ರಾಜ್ಯದಲ್ಲಿ ಮುಂದುವರಿದ ಮಾನವ-ಕಾಡಾನೆ ಸಂಘರ್ಷ

ಮಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾಡಾನೆ, ಮಾನವ ಸಂಘರ್ಷ ಮುಂದುವರಿದಿದ್ದು, ಗಜಪಡೆಗಳ ದಾಳಿಗೆ ರೈತರು, ಅರಣ್ಯದಂಚಿನ ಜನರು ಬಲಿಯಾಗುತ್ತಿದ್ದಾರೆ. ಅಲ್ಲದೇ ಫಲವತ್ತಾದ ಕೃಷಿಗಳನ್ನು ಕಾಡಾನೆಗಳು ನಾಶ ಮಾಡುತ್ತಿವೆ.
ಚಾಮರಾಜನಗರ, ಬೆಂಗಳೂರು, ರಾಮನಗರ, ಕೊಡಗು, ಶಿವಮೊಗ್ಗ, ಕೋಲಾರ, ಹಾಸನ, ಮೈಸೂರು, ಮಂಡ್ಯ, ಚಿಕ್ಕಮಗಳೂರು ಮತ್ತು ದ.ಕ. ಜಿಲ್ಲೆಗಳಲ್ಲಿ ಮಾನವ, ಕಾಡಾನೆ ಸಂಘರ್ಷಗಳು ನಿರಂತರವಾಗಿ ನಡೆಯುತ್ತಿದೆ.
ರಾಜ್ಯದಲ್ಲಿ ಆರಣ್ಯ ಇಲಾಖೆಯ ಮಾಹಿತಿ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ(2023-24ನೇ ಸಾಲಿನಿಂದ 2025-26ರ ಜುಲೈವರೆಗೆ) ಸುಮಾರು 97 ಮಂದಿ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಮೃತರ ಕುಟುಂಬಕ್ಕೆ 1,365 ಲಕ್ಷ ರೂ. ಪರಿಹಾರ ವಿತರಣೆ ಮಾಡಲಾಗಿದೆ.
ದ.ಕ. ಜಿಲ್ಲೆಯಲ್ಲೂ ವ್ಯಾಪಕ ದಾಳಿ: ದ.ಕ. ಜಿಲ್ಲೆಯ ಸುಳ್ಯ, ಸುಬ್ರಹ್ಮಣ್ಯ, ಪಂಜ, ಬೆಳ್ತಂಗಡಿ, ಪುತ್ತೂರು ವಲಯಗಳಲ್ಲಿ ಕಾಡಾನೆ ದಾಳಿ ಹೆಚ್ಚಾಗಿದ್ದು, ಕಳೆದೆರಡು ವರ್ಷಗಳಲ್ಲಿ ಆನೆ ದಾಳಿಯಿಂದ 4 ಮಾನವ ಸಾವು ಹಾಗೂ ಮೂವರಿಗೆ ಗಂಭೀರ ಗಾಯಗಳಾಗಿವೆ.
ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಅರಣ್ಯ ಪ್ರದೇಶಗಳಿಗೆ ಹೊಂದಿಕೊಂಡಿರುವ ಮಂಡೆಕೋಲು, ಅಜ್ಜಾವರ, ಅರಂತೋಡು, ಮಡಪ್ಪಾಡಿ, ಸುಬ್ರಹ್ಮಣ್ಯ, ಉಬರಡ್ಕ, ಮರ್ಕಂಜ, ಆಲೆಟ್ಟಿ, ಪೈಂಚಾಲು, ಕೋಲ್ಚಾರ್, ಬೆಳ್ತಂಗಡಿ ತಾಲೂಕಿನ ಶಿಶಿಲ, ಚಾರ್ಮಾಡಿ, ದಿಡುಪೆ, ತೋಟತ್ತಾಡಿ, ಚಿಬಿದ್ರೆ, ಪುದುಬೆಟ್ಟು, ಧರ್ಮಸ್ಥಳ, ಪಟ್ರಾಮೆ, ಕೊಕ್ಕಡ, ಅರಸಿನಮಕ್ಕಿ, ಶಿಬಾಜೆ ಮತ್ತು ಜಿಲ್ಲೆಗೆ ಹೊಂದಿಕೊಂಡಿರುವ ಮಡಿಕೇರಿ ತಾಲೂಕಿನ ಸಂಪಾಜೆ, ಪೆರಾಜೆ, ಚೆಂಬು, ದಬ್ಬಡ್ಕ ಪ್ರದೇಶಗಳಲ್ಲಿ ಕಾಡಾನೆಗಳ ಉಪಟಳ ಮಿತಿ ಮೀರಿದೆ. ಇಲ್ಲಿನ ಕೃಷಿಕರು ತಮ್ಮ ಫಲವತ್ತಾದ ಬೆಳೆಗಳನ್ನು ಕಾಡಾನೆ ದಾಳಿಯಿಂದ ರಕ್ಷಿಸಿಕೊಳ್ಳಲು ಹರಸಾಹಸಪಡುತ್ತಿದ್ದಾರೆ.
