Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ವಿದೇಶಿ ಹೂಡಿಕೆ ಹಿಂದೆಗೆತ: ಭಾರತದ...

ವಿದೇಶಿ ಹೂಡಿಕೆ ಹಿಂದೆಗೆತ: ಭಾರತದ ಆರ್ಥಿಕತೆ ಕುಸಿಯುತ್ತಿದೆಯೆ?

ಸದಾನಂದ ಗಂಗನಬೀಡುಸದಾನಂದ ಗಂಗನಬೀಡು17 Nov 2024 9:03 AM IST
share
ವಿದೇಶಿ ಹೂಡಿಕೆ ಹಿಂದೆಗೆತ: ಭಾರತದ ಆರ್ಥಿಕತೆ ಕುಸಿಯುತ್ತಿದೆಯೆ?

ಯಾವುದೇ ದೇಶದ ಆರ್ಥಿಕ ಸುಸ್ಥಿರತೆಯನ್ನು ಅಲ್ಲಿನ ಮಧ್ಯಮ ವರ್ಗದ ಉಳಿತಾಯ ಪ್ರಮಾಣ ಸೂಚಿಸುತ್ತದೆ ಎನ್ನುತ್ತಾರೆ ಆರ್ಥಿಕ ತಜ್ಞರು. ಆದರೆ, ಮೋದಿ ಸರಕಾರದ ಆರ್ಥಿಕ ನೀತಿಗಳು ಮಧ್ಯಮ ವರ್ಗವನ್ನು ಬೆಲೆಯೇರಿಕೆ, ಹಣದುಬ್ಬರದಲ್ಲಿ ಬೇಯಿಸುತ್ತಿರುವುದರಿಂದ ಅವರ ಜೀವನ ನಿರ್ವಹಣೆಯೇ ದುಸ್ತರವಾಗಿ, ಉಳಿತಾಯ ಪ್ರಮಾಣ ತೀವ್ರ ಸ್ವರೂಪದಲ್ಲಿ ಇಳಿಕೆಯಾಗುತ್ತಿದೆ. ಇದರಿಂದ ಬ್ಯಾಂಕಿಂಗ್ ವಲಯದ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದ್ದು, ಭಾರತವು ತೀವ್ರ ಆರ್ಥಿಕ ಹಿಂಜರಿಕೆಯತ್ತ ಹೆಜ್ಜೆ ಹಾಕುವ ಸಾಧ್ಯತೆ ಇದೆ ಎಂಬ ಮುನ್ನೆಚ್ಚರಿಕೆ ಕೇಳಿ ಬರುತ್ತಿದೆ.

‘ಹಡಗು ಮುಳುಗುವ ಮುನ್ಸೂಚನೆ ಮೊದಲು ದೊರೆಯುವುದು ಅದರಲ್ಲಿರುವ ಇಲಿಗಳಿಗೆ’ ಎಂಬ ಮಾತೊಂದಿದೆ. ವಿದೇಶಿ ಹೂಡಿಕೆದಾರರ ವಿಷಯದಲ್ಲೂ ಇದು ನಿಜವಾಗತೊಡಗಿದೆ. ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ನಂತರ ಭಾರತದ ಆರ್ಥಿಕತೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿರುವುದು ವಿದೇಶಿ ಬಂಡವಾಳ ಹೂಡಿಕೆ. ಒಂದು ಕಾಲದಲ್ಲಿ ಮೀಸಲು ಚಿನ್ನವನ್ನು ಅಡವಿಡಬೇಕಾದ ದೈನೇಸಿ ಸ್ಥಿತಿ ತಲುಪಿದ್ದ ಭಾರತವಿಂದು ವಿಶ್ವದ 10 ಬಲಿಷ್ಠ ಆರ್ಥಿಕತೆಗಳ ಪೈಕಿ ಒಂದಾಗುವ ಮಟ್ಟಕ್ಕೆ ಬೆಳವಣಿಗೆ ಸಾಧಿಸುವಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ಗಮನಾರ್ಹ ಪಾತ್ರವಿದೆ. ಆದರೆ, ಈ ವಿದೇಶಿ ಬಂಡವಾಳ ಹೂಡಿಕೆ ಮಾರುಕಟ್ಟೆಯ ಏರಿಳಿತವನ್ನು ಆಧರಿಸಿದ್ದು, ದೇಶದ ಆರ್ಥಿಕ ಸ್ಥಿತಿಯನ್ನು ಸದಾ ಡೋಲಾಯಮಾನವಾಗಿರಿಸುತ್ತದೆ. ಯಾವುದೇ ದೇಶದ ವ್ಯಾಪಾರ ವಹಿವಾಟು ಕುಸಿಯುತ್ತಿದ್ದಂತೆಯೇ, ಅಂತಹ ದೇಶಗಳಿಂದ ಮೊದಲು ಕಾಲ್ತೆಗೆಯುವುದೇ ವಿದೇಶಿ ಬಂಡವಾಳ ಹೂಡಿಕೆದಾರರು.

