ಭಾರತದ ಜಿಡಿಪಿ ಭ್ರಮೆ ಮತ್ತು ಅಂಗೈ ಹುಣ್ಣು

ಭಾರತದಲ್ಲಿ ಖಾಸಗೀಕರಣ, ಬಂಡವಾಳಶಾಹಿ ವ್ಯವಸ್ಥೆ ಬಲಗೊಂಡಷ್ಟು ಉದ್ಯೋಗದ ಪ್ರಮಾಣ ಕುಂಠಿತಗೊಂಡಿದೆ, ನಿರುದ್ಯೋಗದ ಪ್ರಮಾಣ ಹೆಚ್ಚಾಗಿದೆ. ಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿದೆ. ಕಳೆದ ಮೂವತ್ತು ವರ್ಷಗಳ ಅಧಿಕೃತ ದತ್ತಾಂಶ ಮತ್ತು ಜನರ ಬದುಕು ಇದಕ್ಕೆ ಸಾಕ್ಷಿಯಾಗಿದೆ. ಜಿಡಿಪಿ ಪ್ರಮಾಣ ಹೆಚ್ಚಿದಷ್ಟು ರೈತರ ಆತ್ಮಹತ್ಯೆಯೂ ಹೆಚ್ಚಾಗಿದೆ. ಬಡತನ, ಹಸಿವಿನಿಂದ ನರಳುವ ಜನಸಂಖ್ಯೆ ಹೆಚ್ಚಾಗಿದೆ. ಶ್ರೀಮಂತರು ಮತ್ತು ಬಡವರ ನಡುವಿನ ಕಂದರ ಹೆಚ್ಚಾಗಿದೆ. ಬಡಜನರ ಬದುಕನ್ನು ಆಧರಿಸಿ ಜಿಡಿಪಿ ನಿರ್ಧರಿಸುವುದಿಲ್ಲ. ಬದಲಿಗೆ ಅತಿ ಶ್ರೀಮಂತರ ಸಂಪತ್ತು ವೃದ್ಧಿಯನ್ನು ಜಿಡಿಪಿ ಹೆಚ್ಚಳ ಎಂದು ಹೇಳಲಾಗುತ್ತದೆ. ಸಮಾಜದಲ್ಲಿರುವ ಬಡತನ, ನಿರುದ್ಯೋಗವನ್ನು ನೇಪಥ್ಯಕ್ಕೆ ತಳ್ಳಿ ಬಂಡವಾಳಶಾಹಿಗಳ, ಅತಿ ಶ್ರೀಮಂತರ ಸಂಪತ್ತು ಹೆಚ್ಚಿದಂತೆಲ್ಲ ಅದನ್ನು ಆಧರಿಸಿ ಜೆಡಿಪಿ ಹೆಚ್ಚಾಗಿದೆ ಎಂದು ಹೇಳುವ ಈ ಮೌಲ್ಯಮಾಪನ ದೋಷ ಪೂರಿತವಾಗಿರುವಂತಹದ್ದು.
ದತ್ತಾಂಶಗಳು ವಂಚನೆಯಿಂದ ಕೂಡಿದ್ದರೆ ನಿಜದ ನೀತಿಗಳು ಕೊನೆಯುಸಿರೆಳೆಯುತ್ತವೆ. ಇಂದು ಭಾರತ ಆ ಹಂತದಲ್ಲಿದೆ. ಮೋದಿ ನೇತೃತ್ವದ ಬಿಜೆಪಿ ಸರಕಾರ ಮತ್ತು ಅದರ ಸಮರ್ಥಕರು 2025-26ರ ಎರಡನೇ ತ್ರೈಮಾಸಿಕದಲ್ಲಿ ಶೇ. 8.2 ಜಿಡಿಪಿ ಬೆಳವಣಿಗೆಯ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಭಾರತದ ಸಾಂಖ್ಯಿಕ ವ್ಯವಸ್ಥೆಯ ದೌರ್ಬಲ್ಯ ಮತ್ತು ಮಿತಿಯನ್ನು ಐಎಂಎಫ್ ಬಹಿರಂಗಗೊಳಿಸಿದೆ. ಭಾರತದ ಆರ್ಥಿಕ ದತ್ತಾಂಶಗಳನ್ನು ‘ಕೆಟಗರಿ ಸಿ’ಗೆ ಇಳಿಸಿದ ಐಎಂಎಫ್‌ನ ವರದಿ ಗುಂಡು ಸಿಡಿಸಿದಂತೆ ಎದೆಗೆ ಬಿದ್ದಿದೆ. ‘ವಿಧಾನಾತ್ಮಕ ದೌರ್ಬಲ್ಯಗಳು’ ಮತ್ತು ಉತ್ಪಾದನಾ ಮತ್ತು ವೆಚ್ಚ ಅಂದಾಜುಗಳ ನಡುವೆ ‘ಗಣನೀಯ ವ್ಯತ್ಯಾಸಗಳು’ ಈ ಸಿ ದರ್ಜೆಗೆ ಕಾರಣ ಎಂದು ಉಲ್ಲೇಖಿಸಿದೆ. ಯಾವುದೇ ಬಗೆಯ ಲೆಕ್ಕಾಚಾರದ ಮೇಲೂ ನಂಬಲಾಗದ ದೇಶಗಳಿಗೆ ಮಾತ್ರ ಈ ಎರಡನೇ ಕೆಟ್ಟ ಗ್ರೇಡನ್ನು ಕೊಡುತ್ತಾರೆ. ಇಂತಹ ದೇಶವು ಒಳಗೂ ಮತ್ತು ಹೊರಗೂ ವಿಶ್ವಾಸಾರ್ಹತೆ ಕಳೆದುಕೊಂಡ ದತ್ತಾಂಶಗಳ ಆಧರಿಸಿ ಸಂಭ್ರಮಿಸುವ ಅಭಿವೃದ್ಧಿಯು ಕೊನೆಗೆ ತನ್ನ ತೂಕದಿಂದಲೇ ಕುಸಿದು ಬೀಳುತ್ತದೆ. ಇದು ಇಂದಿನ ಭಾರತ. ಇದನ್ನು ಹೇಳಿದ ತಕ್ಷಣ ಯಾವುದೇ ಬಗೆಯ ವಿವೇಕ, ಸಾಮಾನ್ಯ ತಿಳುವಳಿಕೆ ಇಲ್ಲದ, ಅಂಕಿಅಂಶಗಳನ್ನು ಬಿಜೆಪಿ ಐಟಿ ಸೆಲ್‌ನಿಂದ ತೆಗೆದುಕೊಂಡು ‘ಜೈ ಶ್ರೀ ರಾಮ್’ ಘೋಷಣೆ ಮಾಡುವ ಅವಿವೇಕಿಗಳಿಂದ ತುಂಬಿರುವ ಈ ದೇಶಕ್ಕೆ ಸದ್ಬುದ್ಧಿ ಕೊಡುವ ಪ್ರವಾದಿ ಬರಬೇಕಾಗಿದೆ.
