Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಭಾರತದ ಅರ್ಥನೀತಿ: ಅಭದ್ರತೆಯಿಂದ ಹುಟ್ಟಿದ...

ಭಾರತದ ಅರ್ಥನೀತಿ: ಅಭದ್ರತೆಯಿಂದ ಹುಟ್ಟಿದ ವಿಪತ್ತು

ಟಿ.ಆರ್. ಭಟ್ಟಿ.ಆರ್. ಭಟ್8 Jun 2026 12:16 PM IST
share
ಭಾರತದ ಅರ್ಥನೀತಿ: ಅಭದ್ರತೆಯಿಂದ ಹುಟ್ಟಿದ ವಿಪತ್ತು
ಸಂವಿಧಾನದ ನಿರ್ದೇಶಕ ತತ್ವಗಳಿಂದ ವಿಮುಖವಾದ ಭಾರತದ ಅರ್ಥನೀತಿ

ಭಾಗ - 2

ಆರ್ಥಿಕ ವಿಪತ್ತು ಅಂದರೆ ಏನು?

ಒಂದು ದೇಶಕ್ಕೆ ಆರ್ಥಿಕ ವಿಪತ್ತು ಬೇರೆ ಬೇರೆ ವಿಧದಲ್ಲಿ ಕಾಡಬಹುದು: ಭೀಕರ ಕ್ಷಾಮ, ಆಹಾರ ಧಾನ್ಯಗಳ ಕೊರತೆ, ವಿದೇಶಿ ವಿನಿಮಯದ ತೀವ್ರ ಅಭಾವ, ಸರಕಾರವು ಪಡಕೊಂಡ ಸಾಲದ ಮರುಪಾವತಿ ಮಾಡಲು ಸಾಧ್ಯವಾಗದೆ ದೇಶವು ದಿವಾಳಿಯ ಅಂಚಿಗೆ ತೆರಳುವುದು, ಅಪಾರವಾದ ಉದ್ಯೋಗ ನಷ್ಟ, ಅಸಾಧ್ಯವಾದ ಬೆಲೆ ಏರಿಕೆ, ಇವುಗಳೆಲ್ಲ ಮೂಲತಃ ಆರ್ಥಿಕ ಪರಿಣಾಮವನ್ನು ಬೀರುವ ಸಾಮೂಹಿಕ ವಿಪತ್ತುಗಳು. ಅವುಗಳಿಂದ ಘಾಸಿಯಾಗುವವರು ಸಮಾಜದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತಳಮಟ್ಟದಲ್ಲಿರುವ ನಾಗರಿಕರು. ವ್ಯಕ್ತಿಯ ನೆಲೆಯಲ್ಲಿ ಅವರಿಗೆ ಬಿಕ್ಕಟ್ಟುಗಳಿಂದ ಹೊರಬರುವುದು ದುಸ್ತರ; ಹಾಗಾಗಿ ಈ ತರದ ಸಾಮೂಹಿಕ ಬಿಕ್ಕಟ್ಟುಗಳನ್ನು ಎದುರಿಸಿ, ಜನರ ಬದುಕನ್ನು ಸುಗಮಗೊಳಿಸುವ ಜವಾಬ್ದಾರಿ ಒಂದು ದೇಶದ ಚುನಾಯಿತ ಸರಕಾರಕ್ಕೆ ಇದೆ.

ಅಭದ್ರವಾಗುತ್ತಲೇ ಇದ್ದ ಅರ್ಥವ್ಯವಸ್ಥೆ

ದೇಶದ ಆರ್ಥಿಕತೆಯನ್ನು ಸುಧಾರಿಸುವ ಮತ್ತು ಜನರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಜವಾಬ್ದಾರಿ ಸರಕಾರದ್ದು ಎಂಬುದನ್ನು ಅರ್ಥಮಾಡಿಕೊಳ್ಳಲು 1991ರ ದಶಕದ ಈಚೆಗಿನ ಪರಿಸ್ಥಿತಿಯತ್ತ ಸ್ಥೂಲವಾದ ನೋಟವನ್ನು ಬೀರುವುದು ಇಲ್ಲಿ ಅರ್ಥಪೂರ್ಣವಾಗುತ್ತದೆ.

