ಯಾದಗಿರಿಯಲ್ಲಿ ಅಕ್ರಮ ಮರಳು, ಮರಮ್ ದಂಧೆ

ಯಾದಗಿರಿ, ನ.16: ಜಿಲ್ಲಾದ್ಯಂತ ಅಕ್ರಮ ಮರಳು ಗಣಿಗಾರಿಕೆ, ಹೆಚ್ಚುವರಿ ಮರಮ್ ಲೋಡ್ (ಕಟ್ಟಡ ನಿರ್ಮಾಣಕ್ಕೆ ಬಳಸುವ ಮಣ್ಣು) ಹಾಗೂ ಪರದೆ ಇಲ್ಲದೇ ಸಾಗುವ ಕಂಕರ್ ಪುಡಿ (ಜಲ್ಲಿಪುಡಿ) ಟಿಪ್ಪರ್‌ಗಳು ದಿನೇ ದಿನೇ ಹೆಚ್ಚುತ್ತಿದ್ದು, ಇದರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಾನೂನುಬದ್ಧ ನಿಯಂತ್ರಣ ಗಳಿದ್ದರೂ ಹಗಲು ರಾತ್ರಿ ಎನ್ನದೆ ರಾಜಾರೋಷವಾಗಿ ಅಕ್ರಮ ದಂಧೆ ನಡೆಯುತ್ತಿರುವುದು ಆಡಳಿತ ಯಂತ್ರವಿದೆಯೇ? ಇಲ್ಲವೇ? ಎಂಬ ಪ್ರಶ್ನೆಯನ್ನು ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ.
ಧೂಳಿನಿಂದ ಸಾರ್ವಜನಿಕರು ರಸ್ತೆ ಓಡಾಡಲು ನರಕ ಯಾತನೆ ಅನುಭವಿಸುವಂತಾಗಿದೆ ಜಿಲ್ಲೆಯಲ್ಲಿ ಓಡಾಡುವ ಬಹುತೇಕ ಟಿಪ್ಪರ್‌ಗಳು ಸುರಕ್ಷತಾ ಪರದೆ ಹಾಕದೆ ಜಲ್ಲಿ ಪುಡಿ(ಕಂಕರ್ ಪುಡಿ) ಹಾಗೂ ಮರಮ್ ಸಾಗಿಸುತ್ತಿವೆ. ಇದರಿಂದ ಹಿಂಬದಿ ವಾಹನ ಸವಾರರು ಕಣ್ಣು ತೆರೆಯಲಾರದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಸಣ್ಣಸಣ್ಣ ಕಂಕರ್ ಕಣಗಳು ಕಣ್ಣಿಗೆ ತಾಗಿ ಗಾಯವಾಗುತ್ತಿರುವುದು, ದೃಷ್ಟಿ ಕಳೆದುಕೊಳ್ಳುವ ಭೀತಿಯೂ ಜೋರಾಗಿದೆ. ಅದರ ಜೊತೆಗೆ ರಸ್ತೆಗಳಲ್ಲಿ ಉಂಟಾಗುವ ಧೂಳಿನ ಅಟ್ಟಹಾಸದಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿವೆ.
►ಎಗ್ಗಿಲ್ಲದೆ ನಡೆಯುವ ಮರಳುಗಾರಿಕೆ :
ಹಳ್ಳಕೊಳ್ಳದಲ್ಲಿ ಇರುವ ಮರಳು ಮತ್ತು ಅರಣ್ಯ ಪ್ರದೇಶ ಗೈರಾಣಿ ಜಮೀನುಗಳ ಮರಮ್ ಜೆಸಿಬಿಗಳಿಂದ ಆಳವಾಗಿ ತೋಡಿರುವ ಗುಂಡಿಗಳು ಪರಿಸರ ವ್ಯವಸ್ಥೆಯನ್ನು ಕೆಡುತ್ತಿದ್ದು ದಿನನಿತ್ಯ ವಾಹನಗಳ ನಿರಂತರ ಸಂಚಾರದಿಂದ ಜಿಲ್ಲೆಯಲ್ಲಿ ರಸ್ತೆಗಳು ಹಾಳಾಗಿ ತಗ್ಗು ಗುಂಡಿಗಳು ಬೀಳುತ್ತಿವೇ ಎಂದು ಹೇಳಿದರು
►ಜಿಲ್ಲಾಧಿಕಾರಿ ಕಚೇರಿ ಎದುರೇ ದಂಧೆ :
ಜಿಲ್ಲಾ ಕೇಂದ್ರದಲ್ಲೇ, ಜಿಲ್ಲಾಧಿಕಾರಿ, ಎಸ್‌ಪಿ, ಗಣಿ, ಮತ್ತು ಆರ್‌ಟಿಒ ಕಚೇರಿಗಳ ಎದುರುಗಡೆಯಲ್ಲಿ, ಹಗಲು ಹೊತ್ತಿನಲ್ಲೇ ಮರಳು ಸಾಗುತ್ತಿದೆ. ಯಾರಿಗೂ ಭಯವೇ ಇಲ್ಲದಂತಾಗಿದೆ.
