Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಂವಿಧಾನದ ನಿರ್ದೇಶಕ ತತ್ವಗಳಿಂದ...

ಸಂವಿಧಾನದ ನಿರ್ದೇಶಕ ತತ್ವಗಳಿಂದ ವಿಮುಖವಾದ ಭಾರತದ ಅರ್ಥನೀತಿ ನಿರ್ದೇಶಕ ತತ್ವಗಳು ಮತ್ತು ಆರ್ಥಿಕ ನೀತಿಗಳು

ಟಿ.ಆರ್. ಭಟ್ಟಿ.ಆರ್. ಭಟ್7 Jun 2026 11:27 AM IST
share
ಸಂವಿಧಾನದ ನಿರ್ದೇಶಕ ತತ್ವಗಳಿಂದ ವಿಮುಖವಾದ ಭಾರತದ ಅರ್ಥನೀತಿ  ನಿರ್ದೇಶಕ ತತ್ವಗಳು ಮತ್ತು ಆರ್ಥಿಕ ನೀತಿಗಳು

ಭಾಗ - 1

ನೋಟು ರದ್ದತಿ, ಜಿಎಸ್‌ಟಿ ಮತ್ತು ಲಾಕ್‌ಡೌನ್ ನಿರ್ಧಾರಗಳು ಆರ್ಥಿಕತೆಯ ಸುಧಾರಣೆಯ ಉದ್ದೇಶ ಹೊಂದಿದ್ದವು. ಆದರೆ ವಾಸ್ತವವಾಗಿ ಭಾರತದ ಅರ್ಥವ್ಯವಸ್ಥೆಯ ಬೆನ್ನೆಲುಬಾದ ಅಸಂಘಟಿತ ವಲಯದ ಲಕ್ಷಾಂತರ ಘಟಕಗಳಿಗೆ ಅಪಾರವಾದ ಹಾನಿ ಸಂಭವಿಸಿ ದೇಶದ ಆರ್ಥಿಕತೆಗೆ ತೀವ್ರವಾದ ಹಿನ್ನಡೆ ಉಂಟಾಯಿತು. ಇವುಗಳು ಆಕಸ್ಮಿಕ ಬೆಳವಣಿಗೆಗಳಾಗಿರಲಿಲ್ಲ. ಈ ಮೂರೂ ನಿರ್ಧಾರಗಳು ಜನರ ಬದುಕನ್ನು ತೀವ್ರವಾದ ಅಭದ್ರತೆಗೆ ತಳ್ಳಿದವು.

ಈವರ್ಷದ ಫೆಬ್ರವರಿ ತಿಂಗಳಿನಲ್ಲಿ ಆರಂಭವಾದ ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಉದ್ಭವಿಸಿದ ಹಾರ್ಮುಝ್ ಜಲಸಂಧಿಯ ದಿಗ್ಬಂಧನ, ವಿಶ್ವದ ದೊಣ್ಣೆನಾಯಕನಂತೆ ವರ್ತಿಸುವ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ಘಳಿಗೆಗೊಮ್ಮೆ ಬದಲಾಗುತ್ತಿರುವ ನಿರ್ಧಾರಗಳು, ಅಂತರ್‌ರಾಷ್ಟ್ರೀಯ ವ್ಯಾಪಾರ ಸಂಬಂಧಿ ಅನಿಶ್ಚಿತತೆಗಳು-ಎಲ್ಲವೂ ಸೇರಿ ಜಗತ್ತಿನಾದ್ಯಂತ ಆತಂಕವನ್ನು ಸೃಷ್ಟಿಸಿವೆ, ಭಾರತ ಅರ್ಥವ್ಯವಸ್ಥೆಗೆ ಈ ಬೆಳವಣಿಗೆಯ ಬಿಸಿ ತೀವ್ರವಾಗಿ ನಾಟಿದೆ.

ಈ ಹಿನ್ನೆಲೆಯಲ್ಲಿ ಮೇ ತಿಂಗಳಿನಲ್ಲಿ ಪ್ರಧಾನಿ ಮೋದಿಯವರು ದೇಶದ ನಾಗರಿಕರಿಗೆ ಮಿತವ್ಯಯದ ಕರೆಯನ್ನು ನೀಡಿದರು. ಆ ಬಳಿಕ ತಮ್ಮ ಯುರೋಪಿನ ಪ್ರವಾಸದ ಸಂದರ್ಭದಲ್ಲಿ, ಹಿಂದೆ ಯುದ್ಧ, ಮಹಾಮಾರಿಯಂತಹ ವಿಪತ್ತುಗಳು ದೇಶಗಳನ್ನು ಕಂಗೆಡಿಸಿದ್ದರೆ, ಇಂದು ಅರ್ಥವ್ಯವಸ್ಥೆಯಲ್ಲಿನ ಬಿಕ್ಕಟ್ಟುಗಳು ಅನೇಕ ವರ್ಷಗಳ ಸಾಧನೆಯನ್ನು ಅಳಿಸಿಹಾಕಿ ಬಹಳಷ್ಟು ನಾಗರಿಕರನ್ನು ದಾರಿದ್ರ್ಯದತ್ತ ನೂಕಲಿವೆ ಎಂದು ಎಚ್ಚರಿಸಿದ್ದಾರೆ.

