ಭಾರತದ ಅರ್ಥವ್ಯವಸ್ಥೆ: ಯೋಜನಾ ಆಯೋಗದಿಂದ ‘ಚಿಂತಕರ ಚಾವಡಿ’ಯತ್ತ

ಯೋಜನಾ ಆಯೋಗವು 1951ರಿಂದ ಪಂಚವಾರ್ಷಿಕ ಯೋಜನೆಗಳನ್ನು ಕಾರ್ಯರೂಪಕ್ಕೆ ಇಳಿಸಿತು. ದೇಶದ ವಾಸ್ತವ ಪರಿಸ್ಥಿತಿಯನ್ನು ಗಮನದಲ್ಲಿರಿಸಿ ಯೋಜನೆಗಳ ಗುರಿಗಳು ಮತ್ತು ಮಾರ್ಗಗಳನ್ನು ರೂಪಿಸಿತು. ಉದಾಹರಣೆಗೆ ಮೊದಲನೇ (1951-56) ಪಂಚವಾರ್ಷಿಕ ಯೋಜನೆಯಲ್ಲಿ ಆಹಾರ ಭದ್ರತೆ, ಕೃಷಿಯ ಅಭಿವೃದ್ಧಿ ಮತ್ತು ಬೆಲೆಗಳ ನಿಯಂತ್ರಣಕ್ಕೆ ಆದ್ಯತೆ ಕೊಡಲಾಯಿತು. ಎರಡನೇ(1956-61) ಯೋಜನೆಯಲ್ಲಿ ಕೈಗಾರಿಕೀಕರಣ ಮತ್ತು ಮೂಲ ಸೌಕರ್ಯದ ಅಭಿವೃದ್ಧಿಗೆ ಒತ್ತು ನೀಡಲಾಯಿತು.
ಭಾಗ - 1
ಹೋದ ದಶಕದ ಧ್ರುವೀಕೃತ ರಾಜಕೀಯ ಚರ್ಚೆಗಳ ಗದ್ದಲದಲ್ಲಿ ಭಾರತದ ಅರ್ಥವ್ಯವಸ್ಥೆಯ ಭದ್ರತೆ ಮತ್ತು ಸುಸ್ಥಿರ ಬೆಳವಣಿಗೆಯ ವಿಷಯವು ಹಿನ್ನೆಲೆಗೆ ಸರಿದಿದೆ. ವರ್ಷಂಪ್ರತಿ ಚುನಾವಣೆಗಳು ನಡೆಯುತ್ತಿದ್ದಂತೆ ಘೋಷಣೆಗಳು ಮತ್ತು ಕೆಸರೆರಚಾಟಕ್ಕೇ ಆದ್ಯತೆ ಪಡೆದು, ಈ ಅವಧಿಯಲ್ಲಿ ಆರ್ಥಿಕ ಪ್ರಗತಿಯ ಮೇಲೆ ಪ್ರಭಾವ ಬೀರಬಲ್ಲ ಮೂಲಭೂತ ಬದಲಾವಣೆಗಳು ಮುನ್ನೆಲೆಗೆ ಬಂದೇ ಇಲ್ಲ. ದೇಶದ ಒಟ್ಟಾರೆ ಅಭಿವೃದ್ಧಿಗೆ ಸುಸ್ಥಿರವಾದ ಆರ್ಥಿಕ ನೀತಿಯ ಅಗತ್ಯದ ಹಿನ್ನೆಲೆಯಲ್ಲಿ ಹೋದ 75 ವರ್ಷಗಳಲ್ಲಿ ಸರಕಾರಗಳ ಆರ್ಥಿಕ ನೀತಿ ಮತ್ತು ಅವುಗಳು ಆಯ್ದ ಮಾರ್ಗಗಳ ಬಗ್ಗೆ ಪರಾಮರ್ಶೆ ಇಂದು ಸಕಾಲಿಕವಾಗುತ್ತದೆ.
ಆರ್ಥಿಕ ನೀತಿಯ ಬದಲಾವಣೆಗಳ ಕಾಲಘಟ್ಟಗಳು:
ಸ್ವತಂತ್ರ ಭಾರತದ ಆರ್ಥಿಕ ಚರಿತ್ರೆಯಲ್ಲಿ ಮೂರು ಪ್ರಮುಖ ಕಾಲಘಟ್ಟಗಳನ್ನು ಗುರುತಿಸಬಹುದು.
