Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಗುಣಾತ್ಮಕ ಶಿಕ್ಷಣಕ್ಕೆ ಕೆಪಿಎಸ್...

ಗುಣಾತ್ಮಕ ಶಿಕ್ಷಣಕ್ಕೆ ಕೆಪಿಎಸ್ ಎನ್ನುತ್ತಿರುವ ಹಿನ್ನೆಲೆಯಲ್ಲಿ, ಶಾಲಾ ಶಿಕ್ಷಣದ ಪುನರ್ರಚನೆ ಹೇಗೆ?

ಡಾ. ನಿರಂಜನಾರಾಧ್ಯ ವಿ.ಪಿ.ಡಾ. ನಿರಂಜನಾರಾಧ್ಯ ವಿ.ಪಿ.11 Dec 2025 12:32 PM IST
share
ಗುಣಾತ್ಮಕ ಶಿಕ್ಷಣಕ್ಕೆ ಕೆಪಿಎಸ್ ಎನ್ನುತ್ತಿರುವ ಹಿನ್ನೆಲೆಯಲ್ಲಿ, ಶಾಲಾ ಶಿಕ್ಷಣದ ಪುನರ್ರಚನೆ ಹೇಗೆ?
ಒಂದು ಅವಲೋಕನ

ಭಾಗ - 1

ಚರ್ಚೆಯ ಹಿನ್ನೆಲೆ:

ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೊದಲು ಬಲವಾಗಿ ವಿರೋಧಿಸಿ ತಿರಸ್ಕರಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು, ಅಧಿಕಾರಕ್ಕೆ ಬಂದ ನಂತರ ಜಾರಿಗೊಳಿಸಲು ಮುಂದಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಿರಸ್ಕರಿಸಿ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಿ ಜಾರಿಗೊಳಿಸುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ಮತ್ತು ಚುನಾವಣಾ ಪ್ರಣಾಳಿಕೆಯನ್ನು ರೂಪಿಸುವ ಸಮಿತಿಯಲ್ಲಿ ಉಪಾಧ್ಯಕ್ಷರಾಗಿದ್ದ ಈಗಿನ ಶಾಲಾ ಶಿಕ್ಷಣ ಸಚಿವರು, ತಮ್ಮ ಸರಕಾರ ರೂಪಿಸಿದ ರಾಜ್ಯ ಶಿಕ್ಷಣ ನೀತಿ (2025)ಯನ್ನು ಧಿಕ್ಕರಿಸಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಿಷ್ಠೆಯಿಂದ ಜಾರಿಮಾಡಲು ಮುಂದಾಗಿರುವುದು ನಿಜಕ್ಕೂ ವಿಷಾದನೀಯ. ತಾನೇ ರೂಪಿಸಿ ಜಾರಿಗೆ ತಂದಿದ್ದ ಶಿಕ್ಷಣ ಹಕ್ಕು ಕಾಯ್ದೆ(2009) ಮತ್ತು ಕರ್ನಾಟಕ ಶಿಕ್ಷಣ ನೀತಿ ಆಯೋಗದ ಮೂಲಕ ತಾನೇ ರಚಿಸಿದ್ದ ರಾಜ್ಯ ಶಿಕ್ಷಣ ನೀತಿಯ (2025) ಶಿಫಾರಸನ್ನು ಗಾಳಿಗೆ ತೂರಿ, ರಾಷ್ಟ್ರೀಯ ಶಿಕ್ಷಣ ನೀತಿಯ (2020) ಪ್ಯಾರಾ 7ರಿಂದ 7.3ರವರೆಗೆ ಪ್ರಸ್ತಾಪಿಸಿರುವ ಶಾಲಾ ಸಂಕೀರ್ಣ ತತ್ವದ ಅಡಿಯಲ್ಲಿ, ರಾಜ್ಯದಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವ ಬರೋಬರಿ 25,683 ಶಾಲೆಗಳನ್ನು 800 ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ (ಕೆಪಿಎಸ್) ಉನ್ನತೀಕರಿಸುವ ಮ್ಯಾಗ್ನೆಟ್ ಶಾಲೆಗಳಲ್ಲಿ ವಿಲೀನಗೊಳಿಸುವ, ಅರ್ಥಾತ್ 25,683 ಶಾಲೆಗಳನ್ನು ಶಾಶ್ವತವಾಗಿ ಮುಚ್ಚಲು ಹೊರಟಿರುವುದು ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ಕರಾಳ ತೀರ್ಮಾನವಾಗಿದೆ.

