ಮೋದಿ ಸರಕಾರದಲ್ಲಿ ಒಬ್ಬೊಬ್ಬರಿಗೊಂದೊಂದು ನ್ಯಾಯ!
ನ್ಯಾಯಮೂರ್ತಿ ಯಶವಂತ್ ವರ್ಮಾ ಮತ್ತು ನ್ಯಾಯಮೂರ್ತಿ ಶೇಖರ್ ಯಾದವ್ ಪ್ರಕರಣ

ನ್ಯಾ. ಯಶವಂತ್ ವರ್ಮಾ, ನ್ಯಾ. ಶೇಖರ್ ಯಾದವ್
ನ್ಯಾಯಮೂರ್ತಿ ಯಶವಂತ್ ವರ್ಮಾ ಪ್ರಕರಣದಲ್ಲಿನ ರಾಜಕೀಯದ ಬಗ್ಗೆ ಅನುಮಾನಗಳು ಏಳುತ್ತಲೇ ಇವೆ.
ಅವರ ದಿಲ್ಲಿ ಸರಕಾರಿ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡ ಹೊತ್ತಲ್ಲಿ, ಅಗ್ನಿಶಾಮಕ ದಳದವರು ಅಲ್ಲಿ ನೋಟುಗಳ ಕಂತೆಗಳನ್ನೇ ಕಂಡರು ಎನ್ನಲಾಯಿತು. ಬಹುತೇಕ ಸುಟ್ಟುಹೋದ ಅವುಗಳ ಮೌಲ್ಯ 15 ಕೋಟಿ ರೂ. ಎಂದು ಹೇಳಲಾಯಿತು.
ಘಟನೆ ನಡೆದ ಹೊತ್ತಲ್ಲಿ ದಿಲ್ಲಿ ಹೈಕೋರ್ಟ್ನಲ್ಲಿದ್ದ ನ್ಯಾಯಮೂರ್ತಿ ವರ್ಮಾ ಅವರು ಆಂತರಿಕ ವಿಚಾರಣೆಗೆ ಒಳಗಾಗಬೇಕಾಯಿತು. ಅದರ ನಡುವೆ ಅವರನ್ನು ಅಲಹಾಬಾದ್ ಹೈಕೋರ್ಟ್ಗೆ ವರ್ಗಾಯಿಸಲಾಯಿತು.
ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಈ ವಿಷಯದ ತನಿಖೆಗೆ ಮೂವರು ನ್ಯಾಯಾಧೀಶರ ಆಂತರಿಕ ಸಮಿತಿ ರಚಿಸಿದರು. ನಗದು ಸಿಕ್ಕಿದ್ದ ಕೋಣೆ ನ್ಯಾಯಮೂರ್ತಿ ವರ್ಮಾ ಅವರ ನಿಯಂತ್ರಣದಲ್ಲೇ ಇತ್ತೆನ್ನಲಾಯಿತು. ಆದರೆ ಹಣದ ಮೂಲದ ಬಗ್ಗೆ ಸ್ಪಷ್ಟವಾಗಿ ವಿವರಿಸಲು ಸಾಧ್ಯವಿಲ್ಲ ಎಂದು ಸಮಿತಿ ಹೇಳಿತು. ಇದರ ಆಧಾರದ ಮೇಲೆ, ಅವರನ್ನು ಹುದ್ದೆಯಿಂದ ತೆಗೆದುಹಾಕುವ ಕ್ರಮಗಳ ಬಗ್ಗೆ ಅದು ಶಿಫಾರಸು ಮಾಡಿತು. ನ್ಯಾಯಮೂರ್ತಿ ವರ್ಮಾ ಅವರಿಗೆ ರಾಜೀನಾಮೆ ನೀಡುವಂತೆ ಸಿಜೆಐ ಸೂಚಿಸಿರುವುದರ ಬಗ್ಗೆ ಆಗ ವರದಿಯಾಗಿತ್ತು. ಆದರೆ ಅವರು ಅದನ್ನು ಒಪ್ಪದೇ ಇದ್ದುದರಿಂದ ಈ ವಿಷಯ ರಾಷ್ಟ್ರಪತಿ ಮತ್ತು ಪ್ರಧಾನಿ ಬಳಿಗೆ ಹೋಯಿತು.