ಮೊದಲನೆಯ ಕಾಲಘಟ್ಟ-1951-1991: ಸರಕಾರವೇ ಮುಂಚೂಣಿಯಲ್ಲಿದ್ದು ಪೂರ್ವನಿರ್ಧಾರಿತ ಯೋಜನೆಗಳ ಮೂಲಕ ವಿವಿಧ ರಂಗಗಳ ಅಭಿವೃದ್ಧಿಯ ಗುರಿಯನ್ನು ಹೊಂದಿ ಅದನ್ನು ಸಾಧಿಸಲು ಸಾಮೂಹಿಕ ಪ್ರಯತ್ನವನ್ನು ಮಾಡಿದ ಕಾಲ.
ಎರಡನೆಯ ಕಾಲಘಟ್ಟ-1991-2014: ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದತ್ತ ಸರಕಾರವೇ ಒಲವು ತೋರಿಸಿ, ಅದರ ಜೊತೆಗೇ ಪ್ರಗತಿಗೆ ಅಗತ್ಯವಾದ ಪರಿಸರವನ್ನು ಹಾಗೂ ಉತ್ತೇಜನವನ್ನು ನೀಡಿದ ಕಾಲ.
ಮೂರನೆಯ ಕಾಲಘಟ್ಟ-(2014ರ ಬಳಿಕ)ದಲ್ಲಿ ಆರ್ಥಿಕ ಅಭಿವೃದ್ಧಿಯ ತಂತ್ರಗಾರಿಕೆ ಯನ್ನು ಸಲಹಾಕಾರರಿಗೆ ಗುತ್ತಿಗೆ ನೀಡಿ ಸರಕಾರವು ಸಮಷ್ಟಿಯ ಕ್ಷೇಮದಿಂದ ವಿಮುಖವಾದ ಕಾಲ.
ಈ ಮೂರೂ ಅವಧಿಗಳಲ್ಲಿ ಆದ ಆರ್ಥಿಕ ಸ್ಥಿತ್ಯಂತರಗಳ ಬಗ್ಗೆ ಸ್ಥೂಲವಾದ ಅವಲೋಕನ ಇಲ್ಲಿ ಪ್ರಸ್ತುತವಾಗುತ್ತದೆ.
1951-91ರ ಕಾಲಘಟ್ಟ: ಪಂಚವಾರ್ಷಿಕ ಯೋಜನೆಗಳು-ಹಿನ್ನೆಲೆ, ಸಾಧನೆಗಳು ಮತ್ತು ವೈಫಲ್ಯಗಳು:
ದೇಶದ ಆರ್ಥಿಕ ಚರಿತ್ರೆಯಲ್ಲಿ 1951-91 ಒಂದು ಮಹತ್ವಪೂರ್ಣವಾದ ಕಾಲಘಟ್ಟ. ಬ್ರಿಟಿಷರ ಆಡಳಿತದ ಅವಧಿಯಲ್ಲಿ ನಡೆದ ಆರ್ಥಿಕ ಶೋಷಣೆ, ಕೊನೆಯ ದಶಕದಲ್ಲಿ ನಡೆದ ಮಹಾಯುದ್ಧ ಮತ್ತು ಬಂಗಾಳದ ಬರಗಾಲ, ಸ್ವಾತಂತ್ರ್ಯದ ಹೊಸ್ತಿಲಲ್ಲಿ ನಡೆದ ವಿಭಜನೆ ಮತ್ತು ಅದರಿಂದ ಉದ್ಭವಿಸಿದ ದೊಂಬಿ, ಜೀವ ಹಾನಿ ಮತ್ತು ವಲಸೆ ಹಾಗೂ ರಾಜಕೀಯ ಅನಿಶ್ಚಿತತೆಗಳನ್ನು ಧೈರ್ಯವಾಗಿ ಎದುರಿಸಿ ದೇಶವನ್ನು ಆರ್ಥಿಕವಾಗಿ ಸುಭದ್ರಗೊಳಿಸುವುದು ಅತ್ಯಂತ ದೊಡ್ಡ ಸವಾಲೇ ಆಗಿತ್ತು. ರಾಜಕೀಯ ಸ್ಥಿರತೆಗೆ ಸುಭದ್ರವಾದ ಆರ್ಥಿಕತೆಯನ್ನು ಬೆಳೆಸುವುದು ಅತೀ ಅಗತ್ಯವೂ ಆಗಿತ್ತು.
