Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಹಂಗಾಮಿ ಟಿಪ್ಪಣಿಗಳು
  5. ಸಮಾಜವು ಸ್ವಸ್ಥವಾಗಿದ್ದರೆ, ಅಸ್ವಸ್ಥರು...

ಸಮಾಜವು ಸ್ವಸ್ಥವಾಗಿದ್ದರೆ, ಅಸ್ವಸ್ಥರು ಗೆಲ್ಲಬಾರದು

ಹವ್ವಾ ಶುಕೂರ್, ಬೋಳಾರ್ಹವ್ವಾ ಶುಕೂರ್, ಬೋಳಾರ್20 Sept 2025 10:39 AM IST
share
ಸಮಾಜವು ಸ್ವಸ್ಥವಾಗಿದ್ದರೆ, ಅಸ್ವಸ್ಥರು ಗೆಲ್ಲಬಾರದು

ಬಾನು ಮುಷ್ತಾಕ್ ಜಗದ್ವಿಖ್ಯಾತ ಬೂಕರ್ ಪ್ರಶಸ್ತಿಯನ್ನು ಮಾತ್ರವಲ್ಲ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ನಮ್ಮದೇ ನಾಡಿನ ಖ್ಯಾತನಾಮ ಮಹಿಳೆ. ನಮ್ಮಲ್ಲಿ ಬ್ರಾಹ್ಮಣ ಸಾಹಿತಿಗಳನ್ನು ಬ್ರಾಹ್ಮಣ ಸಾಹಿತಿ ಎಂದು ಜೀವನದಲ್ಲೊಮ್ಮೆಯೂ ಕರೆದಿಲ್ಲದ, ಹಾಗೆ ಕರೆಯುವುದನ್ನು ದ್ವೇಷಿಸುವ ಹಲವರಿದ್ದಾರೆ. ಅದೇ ಮಂದಿ, ತಮಗಿಷ್ಟವಿಲ್ಲದವರು ಸಾಹಿತ್ಯ ಕ್ಷೇತ್ರ ಪ್ರವೇಶಿಸುವ ಕುರಿತು ತಮ್ಮ ಆಕ್ರೋಶವನ್ನು ಹೊರಗೆಡಹಲಿಕ್ಕಾಗಿ ಅವರನ್ನು ‘ದಲಿತ ಸಾಹಿತಿ’ ಎಂದು ಕರೆಯುವಂತೆ, ಬಾನು ಮುಷ್ತಾಕ್ ಅವರ ಮೇಲೆ ‘ಮುಸ್ಲಿಮ್ ಸಾಹಿತಿ’ ಎಂಬ ಹಣೆಪಟ್ಟಿ ಅಂಟಿಸಲು ಶ್ರಮಿಸಿದ್ದಾರೆ. ಆದರೆ ಆಕೆ ಮಾತ್ರ ಎಲ್ಲ ಹಣೆಪಟ್ಟಿಗಳನ್ನು ಮೀರಿ ಬೆಳೆದಿದ್ದಾರೆ. ಅವರು ತಮ್ಮ ಸಂವೇದನಾಶೀಲ ಸಾಹಿತ್ಯಕ್ಕಾಗಿ ಖ್ಯಾತರಾಗಿರುವಂತೆ, ತಮ್ಮ ಸ್ನೇಹಶೀಲ, ನಯವಿನಯದ ನಡುವಳಿಕೆಯಿಂದಲೂ ಜನಪ್ರಿಯರಾಗಿದ್ದಾರೆ. ಅಂತಹ ಹಿರಿಯ, ಗೌರವಾನ್ವಿತ ವ್ಯಕ್ತಿತ್ವದ ಬಾನು ಮುಷ್ತಾಕ್ ಅವರನ್ನು ದಸರಾ ಉತ್ಸವದ ಉದ್ಘಾಟನೆಗಾಗಿ ಆರಿಸಲಾಗಿದೆ ಎಂಬ ಸುದ್ದಿ ಬಂದಾಗಿನಿಂದ ಹಲವರು ಅಸಹನೀಯ ಹೊಟ್ಟೆ ಉರಿಯಿಂದ ನರಳುತ್ತಿದ್ದಾರೆ. ಬಾನು ಅವರ ಕೈಯಿಂದ ದಸರಾ ಉದ್ಘಾಟನೆಯಾಗುವುದನ್ನು ತಡೆಯಲು ಅವರು ಏನೇನೆಲ್ಲಾ ಕೋತಿಯಾಟ ಆಡಿದ್ದಾರೆ, ಆಡುತ್ತಿದ್ದಾರೆ. ಅವರು ಹೈಕೋರ್ಟ್ ಮೂಲಕ ಬಾನು ಮುಷ್ತಾಕ್‌ರನ್ನು ತಡೆಯಲೆತ್ನಿಸಿ ವಿಫಲರಾಗಿದ್ದರು. ಇದೀಗ ಸುಪ್ರೀಂ ಕೋರ್ಟ್ ಕೂಡಾ ಅವರ ಮನವಿಯನ್ನು ತಿರಸ್ಕರಿಸಿದೆ.

