Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಐಷರಾಮಿ ರೈಲು, ನಿಲ್ದಾಣಗಳಿಂದ ದೇಶದ...

ಐಷರಾಮಿ ರೈಲು, ನಿಲ್ದಾಣಗಳಿಂದ ದೇಶದ ಬಡಜನರಿಗೇನು ಪ್ರಯೋಜನ?

ಚಂದ್ರಕಾಂತ್ ಎನ್.ಚಂದ್ರಕಾಂತ್ ಎನ್.24 April 2024 11:08 AM IST
share
ಐಷರಾಮಿ ರೈಲು, ನಿಲ್ದಾಣಗಳಿಂದ ದೇಶದ ಬಡಜನರಿಗೇನು ಪ್ರಯೋಜನ?
ಇವರ ಉದ್ದೇಶ ಇಷ್ಟೆ. ಪ್ರಚಾರ ಅಬ್ಬರದ್ದಾಗಿರಬೇಕು. ಝಗಮಗ ಎನ್ನಿಸಬೇಕು. ಹೊರಗಿಂದ ನೋಡುವಾಗ ಜನರಿಗೆ ವಿಕಾಸ ಆಯಿತು ಅನ್ನಿಸಬೇಕು. ಅಷ್ಟಾದ ಬಳಿಕ ಎಲ್ಲವೂ ಹಾಳುಬಿದ್ದು ಹೋದರೂ ತೊಂದರೆಯಿಲ್ಲ, ಚಿಂತೆಯಿಲ್ಲ. ಆದರೆ ಬಡವರಿಗೆ ನಯಾಪೈಸೆಯಷ್ಟು ಉಪಯೋಗವೂ ಇಲ್ಲದ ಇಂತಹ ಯೋಜನೆಗಳಿಗಾಗಿ ಇಷ್ಟು ತರಾತುರಿಯಲ್ಲಿ ಇಷ್ಟೊಂದು ಕೋಟಿ ಹಣವನ್ನು ಖರ್ಚು ಮಾಡುವ ಜರೂರು ಏನಿತ್ತು?

ಬಿಜೆಪಿಯ ಪ್ರಚಾರ ವೈಖರಿ ನೋಡಿದರೆ ಇಡೀ ಭಾರತೀಯ ರೈಲ್ವೆಯಲ್ಲಿ ಈಗ ಎಲ್ಲವೂ ವಂದೇ ಭಾರತ್ ರೈಲುಗಳೇ ಎಂದು ಯಾರಾದರೂ ತಿಳಿದುಕೊಳ್ಳುವ ಸಾಧ್ಯತೆ ಇದೆ. ಆದರೆ ಭಾರತೀಯ ರೈಲ್ವೆಯ ನೈಜಸ್ಥಿತಿ ಹಾಗಿದೆಯೇ?

ಅಷ್ಟಕ್ಕೂ ಭಾರತೀಯ ರೈಲ್ವೆಯ ಬಗ್ಗೆ ಜನರಿಗೆ ತೋರಿಸಲಾಗುತ್ತಿರುವುದು ಕಣ್ಣು ಕೋರೈಸುವ ಚಿತ್ರ. ಆದರೆ ಒಳಗಿನ ಕತ್ತಲೆ ಬೇರೆಯೇ ಇದೆ, ಮತ್ತದನ್ನು ಮರೆಮಾಚುತ್ತಲೇ ಬರಲಾಗಿದೆ.

ವಂದೇ ಭಾರತ್ ರೈಲುಗಳ ಸಂಖ್ಯೆ ನೂರರೊಳಗೇ ಇದ್ದರೂ, ಅವುಗಳ ಬಗ್ಗೆಯೇ ಎಲ್ಲೆಡೆ ಭಾರೀ ಚರ್ಚೆ ಮತ್ತು ಪ್ರಚಾರ ನಡೆಯುತ್ತಿದೆ. ಆದರೆ ಕೋಟ್ಯಂತರ ಜನರು ಬಳಸುವ ಇತರ ಸಾವಿರಾರು ರೈಲುಗಳ ವಿಚಾರವಾಗಿ ಮಾತ್ರ ಮಾತೇ ಇಲ್ಲ.

ಬಡವರಿಗೆ, ಜನಸಾಮಾನ್ಯರಿಗೆ ನಯಾಪೈಸೆಯಷ್ಟು ಉಪಯೋಗವೂ ಇಲ್ಲದ ವಂದೇ ಭಾರತ್ ರೈಲಿನಂತಹ ಯೋಜನೆಗಳಿಗಾಗಿ ಇಷ್ಟು ತರಾತುರಿಯಲ್ಲಿ ಇಷ್ಟೊಂದು ಕೋಟಿ ಹಣವನ್ನು ಖರ್ಚು ಮಾಡುವ ಅಗತ್ಯವಿತ್ತೇ?