1938ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸುಭಾಶ್ಚಂದ್ರ ಬೋಸ್ ಅವರು ಸ್ವತಂತ್ರ ಭಾರತವು ಆರ್ಥಿಕ ಪ್ರಗತಿಯನ್ನು ಪೂರ್ವ ನಿರ್ಧಾರಿತ ಯೋಜನೆಗಳ ಮೂಲಕ ಸಾಧಿಸಬೇಕು ಎಂದು ಮನಗಂಡು ಅದಕ್ಕೆ ಅಗತ್ಯದ ರೂಪರೇಷೆಯನ್ನು ಕೊಡಲು ರಾಷ್ಟ್ರೀಯ ಯೋಜನಾ ಸಮಿತಿಯನ್ನು ಸ್ಥಾಪಿಸಿದರು, ಪಂಡಿತ್ ನೆಹರೂ ಅವರನ್ನು ಸಮಿತಿಯ ಅಧ್ಯಕ್ಷರಾಗಲು ವಿನಂತಿಸಿದರು. ಯೋಜನಾ ಬದ್ಧ ಪ್ರಗತಿಗೆ ಸಂಬಂಧಿಸಿದಂತೆ ವಿವಿಧ ಮೂಲಗಳಿಂದ ಹಾಗೂ ತಜ್ಞರಿಂದ ಅನೇಕ ಪ್ರಸ್ತಾವಗಳೂ ಸಮಿತಿಗೆ ಬಂದಿದ್ದವು. ಮುಂದೆ ದೇಶವು ಸ್ವತಂತ್ರವಾದ ಬಳಿಕ, ಈ ಕಲ್ಪನೆ ಸಾಕಾರಗೊಂಡು ಸಚಿವ ಸಂಪುಟದ ನಿರ್ಣಯದಂತೆ 1950ರಲ್ಲಿ ರಾಷ್ಟ್ರೀಯ ಯೋಜನಾ ಆಯೋಗವನ್ನು(Planning Commission) ಸ್ಥಾಪಿಸಲಾಯಿತು.
ಆಯೋಗದ ಉದ್ದೇಶವು ಭಾರತದ ಸಮಗ್ರ ಆರ್ಥಿಕ ವಿಕಾಸಕ್ಕೆ ಅಗತ್ಯವಾದ ಯೋಜನೆಗಳಿಗೆ ನೀಲಿ ನಕಾಶೆಯನ್ನು ರಚಿಸಿ ಅವುಗಳನ್ನು ವಿಸ್ತೃತ ಮಟ್ಟದಲ್ಲಿ ಚರ್ಚಿಸಿ ಕಾರ್ಯರೂಪಕ್ಕೆ ತರುವುದು. ಯೋಜನೆಗಳಿಗೆ ಅಗತ್ಯವಾದ ಸಂಪನ್ಮೂಲಗಳನ್ನು ಗುರುತಿಸಿ, ಅವುಗಳನ್ನು ಕ್ರೋಡೀಕರಿಸುವ ಮತ್ತು ಆದ್ಯತೆಗಳಿಗೆ ಅನುಗುಣವಾಗಿ ಅವುಗಳ ಸದ್ಬಳಕೆಯ ದಾರಿಯನ್ನು ತೋರಿಸಿಕೊಡುವ ಜವಾಬ್ದಾರಿಯನ್ನು ಆಯೋಗವು ಹೊಂದಿತ್ತು. ಎಲ್ಲಾ ರಾಜ್ಯಗಳ ಪ್ರತಿನಿಧಿಗಳನ್ನು ಒಳಗೊಂಡ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಸಭೆಗಳಲ್ಲಿ ಕರಡು ಯೋಜನೆಗಳನ್ನು ಚರ್ಚಿಸಿ ರಾಜ್ಯಗಳ ಅಭಿಪ್ರಾಯಗಳನ್ನು ಸ್ವೀಕರಿಸಿ ಯೋಜನೆಗಳನ್ನು ಅಂತಿಮಗೊಳಿಸಲಾಗುತ್ತಿತ್ತು. ಅವುಗಳನ್ನು ಸಂಸತ್ತಿನಲ್ಲಿಯೂ ಮಂಡಿಸಲಾಗುತ್ತಿತ್ತು.
