೆಗೆ ಮರಾಠಿಗರ ಕೇಸರಿ ಪೇಟ, ಜುಬ್ಬಾ, ಕಚ್ಚೆಸೀರೆಗಳ ಉಡುಗೆಯೇ ಅದ್ಭುತ. ಕನ್ನಡಿಗರಿಗೆ ಕೊಲ್ಹಾಪುರದ ಮಹಾಲಕ್ಷ್ಮೀ ಅಧಿದೇವತೆ. ಮರಾಠಿಗರಿಗೆ ಸವದತ್ತಿಯ ಯಲ್ಲಮ್ಮನೇ ಕುಲದೇವತೆ. ಇಲ್ಲಿ ಮೊಹರ‌್ರಂ ಹಿಂದೂಗಳು ಕೂಡ ಆಚರಿಸುತ್ತಾರೆ. ಈ ರೀತಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಗಮವೇ ಗಡಿ ಜಿಲ್ಲೆಗೆ ವಿಶೇಷ ಹೊಳಪು ನೀಡಿದೆ.
ಪೌರಾಣಿಕ ಕಾಲದ ಸ್ಥಳಗಳನ್ನೂ ಒಡಲಲ್ಲಿ ಇಟ್ಟುಕೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಐತಿಹಾಸಿಕ ಕುರುಹುಗಳಿಗೂ ಬರವೇನಿಲ್ಲ. ಉತ್ತರ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಕೋಟೆ ಕೊತ್ತಲಗಳು ಇರುವ ಜಿಲ್ಲೆ ಇದು. ಅದಕ್ಕೆ ಉದಾಹರಣೆಯಾಗಿ ಬೆಳಗಾವಿ ನಗರದ ಖಿಲ್ಲಾ ಕೋಟೆಯನ್ನು ಒಮ್ಮೆ ನೋಡಬೇಕು.
1204 ಕ್ರಿ.ಶ.ದಲ್ಲಿ ರಟ್ಟ ಅರಸರು ಇದನ್ನು ಕಟ್ಟಿದರು. ಉತ್ತಮ ಗೋಡೆಗಳು ಮತ್ತು ದೊಡ್ಡ ಕಂದಕದಿಂದ ಆವೃತ್ತವಾದ ಈ ಕೋಟೆ ವಿಶೇಷ ವಿನ್ಯಾಸಕ್ಕೆ ಹೊಂದಿದೆ. ಜೈನ ಅರಸರು, ವಿಜಯನಗರ ಅರಸರು, ಬಹಮನಿ ಸುಲ್ತಾನರು, ಮರಾಠರು ಕೂಡ ಇಲ್ಲಿ ಆಳ್ವಿಕೆ ಮಾಡಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ಆಡಳಿತ ಕೇಂದ್ರವೂ ಆಗಿತ್ತು. ಮಹಾತ್ಮಾ ಗಾಂಧಿ 1924ಲ್ಲಿ ಬೆಳಗಾವಿಗೆ ಬಂದಾಗ ಇದೇ ಕೋಟೆಯ ಆವರಣದಲ್ಲಿ ತಂಗಿದ್ದರು ಎಂಬುದೂ ವಿಶೇಷ.
ಕಮಲ ಬಸದಿ: ಐತಿಹಾಸಿಕವಾದ ಎರಡು ಕಮಲ ಬಸದಿಗಳು, ಒಂದು ಮಂದಿರ, ಎರಡು ಮಸೀದಿಗಳು ಈಗಲೂ ಸುಸಜ್ಜಿತವಾಗಿದ್ದು, ನೋಡಲು ಸಿಗುತ್ತವೆ.
ಕಲ್ಲಿನ ಬಸದಿ, ಜೈನ ಬಸದಿ ಕಪ್ಪು ಕಲ್ಲಿನಲ್ಲಿರುವ ನೇಮಿನಾಥ ವಿಗ್ರಹದೊಂದಿಗೆ ಕೆತ್ತಿದ ಪೀಠದ ಮೇಲಿದೆ. ಇದನ್ನು ಕ್ರಿ.ಶ. 1204ರಲ್ಲಿ ಚಾಲುಕ್ಯ ಶೈಲಿಯಲ್ಲಿ ನಿರ್ಮಿಸಲಾಯಿತು. ಚಿಕ್ಕಿ ಬಸದಿ ಎಂದು ಕರೆಯಲಾಗುವ ಇನ್ನೊಂದು ದೇವಾಲಯ, ಅವಶೇಷಗಳಲ್ಲಿದೆ. ಬಸದಿಯ ಗೋಪುರವು 72 ದಳಗಳನ್ನು ಹೊಂದಿರುವ ಕಮಲ ಹೂವನ್ನು ಹೋಲುವ ಕಾರಣ ಇದಕ್ಕೆ ಕಮಲ ಬಸದಿ ಎಂದೇ ಹೆಸರು ಬಂದಿದೆ. ಮಣ್ಣಲ್ಲಿ ಮುಚ್ಚಿಹೋಗಿದ್ದ ಇದನ್ನು ಪುರಾತತ್ವ ಇಲಾಖೆ 1996ರಲ್ಲಿ ನವೀಕರಿಸಿತು.