ಭಾರತೀಯ ರೈಲಿನ ನಿಜವಾದ ಚಿತ್ರ, ಅಲ್ಲಿನ ಕಷ್ಟಗಳು, ಪ್ರಯಾಣಿಕರ ಪರದಾಟಗಳೇ ಬೇರೆ. ಅವುಗಳಲ್ಲಿ ಪ್ರಯಾಣಿಸುವಾಗ ಸೀಟು ಸಿಗದಿದ್ದರೆ, ಸೀಟಿನ ಮೂಲೆ, ಅದು ಸಿಗದಿದ್ದರೆ, ಸೀಟಿನ ಕೆಳಗಡೆ ಕೂತು ಪ್ರಯಾಣಿಸಬೇಕು. ಅಲ್ಲೂ ಜಾಗ ಸಿಗದಿದ್ದರೆ ಕಡೆಗೆ ಬಾಗಿಲಿನ ಬಳಿ ಒಂದಿಷ್ಟು ಸ್ಥಳ ಇರುತ್ತದೆ.

ಆದರೆ ಮಾಧ್ಯಮಗಳಲ್ಲಿ ಇದ್ಯಾವುದೂ ಕಾಣಿಸುವುದಿಲ್ಲ. ದಿಲ್ಲಿಯಲ್ಲಿ ಕುಳಿತ ರೈಲ್ವೆ ಮಂತ್ರಿ ಇದರಲ್ಲೇನೂ ಪ್ರಯಾಣಿಸುವುದಿಲ್ಲ. ಮಾಧ್ಯಮಗಳಲ್ಲಿ ಸುದ್ದಿಯಾಗುವುದು ವಂದೇ ಭಾರತ್ ರೈಲುಗಳ ವೈಭವ ಮಾತ್ರ.

ದೇಶದ ನೂರಕ್ಕೆ 10ರಷ್ಟು ರೈಲುಗಳು ತಡವಾಗಿ ಹೊರಡುತ್ತವೆ. ಸಾಮಾನ್ಯ ರೈಲು ಪ್ರಯಾಣ ದರವೂ ದುಬಾರಿಯಾಗುತ್ತಿದೆ ಎಂದು ವಿಪಕ್ಷಗಳು ಆರೋಪಿಸುತ್ತಲೇ ಇವೆ. ಶೌಚಾಲಯ ದುಸ್ಥಿತಿಯ ಕುರಿತೂ ಆಕ್ಷೇಪಗಳಿವೆ. ರೈಲು ಸಂಬಂಧಿತ ದುರಂತಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಬಡವರು ಪ್ರಯಾಣಿಸುವ ರೈಲಿನ ದುಸ್ಥಿತಿ ಅದರಲ್ಲಿ ಓಡಾಡುವವರಿಗಷ್ಟೇ ಗೊತ್ತು. ಆ ವಾಸ್ತವವನ್ನು ಜನರ ಕಣ್ಣಿಂದ ಮರೆಮಾಚಲಾಗುತ್ತಿದೆ. ಯಾವಾಗಲೂ ಮೋದಿ ವಂದೇ ಭಾರತ್ ರೈಲು ಉದ್ಘಾಟಿಸುವುದು ಮತ್ತು ಪ್ರಚಾರ ಮಾಡುವುದು ಮಾತ್ರವೇ ಕಾಣಿಸುತ್ತದೆ, ದೊಡ್ಡ ಸುದ್ದಿಯಾಗುತ್ತಿರುತ್ತದೆ.

ಸಾವಿರಕ್ಕೂ ಹೆಚ್ಚು ರೈಲ್ವೆ ಸ್ಟೇಷನ್‌ಗಳನ್ನು ಭವ್ಯಗೊಳಿಸಲು, ಆಧುನೀಕರಣಗೊಳಿಸಲು ಗಮನ ಕೊಡಲಾಗಿದೆ ಮತ್ತು ಆ ಕೆಲಸ ಕೂಡ ನಡೆಯುತ್ತಾ ಇದೆ. ಪ್ರತೀ ರೈಲು ನಿಲ್ದಾಣದ ಮೇಲೂ ಕೆಲವು ನೂರು ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಆದರೆ ರೈಲ್ವೆ ನಿಲ್ದಾಣ ವಿಮಾನ ನಿಲ್ದಾಣ ಹಾಗೆ ಆಗುವ ಅಗತ್ಯ ಇದೆಯೇ ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಆ ಪ್ರಶ್ನೆ ಕೇಳಬೇಕಾದ ಮಡಿಲ ಮಾಧ್ಯಮಗಳು ಬಾಯ್ಮುಚ್ಚಿಕೊಂಡಿವೆ.