ಸನ್ಮಾನ್ಯ ಮುಖ್ಯಮಂತ್ರಿಯವರ 2025-26 ನೇ ಸಾಲಿನ ಆಯವ್ಯಯ ಭಾಷಣ ಪ್ಯಾರ ಸಂಖ್ಯೆ 105ರ ಅನ್ವಯ ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವ ಹಂತದವರೆಗೂ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ ನೀಡಲು ಸರಕಾರ ಏಶ್ಯನ್ ಅಭಿವೃದ್ಧಿ ಬ್ಯಾಂಕಿನ ನೆರೆವಿನೊಂದಿಗೆ ರೂ. 2,500 ಕೋಟಿ ನೆರವಿನೊಂದಿಗೆ 500 ಹೊಸ ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸಲು ಪ್ರಸ್ತಾವಿಸಿತ್ತೇ ಹೊರತು, 25,683 ಶಾಲೆಗಳನ್ನು ವಿಲೀನಗೊಳಿಸುವ ಅಥವಾ ಮುಚ್ಚುವ ಪ್ರಸ್ತಾವನೆಯಾಗಲಿ ಅಥವಾ ಸರಕಾರ ದಿನಾಂಕ 15.10.2025ರಂದು ಹೊರಡಿಸಿರುವ ಆದೇಶ ಹೇಳುವಂತೆ 1 ರಿಂದ 5 ಕಿಲೋಮೀಟರ್ ವ್ಯಾಪ್ತಿಯ ಚಿಕ್ಕ ಶಾಲೆಗಳನ್ನು ಕರ್ನಾಟಕ ಸಾರ್ವಜನಿಕ ಶಾಲೆ (ಕೆಪಿಎಸ್)ಗಳೊಂದಿಗೆ ಸುಲಲಿತವಾಗಿ ಸಮ್ಮಿತಗೊಳಿಸುವ ಪ್ರಸ್ತಾವನೆಯಾಗಲಿ ಇರಲಿಲ್ಲ. ಆದ್ದರಿಂದ, ಶಿಕ್ಷಣ ಸಚಿವರ ಪ್ರಸ್ತಾವನೆ ಬಜೆಟ್‌ನಲ್ಲಿನ ಪ್ರಸ್ತಾವನೆಯನ್ನು ತಿಳಿಗೊಳಿಸುವ ಹಾಗೂ ತಿರುಚುವ ಉದ್ದೇಶವಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯು ಶಾಲಾ ಸಂಕೀರ್ಣಗಳ ಮೂಲಕ ಪರಿಣಾಮಕಾರಿ ಸಂಪನ್ಮೂಲಗಳ ಬಳಕೆ ಮತ್ತು ಆಡಳಿತದ ನೆಪವೊಡ್ಡಿ ಲಕ್ಷಾಂತರ ಸರಕಾರಿ ಶಾಲೆಗಳನ್ನು ಕಳೆದ 10 ವರ್ಷಗಳಿಂದ ಮುಚ್ಚುತ್ತಲೇ ಬಂದಿದೆ. ಇದರ ಭಾಗವಾಗಿ, ಜುಲೈ 2022ರಲ್ಲಿ, ಕರ್ನಾಟಕದ ಅಂದಿನ ಬಿಜೆಪಿ ಸರಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದ ಶ್ರೀಯುತ ಬಿ.ಸಿ. ನಾಗೇಶ್‌ರವರು, ರಾಷ್ಟ್ರೀಯ ಶಿಕ್ಷಣ ನೀತಿ (2020)ರ ಅನ್ವಯ ಕಡಿಮೆ ದಾಖಲಾತಿ ಹೊಂದಿರುವ ಸುಮಾರು 13,800 ಸರಕಾರಿ ಶಾಲೆಗಳನ್ನು ‘ಮಾದರಿ ಸರಕಾರಿ ಶಾಲೆ’ಗಳಲ್ಲಿ ವಿಲೀನಗೊಳಿಸುವ ಯೋಜನೆಯನ್ನು ಘೋಷಿಸಿದ್ದರು. ಸರಕಾರದ ಈ ನಿರ್ಧಾರವನ್ನು ‘ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ’ (PAFRE- ಪಾಫ್ರೆ) ವತಿಯಿಂದ ಬಲವಾಗಿ ವಿರೋಧಿಸಿತ್ತು. ಜೊತೆಗೆ, ಸರಕಾರದ ಈ ನಿರ್ಧಾರವು ವಿದ್ಯಾರ್ಥಿ ಸಂಘಟನೆಗಳು ಮತ್ತು ತಜ್ಞರಿಂದ ಟೀಕೆಗೆ ಗುರಿಯಾಗಿತ್ತು. ಎಲ್ಲಕ್ಕಿಂತ ಮಿಗಿಲಾಗಿ, ಅಂದು ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಪಕ್ಷ ಇದನ್ನು ಬಲವಾಗಿ ವಿರೋಧಿಸಿತ್ತು. ನೆರೆಹೊರೆ ಶಾಲೆಯಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳ ಒದಗಿಸಿ ಗುಣಮಟ್ಟದ ಶಿಕ್ಷಣ ಒದಗಿಸಲು ಹಲವಾರು ದಶಕಗಳಿಂದ ಸೋತಿರುವ ಸರಕಾರಗಳು, ಗುಣಮಟ್ಟದ ಶಿಕ್ಷಣ ನೀಡುವ ಹೆಸರಿನಲ್ಲಿ ಶಾಲೆಗಳನ್ನು ವಿಲೀನಗೊಳಿಸುವುದು ಅಥವಾ ಮುಚ್ಚಲು ಹೊರಟಿರುವುದು ಕೇವಲ ಸುಳ್ಳಿನ ನೆಪವಾಗಿದೆ. ಇದು ಶಿಕ್ಷಣ ಹಕ್ಕಿನ ಘೋರ ಉಲ್ಲಂಘನೆಯಾಗಿದ್ದು ಶಾಲೆ ಬಿಡುವ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂಬುದು ಅಂದಿನ ವಿರೋಧಕ್ಕೆ ಮುಖ್ಯ ಕಾರಣವಾಗಿತ್ತು.

