ಚಿಂಚೋಳಿ ಅರಣ್ಯದಲ್ಲಿ ಕೆಂಪು ಮಣ್ಣಿನ ಅಕ್ರಮ ಸಾಗಾಟ

ಕಲ್ಯಾಣ ಕರ್ನಾಟಕದಲ್ಲಿರುವ ಏಕೈಕ ಅರಣ್ಯಪ್ರದೇಶ ರಕ್ಷಿಸಿಕೊಳ್ಳುವಲ್ಲಿ ಅಧಿಕಾರಿಗಳು ಎಡವಿದ್ದಾರೆ. ಚಿಂಚೋಳಿ ಅರಣ್ಯ ಪ್ರದೇಶದಲ್ಲಿ ಭಾರಿ ಗಾತ್ರದ ವಾಹನಗಳ ನಿಷೇಧವಿದ್ದರೂ ರಾತ್ರೋ ರಾತ್ರಿ ಬೃಹತ್ ವಾಹನಗಳ ಮೂಲಕ ಕೆಂಪು ಮಣ್ಣು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದೆ.
134.88 ಚದರ ಕಿ.ಮೀ. ವಿಸ್ತೀರ್ಣ ಹೊಂದಿರುವ ಚಿಂಚೋಳಿ ಅರಣ್ಯ ವ್ಯಾಪ್ತಿ ಪ್ರದೇಶದಲ್ಲಿ ಗ್ರಾಮ, ತಾಂಡಾಗಳಿಗೆ ಸಂಪರ್ಕಿಸಲು ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ ಅದೇ ಇಕ್ಕಟ್ಟಾದ ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳು ಅಕ್ರಮ ಮಣ್ಣು ಸಾಗಾಟದಲ್ಲಿ ತೊಡಗಿರುವುದು ನಿಜಕ್ಕೂ ದುರಂತ. ಈ ಭಾಗದ ಏಕೈಕ ವನ್ಯಜೀವಿ ಧಾಮವಾಗಿರುವ ಅಂದದ ಪ್ರಕೃತಿಯನ್ನು ರಕ್ಷಣೆ ಮಾಡದೆ ಅಕ್ರಮಗಳ ಅಡ್ಡೆಯಾಗಿರುವುದು ಕಂಡರೆ ಮುಂದೊಂದು ದಿನ ಇಲ್ಲಿ ಪರಿಸರ ಉಳಿಯುವುದು ಕಷ್ಟಸಾಧ್ಯ ಎನ್ನುತ್ತಾರೆ ಸ್ಥಳೀಯರು.
ವನ್ಯಜೀವಿಗಳಿಗೆ ಪ್ರಾಣ ಸಂಕಟ :
ದೊಡ್ಡ ವಾಹನಗಳ ಆರ್ಭಟದಿಂದಾಗಿ ವನ್ಯಜೀವಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ವಾಹನಗಳ ಓಡಾಟದಿಂದ ಮಂಗ, ಜಿಂಕೆ, ವಿವಿಧ ಪ್ರಾಣಿ, ಪಕ್ಷಿಗಳು ಅಪಘಾತಕ್ಕೀಡಾಗಿವೆ. ರಸ್ತೆಯಲ್ಲಿ ಹೋಗುತ್ತಿದ್ದಂತೆ ಕಾಲು, ಕೈಗಳು ಮುರಿದುಕೊಂಡಿರುವ ಪ್ರಾಣಿಗಳನ್ನು ನೋಡುವುದು ಇಲ್ಲಿ ಸಹಜವೆಂಬಂತೆ ಆಗಿದೆ. ವನ್ಯಜೀವಿಗಳಿಗಾಗಿ ಮೀಸಲಿಟ್ಟ ಪ್ರದೇಶ ಸಂರಕ್ಷಿಸಲು ಅಧಿಕಾರಿಗಳೇ ಮುಂದಾಗದಿದ್ದರೆ, ಮುಂದೇನು? ಎನ್ನುವ ಪ್ರಶ್ನೆ ಪರಿಸರವಾದಿಗಳಲ್ಲಿ ಮೂಡಿದೆ.
ರಸ್ತೆಯೆಲ್ಲ ಕೆಂಧೂಳು :
ಕೊಂಚಾವರಂ ಕ್ರಾಸ್‌ನಿಂದ ಶಾದಿಪುರ ಗ್ರಾಮ ಮತ್ತಿತ್ತರ ತಾಂಡಾಗಳಿಗೆ ಹೋಗುವ ರಸ್ತೆಯು ಕೆಂಪು ಮಣ್ಣಿನ ಧೂಳಿನಿಂದಾಗಿ ಸಂಪೂರ್ಣ ಆವೃತ್ತಗೊಂಡಿದೆ. ನಿತ್ಯವೂ ಕೆಂಪು ಮಣ್ಣಿನ ಲಾರಿ, ಟ್ರಕ್‌ಗಳ ಓಡಾಟದಿಂದ ರಸ್ತೆಪೂರ್ತಿ ಮತ್ತು ಪಕ್ಕದಲ್ಲಿ ಗಿಡ ಮರಗಳಿಗೆ ಮಣ್ಣಿನ ಧೂಳು ಮೆತ್ತಿಕೊಂಡಿದೆ. ಇದರಿಂದ ಸೈಕಲ್, ಬೈಕ್ ಸವಾರರಿಗೆ ರಸ್ತೆಯಲ್ಲಿ ಸಂಚರಿಸುವುದೇ ಸವಾಲಾಗಿದೆ. ಮಿತಿ ಮೀರಿದ ಧೂಳು ವನ್ಯಜೀವಿಗಳಿಗೂ ಕಂಟಕವಾಗಿ ಪರಿಣಮಿಸಿದೆ.