ಮೋದಿ ಸರಕಾರ ಬಂದ ಈ 10 ವರ್ಷಗಳಲ್ಲಿ ಸೇಡಿನ ಮತ್ತು ದ್ವೇಷದ ರಾಜಕೀಯವೂ ಜೋರಾಗಿಯೇ ಇದೆ. ಅದು ರೈಲ್ವೆ ವಿಷಯವನ್ನೂ ಹೊರತಾಗಿಲ್ಲ.

ಅದಕ್ಕೆ ಒಂದು ಉದಾಹರಣೆಯೆಂದರೆ, ಇಷ್ಟು ವರ್ಷಗಳಲ್ಲಿ ರೈಲ್ವೆ ವಿಚಾರದಲ್ಲಿ ಬಿಹಾರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿರುವುದು. ಪಾಟ್ನಾ ರೈಲು ನಿಲ್ದಾಣದ ಅವಸ್ಥೆ ಏಕೆ ಹಾಗೆಯೇ ಇದೆ? ಯಾಕೆ ಅದನ್ನೂ ಬಿಹಾರದ ಇತರ ನಿಲ್ದಾಣಗಳನ್ನೂ ಭೋಪಾಲ್‌ನ ರಾಣಿ ಕಮಲಾಪತಿ ಸ್ಟೇಷನ್ ಮಾದರಿಯಲ್ಲೇ ಭವ್ಯವಾಗಿಸಲಿಲ್ಲ?

ಹೀಗೆಯೇ ಮಂಗಳೂರಿನ ರೈಲು ನಿಲ್ದಾಣ ಅತ್ಯಾಧುನಿಕವಾಗಲಿದೆ ಎಂದು ಹೇಳಲಾಗುತ್ತಿದೆ. ಯಾವಾಗ ಎಂದು ಗೊತ್ತಿಲ್ಲ.

ವಂದೇ ಭಾರತ್ ರೈಲಿನ ಬಗ್ಗೆ ಬಿಜೆಪಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ 36 ನಿಮಿಷಕ್ಕೂ ಹೆಚ್ಚು ಸಮಯದ ವೀಡಿಯೊ ಒಂದನ್ನು ಹಾಕಿದೆ. ರೈಲ್ವೆಯ ಬಗ್ಗೆ ಹೇಳುವ ಈ ವೀಡಿಯೊ ಹೇಗೆ ಎಲ್ಲವನ್ನೂ ಬಿಂಬಿಸಿದೆ ಎಂದರೆ, ಈಗಾಗಲೇ ಪ್ರತಿಯೊಬ್ಬರೂ ಬುಲೆಟ್ ಟ್ರೈನಿನಲ್ಲಿಯೇ ಪ್ರಯಾಣ ಮಾಡುತ್ತಿದ್ದಾರೆ ಅನ್ನುವ ಹಾಗೆ. ಆದರೆ ಬುಲೆಟ್ ಟ್ರೈನ್ ಇನ್ನೂ ದೇಶಕ್ಕೆ ಬಂದೇ ಇಲ್ಲ. ಅದು ಬರುವುದು ಯಾವ ಕಾಲಕ್ಕೋ ಗೊತ್ತಿಲ್ಲ

ಆ ವೀಡಿಯೊದಲ್ಲಿ, ದೊಡ್ಡ ದೊಡ್ಡ ಅಂತರ್‌ರಾಷ್ಟ್ರೀಯ ಏರ್‌ಪೋರ್ಟ್‌ಗಳಿಗೆ ಅಲ್ಲಿಂದ ರೈಲುಗಳು ಹೋಗುತ್ತಿವೆಯೇನೊ ಅನ್ನಿಸುವ ಹಾಗೆ ರೈಲು ನಿಲ್ದಾಣಗಳನ್ನು ಚಿತ್ರೀಕರಿಸಲಾಗಿದೆ.

ಅದರಲ್ಲಿ ತೋರಿಸಲಾಗಿರುವ ನಿಲ್ದಾಣದಲ್ಲಿ ಜನರೇ ಇಲ್ಲ. ಅಲ್ಲೊಬ್ಬ ಆ್ಯಂಕರ್ ಆ ನಿಲ್ದಾಣದ ವೈಭವದ ಬಗ್ಗೆ ಹೇಳುತ್ತ ಹೋಗುವುದು ಮಾತ್ರ ಇದೆ. ಇಂತಹದೊಂದು ರೈಲು ನಿಲ್ದಾಣವನ್ನು ಭಾರತದಲ್ಲಿ ಮಾಡಲಾಗಿದೆ ಎಂದು ಬಣ್ಣಿಸಲಾಗಿದೆ.

