ಗುಣಾತ್ಮಕ ಶಿಕ್ಷಣಕ್ಕೆ ಕೆಪಿಎಸ್ ಎನ್ನುತ್ತಿರುವ ಹಿನ್ನೆಲೆಯಲ್ಲಿ, ಶಾಲಾ ಶಿಕ್ಷಣದ ಪುನರ‌್ರಚನೆ ಹೇಗೆ?

ಭಾಗ - 2
ಮಕ್ಕಳ ಆರೈಕೆ: ಇಂದಿನ ಸ್ಥಿತಿಗತಿ
ಮಗುವಿನ ಶಿಕ್ಷಣ ಮೊದಲು ಪ್ರಾರಂಭವಾಗುವುದು ಮನೆಯಲ್ಲಿ. ಮಗು ತನ್ನ ತಾಯಿಯ ಮೂಲಕ, ಕುಟುಂಬದ ಪರಿಚಯ ಹೊಂದಿ, ಅವರೊಂದಿಗೆ ಬೆರೆತು, ತನ್ನ ಸಾಮಾಜಿಕ ಪರಿಸರಕ್ಕೆ ಕಾಲಿಡುತ್ತದೆ. ಮಗುವಿಗೆ ಮೂರು ವರ್ಷ ತುಂಬಿದ ಬಳಿಕ ಮಗುವನ್ನು ಅಂಗನವಾಡಿ ಕೇಂದ್ರಕ್ಕೆ ದಾಖಲು ಮಾಡಲಾಗುತ್ತದೆ. ಆದರೆ, ಇಂದಿನ ವ್ಯವಸ್ಥೆಯಲ್ಲಿ ಎಲ್ಲಾ ಮಕ್ಕಳೂ ಅಂಗನವಾಡಿ ಕೇಂದ್ರಗಳಿಗೆ ದಾಖಲಾಗುವುದಿಲ್ಲ. ವಿವಿಧ ವರ್ಗದ ಮಕ್ಕಳಿಗೆ ವಿವಿಧ ಶಿಕ್ಷಣ ಕ್ರಮವನ್ನು ರೂಪಿಸಿಕೊಂಡಿರುವ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಪೂರ್ವ-ಪೂರ್ವ ಪ್ರಾಥಮಿಕ (ನರ್ಸರಿ), ಪೂರ್ವ- ಪ್ರಾಥಮಿಕ, ಲೋವರ್ ಕಿಂಡರ್‌ಗಾರ್ಡನ್ (ಎಲ್‌ಕೆಜಿ), ಅಪ್ಪರ್ ಕಿಂಡರ್‌ಗಾರ್ಡನ್ (ಯುಕೆಜಿ), ಮಾಂಟೆಸರಿ ಇತ್ಯಾದಿ ವ್ಯವಸ್ಥೆಯಲ್ಲಿ ಮಕ್ಕಳು ದಾಖಲಾಗುತ್ತಾರೆ. ಮಕ್ಕಳನ್ನು ವಿಭಜಿಸುವ ಕ್ರೂರ ವ್ಯವಸ್ಥೆ ಇಲ್ಲಿಂದಲೇ ರೂಪುಗೊಂಡು ಸಮಾನ ಶಾಲಾ ಶಿಕ್ಷಣದ ಕನಸಿನ ತಳಹದಿಯೇ ಬಿರುಕು ಬಿಟ್ಟಂತಾಗುತ್ತದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಡೆಸಲ್ಪಡುವ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳನ್ನು ನೋಡಿಕೊಳ್ಳಲು ನೇಮಿಸಲಾಗುವ ಬಹುತೇಕ ಕಾರ್ಯಕರ್ತೆಯರಿಗೆ ಯಾವುದೇ ಕಡ್ಡಾಯ ಸೇವಾ ಪೂರ್ವ ತರಬೇತಿ ನಿಗದಿಗೊಳಿಸಿರುವುದಿಲ್ಲ. ಇವರ ಆಯ್ಕೆಗೆ 10 ಅಥವಾ 12ನೇ ತರಗತಿ ಶಿಕ್ಷಣವನ್ನು ಪರಿಗಣಿಸಲಾಗುತ್ತದೆ. ಅಂಗನವಾಡಿ ಕೇಂದ್ರಗಳಲ್ಲಿ ರೂಢಿಗತವಲ್ಲದ ಶಾಲಾಪೂರ್ವ ಶಿಕ್ಷಣ ನೀಡಲಾಗುತ್ತಿದೆ. ಈ ಶಿಕ್ಷಣವು ಅಂಗನವಾಡಿ ಕೇಂದ್ರಗಳಲ್ಲಿರುವ ವಿವಿಧ ವಯೋಮಾನದ ಮಕ್ಕಳಿಗೆ ಅವರ ಸಾಮರ್ಥ್ಯಕ್ಕನುಗುಣವಾಗಿ ಕಲಿಕಾಸಕ್ತಿಯನ್ನು ಉದ್ದೀಪನಗೊಳಿಸುವಂತಹ ಹಾಗೂ ಮುಂದಿನ ಶೈಕ್ಷಣಿಕ ಹಂತವಾದ ಪ್ರಾಥಮಿಕ ಶಿಕ್ಷಣಕ್ಕೆ ಮಗುವನ್ನು ಅಣಿಗೊಳಿಸುವಂತಹ ಚಟುವಟಿಕೆಗಳನ್ನು ಕಾರ್ಯಗತಗೊಳಿಸುತ್ತಿಲ್ಲ. ಹೀಗಾಗಿ, ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಿಕ್ಷಣಕ್ಕೆ ಸಾವಯವ (organic) ಸಂಬಂಧವೇ ಇಲ್ಲದಂತಾಗಿದೆ.
