ಅಕ್ರಮ ನಿರ್ಮಾಣ ಆರೋಪ: 400ಕ್ಕೂ ಹೆಚ್ಚು ಮನೆಗಳನ್ನು ನೆಲಸಮಗೊಳಿಸಿದ ಜಿಬಿಎ

ಬೆಂಗಳೂರು, ಡಿ.21: ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಕೋಗಿಲು ಬಡಾವಣೆಯಲ್ಲಿ 14 ಎಕರೆ 36 ಗುಂಟೆ ವಿಸ್ತೀರ್ಣದ ಪಾಲಿಕೆ ಜಾಗದಲ್ಲಿ 400ಕ್ಕೂ ಹೆಚ್ಚು ಮನೆಗಳನ್ನು ಅಕ್ರಮವಾಗಿ ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (ಬಿಎಸ್‌ಡಬ್ಲ್ಯೂಯಎಂಎಲ್) ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದವರು(ಜಿಬಿಎ) ಶನಿವಾರ ಬೆಳಗ್ಗೆ 6 ಗಂಟೆಯಿಂದಲೇ 6 ಜೆಸಿಬಿಗಳು, 300ಕ್ಕೂ ಹೆಚ್ಚು ಪೊಲೀಸರು ಮತ್ತು ಮಾರ್ಷಲ್‌ಗಳನ್ನು ಬಳಸಿಕೊಂಡು 400ಕ್ಕೂ ಹೆಚ್ಚು ಮನೆಗಳನ್ನು ನೆಲಸಮಗೊಳಿಸಿ, ಬಡವರನ್ನು ಬೀದಿಪಾಲು ಮಾಡಿದ್ದಾರೆ.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕೋಗಿಲು ಗ್ರಾಮದ ಸರ್ವೇ ನಂ.99ರಲ್ಲಿ ಸರಕಾರಕ್ಕೆ ಸೇರಿದ ಗೋಮಾಳ ಜಮೀನಿನಲ್ಲಿ 15-20ವರ್ಷಗಳಿಂದಲೂ ಬಡವರು ಸಣ್ಣ ಪುಟ್ಟ ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದರು. ಅವುಗಳಲ್ಲಿ ಶೇ.90ರಷ್ಟು ಮನೆಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದಾಗಿದೆ. ಮನೆಗಳ ನಾಶದಿಂದ ಇದೀಗ ಅಲ್ಲಿನ ಮಕ್ಕಳು, ಬಾಣಂತಿಯರು, ವಿದ್ಯಾರ್ಥಿಗಳು, ಅನಾರೋಗ್ಯಕ್ಕೀಡಾದವರು ಎಲ್ಲರಿಗೂ ವಾಸಿಸಲು ಸೂರಿಲ್ಲದೇ ಅತಂತ್ರ ಸ್ಥಿತಿಗೆ ತಲುಪಿದ್ದಾರೆ.