ಈ ವೀಡಿಯೊದಲ್ಲಿ ಭೋಪಾಲ್ ರೈಲು ನಿಲ್ದಾಣವನ್ನೇ ಹೆಚ್ಚು ತೋರಿಸಲಾಗಿದೆ. 2021ರ ನವೆಂಬರ್‌ನಲ್ಲಿ ಪ್ರಧಾನಿ ಭೋಪಾಲ್‌ನಲ್ಲಿ ರಾಣಿ ಕಮಲಾಪತಿ ರೈಲು ನಿಲ್ದಾಣದ ಉದ್ಘಾಟನೆ ಮಾಡಿದ್ದರು. ಅದರ ಚಿತ್ರವನ್ನೇ ಈ ಪ್ರಚಾರ ವೀಡಿಯೊದಲ್ಲಿ ಹೆಚ್ಚು ಬಳಸಲಾಗಿದೆ. 400 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣಗೊಳಿಸಲಾದ ಅದನ್ನು ವಿಶ್ವಮಟ್ಟದ್ದು ಎಂದು ಬಿಂಬಿಸಲಾಗಿದೆ. ಅದರ ಉದ್ಘಾಟನೆಯಾದ ವರ್ಷದ ಬಳಿಕ ಬಂದ ಒಂದು ವರದಿ ಪ್ರಕಾರ, 300 ಕೋಟಿಯಷ್ಟು ಹಣ ಬರೀ ಆ ರೈಲು ನಿಲ್ದಾಣದ ಸುತ್ತಲಿನ ಶಾಪಿಂಗ್ ಕಾಂಪ್ಲೆಕ್ಸ್ ಮತ್ತಿತರ ನಿರ್ಮಾಣಕ್ಕಾಗಿಯೇ ಖರ್ಚಾಗಿದೆ. 100 ಕೋಟಿ ರೂ.ಯಷ್ಟೇ ರೈಲು ನಿಲ್ದಾಣಕ್ಕಾಗಿ ವೆಚ್ಚ ಮಾಡಿರುವುದು.

‘ದೈನಿಕ್ ಭಾಸ್ಕರ್’ನ ಆ ವರದಿಯ ಹೆಡ್‌ಲೈನ್‌ನಲ್ಲಿ, ಈ ವರ್ಲ್ಡ್ ಕ್ಲಾಸ್ ರೈಲ್ವೆ ಸ್ಟೇಷನ್‌ನ ಶೌಚಾಲಯ ಥರ್ಡ್ ಕ್ಲಾಸ್ ಎಂದು ಹೇಳಲಾಗಿದೆ. ಈ ಆಧುನೀಕರಣ ಕೆಲಸದಲ್ಲಿ ಭಾಗಿಯಾಗಿರುವುದು ಒಂದು ಪ್ರೈವೇಟ್ ಕಂಪೆನಿ.

ಆದರೆ ಅದೇ ನಗರದಲ್ಲಿ ಈ ಝಗಮಗ ಎನ್ನುತ್ತಿರುವ ರಾಣಿ ಕಮಲಾಪತಿ ರೈಲುನಿಲ್ದಾಣದಿಂದ ಬರೀ 5 ಕಿ.ಮೀ. ಅಂತರದಲ್ಲೇ ಮತ್ತೊಂದು ರೈಲು ನಿಲ್ದಾಣ ಇದೆ. ಅದರ ಅವ್ಯವಸ್ಥೆ ನೋಡಿದರೆ ವಾಕರಿಕೆ ಬರುವ ಹಾಗಿದೆ. ಆದರೆ ಮೋದಿ ಸರಕಾರ ಮಾತ್ರ ಒಂದೋ ಎರಡೋ ರೈಲು ನಿಲ್ದಾಣಗಳನ್ನು ಝಗಮಗಗೊಳಿಸಿ, ಸಂಪೂರ್ಣ ರೈಲ್ವೆಯನ್ನೇ ಸುಧಾರಿಸಿಬಿಟ್ಟಿರುವ ಹಾಗೆ ಪೋಸು ಕೊಡುತ್ತಿದೆ.