2014ರ ಹಿಂದಿನ ಸುಮಾರು ಎರಡು ದಶಕಗಳ ಅವಧಿಯಲ್ಲಿ ಭಾರತವು ಸುಭದ್ರವಾದ ಆರ್ಥಿಕತೆಯಾಗಿ ಪ್ರಗತಿ ಹೊಂದಿತ್ತು. 1991ರಿಂದ ಆರಂಭವಾಗಿ 2004 ಮತ್ತು 2009ರಲ್ಲಿ ಮುಂದುವರಿದ ಆರ್ಥಿಕ ಸುಧಾರಣಾ ನೀತಿಗಳು, ಜನಪರ ಯೋಜನೆಗಳು, ಉದ್ಯೋಗ ಖಾತರಿ ಕಾನೂನು ಮುಂತಾದ ನಿರ್ದಿಷ್ಟ ಕಾರ್ಯಕ್ರಮಗಳು ದೇಶವನ್ನು ಆರ್ಥಿಕ ಸಬಲತೆಯತ್ತ ಒಯ್ಯುತ್ತಿದ್ದವು. ಯಾವುದೇ ವಿದೇಶೀಯ ಒತ್ತಡ ಅಥವಾ ಅಂತರ್‌ರಾಷ್ಟ್ರೀಯ ಆರ್ಥಿಕ ಮುಗ್ಗಟ್ಟಿನಿಂದ ಭಾರತ ತನ್ನನ್ನು ತಾನೇ ರಕ್ಷಿಸುವ ಸಾಮರ್ಥ್ಯವನ್ನು ಪಡೆದಿತ್ತು. ಎರಡು ಘಟನೆಗಳು ಇಲ್ಲಿ ಪ್ರಸ್ತುತವಾಗುತ್ತವೆ.

1990-91ರ ಸಂದರ್ಭದಲ್ಲಿ ಭಾರತದ ಆಮದು-ರಫ್ತುಗಳ ಅಸಮತೋಲನದಿಂದ ವಿದೇಶೀ ವಿನಿಮಯದ ದಾಸ್ತಾನು ಕರಗಿ ಕೇವಲ ಎರಡುವಾರಗಳ ಆಮದಿಗೆ ಪಾವತಿ ಮಾಡುವಷ್ಟು ಉಳಿದಿತ್ತು; ಸಾಲದ ಬಡ್ಡಿಯನ್ನು ಕೊಡುವ ಸಾಮರ್ಥ್ಯವನ್ನು ಕಳೆದುಕೊಂಡಿತ್ತು. ಆರ್‌ಬಿಐ ತನ್ನಲ್ಲಿದ್ದ ಚಿನ್ನವನ್ನು ಅಡವಿಡಬೇಕಾಗಿ ಬಂತು. 1991ರ ಚುನಾವಣೆಯ ಬಳಿಕ ಪಿ.ವಿ. ನರಸಿಂಹರಾಯರು ಪ್ರಧಾನಿಯಾದರು. ಅವರೇ ಆಯ್ದ ಹಣಕಾಸು ಸಚಿವರಾದ ಮನಮೋಹನ್ ಸಿಂಗರು ಮುಂದಿನ 6 ತಿಂಗಳುಗಳಲ್ಲಿ ನಿರ್ದಿಷ್ಟವಾದ ಸುಧಾರಣೆಗಳನ್ನು ಸಂಸತ್‌ನ ಒಪ್ಪಿಗೆ ಪಡೆದು ಅನುಷ್ಠಾನಗೊಳಿಸಿದರು. ಬರಲಿರುವ ಆರ್ಥಿಕ ವಿಪತ್ತಿನಿಂದ ಭಾರತವು ಪಾರಾಯಿತು. ಜನಸಾಮಾನ್ಯರು ಮಿತವ್ಯಯ ಮಾಡಿ ಎಂಬ ಕರೆಯನ್ನು ನರಸಿಂಹ ರಾಯರು ನೀಡಿರಲಿಲ್ಲ!

ಮುಂದೆ, 2007-08ರ ಜಾಗತಿಕ ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ ವಿಶ್ವದಾದ್ಯಂತ ಹಣಕಾಸು ಸಂಸ್ಥೆಗಳು ದಿವಾಳಿಯ ಅಂಚಿಗೆ ಜಾರಿದ್ದವು. ಸರಕಾರಗಳು ಹಣಕಾಸು ಸಹಾಯ ನೀಡಿ ಅವುಗಳನ್ನು ರಕ್ಷಿಸಬೇಕಾಗಿ ಬಂದಿತ್ತು. ಆದರೆ ಆಗಲೇ ಅಮೆರಿಕದಂತಹ ಬಲಶಾಲಿ ಅರ್ಥವ್ಯವಸ್ಥೆಯಲ್ಲಿ ಲಕ್ಷಾಂತರ ಉದ್ಯೋಗ ನಷ್ಟವಾಗಿದ್ದವು, ಅನೇಕ ಹಣಕಾಸು ಸಂಸ್ಥೆಗಳು ಬಾಗಿಲು ಹಾಕಿದ್ದವು, ಇದಕ್ಕೆ ಭಿನ್ನವಾಗಿ ಪ್ರಧಾನಿ ಮನಮೋಹನ ಸಿಂಗ್ ಮತ್ತು ಆರ್‌ಬಿಐ ಗವರ್ನರ್ ವೈ.ವಿ. ರೆಡ್ಡಿ ಮುಂತಾದವರ ದೂರದೃಷ್ಟಿ, ಸಮಯಪ್ರಜ್ಞೆ ಮತ್ತು ಸಾಮರ್ಥ್ಯಗಳಿಂದಾಗಿ ಭಾರತವು ಸ್ವಲ್ಪವೂ ಹಾನಿಯಾಗದೆ ಒಂದು ಪ್ರಬಲ ಆರ್ಥಿಕ ಶಕ್ತಿಯಾಗಿ ಮುಂದುವರಿಯಿತು. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಆರ್ಥಿಕ ಮುತ್ಸದ್ದಿತನಕ್ಕೆ ಪ್ರಶಂಸೆ ಲಭಿಸಿತ್ತು ಆಂತರಿಕವಾಗಿ, ಜನರ ಜೀವನ ಮಟ್ಟ ಗಣನೀಯವಾಗಿ ಸುಧಾರಿಸಿತ್ತು. ಮಾತ್ರವಲ್ಲ, ಮುಂದಿನ ವರ್ಷಗಳಲ್ಲಿ ಅಂದರೆ, 2012ರ ನಂತರದ ರೂಪಾಯಿಯ ನಿರಂತರ ಕುಸಿತ, ಪೆಟ್ರೋಲ್-ಡೀಸೆಲ್ ಬೆಲೆಗಳ ಏರಿಕೆ, ನಷ್ಟಭಾರದಿಂದ ಬಸವಳಿದ ಬ್ಯಾಂಕುಗಳು-ಇವುಗಳ ಹೊರತಾಗಿಯೂ ಅರ್ಥವ್ಯವಸ್ಥೆಯ ಮೂಲಸ್ವರೂಪ ಭದ್ರವಾಗಿಯೇ ಉಳಿದಿತ್ತು.

