ಅಂಕೋಲಾದ ಕರಿಇಶಾಡ ಮಾವಿನ ಹಣ್ಣಿಗೆ ಹೆಚ್ಚಿದ ಬೇಡಿಕೆ

ಅಂಕೋಲಾ: ಅಂಕೋಲಾದ ಕರಿಇಶಾಡ ಮಾವಿನಹಣ್ಣು ಕರ್ನಾಟಕದ ಕರಾವಳಿ ಭಾಗದ ಅತ್ಯಂತ ರುಚಿಕರ ಮತ್ತು ಅಪರೂಪದ ಮಾವಿನ ತಳಿಗಳಲ್ಲಿ ಒಂದಾಗಿದೆ. ಇದು ಮುಖ್ಯವಾಗಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾಕ್ಕೆ ಸೀಮಿತವಾಗಿದೆ. ಅಂಕೋಲಾದ ಮಣ್ಣಿನ ಗುಣಗಳಿಂದಾಗಿಯೇ ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತದೆ. ಬ್ರಿಟಿಷರ ಆಡಳಿತದ ಕಾಲದಲ್ಲಿ ದೊಡ್ಡ ಮಾರುಕಟ್ಟೆಗೆ ತೆರಳುತ್ತಿತ್ತು. ಆದರೆ ಈಗ ಹುಬ್ಬಳ್ಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ಪ್ರಮುಖ ಬೇಡಿಕೆಗಳಿವೆ.
ಜಿಐ ಟ್ಯಾಗ್: ಅಂಕೋಲಾದ ಕರಿ ಇಶಾಡ ಮಾವು 2023ರಲ್ಲಿ ಪ್ರತಿಷ್ಠಿತ ಭೌಗೋಳಿಕ ಗುರುತು ಮಾನ್ಯತೆಯನ್ನು ಪಡೆದಿದೆ. ರುಚಿ ಮತ್ತು ಸುವಾಸನೆ ಈ ಮಾವಿನಹಣ್ಣಿನ ವಿಶೇಷ ಗುಣವಾಗಿದೆ. ದಪ್ಪನೆಯ ತಿರುಳು ಮತ್ತು ಅತ್ಯಂತ ರುಚಿಕರವಾದ ಸಿಹಿಗೆ ಹೆಸರುವಾಸಿಯಾಗಿದೆ.
ಬೆಳೆಯುವ ಪ್ರದೇಶ: ಅಂಕೋಲಾದ ನಂತರ ಸಣ್ಣ ಪ್ರಮಾಣದಲ್ಲಿ ಕಾರವಾರ ಮತ್ತು ಕುಮಟಾದ ಕೆಲವು ಭಾಗಗಳಲ್ಲಿ ಕರಿಇಶಾಡ ಮಾವಿನಹಣ್ಣು ಬೆಳೆಯಲಾಗುತ್ತದೆ. ಹಾಲಕ್ಕಿ ಸಮುದಾಯದವರು ಈ ಹಣ್ಣನ್ನು ಸಾಂಪ್ರದಾಯಿಕವಾಗಿ ಬೆಳೆಯುತ್ತಾರೆ. ಹಣ್ಣು ಬಲಿತಾಗ ಕಡು ಹಸಿರು ಅಥವಾ ಕಪ್ಪು ಮಿಶ್ರಿತ ಹಸಿರು ಬಣ್ಣದಲ್ಲಿರುತ್ತದೆ. ಗಾತ್ರದಲ್ಲಿ ಮಧ್ಯಮದಿಂದ ದೊಡ್ಡದಾಗಿರುತ್ತದೆ. ಈ ಕರಿಇಶಾಡ ಮಾವಿನಹಣ್ಣು ಮೇ-ಜೂನ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ. ತಾಲೂಕಿನ ಸುಮಾರು 537 ಎಕರೆ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಇದರಿಂದಾಗಿ ಪ್ರತಿ ವರ್ಷ ಸುಮಾರು 2 ಕೋಟಿ 93 ಲಕ್ಷ ರೂ. ಆದಾಯವನ್ನು ಮಾವು ಬೆಳೆಗಾರರು ಪಡೆದುಕೊಳ್ಳುತ್ತಿದ್ದಾರೆ. ಆದರೆ ಕೆಲವೊಮ್ಮೆ ವಾತಾವರಣಗಳ ಬದಲಾವಣೆಯಿಂದಾಗಿ ನಿರೀಕ್ಷಿತ ಆದಾಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಮಾರುಕಟ್ಟೆ: ಇಲ್ಲಿ ಬೆಳೆದ ಮಾವನ್ನು ಬಿದಿರಿನ ಬುಟ್ಟಿಯಲ್ಲಿ ತುಂಬಿ ಅದನ್ನು ಗೋವಾ ಮತ್ತು ಹುಬ್ಬಳ್ಳಿ ಮಾರುಕಟ್ಟೆಗೆ ಸಾಗಿಸಲಾಗುತ್ತದೆ. ಬೆಳೆಗಾರರಿಂದ ನೇರವಾಗಿಯೇ ಏಜೆಂಟರು ಖರೀದಿಸಿ ಅದನ್ನು ಬೇರೆ ಬೇರೆ ಸ್ಥಳಗಳಲ್ಲಿ ಮಾರುಕಟ್ಟೆಗೆ ಸ್ಥಳಾಂತರಿಸಲಾಗುತ್ತಿದೆ. ಹೀಗಾಗಿ ಬೆಳೆಗಾರರಿಗೂ ಕೂಡ ಇದು ಅನುಕೂಲ. ಆದರೆ ಈ ವರ್ಷ ಮೋಡ ಮುಸುಕಿದ ವಾತಾವರಣ ಮತ್ತು ವಿಪರೀತ ಬಿಸಿಲಿನಿಂದಾಗಿ ಬಹುತೇಕ ಮಾವಿನ ಬೆಳೆಯು ನೆಲಕಚ್ಚಿದಂತಾಗಿದೆ.