ಈಗ ಒಂದು ಪ್ರಶ್ನೆ. ಈ ದೇಶದಲ್ಲಿ ಕೇವಲ ಒಂದು ರೈಲು ನಿಲ್ದಾಣದ ಮೇಲೆ 400 ಕೋಟಿ ರೂ. ಖರ್ಚು ಮಾಡುವುದು ಸರಿಯೇ? ಮಧ್ಯಪ್ರದೇಶದಂತಹ ಒಂದು ಬಡ ರಾಜ್ಯದಲ್ಲಿ ಒಂದು ರೈಲು ನಿಲ್ದಾಣದ ಮೇಲೆ ರೂ. 400 ಕೋಟಿ ಖರ್ಚು ಮಾಡಲಾಗಿದೆ ಎಂದರೆ ಏನು ಹೇಳಬೇಕು?

ಈ ಹೊಸ ವ್ಯವಸ್ಥೆಯಲ್ಲಿ ಅಲ್ಲಿ ಹೋಗುವ ಜನರು ಪಾರ್ಕಿಂಗ್‌ನಿಂದ ಹಿಡಿದು ಊಟದವರೆಗೆ ಎಲ್ಲದಕ್ಕೂ ಜಾಸ್ತಿ ದುಡ್ಡು ಸುರಿಯಬೇಕು. ಹಾಗಾದರೆ ಬಡವರ ಪಾಲಿಗೆ ಏನು ಬಂದಂತಾಯಿತು?

ಹಾಸ್ಯಾಸ್ಪದವೆಂದರೆ, ಬರುವುದಕ್ಕೂ ಹೋಗುವುದಕ್ಕೂ ಬೇರೆ ಬೇರೆ ಗೇಟ್‌ಗಳಿವೆ ಎನ್ನುವುದನ್ನೇ ಮೀಡಿಯಾಗಳು ಇದರ ಉದ್ಘಾಟನೆ ವೇಳೆ ಭಾರೀ ದೊಡ್ಡ ವಿಚಾರ ಎನ್ನುವ ಹಾಗೆ ಹೇಳಿದವು. ಆದರೆ ಈ ಎರಡು ಗೇಟ್‌ಗಳು ಜನರಿಗೆ ಏನು ಕೊಟ್ಟವೋ ಗೊತ್ತಿಲ್ಲ.

ಕೆಲವೇ ರೈಲು ನಿಲ್ದಾಣಗಳನ್ನು ಏರ್‌ಪೋರ್ಟ್ ಮಾದರಿಯಲ್ಲಿ ಆಧುನೀಕರಣಗೊಳಿಸುವುದು ಮತ್ತು ಅದನ್ನು ರೈಲ್ವೆ ಅಭಿವೃದ್ಧಿಯ ಮಾದರಿ ಎನ್ನುವಂತೆ ಬಿಂಬಿಸುವುದು ಇಂಥದೊಂದು ತಂತ್ರ ಇಲ್ಲಿದೆ. ಹೋಗಿ ಬರುವ ಲಕ್ಷಾಂತರ ಜನರಿಗೆ, ಓಹ್ ಎಷ್ಟೆಲ್ಲ ಅಭಿವೃದ್ಧಿ ಆಗಿದೆ ಅನ್ನಿಸಿಬಿಡಬೇಕು. ಬಿಜೆಪಿಗೆ ಬೇಕಿರುವುದೇ ಅದಲ್ಲವೇ?.

ಇನ್ನು, ಸಣ್ಣ ಸಣ್ಣ ನಗರಗಳಿಗೂ ವಿಮಾನ ಸಂಪರ್ಕ, ಕೈಗೆಟಕುವ ದರದಲ್ಲಿ ಟಿಕೆಟ್ ಎಂದು ಬಿಂಬಿಸಲಾಗಿದ್ದ ಉಡಾನ್ ಯೋಜನೆಯದ್ದು ಮತ್ತೊಂದು ಹಕೀಕತ್ತು.

ಪ್ರಚಾರವೇನೋ ಜೋರಾಗಿಯೇ ಇತ್ತು. ಆದರೆ ನಿಧಾನವಾಗಿ ಅದು ಇದ್ದಲ್ಲೇ ಇಲ್ಲವಾಗುತ್ತಿರುವ ಸುಳಿವುಗಳಿವೆ. ಪ್ರಯಾಗ್ ರಾಜ್ ಏರ್‌ಪೋರ್ಟ್‌ನಿಂದ ಮೂರು ಪಟ್ಟಣಗಳಿಗೆ ವಿಮಾನ ಯಾನ ಬಂದ್ ಆಗಿದೆ ಎಂದು ವರದಿಯಿರುವುದು ಈ ಯೋಜನೆಯ ದುರ್ಗತಿ ಬಗೆಗಿನ ಒಂದು ಉದಾಹರಣೆ.