1931ರಲ್ಲಿ ಸ್ಥಾಪನೆಯಾದ ಐಎಸ್‌ಎಸ್(ಭಾರತೀಯ ಸಾಂಖ್ಯಿಕ ಸಂಸ್ಥೆ) ದಶಕಗಳ ಕಾಲ ನೈಜ ಸಮೀಕ್ಷೆಯ ಬೌದ್ಧಿಕ ಕೇಂದ್ರವಾಗಿತ್ತು. 1950ರಲ್ಲಿ ಸ್ಥಾಪನೆಯಾದ ಎನ್‌ಎಸ್‌ಎಸ್(ರಾಷ್ಟ್ರೀಯ ಮಾದರಿ ಸರ್ವೇಕ್ಷಣೆ) ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ದತ್ತಾಂಶ ಸಂಗ್ರಹಿಸತೊಡಗಿತು. ಜಿ.ಎಸ್. ಸೆಡಾ ಅವರು ‘ಆಫ್ರಿಕಾ, ಏಶ್ಯ ಮತ್ತು ಲ್ಯಾಟಿನ್ ಅಮೆರಿಕದಿಂದ ಪ್ರತಿನಿಧಿ ತಂಡಗಳು ನಮ್ಮ ವಿಧಾನಗಳನ್ನು ಅಧ್ಯಯನಕ್ಕೆ ಬಂದವು. ವಿಶ್ವಸಂಸ್ಥೆಯು ಭಾರತದ ಸರ್ವೇಗಳನ್ನು ಮಾದರಿಯಾಗಿಟ್ಟುಕೊಂಡಿತು. ಅಂತರ್‌ರಾಷ್ಟ್ರೀಯ ವಿದ್ವಾಂಸರು ಭಾರತದ ಹೊಸ ಬದಲಾವಣೆಗಳನ್ನು, ನಾವೀನ್ಯತೆಯನ್ನು ಚರ್ಚಿಸಿದರು. ಈ ಸಂಸ್ಥೆಗಳ ದತ್ತಾಂಶಗಳು ಯುಕೆ, ಅಮೆರಿಕ ಮತ್ತು ಸೋವಿಯತ್ ಒಕ್ಕೂಟದ ವಿಧಾನಶಾಸ್ತ್ರ ಚರ್ಚೆಗಳಲ್ಲಿ ಉಲ್ಲೇಖಿತವಾದವು. ದಶಕಗಳ ಕಾಲ ಭಾರತ ಹಿಂದುಳಿದವರಲ್ಲ-ಅದು ಮಾದರಿಯಾಗಿತ್ತು’ ಎಂದು ಬರೆಯುತ್ತಾರೆ.
ಆದರೆ 2014ರಲ್ಲಿ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ಎನ್‌ಎಸ್‌ಎಸ್, ಐಎಸ್‌ಎಸ್ ವಿಶ್ವಾಸಾರ್ಹತೆ ಕಳೆದುಕೊಂಡವು. ಸರಕಾರದ ತುತ್ತೂರಿಯಂತೆ, ಬಿಜೆಪಿ ಪ್ರಣಾಳಿಕೆಯಂತೆ ಕಾರ್ಯನಿರ್ವಹಿಸತೊಡಗಿವು.