ದುರಂತವೆಂದರೆ, ಅಂದು ವಿರೋಧಿಸಿ ಈಗ ಅಧಿಕಾರದಲ್ಲಿರುವ ಅದೇ ಕಾಂಗ್ರೆಸ್ ಸರಕಾರ, ರಾಜ್ಯದಲ್ಲಿ ಸುಮಾರು 25,683 ಶಾಲೆಗಳನ್ನು 800 ಕೆಪಿಎಸ್ ಶಾಲೆಗಳೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಗೆ ಅತ್ಯಂತ ಬುದ್ಧಿವಂತಿಕೆಯಿಂದ ಆದೇಶ ಹೊರಡಿಸಿದೆ. ಇದು ನೆರೆಹೊರೆಯ ಶಾಲೆಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುವ ‘ಶಿಕ್ಷಣ ಹಕ್ಕು ಕಾಯ್ದೆ’ಯ ಸಂಪೂರ್ಣ ಉಲ್ಲಂಘನೆ ಮಾತ್ರವಲ್ಲದೆ ‘ರಾಜ್ಯ ಶಿಕ್ಷಣ ನೀತಿ’ಯ (ಎಸ್‌ಇಪಿ) ಶಿಫಾರಸಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ.ಸರಕಾರ ಈ ತೀರ್ಮಾನವು ರಾಜ್ಯದಲ್ಲಿ ಸಾರ್ವಜನಿಕ ಶಿಕ್ಷಣವನ್ನು ಸಂಪೂರ್ಣವಾಗಿ ನಾಶ ಮಾಡುತ್ತದೆಯಲ್ಲದೆ ಖಾಸಗೀಕರಣವನ್ನು ಹಳ್ಳಿ ಹಳ್ಳಿಗೂ ವಿಸ್ತರಿಸಲು ನೆರವಾಗುತ್ತದೆ. ಜೊತೆಗೆ, ಈಗಾಗಲೇ ಭಾರೀ ದೊಡ್ಡ ಪ್ರಮಾಣದಲ್ಲಿ ಶಿಕ್ಷಣದ ವ್ಯಾಪಾರ ನಡೆಸುತ್ತಿರುವ ಶಾಸಕರು, ಸಂಸದರು, ಸಚಿವರು ಮತ್ತು ಉದ್ಯಮಿಗಳಿಗೆ ಕೆಂಪು ಹಾಸಿನ ಸ್ವಾಗತವಾಗುತ್ತದೆ.

ಆದೇಶದಲ್ಲಿ ಪ್ರಸ್ತಾವಿಸಿರುವಂತೆ, 25,683 ಶಾಲೆಗಳನ್ನು ಹಂತ ಹಂತವಾಗಿ ಮುಚ್ಚುವ ಸರಕಾರದ ತೀರ್ಮಾನ ಗ್ರಾಮೀಣ ಮಕ್ಕಳ ಶಿಕ್ಷಣದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ. ಅದರಲ್ಲೂ ದಲಿತರು, ಅಲ್ಪಸಂಖ್ಯಾತರು, ದುಡಿಯುವ ವರ್ಗದ ಹಿಂದುಳಿದ ಸಮುದಾಯಕ್ಕೆ ಸೇರಿದ ಮಕ್ಕಳು, ವಿಶೇಷವಾಗಿ ಎಲ್ಲ ಜನವರ್ಗದ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆತಂಕವನ್ನು ನಿರ್ಮಿಸಲಿದೆ. ಶಾಲೆ ಸಮೀಪವಿಲ್ಲದ ಕಾರಣಕ್ಕೆ ಶಾಲೆ ಬಿಡುವ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದು ನಮ್ಮ ಹಿಂದಿನ ಅನುಭವಗಳಿಂದ ತಿಳಿದಿದೆ. ತಜ್ಞ ವರದಿಗಳು ಕೂಡ ಇದನ್ನು ಹೇಳುತ್ತಿವೆ. ಇದು ಖಾಸಗಿ ಶಾಲೆಗಳ ಬೆಳವಣಿಗೆಗೆ ಬಹಳಷ್ಟು ಪೂರಕವಾಗಿದ್ದು ಶಾಲೆ ಮುಚ್ಚಲ್ಪಡುವ ಹಳ್ಳಿಗಳಲ್ಲಿ ಖಾಸಗಿ ಶಾಲೆಗಳು ತಲೆ ಎತ್ತಲಿವೆ. ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ಕೆಪಿಎಸ್ ಶಾಲೆಗಳು ಎಂಬುದರ ಅರ್ಥ ಆ ಭಾಗದಲ್ಲಿ ಹೆಚ್ಚು ಶಾಲೆಗಳು ಮುಚ್ಚಲಿವೆ ಎಂಬುದೇ ಆಗಿದೆ. ಶಾಲೆಯಿಂದ ಹೊರಗುಳಿವ ಮಕ್ಕಳ ಸಂಖ್ಯೆ ಹೆಚ್ಚಾಗಿರುವ ಈ ಭಾಗದಲ್ಲಿ ಸರಕಾರದ ಈ ಕ್ರಮವು ಮತ್ತಷ್ಟು ಹೆಚ್ಚಿನ ಅನಾಹುತವನ್ನು ಸೃಷ್ಟಿಸುವುದರಲ್ಲಿ ಸಂಶಯವಿಲ್ಲ.