ಮಾನಸಿಕ ಜೀರ್ಣ ಶಕ್ತಿ ಶೂನ್ಯವಾಗಿರುವವರಿಗೆ ಒಂದೆರಡಲ್ಲ, ಅನೇಕಾರು ಇತರ ಮಾರಕ ರೋಗಗಳೂ ಇರುತ್ತವೆ. ಬೇರೆ ಬೇರೆ ಸಂದರ್ಭಗಳಲ್ಲಿ, ಬಾಯಿ ಭೇದಿ ಸಹಿತ ವಿವಿಧ ರೂಪಗಳಲ್ಲಿ ಅದರ ಪ್ರಕಟಣೆಯೂ ಆಗುತ್ತಿರುತ್ತದೆ. ಯಾವುದೇ ವೇದಿಕೆ ನಾಡಿನ ಎಲ್ಲ ಜಾತಿ ಧರ್ಮಗಳಿಗೆ ಸೇರಿದವರ ವೇದಿಕೆಯಾಗುವುದು ಅವರಿಗೆ ಜೀರ್ಣವಾಗುವುದಿಲ್ಲ. ಯಾವುದೇ ವೇದಿಕೆಯಲ್ಲಿ ಎಲ್ಲಾ ಜಾತಿ-ಧರ್ಮಗಳ ಜನರು ಜೊತೆಯಾಗಿ ಕಂಡು ಬರುವುದು ಅವರಿಗೆ ಜೀರ್ಣವಾಗುವುದಿಲ್ಲ. ಯಾವುದಾದರೂ ಹಬ್ಬ ಅಥವಾ ಉತ್ಸವವು ಎಲ್ಲರ ಉತ್ಸವವಾಗುವುದು ಅವರಿಗೆ ಜೀರ್ಣವಾಗುವುದಿಲ್ಲ. ತಮ್ಮ ಧಾರ್ಮಿಕ ಸ್ಥಳಗಳಿಗೆ ದಲಿತರು, ಶೂದ್ರರು ಮುಂತಾದ ನಿರ್ದಿಷ್ಟ ಜಾತಿಗಳ ಜನ ಪ್ರವೇಶಿಸುವುದು ಅವರಿಗೆ ಜೀರ್ಣವಾಗುವುದಿಲ್ಲ. ಮಹಿಳೆಯರು ತಮ್ಮ ಧಾರ್ಮಿಕ ಸ್ಥಳಗಳನ್ನು ಅಥವಾ ತಮ್ಮ ಧಾರ್ಮಿಕ ಕೇಂದ್ರಗಳ ಒಳಪ್ರದೇಶವನ್ನು ಪ್ರವೇಶಿಸುವುದು ಅವರಿಗೆ ಜೀರ್ಣವಾಗುವುದಿಲ್ಲ.

