ಪ್ರವಾಸಿಗರ ಆಕರ್ಷಣೀಯ ತಾಣ ಹೊನ್ನಾವರ

ಉತ್ತರ ಕನ್ನಡ: ಜಿಲ್ಲೆಯ ಹೊನ್ನಾವರ ಹಿನ್ನೀರು ಪ್ರದೇಶವು ಕರ್ನಾಟಕದ ಸುಂದರ ನೈಸರ್ಗಿಕ ತಾಣವಾಗಿದೆ. ಇಲ್ಲಿ ಒಂದು ಕಡೆ ಅರಬ್ಬೀ ಸಮುದ್ರ ಇದ್ದರೆ ಇನ್ನೊಂದು ಕಡೆ ಪಶ್ಚಿಮ ಘಟ್ಟಗಳು ಇವೆ. ಶರಾವತಿ ನದಿಯು ಅರಬ್ಬಿ ಸಮುದ್ರವನ್ನು ಸೇರುವ ಸ್ಥಳದಲ್ಲಿ ರೂಪುಗೊಂಡಿರುವ ಮತ್ತು ಇದರ ರಮಣೀಯ ಸೌಂದರ್ಯದಿಂದಾಗಿ ಇದನ್ನು ‘ಮಿನಿ ಕೇರಳ’ ಎಂದೇ ಕರೆಯಲಾಗುತ್ತಿದೆ.
ಹೊನ್ನಾವರವು ತೂಗು ಸೇತುವೆಗಳು, ಕರಾವಳಿ ಪಾಕಪದ್ಧತಿ, ಶರಾವತಿ ಕಾಂಡ್ಲಾ ಮ್ಯಾಂಗ್ರೋವ್ ಕಾಡುಗಳು ಇರುವುದರಿಂದ ಪ್ರವಾಸಿಗರ ಆಕರ್ಷಣೀಯ ಕೇಂದ್ರ ಬಿಂದುವಾಗಿ ಗುರುತಿಸಲ್ಪಟ್ಟಿದೆ.
ಶರಾವತಿ ಹಿನ್ನೀರಿನ ಪ್ರದೇಶವು ಕನ್ನಡಿಯಂತಹ ನೀರಿನ ಪ್ರತಿಬಿಂಬಗಳು ಮತ್ತು ಮುಸ್ಸಂಜೆ ಹಾಗೂ ಸೂರ್ಯೋದಯದ ಅದ್ಭುತ ನೋಟಗಳಿಗೆ ಹೆಸರುವಾಸಿಯಾಗಿದೆ. ಅಲ್ಲದೆ, ಹಿನ್ನೀರಿನಲ್ಲಿ ದೋಣಿ ವಿಹಾರ ಅತ್ಯಂತ ಜನಪ್ರಿಯ ಚಟುವಟಿಕೆಯಾಗಿದೆ. ಖಾಸಗಿ ಅಥವಾ ಹಂಚಿಕೆಯ ದೋಣಿಗಳಲ್ಲಿ ದಟ್ಟವಾದ ಮ್ಯಾಂಗ್ರೋವ್ ಕಾಡುಗಳು ಮತ್ತು ಸಣ್ಣ ಮೀನುಗಾರಿಕೆ ಹಳ್ಳಿಗಳ ನಡುವೆ ವಿಹಾರ ಮಾಡುವ ಮೂಲಕ ಪ್ರಾಕೃತಿಕ ಸೊಬಗನ್ನು ಸವಿಯಬಹುದಾಗಿದೆ. ಅಲ್ಲದೆ, ದೋಣಿ ವಿಹಾರದ ಮೂಲಕ 16ನೇ ಶತಮಾನದ ಐತಿಹಾಸಿಕ ಬಸವರಾಜ ದುರ್ಗ ಕೋಟೆಯಿರುವ ದ್ವೀಪಕ್ಕೂ ಭೇಟಿ ನೀಡಬಹುದಾಗಿದೆ.
ಶರಾವತಿ ಮ್ಯಾಂಗ್ರೋವ್ ಬೋರ್ಡ್‌ವಾಕ್: ಕಾಂಡ್ಲಾ ವನ, ‘ಮ್ಯಾಂಗ್ರೋವ್ ಬೋರ್ಡ್ ವಾಕ್’ ಎಂದೂ ಕರೆಯಲ್ಪಡುವ ಇದು ಹೊನ್ನಾವರದ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ ಮತ್ತು ಇದು ಪ್ರಕೃತಿಯ ಮಡಿಲಲ್ಲಿ ಅನ್ವೇಷಿಸಲು ಮತ್ತು ಸಮಯ ಕಳೆಯಲು ಪ್ರಕೃತಿ ಪ್ರಿಯರಿಗೆ ಸೂಕ್ತವಾದ ಸ್ಥಳವಾಗಿದೆ. ಈ ವಿಶಿಷ್ಟವಾದ ಮರದ ನಡಿಗೆದಾರಿಯು ಹೊನ್ನಾವರ ಪಟ್ಟಣದಿಂದ ಸುಮಾರು 3 ಕಿ.ಮೀ. ದೂರದಲ್ಲಿದೆ. ಈ ಪ್ರದೇಶದಲ್ಲಿನ ಪ್ರಾಣಿ ಮತ್ತು ಸಸ್ಯವರ್ಗವನ್ನು ಉಲ್ಲೇಖಿಸುವ ಫಲಕಗಳು ಮ್ಯಾಂಗ್ರೋವ್‌ಗಳ ಬಗ್ಗೆ ಸಂದರ್ಶಕರಿಗೆ ತಿಳಿಸುತ್ತವೆ.
ಹೊನ್ನಾವರವು ಮಂಗಳೂರಿನಿಂದ 180 ಕಿ.ಮೀ. ದೂರದಲ್ಲಿದ್ದರೆ, ಗೋವಾದಿಂದ 166 ಕಿ.ಮೀ. ದೂರದಲ್ಲಿದೆ. ಅಲ್ಲದೆ ಇಲ್ಲಿಗೆ ಬೆಂಗಳೂರು, ಮಂಗಳೂರು ಮತ್ತು ಮುಂಬೈ, ಗೋವಾದಿಂದ ನೇರ ರೈಲು ಸಂಪರ್ಕವನ್ನೂ ಹೊಂದಿದೆ.
ಭೇಟಿ ನೀಡಲು ಉತ್ತಮ ಸಮಯ: ಕರಾವಳಿ ಪಟ್ಟಣ ಹೊನ್ನಾವರಕ್ಕೆ ಭೇಟಿ ನೀಡಲು ಅಕ್ಟೋಬರ್‌ನಿಂದ ಫೆಬ್ರವರಿ ಉತ್ತಮ ಸಮಯವಾಗಿದೆ. ಈ ಅವಧಿಯಲ್ಲಿ ವಾತಾವರಣವು ಪ್ರವಾಸಿಗರ ಭೇಟಿಗೆ ಹೆಚ್ಚು ಅನುಕೂಲವಾಗಿರುತ್ತದೆ.