ಈ ಸಂಸ್ಥೆಗಳು ನಡೆಸಿದ 2017-18ರ ಬಳಕೆ, ವೆಚ್ಚ ಸಮೀಕ್ಷೆಯನ್ನು(Consumption) ಅದು ಅತ್ಯಂತ ಕಡಿಮೆ ತೋರಿಸುತ್ತಿದೆ ಎಂದು ಮುಚ್ಚಿಡಲಾಯಿತು. ಕಳೆದ 45 ವರ್ಷಗಳಲ್ಲಿ ಹೋಲಿಸಿದರೆ ಈಗ ಗರಿಷ್ಠ ನಿರುದ್ಯೋಗವಿದೆ ಎಂದು ಹೇಳಿದ ಪಿಎಲ್‌ಎಫ್‌ಎಸ್(ಆವರ್ತಕ ದುಡಿಯುವ ವರ್ಗಗಳ ಸಮೀಕ್ಷೆ) ವರದಿಯನ್ನು ಗೌಪ್ಯವಾಗಿಡಲಾಯಿತು. 2019ರ ಚುನಾವಣೆಯ ನಂತರ ಬಹುಮತ ಪಡೆದುಕೊಂಡ ನಂತರವೇ ಅದು ಬಿಡುಗಡೆಯಾಯಿತು. ಇದನ್ನು ವಿರೋಧಿಸಿ ಎನ್‌ಎಸ್‌ಸಿಯ( ರಾಷ್ಟ್ರೀಯ ಸಾಂಖ್ಯಿಕ ಆಯೋಗ) ಇಬ್ಬರು ಸದಸ್ಯರು ರಾಜೀನಾಮೆ ನೀಡಿದರು. ಬಿಜೆಪಿ ಸರಕಾರದ ಮೂಗಿನ ನೇರಕ್ಕೆ ತಕ್ಕಂತೆ ಪರಿಷ್ಕೃತ ಜಿಡಿಪಿಗಳು 2014ರ ನಂತರದ ಎನ್‌ಡಿಎ ಅವಧಿಯ ಸಂಖ್ಯೆಗಳನ್ನು ಮಾಯಾಜಾಲದಂತೆ ಏರಿಸಿ, ಯುಪಿಎ ಅವಧಿಯ ಸಂಖ್ಯೆಗಳನ್ನು ಕಡಿಮೆ ಮಾಡಿದವು. ಮೋದಿ ಸರಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣ್ಯನ್ ಜಿಡಿಪಿಯನ್ನು ಪ್ರತಿಶತ 2.5 ಅಂಕಿಗಳಷ್ಟು ಉಬ್ಬಿಸಲಾಗಿದೆ ಎಂದು ಹೇಳಿದರು. ವಾಣಿಜ್ಯ, ಕೈಗಾರಿಕಾ ಉತ್ಪಾದನೆ ಮತ್ತು ತೆರಿಗೆ ದತ್ತಾಂಶಗಳಲ್ಲಿನ ಅನುಮಾನಾಸ್ಪದ ಏರಿಕೆಯನ್ನು ಸಮರ್ಥಿಸುವಂತಹ ಅಂಕಿಅಂಶಗಳನ್ನು ಒದಗಿಸಲಿಲ್ಲ. ನೆಹರೂವಿಯನ್ ಕಾಲದಲ್ಲಿ ಕಟ್ಟಿದ ಆರ್ಥಿಕ ನೀತಿಯ ಸೌಧವು ಮೋದಿ ಕಾಲದಲ್ಲಿ ಯಶಸ್ವಿಯಾಗಿ ಕುಸಿದಿದೆ.
ಇಂದಿನ ಅಸಮಾನತೆ ಜಿಡಿಪಿ ಮತ್ತು ತಲಾ ಆದಾಯದ ನಡುವಿನ ವೈರುಧ್ಯಗಳನ್ನು ವಿಶ್ಲೇಷಿಸಿದಾಗ ಈ ಶೇ. 8.2 ಜಿಡಿಪಿಯ ವಂಚನೆ ಅರ್ಥವಾಗುತ್ತದೆ.
ಬಿಜೆಪಿ ಸರಕಾರದ ದತ್ತಾಂಶದ ಪ್ರಕಾರ 2024ರಲ್ಲಿ ಭಾರತದ ಜಿಡಿಪಿ(ಅಂತರಿಕ ಉತ್ಪನ್ನ ಸೂಚ್ಯಂಕ) ಅಂದಾಜು ರೂ. 360 ಲಕ್ಷ ಕೋಟಿ(4,187.02 ಬಿಲಿಯನ್ ಡಾಲರ್), ಜಪಾನ್‌ನ ಜಿಡಿಪಿ ಅಂದಾಜು ರೂ. 359 ಲಕ್ಷ ಕೋಟಿ(4,186.43 ಬಿಲಿಯನ್ ಡಾಲರ್) ಎಂದು ಹೇಳಿದ್ದಾರೆ. 146 ಕೋಟಿ ಜನಸಂಖ್ಯೆಯುಳ್ಳ ಭಾರತದ ತಲಾ ವಾರ್ಷಿಕ ಆದಾಯ 2.88 ಲಕ್ಷ ರೂ. ಎಂದು ಅಧಿಕೃತ ವರದಿ ಹೇಳುತ್ತದೆ. 12.3 ಕೋಟಿ ಜನಸಂಖ್ಯೆಯ ಜಪಾನ್‌ನ ತಲಾ ವಾರ್ಷಿಕ ಆದಾಯ 33.90 ಲಕ್ಷ ರೂ. ಎಂದು ವರದಿಯಾಗಿದೆ. ಅಂದರೆ ಭಾರತಕ್ಕಿಂತ ಜಪಾನ್‌ನ ತಲಾ ವಾರ್ಷಿಕ ಆದಾಯ ರೂ. 31 ಲಕ್ಷದಷ್ಟು ಹೆಚ್ಚಿದೆ.