ಉಡಾನ್ ಯೋಜನೆ ಬಗ್ಗೆ ಅಬ್ಬರದ ಪ್ರಚಾರವಿತ್ತು. ಆದರೆ ಪ್ರಯಾಗ್ ರಾಜ್‌ನಿಂದ ಪುಣೆ, ದಿಲ್ಲಿ, ವಿಲಾಸ್‌ಪುರಗಳಿಗೆ ವಿಮಾನ ಯಾನ ಬಂದ್ ಆಗಿರುವುದು ಮಾತ್ರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುವುದೇ ಇಲ್ಲ.

ರೂ. 250 ಕೋಟಿಗೂ ಹೆಚ್ಚು ಖರ್ಚು ಮಾಡಿ ಕಟ್ಟಲಾದ ಒಂದೊಂದು ವಿಮಾನ ನಿಲ್ದಾಣಗಳೂ ಹೀಗೆ ಬಂದ್ ಆಗಿವೆ.

ಉತ್ತರ ಪ್ರದೇಶದ ಖುಶೀನಗರ್ ಏರ್‌ಪೋರ್ಟ್ ಅನ್ನು ಹೆಸರಲ್ಲಿ ಮಾತ್ರ ಅಂತರ್‌ರಾಷ್ಟ್ರೀಯ ಏರ್‌ಪೋರ್ಟ್ ಎಂದು ಹೆಸರಿಟ್ಟು ತಿಂಗಳಿಂದ ಬಂದ್ ಮಾಡಿಡಲಾಗಿದೆ.

ಇಲ್ಲಿಂದ ಮುಂಬೈಗೆ ವಿಮಾನ ಎನ್ನಲಾಗಿತ್ತು. ಮುಂಬೈಗೆ ವಿಮಾನ ಹಾರಲೇ ಇಲ್ಲ. ಕೋಲ್ಕತಾಕ್ಕೆ ನಾಲ್ಕು ದಿನ ಹಾರಿ ಬಳಿಕ ನಿಂತೇ ಹೋಯಿತು.

ಆಗ್ರಾದಿಂದ ಮೂರು ಪಟ್ಟಣಗಳಿಗೂ ವಿಮಾನ ಹಾರಾಟ ನಿಂತುಹೋಗಿದೆ. ಬರೇಲಿ ವಿಮಾನ ನಿಲ್ದಾಣದ್ದೂ ಅದೇ ಕತೆ. ಹಾಗೆಯೇ ಅಯೋಧ್ಯೆಯಿಂದ ನಾಲ್ಕು ಪಟ್ಟಣಗಳಿಗೆ ವಿಮಾನ ಸೇವೆ ನಿಂತುಹೋಗಿದೆ.

ಉಡಾನ್, ಅಂದರೆ ‘ಉಡೇ ದೇಶ್ ಕಾ ಆಮ್ ನಾಗರಿಕ್’ ಎಂದು ಬಿಜೆಪಿ ಪ್ರಚಾರ ಮಾಡಿದ್ದೇ ಮಾಡಿದ್ದು. ಕಡಿಮೆ ಟಿಕೆಟ್‌ನಲ್ಲಿ ವಿಮಾನ ಪ್ರಯಾಣದ ಆಸೆ ಹುಟ್ಟಿಸಿದ್ದೇ ಹುಟ್ಟಿಸಿದ್ದು. ಕಡೆಗೆ ಅಗತ್ಯ ಜನ ಇಲ್ಲ ಎಂಬಿತ್ಯಾದಿ ನೂರೆಂಟು ನೆಪಗಳು ಶುರುವಾದವು. ಹಾರಾಟವೂ ನಿಂತಿತು. ಕಟ್ಟಲಾಗಿರುವ ವಿಮಾನ ನಿಲ್ದಾಣಗಳು ಬಂದ್ ಆಗಿ ಹಾಳು ಸುರಿಯೋ ಸ್ಥಿತಿಯಿದೆ.

ಇವರ ಉದ್ದೇಶ ಇಷ್ಟೆ. ಪ್ರಚಾರ ಅಬ್ಬರದ್ದಾಗಿರಬೇಕು. ಝಗಮಗ ಎನ್ನಿಸಬೇಕು. ಹೊರಗಿಂದ ನೋಡುವಾಗ ಜನರಿಗೆ ವಿಕಾಸ ಆಯಿತು ಅನ್ನಿಸಬೇಕು. ಅಷ್ಟಾದ ಬಳಿಕ ಎಲ್ಲವೂ ಹಾಳುಬಿದ್ದು ಹೋದರೂ ತೊಂದರೆಯಿಲ್ಲ, ಚಿಂತೆಯಿಲ್ಲ.