ಪ್ರಸ್ತುತ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳಲ್ಲಿ ಬಹುತೇಕ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. ಆಯಾ ಗ್ರಾಮದ ಪರಿಸರಕ್ಕನುಗುಣವಾಗಿ ಬಾಡಿಗೆ ಅಥವಾ ದಾನಿಗಳ ಕೊಡುಗೆಯ ಕಟ್ಟಡಗಳಲ್ಲಿ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಇನ್ನು ಹಾಲಿ ಇರುವ ಬಹುತೇಕ ಕಟ್ಟಡಗಳಲ್ಲಿ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಸುಸಜ್ಜಿತ ಅಡುಗೆ ಮನೆ ಸಹಿತ ಊಟದ ಕೋಣೆ, ಮಧ್ಯಾಹ್ನ ಮಕ್ಕಳು ಮಲಗಲು ಸೂಕ್ತ ವ್ಯವಸ್ಥೆಗಳನ್ನು ಹೊಂದಿರುವುದಿಲ್ಲ.
ವಾಸ್ತವಿಕವಾಗಿ, ಅಂಗನವಾಡಿ ಕಾರ್ಯಕರ್ತೆಯರು ಮಗುವಿನ ಆರೋಗ್ಯ, ಪೌಷ್ಟಿಕತೆ, ಆರೈಕೆ ಮತ್ತು ಅಭಿವೃದ್ಧಿಗೆ ಹೆಚ್ಚು ಗಮನ ಹರಿಸುವುದು ಮುಖ್ಯ. ಇದರ ಭಾಗವಾಗಿ ಸ್ತ್ರೀ ಗರ್ಭಧರಿಸಿದಂದಿನಿಂದ ಹಿಡಿದು ಜನನದವರೆಗೆ ಮತ್ತು ನಂತರ ಎದೆ ಹಾಲಿನ ಪ್ರಾಮುಖ್ಯತೆ, ಪೋಲಿಯೊ ಲಸಿಕೆ, ಚುಚ್ಚುಮದ್ದು, ಕ್ಷಯರೋಗ, ಎಚ್.ಐ.ವಿ ಸೋಂಕಿನ ಬಗೆಗಿನ ಮಾಹಿತಿ ಇತ್ಯಾದಿಗಳ ಬಗ್ಗೆ ಗಮನ ಹರಿಸಿ ಕೆಲಸಮಾಡಬೇಕು. ಆದರೆ ಅಂಗನವಾಡಿ ಕಾರ್ಯಕರ್ತೆಯರು ವಾಸ್ತವಿಕವಾಗಿ ಜಾತಿ ಹಾಗೂ ಜಾನುವಾರು ಗಣತಿ, ಚುನಾವಣಾ ಕೆಲಸ, ಸ್ತ್ರೀಶಕ್ತಿ ಸಂಘ, ಕಿಶೋರಿಯರಿಗೆ ಮಾಹಿತಿ ಇನ್ನೂ ಮುಂತಾದ ಮಕ್ಕಳ ಅಭಿವೃದ್ಧಿಯೇತರ ಕಾರ್ಯಗಳ ಜೊತೆಗೆ ಮಕ್ಕಳ ಆರೋಗ್ಯ, ಆರೈಕೆ ಮತ್ತು ಶೈಕ್ಷಣಿಕ ಚಟುವಟಿಕೆಗಳತ್ತ ಗಮನ ನೀಡುವುದು ಕಷ್ಟಸಾಧ್ಯವಾದ ಕೆಲಸವಾಗಿದೆ.
ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸರಿಯಾದ ಸಂಬಳ, ಸೇವಾಭದ್ರತೆ, ಆರೋಗ್ಯ ವಿಮೆ, ಪಿಂಚಣಿ ಸೌಲಭ್ಯ ಇತ್ಯಾದಿಗಳ ಅವಕಾಶಗಳಿಲ್ಲ. ತಮ್ಮ ಜೀವನಕ್ಕೆ ಭದ್ರತೆಯಿಲ್ಲದ ಈ ಕಾರ್ಯಕರ್ತೆಯರಿಂದ ಮಕ್ಕಳ ಅಭಿವೃದ್ಧಿ ಯಾವ ರೀತಿ ಸಿಗಬಹುದು? ಮಿಗಿಲಾಗಿ, ಸರ್ವಾಂಗೀಣ ಅಭಿವೃದ್ಧಿಗೆ ಬೇಕಾಗುವ ಪೂರಕ ಆರೈಕೆ ಮತ್ತು ಶಿಕ್ಷಣ ಸಿಗಲು ಸಾಧ್ಯವಾಗುವುದಿಲ್ಲ.
ಮೇಲಿನ ಕಾರಣಗಳಿಂದ ಅಂಗನವಾಡಿಗಳಲ್ಲಿ ಪರಿಪೂರ್ಣ ಶಾಲಾಪೂರ್ವ ಶಿಕ್ಷಣ ಮಕ್ಕಳಿಗೆ ಸಿಗುತ್ತಿಲ್ಲ. ಜೊತೆಗೆ ಅಂಗನವಾಡಿ ಮತ್ತು ಪ್ರಾಥಮಿಕ ಶಿಕ್ಷಣ ಬೇರೆ ಬೇರೆ ಇಲಾಖೆಗಳ ಕಾರ್ಯಕ್ರಮವಾಗಿದ್ದು ಸಮನ್ವಯ ಮತ್ತು ಸಾವಯವ ಸಂಬಂಧದ ಬದಲು ಸಮಾನಾಂತರ ಮತ್ತು ಪ್ರತ್ಯೇಕತೆಯಿಂದ ನಡೆಯುತ್ತಿವೆ. ಪ್ರಾಥಮಿಕ ಶಿಕ್ಷಣದ ಅವಿಭಾಜ್ಯ ಅಂಗವಾಗಬೇಕಿದ್ದ ಶಾಲಾಪೂರ್ವ ಶಿಕ್ಷಣ ದಿಕ್ಕುದೆಸೆಯಿಲ್ಲದೆ ಸಾಗಿದೆ.
ಪ್ರಾರಂಭಿಕ ಆರೈಕೆಯ ಶಿಶುಪಾಲನಾ ಕೇಂದ್ರಗಳು
ಆರಂಭಿಕ ಬಾಲ್ಯದ ಬೆಳವಣಿಗೆ ಹುಟ್ಟಿನಿಂದ 3+ ವರ್ಷ ವಯಸ್ಸಿನ ಮಕ್ಕಳ ಬೆಳವಣಿಗೆ ಹಾಗೂ ಅಗತ್ಯಗಳಿಗೆ ಸಂಬಂಧಿಸಿದೆ. ಕುಟುಂಬ ಹಾಗು ಸಮುದಾಯಗಳು ಮಕ್ಕಳ ಈ ಅಗತ್ಯಕ್ಕೆ ಸ್ವಲ್ಪ ಮಟ್ಟಿನ ಒತ್ತು ನೀಡುತ್ತವೆ. ಮಕ್ಕಳ ಆರೋಗ್ಯ, ಪೌಷ್ಟಿಕತೆ, ಅರಿವು, ಸಾಮಾಜೀಕರಣ ಹಾಗೂ ಭಾವನಾತ್ಮಕ ಸಾಮಾರ್ಥ್ಯಗಳಿಗೆ ಒತ್ತು ನೀಡುವ ನೀತಿಯೊಂದನ್ನು ರೂಪಿಸುವುದರ ಮೂಲಕ ಅವರ ಅಭಿವೃದ್ಧಿಗೆ ಸಹಾಯಕವಾಗುವ ಪಾತ್ರವನ್ನು