ಕೃಷಿಗಳಿಗೆ ಹಾನಿ: ಹಿಂಡು ಹಿಂಡಾಗಿ ದಾಳಿ ಮಾಡುತ್ತಿರುವ ಕಾಡಾನೆಗಳು ಅಡಿಕೆ, ಕಾಫಿ, ಭತ್ತ, ಬಾಳೆ ಕೃಷಿಗಳನ್ನು ಧ್ವಂಸ ಮಾಡುತ್ತಿವೆ. ರಾತ್ರೋ ರಾತ್ರಿ ದಾಳಿಯಿಡುವ ಗಜಪಡೆಗಳ ಹಿಂಡು ಬೆಳೆಯನ್ನು ತಿಂದು ಹಾಕುತ್ತಿದೆ. ಬೆಳೆ ಕಳೆದುಕೊಂಡ ರೈತರು ಜೀವ ಭಯದಿಂದ ಆನೆಗಳನ್ನು ಕಾಡಿಗಟ್ಟಲು ಹಿಂಜರಿಯುತ್ತಿದ್ದಾರೆ. ಈಗಾಗಲೇ ಅಡಿಕೆಗೆ ಹಳದಿ, ಎಲೆಚುಕ್ಕಿ ರೋಗಗಳಿಂದ ಕಂಗೆಟ್ಟ ರೈತರು ಇದೀಗ ಕಾಡಾನೆಗಳ ದಾಳಿಯಿಂದ ತತ್ತರಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ದ.ಕ. ಜಿಲ್ಲೆಯಲ್ಲಿ 1,700 ಕೃಷಿ ನಾಶ ಪ್ರಕರಣಗಳು ವರದಿಯಾಗಿವೆ. 2020-21ರಲ್ಲಿ 246 ಫಲಾನುಭವಿಗಳು 29,17,296 ರೂ., 2021-22ರಲ್ಲಿ 238 ಫಲಾನುಭವಿಗಳು 39,12,713 ರೂ., 2022-23ರಲ್ಲಿ 258 ಫಲಾನುಭವಿಗಳು 46,88,281 ರೂ., 2023-24ರಲ್ಲಿ 283 ಫಲಾನುಭವಿಗಳು 74,71,699 ರೂ., 2024-25ರಲ್ಲಿ 436 ಫಲಾನುಭವಿಗಳು 1,08,53,552 ರೂ., 2025-26(ಅಗಸ್ಟ್ ಅಂತ್ಯಕ್ಕೆ)ರಲ್ಲಿ 239 ಫಲಾನುಭವಿಗಳು 61,80,561 ರೂ. ಪರಿಹಾರ ಪಡೆದುಕೊಂಡಿದ್ದಾರೆ.
ಕಾಡಾನೆಗಳ ಸಂಖ್ಯೆ ಹೆಚ್ಚಾಗಿರುವ ಶಂಕೆ?: ಕೆಲ ವರ್ಷಗಳ ಹಿಂದೆ ಒಂದೆರೆಡು ಬಾರಿ ದಾಳಿ ಮಾಡುತ್ತಿದ್ದ ಕಾಡಾನೆಗಳು ಇತ್ತೀಚಿನ 2-3 ವರ್ಷಗಳಿಂದ ನಿರಂತರವಾಗಿ ತೊಂದರೆ ಕೊಡುತ್ತಿದೆ. ಏಕಾಏಕಿ ದಾಳಿಯ ಪ್ರಮಾಣ ಅಧಿಕವಾಗಿದ್ದು, ಕಾಡಾನೆಗಳ ಸಂಖ್ಯೆ ಹೆಚ್ಚಾಗಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಂಶಯ ವ್ಯಕ್ತವಾಗಿದೆ.