ಮುಚ್ಚಲಿರುವ ಶಾಲೆಗಳ ಮಕ್ಕಳು ಸಂಯೋಜನೆಗೊಳಪಡುವ ಕೆಪಿಎಸ್ ಶಾಲೆಗೆ ಹೋಗಲು ಸಾರಿಗೆ ವ್ಯವಸ್ಥೆಯನ್ನು ಮಾಡುವುದಾಗಿ ಸರಕಾರ ಹೇಳುತ್ತಿದೆ. ಇದು ಕೇವಲ ಸಾರಿಗೆಯ ಪ್ರಶ್ನೆಯಲ್ಲ. ಮಕ್ಕಳ ಆತ್ಮವಿಶ್ವಾಸದ ಪ್ರಶ್ನೆ. ಅತಿ ಚಿಕ್ಕ ವಯಸ್ಸಿನಲ್ಲೇ ತಮ್ಮ ಸ್ವಂತ ಊರು, ತಮ್ಮ ಸುತ್ತಲಿನ ಪರಿಚಿತ ಸಾಮಾಜಿಕ ವಾತಾವರಣ ಹಾಗೂ ಕಲಿಕೆಗೆ ಪೂರಕವಾಗುವ ಜನಸಮುದಾಯವನ್ನು ಬಿಟ್ಟು ಹೊರಹೋಗಬೇಕಿರುವ ಸ್ಥಿತಿ ಮಕ್ಕಳ ಮನೋಸ್ಥೈರ್ಯವನ್ನು ಕುಂದಿಸುತ್ತದೆ. ಅದೂ ಚಿಕ್ಕ ಮಕ್ಕಳಲ್ಲಂತೂ ಭಯವನ್ನು ತುಂಬಲಿದೆ. ಇದು ತನ್ನ ಪರಿಸರದ ಕೊಳವೊಂದರಲ್ಲಿ ಸುಂದರವಾಗಿ ಈಜಬಲ್ಲ ಮೀನಿಗೆ ಸಮುದ್ರದ ಆಸೆ ತೋರಿ ಹೊರಗೆ ಹಾಕುವ ಪ್ರಕ್ರಿಯೆಯಾಗಿದೆ. ಮುಂದೊಂದು ದಿನ ಮಗುವಿಗೆ ಅತ್ತ ಸಮುದ್ರವೂ ಇಲ್ಲ, ಇತ್ತ ಇದ್ದ ಚಿಕ್ಕ ಕೊಳವೂ ಇಲ್ಲ ಎಂಬ ಎಡಬಿಡಂಗಿ ಪರಿಸ್ಥಿತಿ ಉಂಟಾಗಲಿದೆ. ಇದು ಅವರು ಶಾಲೆಯನ್ನು ತೊರೆಯಲು ಪ್ರೇರೇಪಿಸುತ್ತದೆ ಮಾತ್ರವಲ್ಲ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುವಲ್ಲೂ ಪಾತ್ರವಹಿಸುತ್ತದೆ. ಕಲಿಕೆಯಲ್ಲಿ ಹಿಂದುಳಿಯುವ ಮಕ್ಕಳು ಶಾಲೆಯಿಂದ ಹೊರತಳ್ಳಲ್ಪಡುತ್ತಾರೆ. ಇದರಿಂದ ಗ್ರಾಮೀಣ ಮಕ್ಕಳು ಗುಣಾತ್ಮಕ ಶಿಕ್ಷಣದಿಂದ ವಂಚಿತರಾಗಲಿದ್ದಾರೆ.

ಕಳೆದ 10 ವರ್ಷದಲ್ಲಿ ದೇಶದಲ್ಲಿ ಹೆಚ್ಚು ಸರಕಾರಿ ಶಾಲೆಗಳನ್ನು ಮುಚ್ಚುವ ಖ್ಯಾತಿಗೆ ಸೇರಿದ ಪಟ್ಟಿಯಲ್ಲಿ ಕರ್ನಾಟಕ 10ನೇ ಸ್ಥಾನ ಪಡೆದಿದೆ. ವಿವರಗಳಿಗೆ ಕೊಟ್ಟಿರುವ ಕೋಷ್ಟಕ ನೋಡಬಹುದು.

