ಹೊಸಪೇಟೆ: ಖಾಸಗಿ ಕಾರ್ಯಕ್ರಮಕ್ಕೆ ಸರಕಾರಿ ಬಸ್ ನಿಯೋಜನೆ
ಬಸ್ ನಿಲ್ದಾಣ ಖಾಲಿ, ಪ್ರಯಾಣಿಕರ ಪರದಾಟ, ಖಾಸಗಿ ವಾಹನಗಳ ಮೊರೆ

ಹೊಸಪೇಟೆ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ‘50 ವರ್ಷದ ರಾಜಕೀಯ ಸಾರ್ಥಕ ಜೀವನ’ ನಿಮಿತ್ತ ಚಿತ್ರದುರ್ಗದಲ್ಲಿ ನಡೆಯುತ್ತಿರುವ ಖಾಸಗಿ ಕಾರ್ಯಕ್ರಮದ ಹಿನ್ನೆಲೆ ಹೊಸಪೇಟೆ ಬಸ್ ನಿಲ್ದಾಣದಲ್ಲಿ ಸರಕಾರಿ ಬಸ್ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುವಂತೆಯಾಗಿದೆ.
ದಿನ ನಿತ್ಯ ಹೊಸಪೇಟೆಯಿಂದ ಬಳ್ಳಾರಿ ಮಾರ್ಗಕ್ಕೆ ಐದತ್ತು ನಿಮಿಷಕ್ಕೊಮ್ಮೆ ಬಸ್ ಸೌಲಭ್ಯ ಲಭ್ಯವಿರುತ್ತಿತ್ತು. ಆದರೆ ಕಾರ್ಯಕ್ರಮಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳನ್ನು ನಿಯೋಜನೆಗೊಳಿಸಿರುವ ಕಾರಣ, 2ಗಂಟೆಗಳು ಕಳೆದರೂ ಬಸ್ ಬರೆದೆ ಹೊಗಿದ್ದರಿಂದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗ್ಗೆಯಿಂದಲೇ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು, ವಯೋ ವೃದ್ಧರು, ಗರ್ಭಿಣಿ ಸ್ತ್ರೀಯರು, ಆಸ್ಪತ್ರೆಗಳಿಗೆ ತೆರಳಬೇಕಿದ್ದ ರೋಗಿಗಳು ಹಾಗೂ ನಿಗದಿತ ಸ್ಥಳಕ್ಕೆ ಹೋಗಲು ಪ್ರಯಾಣಿಕರು ಪರದಾಡುತ್ತಿರುವುದನ್ನು ಕಂಡುಬಂದಿರುತ್ತದೆ.
ರಾಜಕಾರಣಿಗಳು ಸಂಭ್ರಮವನ್ನು ಆಚರಿಸಿಕೊಳ್ಳುವುದು ಒಂದೆಡೆಯಾದರೆ ಸಾರ್ವಜನಿಕರ ಗೋಳು ಕೇಳುವವರು ಯಾರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಬಸ್‌ಗಳ ಕೊರತೆಯಿಂದ ಹೊಸಪೇಟೆ ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದು, ಜನರು ಅನಿವಾರ್ಯವಾಗಿ ಖಾಸಗಿ ಟ್ಯಾಕ್ಸ್, ಆಟೊ ಹಾಗೂ ಖಾಸಗಿ ಬಸ್‌ಗಳತ್ತ ಮುಖ ಮಾಡಬೇಕಾದ ಪರಿಸ್ಥಿತಿ ಉದ್ಭವಿಸುತ್ತಿದೆ. ಖಾಸಗಿ ವಾಹನ ಚಾಲಕರು ಈ ಸಂದರ್ಭವನ್ನು ಬಳಸಿಕೊಂಡು ಪ್ರಯಾಣ ದರವನ್ನು ಹೆಚ್ಚಿಸಿರುವುದಾಗಿ ಕೆಲ ಪ್ರಯಾಣಿಕರು ಆರೋಪಿಸಿದರು. ತುರ್ತು ಕೆಲಸಗಳಿಗೆ ತೆರಳಬೇಕಿದ್ದವರು ಹೆಚ್ಚಿನ ಹಣ ನೀಡಿ ಪ್ರಯಾಣಿಸಬೇಕಾದ ಸ್ಥಿತಿ ನಿರ್ಮಾಣವಾಯಿತು.
ಸಾರ್ವಜನಿಕರ ಸೇವೆಗಾಗಿ ಇರುವ ಸರಕಾರಿ ಬಸ್ ಗಳನ್ನು ಖಾಸಗಿ ಕಾರ್ಯಕ್ರಮಗಳಿಗೆ ಬಳಸುವುದರಿಂದ ಸಾಮಾನ್ಯ ಜನರಿಗೆ ತೊಂದರೆ ಆಗುತ್ತಿದೆ. ವಿದ್ಯಾರ್ಥಿಗಳು ಪರೀಕ್ಷೆಗಳಿಗೆ, ರೋಗಿಗಳು ಆಸ್ಪತ್ರೆಗೆ,ಕಾರ್ಮಿಕರು ಕೆಲಸಕ್ಕೆ ತೆರಳಲು ಸಂಕಷ್ಟ ಎದುರಾಗಿದೆ.
ಎಲ್ಲ ರಾಜೀಯ ಪಕ್ಷ ರಾಜಕೀಯ ಪಕ್ಷಗಳಲ್ಲಿ ಇದೇತರ ದೊಂಬರಾಟ ನಡೆದಿದೆ ಬಲಿಪಶು ಆಗ್ತಾ ಇರೋದು ವಿದ್ಯಾರ್ಥಿಗಳು ಮತ್ತು ಬಡವರು ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು.ವಿಶೇಷವಾಗಿ ಬಳ್ಳಾರಿ, ಕುರುಗೋಡು, ಸಂಡೂರು, ಕಂಪ್ಲಿ ಸೇರಿದಂತೆ ವಿವಿಧ ಮಾರ್ಗಗಳಲ್ಲಿಯೂ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ ಎನ್ನಲಾಗಿದ್ದು, ಪ್ರಯಾಣಿಕರು ಸಾರಿಗೆ ಇಲಾಖೆಯ ಕ್ರಮದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.
ಸಾರ್ವಜನಿಕರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಸಾರಿಗೆ ಇಲಾಖೆ ತುರ್ತು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.






