ಮೆಡಿಕಲ್ ಕಾಲೇಜು ಹೋರಾಟಕ್ಕೆ ಶತಕ : ಒಕ್ಕೊರಲಿನ ಧ್ವನಿಗೆ ಸ್ಪಂದಿಸುವುದೇ ಸರಕಾರ?

ವಿಜಯಪುರ, ಡಿ.25: ಖಾಸಗಿ ಸಹಭಾಗಿತ್ವದಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಕೈ ಬಿಟ್ಟು ಸಂಪೂರ್ಣ ಸರಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಆಗ್ರಹಿಸಿ ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಸಾರಥ್ಯದಲ್ಲಿ ನಡೆಯುತ್ತಿರುವ ಹೋರಾಟ ಶತಕ ಪೂರ್ಣಗೊಳಿಸಿದೆ.
ಹೋರಾಟಕ್ಕೆ ಸರಕಾರದ ಸ್ಪಂದನೆ ದೊರಕಿಲ್ಲ, ಆದರೆ ಹೋರಾಟಗಾರರ ಅದಮ್ಯ ಉತ್ಸಾಹ ಮಾತ್ರ ಕುಂದಿಲ್ಲ. ಧರಣಿ ನಿರತ ಹೋರಾಟಗಾರರು ವಿವಿಧ ಸ್ವರೂಪದ ಹೋರಾಟ ಮಾಡಿ ಸರಕಾರದ ಕಣ್ಣು ತೆರೆಯುವ ಕೆಲಸ ಮಾಡುವಲ್ಲಿ ಹಿಂದೆ ಬಿದ್ದಿಲ್ಲ.
ಧರಣಿ 100 ದಿನ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲರ ನಿವಾಸದ ಎದುರು ಧರಣಿ ನಡೆಸುವ ಕಾರ್ಯಯೋಜನೆಯನ್ನು ಹೋರಾಟಗಾರರು ರೂಪಿಸಿದ್ದರು. ಸದ್ಯ, ಜಿಲ್ಲಾ ಉಸ್ತುವಾರಿ ಸಚಿವರು ಸರಕಾರಿ ಮೆಡಿಕಲ್ ಕಾಲೇಜು ಪರವಾಗಿ ಭಾವನಾತ್ಮಕವಾಗಿ ಸ್ಪಂದಿಸಿರುವುದರಿಂದ ಅವರ ನಿವಾಸದ ಎದುರು ಧರಣಿ ನಡೆಸುವುದನ್ನು ತಾತ್ಕಾಲಿಕವಾಗಿ ಕೈ ಬಿಟ್ಟಿದ್ದಾರೆ.
ಸಚಿವ ಡಾ.ಎಂ.ಬಿ. ಪಾಟೀಲ ಅವರೂ ಈ ವಿಷಯವಾಗಿ ಸ್ಪಷ್ಟನೆ ನೀಡಿದ್ದು, ನಾನು ಪಿಪಿಪಿ ಪರವಾಗಿಲ್ಲ. ಸರಕಾರಿ ಮೆಡಿಕಲ್ ಕಾಲೇಜು ಪರವಾಗಿಯೇ ಇದ್ದೇನೆೆ. ಮತ್ತೊಮ್ಮೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿಸುವೆ. ಈ ಹಿಂದೆಯೂ ಸಚಿವ ಸಂಪುಟದಲ್ಲಿ ಈ ವಿಷಯವನ್ನು ಪ್ರಬಲವಾಗಿ ಮಂಡಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ 150 ಎಕರೆ ಜಾಗ, ತಾಯಿ-ಮಕ್ಕಳ ಆಸ್ಪತ್ರೆ, 40 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ನರ್ಸಿಂಗ್ ಕಾಲೇಜು ಹೀಗೆ ಹಲವಾರು ಸೌಲಭ್ಯಗಳಿವೆ. ಹೀಗಿರುವಾಗಿ ಕೆಲವೇ ಕೋಟಿ ಅನುದಾನ ನೀಡಿದರೆ ಸರಕಾರಿ ಕಾಲೇಜು ಆರಂಭವಾಗುತ್ತದೆ. ಬೇರೆ ಬೇರೆ ಜಿಲ್ಲೆಗಳಿಗೆ ಸಾಕಷ್ಟು ಅನುದಾನ ನೀಡಿ, ಅಷ್ಟೇ ಅಲ್ಲದೇ ಜಮೀನು ಖರೀದಿಸಲು ಸಹ ಅನುದಾನ ನೀಡಿ ಸರಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡಲಾಗಿದೆ. ಆದರೆ ವಿಜಯಪುರ ಜಿಲ್ಲೆಯಲ್ಲಿ ಮಾತ್ರ ಎಲ್ಲ ಸೌಲಭ್ಯ ಇದ್ದರೂ ಮೀನಮೇಷ ಎಣಿಸುತ್ತಿರುವ ಸರಕಾರದ ಧೋರಣೆ ಪ್ರತಿಭಟನಾನಿರತರ ಅಸಮಧಾನಕ್ಕೆ ಕಾರಣವಾಗಿದೆ.