ನವ ಉದಾರೀಕರಣದ ಮೂವತ್ತು ವರ್ಷಗಳಲ್ಲಿ ದೇಶದ ಶೇ.1ರಷ್ಟು ಅತಿ ಶ್ರೀಮಂತರ ಬಳಿ ಶೇ.41ರಷ್ಟು, ಶೇ. 10ರಷ್ಟು ಅತಿ ಶ್ರೀಮಂತರು, ಶ್ರೀಮಂತರ ಬಳಿ ಶೇ. 57ರಷ್ಟು ಸಂಪತ್ತಿದೆ. ವ್ಯವಸ್ಥೆಯ ಕೆಳಸ್ತರದಲ್ಲಿರುವ ಶೇ. 50ರಷ್ಟು ಜನಸಂಖ್ಯೆಯ ಬಳಿ ಕೇವಲ ಶೇ.3ರಷ್ಟು ಸಂಪತ್ತಿದೆ. ಈ ತಲಾ ಆದಾಯದಲ್ಲಿ ಅತಿ ಶ್ರೀಮಂತರು, ಶ್ರೀಮಂತರ ಪಾಲು ಗರಿಷ್ಠ ಮಟ್ಟದಲ್ಲಿದೆ. ಅಂಬಾನಿ, ಅದಾನಿ ಜೋಡಿಯ ಸಂಪತ್ತು ಅಂದಾಜು ರೂ. 16 ಲಕ್ಷ ಕೋಟಿಯಷ್ಟಿದೆ. ತಲಾ ವಾರ್ಷಿಕ ಆದಾಯದಲ್ಲಿ ಇವರಿಬ್ಬರನ್ನು ಹೊರತುಪಡಿಸಿದರೆ ಅದರ ಮೊತ್ತ ರೂ. 1.65-2.25 ಲಕ್ಷಕ್ಕೆ ಇಳಿಯುತ್ತದೆ. ದೇಶದ ಹತ್ತು ಅತಿ ಶ್ರೀಮಂತರ ಸಂಪತ್ತು ಅಂದಾಜು ರೂ. 35 ಲಕ್ಷ ಕೋಟಿಯಷ್ಟಿದೆ. ಇವರನ್ನು ಹೊರತುಪಡಿಸಿದರೆ ತಲಾ ವಾರ್ಷಿಕ ಆದಾಯ ರೂ. 1.5-2.10 ಲಕ್ಷಕ್ಕೆ ಇಳಿಯುತ್ತದೆ. ದೇಶದ 200 ಶ್ರೀಮಂತರ ಬಳಿ 84 ಲಕ್ಷ ಕೋಟಿ ಸಂಪತ್ತಿದೆ. ಇವರನ್ನು ಹೊರತುಪಡಿಸಿದರೆ ತಲಾ ವಾರ್ಷಿಕ ಆದಾಯ ರೂ. 1.2-1.8 ಲಕ್ಷಕ್ಕೆ ಇಳಿಯುತ್ತದೆ. ಹೀಗೆ ಹಂತ ಹಂತವಾಗಿ ಶ್ರೀಮಂತರು, ಮೇಲ್ಮಧ್ಯಮ ವರ್ಗಗಳ ಸಂಪತ್ತನ್ನು ಹೊರತುಪಡಿಸಿದರೆ ಶೇ.60-70ರಷ್ಟು ಜನಸಂಖ್ಯೆಯ ತಲಾ ಆದಾಯ ಹತ್ತು ಸಾವಿರ ರೂ. ಗಳಿಗೂ ಕಡಿಮೆ ಕುಸಿಯುತ್ತದೆ. ಇಂತಹ ಅಗಾಧ ಅಸಮಾನ ಸಂಪತ್ತಿನ ಹಂಚಿಕೆಯುಳ್ಳ ಭಾರತವು ಆರ್ಥಿಕವಾಗಿ ಬಲಿಷ್ಠ ದೇಶ ಎಂದು ಕರೆದುಕೊಳ್ಳುವುದು ಆತ್ಮವಂಚನೆಯಾಗುತ್ತದೆ ಅಲ್ಲವೇ? 2020ರಲ್ಲಿ ಜಾಗತಿಕವಾಗಿ ಭಾರತದ ತಲಾ ಆದಾಯವು 197 ದೇಶಗಳ ಪೈಕಿ 142ನೇ ಸ್ಥಾನದಲ್ಲಿ, 2024ರ ವೇಳೆಗೆ 136ನೇ ಸ್ಥಾನದಲ್ಲಿದೆ. ಸರಕಾರದ ದತ್ತಾಂಶದ ಪ್ರಕಾರವೇ ದೇಶದಲ್ಲಿ 25 ಕೋಟಿ ಜನಸಂಖ್ಯೆ ಬಡತನ, ಹಸಿವಿನಿಂದ ಬಳಲುತ್ತಿದ್ದಾರೆ. 80 ಕೋಟಿ ಬಿಪಿಎಲ್ ಕಾರ್ಡುದಾರರಿದ್ದಾರೆ. ಹಾಗಿದ್ದರೆ ಜನತೆಗೆ ಆರ್ಥಿಕವಾಗಿ ಐದನೇ ದೊಡ್ಡ ದೇಶವೆಂದು ದ್ರೋಹ ಬಗೆಯುತ್ತಿದ್ದಾರೆ? ಈ ಪ್ರಶ್ನೆಗೆ ಯಾರು ಉತ್ತರಿಸುತ್ತಾರೆ?