ಇಂಥ ರೋಗಗ್ರಸ್ತರು ತಮ್ಮ ಪ್ರಸ್ತುತ ಮಾರಕ ಮಾನಸಿಕ ಅಜೀರ್ಣತೆಯನ್ನು ಬಚ್ಚಿಡುವುದಕ್ಕಾಗಿ, ಅದನ್ನು ಬೇರೆಯವರ ತಲೆಯ ಮೇಲೆ ಹೊರಿಸುವ ಸಂಚುಗಳನ್ನೂ ನಡೆಸುತ್ತಾರೆ. ಉದಾ:

‘‘ಬಾನು ಮುಷ್ತಾಕ್ ಅವರು ದಸರಾ ಉತ್ಸವ ಉದ್ಘಾಟಿಸುವುದನ್ನು ಮುಸ್ಲಿಮ್ ವಿದ್ವಾಂಸರು ವಿರೋಧಿಸಿದ್ದಾರೆ’’ ಎಂಬ ವದಂತಿ ಹಬ್ಬಲು ಅವರು ಶ್ರಮಿಸಿದರು. ಹಲವು ಟಿ.ವಿ. ಚಾನೆಲ್‌ಗಳಲ್ಲಿ ಅಡಗಿರುವ ವಿಷಜಂತುಗಳು ತಮ್ಮ ಮೈಕು, ಕ್ಯಾಮರಾಗಳೊಂದಿಗೆ ಕೆಲವು ಮುಸ್ಲಿಮ್ ವಿದ್ವಾಂಸರ ಬಳಿಗೆ ಹೋಗಿ, ಹೇಗಾದರೂ ಅವರ ಬಾಯಿಂದ ಬಾನು ಮುಷ್ತಾಕ್ ಅವರ ವಿರುದ್ಧ ಅಥವಾ ದಸರಾ ವಿರುದ್ಧ ಏನಾದರೊಂದು ಮಾತನ್ನು ಉದುರಿಸಲು ಪರಿಪರಿಯಾಗಿ ಶ್ರಮಿಸಿದರು. ಆದರೆ ಆ ವಿದ್ವಾಂಸರು ಪ್ರಬುದ್ಧತೆ ಮೆರೆದದ್ದರಿಂದಾಗಿ ಈ ಮಂದಿ ಹೀನಾಯವಾಗಿ ಸೋತರು. ಕೆಲವರು ನಿರಾಶರಾಗಿ ಮರಳಿದರೆ ಮತ್ತೆ ಕೆಲವರು ಆ ವಿದ್ವಾಂಸರು ಹೇಳದೆ ಇದ್ದ ಮಾತುಗಳನ್ನು ಸೃಷ್ಟಿಸಿ ಅವರ ಮೇಲೆ ಹೊರಿಸಿದರು. ಆದರೆ ಈ ವದಂತಿಕೋರರ ಹಣೆಬರಹವನ್ನು ಚೆನ್ನಾಗಿ ಬಲ್ಲ ಜನತೆ ಅದನ್ನು ನಂಬಲಿಲ್ಲ. ದಸರಾ ಉತ್ಸವವು ಬಾನು ಮುಷ್ತಾಕ್ ಅವರ ಕೈಯಿಂದ ಉದ್ಘಾಟನೆಯಾಗುವುದನ್ನು ವೀಕ್ಷಿಸಲಿಕ್ಕಾಗಿ ಇದೀಗ ಜಗತ್ತಿನೆಲ್ಲೆಡೆಯ ಕೋಟ್ಯಂತರ ಕನ್ನಡಿಗರು ಉತ್ಸಾಹದಿಂದ ಕಾಯುತ್ತಿದ್ದಾರೆ.

