ನಾಡಗೀತೆಯಲ್ಲಿ ಕುವೆಂಪು ಬರೆದ ‘ಬೌದ್ಧರುದ್ಯಾನ’ ಕೈಬಿಟ್ಟವರು ಯಾರು?

ರಾಷ್ಟ್ರಕವಿ ಕುವೆಂಪುರವರು ರಚಿಸಿದ ಮೂಲ ನಾಡಗೀತೆಯಲ್ಲಿ ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಬೌದ್ಧರುದ್ಯಾನ ಎಂದು ಇರುವುದು ಸತ್ಯ. (ಇದನ್ನು ಕುವೆಂಪುರವರ ಆತ್ಮಕಥನ ‘ನೆನಪಿನ ದೋಣಿಯಲಿ’ ಕೃತಿಯ ಐದನೇ ಸಂಪುಟ-ಪುಟ ಸಂಖ್ಯೆ 547ರಲ್ಲಿ ಕಾಣಬಹುದು) ಕುವೆಂಪುರವರು ಕನ್ನಡ ನಾಡು ಎಲ್ಲಾ ಧಾರ್ಮಿಕ ಉದ್ಯಾನಗಳಂತೆ ಬೌದ್ಧರುದ್ಯಾನವೂ ಕೂಡಾ ಎಂದು ಕರೆದಿರುವುದು ನಾವು ಉಸಿರಾಡುತ್ತಿರುವಷ್ಟೇ ನಿಖರ.
ಕರ್ನಾಟಕ ರಾಷ್ಟ್ರಗೀತೆ ಎಂಬ ತಲೆ ಬರಹದೊಂದಿಗೆ, ರವೀಂದ್ರನಾಥ್ ಠಾಗೂರರ ‘ಜನಗಣಮನ’ ರಾಷ್ಟ್ರಕ್ಕೆ ಇರುವಂತೆ, ಕನ್ನಡ ನಾಡಿಗೂ ನಾಡಗೀತೆಯನ್ನು 1924ರಲ್ಲಿಯೇ ಕುವೆಂಪು ಈ ನಾಡಿನ ಸೌಂದರ್ಯ ವರ್ಣಿಸುತ್ತ ರಚಿಸಿದ್ದಾರೆ. 2025ಕ್ಕೆ ನಮ್ಮ ನಾಡಗೀತೆಗೆ ನೂರು ವರ್ಷಗಳು ತುಂಬುತ್ತಿವೆ. ಕರ್ನಾಟಕ ಸರಕಾರ 2004ರಲ್ಲಿ ನಮ್ಮ ನಾಡಗೀತೆಯನ್ನು ಅಧಿಕೃತವಾಗಿ ಘೋಷಿಸಿಕೊಂಡಿದ್ದೂ ಕೂಡ ನಮಗೆ ತಿಳಿದಿದೆ.
ಮೂಲ ಬರಹದಲ್ಲಿ ‘ಜೈನರುದ್ಯಾನ’ ಎಂದು ಕುವೆಂಪುರವರು ಬರೆದಿಲ್ಲ. ಆದರೆ ‘ಬೌದ್ಧರುದ್ಯಾನ’ ಎಂದು ಬರೆದಿದ್ದಾರೆ. ಬೌದ್ಧರುದ್ಯಾನ ಪದವನ್ನು ತೆಗೆದು, ಆ ಸ್ಥಳಕ್ಕೆ ಜೈನರುದ್ಯಾನ ಪದವನ್ನು ಪೋಣಿಸಲಾಗಿದೆ.
ಜೈನರುದ್ಯಾನ ಪದವನ್ನು ಸೇರಿಸಿರುವುದಕ್ಕೆ ಯಾವುದೇ ಆಕ್ಷೇಪಗಳಿಲ್ಲ. ಆದರೆ ಬೌದ್ಧರುದ್ಯಾನ ಪದ ತೆಗೆದು ನಾಡಿನೊಳಗೆ ಬೌದ್ಧರ ಅಸ್ಮಿತೆಯನ್ನು ನಾಶ ಮಾಡಿದ್ದೇಕೆ..? ಇದು ಬೌದ್ಧ ಸಾಂಸ್ಕೃತಿಕ ಪರಂಪರೆಯ ಹತ್ಯೆಯ ಹುನ್ನಾರವಲ್ಲವೇ..?