ಇಲ್ಲಿರುವ ಯಾವ ಕುಟುಂಬಗಳಿಗೂ ಸೂಚನೆ ನೀಡದೇ ಏಕಾಏಕಿ ಡಿ.20ರಂದು ಬೆಳಗ್ಗೆ 4 ಗಂಟೆಯಿಂದಲೇ ಕರೆಂಟ್ ತೆಗೆದು, ಜೆಸಿಬಿಗಳು, ಪೊಲೀಸರು, ಮಾರ್ಷಲ್‌ಗಳೊಂದಿಗೆ ಜಾಗವನ್ನು ಸುತ್ತುವರಿದು ಮನೆಯಲ್ಲಿರುವ ಸಿಲಿಂಡರ್ ಅನ್ನು ಹೊರಹಾಕಿ, ಪಾತ್ರೆ, ಬಟ್ಟೆ, ಇನ್ನಿತರ ವಸ್ತುಗಳನ್ನು ತೆಗೆದುಕೊಳ್ಳಲು ಅವಕಾಶವನ್ನು ನೀಡದೇ, ಪ್ರಶ್ನಿಸಿದವರನ್ನು ಬಾಣಂತಿಯರು ಎಂದೂ ನೋಡದೇ, ಅಮಾನವೀಯವಾಗಿ ಮಲಗಿರುವ ಮಕ್ಕಳನ್ನು ಹೊರ ಎಳೆದು, ಭಿಕ್ಷುಕರಿಗೆ ಹೊಡೆದು, ಹೊರದಬ್ಬಿ ನಿವೇಶನಗಳನ್ನು ತೆರವುಗೊಳಿಸಿದ್ದಾರೆ ಎಂದು ಮನೆ ಕಳೆದುಕೊಂಡ ಸಂತ್ರಸ್ತೆ ರೆಹನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಲಹಂಕ ತಾಲೂಕು ತಹಶೀಲ್ದಾರ್ 2019ರಲ್ಲಿ 94ಸಿಸಿ ಕಾಯ್ದೆ ಅಡಿ 148 ಕುಟುಂಬಗಳಿಗೆ ತಾತ್ಕಾಲಿಕ ಹಕ್ಕು ಪತ್ರಗಳನ್ನು ನೀಡಿ, ಜಾಗವನ್ನು ಯಾರಾದರೂ ಪ್ರಶ್ನಿಸಿದರೆ ತಾತ್ಕಾಲಿಕ ಹಕ್ಕುಪತ್ರವನ್ನು ತೋರಿಸಿ ಎಂದು ಹೇಳಿದ್ದರು. ಇದೀಗ ನಿರ್ಗತಿಕ ಬಡವರು ಕಂದಾಯ ಅಧಿಕಾರಿಗಳಿಗೆ ಲಂಚ ನೀಡದ ಕಾರಣ ಬಡವರಿಗೆ ನೀಡಿದ ಹಕ್ಕು ಪತ್ರಗಳನ್ನು ವಿನಃಕಾರಣ ರದ್ದುಪಡಿಸಿ, ನಮ್ಮ ಮನೆಗಳನ್ನು ಧ್ವಂಸಗೊಳಿಸಿದ್ದಾರೆ. ಪೊಲೀಸರು ಬಡವರನ್ನು, ಭಿಕ್ಷುಕರನ್ನು, ಎಳೆವಯಸ್ಸಿನ ಮಕ್ಕಳನ್ನು, ಮಹಿಳೆಯರನ್ನು, ವೃದ್ಧರನ್ನು ಕೊರೆಯುವ ಚಳಿಯಲ್ಲಿ ಬೀದಿಗೆ ತಳ್ಳಿ ವಿಕೃತಿ ಮೆರೆದಿದ್ದಾರೆ ಎಂದು ರೆಹನಾ ಆಕ್ರೋಶ ವ್ಯಕ್ತಪಡಿಸಿದರು.
ಸರಕಾರಿ ಶಾಲೆ ಆವರಣದಲ್ಲಿ ಮಲಗಿದ ಬಾಣಂತಿಯರು, ಮಕ್ಕಳು: ಮನೆಗಳನ್ನು ನೆಲಸಮಗೊಳಿಸಿದ ನಂತರ ಅಲ್ಲಿ ವಾಸವಿದ್ದ ಅಷ್ಟೂ ಕುಟುಂಬಗಳು ಊಟ, ನೀರು ಇಲ್ಲದೇ ಪರದಾಡಿದ್ದಾರೆ. ರಾತ್ರಿ ಮಲಗುವುದಕ್ಕೆ ಜಾಗವಿಲ್ಲದೇ, ಬಾಣಂತಿಯರು, ಮಕ್ಕಳು, ಹತ್ತಿರದಲ್ಲಿದ್ದ ಸರಕಾರಿ ಶಾಲೆಯ ಆವರಣದಲ್ಲಿ ತಂಗಿದ್ದರು. ರವಿವಾರ ಬೆಳಗಿನ ಜಾವ ನೆಲಸಮಗೊಂಡ ತಮ್ಮ ಮನೆಯ ಜಾಗದಲ್ಲಿ ಆಧಾರ್ ಚೀಟಿ, ಪಡಿತರ ಚೀಟಿ, ಪುಸ್ತಕಗಳು ಸೇರಿದಂತೆ ಇನ್ನಿತರ ವಸ್ತುಗಳ ಹುಡುಕಾಟದಲ್ಲಿ ತೊಡಗಿಕೊಂಡರು.