ಕಾಡಾನೆ ಹಾವಳಿ ತಡೆಗೆ ಕ್ರಮಗಳೇನು?: ಕಾಡಾನೆಗಳ ಹಾವಳಿ ನಿಯಂತ್ರಿಸಲು ಅರಣ್ಯ ಇಲಾಖೆ ಅರಣ್ಯದಂಚಿನಲ್ಲಿ ಸೋಲಾರ್ ಬೇಲಿ, ಆನೆ ತಡೆ ಕಂದಕಗಳ ನಿರ್ಮಾಣ ಮತ್ತು ನಿರ್ವಹಣೆ ಮಾಡಲಾಗಿದೆ. 108.78 ಕಿ.ಮೀ. ಉದ್ದದ ರೈಲ್ವೆ ಹಳಿಗಳನ್ನು ಬಳಸಿ ಬ್ಯಾರಿಕೇಡ್ ನಿರ್ಮಿಸಲಾಗಿದೆ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಆನೆ ಕಾರ್ಯಪಡೆ ಸ್ಥಾಪನೆ: ಹಾಸನ, ಚಿಕ್ಕಮಗಳೂರು, ಮೈಸೂರು, ಕೊಡಗು, ಚಾಮರಾಜನಗರ, ರಾಮನಗರ, ಬೆಂಗಳೂರು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ತಡೆಗೆ ಅಧಿಕಾರಿ, ಸಿಬ್ಬಂದಿಯನ್ನೊಳಗೊಂಡ 8 ಆನೆ ಕಾರ್ಯಪಡೆಯನ್ನು ಸ್ಥಾಪಿಸಲಾಗಿದೆ.
ಆನೆ ಶಿಬಿರ: ಕಾಡಾನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಗಾಗಿ ದುಬಾರೆ, ಮತ್ತಿಗೋಡು, ಬಳ್ಳೆ, ಹಾರಂಗಿ, ಭೀಮನಕಟ್ಟೆ ಮತ್ತು ರಾಮಾಪುರಗಳಲ್ಲಿ ಆನೆ ಶಿಬಿರಗಳನ್ನು ಆರಂಭಿಸಲಾಗಿದೆ. ಈ ಶಿಬಿರಗಳಲ್ಲಿ ಪಳಗಿದ ಆನೆಗಳನ್ನು ಬಳಸಿಕೊಂಡು ನುರಿತ ಪಶು ವೈದ್ಯಾಧಿಕಾರಿ, ಮಾವುತ ಮತ್ತು ಇತರ ಸಿಬ್ಬಂದಿಯನ್ನೊಳಗೊಂಡ ಮೂರು ತಂಡಗಳನ್ನು ರಚಿಸಲಾಗಿದೆ. ರಾಜ್ಯದ ಯಾವುದೇ ಭಾಗದಿಂದ ಕಾಡಾನೆ ಸೆರೆಹಿಡಿಯಲು ಬೇಡಿಕೆ ಬಂದಾಗ ಈ ಪೈಕಿ ಒಂದು ತಂಡವನ್ನು ಕಾರ್ಯಾಚರಣೆಗೆ ನಿಯೋಜಿಸಲಾಗುತ್ತದೆ.
ಗುಂಡ್ಯದಲ್ಲಿ ಆನೆ ಶಿಬಿರಕ್ಕೆ ಬೇಡಿಕೆ: ಸುಬ್ರಹ್ಮಣ್ಯ ವಲಯದ ಗುಂಡ್ಯ ಹೊಳೆ ಬದಿ ಕೊಂಬಾರು ರಕ್ಷಿತಾರಣ್ಯ ಪ್ರದೇಶದಲ್ಲಿ ಆನೆ ಶಿಬಿರಕ್ಕೆ ಯೋಗ್ಯ ಪ್ರದೇಶವಿದೆ. ಗುಂಡ್ಯ ಹೊಳೆಯಲ್ಲಿ ಸಾಕಷ್ಟು ನೀರು ಹಾಗೂ ಪಕ್ಕದ ಅರಣ್ಯದಲ್ಲಿ ಮೇವು ಲಭ್ಯವಿರುವುದರಿಂದ ಇಲ್ಲಿ ಆನೆ ಶಿಬಿರ ಮಾಡಿ ಊರಿಗೆ ಬರುವ ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸಲು ಸಹಕಾರ ಆಗಬಹುದು ಎಂದು ಮಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಸಲ್ಲಿಸಿರುವ ಪ್ರಸ್ತಾವದಲ್ಲಿ ವಿವರಿಸಿದ್ದಾರೆ.