ಕನ್ನಡ ನಾಡಿನಿಂದ ಗೌತಮ ಬುದ್ಧರ ಅಸ್ಮಿತೆಯನ್ನು ಹೊರಗಿಟ್ಟು ಕುವೆಂಪುರವರು ನಾಡಗೀತೆಯನ್ನು ರಚಿಸಲು ಸಾಧ್ಯವೇ ಇಲ್ಲ ಎಂಬ ಸತ್ಯ ಬಯಲಾಗಿದೆ. ತಮ್ಮ ಕಾದಂಬರಿ, ಬರಹಗಳಲ್ಲಿ ಬೌದ್ಧರ ಅಸ್ಮಿತೆಯನ್ನು ಉಳಿಸಿಕೊಂಡು, ಬುದ್ಧರ ದಿಕ್ಕನ್ನು ತೋರಿಸಿರುವ ಕುವೆಂಪುರವರು ತಮ್ಮ ನಾಡಗೀತೆಯಲ್ಲಿಯೂ ಗೌತಮ ಬುದ್ಧರ ಅಸ್ಮಿತೆಯನ್ನು ಇಟ್ಟಿರುವುದು ಸತ್ಯವೇ ಆಗಿದೆ. ವಿಶ್ವವ್ಯಾಪಿಯಾದ ಗೌತಮ ಬುದ್ಧರನ್ನು ಕನ್ನಡ ನಾಡಿನಿಂದ ಬೇರ್ಪಡಿಸಲು ಸಾಧ್ಯವೇ?
ಜೈನ ಧರ್ಮದಂತೆ ಬೌದ್ಧ ಧರ್ಮವು ಕೂಡ ಈ ನೆಲದ ಧರ್ಮವೇ ಆಗಿರುವಾಗ, ಎರಡು ಧರ್ಮಗಳ ಸಾಂಸ್ಕೃತಿಕ ಬೇರುಗಳು ಈ ನೆಲ, ಜಲ, ಗಾಳಿ, ಭಾಷೆ, ಜನಜೀವನದಲ್ಲಿ ಸೂಕ್ಷ್ಮವಾಗಿ ಪ್ರಸರಿಸಿರುವಾಗ, ಈ ನಾಡಿನ ಜನ ಪ್ರತಿಯೊಂದು ಧರ್ಮ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಮನಪೂರ್ವಕವಾಗಿ ಗೌರವಿಸುತ್ತಿರುವಾಗ, ಗೌತಮ ಬುದ್ಧರ ಚಿಂತನೆಗಳನ್ನು ನಾಡಿನ ಸಂಸ್ಕೃತಿಯಿಂದ ಬೇರ್ಪಡಿಸುವ ಕೃತ್ಯಗಳು ಏಕೆ ನಡೆಯುತ್ತವೆ? ಎಲ್ಲಾ ಧರ್ಮಗಳಿಗೆ ನಾಡಗೀತೆಯಲ್ಲಿ ಸ್ಥಾನ ನೀಡಿ ಗೌರವಿಸುವಾಗ, ಈ ನೆಲದ್ದೇ ಆದ ಧರ್ಮವನ್ನು ಏಕೆ ಗೌರವಿಸಬಾರದು? ಎಂಬ ನೂರಾರು ಪ್ರಶ್ನೆಗಳು ನಮ್ಮ ನಾಳಿನ ತಲೆಮಾರಿನಲ್ಲಿ ಹುಟ್ಟಿಕೊಂಡರೆ ಉತ್ತರಿಸಲು ಇಲ್ಲಿ ಯಾರೂ ಇರುವುದಿಲ್ಲ. ನಮ್ಮ ಹಿರಿಯರು ಅದೆಂತಹ ಘೋರಕೃತ್ಯವನ್ನು ಎಸಗಿದ್ದಾರೆಂದು ನಾಳಿನ ತಲೆಮಾರು ಈ ನಮ್ಮ ತಲೆಮಾರನ್ನು ಅಪರಾಧಿ ಸ್ಥಾನದಲ್ಲಿ ಇರಿಸಬಹುದು.