ಪಾಕಿಸ್ತಾನಿಗಳೆಂದು ನಿಂದಿಸಿದ ಪೊಲೀಸ್ ಪೇದೆ: ಆರೋಪ
ಪ್ರತಿಭಟನೆ ವೇಳೆಯಲ್ಲಿ ಕುಳಿತಿದ್ದ ಜನರನ್ನು ನೋಡಿ ಪೊಲೀಸ್ ಪೇದೆಯೊಬ್ಬರು ‘ಇವರ್ಯಾರನ್ನೂ ನಾವು ನೋಡಿಲ್ಲ, ಇವರೆಲ್ಲರೂ ಪಾಕಿಸ್ತಾನದವರು, ಬಾಂಗ್ಲದೇಶದವರು’ ಎಂದು ಪಿಸುಪಿಸು ಮಾತನಾಡಿದ್ದಾರೆ ಎಂದು ವಿದ್ಯಾರ್ಥಿನಿ ಪ್ರಿಯದರ್ಶಿನಿ ಆರೋಪಿಸಿದ್ದಾರೆ. ಪ್ರತಿಭಟನೆ ಮಾಡುತ್ತಿರುವವರಲ್ಲಿ ಹೆಚ್ಚಿನವರು ಮುಸ್ಲಿಮರು ಎನ್ನುವ ಮಾತ್ರಕ್ಕೆ ಪಾಕಿಸ್ತಾನಿಗಳಾಗುತ್ತಾರೆಯೇ? ಕೂತವರೆಲ್ಲರೂ ಪಾಕಿಸ್ತಾನಿಗಳು ಎನ್ನುವುದನ್ನು ಸಾಬೀತು ಮಾಡಲಿ. ನಿಜವಾದ ಪಾಕಿಸ್ತಾನಿಗಳನ್ನು ಕಂಡುಹಿಡಿಯುವ ಯೋಗ್ಯತೆ ಇಲ್ಲದೇ ಸುಳ್ಳು ಮಾತನಾಡುವುದು ಇವರಿಗೆ ಚೆನ್ನಾಗಿ ಗೊತ್ತಿದೆ. ಮುಸ್ಲಿಮರು ಮನುಷ್ಯರಲ್ಲವೇ? ಎಂದು ಅವರು ಆಕ್ರೋಶ ವಕ್ತಪಡಿಸಿದರು.
ಮಾನವೀಯತೆ ತೋರದ ಸ್ಥಳೀಯರು
ಮನೆಗಳು ನೆಲಸಮಗೊಂಡ ನಂತರ ಆ ಬಡಪಾಯಿಗಳು ಚಿಕ್ಕಮಕ್ಕಳನ್ನು ಚಳಿಯಲ್ಲಿ ಮಲಗಿಸಲು ಸೂರು ಕೊಡಿ ಎಂದು ಕೇಳಿದರೆ, 10 ಸಾವಿರ ರೂ. ಬಾಡಿಗೆ, 1 ಲಕ್ಷ ರೂ. ಮುಂಗಡ ಹಣ ಕೊಡಿ ಎಂದು ಹೇಳಿ ನಿರಾಕರಿಸಿದ್ದಾರೆ. ಕನಿಷ್ಠ ನಮ್ಮ ಅಡುಗೆ ಪಾತ್ರೆ, ಬಟ್ಟೆಗಳನ್ನು ಇಟ್ಟುಕೊಳ್ಳಲು ಒಂದೆರಡು ದಿನ ಅವಕಾಶ ಮಾಡಿಕೊಡಿ ಎಂದು ಬೇಡಿಕೊಂಡರೂ, ಜಾಗ ನೀಡಿಲ್ಲ.