ನ್ಯಾ. ಯಶವಂತ್ ವರ್ಮಾ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ 200ಕ್ಕೂ ಹೆಚ್ಚು ಸಂಸದರು ಸಂಸತ್ತಿನಲ್ಲಿ ಮಹಾಭಿಯೋಗ ಮಂಡಿಸಿದ್ದಾರೆ.ಮೋದಿ ಸರಕಾರದ ಈ ನಡೆಗೆ ಪ್ರಮುಖ ವಿಪಕ್ಷ ಕಾಂಗ್ರೆಸ್ ಸಹಿತ ಇತರ ವಿಪಕ್ಷಗಳು ಬೆಂಬಲಿಸಿವೆ. ಆದರೆ ಇಂಡಿಯಾ ಬಣದ ಬಹುತೇಕ ಪಕ್ಷಗಳು ಬೆಂಬಲಿಸಿದರೂ ಸಮಾಜವಾದಿ ಪಕ್ಷ ಮಾತ್ರ ಇದನ್ನು ಬೆಂಬಲಿಸಿಲ್ಲ. ಮಾತ್ರವಲ್ಲ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದೆ. ಅದಕ್ಕೆ ಎಸ್ಪಿ ನೀಡಿರುವ ಕಾರಣವೂ ಇನ್ನೊಂದು ದೊಡ್ಡ ಚರ್ಚೆಗೆ ಕಾರಣವಾಗಿದೆ.
ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿ ಶೇಖರ್ ಯಾದವ್ ಅವರ ವಿರುದ್ಧದ ಮಹಾಭಿಯೋಗವನ್ನು ಸರಕಾರವು ಕೈಗೆತ್ತಿಕೊಂಡರೆ ಮಾತ್ರ ತಾವು ನ್ಯಾಯಮೂರ್ತಿ ವರ್ಮಾ ಅವರ ವಿರುದ್ಧದ ಪ್ರಸ್ತಾವವನ್ನು ಬೆಂಬಲಿಸುವುದಾಗಿ ಸಮಾಜವಾದಿ ಪಕ್ಷ ಹೇಳಿದೆ. ನ್ಯಾಯಾಂಗ ಸಂಸ್ಥೆಗಳ ಕೋಮುವಾದೀಕರಣವು ಭ್ರಷ್ಟಾಚಾರಕ್ಕಿಂತ ಗಂಭೀರವಾದ ವಿಷಯ ಎಂದು ಎಸ್ಪಿ ಅಭಿಪ್ರಾಯಪಟ್ಟಿದೆ. ಆದರೆ ದೋಷಾರೋಪ ವಿಚಾರವಾಗಿ ಪ್ರಶ್ನೆಗಳು ಎದ್ದಿವೆ. ನ್ಯಾಯಮೂರ್ತಿ ವರ್ಮಾ ಅವರು ವಿಚಾರಣೆಯ ಬಗೆಯನ್ನೇ ಪ್ರಶ್ನಿಸಿದ್ದಾರೆ. ‘‘ಸಮಿತಿ ವಿಚಾರಣೆ ದೋಷಪೂರಿತವಾಗಿದೆ, ಪಾರದರ್ಶಕತೆಯ ಕೊರತೆಯಿದೆ ಮತ್ತು ಸಹಜ ನ್ಯಾಯದ ತತ್ವಗಳನ್ನು ಉಲ್ಲಂಘಿಸಿದೆ’’ ಎಂದು ಅವರು ವಾದಿಸಿದ್ದಾರೆ. ತಮಗೆ ನ್ಯಾಯಯುತ ವಿಚಾರಣೆ ನಿರಾಕರಿಸಲಾಗಿದೆ ಮತ್ತು ಸಮಿತಿ ತಮ್ಮನ್ನು ತೆಗೆದುಹಾಕಲು ಶಿಫಾರಸು ಮಾಡುವ ಮೂಲಕ ತನ್ನ ಮಿತಿಯನ್ನು ಮೀರಿದೆ ಎಂದು ಅವರು ಹೇಳಿದ್ದಾರೆ. ಅವರು ಕೇವಲ ಸಮಿತಿ ಏನು ಹೇಳಿತೆಂಬುದನ್ನು ಮಾತ್ರ ಪ್ರಶ್ನಿಸುತ್ತಿಲ್ಲ. ಬದಲಾಗಿ, ಪ್ರಕ್ರಿಯೆಯನ್ನೇ ಪ್ರಶ್ನಿಸುತ್ತಿದ್ದಾರೆ.