ಈ ಪರಿಸ್ಥಿತಿಗೆ ವ್ಯತಿರಿಕ್ತವಾದ ಬೆಳವಣಿಗೆಗಳು ನರೇಂದ್ರ ಮೋದಿ ಸರಕಾರದ 12 ವರ್ಷಗಳ ಕಾಲಾವಧಿಯಲ್ಲಿ ಸಂಭವಿಸಿದವು. ವ್ಯಕ್ತಿ ಕೇಂದ್ರೀಕೃತ ನಿರ್ಧಾರಗಳು ಮುನ್ನೆಲೆಗೆ ಬಂದವು; ಪೂರ್ವಾಪರ ವಿವೇಚನೆ, ತಜ್ಞರೊಡನೆ ಸಮಾಲೋಚನೆ ಮತ್ತು ವಿಶಾಲ ತಳಹದಿಯ ಚರ್ಚೆಗಳು ಮರೆಯಾದವು. ಉದ್ಯೋಗ ಸೃಷ್ಟಿ, ಕಪ್ಪು ಹಣದ ವಾಪಸಾತಿ ಮತ್ತು ಭ್ರಷ್ಟಾಚಾರದ ನಿರ್ಮೂಲನದ ಆಶ್ವಾಸನೆಗಳು ಘೋಷಣೆಗಳಲ್ಲಿಯೇ ಉಳಿದವು. ಮೇಲೆ ಹೇಳಿದಂತೆ ಅವರು ಕೈಕೊಂಡ ಕೆಲವು ಕ್ರಮಗಳು ನಮ್ಮ ಅರ್ಥವ್ಯವಸ್ಥೆಗೆ ಮಾರಕ ಹೊಡೆತವನ್ನು ನೀಡಿ, ಭದ್ರತೆಯ ಬದಲು ಆರ್ಥಿಕ ಅಸ್ಥಿರತೆಯನ್ನು ಹುಟ್ಟುಹಾಕಿದವು.

ಕಚ್ಚಾ ತೈಲದ ಬೆಲೆಯು 2014 ಮತ್ತು 2026ರ ಅವಧಿಯಲ್ಲಿ ಬಹಳಷ್ಟು ಏರಿಳಿತವನ್ನು ಕಂಡಿತು. 2014ರಲ್ಲಿ ಬ್ಯಾರಲ್‌ಗೆ 28 ಡಾಲರ್ ಇದ್ದುದು ಕೋವಿಡ್ ಸಂದರ್ಭದಲ್ಲಿ 110 ಡಾಲರನ್ನು ತಲುಪಿ, 2023ರ ರಶ್ಯ-ಉಕ್ರೆನ್ ಸಂಘರ್ಷ ಆರಂಭದಲ್ಲಿ 113 ಡಾಲರ್‌ಗೆ ಏರಿ 2025ರ ಕೊನೆಗೆ 90 ಡಾಲರ್‌ಗೆ ಇಳಿಯಿತು. ಭಾರತದಲ್ಲಿ ಪೆಟ್ರೋಲ್ ಬೆಲೆಯು ಲೀಟರ್‌ಗೆ ರೂ.71 (2014)ರಿಂದ ಮೇ 2026ಕ್ಕೆ ಸುಮಾರು 110 ರೂ.ಗೆ ಏರಿದೆ. ಕಚ್ಚಾ ತೈಲದ ಬೆಲೆಯಲ್ಲಿ ಕಡಿತವಾದಾಗಲೂ ನಮ್ಮಲ್ಲಿ ಪೆಟ್ರೋಲ್ ಬೆಲೆ ಏರುತ್ತಲೇ ಹೋಯಿತು.