ಸರಕಾರದ ಇತ್ತೀಚಿನ ಸುತ್ತೋಲೆ ಕೇವಲ ‘ಸಣ್ಣಗಾತ್ರದ’ ಶಾಲೆಗಳನ್ನು ಮಾಗ್ನೇಟ್ ಶಾಲೆಗಳ (ಕೆಪಿಎಸ್ ಶಾಲೆಗಳು) ಜೊತೆ ಸಂಯೋಜಿಸುವ ಕುರಿತಾಗಿ ಮಾತ್ರ ಹೇಳುತ್ತಿಲ್ಲ. ಬದಲಾಗಿ 6ನೇ ತರಗತಿಯಿಂದಲೇ ವೃತ್ತಿಪರ ತರಬೇತಿಗಳನ್ನು ಆರಂಭಿಸುವ ಕುರಿತು ಹೇಳುತ್ತದೆ. ಈ ತರಬೇತಿಗಳ ಪಠ್ಯಕ್ರಮವನ್ನು ‘ಉದ್ದಿಮೆ ಪಾಲುದಾರರ’ ಸಹಯೋಗದಲ್ಲಿ ಖಾಸಗಿ ಉದ್ಯೋಗಪತಿಗಳ ಜೊತೆ ಸೇರಿ ನಡೆಸಲಾಗುತ್ತದೆ. ವೃತ್ತಿಪರ ತರಬೇತಿಯ ಜಂಟಿ ಪ್ರಮಾಣ ಪತ್ರವನ್ನೂ ನೀಡಲಾಗುತ್ತದೆ ಮತ್ತು ವಿದ್ಯಾರ್ಥಿಗಳಿಗೆ 10 ಮತ್ತು 12ನೇ ತರಗತಿಯಲ್ಲಿ ಶಿಕ್ಷಣದಿಂದ ನಿರ್ಗಮಿಸುವ ಆಯ್ಕೆಗಳನ್ನು ಒದಗಿಸಲಿದೆ. ಅಂದರೆ ಖಾಸಗಿ ಉದ್ಯಮಪತಿಗಳಿಗೆ ಬೇಕಾದ ಕೆಲಸಗಾರರನ್ನು ಸರಕಾರಿ ಶಾಲೆಗಳಲ್ಲಿ ಸಜ್ಜುಗೊಳಿಸಲಾಗುತ್ತದೆ ಮತ್ತು ಆಯಾ ಖಾಸಗಿ ಕಂಪೆನಿಗಳು ಸರಕಾರದ ಜೊತೆಗೂಡಿ ಪ್ರಮಾಣ ಪತ್ರವನ್ನೂ ನೀಡಲಿವೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ಪ್ರಸ್ತಾಪಿಸಿದ್ದ ವೃತ್ತಿಪರ ಶಿಕ್ಷಣದ ಮೂಲ ಕಲ್ಪನೆ ಇದಾಗಿದೆ.

10 ಮತ್ತು 12 ತರಗತಿಗಳ ನಂತರ ನಿರ್ಗಮನ ಆಯ್ಕೆಗಳನ್ನು ತೆರೆಯುವ ಕಾರಣ, ಕೆಳ ಸಮುದಾಯದ ವಿದ್ಯಾರ್ಥಿಗಳು ಖಾಸಗಿ ಕಂಪೆನಿಗಳು ನೀಡಿದ ಪ್ರಮಾಣ ಪತ್ರಗಳ ಆಧಾರದಲ್ಲಿ ಖಾಸಗಿ ಕಂಪೆನಿಗಳಲ್ಲಿ ಮೂರು-ನಾಲ್ಕನೇ ದರ್ಜೆಯ ಕೂಲಿ ಕಾರ್ಮಿಕರಾಗಿ ದುಡಿಯಲಿದ್ದಾರೆ ಈ ಮೂಲಕ ಬಡ, ಅವಕಾಶ ವಂಚಿತ ಮಕ್ಕಳಿಗೆ ಉನ್ನತ ಶಿಕ್ಷಣ, ಗುಣಮಟ್ಟದ ಬದುಕನ್ನು ನಿರಾಕರಿಸಿದಂತಾಗಿದೆ. ಒಂದೆಡೆ ರಾಜ್ಯದಲ್ಲಿರುವ ಒಟ್ಟು ಸರಕಾರಿ ಶಾಲೆಗಳಲ್ಲಿ ಅರ್ಧದಷ್ಟನ್ನು ಮುಚ್ಚುವುದು, ಇನ್ನೊಂದೆಡೆ ಉಳಿದ ಶಾಲೆಗಳಲ್ಲಿ ಓದುವ ಬಡವರ ಮಕ್ಕಳನ್ನು ಶ್ರಮಜೀವಿ ದಿನಗೂಲಿ ಕಾರ್ಮಿಕರನ್ನಾಗಿ ತಯಾರುಮಾಡಿ 10-12 ತರಗತಿಗಳ ನಂತರ ಯಶಸ್ವಿಯಾಗಿ ಹೊರದಬ್ಬುವುದು, ಉಳಿದ ಮೇಲ್ವರ್ಗದ ಶ್ರೀಮಂತರ ಮಕ್ಕಳನ್ನು ಮಾತ್ರ ಉನ್ನತ ಶಿಕ್ಷಣದ ಮೂಲಕ ಪ್ರತಿಷ್ಠಿತ ಶ್ರೇಷ್ಠ ಹುದ್ದೆಗಳಿಗೆ ಅಣಿಗೊಳಿಸುತ್ತದೆ.