***

ಮಾನಸಿಕ ಅಜೀರ್ಣತೆಯ ಹೊಲಸು ಕಾಯಿಲೆ ನಮ್ಮ ಕನ್ನಡ ನಾಡಿಗೇ ಸೀಮಿತವಾಗಿಲ್ಲ. ಈ ತಿಂಗಳ ಆರಂಭದಲ್ಲಿ (ಸೆಪ್ಟಂಬರ್ 1 ರಿಂದ 3) ಕೋಲ್ಕತಾದಲ್ಲಿ ಪಶ್ಚಿಮ ಬಂಗಾಳ ಉರ್ದು ಅಕಾಡಮಿ ಕಡೆಯಿಂದ ಒಂದು ಉರ್ದು ಸಾಹಿತ್ಯ ಸಮ್ಮೇಳನವು ನಡೆಯಬೇಕಿತ್ತು. ಎಲ್ಲ ಸಿದ್ಧತೆಗಳೂ ನಡೆದಿದ್ದವು. ಸಮ್ಮೇಳನದಲ್ಲಿ ‘‘ಹಿಂದಿ ಸಿನೆಮಾದಲ್ಲಿ ಉರ್ದು ಭಾಷೆ’’ ಎಂಬೊಂದು ಚರ್ಚಾ ವಿಷಯವಿತ್ತು.

ಆ ವಿಷಯದಲ್ಲಿ ಮಾತನಾಡಲು ಜಾಗತಿಕ ಮಟ್ಟದಲ್ಲಿ ಪ್ರಖ್ಯಾತರಾಗಿರುವ ಉರ್ದು ಸಾಹಿತಿ ಜಾವೇದ್ ಅಖ್ತರ್‌ರನ್ನು ಆಮಂತ್ರಿಸಲಾಗಿತ್ತು. ನಿಜವಾಗಿ ಆ ವಿಷಯದಲ್ಲಿ ಮಾತನಾಡಲು ಖಂಡಿತವಾಗಿಯೂ ಜಾವೇದ್ ಅಖ್ತರ್ ಅವರೇ ಅತ್ಯಂತ ಅರ್ಹ ವ್ಯಕ್ತಿಯಾಗಿದ್ದರು. ಈಸುದ್ದಿ ಪ್ರಕಟವಾದಂತೆ ಮಾನಸಿಕ ಅಜೀರ್ಣ ಪೀಡಿತರಿಗೆ ತಡೆಯಲಾಗದ ಹೊಟ್ಟೆ ನೋವು ಕಾಡತೊಡಗಿತು. ಅವರು ಚಡಪಡಿಸತೊಡಗಿದರು. ಅವರ ಕ್ಷೀಣ ಅಪಸ್ವರ ಕ್ರಮೇಣ ಕರ್ಕಶವಾಗಿ ಬೆಳೆಯಿತು. ನಿಜವಾಗಿ ನಮ್ಮ ದಸರಾ ಉತ್ಸವದಂತೆ ಆ ಸಾಹಿತ್ಯ ಸಮ್ಮೇಳನ ಕೂಡ ಎಲ್ಲ ಉರ್ದು ಭಾಷಾ ಅಭಿಮಾನಿಗಳ ಸಮ್ಮೇಳನವಾಗಿತ್ತು. ಎಲ್ಲ ಧರ್ಮೀಯರು ಒಂದೆಡೆ ಸೇರುವ ಒಂದು ಸರಕಾರಿ ಸಭೆಯಾಗಿತ್ತು. ಮಾನವೀಯ ಸಂಬಂಧಗಳ ಸ್ವಾಸ್ಥ್ಯವನ್ನು ಮೆರೆಯುವ ಒಂದು ಅವಕಾಶವಾಗಿತ್ತು. ಧರ್ಮದ ಜೊತೆ ಅದಕ್ಕೆ ವಿಶೇಷ ಸಂಬಂಧವೇನೂ ಇರಲಿಲ್ಲ. ಆದರೂ ‘ನಾನು ನಾಸ್ತಿಕ’ ಮತ್ತು ‘ನಾನು ವಿಚಾರವಾದಿ’ ಎಂದು ಹಲವು ಬಾರಿ ಘೋಷಿಸಿರುವ ಜಾವೇದ್ ಅಖ್ತರ್ ಇಸ್ಲಾಮ್ ಧರ್ಮ ವಿರೋಧಿಯಾದ್ದರಿಂದ ಅವರನ್ನು ಸಮ್ಮೇಳನಕ್ಕೆ ಕರೆಯಬಾರದು ಎನ್ನುವವರ ಕಡೆಯಿಂದ ಪ್ರತಿಭಟನೆಯ ಸರಣಿ ಆರಂಭವಾಯಿತು. ಜಾವೇದ್ ಅಖ್ತರ್ ವಿರುದ್ಧ ಮತ್ತು ಅವರನ್ನು ಆಮಂತ್ರಿಸಿದವರ ವಿರುದ್ಧ ಅಪಪ್ರಚಾರದ ಸರಣಿಯೂ ಆರಂಭವಾಯಿತು.