ಪ್ರಧಾನಿಯವರ ಮಿತವ್ಯಯದ ಕರೆ ಮತ್ತು ಬರಲಿರುವ ಆರ್ಥಿಕ ವಿಪತ್ತಿನ ಕುರಿತು ಎಚ್ಚರಿಕೆ ಒಂದು ಮೂಲಭೂತವಾದ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಅವರು ಮುನ್ಸೂಚನೆ ನೀಡುತ್ತಿರುವ ಆರ್ಥಿಕ ವಿಪತ್ತು ಆಕಸ್ಮಿಕವೇ? ಹೋದ 12 ವರ್ಷಗಳ ಅವಧಿಯಲ್ಲಿ ಭಾರತದ ಅರ್ಥವ್ಯವಸ್ಥೆಗೆ ಅನಿರೀಕ್ಷಿತ ಬೆಳವಣಿಗೆಗಳಿಂದ ಹಾನಿಯಾಗದಂತೆ ವ್ಯೆಹಾತ್ಮಕ ತಂತ್ರಗಳನ್ನು ಸರಕಾರವು ಹೆಣೆದಿಲ್ಲವೇ?

ಈ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲು ಮೋದಿಯವರ ಕಾಲದಲ್ಲಿ ಭಾರತದ ಅರ್ಥವ್ಯವಸ್ಥೆಯ ಕುರಿತಂತೆ ಅವರು ಕೈಗೊಂಡ ನಿರ್ಧಾರಗಳನ್ನು ಮರುಪರಿಶೀಲನೆಗೆ ಗುರಿಪಡಿಸಬೇಕಾಗುತ್ತದೆ.

ಮೋದಿಯವರ ಆರ್ಥಿಕ ನೀತಿಗಳು

ಈ ಪರಿಶೀಲನೆಯನ್ನು ಭಾರತದ ಸಂವಿಧಾನದ ‘ರಾಜ್ಯ ನಿರ್ದೇಶಕ ತತ್ವ’ (Directive Principles of State Policy)ಗಳ ಹಿನ್ನೆಲೆಯಲ್ಲಿ ಮಾಡಬೇಕಾಗುತ್ತದೆ. ಸ್ವತಂತ್ರ ಭಾರತದಲ್ಲಿ ಚುನಾಯಿತ ಸರಕಾರಗಳು ತಮ್ಮ ಆರ್ಥಿಕ ನೀತಿಯನ್ನು ‘ನಿರ್ದೇಶಕ ತತ್ವ’ಗಳ ಚೌಕಟ್ಟಿನಲ್ಲಿ ರೂಪಿಸಬೇಕಾದ ಬಾಧ್ಯತೆಯನ್ನು ಹೊಂದಿವೆ. ಸಂವಿಧಾನದಲ್ಲಿ ಒಂದು ಕಲ್ಯಾಣ ರಾಜ್ಯದ (Welfare State) ಕಲ್ಪನೆ ಇದೆ; ಅದನ್ನು ಸಾಕಾರಗೊಳಿಸಲು ನಿರ್ದೇಶಕ ತತ್ವಗಳು ದಾರಿದೀಪವಾಗುತ್ತವೆ.

ಚುನಾಯಿತ ಸರಕಾರದ ಒಂದು ಪ್ರಮುಖ ಕರ್ತವ್ಯ ಸಾಮಾನ್ಯ ನಾಗರಿಕರಿಗೆ ಆರ್ಥಿಕ ಭದ್ರತೆಯನ್ನು ಒದಗಿಸಿ ಅವರ ದೈನಂದಿನ ಬದುಕನ್ನು ಸುಗಮವಾಗಿ ಸಾಗುವಂತೆ ಮಾಡುವುದು. ದೀರ್ಘಾವಧಿಯಲ್ಲಿ ಒಬ್ಬರೇ ನಾಯಕರಿದ್ದಾಗ ದೂರಗಾಮಿ ಆರ್ಥಿಕ ಬದಲಾವಣೆಗಳನ್ನು ಕಾರ್ಯರೂಪಕ್ಕೆ ತರಲು ಯಾವುದೇ ಅಡೆತಡೆಗಳಿರುವುದಿಲ್ಲ. ಪ್ರಕೃತಿಯ ವಿಕೋಪ, ಗಡಿಪ್ರದೇಶದಲ್ಲಿ ಉದ್ವಿಗ್ನತೆ ಮತ್ತು ಅಂತರ್‌ರಾಷ್ಟ್ರೀಯ ವಿದ್ಯಮಾನಗಳು ದೀರ್ಘಾವಧಿಯ ಸಮಸ್ಯೆಗಳಲ್ಲ; ಜನರ ಬದುಕನ್ನು ಸುಗಮವಾಗಿ ಮಾಡಲು 10-12 ವರ್ಷಗಳು ಧಾರಾಳವಾಗಿ ಸಾಕು. ಈ ಕಾಲಾವಧಿಯಲ್ಲಿ ಭಾರತದ ಆರ್ಥಿಕತೆ ಯಾವ ದಿಶೆಯತ್ತ ಸಾಗಿದೆ ಎಂಬುದರ ವಿಶ್ಲೇಷಣೆ ಜನಜಾಗೃತಿಗೆ ಕೂಡಾ ಅತೀ ಅವಶ್ಯ.

