ಶೈಕ್ಷಣಿಕ ಅಸಮಾನತೆಯ ಹೆಚ್ಚಳದಿಂದ ರಾಜ್ಯದ ಆರ್ಥಿಕ ಪ್ರಗತಿಗೆ ಬೆದರಿಕೆ

ಬೆಂಗಳೂರು : ಪ್ರಾಥಮಿಕ ಶಾಲೆ ಮತ್ತು ವಿಶ್ವವಿದ್ಯಾನಿಲಯ ಮಟ್ಟಗಳೆರಡರಲ್ಲೂ ಸಾಂಸ್ಥಿಕ ಮೂಲ ಸೌಕರ್ಯಗಳ ಅಭಿವೃದ್ಧಿಯಲ್ಲಿ ರಾಜ್ಯವು ಸಾಕಷ್ಟು ಪ್ರಗತಿ ಸಾಧಿಸಿದೆಯಾದರೂ ಶೈಕ್ಷಣಿಕ ಪ್ರಗತಿಯಲ್ಲಿ ಕರ್ನಾಟಕವು ರಾಷ್ಟ್ರಮಟ್ಟದಲ್ಲಿ ತನ್ನನ್ನು ತಾನು ಮುಂಚೂಣಿಯಲ್ಲಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಇನ್ನೂ ಸಾಕಷ್ಟು ದಾರಿ ಕ್ರಮಿಸಬೇಕಿದೆ ಎಂದು ರಾಜ್ಯ ಶಿಕ್ಷಣ ನೀತಿ ಆಯೋಗವು ಅಭಿಪ್ರಾಯಪಟ್ಟಿದೆ.
ಶೈಕ್ಷಣಿಕ ಅಸಮಾನತೆಯಲ್ಲಿನ ಹೆಚ್ಚಳವು ಕರ್ನಾಟಕಕ್ಕೆ ವಿಶೇಷವಲ್ಲ. ಆದರೆ ಅದನ್ನು ಇನ್ನಾದರೂ ಪರಿಹರಿಸದಿದ್ದರೆ ಸಾಮರಸ್ಯದ ಸಮಾಜದಲ್ಲಿ ಸಾಮಾಜಿಕ ಬಿರುಕುಗಳನ್ನು ಸೃಷ್ಟಿಸುವ ಮತ್ತು ರಾಜ್ಯದ ಆರ್ಥಿಕ ಪ್ರಗತಿಗೆ ಬೆದರಿಕೆ ಹಾಕುವ ಸಾಧ್ಯತೆ ಇದೆ ಎಂದೂ ಆಯೋಗವು ಸರಕಾರವನ್ನು ಎಚ್ಚರಿಸಿದೆ.
ರಾಜ್ಯಕ್ಕೊಂದು ಶಿಕ್ಷಣ ನೀತಿ ರೂಪಿಸಲು ಪ್ರೊ. ಸುಖದೇವ್ ಥೋರಟ್ ನೇತೃತ್ವದಲ್ಲಿ ರಚಿಸಿರುವ ರಾಜ್ಯ ಶಿಕ್ಷಣ ನೀತಿ ಆಯೋಗವು ಹಲವು ಸಂಪುಟಗಳಲ್ಲಿ ನೀಡಿರುವ ವರದಿಯು ರಾಜ್ಯದ ಪ್ರಾಥಮಿಕ, ಮಾಧ್ಯಮಿಕ, ಉನ್ನತ ಮತ್ತು ತಾಂತ್ರಿಕ ಶಿಕ್ಷಣ ವಲಯದಲ್ಲಿನ ಸಮಸ್ಯೆಗಳು, ಬಿಕ್ಕಟ್ಟುಗಳು ಸೇರಿದಂತೆ ವಿವಿಧ ಆಯಾಮಗಳಲ್ಲಿ ಚರ್ಚಿಸಿದೆ.
ಈ ಆಯೋಗವು ಈಗಾಗಲೇ ಸರಕಾರಕ್ಕೆ ಸಲ್ಲಿಸಿರುವ ವರದಿಯ ಸಂಪುಟಗಳನ್ನು ಸಚಿವರುಗಳಿಗೆ ನೀಡಿದೆ. ಈ ವರದಿಗಳಲ್ಲಿನ ಶಿಫಾರಸುಗಳು ಮತ್ತು ಇವುಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಲಹೆಗಳನ್ನೂ ಕೇಳಿದೆ. ಆದರೆ ಮುಖ್ಯಮಂತ್ರಿ ಕುರ್ಚಿ ಕಾದಾಟದ ನಡುವೆಯೇ ಯಾವೊಬ್ಬ ಸಚಿವರೂ ಈ ವರದಿಗಳ ಬಗ್ಗೆ ಕಣ್ಣನ್ನೂ ಹಾಯಿಸಿಲ್ಲ.