ದರ: ಅಂಕೋಲಾ ಮಾರುಕಟ್ಟೆಯಲ್ಲಿ ಈಗ ಒಂದು ಡಜನ್ ಮಾವಿನ ಹಣ್ಣಿಗೆ 300ರಿಂದ 400 ರೂ.ವರೆಗೆ ದರವಿದೆ. ಆದರೂ ಮಾವು ಪ್ರಿಯರು ಇದನ್ನು ಖರೀದಿಸುತ್ತಾರೆ. ಹಾಲಕ್ಕಿ ಮಹಿಳೆಯರು ಸ್ಥಳೀಯ ಬೆಳೆಗಾರರಿಂದ ಮಾವು ಖರೀದಿಸಿ ಪಟ್ಟಣದ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರುತ್ತಾರೆ. ಕಳೆದ ನಾಲ್ಕು ವರ್ಷಗಳಿಂದ ಬೆಳೆಗಾರರ ಸಮಿತಿಯ ಪ್ರಮುಖರಾದ ನಾಗರಾಜ ನಾಯಕ ಅವರು ಮಾವು ಮೇಳವನ್ನು ಹಮ್ಮಿಕೊಳ್ಳುತ್ತ ಬಂದಿದ್ದಾರೆ. ಮಾವು ಮೇಳದಲ್ಲಿ ಅಂಕೋಲಾದಲ್ಲಿ ಬೆಳೆದ ವಿವಿಧ ಪ್ರಭೇದದ ಮಾವುಗಳು ಕೂಡ ಆಗಮಿಸುತ್ತವೆ. ಏನೇ ಆಗಲಿ ಅಂಕೋಲಾ ಕರಿಇಶಾಡ ಮಾವಿನಹಣ್ಣಿಗೆ ಭಾರೀ ಬೇಡಿಕೆ ಇದ್ದು, ತನ್ನ ಘನತೆಯನ್ನು ಜಿಐ ಟ್ಯಾಗ್ ಮೂಲಕ ಇನ್ನಷ್ಟು ಇಮ್ಮಡಿಗೊಳಿಸಿಕೊಂಡಿದೆ.
ಕರಿಇಶಾಡ ಮಾವಿನ ಬೆಳೆ ನಮಗೆ ವರದಾನವಾಗಿದೆ. ಆದರೆ ಕೆಲವು ವರ್ಷಗಳಲ್ಲಿ ಲಾಭದ ಪ್ರಮಾಣವು ತಗ್ಗುತ್ತಿದೆ. ಹವಾಮಾನ ವೈಪರೀತ್ಯದ ಮೇಲೆ ಮಾವಿನ ಬೆಳೆಯು ನಿರ್ಧಾರವಾಗುತ್ತದೆ. ಈ ವರ್ಷ ಕರಿಇಶಾಡ ಮಾವಿನಹಣ್ಣು ಅಂಕೋಲಾ ತಾಲೂಕಿನಲ್ಲಿ ಸ್ವಲ್ಪ ಕಡಿಮೆ ಇಳುವರಿ ಬಂದಿದೆ.
-ಸೋಮು ಗೌಡ , ಮಾವು ಬೆಳೆಗಾರ, ಹೊಸಗದ್ದೆ