ಯೋಜನೆಗಳ ರಚನೆಗೆ ನಿಖರವಾದ ಮಾಹಿತಿಗಳ ಅಗತ್ಯವನ್ನು ಮನಗಂಡ ನೆಹರೂ ಸರಕಾರವು, ಅಂದಿನ ಶ್ರೇಷ್ಠ ಸಂಖ್ಯಾ ಶಾಸ್ತ್ರಜ್ಞ ಪ್ರಶಾಂತಚಂದ್ರ ಮಹಲನೋಬಿಸ್ ಅವರನ್ನು ಯೋಜನಾ ಆಯೋಗದ ಸಲಹಾಕಾರರಾಗಿ ನೇಮಿಸಿತ್ತು. ಅವರ ನೇತೃತ್ವದಲ್ಲಿ 1950ರ ದಶಕದಲ್ಲಿ ರಾಷ್ಟ್ರೀಯ ಮಾದರಿ ಸರ್ವೇಕ್ಷಣದ (National Sample Survey) ಮೂಲಕ ದೇಶದ ಆದ್ಯಂತವಾಗಿ ಕುಟುಂಬಗಳ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವ ಪ್ರಕ್ರಿಯೆಯನ್ನು ಆರಂಭಿಸಲಾಯಿತು. ರಾಷ್ಟ್ರೀಯ ಸರ್ವೇಕ್ಷಣ ಸಂಸ್ಥೆಯು (National Sample Organisation -NSO) ಮುಂದಿನ ದಶಕಗಳಲ್ಲಿ ದೇಶದ ಜನರ ಬಗ್ಗೆ ವಿಶ್ವಾಸಾರ್ಹ ಮಾಹಿತಿಯನ್ನು ಸಂಗ್ರಹಿಸುವ ಅಪ್ರತಿಮ ಸಾಧನೆಯನ್ನು ಮಾಡಿತು. ಅದು ದೇಶದ ಯೋಜನೆಗಳನ್ನು ರೂಪಿಸುವುದರಲ್ಲಿ ಮಹತ್ವದ ಕೊಡುಗೆಯನ್ನು ನೀಡಿತು.
ಯೋಜನಾ ಆಯೋಗವು 1951ರಿಂದ ಪಂಚವಾರ್ಷಿಕ ಯೋಜನೆಗಳನ್ನು ಕಾರ್ಯರೂಪಕ್ಕೆ ಇಳಿಸಿತು. ದೇಶದ ವಾಸ್ತವ ಪರಿಸ್ಥಿತಿಯನ್ನು ಗಮನದಲ್ಲಿರಿಸಿ ಯೋಜನೆಗಳ ಗುರಿಗಳು ಮತ್ತು ಮಾರ್ಗಗಳನ್ನು ರೂಪಿಸಿತು. ಉದಾಹರಣೆಗೆ ಮೊದಲನೇ (1951-56) ಪಂಚವಾರ್ಷಿಕ ಯೋಜನೆಯಲ್ಲಿ ಆಹಾರ ಭದ್ರತೆ, ಕೃಷಿಯ ಅಭಿವೃದ್ಧಿ ಮತ್ತು ಬೆಲೆಗಳ ನಿಯಂತ್ರಣಕ್ಕೆ ಆದ್ಯತೆ ಕೊಡಲಾಯಿತು. ಎರಡನೆ (1956-61) ಯೋಜನೆಯಲ್ಲಿ ಕೈಗಾರಿಕೀಕರಣ ಮತ್ತು ಮೂಲ ಸೌಕರ್ಯದ ಅಭಿವೃದ್ಧಿಗೆ ಒತ್ತು ನೀಡಲಾಯಿತು. ಎರಡನೆಯ ಮಹಾಯುದ್ಧ, ಬರಗಾಲ ಮತ್ತು ದೇಶದ ವಿಭಜನೆಯಿಂದ ಸಂಭವಿಸಿದ್ದ ಆರ್ಥಿಕ ಬಿಕ್ಕಟ್ಟುಗಳಿಂದ ಆರ್ಥಿಕವಾಗಿ ಕಂಗೆಟ್ಟಿದ ಸ್ವತಂತ್ರಭಾರತದ ಆರ್ಥಿಕತೆಯು ಚೇತರಿಸಿದ್ದು ಮಾತ್ರವಲ್ಲದೆ ಮುಂದಿನ ಸರ್ವಾಂಗೀಣ ಪ್ರಗತಿಗೆ ಮೊದಲ ಎರಡು ಯೋಜನೆಗಳು ದಾರಿಯನ್ನು ಹಾಕಿ ಕೊಟ್ಟವು.