ಸದ್ಯ, ಭಾರತದ ವಿದೇಶಿ ಬಂಡವಾಳ ಹಿಂದೆಗೆತದ ವಿಚಾರದಲ್ಲೂ ಇದೇ ಆಗುತ್ತಿದೆ. ದೇಶೀಯ ಮಾರುಕಟ್ಟೆ ಅಸ್ಥಿರವಾಗಿರುವ ಮುನ್ಸೂಚನೆ ದೊರೆಯುತ್ತಿದ್ದಂತೆಯೇ, ವಿದೇಶಿ ಬಂಡವಾಳ ಹೂಡಿಕೆದಾರರು ನಾ ಮುಂದು, ತಾ ಮುಂದು ಎಂದು ಬಂಡವಾಳ ಹೂಡಿಕೆಯನ್ನು ಹಿಂಪಡೆಯತೊಡಗಿದ್ದಾರೆ. ಈ ವರ್ಷದ ಸೆಪ್ಟಂಬರ್ ತಿಂಗಳೊಂದರಲ್ಲೇ ರೂ. 94,000 ಕೋಟಿ ಬಂಡವಾಳವನ್ನು ವಿದೇಶಿ ಹೂಡಿಕೆದಾರರು ಭಾರತದ ಮಾರುಕಟ್ಟೆಯಿಂದ ಹಿಂಪಡೆದಿದ್ದಾರೆ. ಹೀಗೆ ಹಿಂಪಡೆದ ಬಂಡವಾಳವನ್ನು ಭಾರತದ ಪ್ರತಿಸ್ಪರ್ಧಿ ದೇಶವಾದ ಚೀನಾದಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ ವಿದೇಶಿ ಹೂಡಿಕೆದಾರರು. ಇದರ ನೇರ ಪರಿಣಾಮವಾಗಿರುವುದು ಷೇರು ಮಾರುಕಟ್ಟೆಯ ಮೇಲೆ. ನವೆಂಬರ್ 12ರಂದು ಒಂದೇ ದಿನ 820.97 ಅಂಕಗಳ ನಷ್ಟ ಅನುಭವಿಸಿರುವ ಬಿಎಸ್‌ಇ, ಈ ಕುಸಿತದಿಂದ ಹೂಡಿಕೆದಾರರಿಗೆ ಒಂದೇ ದಿನದಲ್ಲಿ ಸುಮಾರು 5.76 ಲಕ್ಷ ಕೋಟಿ ಸಂಪತ್ತು ನಷ್ಟ ಉಂಟು ಮಾಡಿದೆ.