ಈ ಎಲ್ಲ ಬೆಳವಣಿಗೆಗಳ ಅರ್ಥ ಎಂದರೆ ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಎಷ್ಟೋ ಮೊದಲೇ ಭಾರತದ ಆರ್ಥಿಕತೆ ಅಭದ್ರವಾಗಲು ಆರಂಭವಾಗಿತ್ತು.

ಅಭದ್ರ ಅರ್ಥವ್ಯವಸ್ಥೆಯ ಲಕ್ಷಣಗಳು

ಅಭದ್ರವಾದ ಅರ್ಥವ್ಯವಸ್ಥೆಯ ಲಕ್ಷಣಗಳೇನು ಎಂಬುದನ್ನು ಈ ಸಂದರ್ಭದಲ್ಲಿ ಅರ್ಥಮಾಡಿಕೊಳ್ಳಬೇಕು. ರಿಸರ್ವ್ ಬ್ಯಾಂಕಿನ ಮಾಹಿತಿಗಳು, ಸರಕಾರದ ವಾರ್ಷಿಕ ಆರ್ಥಿಕ ಸಮೀಕ್ಷೆ ಮತ್ತು ಸ್ವತಂತ್ರ ಸಂಸ್ಥೆಗಳ ಅಧ್ಯಯನದ ಆಧಾರದಲ್ಲಿ ಅವುಗಳನ್ನು ಹೀಗೆ ಪಟ್ಟಿ ಮಾಡಬಹುದು:

1. ಭಾರೀ ಪ್ರಮಾಣದಲ್ಲಿ ಉದ್ಯೋಗ ನಷ್ಟ, ಹೊಸ ಉದ್ಯೋಗಗಳ ಅಭಾವ ಹಾಗೂ ಉದ್ಯೋಗಸ್ಥರ ಆದಾಯದಲ್ಲಿ ಕಡಿತ.

2. ಕುಸಿಯುವ ಕೌಟುಂಬಿಕ ಉಳಿತಾಯ ಮತ್ತು ಹೆಚ್ಚುತ್ತಿರುವ ಸಾಲಭಾರ.

3. ನಿರಂತರ ಬೆಲೆ ಏರಿಕೆ.

4. ರೂಪಾಯಿ ಮೌಲ್ಯದ ನಿರಂತರ ಕುಸಿತ.

5. ದೇಶೀಯ ಬಂಡವಾಳ ಹೂಡಿಕೆಯಲ್ಲಿ ಕಡಿತ.

6. ವಿದೇಶೀ ಹೂಡಿಕೆಯ ಒಳಹರಿವಿನ ಕುಸಿತ.

7. ದಾರಿದ್ರ್ಯ ಮತ್ತು ಬಡವರು-ಶ್ರೀಮಂತರ ಅಂತರದಲ್ಲಿ ಹೆಚ್ಚಳ.

8. ವಿದೇಶಿ ವಿನಿಮಯದ ದಾಸ್ತಾನಿನಲ್ಲಿ ಕೊರತೆ

ಸಾಮಾನ್ಯ ಪ್ರಜೆಗಳು ಈ ಆಗುಹೋಗುಗಳಿಂದ ಬವಣೆಗೆ ಬಲಿಯಾಗುತ್ತಿದ್ದಂತೆ, ವ್ಯವಸ್ಥೆಯ ಪೋಷಣೆಗೆಂದೇ ಇರುವ ಆರ್ಥಿಕ ಸಂಸ್ಥೆಗಳು ತಮ್ಮ ಉದ್ದೇಶಗಳಿಂದ ವಿಮುಖವಾಗುವ ಸಾಧ್ಯತೆ ಇದೆ. ಸಣ್ಣ ರೈತರು, ಸ್ವೋದ್ಯೋಗಿಗಳು, ಸ್ವಂತ ಉದ್ದಿಮೆದಾರರು ಮುಂತಾದವರಿಗೆ ಹಣಕಾಸಿನ ಸಹಾಯವನ್ನು ಒದಗಿಸುವುದರ ಬದಲಾಗಿ ಸರಕಾರಿ ಬ್ಯಾಂಕುಗಳು ದೊಡ್ಡ ಕಂಪೆನಿಗಳಿಗೆ ಸುಲಭವಾಗಿ ಸಾಲ ನೀಡುವುದು ಮತ್ತು ಅವುಗಳು ಮರುಪಾವತಿ ಮಾಡಲು ಹಿಂದೇಟು ಹಾಕಿದಾಗ ಮರುಪಾವತಿಯ ನೀತಿಯನ್ನು ಅವುಗಳಿಗೆ ಅನುಕೂಲವಾಗುವಂತೆ ಬದಲಾಯಿಸುವುದು ಮತ್ತು ಸಾಲಗಳನ್ನು ಮನ್ನಾ ಮಾಡುವುದು-ವ್ಯವಸ್ಥೆಯ ವೈಫಲ್ಯಕ್ಕೆ ಒಂದು ಉದಾಹರಣೆ. ಇದರ ಪರಿಣಾಮವೂ ಸಣ್ಣ ಸಣ್ಣ ಗ್ರಾಹಕರ ಮೇಲೆ ಆಗುತ್ತದೆ.