ಲಿಖಿತ ಆದೇಶ ದೊರಕುವವರೆಗೂ ಹೋರಾಟ ನಿಲ್ಲದು
ಹೋರಾಟ 100 ದಿನ ಪೂರ್ಣಗೊಳಿಸುವ ಹಿನ್ನೆಲೆಯಲ್ಲಿ ಸಹಿ ಸಂಗ್ರಹಣೆಗೆ ಮುಂದಾಗಿರುವ ಹೋರಾಟಗಾರರು ಲಿಖಿತವಾಗಿ ಅಥವಾ ಸಚಿವ ಸಂಪುಟದ ನಿರ್ಣಯ ಪ್ರತಿ ದೊರಕುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಕೇವಲ ಹೇಳಿಕೆಯಿಂದ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಹಿ ಸಂಗ್ರಹಣೆಯ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಮನವಿಯನ್ನು ಮುಖ್ಯಮಂತ್ರಿಗೆ ಸಲ್ಲಿಸುವಂತೆ ಕೋರಲಾಗುತ್ತದೆ. ಸ್ಪಷ್ಟವಾದ ಲಿಖಿತ ಭರವಸೆ ದೊರಕುವವರೆಗೂ ನಾವು ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನಕಾರರು ಪಟ್ಟು ಹಿಡಿದಿದ್ದಾರೆ.
ನಗರ ಶಾಸಕರು ಹೊರತುಪಡಿಸಿ ಉಳಿದ ಶಾಸಕರ ಬೆಂಬಲ
ಈಗ ಹೋರಾಟ 100 ದಿನ ತಲುಪಿದ್ದು, ಕಳೆದ 10 ದಿನಗಳಿಂದ ಅಹೋರಾತ್ರಿ ಹೋರಾಟ ನಡೆಯುತ್ತಿದೆ, ಸಚಿವರಾದ ಡಾ.ಎಂ.ಬಿ. ಪಾಟೀಲ, ಶಿವಾನಂದ ಪಾಟೀಲರು ಹೋರಾಟ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ನೀಡಿದ್ದೂ ಆಗಿದೆ. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊರತುಪಡಿಸಿ ಎಲ್ಲ ಶಾಸಕರು ಹೋರಾಟ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸದನದಲ್ಲಿಯೇ ಪಿಪಿಪಿ ಪರವಾಗಿ ಬ್ಯಾಟಿಂಗ್ ಮಾಡಿದ್ದ ಶಾಸಕರು ಖಾಸಗಿ ಆಸ್ಪತ್ರೆ ಸ್ಥಾಪನೆಗೆ ಸಹಭಾಗಿತ್ವ ನೀಡಿ, ಬಂಡವಾಳ ಹೂಡಲು ಸಿದ್ಧ ಎಂದು ಬಹಿರಂಗವಾಗಿಯೇ ಹೇಳಿದ್ದರು. ಹೀಗಾಗಿ ಅವರು ಹೋರಾಟದ ಸ್ಥಳಕ್ಕೆ ಸುಳಿದಿಲ್ಲ. ಆದರೆ ಅವರ ಕಟ್ಟಾ ಬೆಂಬಲಿಗ ಎಂದೇ ಗುರುತಿಸಿಕೊಂಡಿದ್ದ ರಾಘವ ಅಣ್ಣಿಗೇರಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿ ಅದೇ ಸ್ಥಳದಿಂದ ನಗರ ಶಾಸಕರಿಗೆ ಪಿಪಿಪಿ ಪರ ಧೋರಣೆ ಕೈ ಬಿಡುವಂತೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದೂ ಇದೆ.