-ಕುರ್ಷಿದ್, ಬಾಣಂತಿಯ ಸಂಬಂಧಿ
ನ್ಯಾಯ ಕೊಡಿಸುವವರು ಯಾರು?
ಏಕಾಏಕಿ ದೌರ್ಜನ್ಯದಿಂದ ನಮ್ಮ ಮನೆಗಳನ್ನು ನೆಲಸಮ ಮಾಡಿ ನಮ್ಮೆಲ್ಲರನ್ನೂ ಬೀದಿಪಾಲು ಮಾಡಿದ್ದಾರೆ. ಮತ ಕೇಳೋಕೆ ಮಾತ್ರ ರಾಜಕಾರಣಿಗಳು ಬರುತ್ತಾರೆ. ಈಗ ಅದೇ ರಾಜಕಾರಣಿಗಳು, ಅಧಿಕಾರಿಗಳು ನಮ್ಮ ಮನೆಗಳನ್ನು ನೆಲಸಮ ಮಾಡಿದ್ದರೂ ನಮ್ಮ ಗೋಳು ಕೇಳಿಸಿಕೊಳ್ಳಲು ಇಲ್ಲಿ ಯಾವ ಶಾಸಕ, ಸಚಿವ, ಕೌನ್ಸಿಲರ್‌ಗಳೂ ಬಂದಿಲ್ಲ. ಇನ್ನು ನಮಗೆ ಯಾರು ನ್ಯಾಯ ಕೊಡಿಸುತ್ತಾರೆ? ಹೀಗಿರುವಾಗ ಇಲ್ಲಿನ ಸ್ಥಳೀಯ ಶಾಸಕ ಹಾಗೂ ಸಚಿವ ಕೃಷ್ಣ ಬೈರೇಗೌಡ ಯಾರಿಗಾಗಿ? ಯಾಕಾಗಿ? ಮುಂದಿನ ಚುನಾವಣೆಯಲ್ಲಿ ನಿಲ್ಲುತ್ತಾರೆ. ಇವರಿಗೆ ಮತ ಹಾಕುವುದಿಲ್ಲ.
-ಸೈಯದ್ ಅಹ್ಮದ್, ಮನೆ ಕಳೆದುಕೊಂಡ ಸಂತ್ರಸ್ತ
ಪುಸ್ತಕಗಳನ್ನು ಹೊರತರಲು ಅವಕಾಶ ನೀಡಿಲ್ಲ
ಸೋಮವಾರದಿಂದ ನಮಗೆ ಪೂರ್ವಪರೀಕ್ಷೆ ನಡೆಯುತ್ತದೆ. ನನ್ನ ಪ್ರವೇಶ ಪತ್ರ, ಪುಸ್ತಕಗಳು, ಸಮವಸ್ತ್ರಗಳನ್ನು ಹೊರತೆಗೆದುಕೊಳ್ಳುತ್ತೇನೆಂದರೂ ಅವಕಾಶ ಮಾಡಿಕೊಟ್ಟಿಲ್ಲ. ಕೇವಲ ಸಿಲಿಂಡರ್ ಮಾತ್ರ ತೆಗೆದುಕೊಳ್ಳಿ, ಬೇರೆ ಏನಾದರೂ ತೆಗೆದುಕೊಂಡರೆ ಹೊಡೆಯುತ್ತೇವೆಂದು ಬೆದರಿಕೆ ಹಾಕಿ, ನಮ್ಮನ್ನು ಕಸದ ರೀತಿಯಲ್ಲಿ ಕೈ ಕಾಲು ಹಿಡಿದುಕೊಂಡು ಮನೆಯಿಂದ ಹೊರಗೆ ಎಳೆದು ಬಿಸಾಕಿದರು.