ಇಂತಹ ನೂರಾರು ಪ್ರಶ್ನೆಗಳೊಂದಿಗೆ ‘ಚಿಂಬಬ’ ಎಂದು ನಾಮಾಂಕಿತ ಡಾ. ಬಸವರಾಜು ತಮ್ಮ ಸಂಶೋಧನಾತ್ಮಕ ದಾಖಲಾತಿಗಳನ್ನು ಸಂಗ್ರಹಿಸಿ ನಾಡಗೀತೆಯಲ್ಲಿ ಬೌದ್ಧರುದ್ಯಾನ ಏಕೆ ಇಲ್ಲ? ಎಂಬ ಶೀರ್ಷಿಕೆಯನ್ನು ಇಟ್ಟುಕೊಂಡು ಕಳೆದ ಹತ್ತು ವರ್ಷಗಳಿಂದಲೂ ಹೋರಾಟ ಮಾಡುತ್ತಿದ್ದಾರೆ. ನಾಡಿನ ಪ್ರಾಜ್ಞರು ಈ ಚರ್ಚೆಯಲ್ಲಿ ಭಾಗಿಯಾಗಿದ್ದಾರೆ. ಮೂಲ ನಾಡಗೀತೆಯನ್ನು ತಿದ್ದುವಾಗ ಆಗಿರುವ ಪ್ರಮಾದದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸಮಯ, ಪ್ರಾಸ, ಲಯ, ಸಂಗೀತ ಹೀಗೆ ಹಲವು ಕಾರಣಗಳನ್ನು ಮುಂದೆ ಇಟ್ಟು ನಾಡಗೀತೆಗೆ ಆಪರೇಷನ್ ಮಾಡಲಾಗಿದೆ. ಮತ್ತೆ ನಾಡಗೀತೆಯಲ್ಲಿ ಕುವೆಂಪುರವರು ಮೂಲದಲ್ಲಿ ರಚಿಸಿದಂತೆ ಬೌದ್ಧರುದ್ಯಾನ ಪದ ಸೇರ್ಪಡೆಯಾಗಬೇಕು ಎಂದು ಅಭಿಪ್ರಾಯಸಿದ್ದಾರೆ. ಇನ್ನು ಉಳಿದಿರುವುದು ಜನ ಮತ್ತು ಸರಕಾರದ ನಿರ್ಧಾರವಾಗಿದೆ.
ಮುಂದಿನ ದಾರಿ
ಈಗ ನಾಡಗೀತೆಗೆ ನೂರು ವರ್ಷ ತುಂಬುತ್ತಿರುವ 2025ರ ಈ ಸಂದರ್ಭದಲ್ಲಿ, ನವೆಂಬರ್ 1 ಬರುವಷ್ಟರಲ್ಲಿ ನಾಡಿನ ಪ್ರಜ್ಞಾವಂತರು ಸರಕಾರದ ಗಮನ ಸೆಳೆಯಬೇಕು. ನಾಡಿನ ವಿದ್ವಾಂಸರು, ಕವಿಗಳು, ಚಿಂತಕರು, ಮಾತನಾಡಬೇಕು. ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರದ ಬಗ್ಗೆ ವ್ಯಾಪಕ ಚರ್ಚೆ ಆಗಬೇಕು. ಪತ್ರ ಚಳವಳಿ ಆಗಬೇಕು.
‘ಯುದ್ಧ ಬೇಡ ಬುದ್ಧ ಬೇಕು’ ಎಂದು ಜಗತ್ತು ಜಪಿಸುತ್ತಿರುವಾಗ, ಬುದ್ಧರ ಶಾಂತಿ, ಕರುಣೆ, ಮೈತ್ರಿಗಳು ಜಗತ್ತನ್ನು ವ್ಯಾಪಿಸುತ್ತಿರುವಾಗ, ನಮ್ಮ ನಾಡಿನ ಅಸ್ಮಿತೆಯಿಂದ ಈ ಚಿಂತನೆಗಳನ್ನು ದೂರೀಕರಿಸುವುದು ಹೇಗೆ? ಸಾರ್ವಜನಿಕವಾಗಿ ಬುದ್ಧರ ಆಲೋಚನೆಗಳು, ಚಿಂತನೆಗಳಿಗೆ ಅನ್ಯಾಯ ಮಾಡುವುದು ಸರಿಯೇ?