ಪರಿಹಾರ ಮೊತ್ತ ಏರಿಕೆ: ಕಾಡಾನೆ ದಾಳಿಯಿಂದ ಉಂಟಾಗುವ ಮಾನವ ಪ್ರಾಣಹಾನಿ ಪ್ರಕರಣಗಳಿಗೆ ನೀಡಲಾಗುತ್ತಿರುವ ಪರಿಹಾರ ಧನವನ್ನು 15 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳಿಗೆ ಏರಿಕೆ ಮಾಡಿ ಪರಿಷ್ಕರಿಸಲಾಗಿದೆ.
ಐಐಎಸ್ಸಿಯೊಂದಿಗೆ ಒಡಂಬಡಿಕೆೆ: ಸಚಿವ ಖಂಡ್ರೆ
ರಾಜ್ಯದಲ್ಲಿ ಹೆಚ್ಚುತ್ತಿರುವ ಆನೆ-ಮಾನವ ಸಂಘರ್ಷ ನಿಯಂತ್ರಿಸಲು ಮತ್ತು ಕಾಡಿನಂಚಿನ ರೈತರ ಬೆಳೆ ರಕ್ಷಿಸುವ ನಿಟ್ಟಿನಲ್ಲಿ ಆನೆ ಪಥ (ಕಾರಿಡಾರ್), ಆವಾಸಸ್ಥಾನ ರಕ್ಷಣೆಗೆ ಆಧುನಿಕ ತಂತ್ರಜ್ಞಾನ ಬಳಸಲು ತೀರ್ಮಾನಿಸಲಾಗಿದ್ದು, ಐಐಎಸ್ಸಿಯೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಾಗಿದೆ ಎಂದು ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಸ್ಯಾಟ್ ಲೈಟ್ ಟೆಲಿಮೆಟ್ರಿ, ಕ್ಯಾಮರಾ ಟ್ರಾಪ್‌ಗಳು ಮತ್ತು ಜಿಐಎಸ್ ಮಾದರಿಗಳನ್ನು ಬಳಸಿಕೊಂಡು ಆನೆ ಕಾರಿಡಾರ್‌ಗಳನ್ನು ಗುರುತಿಸುವುದು ಮತ್ತು ಆನೆಗಳ ಸುಗಮ ಸಂಚಾರಕ್ಕೆ ಎದುರಾಗಿರುವ ಅಡೆತಡೆಗಳನ್ನು ಗುರುತಿಸುವುದು ಈ ಯೋಜನೆಯ ಮುಖ್ಯ ಉದ್ದೇಶ ಎಂದು ಸಚಿವರು ಹೇಳಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಆನೆ ಕಾರ್ಯಪಡೆ ರಚನೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆಶ್ವಾಸನೆ ನೀಡಿದ್ದು, ಸರಕಾರಿ ಆದೇಶ ಬಾಕಿ ಇದೆ. ಅಲ್ಲದೇ ಜಿಲ್ಲೆಯಲ್ಲಿ ಆನೆ ಶಿಬಿರ ಸ್ಥಾಪಿಸುವ ಕುರಿತಂತೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಅದು ಚರ್ಚೆಯ ಹಂತದಲ್ಲಿದೆ. ಕಡಬದ ಗುಂಡ್ಯ ಮತ್ತು ಬೆಳ್ತಂಗಡಿಯ ನಿಡಿಗಲ್ ಈ ಎರಡು ಪ್ರದೇಶಗಳಲ್ಲಿ ಆನೆ ಶಿಬಿರ ಮಾಡಲು ಸೂಕ್ತ ಎಂಬ ಸಲಹೆಯನ್ನು ಸರಕಾರಕ್ಕೆ ನೀಡಲಾಗಿದೆ.
-ಆ್ಯಂಟನಿ ಮರಿಯಪ್ಪ,ಡಿಸಿಎಫ್, ಮಂಗಳೂರು ವಲಯ