ವಾಸ್ತವದಲ್ಲಿ ಅದು ಜನತೆಯ ಪ್ರತಿಭಟನೆಯೇನೂ ಆಗಿರಲಿಲ್ಲ. ಯಾವುದಾದರೂ ಧರ್ಮದವರ ಅಧಿಕೃತ ಪ್ರತಿನಿಧಿಗಳ ಪ್ರತಿಭಟನೆಯೂ ಆಗಿರಲಿಲ್ಲ. ತಮ್ಮನ್ನು ಒಂದು ಧರ್ಮ ಮತ್ತು ಒಂದು ಸಮುದಾಯದ ಗುತ್ತಿಗೆದಾರರಾಗಿ ಗುರುತಿಸಬೇಕೆಂದು ತವಕಿಸುವ ಒಂದು ಸಣ್ಣ ಸಂಕುಚಿತವಾದಿ, ಸ್ವಾರ್ಥಿ, ಅಜೀರ್ಣ ರೋಗಿಗಳ ಪ್ರತಿಭಟನೆಯಾಗಿತ್ತು. ಕೊನೆಗೂ ಪಶ್ಚಿಮ ಬಂಗಾಳದ ಸರಕಾರವನ್ನು ಬ್ಲ್ಯಾಕ್ ಮೇಲ್ ಮಾಡುವಲ್ಲಿ ಆ ಗುಂಪು ಯಶಸ್ವಿಯಾಗಿ ಬಿಟ್ಟಿತು. ಸರಕಾರವು ಉರ್ದು ಸಾಹಿತ್ಯ ಸಮ್ಮೇಳನವನ್ನು ಮುಂದೂಡಿ ಬಿಟ್ಟಿತು.

