ಚು.ಆಯೋಗದ ಮೃತರ ಅಂಕಿ-ಅಂಶಕ್ಕೂ ಸರಕಾರದ ದಾಖಲೆಗಳಿಗೂ ಭಾರೀ ವ್ಯತ್ಯಾಸ
►ಎಸ್‌ಐಆರ್‌ನಲ್ಲಿ 16.39 ಲಕ್ಷ ಮತದಾರರು ಮೃತರ ಪಟ್ಟಿಗೆ ►ಸರಕಾರದ ನೋಂದಾಯಿತ ಸಾವುಗಳ ಸಂಖ್ಯೆಯ ಮೂರು ಪಟ್ಟು ಏರಿಕೆ

ಬೆಂಗಳೂರು, ಆ.23: ರಾಜ್ಯದಲ್ಲಿನ ಮತಪಟ್ಟಿ ವಿಶೇಷ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯಲ್ಲಿ ‘ಮೃತ’ ಎಂದು ಗುರುತಿಸಲಾಗಿರುವ ಮತದಾರರ ಸಂಖ್ಯೆ ಇದೀಗ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಆ.19ರ ವೇಳೆಗೆ 16,39,871 ಮತದಾರರನ್ನು ಮೃತಪಟ್ಟವರು ಎಂದು ಎಎಸ್‌ಡಿಡಿಒ ಪಟ್ಟಿಯಲ್ಲಿ ಗುರುತಿಸಲಾಗಿದೆ. ಆದರೆ ರಾಜ್ಯ ಸರಕಾರದ ಜನನ-ಮರಣ ನೋಂದಣಿ ವ್ಯವಸ್ಥೆ ಹಾಗೂ ಕೇಂದ್ರ ಸರಕಾರದ ಲಭ್ಯವಿರುವ ಸಾವಿನ ಅಂಕಿ-ಅಂಶಗಳೊಂದಿಗೆ ಹೋಲಿಸಿದಾಗ ಈ ಸಂಖ್ಯೆಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳು ಎದುರಾಗುತ್ತವೆ.
ಕರ್ನಾಟಕದ ಎಸ್‌ಐಆರ್‌ನಲ್ಲಿ ಒಟ್ಟು 1,07,96,415 ಮತದಾರರನ್ನು ಎಎಸ್‌ಡಿಡಿಒ ವರ್ಗಕ್ಕೆ ಸೇರಿಸಲಾಗಿದೆ. ಇದರಲ್ಲಿ 65,45,721 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 16,39,871 ಮಂದಿ ಮೃತಪಟ್ಟವರು, 15,17,056 ಮಂದಿ ಗೈರುಹಾಜರು, 7,09,875 ಮಂದಿ ಬೇರೆಡೆ ಈಗಾಗಲೇ ನೋಂದಣಿಯಾಗಿರುವವರು ಹಾಗೂ 3,83,892 ಮಂದಿ ‘ಇತರ’ ವಿಭಾಗದಲ್ಲಿದ್ದಾರೆ.
ಇಲ್ಲಿನ ಪ್ರಮುಖ ಅಂಶವೆಂದರೆ ‘ಮೃತ’ ಎಂದು ಗುರುತಿಸಿರುವ 16.39 ಲಕ್ಷ ಮತದಾರರು. ಕರ್ನಾಟಕ ಸರಕಾರದ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ 2024ರ ನಾಗರಿಕ ನೋಂದಣಿ ವ್ಯವಸ್ಥೆ(ಸಿಆರ್‌ಎಸ್) ವರದಿ ಪ್ರಕಾರ, ರಾಜ್ಯದಲ್ಲಿ ಆ ವರ್ಷ 5,52,532 ಸಾವುಗಳು ನೋಂದಣಿಯಾಗಿವೆ. ನಗರ ಪ್ರದೇಶದಲ್ಲಿ 2,63,817 ಹಾಗೂ ಗ್ರಾಮೀಣ ಪ್ರದೇಶದಲ್ಲಿ 2,88,715 ಸಾವುಗಳು ದಾಖಲಾಗಿವೆ. ಅಂದರೆ, ಎಸ್‌ಐಆರ್ ನಲ್ಲಿ ‘ಮೃತ’ ಎಂದು ಗುರುತಿಸಿರುವ 16.39 ಲಕ್ಷ ಮತದಾರರು 2024ರ ಇಡೀ ರಾಜ್ಯದ ನೋಂದಾಯಿತ ಸಾವುಗಳ ಸಂಖ್ಯೆಯ ಸುಮಾರು 3 ಪಟ್ಟು ಇದೆ.