ಗುಣಾತ್ಮಕ ಶಿಕ್ಷಣದ ಪ್ರಮಾಣೀಕರಿಸಿದ ಚೌಕಟ್ಟು ಯಾವುದು?

ಗುಣಾತ್ಮಕ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವ ಪ್ರಯತ್ನಗಳು ಸ್ವಾತಂತ್ರ್ಯಪೂರ್ವದಿಂದಲೂ ನಡೆಯುತ್ತಾ ಬಂದಿವೆ. ಇದಕ್ಕೆ ನಿದರ್ಶನವಾಗಿ 1882ರಲ್ಲಿ ಶಿಕ್ಷಣ ಆಯೋಗದ (ಹಂಟರ್ ಆಯೋಗ) ಮುಂದೆ ಹಾಜರಾಗಿ ಸಾಕ್ಷ್ಯಾಧಾರಗಳನ್ನು ಒದಗಿಸಿದ ಜ್ಯೋತಿಬಾ ಫುಲೆಯವರು ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಒತ್ತಾಯಿಸಿದರು. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತಾಯಿ ಸಾವಿತ್ರಿಬಾಯಿ ಫುಲೆಯವರು ಪಟ್ಟಪಾಡನ್ನು ವಿವರಿಸಬೇಕಾಗಿಲ್ಲ. ಸ್ವತಂತ್ರ ಭಾರತದಲ್ಲಿ ಶಿಕ್ಷಣದ ಸಾರ್ವತ್ರೀಕರಣದ ಮಹತ್ವವನ್ನು ಅರಿತ ನಮ್ಮ ಸಂವಿಧಾನ ರಚನಾಕಾರರು ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ನಿರ್ದೇಶಕ ತತ್ವಗಳಡಿಯಲ್ಲಿ ಒಂದು ಕಾಲಮಿತಿಯ ಕಾರ್ಯಕ್ರಮವನ್ನಾಗಿ ಸೇರಿಸಿದರು.

ಮಾನವ ಹಕ್ಕುಗಳ ಇಂದಿನ ಯುಗದಲ್ಲಿ ಶಿಕ್ಷಣ ಎಲ್ಲ ಮಕ್ಕಳ ಮೂಲಭೂತ ಹಕ್ಕೆಂಬುದು ಸಾರ್ವತ್ರಿಕ ಸತ್ಯ. ಇಂದು ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ನೀಡಬೇಕೆಂಬ ಬೇಡಿಕೆ ಕೇವಲ ರಾಷ್ಟ್ರಗಳಿಗೆ ಮಾತ್ರ ಸೀಮಿತವಾಗದೆ ಒಂದು ಜಾಗತಿಕ ವಿಷಯವಾಗಿದೆ. ಜೊತೆಗೆ, ಮಾನವ ಹಕ್ಕುಗಳ ಅವಿಭಾಜ್ಯ ಅಂಗವಾಗಿರುವ ಈ ಶಿಕ್ಷಣದ ಹಕ್ಕು ಪ್ರತಿಯೊಂದು ಮಗುವಿಗೂ ಸಿಗಲೇಬೇಕೆಂಬ ಕೂಗು ಜಾಗತಿಕ ಮಟ್ಟದಲ್ಲಿ ಗಟ್ಟಿಯಾಗುತ್ತಿದೆ. ಈ ಸಂಬಂಧ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹಲವು ಒಪ್ಪಂದಗಳು ಮತ್ತು ಒಡಂಬಡಿಕೆಗಳು ಜಾರಿಗೆ ಬಂದಿವೆ. ಅವುಗಳಲ್ಲಿ ಒಂದು ಮಹತ್ವದ ಒಡಂಬಡಿಕೆಯೆಂದರೆ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ (UNCRC). ಈ ಒಡಂಬಡಿಕೆಯನ್ನು ವಿಶ್ವಸಂಸ್ಥೆಯು ಸದಸ್ಯ ರಾಷ್ಟ್ರಗಳ ಒಪ್ಪಿಗೆಗಾಗಿ 1989 ರಲ್ಲಿ ತೆರೆದಿಟ್ಟಾಗ ಭಾರತ ಸರಕಾರವು ಈ ಒಡಂಬಡಿಕೆಯನ್ನು (ಡಿಸೆಂಬರ್ 1992) ಅಂಗೀಕರಿಸಿದೆ. ಈ ಬೆಳವಣಿಗೆಯ ಭಾಗವಾಗಿ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಸಾಧಿಸುವ ನಿಟ್ಟಿನಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದ ಒತ್ತಡಗಳು ಹೆಚ್ಚುತ್ತಿದ್ದು ಭಾರತ ಇದಕ್ಕೆ ಹೊರತಲ್ಲ.