ಆದರೆ ಬಡವರಿಗೆ ನಯಾಪೈಸೆಯಷ್ಟು ಉಪಯೋಗವೂ ಇಲ್ಲದ ಇಂತಹ ಯೋಜನೆಗಳಿಗಾಗಿ ಇಷ್ಟು ತರಾತುರಿಯಲ್ಲಿ ಇಷ್ಟೊಂದು ಕೋಟಿ ಹಣವನ್ನು ಖರ್ಚು ಮಾಡುವ ಜರೂರು ಏನಿತ್ತು?

ಬರೀ ಕಟ್ಟಡ ಝಗಮಗ ಗೊಳಿಸಿ, ಲಕ್ಷಾಂತರ ಜನರ ಕಣ್ಣಿಗೆ ಮಂಕುಬೂದಿ ಎರಚಿ, ಅಭಿವೃದ್ಧಿ ಆಗಿಬಿಟ್ಟಿದೆ ಎಂಬ ಭ್ರಮೆಗೆ ಅವರನ್ನೆಲ್ಲ ತಳ್ಳಿ ಲಾಭ ಪಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ.

ಒಂದೆಡೆ ಹೀಗೆಲ್ಲ ಸುಳ್ಳು ಝಗಮಗ ತೋರಿಸಿ, ಜನರೆಲ್ಲ ಬೆರಗಾಗುವ ಹಾಗೆ ಮಾಡಿ ತನ್ನ ಬೇಳೆ ಬೇಯಿಸಿಕೊಳ್ಳುವ ಮೋದಿ ಸರಕಾರ ಇನ್ನೊಂದೆಡೆಯಿಂದ ಹೇಗೆ ಅದೇ ಜನರನ್ನು ಇನ್ನಷ್ಟು ಕಷ್ಟಕ್ಕೆ ತಳ್ಳುತ್ತಿದೆ ಎಂಬ ವಿಚಾರವನ್ನು ಗಮನಿಸಬೇಕು.

ಹಿರಿಯ ನಾಗರಿಕರಿಗಿದ್ದ ಟಿಕೆಟ್ ದರದಲ್ಲಿನ ರಿಯಾಯಿತಿಯನ್ನು ಸರಕಾರ ರದ್ದು ಮಾಡಿದೆ. ಅದರಿಂದ ಬರೀ ಒಂದೇ ವರ್ಷದಲ್ಲಿ ರೈಲ್ವೆ ಗಳಿಸಿದ ಮೊತ್ತವೇ 2,242 ಕೋಟಿ ರೂ. ಎಂದು ವರದಿಗಳಿವೆ.

ಇದು ಮೋದಿ ಸರಕಾರ ಮಾಡಿರುವ ಲೂಟಿ ಎಂದು ಖರ್ಗೆ ಟೀಕಿಸಿದ್ಧಾರೆ.

ಈ ಎಪ್ರಿಲ್‌ನಲ್ಲಿನ ವರದಿ ಪ್ರಕಾರ, 2020ರ ಮಾರ್ಚ್ ನಿಂದ ಹಿರಿಯ ನಾಗರಿಕರ ರಿಯಾಯಿತಿ ಪ್ರಯಾಣ ದರ ಸೌಲಭ್ಯ ರದ್ದು ಮಾಡುವ ಮೂಲಕ ನಾಲ್ಕು ವರ್ಷಗಳಲ್ಲಿ ರೈಲ್ವೆ ಗಳಿಸಿರುವ ಹೆಚ್ಚುವರಿ ಆದಾಯ 5,800 ಕೋಟಿ ರೂ.

ಕೋವಿಡ್‌ಗೂ ಮೊದಲು ಹಿರಿಯ ನಾಗರಿಕರಿಗೆ ರೈಲ್ವೆ ಶೇ.40ರಷ್ಟು ರಿಯಾಯಿತಿ ಕೊಡುತ್ತಿತ್ತು. ಆದರೆ ಇದಾವುದರ ಬಗ್ಗೆಯೂ ಎಲ್ಲಿಯೂ ಚರ್ಚೆಯಾಗುತ್ತಿಲ್ಲ.