ಸರಕಾರಗಳು ವಹಿಸಬೇಕಾಗುತ್ತದೆ. ಪ್ರಾರಂಭದಲ್ಲಿ ಮಕ್ಕಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳು ಅವರ ಕುಟುಂಬ ಹಾಗೂ ಸಮುದಾಯಗಳಿಂದ ರೂಪಿತವಾಗುತ್ತವೆ. ಇದರ ಜೊತೆಗೆ ಮಗುವಿನ ಸರ್ವಾಂಗೀಣ ಬೆಳವಣಿಗೆಯನ್ನು ವರ್ಧಿಸುವ ಸಾಮಾಜಿಕ-ಸಾಂಸ್ಕೃತಿಕ ಪರಿಸರಗಳು ಸೃಷ್ಟಿಯಾಗಬೇಕು. ಮಕ್ಕಳನ್ನು ಪಾಲನೆ ಮಾಡುವ ಸಾಂಪ್ರದಾಯಿಕ ರೂಢಿಗಳನ್ನು ಅರ್ಥ ಮಾಡಿಕೊಳ್ಳಬೇಕು. ಈ ಮೂಲಕ ಕುಟುಂಬಗಳಲ್ಲಿ ಮಕ್ಕಳು ಶಾಲೆಗೆ ಹೋಗುವುದನ್ನು ಉತ್ತೇಜಿಸುವುದು, ಆರೋಗ್ಯ ಹಾಗೂ ಉತ್ತಮ ಪೌಷ್ಟಿಕತೆಯೊಂದಿಗೆ ಬೌದ್ಧಿಕವಾಗಿಯೂ ಕುತೂಹಲಕಾರಿಯಾಗುವಂತೆ ಮಾಡುವುದು, ಸಮಾಜದಲ್ಲಿ ದಿಟ್ಟವಾಗಿರುವುದು, ಜೀವನ ಪರ್ಯಂತದ ಕಲಿಕೆಗೆ ಒಂದು ಗಟ್ಟಿಯಾದ ಅಡಿಪಾಯವನ್ನು ಹಾಕಿಕೊಡುವುದು ಸಾಧ್ಯವಾಗುತ್ತದೆ.
ಶಿಶು ಪಾಲನಾ ಕೇಂದ್ರಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಆರೈಕೆ; ಮಕ್ಕಳ ಅಕಾಲಿಕ ಮರಣ; ನವಜಾತ ಶಿಶುವಿನ ಧನುರ್ವಾಯುವಿನ ಸೆಳೆತದಿಂದ ಉಂಟಾದ ಅತಿಸಾರ; ಸಕಾಲಿಕ ಚುಚ್ಚುಮದ್ದಿನಿಂದ ತಡೆಗಟ್ಟಬಹುದಾದ ಕಾಯಿಲೆಗಳು; ಕಬ್ಬಿಣಾಂಶ ಕೊರತೆಯಿಂದ ಉಂಟಾದ ರಕ್ತ ಹೀನತೆ; ದೀರ್ಘಕಾಲದ ಅಪೌಷ್ಟಿಕತೆ; ಬೆಳವಣಿಗೆಯಲ್ಲಿ ಕುಂಠಿತ; ಮಗುವಿನ ಮಾನಸಿಕ ಹಾಗೂ ಆರೋಗ್ಯ ಸ್ಥಿತಿಗತಿ ಇತ್ಯಾದಿ ಸಮಸ್ಯೆಗಳಿಗೆ ವ್ಯವಸ್ಥಿತ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಸಹಾಯಕವಾಗುತ್ತದೆ.