ಜಾವೇದ್ ಅಖ್ತರ್‌ರಂತಹ ವ್ಯಕ್ತಿಯ ವಿರುದ್ಧ ನಡೆದ ಈ ಬೆಳವಣಿಗೆ ನಿಜಕ್ಕೂ ನಮ್ಮ ಸಂಪೂರ್ಣ ಸಮಾಜಕ್ಕೆ ನಾಚಿಕೆಗೇಡು. ಜಾವೇದ್ ಅಖ್ತರ್ ಯಾವುದೇ ಧರ್ಮದ ಅನುಯಾಯಿಯಲ್ಲ. ಅವರು ಎಲ್ಲ ಬಗೆಯ ಕೋಮುವಾದ, ಸಂಕುಚಿತವಾದ ಮತ್ತು ಮೌಢ್ಯವಾದಗಳನ್ನು ವಿರೋಧಿಸುತ್ತಾ ಬಂದವರು. ಎಲ್ಲ ಸಂವಿಧಾನ ವಿರೋಧಿ ವಿಚಾರಧಾರೆ ಹಾಗೂ ಚಟುವಟಿಕೆಗಳನ್ನು ಮುಕ್ತವಾಗಿ ಖಂಡಿಸುತ್ತಾ ಬಂದವರು. ಸರಕಾರಗಳ ಜನವಿರೋಧಿ ಧೋರಣೆ ಮತ್ತು ಕ್ರಮಗಳ ವಿರುದ್ಧ ಧೈರ್ಯವಾಗಿ ಧ್ವನಿ ಎತ್ತುತ್ತಾ ಬಂದವರು. ಉರ್ದು ಸಾಹಿತ್ಯ ಮತ್ತು ಹಿಂದಿ ಸಿನೆಮಾ ರಂಗಕ್ಕಂತೂ ಅವರ ಕೊಡುಗೆ ನಿಜಕ್ಕೂ ಅಪಾರ ಮತ್ತು ಅದ್ವಿತೀಯ. ಹಿಂದಿ ಭಾಷೆಯನ್ನು ಸಂಸ್ಕೃತಮಯಗೊಳಿಸುವ ಮತ್ತು ಆ ಮೂಲಕ ಅದು ಜನಸಾಮಾನ್ಯರ ಎಟುಕಿಗೆ ಮೀರದಂತೆ ಮಾಡುವ ಹೀನ ಸಂಚುಗಳ ವಿರುದ್ಧ ನಡೆದು ಬಂದಿರುವ ದೀರ್ಘ ಪ್ರತಿರೋಧ ಚಳವಳಿಯಲ್ಲಿ ಅಖ್ತರ್ ಸದಾ ಮೌನವಾಗಿ ಸಕ್ರಿಯರಾಗಿದ್ದವರು. ಹಿಂದಿ ಭಾಷೆಯನ್ನು ಉರ್ದುಮುಕ್ತಗೊಳಿಸುವ ಮತ್ತು ಉರ್ದುಭಾಷೆಯನ್ನೂ ಹಿಂದಿಮುಕ್ತಗೊಳಿಸುವ ಕಿಡಿಗೇಡಿ ಸಂಚುಗಳ ವಿರುದ್ಧ ಪ್ರತಿರೋಧದಲ್ಲೂ ಅವರು ಸದಾ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದಿ ಸಿನೆಮಾ ರಂಗವು ಹಿಂದೂ ಕೋಮುವಾದ ಅಥವಾ ಮುಸ್ಲಿಮ್ ಕೋಮುವಾದದ ವಾಹನವಾಗದಂತೆ ರಕ್ಷಿಸುವಲ್ಲಿಯೂ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಅವರು ಧರ್ಮವಿರೋಧಿಯಾಗಿದ್ದರೂ

ಎಂದೂ ತಮ್ಮ ಇತಿಮಿತಿಗಳನ್ನು ಮೀರಿ ಮಾತನಾಡಿಲ್ಲ. ಯಾವುದೇ ಧರ್ಮವನ್ನಾಗಲಿ ಧಾರ್ಮಿಕ ನಂಬಿಕೆಯನ್ನಾಗಲಿ, ಆಚರಣೆಯನ್ನಾಗಲಿ, ಧಾರ್ಮಿಕ ವ್ಯಕ್ತಿಗಳನ್ನಾಗಲಿ, ಧರ್ಮಗ್ರಂಥಗಳನ್ನಾಗಲಿ ನಿಂದಿಸುವ, ಅಪಮಾನಿಸುವ ಕಾರ್ಯ ಅವರಿಂದ ಎಂದೂ ನಡೆದಿಲ್ಲ. ಅವರೆಂದೂ ಸಭ್ಯತೆಯ ಗಡಿ ದಾಟಿಲ್ಲ.

ಅಂತಹ ವ್ಯಕ್ತಿಯ ವಿರುದ್ಧ ಒಂದು ಸಣ್ಣ ಮತಾಂಧ ಗುಂಪು ಸಾಧಿಸಿದ ವಿಜಯವು ನಿಜವಾಗಿ ನಮ್ಮ ಒಟ್ಟು ಸಮಾಜ ಮತ್ತದರ ಉದಾರವಾದಿ ಪ್ರಧಾನಧಾರೆಯ ಸೋಲಾಗಿದೆ.