ಈ ಸಾಧನೆಯ ಹಿನ್ನೆಲೆಯಲ್ಲಿ 1961ರಲ್ಲಿ ಆರಂಭವಾದ ಮೂರನೆಯ ಯೋಜನೆಯಲ್ಲಿ ಭಾರತದ ಸ್ವಾವಲಂಬನೆಗೆ ಪ್ರಾಶಸ್ತ್ಯವನ್ನು ಕೊಡಲಾಯಿತು. ಬಾಹ್ಯ ಉತ್ತೇಜನದ ಅಗತ್ಯವಿಲ್ಲದೆ, ಸ್ವಯಂಪ್ರೇರಿತ ಆರ್ಥಿಕ ಚಟುವಟಿಕೆಗಳ ಮೂಲಕ ಪ್ರಗತಿ ಸಾಧಿಸುವ ತಂತ್ರವನ್ನು ಯೋಜನಾ ಆಯೋಗ ಪರಿಕಲ್ಪಿಸಿತು. ಆದರೆ 1960ರ ದಶಕದಲ್ಲಿ ದೇಶವು ಮತ್ತೆ ಎದುರಿಸಬೇಕಾಗಿ ಬಂದ ಎರಡು ಯುದ್ಧಗಳು ಮತ್ತು ಬರಗಾಲಗಳು ಮೂರನೆಯ ಪಂಚವಾರ್ಷಿಕ ಯೋಜನೆಯ ಅನುಷ್ಠಾನಕ್ಕೆ ತಡೆಯನ್ನು ಒಡ್ಡಿದವು. ಮುಂದಿನ ಎರಡು ದಶಕಗಳಲ್ಲಿ ಆಗಾಗ ಕಾಡುತ್ತಿದ್ದ ರಾಜಕೀಯ ಅಸ್ಥಿರತೆಯಿಂದ ಯೋಜನೆಗಳ ಸ್ವರೂಪ ಮತ್ತು ಅವಧಿಗಳನ್ನು ಬದಲಾಯಿಸಲಾಯಿತು.
ಯೋಜನೆಗಳ ವೈಫಲ್ಯ ಮತ್ತು ಕೊಡುಗೆ
ಪಂಚವಾರ್ಷಿಕ ಯೋಜನೆಗಳಲ್ಲಿ ದೋಷಗಳು ಇದ್ದವು. ರಾಜಕೀಯ ನಾಯಕರ ಹಸ್ತಕ್ಷೇಪ, ಸರಕಾರಿ ಸಂಸ್ಥೆಗಳಲ್ಲಿನ ಭ್ರಷ್ಟಾಚಾರ, ರಾಜಕೀಯ ಅಸ್ಥಿರತೆ ಮುಂತಾದ ಕಾರಣಗಳಿಂದಾಗಿ ಯೋಜನೆಗಳ ಅನುಷ್ಠಾನವು ಸಮರ್ಪಕವಾಗಲಿಲ್ಲ. ದಾರಿದ್ರ್ಯ ಮತ್ತು ಭೌಗೋಳಿಕ ಅಸಮಾನತೆಗಳನ್ನು ನಿವಾರಿಸುವಲ್ಲಿ ಮುನ್ನಡೆಯಾದರೂ ಗುರಿಗಳನ್ನು ಸಾಧಿಸಲು ಸಾಧ್ಯವಾಗಲಿಲ್ಲ. 1977ರ ಬಳಿಕ ರಾಜಕೀಯ ಅಸ್ಥಿರತೆಯು ಪ್ರಗತಿಗೆ ಅಡ್ಡಿಯನ್ನುಂಟು ಮಾಡಿತು.