ರಾಜ್ಯ ಶಿಕ್ಷಣ ನೀತಿ ಆಯೋಗವು ಸಲ್ಲಿಸಿರುವ ವರದಿಯ ಎಲ್ಲಾ ಸಂಪುಟಗಳೂ ‘ದಿ ಫೈಲ್’ಗೆ ಲಭ್ಯವಾಗಿವೆ.
ಹಿರಿಯ ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತಗಳ ಶೈಕ್ಷಣಿಕ ಸೌಲಭ್ಯಗಳಲ್ಲಿ ಸಾಕಷ್ಟು ಪ್ರಗತಿಯಾಗಿದೆ. ವಿಶೇಷವಾಗಿ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕವು ದೇಶದ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಉನ್ನತ ಸಂಶೋಧನೆ ಕೇಂದ್ರಗಳು ರಾಜ್ಯದಲ್ಲಿ ಸ್ಥಾಪನೆಯಾಗಿವೆ.
‘ಕರ್ನಾಟಕದ ಶೈಕ್ಷಣಿಕ ಅಂಕಿ ಅಂಶಗಳ ಪ್ರಕಾರ ರಾಜ್ಯದ ಬಹುಪಾಲು ಮಕ್ಕಳಿಗೆ ಸಂವಿಧಾನದತ್ತ 8 ವರ್ಷಗಳ ಪ್ರಾಥಮಿಕ ಶಿಕ್ಷಣ ಕೂಡ ದಕ್ಕುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ಭೌತಿಕ ಸ್ವರೂಪದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದರೂ ಕನಿಷ್ಠ ಮಟ್ಟದ ಗಣಿತ ಮತ್ತು ಸಾಕ್ಷರತೆ ಮೂಲ ಕೌಶಲ್ಯಗಳನ್ನು ಗಳಿಸಿಕೊಳ್ಳಲಾಗುತ್ತಿಲ್ಲ. ಶಾಲಾ ಶಿಕ್ಷಣದ ಏಣಿಯಲ್ಲಿ ಮೇಲಕ್ಕೇರಿದಷ್ಟು ಸಾಮಾಜಿಕ ಗುಂಪುಗಳ
ಅಸಮತೆ ಮತ್ತು ಪ್ರದೇಶಗಳ ನಡುವಿನ ತಾರತಮ್ಯಗಳು ಹೆಚ್ಚುತ್ತಾ ಮತ್ತಷ್ಟು ಅಸಮಾನಗೊಳ್ಳುತ್ತ ಹೋಗುತ್ತಿದೆ,’ ಎಂದು ಆಯೋಗವು ವಿಶ್ಲೇಷಿಸಿರುವುದು ವರದಿಯಿಂದ ತಿಳಿದು ಬಂದಿದೆ.
ರಾಜ್ಯವು ಕಳೆದ ಕೆಲವು ವರ್ಷಗಳಿಂದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮತ್ತು ಪ್ರತಿಯೊಂದು ಕ್ರಮಗಳನ್ನು ಮತ್ತು ನವೀನ ಯೋಜನೆಗಳನ್ನು ಪರಿಚಯಿಸುತ್ತ ಬಂದಿದೆ. ಆದರೆ ವ್ಯವಸ್ಥೆಯನ್ನು ಪರಿವರ್ತಿಸುವ ಗುರಿ ಮಾತ್ರ ಇನ್ನೂ ಅಪೂರ್ಣವಾಗಿಯೇ ಉಳಿದಿದೆ ಎಂದು ಆಯೋಗವು ಎಚ್ಚರಿಸಿದೆ.
ಶಿಕ್ಷಣ ವ್ಯವಸ್ಥೆಯಲ್ಲಿನ ತಾರತಮ್ಯ, ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಅನುಸರಿಸುವ ಮೃದು ಧೋರಣೆ ಮತ್ತು ಪರೋಕ್ಷ ನೀತಿಗಳು ಅಸರ್ಮಪಕವಾಗಿವೆ. ಪರಿಣಾಮಕಾರಿಯಾಗಿಲ್ಲ. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಲಭಿಸುವಂತೆ ಮಾಡುವ ಸಲುವಾಗಿ ಶಾಲಾ ಶಿಕ್ಷಣದ ಒಟ್ಟು ಸ್ವರೂಪವನ್ನೇ ಪರಿವರ್ತಿಸಲು ಮೂಲಭೂತ ಸುಧಾರಣೆಗಳನ್ನು ಅಳವಡಿಸಿಕೊಳ್ಳಬೇಕಾದ ಹಲವು ಸವಾಲುಗಳನ್ನು ಆಯೋಗವು ಮುಂದೊಡ್ಡಿದೆ.