ಮಗುವಿನ ಬಾಲ್ಯ ಬಹಳ ಮುಖ್ಯವಾದದ್ದು.ಚಿಕ್ಕಂದಿನಲ್ಲಿ ಮಗು ಕಲಿಯುವಂತಹದು ಕೊನೆಯವರೆಗೂ ಉಳಿಯುವುದರಿಂದ ಈ ಹಂತದಲ್ಲಿ ಮಗುವಿನ ಪಾಲನೆ ಮತ್ತು ಕಲಿಕೆ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಮಗು ಹುಟ್ಟಿದಂದಿನಿಂದ 3+ ವಯೋಮಾನದ ವರೆಗೆ ಶಿಶುಪಾಲನಾ ಕೇಂದ್ರಗಳ ಮೂಲಕ ಅದರ ಬೆಳವಣಿಗೆಗೆ ಉತ್ತಮ ವಾತಾವರಣ ನಿರ್ಮಿಸಬಹುದಾಗಿದೆ. ಹುಟ್ಟಿನಿಂದ 2 ವರ್ಷ ತುಂಬುವವರೆಗೆ ಮಗು ಮನೆಯಲ್ಲಿಯೇ ಕೌಟುಂಬಿಕ ಪರಿಸರದ ಹಿನ್ನೆಲೆಯಲ್ಲಿ ಬೆಳೆಯುತ್ತದೆ. ಈ ಅವಧಿಯಲ್ಲಿ ಮಗುವಿನ ದೈಹಿಕ ಬೆಳವಣಿಗೆ ಮತ್ತು ಆರೋಗ್ಯದ ಕಡೆಗೆ ನಿಗಾವಹಿಸಲು ಜನಸಂಖ್ಯೆಯ ಮಿತಿಗನುಗುಣವಾಗಿ ಆರೋಗ್ಯ ಕಾರ್ಯಕರ್ತೆಯರನ್ನು ನೇಮಕ ಮಾಡಿ, ರೋಗ ನಿರೋಧಕ ಲಸಿಕೆಗಳನ್ನು ಕಾಲ ಕಾಲಕ್ಕೆ ಸರಕಾರದಿಂದಲೇ ಉಚಿತವಾಗಿ ಮಗುವಿನ ಕುಟುಂಬದ ಪರಿಸರದಲ್ಲಿಯೇ ನೀಡಬಹುದಾಗಿದೆ. ಇದರಿಂದ ದೈಹಿಕವಾಗಿ ಬೆಳವಣಿಗೆ ಹೊಂದಿದ ಆರೋಗ್ಯವಂತ ಮಗು 2 ವರ್ಷಗಳು ತುಂಬಿದ ನಂತರ ಶಿಶು ಪಾಲನಾ ಕೇಂದ್ರಗಳಿಗೆ ದಾಖಲಾಗುತ್ತದೆ.
ಶಿಶು ಪಾಲನಾ ಕೇಂದ್ರಗಳಲ್ಲಿ ಮಗುವಿಗೆ ಆರೋಗ್ಯ, ಬೆಳವಣಿಗೆ ಮತ್ತು ಪ್ರಾರಂಭಿಕ ಕಲಿಕೆಗೆ ಪೂರಕವಾದ ಮತ್ತು ಮಗುವಿನಲ್ಲಿ ಆಸಕ್ತಿ ಮೂಡಿಸುವ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ಉತ್ತಮ ಭೌತಿಕ ವಾತಾವರಣದಲ್ಲಿ ಹಮ್ಮಿಕೊಳ್ಳಬಹುದಾಗಿದೆ. ಇಂತಹ ಉತ್ತಮ ಭೌತಿಕ ವ್ಯವಸ್ಥೆ ಕಲ್ಪಿಸಲು ಶಿಶು ಪಾಲನಾ ಕೇಂದ್ರಗಳು ಕನಿಷ್ಠ 4 ಗುಂಟೆ ಜಮೀನನ್ನು ಹೊಂದಿರಬೇಕು. ಸದರಿ ಜಮೀನಿನ 3 ಗುಂಟೆ ಜಾಗದಲ್ಲಿ ಕಲಿಕಾ ಕೊಠಡಿ; ವಿಶ್ರಾಂತಿ ಕೊಠಡಿ; ಅಡುಗೆ ಮನೆ; ಒಳಾಂಗಣ-ಕ್ರೀಡಾಂಗಣ ಇರಬೇಕು. ಶುದ್ಧೀಕರಿಸಿದ ಕುಡಿಯುವ ನೀರಿನ ಸೌಲಭ್ಯದೊಂದಿಗೆ ಮಕ್ಕಳ ಸ್ನೇಹಿ ಶೌಚಾಲಯಗಳನ್ನು ಹೊಂದಿರಬೇಕು. ಉಳಿದ ಒಂದು ಗುಂಟೆಯಲ್ಲಿ ಹೊರಾಂಗಣ ಕ್ರೀಡಾಂಗಣ ಇರಬೇಕು. ಹೊರಾಂಗಣ ಕ್ರೀಡಾಂಗಣದಲ್ಲಿ ಮಕ್ಕಳ ವಯೋಮಾನಕ್ಕನುಗುಣವಾದ ಸುಲಭವಾಗಿ ಆಡಬಹುದಾದ ಆಟದ ಸಾಮಗ್ರಿಗಳ ವ್ಯವಸ್ಥೆಯಿರಬೇಕು. ಶಿಶು ಪಾಲನಾ ಕೇಂದ್ರಗಳು ಸುಭದ್ರವಾದ ಕಾಂಪೌಂಡ್ ವ್ಯವಸ್ಥೆಯನ್ನು ಹೊಂದಿರಬೇಕು, ವಿದ್ಯುಚ್ಛಕ್ತಿ ಸೌಲಭ್ಯವನ್ನು ಕಡ್ಡಾಯವಾಗಿ ಹೊಂದಿರಬೇಕು.