ಇದರ ಜೊತೆಗೆ ಭಾರತದಲ್ಲಿ ನ್ಯಾಯಾಂಗದ ಕ್ರಿಯಾಶೀಲತೆಯಿಂದಾಗಿ ನಿರ್ದೇಶಕ ತತ್ವದ ಅಡಿಯಲ್ಲಿದ್ದ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒಂದು ಮೂಲಭೂತ ಹಕ್ಕನ್ನಾಗಿ ಘೋಷಿಸಿದ ಸರ್ವೋಚ್ಚ ನ್ಯಾಯಾಲಯವು 1993ರಲ್ಲಿ ಐತಿಹಾಸಿಕ ತೀರ್ಪನ್ನು ನೀಡಿದೆ. ಇಂದು, ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಕಾನೂನುಗಳ ಅನ್ವಯ ಶಿಕ್ಷಣ ಎಲ್ಲ ಮಕ್ಕಳ ಮೂಲಭೂತ ಹಕ್ಕು. ಈ ಮೂಲಭೂತ ಹಕ್ಕನ್ನು ಸಾಕಾರಗೊಳಿಸುವುದು ಪ್ರತಿಯೊಂದು ಸರಕಾರದ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿ.

ಮಾನವ ಹಕ್ಕು ಮತ್ತು ಕಾನೂನಿನ ಪರಿಭಾಷೆಯಲ್ಲಿ ಶಿಕ್ಷಣ ಒಂದು ಮೂಲಭೂತ ಹಕ್ಕಾಗಿದ್ದರೂ ಅದನ್ನು ಸಾಕಾರಗೊಳಿಸಬೇಕಾದ ಸರಕಾರಗಳು ಶಿಕ್ಷಣವನ್ನು ತಮ್ಮ ಅಭಿವೃದ್ಧಿಯ ಭಾಗವೆಂದು ಪರಿಗಣಿಸಿ ಅಗತ್ಯ ಸಂಪನ್ಮೂಲ ಮತ್ತು ಹಣಕಾಸಿನ ನೆರವನ್ನು ಒದಗಿಸುವಲ್ಲಿ ನಿರೀಕ್ಷಿತ ಮಟ್ಟಕ್ಕೆ ಸ್ಪಂದಿಸುತ್ತಿಲ್ಲವೆಂಬುದು ನಾಗರಿಕ ಸಮಾಜಕ್ಕಿರುವ ಆತಂಕ. ಶಿಕ್ಷಣದ ಹಕ್ಕು ಕೇವಲ ಅಕ್ಷರಾಭ್ಯಾಸ ಕಲಿಸಬಹುದಾದ ಶಾಲಾ ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೇ ಎಲ್ಲ ಮಕ್ಕಳಿಗೆ ಸಮಾನ ಗುಣಮಟ್ಟದ ಶಿಕ್ಷಣ ಒದಗಿಸಬಲ್ಲ ಸಮಾನ ಶಾಲಾ ವ್ಯವಸ್ಥೆಯನ್ನು ಕಟ್ಟಿಕೊಳ್ಳುವ ಮೂಲಕ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಆಧಾರದ ಮೇಲೆ ಹೊಸ ಸಮಾಜವನ್ನು ಕಟ್ಟಿಕೊಳ್ಳಬೇಕೆಂಬ ಆಶಯ ನೈಜ ಜನಪರ ಚಳವಳಿಗಳ ಮೂಲಭೂತ ಬೇಡಿಕೆಯಾಗಿದೆ. ಜನರ ಈ ಆಶಯವನ್ನು, ಶಿಕ್ಷಣ ಹಕ್ಕು ಕಾಯ್ದೆ(2009) ತನ್ನ ಉದ್ದೇಶ ಮತ್ತು ಕಾರಣಗಳ ಪೀಠಿಕೆಯ ಪ್ಯಾರ 4ರಲ್ಲಿ ಎತ್ತಿ ಹಿಡಿದಿದೆ.