ಸಾರ್ವಜನಿಕರಲ್ಲಿ ಸರಕಾರಿ ಶಾಲೆಗಳ ಮೇಲಿನ ವಿಶ್ವಾಸವು ಕಡಿಮೆಯಾಗಿದೆಯೇ ಎಂಬ ಕುರಿತು ಆಯೋಗವು ಚರ್ಚಿಸಿದೆ. ಅಲ್ಲದೆ ಇದಕ್ಕೆ ಹಲವು ಸಮರ್ಥನೆಗಳನ್ನೂ ಒದಗಿಸಿದೆ.
ಇಂಗ್ಲಿಷ್ ಭಾಷೆ ಮತ್ತು ಇಂಗ್ಲಿಷ್ ಬೋಧನಾ ಮಾಧ್ಯಮದ ಆಕರ್ಷಣೆ. ಇದು ಕಡಿಮೆ ಶುಲ್ಕ ವಿಧಿಸುವ, ಬಜೆಟ್ ಶಾಲೆಗಳು ಎಂದೇ ಕರೆಯಲ್ಪಡುವ ಖಾಸಗಿ ಶಾಲೆಗಳು ಅಣಬೆಗಳಂತೆ ಹುಟ್ಟಿಕೊಳ್ಳಲು ಕಾರಣವಾಗಿದೆ. ಇಂತಹ ಶಾಲೆಗಳಲ್ಲಿ ಹಲವು ರಾಜ್ಯ ಇಲಾಖೆಯಿಂದ ಮಾನ್ಯತೆಯನ್ನೇ ಪಡೆದಿಲ್ಲ. ನಿಸ್ಸಂಶಯವಾಗಿ ಇಂತಹ ಶಾಲೆಗಳಲ್ಲಿ ಸಾಕಷ್ಟು ಭೌತಿಕ ಸೌಲಭ್ಯಗಳು ಮತ್ತು ಶೈಕ್ಷಣಿಕ ಸಂಪನ್ಮೂಲಗಳೂ ಇರುವುದಿಲ್ಲ. ಒಂದು ರೀತಿಯಲ್ಲಿ ಇವು ಕಿರು ಉದ್ಯಮದಂತೆ ಕಾರ್ಯನಿರ್ವಹಿಸುತ್ತಿವೆ. ಇವುಗಳ ಏಕೈಕ ಆಕರ್ಷಣೆ ಎಂದರೆ ಇಂಗ್ಲಿಷ್ ಬೋಧನಾ ಮಾಧ್ಯಮ. ಹೀಗಾಗಿಯೇ ಸಾರ್ವಜನಿಕರಲ್ಲಿ ಸರಕಾರಿ ಶಾಲೆಗಳ ಮೇಲಿನ ವಿಶ್ವಾಸವು ಕಡಿಮೆಯಾಗಿದೆ ಎಂದು ಆಯೋಗವು ತನ್ನ ವರದಿಯಲ್ಲಿ ವಿವರಿಸಿದೆ.