ಈ ರೀತಿಯ ವೈಫಲ್ಯಗಳ ಹೊರತಾಗಿಯೂ, ಬಡತನದಲ್ಲಿ ಗಮನಾರ್ಹ ಕಡಿತ, ಕೃಷಿಕ್ಷೇತ್ರದ ಅಭಿವೃದ್ಧಿ, ಆಹಾರಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ, ಕೈಗಾರಿಕೀಕರಣ, ಮೂಲಸೌಕರ್ಯಗಳ ಸೃಷ್ಟಿ, ಘನ ಉದ್ದಿಮೆಗಳ ಆರಂಭ, ಶಿಕ್ಷಣರಂಗದಲ್ಲಿ ಮೂಲಭೂತ ಬದಲಾವಣೆ ಮತ್ತು ಪ್ರಗತಿ, ವೈಜ್ಞಾನಿಕ ಕ್ಷೇತ್ರದಲ್ಲಿ ಅಪೂರ್ವವಾದ ಮುನ್ನಡೆ, ರಕ್ಷಣಾ ಸಾಮಗ್ರಿಗಳ ಉತ್ಪಾದನೆಯಲ್ಲಿ ಪ್ರಗತಿ, ಹಣಕಾಸು ರಂಗದಲ್ಲಿ ಹೊಸ ಸಂಸ್ಥೆಗಳ ಸ್ಥಾಪನೆ ಮತ್ತು ಬ್ಯಾಂಕುಗಳ ವ್ಯವಹಾರನೀತಿಯಲ್ಲಿ ಮೂಲಭೂತ ಬದಲಾವಣೆ ಮುಂತಾದ ಬೆಳವಣಿಗೆಗಳಿಗೆ ದೇಶವು ಆರಿಸಿಕೊಂಡಿದ್ದ ಆರ್ಥಿಕ ಪ್ರಗತಿಯ ತಂತ್ರವಾದ ಪಂಚವಾರ್ಷಿಕ ಯೋಜನೆಗಳು ಪ್ರಮುಖ ಕಾರಣವೆಂದರೆ ತಪ್ಪಾಗಲಾರದು.
ಒಂದು ದೇಶದ ರಾಜಕೀಯ ಸ್ಥಿರತೆಗೆ ಆರ್ಥಿಕ ಭದ್ರತೆಯು ಅತೀ ಅಗತ್ಯ. ಹೊಸತಾಗಿ ಸ್ವಾತಂತ್ರ್ಯ ಪಡೆದ ಅನೇಕ ದೇಶಗಳು ಆರ್ಥಿಕ ಮುಗ್ಗಟ್ಟಿನಿಂದಾಗಿ ರಾಜಕೀಯ/ಸಾಮಾಜಿಕ ಕ್ಷೋಭೆಗೆ ಬಲಿಯಾಗಿವೆ. ಪ್ರಗತಿಹೊಂದಿದ ರಾಷ್ಟ್ರಗಳಲ್ಲಿಯೂ ಆರ್ಥಿಕ ಬಿಕ್ಕಟ್ಟುಗಳು ಅಶಾಂತಿಯನ್ನು ಹಬ್ಬಿಸಿವೆ. ಇದಕ್ಕೆ ವ್ಯತಿರಿಕ್ತವಾಗಿ, ಭಾರತದ ಆರ್ಥಿಕತೆಯು ಸುಭದ್ರವಾಗಿ ಬೆಳೆದಿದೆ, ಆ ಮೂಲಕ ರಾಜಕೀಯ ಸ್ಥಿರತೆಯು ಮುಂದುವರಿದಿದೆ. ಇದನ್ನು ಸಾಧಿಸುವಲ್ಲಿ ಪಂಚವಾರ್ಷಿಕ ಯೋಜನೆಗಳ ಕೊಡುಗೆ ಅನನ್ಯ.