ಕಳೆದ 3 ದಶಕಗಳಿಂದ ಜಿಡಿಪಿ ಕುರಿತು ಅದಕ್ಕೆ ಸಂಬಂಧಿತವಾಗಿ ಅಭಿವೃದ್ಧಿ ಬಗ್ಗೆ, ತಲಾ ವಾರ್ಷಿಕ ಆದಾಯದ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಮೂಲಭೂತವಾಗಿ ಜಿಡಿಪಿಯ ಮೌಲ್ಯಮಾಪನವೇ ದೋಷಪೂರಿತವಾಗಿದೆ. ನವ ಉದಾರೀಕರಣದ ಸಂದರ್ಭದಲ್ಲಿ ಸಾರ್ವಜನಿಕ ಉದ್ಯಮದ ಕಾರ್ಯ ಸಾಧನೆ ಮತ್ತು ಕೃಷಿಯ ಕೊಡುಗೆ ಜಿಡಿಪಿಯ ಬೆಳವಣಿಗೆಯನ್ನು ನಿರ್ಧರಿಸುವುದಿಲ್ಲ. ಇಲ್ಲಿನ ಅತಿ ಶ್ರೀಮಂತರು, ಶ್ರೀಮಂತರು, ಕ್ರೂನಿ ಬಂಡವಾಳಶಾಹಿಗಳ ವ್ಯಾಪಾರ, ಅವರ ಸಾಲ, ಅವರ ಆಸ್ತಿಯ ಮಿಗುತಾಯ ಮೌಲ್ಯ, ಸಂಪತ್ತಿನ ಕ್ರೋಡೀಕರಣ, ಪುನರ್ ಉತ್ಪಾದನೆಯನ್ನು ಆಧರಿಸಿ ದೇಶದ ಅಭಿವೃದ್ಧಿ ಸೂಚ್ಯಂಕವನ್ನು ನಿರ್ಧರಿಸಲಾಗುತ್ತದೆ. ಇದರ ಸಮರ್ಥಕರು ಈ ಮುಕ್ತ ಮಾರುಕಟ್ಟೆ ನೀತಿಯಿಂದ ಉದ್ಯೋಗ ಸೃಷ್ಟಿಯಾಗುತ್ತದೆ, ಆ ಮೂಲಕ ಜನತೆಯ ಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ ಇದು ಜಿಡಿಪಿಯ ಏರಿಕೆಗೆ ಸಹಕಾರಿಯಲ್ಲವೇ ಎಂದು ಪ್ರಶ್ನಿಸುತ್ತಾರೆ.
ಆದರೆ ಭಾರತದಲ್ಲಿ ಖಾಸಗೀಕರಣ, ಬಂಡವಾಳಶಾಹಿ ವ್ಯವಸ್ಥೆ ಬಲಗೊಂಡಷ್ಟು ಉದ್ಯೋಗದ ಪ್ರಮಾಣ ಕುಂಠಿತಗೊಂಡಿದೆ, ನಿರುದ್ಯೋಗದ ಪ್ರಮಾಣ ಹೆಚ್ಚಾಗಿದೆ. ಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿದೆ. ಕಳೆದ ಮೂವತ್ತು ವರ್ಷಗಳ ಅಧಿಕೃತ ದತ್ತಾಂಶ ಮತ್ತು ಜನರ ಬದುಕು ಇದಕ್ಕೆ ಸಾಕ್ಷಿಯಾಗಿದೆ. ಜಿಡಿಪಿ ಪ್ರಮಾಣ ಹೆಚ್ಚಿದಷ್ಟು ರೈತರ ಆತ್ಮಹತ್ಯೆಯೂ ಹೆಚ್ಚಾಗಿದೆ. ಬಡತನ, ಹಸಿವಿನಿಂದ ನರಳುವ ಜನಸಂಖ್ಯೆ ಹೆಚ್ಚಾಗಿದೆ. ಶ್ರೀಮಂತರು ಮತ್ತು ಬಡವರ ನಡುವಿನ ಕಂದರ ಹೆಚ್ಚಾಗಿದೆ. ಬಡಜನರ ಬದುಕನ್ನು ಆಧರಿಸಿ ಜಿಡಿಪಿ ನಿರ್ಧರಿಸುವುದಿಲ್ಲ. ಬದಲಿಗೆ ಅತಿ ಶ್ರೀಮಂತರ ಸಂಪತ್ತು ವೃದ್ಧಿಯನ್ನು ಜಿಡಿಪಿ ಹೆಚ್ಚಳ ಎಂದು ಹೇಳಲಾಗುತ್ತದೆ. ಸಮಾಜದಲ್ಲಿರುವ ಬಡತನ, ನಿರುದ್ಯೋಗವನ್ನು ನೇಪಥ್ಯಕ್ಕೆ ತಳ್ಳಿ ಬಂಡವಾಳಶಾಹಿಗಳ, ಅತಿ ಶ್ರೀಮಂತರ ಸಂಪತ್ತು ಹೆಚ್ಚಿದಂತೆಲ್ಲ ಅದನ್ನು ಆಧರಿಸಿ ಜೆಡಿಪಿ ಹೆಚ್ಚಾಗಿದೆ ಎಂದು ಹೇಳುವ ಈ ಮೌಲ್ಯಮಾಪನ ದೋಷ ಪೂರಿತವಾಗಿರುವಂತಹದ್ದು.