ಈಗ ಮತ್ತೊಬ್ಬ ನ್ಯಾಯಾಧೀಶರಿಗೆ ಸಂಬಂಧಿಸಿದ ಪ್ರಕರಣವನ್ನು ಗಮನಿಸೋಣ.
ಅಲಹಾಬಾದ್ ಹೈಕೋರ್ಟ್ನ ಬಾರ್ ಅಸೋಸಿಯೇಷನ್ನಲ್ಲಿ ವಿಹಿಂಪದ ಕಾನೂನು ವಿಭಾಗ 2024ರ ಡಿಸೆಂಬರ್ 8ರಂದು ಆಯೋಜಿಸಿದ ಕಾರ್ಯಕ್ರಮದಲ್ಲಿ ಏಕರೂಪ ನಾಗರಿಕ ಸಂಹಿತೆಯ ಕುರಿತು ಮಾತನಾಡಿದ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ‘‘ಹಿಂದೂಗಳು ಮಾತ್ರ ಈ ದೇಶವನ್ನು ವಿಶ್ವಗುರು ಮಾಡಬಹುದು, ಇದು ಭಾರತ ಮತ್ತು ಇದು ಬಹುಸಂಖ್ಯಾತರ ಆಶಯದಂತೆ ನಡೆಯುತ್ತದೆ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ’’ ಎಂದು ಸ್ಪಷ್ಟವಾಗಿ ಹೇಳಿದ್ದರು.
ಅಷ್ಟೇ ಅಲ್ಲದೆ, ಮುಸ್ಲಿಮರ ವಿರುದ್ಧ ಅತ್ಯಂತ ಕೀಳಾದ ರೀತಿಯಲ್ಲಿ ‘ಕಟ್ಮುಲ್ಲಾ’ ಎಂಬ ಪದಪ್ರಯೋಗವನ್ನೂ ಅವರು ಮಾಡಿದ್ದರು. ಅವರು ಅಲ್ಲಿ ಸ್ಪಷ್ಟವಾಗಿ ಕೋಮುವಾದಿ ಭಾಷಣ ಮಾಡಿದರು. ಅದರ ವೀಡಿಯೊ ವ್ಯಾಪಕವಾಗಿ ಪ್ರಸಾರವಾಯಿತು.