1991-2014ರ ಉದಾರೀಕರಣದ ಕಾಲಘಟ್ಟ
ಆರ್ಥಿಕ ಚರಿತ್ರೆಯಲ್ಲಿ ಎರಡನೆಯ ಕಾಲಘಟ್ಟ 1991ರಿಂದ ಪ್ರಾರಂಭವಾಯಿತು. ಅಮೆರಿಕದ ಅಧ್ಯಕ್ಷ ರೇಗನ್ ಮತ್ತು ಇಂಗ್ಲೆಂಡಿನ ಪ್ರಧಾನಿ ಥ್ಯಾಚರ್ ಅವರ ಕಾಲಾವಧಿಯಲ್ಲಿ ವಿಶ್ವದಾದ್ಯಂತ ಹೊಸತೊಂದು ಆರ್ಥಿಕ ನೀತಿಯ ಗಾಳಿ ಬೀಸಲು ಆರಂಭವಾಯಿತು. ಅದರ ಪ್ರಮುಖ ಸ್ತರಗಳು ಮೂರು: ದೇಶಗಳು ತಮ್ಮ ಅರ್ಥವ್ಯವಸ್ಥೆಯನ್ನು ಅಂತರ್‌ರಾಷ್ಟ್ರೀಯ ವ್ಯವಹಾರಕ್ಕೆ ಸಂಪೂರ್ಣವಾಗಿ ಮುಕ್ತಗೊಳಿಸುವುದು, ಆಂತರಿಕ ನಿರ್ಬಂಧಗಳನ್ನು ಸಡಿಲಗೊಳಿಸಿ ಆರ್ಥಿಕ ನೀತಿಗಳನ್ನು ಉದಾರಗೊಳಿಸುವುದು ಮತ್ತು ಸರಕಾರದ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿ ರಂಗಕ್ಕೆ ಹಸ್ತಾಂತರಿಸುವುದು. ಇದಕ್ಕೆ ಪೂರಕವಾಗಿ 1948ರಲ್ಲಿ ಆರಂಭವಾದ ಸುಂಕ ಮತ್ತು ವ್ಯಾಪಾರ ಸಂಬಂಧಿ ಸಾಮಾನ್ಯ ಒಪ್ಪಂದ (General Agreement on Tariffs and Trade-GATT) ಅನ್ನು 1995ರಲ್ಲಿ ವಿಶ್ವ ವ್ಯಾಪಾರ ಸಂಸ್ಥೆ (World Trade Organisation-WTO) ಆಗಿ ಬದಲಾಯಿಸಲಾಯಿತು. ಇದರ ಉದ್ದೇಶವೂ ಜಗತ್ತಿನಾದ್ಯಂತ ಮುಕ್ತವ್ಯಾಪಾರವನ್ನು ಪ್ರೋತ್ಸಾಹಿಸುವುದು. ಇವು ಈಗ ಬಳಕೆಯಲ್ಲಿರುವ ಉದಾರೀಕರಣ-ಖಾಸಗೀಕರಣ ಮತ್ತು ಜಾಗತೀಕರಣದ ಪರಿಕಲ್ಪನೆಯ ಪ್ರಮುಖ ಅಂಶಗಳು.
1991ರಲ್ಲಿ ಚುನಾವಣೆ ನಡೆದು ಪಿ.ವಿ. ನರಸಿಂಹರಾವ್ ಅವರ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಾಗ ಮುಕ್ತ ಆರ್ಥಿಕ ನೀತಿಯ ಮೊದಲ ಹಂತಕ್ಕೆ ಅಡಿಗಲ್ಲು ಹಾಕಲಾಯಿತು. ಆರ್ಥಿಕ ತಜ್ಞರೆಂದು ಅಂತರ್‌ರಾಷ್ಟ್ರೀಯ ಖ್ಯಾತಿ ಪಡೆದಿದ್ದ ಮನಮೋಹನ್ ಸಿಂಗ್‌ರನ್ನು ಹಣಕಾಸು ಸಚಿವರನ್ನಾಗಿ ನೇಮಿಸಲಾಯಿತು. ಆ ಬಳಿಕ ಸರಕಾರದ ನೀತಿಗಳನ್ನು ಉದಾರಗೊಳಿಸಿ ಆರ್ಥಿಕ ಚಟುವಟಿಕೆಗಳಲ್ಲಿ ಖಾಸಗಿ ರಂಗದ ಉದ್ದಿಮೆದಾರರ ಪ್ರವೇಶಕ್ಕೆ ಅನುಕೂಲ ಮಾಡಲಾಯಿತು. ಅನೇಕ ಸರಕಾರಿ ಉದ್ದಿಮೆಗಳನ್ನು ಪೂರ್ಣವಾಗಿ ಇಲ್ಲವೇ ಭಾಗಶಃ ಖಾಸಗಿರಂಗಗಳಿಗೆ ಮಾರಲಾಯಿತು. ಇನ್ನು ಕೆಲವು ಉದ್ದಿಮೆಗಳಲ್ಲಿ ಸರಕಾರದ ಏಕಸ್ವಾಮ್ಯವನ್ನು ಬಿಟ್ಟು ಖಾಸಗಿ ಕಂಪೆನಿಗಳಿಗೆ ಅವಕಾಶ ನೀಡಲಾಯಿತು. ಹೊಸ ಬ್ಯಾಂಕುಗಳು, ವಿಮಾ ಕಂಪೆನಿಗಳು, ವಿಮಾನ ಕಂಪೆನಿಗಳು ಅಸ್ತಿತ್ವಕ್ಕೆ ಬಂದವು. ವಿದೇಶಿ ಕಂಪೆನಿಗಳಿಗೂ ಅವಕಾಶ ನೀಡಲಾಯಿತು.