ಹೋದ 12 ವರ್ಷಗಳ ಅವಧಿಯಲ್ಲಿ ದೇಶದ ಅರ್ಥವ್ಯವಸ್ಥೆಯು ಈ ಎಲ್ಲ ಲಕ್ಷಣಗಳನ್ನು ಹೊಂದಿತ್ತು. ಅವುಗಳ ಬಗ್ಗೆ ಅಧಿಕೃತ ಹೇಳಿಕೆಗಳೂ ಬಂದಿದ್ದವು. ಉದಾಹರಣೆಗೆ, 2023ರ ಬಜೆಟ್‌ನ ಪೂರ್ವಭಾವಿಯಾಗಿ ಸಂಸತ್ತಿನಲ್ಲಿ ಸರಕಾರವೇ ಮಂಡಿಸಿದ ಆರ್ಥಿಕ ಸಮೀಕ್ಷೆಯಲ್ಲಿ 2020-21ರ ಕೋವಿಡ್ ಬಳಿಕದ ಆರ್ಥಿಕ ಚೇತರಿಕೆಯ ಬಗ್ಗೆ ಉಲ್ಲೇಖವಿದೆ. ಅದರ ಜೊತೆಗೆ ಆರ್ಥಿಕ ಅಸ್ಥಿರತೆ, ಬೆಲೆ ಏರಿಕೆ, ರೂಪಾಯಿಯ ಬೆಲೆ ಕುಸಿತ, ಸರಕಾರದ ಬಜೆಟ್‌ನಲ್ಲಿ ಆಗಬಹುದಾದ ವಿತ್ತೀಯ ಕೊರತೆ, ಹೊರಜಗತ್ತಿನ ವಿದ್ಯಮಾನಗಳಿಂದಾಗಬಹುದಾದ ಹೊಡೆತಗಳ ಬಗ್ಗೆ ಸಮೀಕ್ಷೆಯು ಎಚ್ಚರಿಸಿತ್ತು.

ಒಂದೆಡೆಯಲ್ಲಿ ಸಮಾಜದ ಬಹದೊಡ್ಡ ವರ್ಗವು ಹಸಿವು ಮತ್ತು ಬಡತನದಿಂದ ಬಳಲುತ್ತಿದೆ; ಇನ್ನೊಂದೆಡೆ ಕೆಲವೇ ಮಂದಿ ಸರಕಾರದ ನೀತಿಗಳಿಂದ ಆರ್ಥಿಕವಾಗಿ ಬಲವಾಗುತ್ತಿದ್ದಾರೆ. ಸರಕಾರಿ ಸ್ವಾಮ್ಯದ ಕಂಪೆನಿಗಳ ಖಾಸಗೀಕರಣದ ಮೂಲಕ ಸಂಪತ್ತನ್ನು ಮರುಹಂಚಲಾಗುತ್ತಿದೆ. ಮಾತ್ರವಲ್ಲ ಸ್ಪರ್ಧಾತ್ಮಕತೆ ಬದಿಗೆ ಸರಿದು ಕೆಲವೇ ಬಲಿಷ್ಠ ಶಕ್ತಿಗಳ ಒಡೆತನಕ್ಕೆ ವ್ಯಾಪಾರ, ಉತ್ಪಾದನೆ, ಸೇವಾ ರಂಗಗಳು ವರ್ಗಾವಣೆಯಾಗುತ್ತಿವೆ. ದೊಡ್ಡ ದೊಡ್ಡ ಉದ್ದಿಮೆಗಳು ಕೆಲವೇ ಕುಳಗಳ ನಿಯಂತ್ರಣಕ್ಕೆ ಒಳಪಡುವಂತೆ ನೀತಿಗಳನ್ನು ಬದಲಾಯಿಸಲಾಗುತ್ತಿದೆ. ಈ ಬೆಳವಣಿಗೆಯು ಆರ್ಥಿಕ ಅಭದ್ರತೆಯನ್ನು ಮತ್ತಷ್ಟು ತೀವ್ರಗೊಳಿಸುತ್ತದೆ.