ಜಾಗತೀಕರಣದ ಈ ಕಾಲದಲ್ಲಿ ಯಾವುದೇ ದೇಶದ ಸುಸ್ಥಿರ ಬೆಳವಣಿಗೆಯಲ್ಲಿ ವ್ಯಾಪಾರ ಕೊರತೆಯಲ್ಲಿನ ಸಮತೋಲನ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಭಾರತದ ವ್ಯಾಪಾರ ಕೊರತೆ ಕಳೆದ ಒಂದು ದಶಕದಲ್ಲಿ ಆಘಾತಕಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಆಮದಿನ ಪ್ರಮಾಣ 448.05 ಬಿಲಿಯನ್ ಡಾಲರ್‌ಗಳಷ್ಟಿದ್ದರೆ, ರಫ್ತಿನ ಪ್ರಮಾಣ ಕೇವಲ 62.42 ಬಿಲಿಯನ್ ಡಾಲರ್‌ಗಳಷ್ಟಿದೆ. ಈ ತೀವ್ರ ಸ್ವರೂಪದ ಕೊರತೆಯಿಂದ ವಿದೇಶಿ ವಿನಿಮಯ ನಗದಾದ ಡಾಲರ್ ಬೇಡಿಕೆ ಹಿಂದೆಂದಿಗಿಂತ ಹೆಚ್ಚಳವಾಗಿದೆ. ಹೀಗಾಗಿ 2014ರಲ್ಲಿ ರೂ. 60ರ ಆಸುಪಾಸಿನಲ್ಲಿದ್ದ ಡಾಲರ್ ವಿನಿಮಯ ಮೌಲ್ಯವು, ನವೆಂಬರ್ 12, 2024ರ ವೇಳೆಗೆ ರೂ. 84.38ಕ್ಕೆ ಏರಿಕೆಯಾಗಿದೆ. ಅರ್ಥಾತ್, 2014ಕ್ಕೆ ಹೋಲಿಸಿದರೆ ಪ್ರತೀ ರೂಪಾಯಿ 24 ಪೈಸೆಯಷ್ಟು ಅಪಮೌಲ್ಯಗೊಂಡಿದೆ. ಅಲ್ಲಿಗೆ ಕೇವಲ ಒಂದೇ ದಶಕದಲ್ಲಿ ಶೇ. 40ರಷ್ಟು ರೂಪಾಯಿ ಅಪಮೌಲ್ಯಗೊಂಡಿದೆ. ಇದು ದಾಖಲೆ ಪ್ರಮಾಣದ ಅಪಮೌಲ್ಯವಾಗಿದೆ.

ರೂಪಾಯಿಯು ಡಾಲರ್ ಎದುರು ಇಷ್ಟು ತೀವ್ರ ಪ್ರಮಾಣದಲ್ಲಿ ಅಪಮೌಲ್ಯಗೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್‌ನ ವಿದೇಶಿ ವಿನಿಮಯ ಸಂಗ್ರಹ ನೀತಿಯೂ ಕಾರಣ ಎಂದು ಹೇಳಲಾಗಿದೆ. ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿಸುವ ಮೋದಿ ಸರಕಾರದ ಘೋಷಣೆಯ ಹಿಂದೆ ಬಿದ್ದಿರುವ ಭಾರತೀಯ ರಿಸರ್ವ್ ಬ್ಯಾಂಕ್, 2014ರ ವೇಳೆಗೆ 303.7 ಬಿಲಿಯನ್ ಡಾಲರ್‌ನಷ್ಟಿದ್ದ ವಿದೇಶಿ ವಿನಿಮಯ ಸಂಗ್ರಹದ ಪ್ರಮಾಣವನ್ನು 2024ರ ವೇಳೆಗೆ 684 ಬಿಲಿಯನ್ ಡಾಲರ್‌ಗೆ ಏರಿಕೆ ಮಾಡಿದೆ. ಹಾಗೆಯೇ 2019ರಲ್ಲಿ 23.4 ಬಿಲಿಯನ್ ಡಾಲರ್‌ನಷ್ಟಿದ್ದ ಚಿನ್ನದ ಮೀಸಲು ಸಂಗ್ರಹವನ್ನು 2024ರ ವೇಳೆಗೆ 52.2 ಬಿಲಿಯನ್ ಡಾಲರ್‌ಗೆ ಏರಿಕೆ ಮಾಡಿದೆ.