ಮುಸ್ಲಿಮ್ ಸಮುದಾಯದ ವಿರುದ್ಧ ತೀವ್ರ ಆಕ್ಷೇಪಾರ್ಹ ಪದಗಳನ್ನು ಬಳಸಿ ಅವರು ಮಾತನಾಡಿದ್ದರು. ಈ ದೇಶ ಮತ್ತು ಕಾನೂನು ಬಹುಸಂಖ್ಯಾತರ ಇಚ್ಛೆಗೆ ಅನುಗುಣವಾಗಿ ಕೆಲಸ ಮಾಡುತ್ತದೆ ಎಂಬ ಅವರ ಹೇಳಿಕೆ, ಸಾಂವಿಧಾನಿಕ ಹುದ್ದೆಯಲ್ಲಿ ಕುಳಿತವರೊಬ್ಬರು ಹೇಳುವ ಮಾತಾಗಿ ರಲಿಲ್ಲ. ಅದು ಕೇವಲ ಹೇಳಿಕೆಯಾಗಿರಲಿಲ್ಲ. ತಮ್ಮ ಹೇಳಿಕೆಗಳ ಮೂಲಕ ಸಾಂವಿಧಾನಿಕ ನ್ಯಾಯಾಲಯದ ನ್ಯಾಯಾಧೀಶರು ಭಾರತೀಯ ಸಂವಿಧಾನದ ಜಾತ್ಯತೀತ ಸ್ವರೂಪವನ್ನೇ ಬಹಿರಂಗವಾಗಿ ಪ್ರಶ್ನಿಸಿದ್ದರು.
ಆದರೆ ಈ ವಿಷಯವಾಗಿ ಸರಕಾರ ಮೌನವಾಗಿದೆ.
ನ್ಯಾಯಮೂರ್ತಿ ವರ್ಮಾ ವಿರುದ್ಧ ಆದಂತೆ ಇಲ್ಲಿ ದೋಷಾರೋಪದ ಗದ್ದಲವಿಲ್ಲ. ಅವರ ವಿರುದ್ಧ ಸಂಸದರ ಸಹಿ ಸಂಗ್ರಹದ ಅವಸರವಿಲ್ಲ. ಇಡೀ ಸರಕಾರಕ್ಕೆ, ಸರಕಾರದಲ್ಲಿರುವವರಿಗೆ ಅವರ ಹೇಳಿಕೆ ಬಗ್ಗೆ ಏನೇನೂ ಅನ್ನಿಸಿಯೇ ಇಲ್ಲ.
ಸುಪ್ರೀಂ ಕೋರ್ಟ್ ಕೊಲಿಜಿಯಂ ಕೂಡ ಅವರ ವಿಚಾರಣೆ ವೇಳೆ, ಅಂತಹ ಹೇಳಿಕೆ ನೀಡುವುದನ್ನು ತಪ್ಪಿಸಬಹುದಿತ್ತು ಎಂದಷ್ಟೇ ಹೇಳಿತು ಎನ್ನಲಾಗಿದೆ.
ನ್ಯಾಯಮೂರ್ತಿ ಯಾದವ್ ತಮ್ಮ ಹೇಳಿಕೆಗೆ ಸಂಬಂಧಿಸಿ ಕ್ಷಮೆಯಾಚಿಸಲು ನಿರಾಕರಿಸಿದರು. ಅಲ್ಲದೆ, ತಮ್ಮ ಮಾತು ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾಗಿಲ್ಲ ಎಂದೂ ಅವರು ವಾದಿಸಿದರು.
ಸಮಸ್ಯೆ ಸ್ಪಷ್ಟವಾಗಿ ಕಾಣಿಸುವುದೇ ಇಲ್ಲಿ.
ಇಬ್ಬರು ನ್ಯಾಯಾಧೀಶರ, ಎರಡು ವಿವಾದಗಳ ವಿಷಯದಲ್ಲಿನ ಸಾಂಸ್ಥಿಕ ಪ್ರತಿಕ್ರಿಯೆಗಳು ಬಹಳ ಬೇರೆ ಬೇರೆ ಇವೆ.