ಬೇರೂರಿದ ಗುತ್ತಿಗೆ ಶಿಕ್ಷಕ ನೇಮಕ ಪದ್ಧತಿ-ವೃತ್ತಿಪರತೆಯ ಕೊರತೆ :
ವೆಚ್ಚವನ್ನು ಸರಿದೂಗಿಸುವ ಅಥವಾ ಕಡಿಮೆ ಮಾಡುವ ಹೆಸರಿನಲ್ಲಿ ಹಲವಾರು ಅನಪೇಕ್ಷಿತ ಕ್ರಮಗಳನ್ನು ಪರಿಚಯಿಸಲಾಗಿದೆ. ಉದಾಹರಣೆಗೆ ಅಲ್ಪಾವಧಿ ಗುತ್ತಿಗೆ ಆಧಾರದ ಮೇಲೆ ಶಿಕ್ಷಕರ ನೇಮಕ. ಈಗಾಗಲೇ ಅಸ್ತಿತ್ವದಲ್ಲಿರುವ ಶಿಕ್ಷಕ ವೃಂದಕ್ಕೆ ಇನ್ನಷ್ಟು ಸೇರ್ಪಡೆಗೊಳಿಸಲು ಮತ್ತು ತಕ್ಷಣದ ಅವಶ್ಯಕತೆ ಪೂರೈಸುವುದಕ್ಕೆ ಮಾಡಿಕೊಂಡ ವ್ಯವಸ್ಥೆಯು ನಂತರದ ದಿನಗಳಲ್ಲಿ ಮಂಜೂರಾದ ಶಿಕ್ಷಕರ ಹುದ್ದೆಗಳಿಗೂ ಪರ್ಯಾಯವಾಗಲಾರಂಭಿಸಿತು. ಇದರಿಂದಾಗಿ ಶಿಕ್ಷಕ ಸಮೂಹದಲ್ಲಿ ವೃತ್ತಿಪರತೆಯ ಕೊರತೆ ತಲೆದೋರತೊಡಗಿತು ಮತ್ತು ಬಜೆಟ್‌ನಲ್ಲಿ ಶಿಕ್ಷಣಕ್ಕೆ ಮೀಸಲಿರಿಸಿದ ಅನುದಾನವನ್ನು ದುರ್ಬಲಗೊಳಿಸುವ ಪ್ರಕ್ರಿಯೆ ಆರಂಭವಾಯಿತು. ಈ ಪದ್ಧತಿ ರಾಜ್ಯದಲ್ಲಿ ಎಷ್ಟರಮಟ್ಟಿಗೆ ಬೇರೂರಿದೆ ಎಂದರೆ ರಾಜ್ಯವು ಇದರಿಂದ ಹೊರಬರುವುದಕ್ಕೆ ಇಂದಿಗೂ ಸಾಧ್ಯ ವಾಗುತ್ತಿಲ್ಲ ಎಂದು ಆಯೋಗವು ವಿಶ್ಲೇಷಿಸಿದೆ.
ಕೇಂದ್ರದ ಅಡ್ಡಗಾಲು :
ಕಳೆದ ಹಲವಾರು ದಶಕಗಳಿಂದ ಇರುವ ಈ ಪ್ರಮುಖ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ರಾಜ್ಯ ಸರಕಾರದ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರಕಾರ ನಾನಾ ಮಾರ್ಗದಲ್ಲಿ ತಡೆಯೊಡ್ಡುತ್ತಿದೆ. ಇಡೀ ರಾಜ್ಯದ ಸಮಗ್ರ ಯೋಜನೆ ಮತ್ತು ವಿನೂತನ ಕ್ರಮಗಳನ್ನು ರೂಪಿಸಲು ಅಗತ್ಯವಿರುವ ಆರ್ಥಿಕ ಸಹಾಯವನ್ನು ನೀಡದೇ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ಕೇಂದ್ರ ಸರಕಾರವು ಅಡ್ಡಗಾಲು ಹಾಕುತ್ತಿದೆ.
ವಾಸ್ತವದಲ್ಲಿ ರಾಷ್ಟ್ರೀಯ ನೀತಿಗಳನ್ನು ಅಳವಡಿಸಿಕೊಳ್ಳಲು ನೀಡಲಾಗುತ್ತಿರುವ ಆರ್ಥಿಕ ನೆರವನ್ನು ಕೇಂದ್ರ ಪ್ರಾಯೋಜಿತ ಯೋಜನೆಗಳ ಜೊತೆಗೆ ಸೇರಿಸುವ ಇತ್ತೀಚಿನ ಪ್ರಯತ್ನವು ರಾಜ್ಯ ಸರಕಾರಗಳು ಮತ್ತು ಕೇಂದ್ರ ಸರಕಾರದ ನಡುವೆ ಅನಪೇಕ್ಷಿತ ವಿವಾದ ಹುಟ್ಟಿಕೊಳ್ಳಲು ಕಾರಣವಾಗಿದೆ. ಅಲ್ಲದೆ ಅಲ್ಪ ಮೊತ್ತದ ಅನುದಾನದ ಶಾಲಾ ಶಿಕ್ಷಣದ ಅಭಿವೃದ್ಧಿ ಕ್ರಮಗಳನ್ನು ಕೇಂದ್ರೀಕೃತಗೊಳಿಸುವ ಈ ಪ್ರಕ್ರಿಯೆಯು ಇಲ್ಲಿಯವರೆಗೆ ಕರ್ನಾಟಕ ಸರಕಾರ ಉಳಿಸಿಕೊಂಡು ಬಂದಿರುವ ಅನ್ಯೋನ್ಯ ಸಂಬಂಧದ ಮೇಲೆ ಪರಿಣಾಮ ಬೀರುವಂತಾಗಿದೆ.
