ಅನುದಾನ ಬಿಡುಗಡೆಯಾದರೂ ದುರಸ್ತಿಯಾಗದ ಹಾಸ್ಟೆಲ್
ಸಮಸ್ಯೆಗಳ ತಾಣವಾದ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ

ಬೀದರ್: ನಗರದ ಜನವಾಡ ರಸ್ತೆಯಲ್ಲಿರುವ ಸಿದ್ದಿತಾಲೀಮ್‌ನ ಡಾ. ಬಿ. ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಕಟ್ಟಡದ ದುರಸ್ತಿಗಾಗಿ ಸುಮಾರು 13 ಲಕ್ಷ ರೂ. ಬಿಡುಗಡೆಯಾಗಿ ತಿಂಗಳುಗಳೇ ಕಳೆದರೂ ಕಾಮಗಾರಿ ಪ್ರಾರಂಭವಾಗದಿರುವುದಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಾಲಕರ ವಸತಿ ನಿಲಯದಲ್ಲಿ ಸುಮಾರು 180 ವಿದ್ಯಾರ್ಥಿಗಳಿದ್ದಾರೆ. ಹಾಸ್ಟೆಲ್ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ದುರಸ್ತಿ ಕಾಮಗಾರಿ ನಡೆಯದಿರುವುದರಿಂದ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುವಂತಾಗಿದೆ.
ಈ ವಸತಿ ನಿಲಯ ಕಟ್ಟಡದ ಮೇಲ್ಛಾವಣಿ, ಗಿಲಾವ (ಗಾರೆ), ಪೇಂಟಿಂಗ್, ಬಾಗಿಲು, ಕಿಟಕಿ, ನೈರ್ಮಲ್ಯ, ನೀರಿನ ವ್ಯವಸ್ಥೆ ಹಾಗೂ ವಿದ್ಯುತ್ ವ್ಯವಸ್ಥೆಯನ್ನು ದುರಸ್ತಿಗೊಳಿಸುವ ಕಾಮಗಾರಿಗಳಿಗೆ 2026ರ ಮಾರ್ಚ್ ತಿಂಗಳಲ್ಲಿ ಅನುಮೋದನೆಯಾದ ಒಟ್ಟು 20 ಲಕ್ಷ ರೂ. ಗಳಲ್ಲಿ 13 ಲಕ್ಷ ರೂ. ಅನುದಾನ ಲೋಕೋಪಯೋಗಿ ಇಲಾಖೆಗೆ ಬಿಡುಗಡೆಯಾಗಿದೆ. ಆದರೆ, ಇಲ್ಲಿವರೆಗೆ ಯಾವುದೇ ರೀತಿಯ ಕೆಲಸ ನಡೆದಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಹಾಸ್ಟೆಲ್ ಸಮೀಪದಲ್ಲಿ ಚರಂಡಿ ವ್ಯವಸ್ಥೆ ಹಾಯ್ದು ಹೋಗಿದ್ದು, ಇದರಿಂದ ಗಬ್ಬು ವಾಸನೆ ಹಾಗೂ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಮಕ್ಕಳು ಅಳಲು ತೋಡಿಕೊಂಡಿದ್ದಾರೆ.
ಹದಗೆಟ್ಟ ಶೌಚಾಲಯಗಳು :
ವಸತಿ ನಿಲಯದ ಶೌಚಾಲಯಗಳು ಹದಗೆಟ್ಟಿದ್ದು, ಟಾಯ್ಲೆಟ್ ಬೌಲ್‌ಗಳು, ಟೈಲ್ಸ್‌ಗಳು ಹಾಳಾಗಿವೆ. ಸ್ವಚ್ಛತೆಯೂ ಮರೀಚಿಕೆಯಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಕಟ್ಟಡದ ಕಿಟಕಿಗಳು ಸಂಪೂರ್ಣವಾಗಿ ಹಾಳಾಗಿವೆ. ವಸತಿ ನಿಲಯ ಪಾಲಕರು ತಮ್ಮ ಸ್ವಂತ ಖರ್ಚಿನಲ್ಲಿಯೇ ಕಿಟಕಿಗಳಿಗೆ ಪರದೆ ಹಾಕಿಸಿದ್ದಾರೆ ಎನ್ನಲಾಗಿದೆ.