ಮೋದಿ ಸರಕಾರದ 12 ವರ್ಷಗಳ ಆರ್ಥಿಕ ನೀತಿಯನ್ನು ನಿರ್ದೇಶಕ ತತ್ವಗಳ ಒರೆಯಲ್ಲಿ ವಿಶ್ಲೇಷಿಸಬೇಕು. ಇಲ್ಲಿ ಏಳುವ ಮುಖ್ಯ ಪ್ರಶ್ನೆಗಳು ಕೆಳಗಿನ ವಿಷಯಗಳಿಗೆ ಸಂಬಂಧಿಸಿವೆ:

1. ನೀತಿಯ ಆದ್ಯತೆಗಳು.

2. ಪ್ರಮುಖ ನಿರ್ಧಾರಗಳು.

3. ಅವುಗಳ ಗುರಿಗಳು ಮತ್ತು ಫಲಾನುಭವಿಗಳು

4. ಅರ್ಥವ್ಯವಸ್ಥೆಯನ್ನು ಸುಭದ್ರಗೊಳಿಸುವಲ್ಲಿ ಅವುಗಳ ಕೊಡುಗೆ

5. ಕಲ್ಯಾಣ ರಾಜ್ಯದ ಸಾಧನೆಗೆ ಅವುಗಳ ಕೊಡುಗೆ.

ನೀತಿ ನಿರ್ಧಾರಗಳ ಆದ್ಯತೆಯ ಬಗ್ಗೆ ಹೇಳುವುದಿದ್ದರೆ, ಮೋದಿಯವರು ದೇಶದಲ್ಲಿ ಹಾಗೂ ವಿದೇಶಗಳಲ್ಲಿ ಭಾರತವನ್ನು ದೊಡ್ಡ ಆರ್ಥಿಕ ಶಕ್ತಿಯಾಗಿ ಬಿಂಬಿಸುವುದಕ್ಕೆ ಆದ್ಯತೆ ನೀಡಿದರೆಂದು ಅವರ ಅನೇಕ ಘೋಷಣೆಗಳಿಂದ ಸ್ಪಷ್ಟವಾಗುತ್ತದೆ.

2018ರಲ್ಲಿ, ಭಾರತದ ಆರ್ಥಿಕತೆಯ ಮೌಲ್ಯ 2025ಕ್ಕೆ 5 ಟ್ರಿಲಿಯ ಡಾಲರ್ ತಲಪಬೇಕು ಎಂದು ಘೋಷಿಸಲಾಗಿತ್ತು; 2025ರ ಅಕ್ಟೋಬರ್‌ನಲ್ಲಿ ಮೋದಿ ಮಂತ್ರಿಮಂಡಲದ ಹಿರಿಯ ಮಂತ್ರಿ ನಿತಿನ್ ಗಡ್ಕರಿ ಅವರು ಈ ಗುರಿಯನ್ನು ‘ನಾವು ಮೋದಿಯವರ ನೇತೃತ್ವದಲ್ಲಿ’ 2027ಕ್ಕೆ ಸಾಧಿಸುತ್ತೇವೆ ಎಂದರು. ಇತ್ತೀಚೆಗಿನ ವರದಿಗಳ ಪ್ರಕಾರ ಈ ಗುರಿಯು 2029ಕ್ಕೂ ಕನಸಾಗಿಯೇ ಉಳಿಯಬಹುದು.

ಡಿಸೆಂಬರ್ 2023ರಲ್ಲಿ, 2047ಕ್ಕೆ ಅಂದರೆ ಸ್ವತಂತ್ರ ಭಾರತಕ್ಕೆ 100 ವರ್ಷ ತುಂಬುವಾಗ ಭಾರತವು ವಿಕಸಿತ ಭಾರತವಾಗಲಿದೆ ಎಂದು ಘೋಷಿಸಲಾಯಿತು. ಆ ಬಳಿಕ ಅದು ದೈನಂದಿನ ಘೋಷಣೆಯಾಗಿ ಮೂಡಿಬರುತ್ತಿದೆ. ಆದರೆ, ಈಗಿನ ಪ್ರಗತಿಯ ಗತಿಯನ್ನು ಗಮನಿಸಿದರೆ ಈ ಗುರಿಯೂ ಬಿಸಿಲುಗುದುರೆಯಾಗಬಹುದು.

ಜೂನ್ 2025ರಲ್ಲಿ ಗುಜರಾತಿನ ಗಾಂಧಿನಗರದಲ್ಲಿ ಮೋದಿ ಅವರು ಹೀಗೆ ಘೋಷಿಸಿದರು: ‘‘ಇಂದು ಭಾರತವು ವಿಶ್ವದ ನಾಲ್ಕನೇ ದೊಡ್ಡ ಆರ್ಥಿಕತೆಯಾಗಿದೆ.; ನಾವು ಜಪಾನನ್ನು ಹಿಂದೆ ಹಾಕಿದ್ದೇವೆಂಬುದು ನಮಗೆಲ್ಲಾ ಹೆಮ್ಮೆ ತರುವ ವಿಷಯ. ಈಗ ನಮ್ಮ ಮೇಲೆ ಮೂರನೆಯ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಒತ್ತಡ ಇದೆ. ದೇಶಕ್ಕೆ ಹೆಚ್ಚು ಸಮಯ ಕಾಯಲು ತಾಳ್ಮೆ ಇಲ್ಲ. ಯಾರಾದರೂ ತಾಳ್ಮೆ ವಹಿಸಿ ಎಂದಾಗ ‘ಮೋದಿ ಇದ್ದರೆ ಅದು ಖಂಡಿತ ಸಾಧ್ಯ’ (ಮೋದಿ ಹೈ ತೊ ಮುಮ್ ಕಿನ್ ಹೈ) ಎಂಬ ಘೋಷಣೆ ಹಿಂದಿನಿಂದ ಕೇಳಿಬರುತ್ತದೆ’’.