ಯಾವುದೇ ದೇಶದ ವಿದೇಶಿ ವಿನಿಮಯ ಸಂಗ್ರಹವು ಬಲಿಷ್ಠವಾಗಿದ್ದರೆ, ಅಂತಹ ದೇಶ ಸುಸ್ಥಿರ ಪ್ರಗತಿ ಸಾಧಿಸುತ್ತಿದೆ ಎಂದರ್ಥ. ಆದರೆ, ಮೋದಿ ಸರಕಾರವು 5 ಟ್ರಿಲಿಯನ್ ಆರ್ಥಿಕತೆ ಗುರಿಯನ್ನು ತಲುಪುವ ಧಾವಂತದಲ್ಲಿ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದ ಡಾಲರ್‌ಗಳನ್ನು ಖರೀದಿಸುತ್ತಿರುವುದರಿಂದ, ಸಹಜವಾಗಿಯೇ ರೂಪಾಯಿ ಹೊರಹರಿವು ಹೆಚ್ಚಿ, ಡಾಲರ್ ಎದುರು ಸತತ ಅಪಮೌಲ್ಯಕ್ಕೀಡಾಗುತ್ತಿದೆ. ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವಧಿಯಲ್ಲಿ ರೂಪಾಯಿಯ ಅಪಮೌಲ್ಯ ಶೇ. 10-12ರಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಅರ್ಥಾತ್ ರೂಪಾಯಿ ಎದುರು ಡಾಲರ್ ಮೌಲ್ಯ ಸರಿಸುಮಾರು 90 ರೂಪಾಯಿಗೆ ಏರಿಕೆಯಾಗುವ ದಟ್ಟ ಸಾಧ್ಯತೆಗಳಿವೆ. ಇಂತಹ ಪ್ರತಿಕೂಲ ಬೆಳವಣಿಗೆಯಿಂದ ರೂಪಾಯಿಯನ್ನು ಏಶ್ಯದ ಅತ್ಯಂತ ಕಳಪೆ ಕರೆನ್ಸಿ ಎಂದು ವರ್ಗೀಕರಿಸಲಾಗಿದೆ.

ಆಮದು-ರಫ್ತು ಕೊರತೆಯ ಪ್ರತಿಕೂಲ ಪರಿಣಾಮ

ಜಾಗತೀಕರಣ ಯುಗದಲ್ಲಿ ಆಮದು-ರಫ್ತು ಕೊರತೆಯನ್ನು ಸಮತೋಲಿತವಾಗಿ ನಿಭಾಯಿಸುವುದು ಯಾವುದೇ ದೇಶದ ಪಾಲಿಗೆ ಸವಾಲಾಗಿ ಪರಿಣಮಿಸಿದೆ. ಆಮದಿಗಿಂತ ರಫ್ತು ಪ್ರಮಾಣದಲ್ಲಿ ಮುಂದಿರುವ ದೇಶಗಳು ಸದೃಢ ಆರ್ಥಿಕ ಬೆಳವಣಿಗೆ ಸಾಧಿಸಿದರೆ, ಅತಿಯಾದ ಆಮದನ್ನು ಅವಲಂಬಿಸುವ ದೇಶಗಳ ಆರ್ಥಿಕತೆ ಬಿಕ್ಕಟ್ಟಿಗೆ ಸಿಲುಕುತ್ತದೆ. ಸದ್ಯ ಭಾರತದ ಸ್ಥಿತಿ ಕೂಡಾ ಇದೇ ಆಗಿದೆ. 2024ರಲ್ಲಿ ಭಾರತವು 448.05 ಬಿಲಿಯನ್ ಡಾಲರ್ ಮೌಲ್ಯದ ಸಾಮಗ್ರಿಗಳನ್ನು ಆಮದು ಮಾಡಿಕೊಂಡಿದ್ದರೆ, ಕೇವಲ 62.42 ಬಿಲಿಯನ್ ಡಾಲರ್ ಮೌಲ್ಯದ ಸಾಮಗ್ರಿಗಳನ್ನು ರಫ್ತು ಮಾಡಿದೆ. ಯಾವಾಗ ಆಮದು ಮೇಲಿನ ಅವಲಂಬನೆ ಹೆಚ್ಚುತ್ತದೋ, ಆಗ ವಿದೇಶಿ ವಿನಿಮಯಕ್ಕಾಗಿ ಮಾಡಬೇಕಾದ ವೆಚ್ಚವೂ ಹೆಚ್ಚಳವಾಗುತ್ತದೆ. ಆಗ ರೂಪಾಯಿ ತನಗೆ ತಾನೇ ಅಪಮೌಲ್ಯಗೊಳ್ಳುತ್ತದೆ. ಸದ್ಯ ಆಗುತ್ತಿರುವುದೂ ಅದೇ.