ಹಣಕಾಸಿನ ಕೊರತೆ :
ಕೇಂದ್ರ ಸರಕಾರದ ಸಮಗ್ರ ಶಿಕ್ಷಾ ಅಭಿಯಾನಕ್ಕೆ ಹೆಚ್ಚಿನ ಮನ್ನಣೆ ಮತ್ತು ಸಹಾಯ ನೀಡಲಾಗುತ್ತಿದೆ. ರಾಜ್ಯ ಸರಕಾರದ ಉಪ ಕ್ರಮಗಳು ಬಹುತೇಕ ಹಣಕಾಸಿನ ಕೊರತೆಯಿಂದ ಬಳಲುತ್ತಿವೆ ಮತ್ತು ಸಾಕಷ್ಟು ಬೆಂಬಲವಿಲ್ಲದೇ ಸೊರಗುತ್ತಿವೆ. ಪ್ರಸ್ತುತ ನೀತಿ ಚೌಕಟ್ಟನ್ನು ಮರು ಪರಿಶೀಲಿಸುವುದು ಹಾಗೂ ಕೇಂದ್ರ ಮತ್ತು ರಾಜ್ಯದ ನಡುವಿನ ಸಂಬಂಧವನ್ನು ನಿಜವಾದ ಪಾಲುದಾರಿಕೆಯಾಗಿ ಮರು ವ್ಯಾಖ್ಯಾನಿಸುವುದು ಕರ್ನಾಟಕದ ಮುಂದಿರುವ ಸದ್ಯದ ಸವಾಲು ಎಂದು ಆಯೋಗವು ಎಚ್ಚರಿಸಿದೆ.
ಶಿಕ್ಷಣ ಹಕ್ಕು ಕಾಯ್ದೆಯ ಅನುಷ್ಠಾನ- ಅತೃಪ್ತಿ ವ್ಯಕ್ತಪಡಿಸಿದ ಆಯೋಗ :
2009ರಿಂದ ಅಂದರೆ ಕಳೆದ ಒಂದೂವರೆ ದಶಕದ ಅವಧಿಯಲ್ಲಿ ಕರ್ನಾಟಕ ಸೇರಿದಂತೆ ಭಾರತದ ಇತರ ಭಾಗಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆಯ ಅನುಷ್ಠಾನವು ಅಷ್ಟು ತೃಪ್ತಿಕರವಾಗಿಲ್ಲ ಎಂದು ಸರಕಾರದ ವರದಿಗಳು ಹೇಳುತ್ತವೆ. ಪ್ರಮಾಣ ಮತ್ತು ಗುಣಮಟ್ಟ ಎರಡರಲ್ಲೂ ಅಂತರವಿದೆ. ಈ ಅಂತರವು ಕಣ್ಣಿಗೆ ರಾಚುವಂತಿದೆ. ಆರ್ಥಿಕ ಸಂಪನ್ಮೂಲ ಕೊರತೆ ಅತೀ ದೊಡ್ಡ ಸವಾಲಾಗಿದೆ ಎಂದು ಆಯೋಗವು ಹೇಳಿದೆ.
ಆದರೆ ಕಟ್ಟುನಿಟ್ಟಿನ ಸಾಮಾಜಿಕ ಶ್ರೇಣಿ ವ್ಯವಸ್ಥೆ ಮತ್ತು ಆಳವಾಗಿ ಬೇರೂರಿರುವ ಪೂರ್ವಾಗ್ರಹಗಳಿಂದ ಕೂಡಿದ, ಅಸಮಾನತೆ ತಾಂಡವವಾಡುತ್ತಿರುವ ಸಮಾಜದಲ್ಲಿ ಎಲ್ಲರಿಗೂ ಸಮಾನವಾಗಿ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸಮಾನ ಹಕ್ಕಿನ ತತ್ವವನ್ನು ಜಾರಿಗೊಳಿಸಲು ಪ್ರಯತ್ನಿಸುವುದು ಅದಕ್ಕಿಂತ ದೊಡ್ಡ ಮತ್ತು ಸಂಕೀರ್ಣವಾದ ಸವಾಲು ಎಂದು ಬಣ್ಣಿಸಿದೆ.