ಈ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪ್ರಕಟಿಸಿದ ವರದಿಯಂತೆ 2025ರ ಮಾಹಿತಿಯ ಆಧಾರದಲ್ಲಿ, ಭಾರತದ ರ್ಯಾಂಕ್ ಈಗ 6ಕ್ಕೆ ಇಳಿದಿದೆ. ಅಂದರೆ ಮಧ್ಯಪ್ರಾಚ್ಯ ಬಿಕ್ಕಟ್ಟಿನ ಮೊದಲೇ ನಾವು ಹಿಂದೆ ಬಿದ್ದೆವು.

ಈ ಘೋಷಣೆಗಳ ಅನುಷ್ಠಾನಕ್ಕೋಸ್ಕರ ಅನೇಕ ಬೃಹತ್ ಯೋಜನೆಗಳನ್ನು ಆರಂಭಿಸಲಾಯಿತು. ಮುಂಬೈ-ಅಹ್ಮದಾಬಾದ್ ನಡುವೆ ಬುಲೆಟ್ ರೈಲು, ಮುಖ್ಯ ನಗರಗಳ ಮಧ್ಯೆ ವಂದೇ ಭಾರತ್ ಎಕ್ಷಪ್ರೆಸ್ ರೈಲುಗಳು, ಜನಸಾಮಾನ್ಯರೂ ವಿಮಾನಯಾನ ಮಾಡಲು ಅವಕಾಶವಾಗಲೆಂದು (ಉಡಾನ್ ಯೋಜನೆಯ ಭಾಗವಾಗಿ) ಎರಡು ಮತ್ತು ಮೂರನೆಯ ಶ್ರೇಣಿಯ ನಗರಗಳಲ್ಲಿ ವಿಮಾನ ನಿಲ್ದಾಣಗಳು, ದೇಶದಾದ್ಯಂತ 100 ‘ಸ್ಮಾರ್ಟ್ ಸಿಟಿ’ಗಳ ಸ್ಥಾಪನೆ, 6 ಅಥವಾ 8 ಪಥದ ‘ಎಕ್ಸ್‌ಪ್ರೆಸ್ ರಸ್ತೆ’ಗಳು-ಹೀಗೆ ಹಲವಾರು ದೈತ್ಯ ಯೋಜನೆಗಳು ಮುಂಚೂಣಿಗೆ ಬಂದವು. ಇವುಗಳ ಫಲಾನುಭವಿಗಳು ಯಾರು?

ಹಾಕಿದ ಬಂಡವಾಳಕ್ಕೆ ಕನಿಷ್ಠ ಪ್ರತಿಫಲ ಸಿಗಬೇಕಿದ್ದರೆ ಬುಲೆಟ್ ರೈಲಿನ ಪ್ರಯಾಣ ವೆಚ್ಚ ಮುಂಬೈ-ಅಹ್ಮದಾಬಾದ್ ವಿಮಾನಯಾನದಷ್ಟೇ ಇರಬಹುದು ಎಂಬ ವರದಿಗಳು ಇವೆ. ಅಷ್ಟಕ್ಕೂ 2022ಕ್ಕೆ ಮುಗಿಯಬೇಕಾದ ಬುಲೆಟ್ ರೈಲು ಮಾರ್ಗದ ರಚನೆ ಈಗ ಕೇವಲ ಶೇ. 60ರಷ್ಟು ಮುಗಿದಿದೆ; ಅದರ ಅಂದಾಜು ವೆಚ್ಚ ರೂ. 1 ಲಕ್ಷ ಕೋಟಿಯಿಂದ ರೂ. 1.8 ಲಕ್ಷ ಕೋಟಿಗೆ ಏರಿದೆ. ಎಕ್ಸ್‌ಪ್ರೆಸ್ ರಸ್ತೆಗಳನ್ನು ಬಳಸುವವರು- ದೂರಪ್ರಯಾಣ ಮಾಡುವ ಐಷಾರಾಮಿ ಕಾರು ಹೊಂದಿರುವ ಮೇಲ್ವರ್ಗದವರೇ. ಜನಸಾಮಾನ್ಯರು, ದುಬಾರಿಯಾಗಿರುವ ವಂದೇ ಭಾರತ್ ರೈಲಿನ ಬದಲು ಸಾಮಾನ್ಯ ವೇಗದ, ಅಗ್ಗದ ರೈಲನ್ನೇ ಉಪಯೋಗಿಸುತ್ತಾರೆ. ಉಡಾನ್ ಯೋಜನೆಯಲ್ಲಿ ಈಗಾಗಲೇ ರಚಿಸಲಾಗುವ ಸಣ್ಣ ನಗರಗಳ ನಡುವೆ ವಿಮಾನಗಳನ್ನು ಹಾರಿಸಲು ವಾಯುಯಾನ ಸಂಸ್ಥೆಗಳು ತಯಾರಿಲ್ಲವೆಂಬ ವರದಿ ಬಂದಿದೆ.

ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಾದ ಸಂಪನ್ಮೂಲಗಳ ಜೋಡಣೆಗೆ ಪ್ರಮುಖ ಮಾರ್ಗವಾಗಿ ಸರಕಾರದ ಅಧೀನದಲ್ಲಿರುವ ಕಂಪೆನಿಗಳ ಮತ್ತು ಸಂಸ್ಥೆಗಳ ಆಸ್ತಿಗಳ ಮಾರಾಟ ಮಾಡುವ ಪ್ರಕ್ರಿಯೆಯನ್ನು ತೀವ್ರಗೊಳಿಸಲಾಯಿತು. ಈಗಾಗಲೇ ಬಹುದೊಡ್ಡ ವಿಮಾನ ನಿಲ್ದಾಣಗಳು, ಬಂದರುಗಳು, ಸರಕಾರಿ ಸ್ವಾಮ್ಯದ ಅನೇಕ ಉತ್ಪಾದನಾ ಮತ್ತು ಸೇವಾ ಕಂಪೆನಿಗಳು ಖಾಸಗಿಯವರ ಒಡೆತನಕ್ಕೆ ಜಾರಿವೆ.

ಮೋದಿಯವರು ಅಧಿಕಾರಕ್ಕೆ ಬಂದ ಹೊಸತರಲ್ಲಿ 1951ರಿಂದ ದೇಶದ ಆರ್ಥಿಕ ನೀತಿಯ ನಿರೂಪಣೆ, ಅನುಷ್ಠಾನ ಮತ್ತು ಕ್ರಮಿಸಬೇಕಾದ ದಾರಿಗಳನ್ನು ತೋರಿಸಿಕೊಡುವ ಆರ್ಥಿಕ ತಜ್ಞರನ್ನು ಒಳಗೊಂಡ ರಾಷ್ಟ್ರೀಯ ಯೋಜನಾ ಆಯೋಗವನ್ನು ವಿಸರ್ಜಿಸಿ ಅದರ ಜಾಗದಲ್ಲಿ ‘ನೀತಿ’ ಆಯೋಗವೆಂಬ ಸಲಹಾ ಸಮಿತಿಯನ್ನು ಸ್ಥಾಪಿಸಿದರು (ಜನವರಿ 2015). ಯೋಜನಾ ಆಯೋಗವು ಸರಕಾರದ ಯೋಜನೆಗಳ ಅನುಷ್ಠಾನದ ಬಗ್ಗೆ ವಸ್ತುನಿಷ್ಠ ಮೌಲ್ಯಮಾಪನ ಮಾಡಿ ಅಗತ್ಯದ ಸುಧಾರಣೆಗಳನ್ನು ಸರಕಾರಕ್ಕೆ ತಿಳಿಸುತ್ತಿತ್ತು. ಮಾತ್ರವಲ್ಲ ಕಾಲಕಾಲಕ್ಕೆ ಅರ್ಥವ್ಯವಸ್ಥೆಯ ಕುರಿತಾದ ನಿಖರ ಮಾಹಿತಿಗಳನ್ನು ಕಲೆಹಾಕಿ ಅವುಗಳ ಆಧಾರದಲ್ಲಿ ನಿರ್ಧಾರಗಳ ಮರುಪರಿಶೀಲನೆಯನ್ನು ಕೈಗೊಳ್ಳುತ್ತಿತ್ತು.

ನೀತಿ ಆಯೋಗದ ಕಾರ್ಯವ್ಯಾಪ್ತಿಯು ಪ್ರಧಾನಿಯವರ ಘೋಷಣೆಗಳಿಗೆ ಅನುಸಾರವಾಗಿ ಕಾರ್ಯಕ್ರಮಗಳನ್ನು ರೂಪಿಸುವುದು ಮಾತ್ರ. ಆರಂಭದ ವರ್ಷಗಳಲ್ಲಿ ಹೆಸರಾಂತ ಅರ್ಥಶಾಸ್ತ್ರಜ್ಞರನ್ನು ಆಯೋಗವು ಒಳಗೊಂಡಿತ್ತು. ಕ್ರಮೇಣ ಅದು ಮುಖ್ಯವಾಗಿ ಸರಕಾರದ ಸಾರ್ವಜನಿಕ ಸಂಪರ್ಕದ ಮಾಧ್ಯಮವಾಗಿ ಮಾರ್ಪಟ್ಟಿತು. ಅದು ಅಧ್ಯಯನಗಳನ್ನು ಮಾಡುತ್ತದೆ; ಆದರೆ ಬಹುತೇಕ ಅಧ್ಯಯನಗಳು ‘ಎಲ್ಲವೂ ಚೆನ್ನಾಗಿದೆ’ ಎಂದು ಬಿಂಬಿಸುವ ಕಾರ್ಯವನ್ನು ಮಾಡುತ್ತವೆ.