ಆರ್ಥಿಕ ಅಸ್ಥಿರತೆಯ ಪರಿಣಾಮಗಳು

ಜನಸಾಮಾನ್ಯರು ಆರ್ಥಿಕವಾಗಿ ಕಂಗೆಟ್ಟಾಗ ಅದು ಅರ್ಥವ್ಯವಸ್ಥೆಯ ಮೇಲೆ ದೀರ್ಘಕಾಲೀನವೂ, ಆಳವೂ ಆದ ಪ್ರಭಾವವನ್ನು ಬೀರುತ್ತದೆ. ಆದಾಯ ಕುಸಿದು, ಬೆಲೆ ಏರಿದಾಗ ಸಿದ್ಧವಸ್ತುಗಳ ಕೊಳ್ಳುವಿಕೆಯನ್ನು ಕಡಿಮೆ ಮಾಡಲೇಬೇಕಾದ ಅನಿವಾರ್ಯತೆ ಒದಗುತ್ತದೆ. ಇದರಿಂದ ಬೇಡಿಕೆ ಕುಸಿಯುತ್ತಾ ಹೋಗುತ್ತದೆ; ಬೇಡಿಕೆ ಕುಸಿದಂತೆ, ಉತ್ಪಾದಕರು ತಮ್ಮ ಉತ್ಪಾದನಾ ಚಟುವಟಿಕೆಯನ್ನು ಕಡಿತಗೊಳಿಸುತ್ತಾರೆ- ನೌಕರರನ್ನು ರಜೆಯಲ್ಲಿ ಹೋಗಲು ಹೇಳಿ, ಉತ್ಪಾದನೆಗೆ ಅಗತ್ಯವಾದ ಮೂಲ ವಸ್ತುಗಳ ಖರೀದಿಯನ್ನು ಸ್ಥಗಿತಗೊಳಿಸಿ ಮತ್ತು ಪರಿಸ್ಥಿತಿ ಸುಧಾರಿಸದಿದ್ದಾಗ ಕಾರ್ಮಿಕರನ್ನು ವಜಾ ಮಾಡಿ, ಹೊಸ ಬಂಡವಾಳ ಹೂಡಿಕೆಗಳನ್ನು ನಿಲ್ಲಿಸಿ, ಅಂತಿಮವಾಗಿ ತಮ್ಮ ಕಾರ್ಖಾನೆಯನ್ನು ಮುಚ್ಚಲು ಮುಂದಾಗುತ್ತಾರೆ. ಈ ಸರಕಾರವು ಹೊಸತಾಗಿ ಜಾರಿಗೆ ತಂದ ಕಾರ್ಮಿಕ ಶಾಸನಗಳು ಕಾರ್ಮಿಕರ ಹಕ್ಕುಗಳನ್ನು ಮೊಟಕಿಸಿ ಅವರನ್ನು ಸುಲಭವಾಗಿ ವಜಾಮಾಡುವ ಅಧಿಕಾರವನ್ನು ಕಂಪೆನಿಗಳಿಗೆ ನೀಡಿವೆ. ಈ ತರದ ಬೆಳವಣಿಗೆಗಳಿಂದ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುತ್ತದೆ. ದೇಶದ ಅರ್ಥವ್ಯವಸ್ಥೆಯು ಒಂದು ವಿಷವರ್ತುಲದೊಳಗೆ ಸೇರಿಕೊಳ್ಳುತ್ತದೆ.

1991-2014ರ ಅವಧಿಯಲ್ಲಿ ಕಡುಬಡವರ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಇಳಿದಿತ್ತು ಎಂದು ಅನೇಕ ಸರಕಾರಿ ಮತ್ತು ಸ್ವತಂತ್ರ ಸಂಸ್ಥೆಗಳ ಅಧ್ಯಯನಗಳು ತಿಳಿಸಿವೆ. ಆದರೆ 2014ರ ಬಳಿಕ ಆದ್ಯತೆಗಳು ಬದಲಾಗಿ ಬಡತನ ನಿರ್ಮೂಲನದ ಗುರಿ ಹಿಂದೆ ಸರಿಯಿತು. ಇದರಿಂದಾಗಿ ಹೊಸ ನೀತಿಗಳ

ಪ್ರಯೋಜನ ಆರ್ಥಿಕವಾಗಿ ಮೇಲ್ಮಟ್ಟದಲ್ಲಿದ್ದ ಜನರಿಗೆ ಲಭಿಸಿತು; ಬಡವರ ಮತ್ತು ಶ್ರೀಮಂತರ ಅಂತರ ಹೆಚ್ಚಾಗಲು ಆರಂಭವಾಯಿತು.