ಮುಖ್ಯವಾಗಿ ಎಲ್‌ಪಿಜಿ ನೀತಿಯಿಂದಾಗಿ ಸಂಪತ್ತಿನ ಅಸಮಾನ ಹಂಚಿಕೆಯಾಗಿದೆ. ಉದಾಹರಣೆಗೆ ಇಪ್ಪತ್ತೈದು ವರ್ಷಗಳ ಹಿಂದೆ 2000ರಲ್ಲಿ ಒಂದು ಕಾರ್ಖಾನೆಯಲ್ಲಿ ಅದರ ವ್ಯವಸ್ಥಾಪಕರ ಸಂಬಳ ರೂ. 20,000 ಆಗಿದ್ದರೆ ಯಂತ್ರದ ಮೇಲೆ ಕೆಲಸ ಮಾಡುವ ಕಾರ್ಮಿಕರ(ಖಾಯಂ) ವೇತನ ಅಂದಾಜು ರೂ. 6,000 ಆಗಿರುತ್ತಿತ್ತು. ಆಗ ಅವರಿಬ್ಬರ ನಡುವಿನ ವ್ಯತ್ಯಾಸ 14,000ರಷ್ಟಿತ್ತು. 2023-24ರಲ್ಲಿ ಒಂದು ಸಂಸ್ಥೆ ಉನ್ನತ ಅಧಿಕಾರಿಯ ಸಂಬಳ ವಾರ್ಷಿಕ ರೂ. 8 ಲಕ್ಷ ಇದ್ದರೆ ಅಲ್ಲಿ ಕೆಲಸ ಮಾಡುತ್ತಿರುವಂತಹ ಕೆಳಹಂತದ ನೌಕರರ(ಖಾಯಂ) ವೇತನ ರೂ. 25,000-30,000ರಷ್ಟಿದೆ. ಈಗ ಇವರಿಬ್ಬರ ನಡುವಿನ ವ್ಯತ್ಯಾಸ ರೂ.7.7 ಲಕ್ಷದಷ್ಟಿದೆ. ಇಬ್ಬರೂ ದಿನಕ್ಕೆ ಕನಿಷ್ಠ ಎಂಟು ಗಂಟೆ ದುಡಿಯುತ್ತಾರೆ. ಆದರೆ ಇಬ್ಬರ ಮಧ್ಯೆ ವೇತನದ ಅಂತರ 30 ಪಟ್ಟು ಹೆಚ್ಚಾಗಿದೆ. ಇಂತಹ ಅಗಾಧ ಅಸಮಾನತೆ ಇರುವವರೆಗೂ ಈ ದೇಶ ಅಭಿವೃದ್ಧಿ ಹೊಂದಿದೆ ಎಂದು ಹೇಳಲು ಸಾಧ್ಯವಿಲ್ಲ. ಮೇಲಿನ ಉದಾಹರಣೆ ಖಾಯಂ ಕಾರ್ಮಿಕರನ್ನು ಒಳಗೊಂಡಿದೆ. ಈಗ ಗುತ್ತಿಗೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅವರ ವೇತನವೂ ಖಾಯಂ ಕಾರ್ಮಿಕರಿಗಿಂತ ಅರ್ಧದಷ್ಟು ಕಡಿಮೆ ಇರುವುದರಿಂದ ಈ ಅಸಮಾನತೆಯ ಅಂತರ ಮತ್ತಷ್ಟು ಹೆಚ್ಚಾಗಿರುತ್ತದೆ.
140 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಪ್ರತೀ ವರ್ಷ ಅಂದಾಜು 80 ಲಕ್ಷ-1 ಕೋಟಿ ಯುವಜನತೆ ವ್ಯಾಸಂಗ ಮುಗಿಸಿ ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುತ್ತಾರೆ. ಸಿಎಂಐಇ(ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ) ಸಂಸ್ಥೆಯ ವರದಿಯ ಪ್ರಕಾರ ಭಾರತದಲ್ಲಿ 2023ರಲ್ಲಿ ಉದ್ಯೋಗದ ಪ್ರಮಾಣ ಶೇ.40ರಷ್ಟಿದೆ. ಅಂದರೆ 56 ಕೋಟಿ ಉದ್ಯೋಗಿಗಳಿದ್ದಾರೆ. ಇದರಲ್ಲಿ ಅನೌಪಚಾರಿಕ, ಅಸಂಘಟಿತ ವಲಯದ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ(ಶೇ. 89). 4.2 ಕೋಟಿ ನಿರುದ್ಯೋಗಿಗಳಿದ್ದಾರೆ. ಅಸಂಘಟಿತ ವಲಯ ಮತ್ತು ಅನೌಪಚಾರಿಕ ವಲಯದಲ್ಲಿ ಕೆಲಸ ಮಾಡುತ್ತಿರುವವರು ಅನಿಶ್ಚತೆಯಲ್ಲಿರುತ್ತಾರೆ. ಸಮಾನ ವೇತನ, ಇತರ ಸೌಲಭ್ಯಗಳಿರುವುದಿಲ್ಲ, ನೌಕರಿ ಭದ್ರತೆ ಇರುವುದಿಲ್ಲ. ಇವರನ್ನು ಉದ್ಯೋಗಿಗಳು ಎಂದು ಹೇಳಲು ಸಾಧ್ಯವಿಲ್ಲ.