ಜೊತೆ ಜೊತೆಗೆ ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಪೂರಕವಾದ ಸಮತೋಲನಾ ಆಹಾರ ನೀಡುತ್ತಾ ಆರೋಗ್ಯವನ್ನು ಸಹ ಕಾಪಾಡಬಹುದಾಗಿದೆ. ಈ ರೀತಿ ಮಗುವಿಗೆ 3+ ವಯೋಮಾನ ತುಂಬುವುದರೊಳಗಾಗಿ ತನ್ನ ಕೌಟುಂಬಿಕ ಪರಿಸರದ ಜೊತೆಗೆ ಸುತ್ತಲಿನ ಪರಿಸರಕ್ಕೂ ಹೊಂದಿಕೊಂಡು ಪ್ರಾರಂಭಿಕ ಕಲಿಕೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ.
ಶಿಶು ಪಾಲನಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಆರೋಗ್ಯದ ದೃಷ್ಟಿಯಿಂದ ಓರ್ವ ಆರೋಗ್ಯ ಕಾರ್ಯಕರ್ತೆ, ಶಿಶು ಪಾಲನೆಯಲ್ಲಿ ತರಬೇತಿ ಪಡೆದ ಶಿಕ್ಷಕಿ ಮತ್ತು ಓರ್ವ ಸಹಾಯಕಿಯನ್ನು ನೇಮಕ ಮಾಡಿಕೊಳ್ಳಬೇಕು. ಆರೋಗ್ಯ ಕಾರ್ಯಕರ್ತೆಯರು ಶಿಶು ಪಾಲನಾ ಕೇಂದ್ರಗಳಲ್ಲಿರುವ ಮಕ್ಕಳು ಮತ್ತು 2 ವರ್ಷದೊಳಗಿನ ಮನೆಯ ಪರಿಸರದಲ್ಲಿರುವ ಮಕ್ಕಳ ಜೊತೆಗೆ ಗರ್ಭಿಣಿ-ಬಾಣಂತಿಯರ ಆರೋಗ್ಯದ ಕಡೆಗೆ ವಿಶೇಷ ಗಮನ ನೀಡಿ, ಸಕಾಲಕ್ಕೆ ಲಸಿಕೆ ಇತ್ಯಾದಿಗಳನ್ನು ಒದಗಿಸಬಹುದು.ಶಿಶು ಪಾಲನೆಯಲ್ಲಿ ತರಬೇತಿ ಪಡೆದ ಶಿಕ್ಷಕಿ ಶಿಶು ಪಾಲನಾ ಕೇಂದ್ರದಲ್ಲಿದ್ದು ಅನ್ಯ ಕಾರ್ಯದ ಒತ್ತಡವಿಲ್ಲದೆ ಮಕ್ಕಳ ಜೊತೆ ಆಟ-ಪಾಠಗಳಲ್ಲಿ ಬೆರೆಯಬಹುದು. ಸಹಾಯಕರು ಸರಕಾರ ನೀಡಿದ ಸಮತೋಲನ ಆಹಾರ ವಿತರಿಸಿ ಮಕ್ಕಳ ಬೇಕು ಬೇಡಗಳಿಗೆ ಸ್ಪಂದಿಸಬಹುದು. ಹೀಗಾಗಿ, ಪ್ರತೀ ಶಿಶು ಪಾಲನಾ ಕೇಂದ್ರಕ್ಕೆ ಮೇಲೆ ತಿಳಿಸಿದ 3 ಜನ ಸಿಬ್ಬಂದಿ ಅತ್ಯವಶ್ಯಕವಾಗಿಬೇಕು.