ನೀತಿ ನಿರೂಪಣೆಗೆ ಸಂಬಂಧಿಸಿದಂತೆ ನಮ್ಮ ನಿರಂತರ ಸಂಶೋಧನೆಯ ಮೂಲಕ ನಾವು ಗುರುತಿಸಿದ ಒಂದು ಪ್ರಮುಖವಾದ ನ್ಯೂನತೆ ಎಂದರೆ , ಕೆಳಹಂತದಲ್ಲಿ ಕೆಲಸ ನಿರ್ವಹಿಸುವ ಮೂಲ ವಾರಸುದಾರರ ಅಭಿಪ್ರಾಯ ಮತ್ತು ಒಲವುಗಳನ್ನು ಆಧರಿಸಿದ ನೀತಿ, ಕಾರ್ಯಕ್ರಮ ಮತ್ತು ಕಾನೂನುಗಳನ್ನು ರೂಪಿಸುವ ಬದಲು ಮೇಲಿನಿಂದ ಕೆಳಗೆ ಒತ್ತಾಯಪೂರ್ವಕವಾಗಿ ಹೇರುವ ಪರಿಪಾಠ. ನಮ್ಮ ಜನ ಪ್ರತಿನಿಧಿಗಳು, ನೀತಿ ನಿರೂಪಕರು ಮತ್ತು ವಿದ್ಯಾವಂತರು ಸಾಮಾನ್ಯವಾಗಿ ಕೆಳಸ್ತರದ ಮೂಲ ವಾರಸುದಾರರನ್ನು ತಿಳಿಗೇಡಿಗಳೆಂದು ಮತ್ತು ಅವರಿಗೆ ನೀತಿ ನಿರೂಪಣೆಗೆ ಅಗತ್ಯವಾದ ಸಲಹೆ ಸೂಚನೆಗಳನ್ನು ನೀಡುವ ಅರ್ಹತೆ ಇಲ್ಲವೆಂದು ಭಾವಿಸುತ್ತಾರೆ.

ಇದಕ್ಕೆ ಹೊರತಾಗಿ, ರಾಜ್ಯದಲ್ಲಿ ಶಾಲಾ ಶಿಕ್ಷಣದಲ್ಲಿ ಕೆಲಸ ನಿರ್ವಹಿಸುತ್ತಿರುವ ಅಭಿವೃದ್ಧಿಪರ ಮೂಲ ವಾರಸುದಾರರು ತಮ್ಮ ಭಾಗವಹಿಸುವ ಮತ್ತು ಸಂಶೋಧನೆಯ ಮೂಲಕ ಕಂಡುಕೊಂಡ ಅಂಶವೆಂದರೆ ಸಮಾನತೆಯ ನೆಲೆಗಟ್ಟಿನಲ್ಲಿ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯೊಂದನ್ನು ಕಟ್ಟಿಕೊಳ್ಳಲು ಅಗತ್ಯವಾದ ಕೊಡುಗೆ ನೀಡಲು ಮೂಲ ವಾರಸುದಾರರು ಶಕ್ತರಿದ್ದಾರೆ. ಅವರ ಜೊತೆ ನಿರಂತರ ಸಮಾಲೋಚಿಸುವ ಮೂಲಕ ನೀತಿ ನಿರೂಪಿಸುವ ಕೆಲಸವನ್ನು ಕೈಗೊಳ್ಳಬೇಕಾಗಿದೆ.

ಈ ಅಂಶಗಳ ಹಿನ್ನೆಲೆಯಲ್ಲಿ ಈ ಲೇಖನವು, ಈಗಿನ ಯಾವುದೇ ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚದೆ, ಶಿಶುಪಾಲನಾ (Child Care) ಹಂತದಿಂದ ಪದವಿ ಪೂರ್ವ ಶಿಕ್ಷಣದವರೆಗೆ ವಿವಿಧ ಹಂತದಲ್ಲಿ ಕರ್ನಾಟಕದ ಶಾಲಾ ಶಿಕ್ಷಣವನ್ನು ಪುನರ‌್ರಚಿಸುವ ವಿಧಿ-ವಿಧಾನಗಳ ಬಗ್ಗೆ ಚರ್ಚಿಸುವ ಆಶಯವನ್ನು ಹೊಂದಿದೆ. ಇಲ್ಲಿ ಪ್ರಸ್ತಾಪಿಸಿರುವ ಎಲ್ಲಾ ಅಂಶಗಳು, ಈ ಹಿಂದೆ ಸನ್ಮಾನ್ಯ ಸಿದ್ದರಾಮಯ್ಯನವರ ಸರಕಾರ ಮೊದಲ ಅವಧಿಯಲ್ಲಿ ಅಧಿಕಾರದಲ್ಲಿದ್ದಾಗ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿಯು, ಸರಕಾರಿ ಶಾಲೆಗಳ ಸಬಲೀಕರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸರಕಾರಿ ಶಾಲೆಗಳ ಸಬಲೀಕರಣ ಸಮಿತಿ ವರದಿಯ(2017) ಶಿಫಾರಸುಗಳೇ ಆಗಿವೆ. ವಿಶೇಷವೆಂದರೆ, ಈ ವರದಿಯನ್ನು ಸ್ವತಃ ಸನ್ಮಾನ್ಯ ಸಿದ್ದರಾಮಯ್ಯನವರೇ ವಿಧಾನಸೌಧದಲ್ಲಿ ಸೆಪ್ಪಂಬರ್ 2017 ರಂದು ಸ್ವೀಕರಿಸಿ ಜಾರಿಗೊಳಿಸುವ ಭರವಸೆ ನೀಡಿದ್ದರು.

share
ಡಾ. ನಿರಂಜನಾರಾಧ್ಯ ವಿ.ಪಿ.
ಡಾ. ನಿರಂಜನಾರಾಧ್ಯ ವಿ.ಪಿ.
Next Story
X