ರೇಷ್ಮೆಗೂಡಿನ ಬೆಲೆಯಲ್ಲಿ ಸುಧಾರಣೆ: ಬೆಳೆಗಾರರ ಚಿತ್ತ ರೇಷ್ಮೆ ಕೃಷಿಯತ್ತ

ದೇವನಹಳ್ಳಿ, ಮೇ 16 : ಮಾರುಕಟ್ಟೆಯಲ್ಲಿ, ಹರಾಜಾಗುತ್ತಿರುವ ರೇಷ್ಮೆಗೂಡಿನ ಬೆಲೆಯಲ್ಲಿ ಸುಧಾರಣೆಯಾಗುತ್ತಿದ್ದು, ಬೆಳೆಗಾರರ ಮುಖದಲ್ಲಿ ಮಂದಹಾಸವನ್ನುಂಟು ಮಾಡುತ್ತಿದೆ.
ಎರಡು ವಾರಗಳ ಹಿಂದಷ್ಟೇ 750 ರೂ.ಗೆ ಮಾರಾಟವಾಗುತ್ತಿದ್ದ ಮಿಶ್ರತಳಿಯ ಗೂಡು ಕೆ.ಜಿ.ಗೆ ಗರಿಷ್ಟ 550 ರೂ.ಗೆ ಇಳಿಕೆಯಾಗಿತ್ತು. 1 ಕೆ.ಜಿ.ಗೆ ಏಕಾಏಕಿ 200 ರೂ. ಕುಸಿತವಾಗಿತ್ತು. ಇದರಿಂದ ರೇಷ್ಮೆ ಬೆಳೆಗಾರರು ಕಂಗಾಲಾಗಿದ್ದರು. ತಾವು ಹಾಕಿದ್ದ ದುಡಿಮೆ ಬಂಡವಾಳವೂ ಹೊರಡುತ್ತಿಲ್ಲವೆಂದು ಆತಂಕಗೊಂಡಿದ್ದರು. ಸಾಲಗಾರರಾಗುವ ಭೀತಿಯನ್ನು ಎದುರಿಸುತ್ತಿದ್ದರು. ಇತ್ತೀಚೆಗೆ ಗೂಡಿನ ಬೆಲೆಯಲ್ಲಿ ಚೇತರಿಕೆ ಕಾಣುತ್ತಿದ್ದು, ಪ್ರಸ್ತುತ ಮಿಶ್ರತಳಿಯ ಗೂಡು ಕೆ.ಜಿ.ಗೆ ಗರಿಷ್ಟ 669 ರೂ.ಗೆ ಏರಿಕೆಯಾಗುತ್ತಿದೆ.
ಒಂದು ವಾರದ ಹಿಂದೆ ಮಾರುಕಟ್ಟೆಗೆ ಬರುತ್ತಿದ್ದ 100 ಲಾಟುಗಳಷ್ಟು ಗೂಡಿನ ಪ್ರಮಾಣ ಕಡಿಮೆಯಾಗಿದೆ. ಕಡಿಮೆ ಪ್ರಮಾಣದಲ್ಲಿ ಆವಕವಾಗುತ್ತಿರುವ ಗೂಡಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಉತ್ತಮ ಬೆಲೆಯೂ ಸಿಗುತ್ತಿದೆ. ಗೂಡಿನ ಬೆಲೆ ಕುಸಿತವಾಗುತ್ತಿದ್ದಂತೆ ಹುಳು ಸಾಕಾಣಿಕೆಯಿಂದ ಹಿಂದೇಟು ಹಾಕುತ್ತಿದ್ದ ರೇಷ್ಮೆ ಬೆಳೆಗಾರರೂ ಪುನಃ ಹುಳು ಸಾಕಣೆಯತ್ತ ಗಮನಹರಿಸಿದ್ದಾರೆ.
ರೇಷ್ಮೆ ಹುಳು ಸಾಕಣೆಯನ್ನೇ ಜೀವನದ ಮಾರ್ಗೋಪಾಯವಾಗಿ ನಂಬಿಕೊಂಡಿರುವ ಬಹಳಷ್ಟು ಕುಟುಂಬಗಳು, ಬೆಲೆ ಕುಸಿತದಿಂದಾಗಿ ರೇಷ್ಮೆಹುಳು ಸಾಕಣೆ ಉದ್ಯಮದಿಂದ ಹಿಂದೆ ಸರಿಯುವ ಚಿಂತನೆ ನಡೆಸಿದ್ದರು. ಮುಂಗಾರು ಹಂಗಾಮು ಮೇ 22ರಿಂದ ಆರಂಭವಾಗುವುದರಿಂದ ಬಿಸಿಲಿನ ತಾಪಮಾನ ಕಡಿಮೆಯಾಗುವ ಸಾಧ್ಯತೆಗಳು ಹೆಚ್ಚಾಗಿರುವ ಕಾರಣ, ಪುನಃ ರೇಷ್ಮೆಹುಳ ಖರೀದಿಗೆ ಮುಂದಾಗಿದ್ದಾರೆ.