ಇಂತಹ ದುರಂತಗಳು ನಮ್ಮ ಸಮಾಜದಲ್ಲಿ ಮತ್ತೆಂದೂ ಸಂಭವಿಸಬಾರದು. ಈ ಮಟ್ಟದಲ್ಲಿ ಅಸಹಿಷ್ಣುತೆ ಮೆರೆಯಲು ಸಮಾಜವು ಯಾರಿಗೂ ಅನುಮತಿಸಬಾರದು. ಅಶಾಂತಿಪ್ರಿಯ ವಿಘ್ನ ಸಂತೋಷಿಗಳು ಈರೀತಿ ತಲೆ ಎತ್ತಿದಾಗಲೆಲ್ಲ ಸಮಾಜದ ಎಲ್ಲ ಸ್ವಸ್ಥ ನಾಗರಿಕರು ಒಂದಾಗಿ ಅವರ ಸೊಲ್ಲಡಗಿಸಬೇಕು.

***

ಕಳೆದ ತಿಂಗಳಲ್ಲಿ ಇಟಲಿಯ ‘ಮೊಂಟೆ ಸೊಲ್ ಡಿ ಮಾರ್ಜಾಬೋಟೊ’ ಪಾರ್ಕ್ ನಲ್ಲೊಂದು ಗಮನಾರ್ಹ ಘಟನೆ ನಡೆಯಿತು. ಯಾರೂ ಮರೆಯಬಾರದ, ಸ್ಫೂರ್ತಿದಾಯಕ ಘಟನೆ. ಅದು ‘ಫೀಸ್ಟ್ ಆಫ್ ಅಸಂಪ್ಷನ್’ ಉತ್ಸವದ ಸಂದರ್ಭವಾಗಿತ್ತು. ಸಾವಿರಾರು ಜನ ಕ್ರೈಸ್ತ ಭಕ್ತರು ಸೇರಿದ್ದರು. ಇಟಲಿಯ ಬೊಲೊಗ್ನಾ ಪ್ರಾಂತದ ಆರ್ಚ್ ಬಿಷಪ್ ಮತ್ತು ಇಟಾಲಿಯನ್ ಬಿಷಪ್ಸ್ ಕಾನ್ಫರೆನ್ಸ್ ಮುಖ್ಯಸ್ಥ ಕಾರ್ಡಿನಾಲ್ ಮ್ಯಾಟ್ಟಿಯೊ ಝುಪ್ಪಿ ಪ್ರಾರ್ಥನಾ ಸಭೆಯ ನೇತೃತ್ವ ವಹಿಸಿದ್ದರು. ಆ ಪ್ರಾರ್ಥನೆಗಾಗಿ

ಆರಿಸಿಕೊಳ್ಳಲಾದ ಕಾಸಾಗ್ಲಿಯ ಚರ್ಚು ಒಂದು ಪ್ರಮುಖ ಐತಿಹಾಸಿಕ ಸ್ಥಳವಾಗಿತ್ತು. 1944 ರಲ್ಲಿ ನಾಝಿ ಪಡೆಗಳು ಆ ಚರ್ಚನ್ನು ಕೆಡವಿಹಾಕಿದ್ದರು ಮತ್ತು ಆ ಪರಿಸರದಲ್ಲಿದ್ದ ಎಲ್ಲವನ್ನೂ ಧ್ವಂಸಗೊಳಿಸಿದ್ದರು. ಮಾತ್ರವಲ್ಲ, ಮಕ್ಕಳು ಮತ್ತು ಮಹಿಳೆಯರ ಸಹಿತ 770 ಮಂದಿಯ ಸಾಮೂಹಿಕ ಹತ್ಯಾಕಾಂಡವನ್ನೂ ನಡೆಸಿದ್ದರು.