ಬಡತನ ಎಷ್ಟಿತ್ತೆಂಬುದಕ್ಕೆ ಕೋವಿಡ್ ಆಘಾತದ ಸಂದರ್ಭದಲ್ಲಿ ಅತ್ಯಂತ ಬಡವರಿಗೆ ಜೀವಿಸಲು ಉಪಕಾರವಾಗುವಂತೆ ಸರಕಾರವು ಬಡವರ ಅನ್ನಕಲ್ಯಾಣ ಯೋಜನೆ (ಪಿಎಂಜಿಕೆವೈ) ಯನ್ನು ಆರಂಭಿಸಿತು. ಲಾಕ್‌ಡೌನ್ ಸಂದರ್ಭದಲ್ಲಿಯೇ ಸುಮಾರು 80 ಕೋಟಿ ನಾಗರಿಕರಿಗೆ 5 ಕಿಲೊಗ್ರಾಂ ಆಹಾರಧಾನ್ಯವನ್ನು ಉಚಿತವಾಗಿ ಪೂರೈಸಲು ತೊಡಗಿತು. ಈ ಯೋಜನೆಯನ್ನು 2022ರ ತನಕ ಜಾರಿಗೊಳಿಸಿದ ಸರಕಾರವು ಅದರ ಅಗತ್ಯವನ್ನು ಮನಗಂಡು ಯೋಜನೆಯನ್ನು ಅನಿರ್ದಿಷ್ಟ ಕಾಲ ಮುಂದುವರಿಸಿತು. ಇಂದಿಗೂ ಆ ಯೋಜನೆಯಲ್ಲಿ 80 ಕೋಟಿಯಷ್ಟು ಜನ ಫಲಾನುಭವಿಗಳಿದ್ದಾರೆ. ಇದರ ಅರ್ಥ 144 ಕೋಟಿ ಜನಸಂಖ್ಯೆ ಹೊಂದಿದ ದೇಶದ ಅರ್ಧಕ್ಕಿಂತ ಹೆಚ್ಚು ಮಂದಿ ಬಡವರೆಂದಾಯಿತು. ಇತ್ತೀಚೆಗಿನ ಒಂದು ಅಧ್ಯಯನದ ಪ್ರಕಾರ 2014ರ ನಂತರ ದೇಶದ ದಾರಿದ್ರ್ಯನಿವಾರಣಾ ಕಾರ್ಯಕ್ರಮಗಳು ಹಿನ್ನಡೆ ಹೊಂದಿ ನಿರೀಕ್ಷಿತ ಪ್ರಮಾಣದಲ್ಲಿ ದಾರಿದ್ರ್ಯ ಕಡಿತ ಆಗುತ್ತಿಲ್ಲ. ಉಚಿತ ಆಹಾರಧಾನ್ಯ ಪೂರೈಕೆಯು ಇದರ ಒಂದು ಸಂಕೇತ.

ದಾರಿದ್ರ್ಯದ ಪರಿಣಾಮವು ಕುಟುಂಬದ ಆರೋಗ್ಯ ಮತ್ತು ಮಕ್ಕಳ ಶಿಕ್ಷಣದ ಮೇಲೆ ಆಗುತ್ತದೆ. ಕುಟುಂಬದಲ್ಲಿ ದುಡಿಯುವವರ ಆರೋಗ್ಯಕ್ಕ ಧಕ್ಕೆಯಾದರೆ ಸಂಪಾದನೆಯಲ್ಲಿ ಕುಸಿತವಾಗುತ್ತದೆ, ಕುಟುಂಬಕ್ಕೆ ಸಾಮಾಜಿಕ ಭದ್ರತೆ ಇಲ್ಲದಾಗುತ್ತದೆ. ಸಂಪಾದನೆ ಕುಸಿದಾಗ ಮಕ್ಕಳ ವಿದ್ಯಾರ್ಜನೆಗೆ ಏಟು ಬೀಳುತ್ತದೆ. ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಸಾಮುದಾಯಿಕ ಆರೋಗ್ಯ ಸೌಕರ್ಯದ ಕೊರತೆ ಮತ್ತು ಅವ್ಯವಸ್ಥೆಯಿಂದಾದ ಜೀವಹಾನಿಗಳು ಕಲ್ಪನಾತೀತವಾಗಿದ್ದವು ಸಾವುಗಳ ಬಗ್ಗೆ ನಿಖರ ಮಾಹಿತಿಯನ್ನು ಸರಕಾರವು ಸಾರ್ವಜನಿಕಗೊಳಿಸಿಯೇ ಇಲ್ಲ.

ಆರ್ಥಿಕ ಅಸ್ಥಿರತೆಯು ಶ್ರೀಮಂತರ, ಐಶ್ವರ್ಯವಂತರ ಸಂಪಾದನೆಗೆ ಹಾಗೂ ಸಂಪತ್ತಿಗೆ ಘಾಸಿಯನ್ನುಂಟುಮಾಡುವುದಿಲ್ಲ. ದೊಡ್ಡ ದೊಡ್ಡ ಕಂಪೆನಿಗಳ ಮಾಲಕರ ಸಂಪತ್ತೂ ಕರಗುವುದಿಲ್ಲ; ಅಸ್ಥಿರತೆಯ ಕಾಲದಲ್ಲಿ ವೆಚ್ಚವನ್ನು ಕಡಿತಗೊಳಿಸುವ ಮೊದಲ ಹೆಜ್ಜೆಯೇ ಕಾರ್ಮಿಕರನ್ನು ರಜೆಯಲ್ಲಿ ಹೋಗುವಂತೆ ಮಾಡುವುದು ಅಥವಾ ಕೆಲಸದಿಂದ ವಜಾಮಾಡುವುದು. ಸಣ್ಣ ಸಣ್ಣ ಉದ್ದಿಮೆಗಳು ಮುಚ್ಚುವ ಸಂದರ್ಭ ಬಂದಾಗ ಅವುಗಳ ಸಂಪಾದನಾ ಸಾಮರ್ಥ್ಯ ಮತ್ತು ಆಸ್ತಿಗಳ ಮೌಲ್ಯ ಉತ್ತಮವಿದ್ದಾಗ ದೊಡ್ಡ ಕಂಪೆನಿಗಳು ಅವುಗಳನ್ನು ಖರೀದಿಸಲು ಮುಂದಾಗುತ್ತವೆ. ದೊಡ್ಡ ಕಂಪೆನಿಗಳು ಸಾಲವನ್ನು ಪಡಕೊಂಡಿದ್ದರೆ ಅಸ್ಥಿರತೆಯಿಂದ ಅವುಗಳನ್ನು ರಕ್ಷಿಸಲೆಂದು ಸರಕಾರವೇ ಅವುಗಳ ರಕ್ಷಣೆಗೆ ಬರುತ್ತವೆ-ಸಹಾಯಧನ ಇಲ್ಲವೇ ಸಾಲ ಮನ್ನಾದ ಮೂಲಕ.

