ಅಕ್ರಮ ಇಟ್ಟಿಗೆ ಭಟ್ಟಿಗಳಿಗೆ ಬೇಕಿದೆ ಕಡಿವಾಣ

ಚಡಚಣ: ವಿಜಯಪುರ ಜಿಲ್ಲೆ ಗಡಿ ತಾಲೂಕಾದ ಚಡಚಣದಲ್ಲಿ ಅಕ್ರಮ ಇಟ್ಟಿಗೆ ಭಟ್ಟಿಗಳ ದಂಧೆ ಮಿತಿಮೀರಿದೆ ಎಂಬ ಆರೋಪ ಕೇಳಿಬಂದಿದೆ. ನಿಯಮಗಳನ್ನು ಗಾಳಿಗೆ ತೂರಿ ಪರಿಸರಕ್ಕೆ ಮಾರಕವಾಗುತ್ತಿರುವ ಈ ದಂಧೆಯ ಕುರಿತು ಸಾರ್ವಜನಿಕರಿಂದ ವ್ಯಾಪಕ ದೂರುಗಳು ವ್ಯಕ್ತವಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಮೌನ ವಹಿಸಿದ್ದಾರೆ ಎಂಬ ಅಸಮಾಧಾನ ಸ್ಥಳೀಯರಲ್ಲಿ ಹೆಚ್ಚಾಗಿದೆ.
ನಿಯಮಗಳಿಗೆ ಧಿಕ್ಕಾರ; ಪರಿಸರಕ್ಕೆ ಕುತ್ತು :
ಯಾವುದೇ ಇಟ್ಟಿಗೆ ಭಟ್ಟಿ ನಡೆಸಲು ಕಂದಾಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಪರವಾನಗಿ ಪಡೆಯುವುದು ಕಡ್ಡಾಯ. ಆದರೆ, ಚಡಚಣ ಸುತ್ತಮುತ್ತಲಿನ ಅನೇಕ ಭಟ್ಟಿಗಳು ಅಗತ್ಯ ಪರವಾನಗಿ ಇಲ್ಲದೇ ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪ ಕೇಳಿಬಂದಿದೆ.
ಫಲವತ್ತಾದ ಮಣ್ಣಿನ ಲೂಟಿ ನದಿ ತೀರ ಪ್ರದೇಶಗಳು ಹಾಗೂ ಕೃಷಿಯೋಗ್ಯ ಜಮೀನಿನ ಮೇಲ್ದರ್ಜೆಯ ಫಲವತ್ತಾದ ಮಣ್ಣನ್ನು ಅಕ್ರಮವಾಗಿ ತೆಗೆದು ಇಟ್ಟಿಗೆ ತಯಾರಿಕೆಗೆ ಬಳಸಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಇದರಿಂದ ಕೃಷಿಭೂಮಿಯ ಫಲವತ್ತತೆ ಹಾಳಾಗುತ್ತಿರುವುದಲ್ಲದೆ ಪರಿಸರ ಸಮತೋಲನಕ್ಕೂ ಧಕ್ಕೆಯಾಗುತ್ತಿದೆ ಎನ್ನಲಾಗಿದೆ.
ವಿಷಕಾರಿ ಹೊಗೆಯಿಂದ ಆರೋಗ್ಯ ಸಮಸ್ಯೆ ಹಳೆಯ ಟೈರ್, ಪ್ಲಾಸ್ಟಿಕ್ ಹಾಗೂ ಕಳಪೆ ದರ್ಜೆಯ ಕಲ್ಲಿದ್ದಲನ್ನು ಬಳಸಿ ಇಟ್ಟಿಗೆ ಸುಡುವ ಪರಿಣಾಮ ವಿಷಕಾರಿ ಹೊಗೆ ವಾತಾವರಣಕ್ಕೆ ಹರಡುತ್ತಿದೆ. ಇದರಿಂದ ಮಕ್ಕಳು, ವೃದ್ಧರು ಸೇರಿದಂತೆ ಸ್ಥಳೀಯ ನಿವಾಸಿಗಳು ಉಸಿರಾಟದ ತೊಂದರೆ ಹಾಗೂ ಇತರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.
‘ಹಗಲು-ರಾತ್ರಿ ಎನ್ನದೆ ಭಾರೀ ವಾಹನಗಳು ಮಣ್ಣು ಸಾಗಿಸುತ್ತಿವೆ. ಧೂಳು ಮತ್ತು ಹೊಗೆಯಿಂದ ಮಕ್ಕಳು, ವೃದ್ಧರು ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಧಿಕಾರಿಗಳ ಮೌನದ ಹಿಂದಿನ ಮರ್ಮವೇನು? :
ತಹಶೀಲ್ದಾರ್ ಕಚೇರಿ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ಹಲವು ಬಾರಿ ವಿಷಯ ತಂದರೂ, ‘ಪರಿಶೀಲಿಸುತ್ತೇವೆ’ ಎಂಬ ಉತ್ತರ ಬಿಟ್ಟರೆ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಅಕ್ರಮ ಮಣ್ಣು ಗಣಿಗಾರಿಕೆಯನ್ನು ತಡೆಯಬೇಕಾದ ಕಂದಾಯ ಇಲಾಖೆಯ ಅಧಿಕಾರಿಗಳ ಮೌನ ಹಲವು ಅನುಮಾನಗಳಿಗೆ ಕಾರಣವಾಗಿದೆ. ‘ದಂಧೆಕೋರರೊಂದಿಗೆ ಅಧಿಕಾರಿಗಳು ಕೈಜೋಡಿಸಿದ್ದಾರೆಯೇ?’ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಕ್ರಮಕ್ಕೆ ಸಾರ್ವಜನಿಕರ ಆಗ್ರಹ ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ, ಚಡಚಣ ತಾಲೂಕಿನಲ್ಲಿರುವ ಪ್ರತಿಯೊಂದು ಇಟ್ಟಿಗೆ ಭಟ್ಟಿಯ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಅಕ್ರಮವಾಗಿ ನಡೆಯುತ್ತಿರುವ ಭಟ್ಟಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದರ ಜೊತೆಗೆ ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ವ್ಯಕ್ತವಾಗಿದೆ.
ಪರವಾನಗಿ ಇಲ್ಲದೆ ಅಕ್ರಮವಾಗಿ ನಡೆಯುತ್ತಿರುವ ಈ ಇಟ್ಟಿಗೆ ಭಟ್ಟಿಗಳನ್ನು ತಡೆಗಟ್ಟಲು ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯ.
-ರಮೇಶ್ ಬೆಳ್ಳೆನವರ, ದಲಿತ ಸೇನೆ ತಾಲೂಕು ಅಧ್ಯಕ್ಷ
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಗಮನಕ್ಕೆ ವಿಷಯ ತರಲಾಗಿದೆ. ಅಕ್ರಮವಾಗಿ ನಡೆಯುತ್ತಿರುವ ಇಟ್ಟಿಗೆ ಭಟ್ಟಿಗಳ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು.
-ಸಂಜಯ ಇಂಗಳೆ, ತಹಶೀಲ್ದಾರ್, ಚಡಚಣ