ನ್ಯಾಯಮೂರ್ತಿ ವರ್ಮಾ ಪ್ರಕರಣದಲ್ಲಿ, ವ್ಯವಸ್ಥೆ ಅವರ ವಿರುದ್ಧವಾಗಿ ನಿಂತು ಬಹಳ ತ್ವರಿತವಾಗಿ ಕೆಲಸ ಮಾಡತೊಡಗಿದೆ. ಅವರ ಪ್ರಕರಣದ ವಿಚಾರ ಬಹಳ ಬೇಗ ಮಾಧ್ಯಮಕ್ಕೆ ಸೋರಿಕೆಯಾಯಿತು. ಅವರ ವಿರುದ್ಧ ದೋಷಾರೋಪಕ್ಕೆ ಸಂಸದರು ಸಹಿ ಮಾಡಿದರು. ಆದರೆ, ನ್ಯಾಯಮೂರ್ತಿ ಯಾದವ್ ಪ್ರಕರಣದಲ್ಲಿ, ಸ್ಪಷ್ಟ ವೀಡಿಯೊ ಪುರಾವೆಗಳಿವೆ. ವಿರೋಧ ಪಕ್ಷದ ಸಂಸದರು ಅವರ ವಿರುದ್ಧ ದೋಷಾರೋಪಕ್ಕೆ ಸಹಿ ಸಂಗ್ರಹಿಸಿದ್ದಾರೆ. ಅಷ್ಟಾಗಿಯೂ, ನ್ಯಾಯಮೂರ್ತಿ ವರ್ಮಾ ಪ್ರಕರಣದಲ್ಲಿ ತೆಗೆದುಕೊಳ್ಳುತ್ತಿರುವ ತ್ವರಿತ ಕ್ರಮಗಳನ್ನು ಸರಕಾರ ನ್ಯಾಯಮೂರ್ತಿ ಯಾದವ್ ವಿಚಾರದಲ್ಲಿ ತೆಗೆದುಕೊಂಡಿಲ್ಲ.
ನ್ಯಾಯಮೂರ್ತಿ ಯಾದವ್ ವಿಷಯದಲ್ಲಿ ಮೋದಿ ಸರಕಾರ ಮೌನವಾಗಿದೆ. ಅಂದರೆ ಸರಕಾರ ತನಗೆ ಬೇಕಾದಂತೆ, ತನ್ನ ರಾಜಕೀಯ ಲೆಕ್ಕಾಚಾರ ಗಳಿಗೆ ಅನುಸಾರವಾಗಿ ಯಾರ ಮೇಲಾದರೂ ಕ್ರಮ ತೆಗೆದುಕೊಳ್ಳಲು ಆತುರ ತೋರಿಸುತ್ತದೆ ಮತ್ತು ಯಾರನ್ನಾದರೂ ಏನೂ ಮಾಡದೆ ಬಿಡಲು ನಿರ್ಧರಿಸುತ್ತದೆಯೆ? ಇದು ತೀವ್ರ ಕಳವಳವನ್ನು ಹುಟ್ಟುಹಾಕುತ್ತಿರುವ ನಡವಳಿಕೆಯಾಗಿದೆ.
ಹಿರಿಯ ವಕೀಲ ಮತ್ತು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರು.
ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ಅತ್ಯುತ್ತಮ ನ್ಯಾಯಾಧೀಶರಲ್ಲಿ ಒಬ್ಬರು ಎಂದು ಸಿಬಲ್ ಬಣ್ಣಿಸಿದ್ದರು. ವರ್ಮಾ ವಿರುದ್ಧ ಅನುಸರಿಸಲಾದ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದರು. ಸರಕಾರ ಸೂಕ್ತ ತನಿಖೆಯಿಲ್ಲದೆ ಅವರ ವಿರುದ್ಧ ವರ್ತಿಸುತ್ತಿದೆ ಎಂದು ಸಿಬಲ್ ಆರೋಪಿಸಿದ್ದರು.
ಈ ಎರಡೂ ಪ್ರಕರಣಗಳಲ್ಲಿ ಸಿಬಲ್ ನಿರ್ಣಾಯಕ ವ್ಯತ್ಯಾಸಗಳನ್ನು ಮುಂದಿಡುತ್ತಾರೆ.
ನ್ಯಾಯಮೂರ್ತಿ ವರ್ಮಾ ಅವರನ್ನು ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲಷ್ಟೇ ಗುರಿ ಮಾಡಲಾಗಿದೆ.