ಎರಡು ಮಾರ್ಗಗಳಿಂದ ಸಾಗಾಟ : ಆರೋಪ
ಅರಣ್ಯದಲ್ಲಿ ಅಕ್ರಮ ಮಣ್ಣು ಸಾಗಾಟ ಎರಡು ಮಾರ್ಗಗಳ ಮೂಲಕ ನಡೆಯುತ್ತಿದೆ. ಕೊಂಚಾವರ, ಚಿಂದಾನೂರ್ ತಾಂಡಾ, ಶಾದಿಪುರ, ಸೇವಾ ನಾಯಕ ತಾಂಡಾ ಒಂದು ಕಡೆಯಿಂದ ಸಾಗಾಟ ನಡೆಸಿದರೆ, ಉಮಲಾ ನಾಯಕ ತಾಂಡಾ, ಚಂದು ನಾಯಕ ತಾಂಡಾ, ಬಿಕ್ಕು ನಾಯಕ ತಾಂಡಾದಿಂದ ಮತ್ತೊಂದೆಡೆ ಸಾಗಾಟ ನಡೆಸಲಾಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಸಚಿವ, ಅಧಿಕಾರಿಗಳ ಕುಮ್ಮಕ್ಕು? :
ಅಕ್ರಮ ಮಣ್ಣು ಸಾಗಾಣಿಕೆ ಸೇರಿದಂತೆ ಅರಣ್ಯ ಪ್ರದೇಶದಲ್ಲಿ ಅನೇಕ ಅಹಿತಕರ ಘಟನೆಗಳು ಸಂಭವಿಸುತ್ತಿವೆ. ಇದಕ್ಕೆ ಉಸ್ತುವಾರಿ ಸಚಿವ, ಶಾಸಕ, ಜಿಲ್ಲೆಯ ಹಾಗೂ ಸ್ಥಳೀಯ ಅಧಿಕಾರಿಗಳ ಕುಮ್ಮಕ್ಕು ಇದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಯಾಕೆಂದರೆ ಇಷ್ಟು ಗಾತ್ರದ ಭಾರೀ ವಾಹನಗಳು ಇಲ್ಲಿ ಓಡಾಟ ನಡೆಸುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಅನೇಕ ಸಂದೇಹಗಳಿಗೆ ಕಾರಣವಾಗಿದೆ.
ಚಿಂಚೋಳಿ ಕಡೆ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಕುರಿತು ಯಾವುದೇ ದೂರುಗಳು ಬಂದಿಲ್ಲ. ಈಗಾಗಲೇ ನಮ್ಮ ಇಲಾಖೆಯ ಎರಡು ತಂಡಗಳು ಭೇಟಿ ನೀಡಿ ಪರಿಶೀಲನೆ ನಡೆಸಿವೆ. ರಾತ್ರಿ ವೇಳೆ ಕೂಡ ಪರಿಶೀಲನೆ ನಡೆಸಲಾಗುವುದು.
-ಸೋಮಶೇಖರ್ ಎಂ., ಉಪನಿರ್ದೇಶಕರು, ಗಣಿ, ಭೂವಿಜ್ಞಾನ ಇಲಾಖೆ
ಚಿಂಚೋಳಿಯಿಂದ ಶಾದಿಪುರ ಕಡೆಗೆ ರಾತ್ರಿ ವೇಳೆ ಬರಲು ಹೆದರಿಕೆ ಹೆಚ್ಚಾಗುತ್ತದೆ. ಕೆಂಪು ಮಣ್ಣಿನ 200ಕ್ಕೂ ಹೆಚ್ಚು ವಾಹನಗಳು ರಾತ್ರಿ ಪೂರ್ತಿ ಓಡಾಟ ನಡೆಸುತ್ತವೆ. ಇರುವ ಚಿಕ್ಕ ರಸ್ತೆಯಲ್ಲಿ ಸಣ್ಣ ಪುಟ್ಟ ವಾಹನ ಸವಾರರಿಗೆ ತಿರುಗಾಡಲು ಭಯವಾಗುತ್ತಿದೆ.
-ನರೇಶ್, ಸ್ಥಳೀಯ ನಿವಾಸಿ
ನಮ್ಮ ಭಾಗದಲ್ಲಿ ಇರುವ ಒಂದೇ ಒಂದು ಅರಣ್ಯ ಸಂರಕ್ಷಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಎಲ್ಲ ಇಲಾಖೆಯ ಅಧಿಕಾರಿಗಳಕುಮ್ಮಕ್ಕಿನಿಂದಾಗಿ ಅಕ್ರಮ ಕೆಂಪು ಮಣ್ಣಿನ ಸಾಗಾಟ ನಡೆಯುತ್ತಿದೆ. ಹೀಗಾದರೆ ಇರುವ ಪ್ರಕೃತಿ ಸಂರಕ್ಷಿಸುವವರು ಯಾರು?
-ಮಾರುತಿ ಗಂಜಗಿರಿ, ಚಿಂಚೋಳಿ ಹೋರಾಟಗಾರ