ಹೋರಾಟಕ್ಕೆ 100 ದಿನ ಪೂರ್ಣಗೊಳ್ಳಲಿದ್ದು, ನಮ್ಮ ಹೋರಾಟ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಆಗುವರೆಗೂ ನಡೆಯಲಿದೆ. ದಾಖಲೆ ಪ್ರಮಾಣದ ಚಳಿಯಲ್ಲಿ ಅಹೋರಾತ್ರಿ ಧರಣಿ ನಡೆಯುತ್ತಿದೆ. ಆದರೂ ಸರಕಾರ ನಿರ್ಲಕ್ಷ್ಯ ಮಾಡುತ್ತಿದೆ.
<ಲಲಿತಾ ಬಿಜ್ಜರಗಿ ಜಿಲ್ಲಾ ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿಯ ಸದಸ್ಯರು, ವಿಜಯಪುರ
ರಕ್ತದಲ್ಲೂ ಮನವಿ: ಚಳಿಗೂ ಕಾವು ಕಳೆದುಕೊಳ್ಳದ ಹೋರಾಟ
ಕಳೆದ 100 ದಿನಗಳಿಂದ ಹೋರಾಟ ನಡೆಸುತ್ತಿರುವ ಹೋರಾಟಗಾರರು ಅನೇಕ ರೂಪದ ಹೋರಾಟ ಮಾಡಿದ್ದಾರೆ. ರಕ್ತದಲ್ಲಿ ಸಹಿ ಮಾಡಿದ್ದಾರೆ, ರಕ್ತದಲ್ಲಿಯೇ ಸರಕಾರಿ ಮೆಡಿಕಲ್ ಕಾಲೇಜು ಬೇಕು ಎಂಬ ಸಂದೇಶ ರವಾನಿಸಿದ್ದಾರೆ. ಕವಿಗೋಷ್ಠಿಯ ಮೂಲಕ ಸರಕಾರಕ್ಕೆ ಸಂದೇಶ ರವಾನಿಸುವ ಕೆಲಸ ಮಾಡಿದ್ದಾರೆ. ಪ್ರತಿಕೃತಿ ದಹನ, ಪ್ರತಿಭಟನಾ ಮೆರವಣಿಗೆ ಅನೇಕ ಸ್ವರೂಪಗಳ ಹೋರಾಟಗಳು ನಡೆಯುತ್ತಿವೆ. ಕಳೆದ 10 ದಿನಗಳಿಂದ ಅಹೋರಾತ್ರಿ ಧರಣಿ ನಡೆಯುತ್ತಿದೆ. ದಾಖಲೆ ಪ್ರಮಾಣದ ಚಳಿಯಲ್ಲಿಯೂ ಹೋರಾಟಗಾರರು ಟೆಂಟ್ ಹಾಕಿ ಸ್ಥಳದಲ್ಲಿಯೇ ಇದ್ದಾರೆ. ಅಲ್ಲಿಯೇ ಪಕ್ಕದಲ್ಲಿ ಅಗ್ನಿ ಕಾಯಿಸಿ ಚಳಿ ಕಾಯಿಸಿಕೊಳ್ಳುತ್ತಿರುವ ದೃಶ್ಯ ಪ್ರತಿಭಟನಾ ಸ್ಥಳದಲ್ಲಿ ಕಂಡು ಬರುತ್ತದೆ.