ಇದೇ ಸಂಸ್ಥೆಯ ವರದಿಯ ಪ್ರಕಾರ ಜೂನ್ 2024ರಲ್ಲಿ ಶೇ. 9.6ರಷ್ಟು ನಿರುದ್ಯೋಗವಿದ್ದರೆ ಸೆಪ್ಟಂಬರ್ 2024ರಲ್ಲಿ ಶೇ. 7.2ರಷ್ಟು, ನವೆಂಬರ್ 2024ರಲ್ಲಿ ಶೇ. 8.1ರಷ್ಟು ನಿರುದ್ಯೋಗವಿದೆ. ಪುರುಷರ ಪೈಕಿ ಶೇ. 7.7, ಮಹಿಳೆಯರ ಪೈಕಿ ಶೇ.18.8ರಷ್ಟು ನಿರುದ್ಯೋಗಿಗಳಿದ್ದಾರೆ. ಗ್ರಾಮೀಣ ಭಾಗದಲ್ಲಿ ಶೇ.9.3, ನಗರ ಭಾಗದಲ್ಲಿ ಶೇ.8.6ರಷ್ಟು ನಿರುದ್ಯೋಗಿಗಳಿದ್ದಾರೆ. 20-24ನೇ ವಯಸ್ಸಿನವರಲ್ಲಿ ಶೇ.44.49ರಷ್ಟು ನಿರುದ್ಯೋಗಿಗಳು, 25-29ನೇ ವಯಸ್ಸಿನವರಲ್ಲಿ ಶೇ. 14.33ರಷ್ಟು ನಿರುದ್ಯೋಗಿಗಳಿದ್ದಾರೆ. ಈ ದತ್ತಾಂಶದ ಪ್ರಕಾರ ಉದ್ಯೋಗ ಮಾರುಕಟ್ಟೆಯಲ್ಲಿ ಏರಿಳಿತವಾಗುತ್ತಿರುತ್ತದೆ. ಹೊಸಬರು ಬಂದು ಸೇರಿಕೊಂಡಾಗ ಉದ್ಯೋಗದ ಪ್ರಮಾಣ ಹೆಚ್ಚಾಗುತ್ತದೆ ಕೆಲ ತಿಂಗಳು ನಂತರ ಕೆಲಸ ತೊರೆದರೆ ಪ್ರಮಾಣ ಕಡಿಮೆ ಆಗುತ್ತದೆ. ಈ ತರಹದ ಅನಿಶ್ಚಿತತೆ ಅಪಾಯಕಾರಿ. ಇಲ್ಲಿ ನಾವು ಶೇಕಡವಾರು ಲೆಕ್ಕದಲ್ಲಿ ಮಾತನಾಡುತ್ತಿದ್ದೇವೆ. ಈ ಪ್ರಮಾಣವು ಚಿಕ್ಕದಾಗಿ ಕಂಡರೂ ಸಹ ಸಂಖ್ಯೆಯಲ್ಲಿ ಅದು ಬೃಹತ್ತಾಗಿರುತ್ತದೆ. ಭಾರತದ ಜನಸಂಖ್ಯೆ 140 ಕೋಟಿ ಅದರಲ್ಲಿ ಒಂಭತ್ತು ಪರ್ಸೆಂಟ್ ನಿರುದ್ಯೋಗ ಅಂದರೆ 12.6 ಕೋಟಿ, 4.5 ಪರ್ಸೆಂಟ್ ಅಂದರೆ 6.5 ಕೋಟಿ ಆಗುತ್ತದೆ. ದೇಶದ ಭವಿಷ್ಯದ ದೃಷ್ಟಿಯಿಂದ ಈ ಜನಸಂಖ್ಯೆಯ ನಿರುದ್ಯೋಗ ಆತಂಕಕಾರಿಯಾಗಿದೆ.
ಮತ್ತೊಂದೆಡೆ ಶೇ. 57ರಷ್ಟು ಜನಸಂಖ್ಯೆ ಅವಲಂಬಿತವಾಗಿರುವ ಕೃಷಿ ವಲಯದ ಉತ್ಪನ್ನವು ಜಿಡಿಪಿಯ ಶೇ. 17ರಷ್ಟಿದೆ. ಅನೌಪಚಾರಿಕ, ಗುತ್ತಿಗೆ ಉದ್ಯೋಗ ಸೃಷ್ಟಿಸುವ, ಗುಣಮಟ್ಟದ ಉದ್ಯೋಗದ ಪ್ರಮಾಣ ಕಡಿಮೆ ಇರುವ ಸೇವಾ ವಲಯಗಳಾದ ಐಟಿ, ಇ ಕಾಮರ್ಸ್, ಗಿಗ್, ಮುಂತಾದ ವಲಯಗಳ ಉತ್ಪನ್ನವು ಜಿಪಿಡಿಯ ಶೇ. 50ರಷ್ಟಿದೆ. ಉದ್ಯೋಗ ಸೃಷ್ಟಿಸುವ ಉತ್ಪಾದನಾ ವಲಯದ ಉತ್ಪನ್ನ ಜಿಡಿಪಿಯ ಶೇ. 16.4ರಷ್ಟಿದೆ. ಇಂತಹ ಅಸಮಾನತೆಯ ದೇಶ ಅರ್ಥಿಕವಾಗಿ ಸದೃಢವಾಗಿರಲು ಸಾಧ್ಯವೇ?
ಮೇಲಿನ ವಿಶ್ಲೇಷಣೆಯಿಂದ ಜಿಡಿಪಿ ಹೆಚ್ಚಿದಷ್ಟು ನಿರುದ್ಯೋಗ ಕಡಿಮೆ ಆಗುತ್ತದೆ ಎನ್ನುವ ಚಿಂತನೆ ಸುಳ್ಳೆಂದು ಸಾಬೀತಾಗುತ್ತದೆ. ಇಲ್ಲಿ ಎಲ್ಲವೂ ಖಾಸಗೀಕರಣಗೊಳ್ಳುತ್ತಿರುವುದರಿಂದ ಮತ್ತು ಈ ಕಾರಣಕ್ಕೆ ಬಂಡವಾಳಶಾಹಿಗಳ ಸಂಪತ್ತು ಹೆಚ್ಚಾಗುತ್ತಿರುವುದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎನ್ನುವುದು ಒಂದು ಭ್ರಮೆ ಮಾತ್ರ. ಈ ವಿದ್ಯಮಾನವು ಉದ್ಯೋಗರಹಿತ ಅಭಿವೃದ್ಧಿ ಮತ್ತು ಕೃತಕ ಬುದ್ಧಿಮತ್ತೆಯ ಈಗಿನ ಕಾಲಕ್ಕಿಂತಲೂ ಪೂರ್ವದ್ದು ಎನ್ನುವುದನ್ನು ಅರಿತಾಗ ಈಗಿನ ಬಿಕ್ಕಟ್ಟಿನ ಅಂದಾಜು ಗೊತ್ತಾಗುತ್ತದೆ.