ಪ್ಯಾಸೆಂಜರ್ ರೈಲುಗಳನ್ನು ಎಕ್ಸ್‌ಪ್ರೆಸ್ ರೈಲುಗಳೆಂದು ಹೆಸರು ಬದಲಿಸಲಾಯಿತು. ಅದೇ ಪ್ರಯಾಣದ ಅವಧಿ, ಅಷ್ಟೇ ಸೌಲಭ್ಯಗಳು, ಅಷ್ಟೇ ನಿಲ್ದಾಣಗಳು. ಆದರೆ ಹೆಸರು ಮಾತ್ರ ಎಕ್ಸ್‌ಪ್ರೆಸ್.

ಹೀಗೆ ಎಕ್ಸ್‌ಪ್ರೆಸ್ ಆಗಿರುವುದಕ್ಕೆ ಪ್ರಯಾಣಿಕರ ಜೇಬಿಗೂ ಕತ್ತರಿಯಾಗುವಂತಹ ವ್ಯವಸ್ಥೆ ಶುರು ಮಾಡಲಾಯಿತು. ಎರಡನೇ ದರ್ಜೆಯ ಸಾಮಾನ್ಯ ದರದ ಬದಲಿಗೆ ಎಕ್ಸ್‌ಪ್ರೆಸ್ ದರಗಳನ್ನು ಪ್ರಯಾಣಿಕರು ಕೊಡಬೇಕಿತ್ತು. ಹೆಸರೊಂದನ್ನು ಮಾತ್ರ ಬದಲಿಸಿ, ಅದನ್ನೇ ಅಭಿವೃದ್ಧಿ ಎಂದು ಕರೆದು, ಪ್ರಯಾಣಿಕರು ದುಪ್ಪಟ್ಟು ದುಡ್ಡು ತೆರುವ ಹಾಗೆ ಮಾಡುವುದು ಎಂಥ ನ್ಯಾಯ ಎಂಬ ಪ್ರಶ್ನೆ ಎದ್ದ ಬಳಿಕ ಹೆಚ್ಚಿನ ದರ ನಿರ್ಧಾರ ವಾಪಸ್ ಪಡೆಯಲಾಯಿತು.

ಮೋದಿ ಸರಕಾರ ರೈಲ್ವೆಯನ್ನು ಬರ್ಬಾದ್ ಮಾಡಿದೆ ಎನ್ನುವುದು ಖರ್ಗೆ ಆರೋಪ.

ರೈಲ್ವೆ ನಿಲ್ದಾಣದ ಎದುರು ಇರುವ ಮಾಲ್ ನೋಡಿ, ತಾವು ಶ್ರೀಮಂತರಾದೆವು ಎಂದು ಬಡವರು ಭ್ರಮಿಸಬೇಕಾದ ಸ್ಥಿತಿಯನ್ನು ತಂದಿಟ್ಟು, ಮೋದಿ ಸರಕಾರ ಜನರನ್ನು ವಂಚಿಸುವುದರಲ್ಲಿ ತೊಡಗಿದೆ. ಮಾಲ್‌ಗಳಲ್ಲಿ ಅಂಗಡಿ ಇಟ್ಟುಕೊಂಡವರಿಗೂ ಗೊತ್ತಿದೆ. ಜನ ಬರುತ್ತಾರೆ, ಸುತ್ತಾಡುತ್ತಾರೆ, ಹೋಗುತ್ತಾರೆ, ಖರೀದಿಗೆ ಅವರ ಬಳಿ ಹಣವಿಲ್ಲ.

ಮೋದಿ ಭಾರತದ ಕಥೆಯೂ ಅಷ್ಟೆ. ಮಾಲ್‌ನ ಹಾಗೆಯೇ ಮೋದಿ ಭಾರತ. ಪ್ರಚಾರದಲ್ಲಿ ಝಗಮಗ, ಆದರೆ ಜನರ ಜೇಬಲ್ಲಿ ದುಡ್ಡೇ ಇಲ್ಲ.

ಈಗ ಈ ಚುನಾವಣೆ ಹೊತ್ತಲ್ಲಿ ಜನರು ಯೋಚಿಸಬೇಕಾಗಿದೆ.

ತಮಗೆ ಬೇಕಿರುವುದು ಝಗಮಗಿಸುವ ಇಂತಹ ಮಾಲ್‌ಗಳೇ ಅಥವಾ ತಮ್ಮ ಆರ್ಥಿಕ ಸ್ಥಿತಿ ಸುಧಾರಣೆಯೇ?

ಮತ ಹಾಕುವ ಹೊತ್ತಿನ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾದ ಜವಾಬ್ದಾರಿ ಈಗ ಜನರದ್ದೇ ಆಗಿದೆ.

share
ಚಂದ್ರಕಾಂತ್ ಎನ್.
ಚಂದ್ರಕಾಂತ್ ಎನ್.
Next Story
X