ನೋಟು ರದ್ದತಿಯಿಂದ ಲಾಕ್‌ಡೌನ್ ತನಕ

ಮೋದಿ ಸರಕಾರದ ಒಂದನೆಯ ಮತ್ತು ಎರಡನೆಯ ಅವಧಿಯ ಮೂರು ಪ್ರಮುಖ ನಿರ್ಧಾರಗಳೂ ಈಗ ಮತ್ತೊಮ್ಮೆ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ. 2016ರ ನೋಟು ರದ್ದತಿ, 2017ರ ಜಿಎಸ್ ಟಿ ಕಾಯ್ದೆಯ ಅನುಷ್ಠಾನ ಮತ್ತು 2020ರ ಕೋವಿಡ್ ಸನ್ನಿವೇಶದಲ್ಲಿ ಹೇರಿದ ರಾಷ್ಟ್ರವ್ಯಾಪಿ ಲಾಕ್‌ಡೌನ್ ಇವುಗಳು ಬಹುಚರ್ಚಿತ ನಿರ್ಧಾರಗಳು. ಈ ನಿರ್ಧಾರಗಳ ಉದ್ದೇಶ, ಪ್ರೇರಣೆ ಮತ್ತು ಗುರಿ ಏನೇ ಇದ್ದರೂ ಅವು ದೇಶದ ಅರ್ಥವ್ಯವಸ್ಥೆಯ ಮೇಲೆ ಅನ್ಯಾದೃಶವಾದ ಪ್ರಭಾವವನ್ನು ಬೀರಿದ್ದವು ಮತ್ತು ಜನಸಾಮಾನ್ಯರ ಬದುಕನ್ನು ಮೂರಾಬಟ್ಟೆ ಮಾಡಿದ್ದವು.

ನವೆಂಬರ್ 8, 2016ರ ನೋಟು ರದ್ದತಿಯ ಘೋಷಣೆಯ ಬಳಿಕ ಡಿಸೆಂಬರ್ 31, 2016ರ ಅವಧಿಯಲ್ಲಿ ಅಮಾನ್ಯಗೊಂಡ ನೋಟುಗಳ ಬದಲಾವಣೆ, ಬ್ಯಾಂಕು ಖಾತೆಗಳಿಂದ ತಮ್ಮದೇ ಹಣವನ್ನು ಮರಳಿಪಡೆಯಲು ಹಾಗೂ ನಗದು ತುಂಬಿಸುವ ಪ್ರಕ್ರಿಯೆಯ ನಿಯಮಗಳನ್ನು ಆರ್‌ಬಿಐಯು ಅನೇಕ ಬಾರಿ ಬದಲಾಯಿಸಿ ಬಹಳಷ್ಟು ಗೊಂದಲವನ್ನು ಹುಟ್ಟುಹಾಕಿತು. ದೇಶದಾದ್ಯಂತ ಎಟಿಎಂಗಳು ಕಾರ್ಯವೆಸಗುತ್ತಿರಲಿಲ್ಲ. ಮಾತ್ರವಲ್ಲ ಹೊಸ ರೂ. 500 ಮತ್ತು ರೂ. 2000 ಮುಖಬೆಲೆಯ ನೋಟುಗಳು ಆ ತನಕವಿದ್ದ ಎಟಿಎಂಗಳ ಜೊತೆ ಹೊಂದಾಣಿಕೆಯಾಗುತ್ತಿರಲಿಲ್ಲ. ಸರಕಾರದ ನಿರ್ಧಾರವು ಶಾಸನಬದ್ಧವಾದ ಹಣಕಾಸು ಭದ್ರತೆ ಮತ್ತು ಅಭಿವೃದ್ಧಿ ಮಂಡಳಿ (Financial Stability and Development Council)ಯ ಜವಾಬ್ದಾರಿಗೆ ವಿರುದ್ಧವಾಗಿತ್ತು.

ನೋಟು ರದ್ದತಿಯು ಆರ್ಥಿಕತೆಗೆ-ಮುಖ್ಯವಾಗಿ ಅಸಂಘಟಿತ ಆರ್ಥಿಕ ವಲಯಕ್ಕೆ ಮಾರಕವಾದ ಹೊಡೆತವನ್ನು ನೀಡಿತು. ಸಣ್ಣ ವ್ಯಾಪಾರಿಗಳು, ಅಂಗಡಿಗಳು, ಅತಿ ಸಣ್ಣ ಕೈಗಾರಿಕೆಗಳಲ್ಲಿ ದುಡಿಯುತ್ತಿದ್ದವರಲ್ಲಿ ಸುಮಾರು ಶೇ. 60ರಷ್ಟು ಮಂದಿ ಜೀವನಾಧಾರವನ್ನು ಕಳಕೊಂಡರು; ಈ ರಂಗವು ತಮ್ಮ ಆಯದಲ್ಲಿ 47ರಷ್ಟು ಕುಸಿತವನ್ನು ಕಂಡಿತು; ಇದಕ್ಕೆ ವಿರುದ್ಧವಾಗಿ ದೊಡ್ಡ ಉದ್ದಿಮೆಗಳು ತಮ್ಮ ಆಯದಲ್ಲಿ ಕೇವಲ ಶೇ. 3ರಷ್ಟು ಕುಸಿತವನ್ನು ಕಂಡವು; ಮತ್ತು ಅವುಗಳಲ್ಲಿ ಶೇ. 2 ಉದ್ಯೋಗ ನಷ್ಟ ಸಂಭವಿಸಿತು. ಸಿಎಂಐಎ (Centre for Monitoring Indian Economy)ಯ ವರದಿ ಪ್ರಕಾರ ನವೆಂಬರ್ 2016 ಮತ್ತು ಜನವರಿ-ಎಪ್ರಿಲ್ 2017ರ ಅವಧಿಯಲ್ಲಿ ದೇಶದಾದ್ಯಂತ 15 ಲಕ್ಷ ಮಂದಿ ಉದ್ಯೋಗಗಳನ್ನು ಕಳಕೊಂಡರು.