ಒಂದು ಕಡೆ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ನಿರ್ವಹಿಸಲು ರೂಪಾಯಿ ವೆಚ್ಚವನ್ನು ಹೆಚ್ಚು ಮಾಡಿದ್ದರೆ, ಮತ್ತೊಂದೆಡೆ, ಆಮದು ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿರುವುದರಿಂದಲೂ ರೂಪಾಯಿ ಹೊರಹರಿವು ಅಂಕೆ ಮೀರಿದೆ. ಇವೆಲ್ಲದರ ಒಟ್ಟು ಪರಿಣಾಮವೇ ಬೆಲೆಯೇರಿಕೆ ಮತ್ತು ಹಣದುಬ್ಬರ. ಅಲ್ಲದೆ, ಆಮದು ಪ್ರಮಾಣ ಹೆಚ್ಚಳಗೊಂಡಷ್ಟೂ ಸ್ಥಳೀಯ ಕೈಗಾರಿಕೆಗಳ ಉತ್ಪಾದನಾ ಚಟುವಟಿಕೆ ಕುಂಠಿತಗೊಳ್ಳುತ್ತದೆ. ಕೈಗಾರಿಕಾ ಉತ್ಪಾದನಾ ಚಟುವಟಿಕೆಗಳು ಕುಂಠಿತಗೊಂಡರೆ, ಅದರ ನೇರ ಪರಿಣಾಮ ಉಂಟಾಗುವುದು ಉದ್ಯೋಗ ನೇಮಕಾತಿಯ ಮೇಲೆ.

2014ರಲ್ಲಿ ಶೇ. 5.44ರಷ್ಟಿದ್ದ ನಿರುದ್ಯೋಗ ಪ್ರಮಾಣವು 2024ರ ವೇಳೆಗೆ ಶೇ. 7.8ಕ್ಕೆ ಏರಿಕೆಯಾಗಿದೆ. ವಿಪರ್ಯಾಸವೆಂದರೆ, ಭಾರತದ ಜಿಡಿಪಿ ಶೇ. 8.2ರ ದಾಖಲೆ ದರದಲ್ಲಿ ಬೆಳವಣಿಗೆ ಸಾಧಿಸುತ್ತಿರುವಾಗಲೇ, ನಿರುದ್ಯೋಗ ಪ್ರಮಾಣವೂ ಅದೇ ವೇಗದಲ್ಲಿ ಕಳೆದ ಒಂದು ದಶಕದಲ್ಲಿ ಏರಿಕೆಯಾಗತೊಡಗಿದೆ. ಇದರರ್ಥ ಭಾರತದ ಜಿಡಿಪಿ ಬೆಳವಣಿಗೆಯು ಉತ್ಪಾದನಾ ಕೇಂದ್ರಿತವಾಗುವ ಬದಲು ವ್ಯಾಪಾರ ಕೇಂದ್ರಿತವಾಗುತ್ತಿದೆ ಎಂದು. ಯಾವುದೇ ದೇಶದ ಆರ್ಥಿಕತೆ ಉತ್ಪಾದನಾ ಕೇಂದ್ರಿತವಾಗುವ ಬದಲು ವ್ಯಾಪಾರ ಕೇಂದ್ರಿತವಾಗತೊಡಗಿದರೆ, ಅದರ ನೇರ ಪರಿಣಾಮವುಂಟಾಗುವುದು ಉದ್ಯೋಗ ಸೃಷ್ಟಿಯ ಮೇಲೆ. ಸದ್ಯ ಭಾರತದ ಜಿಡಿಪಿ ಬೆಳವಣಿಗೆ ವಿಚಾರದಲ್ಲೂ ಆಗುತ್ತಿರುವುದೂ ಇದೇ. ಹೀಗಾಗಿ, ಈ ಮಾದರಿಯ ಜಿಡಿಪಿ ಬೆಳವಣಿಗೆ ಯಾವುದೇ ಕ್ಷಣದಲ್ಲಾದರೂ ನೀರ ಮೇಲಿನ ಗುಳ್ಳೆಯಾಗುವುದು ನಿಶ್ಚಿತ.