2022ರ ರಾಜ್ಯ ಸರಕಾರದ ಸಿಆರ್‌ಎಸ್ ವರದಿಯಲ್ಲಿಯೂ ರಾಜ್ಯದಲ್ಲಿ 5,51,327 ಸಾವುಗಳು ನೋಂದಣಿಯಾಗಿದ್ದವು. ಹೀಗಾಗಿ, ಒಂದು ವರ್ಷದ ಸಾವಿನ ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ನೋಡಿದರೆ ಎಸ್‌ಐಆರ್‌ನಲ್ಲಿ ‘ಮೃತ’ ಎಂದು ಗುರುತಿಸಿರುವ ಸಂಖ್ಯೆ ಅತ್ಯಂತ ದೊಡ್ಡದಾಗಿದೆ.
ಕೇಂದ್ರ ಸರಕಾರದ ವೈದ್ಯಕೀಯ ಸಾವಿನ ಅಂಕಿ ಅಂಶಗಳು ಮತ್ತೊಂದು ಚಿತ್ರ ನೀಡುತ್ತದೆ. ಕೇಂದ್ರ ಗೃಹ ಸಚಿವಾಲಯವು, 2026ರ ಜು.28 ರಂದು ಲೋಕಸಭೆಗೆ ನೀಡಿದ ಮಾಹಿತಿಯ ಪ್ರಕಾರ, ಕರ್ನಾಟಕದಲ್ಲಿ 2024ರಲ್ಲಿ ವೈದ್ಯಕೀಯವಾಗಿ ಪ್ರಮಾಣೀಕರಿಸಲಾದ ಸಾವುಗಳ ಸಂಖ್ಯೆ 1,52,003. ಇದನ್ನು ಎಸ್‌ಐಆರ್‌ನ 16,36,673 ‘ಮೃತ ಮತದಾರ’ರೊಂದಿಗೆ ಹೋಲಿಸಿದರೆ ವ್ಯತ್ಯಾಸ ಇನ್ನಷ್ಟು ದೊಡ್ಡದಾಗಿ ಕಾಣುತ್ತದೆ. ಆದರೆ, ‘ಮೆಡಿಕಲಿ ಸರ್ಟಿಪೈಡ್ ಡೆತ್ಸ್’ ಎಂಬುದು ರಾಜ್ಯದಲ್ಲಿ ಸಂಭವಿಸಿದ ಎಲ್ಲ ಸಾವುಗಳ ಸಂಖ್ಯೆ ಅಲ್ಲ. ಅದು ವೈದ್ಯಕೀಯವಾಗಿ ಸಾವಿನ ಕಾರಣ ಪ್ರಮಾಣೀಕರಿಸಲಾದ ಸಾವುಗಳ ಅಂಕಿಅಂಶ.
ಹಾಗಾದರೆ 16.36 ಲಕ್ಷ ಮಂದಿ ಯಾರು?: ಎಸ್‌ಐಆರ್‌ನಲ್ಲಿ ಬಳಸಲಾಗಿರುವ ಮೂಲ ಮತದಾರರ ಪಟ್ಟಿಯಲ್ಲಿರುವ ವ್ಯಕ್ತಿಗಳ ಪೈಕಿ, ಬಿಎಲ್‌ಒಗಳ ಮನೆಮನೆ ಪರಿಶೀಲನೆ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ ಎಂದು ಗುರುತಿಸಲಾದವರ ಸಂಖ್ಯೆ 16.39 ಲಕ್ಷ ಎಂದು ಆಯೋಗ ಹೇಳುತ್ತಿದೆ.
ಆದರೆ ಈ 16.39 ಲಕ್ಷ ಮಂದಿ ಯಾವ ಅವಧಿಯಲ್ಲಿ ಮೃತಪಟ್ಟವರು? 2025-26ರಲ್ಲಿ ಮೃತಪಟ್ಟವರೇ? ಐದು ವರ್ಷಗಳಲ್ಲಿ ಮೃತಪಟ್ಟವರೇ? 2002ರ ಮೂಲ ಮತದಾರರ ಪಟ್ಟಿಯಿಂದ ಇಂದಿನವರೆಗೆ ಮೃತಪಟ್ಟವರೇ? ಮರಣ ನೋಂದಣಿ ಇಲಾಖೆಯ ದಾಖಲೆಗಳೊಂದಿಗೆ ಈ ಹೆಸರುಗಳನ್ನು ಎಷ್ಟು ಪ್ರಮಾಣದಲ್ಲಿ ಹೊಂದಾಣಿಕೆ ಮಾಡಲಾಗಿದೆ? ಎಷ್ಟು ಮಂದಿಯ ಮರಣ ಪ್ರಮಾಣಪತ್ರ/ ಮರಣ ನೋಂದಣಿ ದಾಖಲೆ ಪರಿಶೀಲಿಸಲಾಗಿದೆ? ಎನ್ನುವುದನ್ನು ಚುನಾವಣಾ ಆಯೋಗ ಸ್ಪಷ್ಟ ಪಡಿಸಬೇಕಿದೆ.