ಆದಷ್ಟು ಬೇಗನೆ ವಸತಿ ನಿಲಯದ ಕಟ್ಟಡ ದುರಸ್ತಿ ಕಾಮಗಾರಿ ಪೂರ್ಣಗೊಳಿಸಿ ಅನುಕೂಲ ಮಾಡಿಕೊಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಹೆಚ್ಚಿನ ಮಾಹಿತಿ ಪಡೆಯಲು ಸಮಾಜಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಕರೆ ಮಾಡಿದಾಗ ಅವರು ಸಂಪರ್ಕಕ್ಕೆ ಸಿಗಲಿಲ್ಲ.
ಸಿದ್ದಿತಾಲೀಮ್‌ನ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಕುಡಿಯುವ ನೀರು, ಶೌಚಾಲಯ, ಬೆಡ್ ಸೇರಿದಂತೆ ಇತರೆ ಸಮಸ್ಯೆಗಳಿವೆ. ಸ್ವಚ್ಛತೆಯಂತೂ ಇಲ್ಲವೇ ಇಲ್ಲ. ವಾರದಲ್ಲಿ 10ರಿಂದ 12 ವಿದ್ಯಾರ್ಥಿಗಳ ಆರೋಗ್ಯ ಹಾಳಾಗುತ್ತಿದೆ. ಈ ಸಮಸ್ಯೆ ಆದಷ್ಟು ಬೇಗ ಬಗೆಹರಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗೆ ತಿಳಿಸಿದ್ದೇನೆ.
-ಜಗನ್ನಾಥ್ ಹಲಮಡಗೆ, ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದಸದಸ್ಯ
ಸಿದ್ದಿತಾಲೀಮ್‌ನ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಕಟ್ಟಡದ ದುರಸ್ತಿ ಕಾಮಗಾರಿಗಾಗಿ ಹಣ ಬಿಡುಗಡೆಯಾಗಿದ್ದು, ಲೋಕೋಪಯೋಗಿ ಇಲಾಖೆ ಕೆಲಸ ಮಾಡುತ್ತಿಲ್ಲ. ಅವರು ದುರಸ್ತಿ ಮಾಡಿದರೆ ಸಣ್ಣ ಪುಟ್ಟ ಕೆಲಸಗಳನ್ನು ನಾವು ಮಾಡಿಕೊಳ್ಳುತ್ತೇವೆ.
-ಅನಿಲಕುಮಾರ್ ಮೇಲ್ದೊಡ್ಡಿ, ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗ್ರೇಡ್-1, ಬೀದರ್
ನಿರ್ದಿಷ್ಟವಾಗಿ ಒಂದೊಂದು ತಾಲೂಕಿನಿಂದ ಕೆಲಸ ಮುಗಿಸುತ್ತಾ ಬರಲಾಗುತ್ತಿದೆ. ಔರಾದ್ ಹಾಗೂ ಕಮಲನಗರ್ ತಾಲೂಕಿನ ವಸತಿ ನಿಲಯಗಳ ನಂತರ ಇದೀಗ ಬಸವಕಲ್ಯಾಣ ತಾಲೂಕಿನ ವಸತಿ ನಿಲಯಗಳ ದುರಸ್ತಿ ಕಾಮಗಾರಿ ನಡೆಯುತ್ತಿದೆ. ಇದಾದ ನಂತರ ಬೀದರ್ ಸಿದ್ದಿತಾಲೀಮ್‌ನ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ದುರಸ್ತಿ ಮಾಡಲಾಗುವುದು.
-ಶಿವಶಂಕರ್ ಕಾಮಶೆಟ್ಟಿ, ಕಾರ್ಯನಿರ್ವಾಹಕ ಇಂಜಿನಿಯರ್ ಲೋಕೋಪಯೋಗಿ ಇಲಾಖೆ, ಬೀದರ್