ನಿಶ್ಚಿತ ಠೇವಣಿಯಲ್ಲಿ ಆಘಾತಕಾರಿ ಕುಸಿತ

ಯಾವುದೇ ದೇಶದ ಆರ್ಥಿಕ ಆರೋಗ್ಯವನ್ನು ಪ್ರತಿಬಿಂಬಿಸುವುದು ಅಲ್ಲಿನ ಬ್ಯಾಂಕಿಂಗ್ ವ್ಯವಸ್ಥೆಯ ಸದೃಢತೆ. ಬ್ಯಾಂಕಿಂಗ್ ವ್ಯವಸ್ಥೆಯ ಸದೃಢತೆಗೆ ದೊಡ್ಡ ಪ್ರಮಾಣದ ಕೊಡುಗೆ ನೀಡುತ್ತಿರುವುದು ಮಧ್ಯಮ ವರ್ಗ ಮಾಡುವ ನಿಶ್ಚಿತ ಠೇವಣಿ ಹೂಡಿಕೆ. ಆದರೆ, ಜೂನ್ 28, 2028ರ ವೇಳೆಗೆ ಬ್ಯಾಂಕ್‌ಗಳಲ್ಲಿನ ನಿಶ್ಚಿತ ಠೇವಣಿ ಹೂಡಿಕೆಯ ಪ್ರಮಾಣ ಶೇ. 10.64ರಷ್ಟು ಕುಸಿತಗೊಂಡಿದೆ. ಈ ಸಂಗತಿಯನ್ನು ಬಹಿರಂಗಪಡಿಸಿರುವುದು ಸ್ವತಃ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್. ಮಧ್ಯಮ ವರ್ಗದ ನಿಶ್ಚಿತ ಠೇವಣಿ ಹೂಡಿಕೆ ಪ್ರಮಾಣ ಗಣನೀಯವಾಗಿ ಕುಸಿಯಲು ಬೆಲೆಯೇರಿಕೆ ಮತ್ತು ಹಣದುಬ್ಬರ ಪ್ರಮುಖ ಪಾತ್ರ ವಹಿಸಿವೆ. ಬೆಲೆಯೇರಿಕೆ ಮತ್ತು ಹಣದುಬ್ಬರದಿಂದ ಮಧ್ಯಮ ವರ್ಗದ ಉಳಿತಾಯ ಸಾಮರ್ಥ್ಯ ಕುಸಿದಿರುವುದರ ನೇರ ಪ್ರತಿಫಲನವೇ ನಿಶ್ಚಿತ ಠೇವಣಿಗಳಲ್ಲಿ ಮಧ್ಯಮ ವರ್ಗದ ಹೂಡಿಕೆ ಪ್ರಮಾಣ ಕುಂಠಿತಗೊಂಡಿರುವುದು.

ಇನ್ನೂ ಆಘಾತಕಾರಿ ಸಂಗತಿಯೆಂದರೆ, ಮಧ್ಯಮ ವರ್ಗದ ವೈಯಕ್ತಿಕ ಸಾಲ ಬೇಡಿಕೆಯು ಹೆಚ್ಚಿದ್ದು, ಇದು ಮಧ್ಯಮ ವರ್ಗದ ವೆಚ್ಚ ಸಾಮರ್ಥ್ಯ ತಗ್ಗಿರುವುದಕ್ಕೆ ನೇರ ನಿದರ್ಶನವಾಗಿದೆ. ಆದರೆ, ವೈಯಕ್ತಿಕ ಸಾಲಗಳನ್ನು ನಿರಾಕರಿಸುತ್ತಿರುವ ರಾಷ್ಟ್ರೀಕೃತ ಬ್ಯಾಂಕುಗಳು, ಚಿನ್ನದ ಅಡಮಾನ ಸಾಲ ಪಡೆಯುವಂತೆ ತಮ್ಮ ಗ್ರಾಹಕರನ್ನು ಪ್ರೋತ್ಸಾಹಿಸುತ್ತಿವೆ. ಅರ್ಥಾತ್, ಬ್ಯಾಂಕಿಂಗ್ ವ್ಯವಸ್ಥೆ ವೈಯಕ್ತಿಕ ಸಾಲಗಳನ್ನು ನೀಡಿ ಚೇತರಿಸಿಕೊಳ್ಳಲಾರದಷ್ಟು ಅಸ್ಥಿರಗೊಂಡಿದೆ ಎಂದು ಅರ್ಥ.