ಆದರೆ ಇವುಗಳ ಜೊತೆಗೆ ಪಂಚವಾರ್ಷಿಕ ಯೋಜನೆಗಳು ಮುಂದುವರಿದವು; ಕೊನೆಯ ಪಂಚವಾರ್ಷಿಕ ಯೋಜನೆಯು 2012ರಲ್ಲಿ ಆರಂಭವಾಯಿತು. ಅವುಗಳ ಮೂಲಕ ಆರ್ಥಿಕ ಅಭಿವೃದ್ಧಿಗೆ ಒಂದು ನಿರ್ದಿಷ್ಟವಾದ ಗತಿಯನ್ನು ಮತ್ತು ದಾರಿಯನ್ನು ಹಾಕಲಾಯಿತು. ಸರಕಾರವು ಇನ್ನೂ ಅನೇಕ ಕ್ಷೇತ್ರಗಳಲ್ಲಿ ತನ್ನ ಹಿಡಿತವನ್ನು ಉಳಿಸಿಕೊಂಡು, ನೀತಿಗಳನ್ನು ಸರಕಾರದ ಉದ್ದೇಶಗಳಿಗನುಗುಣವಾಗಿ ರೂಪಿಸುವ ಕ್ರಮ ಮುಂದುವರಿಯಿತು. ಅಗತ್ಯ ಬಿದ್ದಲ್ಲಿ ಸರಕಾರದ ಹಸ್ತಕ್ಷೇಪವೂ ಇರುತ್ತಿತ್ತು.
ಈ ಕಾಲಾವಧಿಯಲ್ಲಿ ನೀತಿಗಳನ್ನು ರೂಪಿಸುವಲ್ಲಿ ವಿಸ್ತೃತ ಚರ್ಚೆ, ಅಗತ್ಯ ಬಿದ್ದಲ್ಲಿ ಮರುಪರಿಶೀಲನೆ ಮತ್ತು ತಪ್ಪಿದಲ್ಲಿ ತಿದ್ದುಪಡಿ ಹಾಗೂ ವೈಫಲ್ಯಗಳ ಬಗ್ಗೆ ಸಂಸತ್ತಿನಲ್ಲಿ ವ್ಯಾಪಕ ಚರ್ಚೆಗಳಿಗೆ ಅವಕಾಶವಿತ್ತು. ಈ ಧೋರಣೆಯು ಸುಮಾರಾಗಿ ಮುಂದಿನ ಸರಕಾರಗಳಿಗೂ ಮಾನ್ಯವಾಗಿತ್ತು. ಮನಮೋಹನ್ ಸಿಂಗರು ಪ್ರಧಾನಿಯಾಗಿದ್ದ 2004-14ರ ಅವಧಿಯಲ್ಲಿ ಈ ತರದ ಸಂವೇದನಾಶೀಲತೆಯು ಮುಂದುವರಿಯಿತು. ಪ್ರಜೆಗಳ ಆಶಯಗಳಿಗೆ ಸ್ಪಂದಿಸಿ ಹೊಸ ನೀತಿಗಳನ್ನು ರೂಪಿಸಲಾಯಿತು. ಉದಾಹರಣೆಗಾಗಿ- ಗ್ರಾಮೀಣ ಉದ್ಯೋಗ ಭದ್ರತಾ ಯೋಜನೆ, ಭೂಸ್ವಾಧೀನತೆಯ ಕಾನೂನಿನ ತಿದ್ದುಪಡಿ, ಮಾಹಿತಿ ಹಕ್ಕು, ಶೂನ್ಯಶಿಲ್ಕು ಉಳ್ಳ ಬ್ಯಾಂಕು ಖಾತೆಗಳು, ಸರಕಾರದ ಸಹಾಯಧನದ ನೇರ ಪಾವತಿ ಮುಂತಾದ ಜನಪರ ನಿರ್ಧಾರಗಳು ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸಿದವು. ಒಟ್ಟಾರೆ ಪ್ರಗತಿಯ ದರವು ಯೋಜನೆಗಳು ಹಾಕಿದ ಗುರಿಯನ್ನು ಮೀರಿತು. ದೇಶದ ಆರ್ಥಿಕತೆಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿಯೂ ಮನ್ನಣೆ ಸಿಕ್ಕಿತು.