2017ರ ಸರಕು ಮತ್ತು ಸೇವಾ ತೆರಿಗೆಯ ಅನುಷ್ಠಾನವೂ ಆತುರದಿಂದ ಕೈಗೊಂಡ ನಿರ್ಧಾರವಾಗಿತ್ತು. ತೆರಿಗೆಯ ದರಗಳು ಅತಾರ್ಕಿಕವಾಗಿದ್ದವು (ಉದಾಹರಣೆಗೆ: ಐಸ್‌ಕ್ರೀಮ್‌ಗೆ ಶೇ. 2.5; ಜೀವರಕ್ಷಕ ಔಷಧಿಗೆ ಶೇ. 18) ಜಿಎಸ್‌ಟಿಯನ್ನು ಹೇರುವ ಅದನ್ನು ಸರಕಾರಕ್ಕೆ ಸಂದಾಯಿಸುವ ಹಾಗೂ ಸಂಬಂಧಿಸಿದ ದಾಖಲೆ(ರಿಟರ್ನ್)ಗಳನ್ನು ಸಲ್ಲಿಸುವ ಪ್ರಕ್ರಿಯೆ ಸಣ್ಣ ವ್ಯಾಪಾರಿಗಳಿಗೆ, ಸ್ವೋದ್ಯೋಗಿಗಳಿಗೆ, ಲಘು ಉದ್ದಿಮೆಗಳಿಗೆ (ಎಂಎಸ್‌ಎಂಇಗಳಿಗೆ) ಕ್ಲಿಷ್ಟದಾಯಕವಾಗಿತ್ತು; ಅವರ ಉತ್ಪಾದನೆಗೆ ಬೇಕಾದ ಕಚ್ಚಾ ವಸ್ತುಗಳ ಮೇಲೆ ಕೊಟ್ಟ ತೆರಿಗೆಯನ್ನು ಅವರು ಉತ್ಪಾದಿಸಿದ ಸಿದ್ಧವಸ್ತುವಿನ ಮೇಲೆ ಕೊಡಬೇಕಾದ ತೆರಿಗೆಯಿಂದ ಕಳೆಯುವ ಅವಕಾಶ ಹೊಸ ಕಾನೂನಿನಲ್ಲಿ ಇತ್ತು. ‘ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್’ ಎಂಬ ಈ ವ್ಯವಸ್ಥೆಯ ಪ್ರಯೋಜನ ಪಡೆಯಲು ವೃತ್ತಿಪರ ಲೇಖಾಕಾರರ ಸೇವೆಯ ಅಗತ್ಯವಿತ್ತು. ಸಣ್ಣ ಘಟಕಗಳಿಗೆ ಈ ವೆಚ್ಚ ಹೊರೆಯಾಗುತ್ತಿತ್ತು. ನಿಯಮಗಳ ಅನುಸರಣೆ ಕ್ಲಿಷ್ಟವಾಗಿ ಅಸಂಘಟಿತ ಕ್ಷೇತ್ರದ ಸಾವಿರಾರು ಘಟಕಗಳು ಬಾಗಿಲು ಹಾಕಿದವು. ಗಾತ್ರದಲ್ಲಿ ದೊಡ್ಡದಾದ, ವ್ಯವಹಾರವು ಬೃಹತ್ತಾಗಿರುವ ಘಟಕಗಳು ಮತ್ತಷ್ಟು ಪ್ರಬಲವಾಗಲು ಜಿಎಸ್‌ಟಿ ಉತ್ತೇಜನ ನೀಡಿತು.

2024-25ರಲ್ಲಿ ದೇಶದಲ್ಲಿ ಸುಮಾರು 6 ಕೋಟಿ ಎಂಎಸ್‌ಎಂಇ ಘಟಕಗಳಿದ್ದವು, 11 ಕೋಟಿಗಿಂತ ಹೆಚ್ಚು ಮಂದಿ ಜೀವನೋಪಾಯಕ್ಕೆ ಅವುಗಳನ್ನು ಅವಲಂಬಿಸಿದ್ದರು, ದೇಶದ ವಾರ್ಷಿಕ ಉತ್ಪನ್ನದ- (ಜಿಡಿಪಿ)ಯ ಸುಮಾರು ಶೇ. 30ರಷ್ಟು ಎಂಎಸ್‌ಎಂಇ ರಂಗದಿಂದ ಬರುತ್ತದೆ, ದೇಶದ ಆರ್ಥಿಕತೆಗೆ ಇಷ್ಟೊಂದು ಕೊಡುಗೆ ನೀಡುವ ಘಟಕಗಳಿಗೆ ಜಿಎಸ್‌ಟಿಯ ಹೊಡೆತ ಆಘಾತಕಾರಿಯಾಗಿತ್ತು.