ಈ ವರ್ಷದಲ್ಲಿ ಜಿಲ್ಲೆಯಲ್ಲಿ 330 ಹೆಕ್ಟೇರ್‌ಗಿಂತಲೂ ಹೆಚ್ಚು ಹಿಪ್ಪುನೇರಳೆ ನಾಟಿ ಮಾಡಿಸುವಂತಹ ಗುರಿಯನ್ನು ಹೊಂದಿದ್ದೇವೆ. 7 ಎಕರೆ ಪ್ರದೇಶದಲ್ಲಿ ನರೇಗಾ ಯೋಜನೆಯಡಿಯಲ್ಲಿ ಹಿಪ್ಪುನೇರಳೆ ನರ್ಸರಿ ಮಾಡಿಸಿದ್ದೇವೆ. ನಾಟಿ ಮಾಡುವುದಕ್ಕೂ ಆದ್ಯತೆ ನೀಡಿದ್ದೇವೆ. ರೇಷ್ಮೆ ಉದ್ಯಮದಿಂದ ವಿಮುಖರಾಗಿರುವ ರೈತರನ್ನು ವಾಪಸ್ ಕರೆ ತರಲು ದ್ವಿತಳಿ ರೇಷ್ಮೆಗೂಡಿಗೆ 100 ಮೊಟ್ಟೆ, 1 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿದೆ. 1 ಕೆ.ಜಿ. ಗೂಡಿಗೆ 30 ರೂಪಾಯಿ ಪ್ರೋತ್ಸಾಹಧನ ಕೊಡ್ತೇವೆ. ಹುಳು ಸಾಕಣೆ ಮನೆಗಳ ನಿರ್ಮಾಣಕ್ಕೆ ಸಬ್ಸಿಡಿ ಕೊಡ್ತೇವೆ. ಗ್ರಾಮ ಪಂಚಾಯತ್‌ವಾರು ರೇಷ್ಮೆ ಬೆಳೆಗಾರರಿರುವ ಹಳ್ಳಿಗಳಲ್ಲಿ ಗುಂಪು ಚರ್ಚೆಗಳು ಮಾಡಿಸುತ್ತಿದ್ದೇವೆ ಎಂದು ಜಿಲ್ಲಾ ಪಂಚಾಯತ್ ರೇಷ್ಮೆ ಇಲಾಖೆಯ ಉಪನಿರ್ದೇಶಕ ಲಕ್ಷ್ಮಣ್ ಹೇಳಿದರು.
ನೀರಿನ ಕೊರತೆಯ ನಡುವೆಯೂ ತೋಟಗಾರಿಕೆ ಬೆಳೆಗಳು ಬೆಳೆದರೂ ಮಾರುಕಟ್ಟೆಯಲ್ಲಿ ನಿರೀಕ್ಷೆಗೆ ತಕ್ಕಷ್ಟು ಬೆಲೆಗಳು ಸಿಗುತ್ತಿಲ್ಲ. ಆದ್ದರಿಂದ ರೇಷ್ಮೆ ಬೆಳೆಯತ್ತ ಬಂದಿದ್ದೆವು. ಗೂಡಿನ ಬೆಲೆಗಳಲ್ಲಿ ಏರಿಳಿತಗಳಾಗುತ್ತವೆ. ಈ ಸಮಯದಲ್ಲಿ ಈ ಉದ್ಯಮವೇ ಬೇಡ ಅನ್ನಿಸಿತ್ತು. ಆದರೂ, ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು, ರೇಷ್ಮೆ ಬೆಳೆಯತ್ತ ಹೋಗೋಣವೆಂದು ತೀರ್ಮಾನಿಸಿದ್ದೇವೆ.
-ರಾಮಕೃಷ್ಣಪ್ಪ, ರೇಷ್ಮೆ ಬೆಳೆಗಾರ ವಿಜಯಪುರ
ರೈತರು, ತರಕಾರಿ ಹಾಗೂ ತೋಟಗಾರಿಕೆ ಬೆಳೆಗಳತ್ತ ಆಕರ್ಷಿತರಾಗದೇ ರೇಷ್ಮೆ ಉದ್ಯಮದಲ್ಲಿ ಉತ್ತಮ ಆದಾಯ ಗಳಿಸಿಕೊಳ್ಳಬಹುದಾಗಿದೆ. ತಮ್ಮ ಆರೋಗ್ಯ ಸುಧಾರಣೆಯ ಕಡೆಗೂ ಗಮನಹರಿಸಬಹುದಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ 5,395 ಹೆಕ್ಟೇರ್, ಹಿಪ್ಪುನೇರಳೆ ಇದೆ. ಕಳೆದ ವರ್ಷ 317 ಹೆಕ್ಟೇರ್ ನಾಟಿ ಮಾಡಿಸಲಾಗಿತ್ತು. 7,439 ಮಂದಿ ರೈತರು ರೇಷ್ಮೆ ನಂಬಿಕೊಂಡಿದ್ದಾರೆ.
-ಲಕ್ಷ್ಮಣ್, ಉಪನಿರ್ದೇಶಕ, ರೇಷ್ಮೆ ಇಲಾಖೆ






