ಬಿಸಿಲ ಬೇಗೆ: ‘ಗೋಲಿ ಸೋಡಾ’ ವ್ಯಾಪಾರದಲ್ಲಿ ಹೆಚ್ಚಳ

ಮೈಸೂರು : ಈ ಬಾರಿ ಮೈಸೂರಿನಲ್ಲಿ 31ರಿಂದ 42 ಡಿಗ್ರಿವರೆಗೂ ತಾಪಮಾನ ವರದಿಯಾಗಿದೆ. ಬಿಸಿಲಿನಿಂದ ಬಳಲುತ್ತಿರುವ ಜನರು ತಂಪು ಪಾನೀಯದ ಮೊರೆ ಹೋಗುತ್ತಿದ್ದು ಗೋಲಿ ಸೋಡಾ ಕಡೆಗೆ ಹೆಚ್ಚು ಮುಖ ಮಾಡುತ್ತಿದ್ದಾರೆ.
ಗೋಲಿ ಸೋಡಾತಂಪನ್ನು ನೀಡುವ ಜೊತೆಗೆ ಜೀರ್ಣ ಕ್ರಿಯೆಗೂ ಅನುಕೂಲವಾಗಲಿದೆ ಎಂದು ಜನರು ಗೋಲಿ ಸೋಡಾದತ್ತ ಮುಖ ಮಾಡುತ್ತಾರೆ. ಮೈಸೂರು ನಗರ ಪ್ರದೇಶ ಮತ್ತು ಬಡಾವಣೆಗಳಲ್ಲಿ ಗೋಲಿ ಸೋಡಾ ಮಾರಾಟ ಹೆಚ್ಚು ಆಗುತ್ತಿದೆ. 20 ರೂ.ಗೆ ಗೋಲಿ ಸೋಡಾ ಮಾಡುತ್ತಿದ್ದು, ಕಿತ್ತಳೆ, ನಿಂಬು ಸಹಿತ ಖಾಲಿ ಸೋಡಾಗಳು ಹೆಚ್ಚು ಮಾರಾಟವಾಗುತ್ತಿವೆ.
ಗೋಲಿ ಸೋಡಾದ ಜೊತೆಗೆ ಉಪ್ಪು, ಮೆಣಸು ಮಿಶ್ರಿತ ಪೌಡರ್ ಹಾಕಿ ನಿಂಬೆ ಹಣ್ಣು ಹಿಂಡಿ ಎಲ್ಲವನ್ನು ಮಿಕ್ಸ್ ಮಾಡಿ ನೀಡಲಾಗುವುದು. ಇದನ್ನು ಸೇವಿಸಿದ ಜನರು ಸ್ವಲ್ಪ ಮಟ್ಟಿಗೆ ಬಿಸಿಲಿನ ಝಳದಿಂದ ನಿರುಮ್ಮುಳರಾಗಿ ನಿಟ್ಟುಸಿರು ಬಿಡುವಂತಾಗಿದೆ. ಎಳನೀರು, ಮಜ್ಜಿಗೆ, ಹಣ್ಣಿನ ಫ್ರೆಶ್ ಜ್ಯೂಸ್, ಜೊತೆಗೆ ಗೋಲಿ ಸೋಡಾ ಕೂಡ ಜನರನ್ನು ಆಕರ್ಷಿಸುತ್ತಿದೆ. ಕರ್ನಾಟಕದವರು ಸೇರಿದಂತೆ ಬಿಹಾರ, ಮಧ್ಯಪ್ರದೇಶದಿಂದ ಬಂದ ಹಲವರು ಮೂರು ಚಕ್ರದ ಗಾಡಿಯಲ್ಲಿ ಗೋಲಿ ಸೋಡಾಗಳನ್ನು ಇಟ್ಟುಕೊಂಡು ಅಲ್ಲಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಕಾಲೇಜು, ಸರಕಾರಿ ಕಚೇರಿ, ಬಸ್ ನಿಲ್ದಾಣ, ರೈಲು ನಿಲ್ದಾಣಗಳ ಮುಂದೆ ಮಾರಾಟ ಮಾಡುವ ವ್ಯಾಪಾರಿಗಳಿಗಂತೂ ಹೆಚ್ಚು ವ್ಯಾಪಾರವಾಗತೊಡಗಿದ್ದು, ಕಾಲೇಜುಗಳ ಮುಂದೆ ವಿದ್ಯಾರ್ಥಿಗಳು ಸಾಕಷ್ಟು ಗೋಲಿ ಸೋಡಾಗಳನ್ನು ಸೇವಿಸುತ್ತಿದ್ದಾರೆ. ಬೇಸಿಗೆ ಬಿಸಿಲಿನ ಹೊಡೆತಕ್ಕೆ ತತ್ತರಿಸಿರುವ ಜನರು ಗೋಲಿ ಸೋಡಾ ಸೇರಿದಂತೆ ತಂಪು ಪಾನೀಯಗಳ ಕಡೆಗೆ ತಿರುಗಿದ್ದಾರೆ.
ಬಿಸಿಲಿನ ತೀವ್ರತೆ ಹೆಚ್ಚಾಗಿರುವುದರಿಂದ ದೇಹವನ್ನು ತಣ್ಣಗಾಗಿಸಿಕೊಳ್ಳಲು ಗೋಲಿ ಸೋಡಾ ಕುಡಿಯುತ್ತೇವೆ. ಬೇರೆ ಪಾನೀಯಗಳಿಗಿಂತ ದರ ಸ್ವಲ್ಪ ಕಡಿಮೆ ಇರುವುದರಿಂದ ಜೊತೆಗೆ ಜೀರ್ಣವಾಗುವುದರಿಂದ ಇದನ್ನು ಸೇವಿಸುತ್ತಿದ್ದೇವೆ.
-ಸೋಮಶೇಖರ್, ಗ್ರಾಹಕ
ಬೇಸಿಗೆಯಲ್ಲಿ ಗೋಲಿ ಸೋಡಾಗೆ ಬೇಡಿಕೆ ಹೆಚ್ಚು. ಜನರು ದಾಹ ತಣಿಸಲು ಗೋಲಿ ಸೋಡಾದ ಕುಡಿಯುವುದರಿಂದ ಈ ಸಮಯದಲ್ಲೇ ನಮಗೆ ಹೆಚ್ಚಿನ ವ್ಯಾಪಾರವಾಗಿ ಹಣ ಉಳಿತಾಯವಾಗುತ್ತದೆ.
-ಅನಿಲ್ ಕುಮಾರ್, ವ್ಯಾಪಾರಿ