ಕೋಟೆಯ ಪ್ರವೇಶದ್ವಾರದಲ್ಲಿ ಎರಡು ಹಿಂದೂ ದೇವಾಲಯಗಳಿವೆ. ಗಣೇಶ ಮತ್ತು ದುರ್ಗಾದೇವಿ ಗುಡಿಗಳಿವೆ. ಕೋಟೆ ಒಳಗೆ ಸಫಾ ಮಸೀದಿ ಮತ್ತು ಜಾಮಿಯಾ ಮಸೀದಿ ಇವೆ. ಇವುಗಳನ್ನು 1519 ರಲ್ಲಿ ನಿರ್ಮಿಸಲಾಗಿದೆ.
ಹಿಡಕಲ್ ಜಲಾಶಯ:
ಹುಕ್ಕೇರಿ ಬಳಿಯ ಹಿಡಕಲ್ ಗ್ರಾಮದ ಬಳಿ ಘಟಪ್ರಭಾ ನದಿಗೆ ಅಣೆಕಟ್ಟೆ ಕಟ್ಟಲಾಗಿದ್ದು, ಇದರ ನಿಜವಾದ ಹೆಸರು ರಾಜಾ ಲಖಮಗೌಡ ಆಣೆಕಟ್ಟೆ. 62.48 ಮೀಟರ್ ಎತ್ತರ ಹೊಂದಿರುವ ಈ ಅಣೆಕಟ್ಟೆ, 10 ಕ್ರೆಸ್ಟ್ ಗೇಟ್ ಹೊಂದಿವೆ. ಒಟ್ಟು ಮೇಲ್ಮೈ ವಿಸ್ತೀರ್ಣ 63.38 ಚದರ ಕಿಲೋಮೀಟರ್ ಮತ್ತು 51.16 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಈ ಆಣೆಕಟ್ಟು 8 ಲಕ್ಷ ಎಕರೆಗೂ ಹೆಚ್ಚು ಪ್ರದೇಶಗಳಿಗೆ ನೀರು ಒದಗಿಸುತ್ತಿದೆ. ಜಲವಿದ್ಯುತ್ ಉತ್ಪಾದನೆಯನ್ನು ಪೂರೈಸುವ ಒಂದು ಅಣೆಕಟ್ಟೆ. ಜಲಪಾತಗಳ ಊರು, ಕಾಡಿನ ಕೂಸು ಖಾನಾಪುರ: ಸಹ್ಯಾದ್ರಿ ಶ್ರೇಣಿಯ ಅರಣ್ಯದಲ್ಲಿ ಹುಟ್ಟಿಕೊಂಡ ಊರು ಖಾನಾಪುರ. ಬೆಟ್ಟಗುಡ್ಡಗಳ ಸಾಲು, ಮಲಪ್ರಭೆ ಹಾಗೂ ಮಹದಾಯಿ ನದಿಗಳ ನೀರು ಇಲ್ಲಿ ಹಲವು ಜಲಪಾತಗಳಿಗೆ ಜನ್ಮ ನೀಡಿವೆ. ಈ ಊರಿನ ಯಾವ ದಿಕ್ಕಿಗೆ ಹೋದರೂ ನಗೆಚೆಲ್ಲಿ ಧುಮ್ಮಿಕ್ಕುವ ಜಲಪಾತಗಳೇ ಕಾಣಸಿಗುತ್ತವೆ.
ವಜ್ರಾ ಜಲಪಾತ, ವಜ್ರಧಾರಾ, ವಜ್ರಪೋಹಾ ಕಲಪಾತಗಳು ಪ್ರಸಿದ್ಧವಾದವು. ಈ ಜಲಪಾತದ ನೀರಿನ ಜತೆಗೆ ವಜ್ರ ಹೋಲುವ ಸಣ್ಣ ಹರಳುಗಳು ಹರಿದುಬರುವ ಕಾರಣ ಇವುಗಳಿಗೆ ಅದೇ ಹೆಸರು ಇಡಲಾಗಿದೆ. ಚಿಗಳೆ ಜಲಪಾತ, ಭಟವಾಡಾ, ಲಾಕಡಿ, ತಾಮಡಾ, ಅಸೋಗಾ, ಚೋರ್ಲಾ, ಮಾನ ಜಲಪಾತಗಳೂ ನಯನ ಮನೋಹರವಾಗಿವೆ. ಇನ್ನೂ ಹಲವು ಜಲಪಾತಗಳು ಭೀಮಗಡ ಅಭಯಾರಣದಲ್ಲಿ ಅಡಗಿವೆ. ಅಲ್ಲಿಗೆ ಪ್ರವೇಶವಿಲ್ಲದ ಕಾರಣ ಚಿತ್ರದಲ್ಲಿ ಮಾತ್ರ ನೋಡಬಹುದು.
ಬೆಳಗಾವಿಯಿಂದ 25 ಕಿ.ಮೀ ದೂರದಲ್ಲಿರುವ ಖಾನಾಪುರಕ್ಕೆ ಬಂದರೆ; ಜಲಪಾತಗಳ ಜತೆಗೆ ಹಲವು ಪ್ರೇಕ್ಷಣೀಯ ಸ್ಥಳಗಳನ್ನೂ ನೋಡಬಹುದು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಅಡಗುದಾನ, ಗಲ್ಲಿಗೇರಿಸಿದ ಮರ, ಮಣ್ಣು ಮಾಡಿದ ಸ್ಥಳ, ಕಣಕುಂಬಿ, ಹಂಡಿಬಡಗನಾಥ ಸ್ಥಳಗಳು ಅದ್ಭುತ ಅನುಭವ ನೀಡುತ್ತವೆ.