ಶಿಶು ಪಾಲನಾ ಕೇಂದ್ರಗಳಿಗೆ ಸರಬರಾಜು ಮಾಡಲಾಗುವ ಆಹಾರವು ಪೋಷಕಾಂಶಗಳಿಂದ ಕೂಡಿದ್ದು ಸಮತೋಲನಯುಕ್ತ ಆಹಾರವಾಗಿರಬೇಕು. ಪದೇ ಪದೇ ಆಹಾರ ಬದಲಾವಣೆ ಮಾಡಬಾರದು. ಮಗುವಿನ ಪರಿಸರಕ್ಕೆ ಹೊಂದಾಣಿಕೆಯಾಗುವಂತಹ ಆಹಾರ ವಿತರಣೆಯಾಗಬೇಕು. ವಿತರಿಸುವಂತಹ ಆಹಾರ ಗುಣಮಟ್ಟದಿಂದ ಕೂಡಿದ್ದು ವೈದ್ಯರಿಂದ ದೃಢೀಕರಿಸಲ್ಪಟ್ಟಿರಬೇಕು.
ಬುನಾದಿ ಪ್ರಾಥಮಿಕ ಶಿಕ್ಷಣ
ರಾಜ್ಯ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ನೀತಿಯಂತೆ ಒಂದರಿಂದ ಐದನೇ ತರಗತಿವರೆಗಿನ ಶಾಲಾ ಶಿಕ್ಷಣವನ್ನು ಕಿರಿಯ ಪ್ರಾಥಮಿಕ ಶಿಕ್ಷಣ ಎಂದು ಕರೆಯಲಾಗಿದೆ. ಮಗುವಿನ ಶೈಕ್ಷಣಿಕ ಜೀವನದಲ್ಲಿ ಪ್ರಾಥಮಿಕ ಶಿಕ್ಷಣ ಬಹಳ ಪ್ರಮುಖವಾದದು. ಸಂವಿಧಾನದ ಆಶಯದಂತೆ, ಸರ್ವರಿಗೂ ಶಿಕ್ಷಣ ನೀಡುವ ಉದ್ದೇಶದಿಂದ ಸರಕಾರಗಳು ಕಾಲಮಿತಿ ಶೈಕ್ಷಣಿಕ ಯೋಜನೆಗಳನ್ನು ಹಮ್ಮಿಕೊಂಡು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಾ ಬಂದಿವೆ. ಪ್ರತೀ ಜನವಸತಿ ಪ್ರದೇಶದಲ್ಲಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಆರಂಭಿಸಿದೆ. ಆದರೆ, ಸದರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆಯೇ?. ದೊರೆಯದಿದ್ದಲ್ಲಿ ಕಾರಣಗಳೇನು? ಕೈಗೊಳ್ಳಬೇಕಾದ ಕ್ರಮಗಳೇನು? ಇತ್ಯಾದಿ ಅಂಶಗಳ ಕುರಿತು ಗಮನ ನೀಡುತ್ತಿಲ್ಲ. ತತ್ಪರಿಣಾಮವಾಗಿ ಗ್ರಾಮೀಣ ಸಮುದಾಯದ ಹಾಗೂ ಸರಕಾರಿ ಶಾಲೆಗಳಲ್ಲಿ ಕಲಿಯುವಂತಹ 1ರಿಂದ 5ನೇ ತರಗತಿಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ.
ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಶಿಕ್ಷಕರ ನೇಮಕವಾಗುತ್ತಿದೆ. ಪ್ರಸ್ತುತ ಆರ್‌ಟಿಇ ಕಾಯ್ದೆ ಅನ್ವಯ, ಒಂದನೇ ತರಗತಿಯಿಂದ ಐದನೇ ತರಗತಿಗೆ ಅರುವತ್ತರವರೆಗೆ ಇಬ್ಬರು; ಅರುವತ್ತೊಂದರಿಂದ ತೊಂಭತ್ತರವರೆಗೆ ಮೂರು; ತೊಂಭತ್ತೊಂದರಿಂದ ನೂರಿಪ್ಪತ್ತರವರೆಗೆ ನಾಲ್ಕು; ನೂರಿಪ್ಪತ್ತೊಂದರಿಂದ ಇನ್ನೂರರ ನಡುವೆ ಐದು; ನೂರೈವತ್ತು ಮಕ್ಕಳಿಗೂ ಮೇಲ್ಪಟ್ಟಾಗ ಐದು ಶಿಕ್ಷಕರು ಮತ್ತು ಒಬ್ಬರು ಮುಖ್ಯೋಪಾಧ್ಯಾಯರು ಮತ್ತು ಇನ್ನೂರು ಮಕ್ಕಳಿಗೂ ಮೇಲ್ಪಟ್ಟ ನಂತರ ವಿದ್ಯಾರ್ಥಿ-ಶಿಕ್ಷಕರ ಪ್ರಮಾಣಾನುಪಾತ (ಮುಖ್ಯೋಪಾಧ್ಯಾಯರನ್ನು ಹೊರತುಪಡಿಸಿ) ನಲವತ್ತನ್ನು ಮೀರುವಂತಿಲ್ಲ.