ಹಿಂದೆಯೇ ಮತಪಟ್ಟಿ ಶುದ್ಧೀಕರಣ ನಡೆದಿದ್ದರೆ, ಈಗ 16.39 ಲಕ್ಷ ‘ಮೃತ’ರು ಹೇಗೆ?
ಕರ್ನಾಟಕದಲ್ಲಿ ಮತದಾರರ ಪಟ್ಟಿಯ ಶುದ್ಧೀಕರಣ ಪ್ರಕ್ರಿಯೆ ಎಸ್‌ಐಆರ್‌ಗೂ ಮುನ್ನವೇ ನಡೆದಿರುವುದು ಚುನಾವಣಾ ದಾಖಲೆಗಳು ಮತ್ತು ಅಂದಿನ ವರದಿಗಳಿಂದ ತಿಳಿದುಬರುತ್ತದೆ. 2022ರಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 6.73ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ ಎಂದು ಅಂದಿನ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಹೇಳಿದ್ದರು. 2023ರಲ್ಲಿಯೂ ಮತದಾರರ ಪಟ್ಟಿಯಿಂದ ಮೃತರು ಹಾಗೂ ಇತರ ಅನರ್ಹ ದಾಖಲೆಗಳನ್ನು ತೆಗೆದುಹಾಕುವ ಸಾಮಾನ್ಯ ಶುದ್ಧೀಕರಣ ಪ್ರಕ್ರಿಯೆ ಮುಂದುವರಿದಿತ್ತು.
ಚುನಾವಣಾ ಆಯೋಗದ ದಾಖಲೆಗಳ ಪ್ರಕಾರ, ಮತದಾರರ ಪಟ್ಟಿಯ ‘ಶುದ್ಧೀಕರಣ’ ಪ್ರಕ್ರಿಯೆಯಲ್ಲಿ ಮೃತ ಮತದಾರರ ಹೆಸರುಗಳನ್ನು ತೆಗೆದುಹಾಕುವುದು ಪ್ರಮುಖ ಉದ್ದೇಶಗಳಲ್ಲೊಂದಾಗಿದೆ. ಈ 16.39 ಲಕ್ಷ ಮಂದಿ ಯಾವ ಅವಧಿಯಲ್ಲಿ ಮೃತಪಟ್ಟವರು? ಹಿಂದಿನ ವಾರ್ಷಿಕ ಮತದಾರರ ಪಟ್ಟಿ ಪರಿಷ್ಕರಣೆಗಳಲ್ಲಿ ಈಗಾಗಲೇ ಮೃತರ ಹೆಸರುಗಳನ್ನು ತೆಗೆದುಹಾಕಿದ್ದರೆ, ಎಸ್‌ಐಆರ್‌ನಲ್ಲಿ ಗುರುತಿಸಿರುವ 16.39 ಲಕ್ಷ ಮಂದಿಯಲ್ಲಿ ಎಷ್ಟು ಮಂದಿ ಇತ್ತೀಚಿನ ವರ್ಷಗಳಲ್ಲಿ ಮೃತಪಟ್ಟವರು? ಎಷ್ಟು ಹೆಸರುಗಳು ಹಿಂದಿನ ಮತಪಟ್ಟಿಗಳಲ್ಲಿಯೇ ಉಳಿದುಕೊಂಡಿದ್ದವು?.
ವಿಶೇಷವಾಗಿ, ಚುನಾವಣಾ ಆಯೋಗದ ಮಾರ್ಗಸೂಚಿಗಳಲ್ಲಿಯೇ ಮೃತ ಮತದಾರರ ಹೆಸರು ಅಳಿಸುವಿಕೆಗೆ ಮರಣ ಪ್ರಮಾಣಪತ್ರ/ ಅಧಿಕೃತ ಮರಣ ದಾಖಲೆ, ನಮೂನೆ-7 ಅಥವಾ ಬಿಎಲ್‌ಒ ಪರಿಶೀಲನಾ ವರದಿ ಮುಂತಾದ ಕ್ರಮಗಳನ್ನು ಉಲ್ಲೇಖಿಸಲಾಗಿದೆ. ಹೀಗಾಗಿ, ಪ್ರಶ್ನೆ ಕೇವಲ ‘16.39 ಲಕ್ಷ ಮಂದಿ ಮೃತಪಟ್ಟಿದ್ದಾರೆಯೇ?’ ಎಂಬುದಲ್ಲ; ‘ಈ 16.39 ಲಕ್ಷ ಮಂದಿಯನ್ನು ಯಾವ ಅವಧಿಯ, ಯಾವ ದಾಖಲೆಗಳ ಆಧಾರದ ಮೇಲೆ ಮತ್ತು ಎಷ್ಟು ಹಂತದ ಪರಿಶೀಲನೆಯ ಬಳಿಕ ‘ಮೃತ’ ಎಂದು ಗುರುತಿಸಲಾಗಿದೆ?’ಎಂಬುದಾಗಿದೆ.