ಮತ್ತೊಂದೆಡೆ, ನ್ಯಾಯಮೂರ್ತಿ ಯಾದವ್ ಅವರ ಕೋಮುವಾದಿ ಹೇಳಿಕೆಗಳ ವೀಡಿಯೊ ಪುರಾವೆ ಇದ್ದರೂ, ಅವರ ಭಾಷಣದ ವಿರುದ್ಧ ಏನು ಕ್ರಮ ತೆಗೆದುಕೊಳ್ಳಬೇಕಿತ್ತೋ ಅಂಥ ಯಾವುದೇ ಕ್ರಮಗಳೂ ಜರುಗಿಲ್ಲ. ಈ ವಿಭಿನ್ನ ವರ್ತನೆ ನ್ಯಾಯಾಂಗ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವ ದೊಡ್ಡ ತಂತ್ರದ ಭಾಗವಾಗಿರ ಬಹುದು ಎಂದು ಸಿಬಲ್ ಆರೋಪಿಸಿದ್ದಾರೆ.
ಒಬ್ಬ ನ್ಯಾಯಾಧೀಶರನ್ನು ತೆಗೆದುಹಾಕುವ ಮತ್ತು ಇನ್ನೊಬ್ಬ ನ್ಯಾಯಾಧೀಶರನ್ನು ರಕ್ಷಿಸುವ ಸರಕಾರದ ಉತ್ಸಾಹದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ನ್ಯಾಯಮೂರ್ತಿ ಶೇಖರ್ ಯಾದವ್ ವಿಷಯದಲ್ಲಿ ಬಾಕಿ ಇರುವ ವಾಗ್ದಂಡನೆ ಪ್ರಸ್ತಾವಕ್ಕೆ ಆರು ತಿಂಗಳಿನಿಂದಲೂ ಸಹಿ ಹಾಕಿಲ್ಲ.
ಅವರು ಬಹಿರಂಗವಾಗಿಯೇ ಕೋಮುವಾದಿ ಹೇಳಿಕೆ ನೀಡಿದ್ದರು. ಕೇಂದ್ರ ಸಚಿವ ರಿಜಿಜು ಅದರ ಬಗ್ಗೆ ಏನನ್ನೂ ಹೇಳುವುದಿಲ್ಲ.
ಆರೋಪ ನಿಜವಾಗಿರುವಲ್ಲಿ ಅಂಥ ನ್ಯಾಯಾಧೀಶರನ್ನು ರಕ್ಷಿಸಲಾಗುತ್ತಿದೆ. ಆರೋಪದಲ್ಲಿ ಯಾವುದೇ ಸತ್ಯವಿಲ್ಲದಿರುವಾಗ, ಆ ಆರೋಪದ ಮೇಲೆ ವರ್ಮಾ ಅವರ ವಿರುದ್ಧ ಕ್ರಮ ಕೈಗೊಳ್ಳಲು ಬಯಸುತ್ತಾರೆ ಎಂದು ಸಿಬಲ್ ಈ ಹಿಂದೆಯೂ ತಕರಾರು ಎತ್ತಿದ್ದಾರೆ. ಇದು ದೀರ್ಘಕಾಲದ ರಾಜಕೀಯ ಉದ್ದೇಶದ್ದಾಗಿರ ಬಹುದು ಎಂದು ಸಿಬಲ್ ಅನುಮಾನಿಸುತ್ತಾರೆ.
ಮುಖ್ಯವಾಗಿ, ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು (NJAC) ಸ್ಥಾಪಿಸುವ ತನ್ನ ಉದ್ದೇಶ ಸಾಧಿಸಲು ಸರಕಾರ ಬಯಸಿರಬಹುದು. ಅದನ್ನು ಸುಪ್ರೀಂ ಕೋರ್ಟ್ 2015ರಲ್ಲಿ ರದ್ದುಗೊಳಿಸಿತ್ತು. ನ್ಯಾಯಮೂರ್ತಿ ವರ್ಮಾ ಅವರ ವಿರುದ್ಧದ ದೋಷಾರೋಪ ವಿಷಯದಲ್ಲಿನ ಸರಕಾರದ ಆಸಕ್ತಿ ಈ ಹಿನ್ನೆಲೆಯ ದ್ದಾಗಿದೆಯೇ ಎಂಬ ಅನುಮಾನ ಎದ್ದಿದೆ.