ಆದರೆ, ನಮಗೆಲ್ಲ ತಿಳಿದಿರುವಂತೆ, ತರಗತಿವಾರು-ವಿಷಯವಾರು ಶಿಕ್ಷಕರಿಲ್ಲದೆ ಮಗು ಗುಣಮಟ್ಟದ ಶಿಕ್ಷಣ ಹೊಂದಲು ಸಾಧ್ಯವೇ? ಇದೊಂದು ಅವೈಜ್ಞಾನಿಕ ನೀತಿಯಲ್ಲವೇ? ಮಕ್ಕಳ ಸಂಖ್ಯೆ ಎಷ್ಟೇ ಇದ್ದರೂ, ತರಗತಿವಾರು ಹಾಗೂ ವಿಷಯವಾರು ಬೋಧನೆ ನಡೆಯಲೇ ಬೇಕಲ್ಲವೇ? ಮಕ್ಕಳ ಸಂಖ್ಯೆ ಕಡಿಮೆಯಿದೆ ಎಂದು ವಿವಿಧ ವಿಷಯಗಳನ್ನು ಬೋಧಿಸುವ ಪ್ರಮಾಣವನ್ನು ಕಡಿಮೆ ಮಾಡಲಾದೀತೆ? ಈ ಅಂಶವನ್ನು ಆಧಾರವಾಗಿಟ್ಟುಕೊಂಡರೆ, ನಮ್ಮ ರಾಜ್ಯದ ಬಹುತೇಕ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಒಂದು ಅಥವಾ ಎರಡು ಶಿಕ್ಷಕರು 5 ತರಗತಿಗಳಿಗೆ 17 ವಿಷಯಗಳನ್ನು ಬೋಧಿಸಲು ಸಾಧ್ಯವೇ?
ಮುಂದುವರಿದು, ಒಂದನೇ ತರಗತಿಯಿಂದ ಐದನೇ ತರಗತಿಯವರೆಗಿನ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಬಹುತೇಕ ಇಬ್ಬರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಮುಖ್ಯ ಶಿಕ್ಷಕರಿಗೆ ಹೆಚ್ಚಿನ ಜವಾಬ್ದಾರಿಯಾಗಿ ಇಲಾಖೆಗೆ ಮಾಹಿತಿ ಸಲ್ಲಿಸುವುದು, ತರಬೇತಿಗಳು, ಕಟ್ಟಡ ಕಾಮಗಾರಿ ಮತ್ತು ದುರಸ್ತಿ, ಬಿಸಿಯೂಟ ನಿರ್ವಹಣೆ, ಜನಗಣತಿ, ಚುನಾವಣಾ ಕೆಲಸ, ಕ್ಷೀರ ಭಾಗ್ಯ ಯೋಜನೆ ಇತ್ಯಾದಿಗಳನ್ನು ನೀಡಲಾಗಿದೆ. ಈ ಬೋಧಕೇತರ ಕೆಲಸಗಳ ಒತ್ತಡದ ನಡುವೆ ಶಿಕ್ಷಕರು ಬಳಲಿದ್ದಾರೆ. ಮಹಿಳಾ ಶಿಕ್ಷಕರ ಸ್ಥಿತಿ ಇನ್ನೂ ಶೋಚನೀಯವಾಗಿದೆ. ಬೋಧನೆಗಿಂತ ಬೋಧಕೇತರ ಕೆಲಸವೇ ಪ್ರಧಾನವಾಗಿರುವ ಈ ವ್ಯವಸ್ಥೆಯಲ್ಲಿ ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯವೇ? ಸರಕಾರಿ ಶಾಲೆ ಹೇಗೆ ತಾನೇ ಉಳಿದು ಬೆಳೆದೀತು?.