ಬಾಗಿಲು ಹಾಕದೆ ಉಳಿದ ಘಟಕಗಳು ಆಘಾತದಿಂದ ಚೇತರಿಸುತ್ತಿದ್ದಂತೆ 2020-21ರಲ್ಲಿ ಕೇಂದ್ರ ಸರಕಾರದ ಮತ್ತೊಂದು ನಿರ್ಧಾರ ಯಾವುದೇ ಮುನ್ಸೂಚನೆ ಇಲ್ಲದೆ ಹೊರಬಂತು-ಕೋವಿಡ್ ಮಹಾಮಾರಿ ಹರಡುವುದನ್ನು ತಡೆಯಲೆಂದು ಕೇವಲ 4 ಗಂಟೆಗಳ ಸಮಯ ನೀಡಿ ರಾಷ್ಟ್ರದಾದ್ಯಂತ ಲಾಕ್‌ಡೌನ್ ಅನ್ನು ಹೇರಲಾಯಿತು.

ಬೇರೆ ಬೇರೆ ವರದಿಗಳ ಪ್ರಕಾರ ಆ ರಾಷ್ಟ್ರವ್ಯಾಪಿ ಬಂದ್ ಇಡೀ ಅರ್ಥ ವ್ಯವಸ್ಥೆಯನ್ನು ಕಂಗೆಡಿಸಿತು. ಎಂಎಸ್‌ಎಂಇಗಳಿಗೆ ಮತ್ತೊಮ್ಮೆ ಮಾರಕ ಹೊಡೆತ ಬಿತ್ತು: ಅವುಗಳ ಕಾರ್ಮಿಕರ ಮರುವಲಸೆಯಿಂದಾಗಿ ಒಟ್ಟು ಕಾರ್ಮಿಕರ ಸಂಖ್ಯೆ ಶೇ. 63ರಷ್ಟು ಕುಸಿಯಿತು. ಅಖಿಲ ಭಾರತ ಉತ್ಪಾದಕರ ಸಂಘ (All India Manufacturers’ Organisation) ದ ಅಧ್ಯಯನದಂತೆ ಸುಮಾರು ಮೂರರಲ್ಲಿ ಒಂದಂಶ ಸ್ವೋದ್ಯೋಗಿಗಳು ಮತ್ತು ಅತಿ ಸೂಕ್ಷ್ಮ ಉತ್ಪಾದನಾ ಘಟಕಗಳು ಮುಚ್ಚುವ ಹಾದಿ ಹಿಡಿದವು, ಶೇ.70ಕ್ಕಿಂತ ಹೆಚ್ಚಿನ ನೌಕರರನ್ನು ವಜಾಮಾಡಿದ್ದವು.

ಇಂಗ್ಲಿಷ್‌ನಲ್ಲಿ ‘ಕೊಲ್ಲಾಟರಲ್ ಡ್ಯಾಮೇಜ್’ (collateral damage) ಎಂಬ ಪದಪುಂಜವಿದೆ. ಒಂದು ಕಾರ್ಯವನ್ನು ಅನುಷ್ಠಾನಗೊಳಿಸುವಾಗ ಅದರ ಮೂಲ ಉದ್ದೇಶದ ಜೊತೆಗೆ ಅದರಿಂದಾಗಿ ಇತರರಿಗೆ ಆಗುವ ಹಾನಿಯನ್ನು ಅದು ಬಿಂಬಿಸುತ್ತದೆ (ಉದಾಹರಣೆಗೆ: ಹಮಾಸ್ ನೆಲೆಗಳನ್ನು ಧ್ವಂಸ ಮಾಡಲು ಇಸ್ರೇಲ್ ಬಾಂಬು ಹಾಕಿದಾಗ ಶಾಲೆಗಳು, ಆಸ್ಪತ್ರೆಗಳು ನಾಶವಾದರೆ ಅದು ‘ಕೊಲ್ಲಾಟರಲ್ ಡ್ಯಾಮೇಜ್’.) ನೋಟು ರದ್ದತಿ, ಜಿಎಸ್‌ಟಿ ಮತ್ತು ಲಾಕ್‌ಡೌನ್ ನಿರ್ಧಾರಗಳು ಆರ್ಥಿಕತೆಯ ಸುಧಾರಣೆಯ ಉದ್ದೇಶ ಹೊಂದಿದ್ದವು. ಆದರೆ ವಾಸ್ತವವಾಗಿ ಭಾರತದ ಅರ್ಥವ್ಯವಸ್ಥೆಯ ಬೆನ್ನೆಲುಬಾದ ಅಸಂಘಟಿತ ವಲಯದ ಲಕ್ಷಾಂತರ ಘಟಕಗಳಿಗೆ ಅಪಾರವಾದ ಹಾನಿ ಸಂಭವಿಸಿ ದೇಶದ ಆರ್ಥಿಕತೆಗೆ ತೀವ್ರವಾದ ಹಿನ್ನಡೆ ಉಂಟಾಯಿತು. ಇವುಗಳು ಆಕಸ್ಮಿಕ ಬೆಳವಣಿಗೆಗಳಾಗಿರಲಿಲ್ಲ. ಈ ಮೂರೂ ನಿರ್ಧಾರಗಳು ಜನರ ಬದುಕನ್ನು ತೀವ್ರವಾದ ಅಭದ್ರತೆಗೆ ತಳ್ಳಿದವು.

Tags

IndiaEconomicConstitutionprinciples
share
ಟಿ.ಆರ್. ಭಟ್
ಟಿ.ಆರ್. ಭಟ್
Next Story
X