ಈಗಾಗಲೇ ಟೀಕೆಗೆ ಒಳಗಾಗಿರುವ ಕೊಲಿಜಿಯಂ ವ್ಯವಸ್ಥೆಯ ವಿರುದ್ಧ ಸರಕಾರ ಗಟ್ಟಿಯಾಗುತ್ತಿದೆಯೇ ಎಂಬ ಪ್ರಶ್ನೆಯೂ ಎದ್ದಿದೆ. ಇದು ನ್ಯಾಯಾಂಗ ಹೊಣೆಗಾರಿಕೆ ಪ್ರಕ್ರಿಯೆಯ ವಿಶ್ವಾಸಾರ್ಹತೆಗೇ ಅಪಾಯ ತರುವಂಥದ್ದಾಗಿದೆ.
ದೋಷಾರೋಪ ಎಂಬುದು ಕೂಡ ಸರಕಾರ ತನಗಾಗದವರ ವಿರುದ್ಧ ಬಳಸಬಹುದಾದ ಅಸ್ತ್ರವಾಗುತ್ತಿದೆಯೆ? ದೋಷಾರೋಪ ಬಹುಸಂಖ್ಯಾತ ಸಿದ್ಧಾಂತವನ್ನು ಪ್ರತಿಪಾದಿಸುತ್ತ, ಒಂದಿಡೀ ಸಮುದಾಯದ ವಿರುದ್ಧ ಮಾತನಾಡುವವರನ್ನು ರಕ್ಷಿಸಿದರೆ, ಅದು ಎಲ್ಲಿಗೆ ಮುಟ್ಟಿದಂತಾಯಿತು? ಅದು ನ್ಯಾಯಾಂಗದ ಸ್ವಾತಂತ್ರ್ಯವನ್ನೇ ದಮನಿಸುತ್ತದೆ. ದೇಶದ ಸಂವಿಧಾನಕ್ಕೆ ಬದ್ಧತೆಗಿಂತ ಸೈದ್ಧಾಂತಿಕ ಒಲವು ಹೊಂದಿರುವುದೇ ಸುರಕ್ಷಿತ ಎಂದು ನ್ಯಾಯಾಧೀಶರು ಭಾವಿಸುವ ಸ್ಥಿತಿ ಬಂದಿದೆಯೇ?
ಸಾಂವಿಧಾನಿಕ ನಿಷ್ಠೆಯ ಜಾಗದಲ್ಲಿ ರಾಜಕೀಯ ನಿಷ್ಠೆಗೆ ಇದು ಪ್ರಚೋದಿಸುವ ಹಾಗಿದೆ. ಇದು ಸಾಂವಿಧಾನಿಕ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಜಾಗತಿಕ ಪ್ರತಿಷ್ಠೆಗೆ ದೊಡ್ಡ ಧಕ್ಕೆ ಉಂಟುಮಾಡುತ್ತದೆ.
ಹುದ್ದೆಯಲ್ಲಿರುವ ನ್ಯಾಯಾಧೀಶರ ದ್ವೇಷ ಭಾಷಣವನ್ನು ನ್ಯಾಯಾಂಗ ವ್ಯವಸ್ಥೆ ಸಹಿಸಿಕೊಂಡರೆ, ಕೋಮು ಸಾಮರಸ್ಯ, ಅಲ್ಪಸಂಖ್ಯಾತ ಹಕ್ಕುಗಳು ಅಥವಾ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ತೀರ್ಪು ನೀಡಲು ಅದಕ್ಕೆ ಯಾವ ನೈತಿಕ ಅಧಿಕಾರವಿರುತ್ತದೆ?