-ಏಂಜಲ್, ವಿದ್ಯಾರ್ಥಿನಿ
ಒಂದು ದಿನ ಅವಕಾಶ ನೀಡಬೇಕಾಗಿತ್ತು
ನಮ್ಮ ಮನೆಯಲ್ಲಿರುವ ವಸ್ತು, ಸಾಮಗ್ರಿಗಳನ್ನು ಸಾಗಿಸಿಕೊಳ್ಳಲು ಪೊಲೀಸರು ಅಧಿಕಾರಿಗಳು ನಮಗೆ ಒಂದು ತಿಂಗಳಷ್ಟು ಕಾಲಾವಕಾಶ ನೀಡಬೇಕಿರಲಿಲ್ಲ. ಕನಿಷ್ಠ ನಮಗೆ ಒಂದು ದಿನ ಅವಕಾಶ ನೀಡಿದ್ದರೆ ನಮ್ಮ ಅತ್ಯಮೂಲ್ಯ ವಸ್ತುಗಳು, ದಿನ ನಿತ್ಯದ ಅಗತ್ಯ ವಸ್ತುಗಳನ್ನು ಬೇರೊಂದು ಕಡೆಗೆ ಸಾಗಿಸುತ್ತಿದ್ದೆವು.
-ಪ್ರತಿಭಾ, ವಿದ್ಯಾರ್ಥಿನಿ
ಪೊಲೀಸರು ವಿದ್ಯಾವಂತರೋ? ಅವಿದ್ಯಾವಂತರೋ? :
25 ವರ್ಷಗಳಿಂದಲೂ ನಾವು ಇಲ್ಲಿನ ಸರಕಾರಿ ಶಾಲೆಯಲ್ಲಿಯೇ ಓದುತ್ತಾ ಬದುಕುತ್ತಿರುವುದು ಸರಕಾರಕ್ಕೆ ಗೊತ್ತಿಲ್ಲವೇ? ರಾಜ್ಯದಲ್ಲಿ ಶ್ರೀಮಂತರು ಎಷ್ಟೊಂದು ಸರಕಾರಿ ಜಾಗವನ್ನು ಕಬಳಿಸಿ ಲೂಟಿ ಮಾಡುತ್ತಿದ್ದಾರೆ. ಅವರನ್ನು ಪ್ರಶ್ನಿಸುವ ತಾಕತ್ತಿಲ್ಲದೇ, ಭಿಕ್ಷೆ ಬೇಡುತ್ತಾ ಬದುಕುತ್ತಿದ್ದವರ ಮೇಲೆ ದಬ್ಬಾಳಿಕೆ ಮಾಡಿ ಬೀದಿಪಾಲು ಮಾಡಿದ್ದಾರೆ. ನಾಳೆಯಿಂದ ನನಗೆ ಪೂರ್ವ ತರಬೇತಿ ಪರೀಕ್ಷೆಗಳು ನಡೆಯಲಿವೆ. ಪುಸ್ತಕಗಳು, ಸಮವಸ್ತ್ರ, ಪ್ರವೇಶ ಪತ್ರಿಕೆ ಸೇರಿದಂತೆ ಇನ್ನಿತರ ವಸ್ತುಗಳೆಲ್ಲವೂ ಈಗ ಇಲ್ಲವಾಗಿವೆ. ಇವ್ಯಾವೂ ಇಲ್ಲದೇ ಪರೀಕ್ಷೆಗೆ ಕೂರಿಸುವುದಿಲ್ಲ ಎನ್ನುವ ಸಾಮನ್ಯ ಜ್ಞಾನವೂ ಇಲ್ಲದಂತೆ ಅಮಾನುಷವಾಗಿ ಪೊಲೀಸರು ನಡೆದುಕೊಂಡಿದ್ದಾರೆ. ಇಂತಹ ಪೊಲೀಸ್ ಮತ್ತು ಅಧಿಕಾರಿಗಳು ವಿದ್ಯಾವಂತರೋ? ಅವಿದ್ಯಾವಂತರೋ?