ಈ ಎಲ್ಲ ಕ್ರಮಗಳಿಂದ ಉಳ್ಳವರಿಗೆ ಅಸ್ಥಿರತೆಯಿಂದ ಹೆಚ್ಚು ಹೊಡೆತ ಬೀಳುವುದಿಲ್ಲ; ಬದಲಾಗಿ ಅವರು ಮತ್ತಷ್ಟು ಶ್ರೀಮಂತರಾಗುತ್ತಾರೆ. ಈ ಕಾರಣದಿಂದಾಗಿ ಬಡವರ ಮತ್ತು ಶ್ರೀಮಂತರ ನಡುವಿನ ಅಂತರ ಮತ್ತಷ್ಟು ಹೆಚ್ಚುತ್ತದೆ. ಹೋದ 12 ವರ್ಷಗಳ ಕಾಲಾವಧಿಯಲ್ಲಿ ಈಗಾಗಲೇ ಉಲ್ಲೇಖಿಸಿದ ನಿರ್ಧಾರಗಳಿಂದಾಗಿ ಅರ್ಥವ್ಯವಸ್ಥೆಯಲ್ಲಿ ಅಲ್ಲೋಲಕಲ್ಲೋಲವಾಗಿ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗಿದ್ದಾರೆ; ಬಡವರು ಕಡುಬಡವರಾಗಿದ್ದಾರೆ.

2010ರ ದಶಕದಲ್ಲಿ ಭಾರತವು ಬ್ರಿಕ್ಸ್ (BRICS-Brazil, Russia, India, China and South Africa) ದೇಶಗಳ ಜೊತೆಗೆ ‘ದುರ್ಬಲ ಪಂಚರಾಷ್ಟ್ರ’ಗಳ (Fragile 5) ಕೂಟದಲ್ಲಿ ಒಂದು ಎಂಬ ಪರಿಹಾಸಕ್ಕೆ ಗುರಿಯಾಗಿತ್ತು. ಅನೇಕ ತಜ್ಞರ ಪ್ರಕಾರ 2026ರ ಭಾರತವು ಅತ್ಯಂತ ದುರ್ಬಲ ಆರ್ಥಿಕತೆಯಾಗಿ (Fragile 1) ಕೆಳಗಿಳಿದಿದೆ

ಮುಂದಿನ ದಾರಿಗಳು

ಯಾವ ಉದ್ದೇಶಕ್ಕಾಗಿ ಭಾರತದ ಸಂವಿಧಾನದಲ್ಲಿ ರಾಜ್ಯ ನಿರ್ದೇಶಕ ತತ್ವಗಳನ್ನು ಅಳವಡಿಸಲಾಯಿತೋ, ತಮ್ಮ ಬದಲಾದ ಆದ್ಯತೆ, ವಿವೇಚನಾ ಶೂನ್ಯ ನಿರ್ಧಾರಗಳು, ವ್ಯಕ್ತಿ ಕೇಂದ್ರಿತ ನೀತಿ ಮತ್ತು ತಳಮಟ್ಟದ ವಾಸ್ತವದ ಅರಿವಿನ ಕೊರತೆ-ಈ ಕಾರಣಗಳಿಂದಾಗಿ ಹೋದ 12 ವರ್ಷಗಳಲ್ಲಿ ಭಾರತದ ಅರ್ಥನೀತಿಯು ಆ ತತ್ವಗಳಿಂದ ವಿಮುಖವಾಗಿದೆ ಎಂಬುದು ಸ್ಪಷ್ಟ. ದೇಶವು ಸಂವಿಧಾನದ ಆಶಯದಂತೆ ಕಲ್ಯಾಣ ರಾಷ್ಟ್ರವಾಗಬೇಕಿದ್ದರೆ ದೇಶದ ಅರ್ಥವ್ಯವಸ್ಥೆಗೆ ಶಸ್ತ್ರ ಚಿಕಿತ್ಸೆಯಾಗಿ ಮತ್ತೆ ನಿರ್ದೇಶಕ ತತ್ವಗಳ ಚೌಕಟ್ಟಿನ ಒಳಗೆ ಸರಕಾರದ ಅರ್ಥನೀತಿಯನ್ನು ಪುನರ್ನಿರೂಪಿಸಬೇಕಾಗಿದೆ.

Tags

Indian Economy
share
ಟಿ.ಆರ್. ಭಟ್
ಟಿ.ಆರ್. ಭಟ್
Next Story
X