ನ್ಯಾಯಾಂಗ ಶಿಸ್ತಿನಲ್ಲಿ ಸಂಸತ್ತಿನ ಪಾತ್ರವನ್ನು ಪುನರ್ವಿಮರ್ಶಿಸುವ ಬಗ್ಗೆ ಈಗ ಖಂಡಿತ ವಾಗಿಯೂ ಕಾನೂನು ಪರಿಣಿತರು, ವೃತ್ತಿಪರರು ಮತ್ತು ನಾಗರಿಕರು ಯೋಚಿಸಬೇಕಾಗುತ್ತದೆ.
ಯಾರನ್ನು ದೋಷಾರೋಪ ಮಾಡಬೇಕು, ಯಾರನ್ನು ಮಾಡಬಾರದು ಎಂದು ನಿರ್ಧರಿಸಲು ರಾಜಕೀಯ ಬಹುಸಂಖ್ಯಾತರಿಗೆ ಅವಕಾಶ ಕೊಡಬೇಕೇ ಎಂಬ ದೊಡ್ಡ ಪ್ರಶ್ನೆ ಈಗ ಇದೆ.
ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಸಾಧ್ಯವಿರುವ ಪ್ರತಿಯೊಂದು ವೇದಿಕೆಯಲ್ಲೂ ತಮ್ಮ ವಿರುದ್ಧದ ನಡೆಯನ್ನು ಪ್ರಶ್ನಿಸುವ ಸಾಧ್ಯತೆಯಿದೆ. ಅದೇ ಹೊತ್ತಲ್ಲಿ ನ್ಯಾಯಮೂರ್ತಿ ಯಾದವ್ ತಮ್ಮ ಅಧಿಕಾರಾವಧಿಯನ್ನು ಸುರಳೀತವಾಗಿ ಮುಂದುವರಿಸುವಂತೆ ಕಾಣುತ್ತದೆ.
ಯಾಕೆಂದರೆ ಅವರ ವಿರುದ್ಧ ಯಾರೂ ಮಾತನಾಡುತ್ತಿಲ್ಲ.
ಒಬ್ಬ ನ್ಯಾಯಾಧೀಶರು ತೀರಾ ಕೀಳು ಮಟ್ಟದ ಪ್ರಚೋದನಕಾರಿ ಭಾಷಣ ಮಾಡಿದಾಗ ಅವರ ವಿರುದ್ಧ ಕ್ರಮ ಆಗದಿದ್ದರೆ, ಅವರು ನ್ಯಾಯಾಧೀಶರಾಗಿಯೇ ಮುಂದುವರಿದರೆ ಅದರಿಂದ ರವಾನೆಯಾಗುವ ಸಂದೇಶವೇನು? ಸಂವಿ ಧಾನವನ್ನು ಎತ್ತಿ ಹಿಡಿಯಬೇಕಾದ ನ್ಯಾಯಾಧೀಶರೇ ಸಂವಿಧಾನ ವಿರೋಧಿಯಾಗಿ ನಡೆದುಕೊಂಡ ಬಳಿಕವೂ ಅವರು ನ್ಯಾಯಾಧೀಶರಾಗಿ ಉಳಿದರೆ ಅದಕ್ಕೆ ಏನರ್ಥ?
ಇದೆಲ್ಲದರ ಹಿನ್ನೆಲೆಯಲ್ಲಿ, ನ್ಯಾಯಾಂಗದ ನಿಷ್ಪಕ್ಷ ನಿಲುವು, ನ್ಯಾಯಯುತ ಮತ್ತು ಸ್ವತಂತ್ರ ಸ್ಥಿತಿಯ ಬಗ್ಗೆಯೇ ಅನುಮಾನಗಳು ಏಳುವಂತಾಗಿದೆ.