2008ರಲ್ಲಿ ಅಮೆರಿಕದಲ್ಲಿ ಸಂಭವಿಸಿದ್ದ ತೀವ್ರ ಸ್ವರೂಪದ ಆರ್ಥಿಕ ಹಿಂಜರಿತಕ್ಕೆ ಕೊಡುಗೆ ನೀಡಿದ್ದುದೇ ಈ ವೈಯಕ್ತಿಕ ಸಾಲಗಳು. ಹಲವಾರು ಗ್ರಾಹಕರು ಭಾರೀ ಮೊತ್ತದ ವೈಯಕ್ತಿಕ ಸಾಲಗಳನ್ನು ಪಡೆದು, ಅವುಗಳನ್ನು ಹಿಂದಿರುಗಿಸದೆ ಹೋದಾಗ, ಅಮೆರಿಕದ ಇಡೀ ಬ್ಯಾಂಕಿಂಗ್ ವ್ಯವಸ್ಥೆಯೇ ಕುಸಿದು ಬಿದ್ದು, ಹಲವಾರು ಪ್ರಖ್ಯಾತ ಖಾಸಗಿ ಬ್ಯಾಂಕುಗಳು ಕದವಿಕ್ಕಿಕೊಂಡಿದ್ದವು. ಸದ್ಯ ಭಾರತದಲ್ಲೂ ವೈಯಕ್ತಿಕ ಸಾಲಕ್ಕಾಗಿನ ಬೇಡಿಕೆ ಹೆಚ್ಚಿದೆ ಎಂಬ ವರದಿಗಳಿದ್ದು, ಇದು ಮೋದಿ ಸರಕಾರದ ಕೆಟ್ಟ ಆರ್ಥಿಕ ನೀತಿಯಿಂದ ಉಂಟಾಗಿರುವ ಬಿಕ್ಕಟ್ಟು ಎಂಬುದರಲ್ಲಿ ಎರಡು ಮಾತಿಲ್ಲ.

ಯಾವುದೇ ದೇಶದ ಆರ್ಥಿಕ ಸುಸ್ಥಿರತೆಯನ್ನು ಅಲ್ಲಿನ ಮಧ್ಯಮ ವರ್ಗದ ಉಳಿತಾಯ ಪ್ರಮಾಣ ಸೂಚಿಸುತ್ತದೆ ಎನ್ನುತ್ತಾರೆ ಆರ್ಥಿಕ ತಜ್ಞರು. ಆದರೆ, ಮೋದಿ ಸರಕಾರದ ಆರ್ಥಿಕ ನೀತಿಗಳು ಮಧ್ಯಮ ವರ್ಗವನ್ನು ಬೆಲೆಯೇರಿಕೆ, ಹಣದುಬ್ಬರದಲ್ಲಿ ಬೇಯಿಸುತ್ತಿರುವುದರಿಂದ ಅವರ ಜೀವನ ನಿರ್ವಹಣೆಯೇ ದುಸ್ತರವಾಗಿ, ಉಳಿತಾಯ ಪ್ರಮಾಣ ತೀವ್ರ ಸ್ವರೂಪದಲ್ಲಿ ಇಳಿಕೆಯಾಗುತ್ತಿದೆ. ಇದರಿಂದ ಬ್ಯಾಂಕಿಂಗ್ ವಲಯದ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದ್ದು, ಭಾರತವು ತೀವ್ರ ಆರ್ಥಿಕ ಹಿಂಜರಿಕೆಯತ್ತ ಹೆಜ್ಜೆ ಹಾಕುವ ಸಾಧ್ಯತೆ ಇದೆ ಎಂಬ ಮುನ್ನೆಚ್ಚರಿಕೆ ಕೇಳಿ ಬರುತ್ತಿದೆ. ಹಾಗೇನಾದರೂ ಆದರೆ, ನಿರುದ್ಯೋಗ ಪ್ರಮಾಣ ಮತ್ತಷ್ಟು ಉಲ್ಬಣಗೊಂಡು, ಬೆಲೆಯೇರಿಕೆ ಮತ್ತು ಹಣದುಬ್ಬರ ಕೂಡಾ ಅಂಕೆ ಮೀರಿ ಏರಿಕೆಯಾಗುವ ಅಪಾಯವಿದೆ. ಆಗ ಧರ್ಮೋನ್ಮಾದದಲ್ಲಿ ಮೈಮರೆತಿರುವ ಭಾರತೀಯರೂ, ಶ್ರೀಲಂಕಾ ಪ್ರಜೆಗಳಂತೆ ಬೀದಿಗಿಳಿಯಬೇಕಾದ ದಿನಗಳು ದೂರವಿಲ್ಲ

share
ಸದಾನಂದ ಗಂಗನಬೀಡು
ಸದಾನಂದ ಗಂಗನಬೀಡು
Next Story
X