ಕಾರ್ಡಿನಾಲ್ ಝುಪ್ಪಿ ಅವರ ಕೈಯಲ್ಲಿ 469 ಪುಟಗಳ ಒಂದು ದಾಖಲೆ ಇತ್ತು. ಅದರಲ್ಲಿ 2023 ಅಕ್ಟೊಬರ್ 7 ರಿಂದೀಚೆಗೆ ಇಸ್ರೇಲ್ ಮತ್ತು ಗಾಝಾದಲ್ಲಿ ಯುದ್ಧಕ್ಕೆ ಬಲಿಯಾದ ಮಕ್ಕಳ ಹೆಸರುಗಳಿದ್ದವು. ‘‘ನಾವು ಒಂದೊಂದೇ ಹೆಸರನ್ನು ಓದುತ್ತೇವೆ. ಆ ಪೈಕಿ ಒಂದೊಂದು ಹೆಸರು ಕೂಡಾ ನಮ್ಮನ್ನು ಯುದ್ಧವಿರಾಮ, ಒತ್ತೆಯಾಳುಗಳ ಬಿಡುಗಡೆ ಮತ್ತು ಶಾಂತಿಸ್ಥಾಪನೆಗಾಗಿ ಉತ್ಸಾಹದೊಂದಿಗೆ ಹೋರಾಡುವುದಕ್ಕೆ ಮತ್ತು ಒಂದು ಸಂಪೂರ್ಣ ನಾಡನ್ನು ಒತ್ತೆಯಾಳಾಗಿ ಕಾಣುವ ಧೋರಣೆಯ ವಿರುದ್ಧ ಪ್ರತಿಭಟಿಸುವುದಕ್ಕೆ ಪ್ರೇರಣೆಯಾಗಬೇಕು’’ ಎಂದು ಘೋಷಿಸಲಾಯಿತು.

‘‘ಇದು ಬಹಳಷ್ಟು ನರಳಿಕೆಯನ್ನು ಕಂಡಿರುವ ಸ್ಥಳ. ಬಲಿಯಾದ ಎಲ್ಲರನ್ನೂ ನೆನಪಿಸುವ ಮತ್ತು ಅವರ ಕಡೆಗೆ ಗಮನ ಹರಿಸಬೇಕಾದ ಸ್ಥಳ’’ ಎಂದು ಕಾರ್ಡಿನಾಲ್ ಝುಪ್ಪಿ ಘೋಷಿಸಿದರು.

ಅದರೊಂದಿಗೆ ಒಂದೊಂದಾಗಿ, ಮೃತ ಮಕ್ಕಳ ಹೆಸರುಗಳನ್ನು ಓದುವ ಪ್ರಕ್ರಿಯೆ ಆರಂಭವಾಯಿತು. ಪ್ರಥಮವಾಗಿ ಅವರು 2023 ಅಕ್ಟೊಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ನವರು ನಡೆಸಿದ ದಾಳಿಯಲ್ಲಿ ಬಲಿಯಾದ 16 ಮಂದಿ ಇಸ್ರೇಲಿ ಮಕ್ಕಳ ಹೆಸರನ್ನು ಓದಿದರು. ಆಬಳಿಕ ಗಾಝಾದಲ್ಲಿ ಇಸ್ರೇಲ್ ದಾಳಿಗೆ ಬಲಿಯಾದ 12,211 ಫೆಲೆಸ್ತೀನಿ ಮಕ್ಕಳ ಹೆಸರುಗಳನ್ನೂ ಓದಲಾಯಿತು. ಈ ಪಕ್ರಿಯೆಯು 7 ಗಂಟೆಗೂ ದೀರ್ಘ ಕಾಲ ಮುಂದುವರಿಯಿತು. ಜನರೆಲ್ಲಾ ಕೊನೆವರೆಗೂ ಉತ್ಸಾಹದೊಂದಿಗೆ ಈ ಪ್ರಾರ್ಥನೆಯಲ್ಲಿ ಭಾಗವಹಿಸಿದರು. ಮಾನವೀಯ ಅನುಕಂಪ ಮೆರೆಯುವ ಆ ಸೃಜನಶೀಲ ವಿಧಾನ ಜಗತ್ತಿನಾದ್ಯಂತ ಕೋಟಿಗಟ್ಟಲೆ ಮಂದಿಯ ಗಮನ ಸೆಳೆಯಿತು. ಹಲವರಿಗೆ ಅವರ ಮಾನವೀಯ ಕರ್ತವ್ಯವನ್ನು ನೆನಪಿಸಿತು.

share
ಹವ್ವಾ ಶುಕೂರ್, ಬೋಳಾರ್
ಹವ್ವಾ ಶುಕೂರ್, ಬೋಳಾರ್
Next Story
X