ನಾಡಗೀತೆ ಶುರುವಾಗಿ; ಎದ್ದುನಿಂತು, ಎಲ್ಲವನ್ನು ಎಲ್ಲರನ್ನೂ ಗೌರವಿಸುವಾಗ ಬುದ್ಧನನ್ನೇಕೆ ಇಲ್ಲಿಂದ ಉದ್ದೇಶಪೂರ್ವಕವಾಗಿ ಕತ್ತರಿಸಿದರು ಎಂಬ ಕೊರಗು ನಮ್ಮನ್ನು ಕಾಡಲೇ ಬೇಕು.
ಸಿಪಿಕೆರವರು ‘‘ನಾಡಗೀತೆಯೊಳಗೆ ಮಾಧ್ವರ ಪದ ಸೇರಿಸಲು ತೇಜಸ್ವಿಯವರು ವಿರೋಧವಿದ್ದರು. ಅವರನ್ನು ಮನವೊಲಿಸಿ ಈ ಪದ ಸೇರಿಸಲಾಯಿತು’’ ಎಂದಿದ್ದರು. ಹಾಗೆಯೇ ‘ಗೌತಮನುತ’ ಪದವನ್ನು ‘ಗೌತಮ ಜಿನನುತ’ ಎಂದು ಮಾರ್ಪಡಿಸಲಾಯಿತು. ಹೀಗೆ ಅನೇಕ ಪದಗಳನ್ನು ಸೇರಿಸುವ, ಕೈಬಿಡುವ ವಿಚಾರದಲ್ಲಿ, ಒಂದು ಕಾಲಕ್ಕೆ ಕುವೆಂಪುರವರೇ ಬೇಸತ್ತು ‘‘ನೀವು ಏನಾದರೂ ಮಾಡಿಕೊಳ್ಳಿ ಹೋಗಿ ಆದರೆ ನನ್ನ ಮೂಲ ಪದ್ಯಕ್ಕೆ ಯಾವ ಪರಿಷ್ಕರಣೆಯನ್ನು ಮಾಡಬೇಡಿ, ಯಾವ ಹೊಸ ಪದವನ್ನು ಸೇರಿಸಬೇಡಿ’’ ಎಂದು ಹೇಳಿದ್ದೂ ಉಂಟು, ಇಷ್ಟೆಲ್ಲಾ ಸಂಘರ್ಷದಲ್ಲಿ ಕೇಳುವವರಿಲ್ಲದ ಕಾರಣ ‘ಬೌದ್ಧರುದ್ಯಾನ’ ಪದ ತಬ್ಬಲಿಯಾಯಿತು. ಆದರೆ ಮೂಲದಲ್ಲಿ ಹಾಗೆಯೇ ಉಳಿದು ದಿನನಿತ್ಯದ ಪಠಣ ಗೌರವಾಧಾರಗಳಿಂದ ದೂರ ಉಳಿಯಿತು. ಇಂತಹ ಪ್ರಮಾದಗಳು, ನಿರ್ಲಕ್ಷ್ಯಗಳು ಹತ್ತಿಕ್ಕುವ ಪೂರ್ವಾಗ್ರಹವಿಲ್ಲದೆ ನಡೆಯಲಾರವು.
ಈಗ, ಆಗಿರುವ ಪ್ರಮಾದವನ್ನು ಸರಿಪಡಿಸುವ ಕಾಲ ಸನ್ನಿಹಿತವಾಗಿದೆ. ಹಾಗೆಯೇ ನಾಡಗೀತೆಗೆ ನೂರು ವರ್ಷ ತುಂಬುತ್ತಿರುವ ಈ ವರ್ಷದಲ್ಲಿ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಬೌದ್ಧರ ಅಸ್ತಿತ್ವವು ಉಳಿಯಲಿ. ರಾಜ್ಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ; ಬರುವ ನವೆಂಬರ್ ಅಷ್ಟರಲ್ಲಿ ಸರಿಪಡಿಸಲಿ ಎಂಬುದು ಮನವಿ.