-ಪ್ರಿಯದರ್ಶಿನಿ, ವಿದ್ಯಾರ್ಥಿನಿ
ನಿವಾಸಿಗಳು 94ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು, ಸ್ಥಳೀಯ ತಹಶೀಲ್ದಾರ್ ಜಿಪಿಎಸ್ ಸರ್ವೇ ನಡೆಸಿ ಸಕ್ರಮಗೊಳಿಸಬೇಕಿತ್ತು. ಇವರು ತಿರಸ್ಕರಿಸಿದಾಗ, ಉಪ ಆಯುಕ್ತರು ಮಧ್ಯಪ್ರವೇಶ ಮಾಡಬೇಕಿತ್ತು. ಆದರೆ ಇದೆಲ್ಲಾ ಉಸಾಬರಿ ಯಾಕೆಂದು ಸರಕಾರ ಅಧಿಕಾರಿಗಳ ಮೂಲಕ ಬಡ ಜನರನ್ನು ಹೇಗಾದರೂ ನಡೆಸಿಕೊಳ್ಳಬಹುದೆಂಬ ಧೋರಣೆಯಿಂದ ನಡೆದುಕೊಂಡಿದೆ. ಯಾವುದೇ ಮುನ್ಸೂಚನೆ ನೀಡದೇ ಹಿಂಸಾತ್ಮಕವಾಗಿ ನಡೆದುಕೊಳ್ಳುವ ಮೂಲಕ ಜನ ವಿರೋಧಿ ನೀತಿಯನ್ನು ಪ್ರದರ್ಶನ ಮಾಡಿದೆ. ಈಗಿನ ಸರಕಾರ ಈ ಬಡ ಜನರ ಆಕಾಕ್ಷೆಯಂತೆ ಅಧಿಕಾರಕ್ಕೆ ಬಂದಿದ್ದೇವೆಂದು ಮರೆಯಬಾರದು.
-ಕುಮಾರ್ ಸಮತಳ, ಪದಾಧಿಕಾರಿ, ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ
ಕೋಗಿಲು ಗ್ರಾಮದ ಸರ್ವೇ ನಂ.99ರಲ್ಲಿ ಎಲ್ಲ ಜಾತಿಯ ಬಡವರು ಮನೆಗಳನ್ನು ಕಟ್ಟಿಕೊಂಡಿರುವುದನ್ನು ಸರಕಾರ ಏಕಾಏಕಿ ಧ್ವ್ವಂಸಗೊಳಿಸಿ ಬಡವರನ್ನು ಕೊರೆಯುವ ಚಳಿಯಲ್ಲಿ ಬೀದಿಪಾಲು ಮಾಡಿ ಕಾಂಗ್ರೆಸ್ ಸರಕಾರ ಅಧಃಪತನಕ್ಕೆ ಮುಂದಾಗಿದೆ. ಸರಕಾರ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಲು ಮನೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ಪುನರ್‌ವಸತಿ ಕಲ್ಪಿಸಲು ಪರ್ಯಾಯವಾಗಿ 5 ಎಕರೆ ಸರಕಾರಿ ಜಮೀನನ್ನು ನೀಡಬೇಕು. ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ನಿಯಮಿತ ಸಂಸ್ಥೆಗೆ ನೀಡಿರುವ ಸರಕಾರದ ಆದೇಶವನ್ನು ಕೂಡಲೇ ರದ್ದುಪಡಿಸಬೇಕು.
-ಮರಿಯಪ್ಪ, ರಾಜ್ಯಾಧ್ಯಕ್ಷ, ಕರ್ನಾಟಕ ಜನಾಂದೋಲನ ಸಂಘಟನೆ







