ಪದೇ ಪದೇ ಮುಂದೂಡುತ್ತಿರುವ ಜಿಲ್ಲಾಸ್ಪತ್ರೆ ಉದ್ಘಾಟನೆ
ವೈದ್ಯಕೀಯ ಉಪಕರಣಗಳ ಖರೀದಿ ವಿವರಕ್ಕೆ ಆರ್‌ಟಿಐನಲ್ಲೂ ಉತ್ತರವಿಲ್ಲ

ಹೊಸಪೇಟೆ: ವಿಜಯನಗರ ಜಿಲ್ಲೆಯ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಸುಮಾರು 104 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ವಿಜಯನಗರ ಜಿಲ್ಲಾ ಆಸ್ಪತ್ರೆಯ ಉದ್ಘಾಟನೆ ಪದೇಪದೇ ಮುಂದೂಡಿಕೆಯಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 2026ರ ಜನವರಿ, ಫೆಬ್ರವರಿಯಲ್ಲಿ ಉದ್ಘಾಟನೆಯಾಗಲಿದೆ ಎನ್ನಲಾಗಿದ್ದ ಆಸ್ಪತ್ರೆಯ ದಿನಾಂಕ ಹಲವು ಬಾರಿ ಬದಲಾಗಿದ್ದು, ನ.18ರಂದು ಉದ್ಘಾಟನೆಯಾಗುವುದಾಗಿ ನಿಗದಿಯಾಗಿತ್ತು.
ಆದರೆ, ಉದ್ಘಾಟನೆಯನ್ನು ಮತ್ತೆ ನ.27ಕ್ಕೆ ಮುಂದೂಡಲಾಗಿದೆ. ಮುಖ್ಯಮಂತ್ರಿಗಳ ಆಗಮನಕ್ಕಾಗಿ ಕಾಯಲಾಗುತ್ತಿದೆಯೇ ಅಥವಾ ಆರೋಗ್ಯ ಸಚಿವರಿಗಾಗಿ ಕಾಯುತ್ತಿದ್ದಾರೆಯೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಕಟ್ಟಡ ಸಿದ್ಧವಾಗಿದೆ; ವೈದ್ಯಕೀಯ ಸೇವೆ ಇನ್ನೂ ಅಲಭ್ಯ
300 ಹಾಸಿಗೆಗಳ ವ್ಯವಸ್ಥೆ ಹೊಂದಿರುವ ಆಸ್ಪತ್ರೆಯ ವೈದ್ಯಕೀಯ ಉಪಕರಣಗಳ ಖರೀದಿಗೆ ಸುಮಾರು 9.69 ಕೋಟಿ ರೂ. ವೆಚ್ಚ ಮಾಡಲಾಗಿದೆ ಎನ್ನಲಾಗಿದೆ. ಆದರೆ ಯಾವ ಉಪಕರಣಗಳನ್ನು ಖರೀದಿಸಲಾಗಿದೆ, ಅವುಗಳ ಗುಣಮಟ್ಟವೇನು, ಅಳವಡಿಕೆ ಪೂರ್ಣಗೊಂಡಿದೆಯೇ ಎಂಬ ವಿವರಗಳು ಬಹಿರಂಗವಾಗಿಲ್ಲ.
ಈ ಕುರಿತು ಮಾಹಿತಿ ಹಕ್ಕು ಅಧಿನಿಯಮದಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಅರ್ಜಿ ಸಲ್ಲಿಸಿದ್ದರೂ ಸಮರ್ಪಕ ಮಾಹಿತಿ ದೊರೆತಿಲ್ಲ. ಸಾರ್ವಜನಿಕರ ತೆರಿಗೆ ಹಣದಲ್ಲಿ ಖರೀದಿಸಿದ ಉಪಕರಣಗಳ ವಿವರ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದೇಕೆ ಎಂಬ ಪ್ರಶ್ನೆ ಎದುರಾಗಿದೆ.
ತಜ್ಞ ವೈದ್ಯರ ನೇಮಕಾತಿಯೇ ಇಲ್ಲದೆ ಆಸ್ಪತ್ರೆ ಆರಂಭಿಸುವುದಾದರೂ ಹೇಗೆ?
ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಅಗತ್ಯವಿರುವ ತಜ್ಞ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ನೇಮಕಾತಿ ಪೂರ್ಣಗೊಂಡಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ತುರ್ತು ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಹೆರಿಗೆ ಮತ್ತು ಮಕ್ಕಳ ಚಿಕಿತ್ಸೆಗೆ ತಜ್ಞ ವೈದ್ಯರು ಹಾಗೂ ಅಗತ್ಯ ಸಿಬ್ಬಂದಿ ಇರಲೇಬೇಕು. ನೇಮಕಾತಿ ಪೂರ್ಣಗೊಳ್ಳದೆ ಆಸ್ಪತ್ರೆ ಉದ್ಘಾಟಿಸಿದರೆ ಜನರಿಗೆ ಯಾವ ಪ್ರಯೋಜನ? ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
ಉದ್ಘಾಟನೆ ವಿಳಂಬಕ್ಕೆ ನಿಖರ ಕಾರಣವನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕಿದೆ. ಈ ಕುರಿತು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೆರೆ ಅವರು, ಸರಕಾರದ ಮಟ್ಟದಲ್ಲಿ ಸ್ಥಳೀಯ ಶಾಸಕರಿಗೆ ಮೌಖಿಕ ಸೂಚನೆ ಬಂದ ಹಿನ್ನೆಲೆಯಲ್ಲಿ ನ.27ರಂದು ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿಜಯನಗರ ಜಿಲ್ಲಾಸ್ಪತ್ರೆಯ ಉದ್ಘಾಟನೆ ದಿನಾಂಕವನ್ನು ಪದೇಪದೇ ಮುಂದೂಡುತ್ತಿರುವುದು ಜಿಲ್ಲೆಯ ಜನರ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಮುಖ್ಯಮಂತ್ರಿಗಳು ಅಥವಾ ಆರೋಗ್ಯ ಸಚಿವರು ಬರುವುದಕ್ಕಾಗಿ ಕಾಯುವ ಬದಲು, ಆಸ್ಪತ್ರೆಯಲ್ಲಿ ಅಗತ್ಯ ತಜ್ಞ ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಸಂಪೂರ್ಣ ಚಿಕಿತ್ಸಾ ಸೌಲಭ್ಯಗಳನ್ನು ಸಿದ್ಧಪಡಿಸಿ ಜನರ ಸೇವೆಗೆ ಸಮರ್ಪಿಸಬೇಕು. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಆಸ್ಪತ್ರೆ ಕೇವಲ ಉದ್ಘಾಟನಾ ಸಮಾರಂಭಕ್ಕೆ ಸೀಮಿತವಾಗಬಾರದು. ವೈದ್ಯರ ನೇಮಕಾತಿ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿನ ಪಾರದರ್ಶಕತೆ ಕುರಿತು ಜಿಲ್ಲಾಡಳಿತ ಉತ್ತರ ನೀಡಬೇಕು. ಜನರಿಗೆ ಉದ್ಘಾಟನೆಯ ಭಾಗ್ಯಕ್ಕಿಂತ ಆರೋಗ್ಯದ ಭಾಗ್ಯ ಮುಖ್ಯ. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು.
<ಗುಜ್ಜಲ್ ಗಣೇಶ್, ಜಿಲ್ಲಾ ಉಪಾಧ್ಯಕ್ಷರು, ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ.