►ಹೊರ ಜಿಲ್ಲೆ, ಹೊರ ರಾಜ್ಯಕ್ಕೆ ಮರಳು ಸಾಗಾಟ :
ಜಿಲ್ಲೆಯ ಅಭಿವೃದ್ಧಿಗೆ ಬಳಸುವುದಾದರೆ ಸಮಸ್ಯೆಯೇ ಇಲ್ಲ. ಆದರೆ ಯಾದಗಿರಿಯ ಮರಳು ಹೊರ ಜಿಲ್ಲೆಗಳಿಗೆ, ವಿಶೇಷವಾಗಿ ಆಂದ್ರಪ್ರದೇಶ, ಮಹಾರಾಷ್ಟ್ರಕ್ಕೆ ಸಾಗುತ್ತಿದೆ. ಇದು ಜಿಲ್ಲೆಯ ಸಂಪತ್ತು ಬೇರೆ ರಾಜ್ಯಕ್ಕೆ ಹೋಗುತ್ತಿರುವುದಿಂದ ಬೇರೆ ರಾಜ್ಯದಲ್ಲಿ ಬೇಡಿಕೆ ಹೆಚ್ಚಾಗಿದ್ದು, ಅಕ್ರಮ ಮರಳಿಗೂ ಕೂಡ ಲಾಭವನ್ನು ಹೆಚ್ಚಾಗಿದೆ.
ಯಾರೇ ಇರಲಿ ರಾತ್ರಿ ವೇಳೆ ಅಕ್ರಮ ಮರಳುಗಾರಿಕೆ ಮತ್ತು ಕಂಕರ್ ಪುಡಿ ಪರದೇ ಹಾಕದೆ ಕಂಡರೆ, ಅವರ ವಿರುದ್ಧ ತಕ್ಷಣ ಸೂಕ್ತ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ
-ಪೃಥ್ವಿಕ್ ಶಂಕರ್, ಎಸ್.ಪಿ.
ಅಕ್ರಮ ಮರಳು ಮತ್ತು ಮರಮ್ ದಂಧೆ, ಸಂಪೂರ್ಣ ನಿಲ್ಲಿಸಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ನಮ್ಮ ಜಿಲ್ಲೆಯ ಸಂಪತ್ತು ದಿನದಿಂದ ದಿನಕ್ಕೆ ಹಾಳಾಗುತ್ತಿದೆ. ಹಗಲು ರಾತ್ರಿ ನಡೆಯುತ್ತಿರುವ ಅಕ್ರಮಕ್ಕೆ ಕಡಿವಾಣ ಯಾವಾಗ ಹಾಕುತ್ತಾರೆ? ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುವುದನ್ನು ತಕ್ಷಣ ನಿಲ್ಲಿಸಬೇಕು ಇಲ್ಲದಿದ್ದರೆ ಹೋರಾಟ ಅನಿವಾರ್ಯ.
-ಉಮೇಶ್ ಕೆ ಮುದ್ನಾಳ, ಸಾಮಾಜಿಕ ಹೋರಾಟಗಾರ
ಕಂಕರ್ ಪುಡಿ ಧೂಳು ಟಿಪ್ಪರ್‌ಗಳಿಂದ ನಮಗಂತೂ ತುಂಬಾ ಸಮಸ್ಯೆಆಗಿದೆ. ನಾ ಯಾವತ್ತೂ ಸಣ್ಣ ಮಕ್ಕಳನ್ನು ಒಮ್ಮೊಮ್ಮೆ ಬೈಕ್ ಮೇಲೆ ಕುಳ್ಳಿರಿಸಿಕೊಂಡು ಹೋಗುವಾಗ ನಮ್ಮ ಮಕ್ಕಳು ಕಣ್ಣು ಉಜ್ಜಿಕೊಳ್ಳುವುದರಿಂದ ಕಣ್ಣಿಗೆ ಗಾಯವಾಗುವ ಸಾಧ್ಯತೆ ಇದೆ. ಈ ಸಮಸ್ಯೆಯನ್ನು ಸಂಬಂಧಪಟ್ಟವರು ಕೂಡಲೇ ಸರಿಪಡಿಸಬೇಕು.
-ರುದ್ರಾಂಭಾಕಿ ಆರ್. ಪಾಟೀಲ್, ಜಿಲ್ಲಾಧ್ಯಕ್ಷೆ, ಬೆಳಕು ಸೇವಾ ಸಂಸ್ಥೆ ಯಾದಗಿರಿ
ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಕ್ರಮ ಮರಳು ಮತ್ತು ಮರಮ್ ದಂಧೆ ಹಗಲು-ರಾತ್ರಿ ನಡೆಯುತ್ತಿದ್ದು, ಹಳ್ಳಿಗಳ ರಸ್ತೆಗೆ ಹಾನಿ ಉಂಟುಮಾಡುತ್ತಿದ್ದು, ನಗರದಲ್ಲಿ ಸಂಚಾರ ತೊಂದರೆ, ಧೂಳು, ಶಬ್ದ ಮಾಲಿನ್ಯ ಹೆಚ್ಚಾಗಿದೆ. ಹಲವು ಬಾರಿ ದೂರು ನೀಡಿದರೂ ಇದರ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ ಈ ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು.
-ಶ್ರೀದೇವಿ ಕಟ್ಟಿಮನಿ, ಜಿಲ್ಲಾಧ್ಯಕ್ಷೆ, ನಮ್ಮ ಕರ್ನಾಟಕ ಸೇನೆ ಮಹಿಳಾ