ವಿಶ್ವ ಸಂಸ್ಥೆಯು 2015ರಲ್ಲಿ ‘17 ಸುಸ್ಥಿರ ಅಭಿವೃದ್ಧಿ ಗುರಿ’ಗಳನ್ನು ನಿಗದಿಪಡಿಸಿತು. ಅದರಲ್ಲಿ ಮೊದಲನೇ ಗುರಿ ಬಡತನ ನಿರ್ಮೂಲ, ಹತ್ತನೇ ಗುರಿ ದೇಶದೊಳಗೆ ಮತ್ತು ದೇಶಗಳ ನಡುವಿನ ಅಸಮಾನತೆಯನ್ನು ಕಡಿಮೆ ಮಾಡುವುದು. ಆದರೆ national indicator framework baseline (ಎನ್‌ಐಎಫ್‌ಬಿ) ವರದಿಯು ಹೇಳುವಂತೆ ಸಂಪೂರ್ಣ ಜನಸಂಖ್ಯೆಯ ಅಥವಾ ಶೇ.40 ಪ್ರಮಾಣದ ಕೆಳವರ್ಗದ ಕುಟುಂಬಗಳ ತಲಾ ಆದಾಯ ವೆಚ್ಚದ ಬೆಳವಣಿಗೆ ದರವನ್ನು ಅಳೆಯಲು ಅವಶ್ಯಕವಾದ ದತ್ತಾಂಶಗಳು ಭಾರತದ ಸರಕಾರದ ಬಳಿ ಇಲ್ಲ. ಕುಟುಂಬ ವೆಚ್ಚಗಳ ‘ಗಿನಿ ಗುಣಾಂಕ’ ಅಥವಾ ‘ಗಿನಿ ಸೂಚ್ಯಂಕ’ವನ್ನು ಸಂಗ್ರಹಿಸಿಲ್ಲ. (‘ಗಿನಿ ಗುಣಾಂಕ’ವೆಂದರೆ ದೇಶದ ಪ್ರಜೆಗಳ ಆದಾಯ ಅಥವಾ ಸಂಪತ್ತಿನ ಹಂಚಿಕೆಯನ್ನು ಪ್ರತಿನಿಧಿಸುವstatistical dispersionನ ಮಾಪನ. ಇದನ್ನು ಅಸಮಾನ ಹಂಚಿಕೆಯನ್ನು ಅಳೆಯಲು ಬಳಸುತ್ತಾರೆ. ಸರಳ ನುಡಿಯಲ್ಲಿ ಹೇಳುವುದಾದರೆ ‘ಗಿನಿ ಗುಣಾಂಕ’ 0 ಇದ್ದರೆ ಸಂಪತ್ತು ಸಮಾನ ಹಂಚಿಕೆಯಾಗಿದೆ, ಅದು 1 ಇದ್ದರೆ ಒಬ್ಬ ವ್ಯಕ್ತಿಯ ಬಳಿ ಎಲ್ಲಾ ಸಂಪತ್ತು ಸಂಚಯಗೊಂಡಿದೆ). ಸರಾಸರಿ ಕುಟುಂಬ ವೆಚ್ಚದ ಅರ್ಧದಷ್ಟು ಅಥವಾ ಶೇ.50ರಷ್ಟು ಕೆಳಗಿರುವ ಪ್ರಮಾಣದ ಜನಸಂಖ್ಯೆಯ ದತ್ತಾಂಶವೂ ಭಾರತ ಸರಕಾರದ ಬಳಿ ಇಲ್ಲ. ಸಮಾನ ಅವಕಾಶಗಳನ್ನು ಖಾತರಿಪಡಿಸಲು ಮತ್ತು ಅಸಮಾನತೆಯನ್ನು ಕಡಿಮೆಗೊಳಿಸಲು ಅಗತ್ಯವಾದ ರಾಷ್ಟ್ರೀಯ ಸೂಚ್ಯಂಕಗಳನ್ನೂ ಅಬಿವೃದ್ಧಿಪಡಿಸಿಲ್ಲ. ಲಭ್ಯವಿರುವ ಮಾಹಿತಿಯ ಪ್ರಕಾರ ಭಾರತದ ಗಿನಿ ಗುಣಾಂಕ 2.65ರಷ್ಟಿದೆ.
ಅಂಗೈ ಹುಣ್ಣಿಗೆ ನಿಲುಗನ್ನಡಿ ಬೇಕೆ?
ಕನಿಷ್ಠ ತಿಳುವಳಿಕೆ ಇರುವ ಪ್ರಜ್ಞಾವಂತರಿಗೆ ಈ 4+ ಟ್ರಿಲಿಯನ್ ಆರ್ಥಿಕತೆಯ ಮರೆಮೋಸ ಗೊತ್ತಾಗುತ್ತದೆ...
ಮರೆಯುವ ಮುನ್ನ
ನರೇಂದ್ರ ಮೋದಿ ಸರಕಾರವು ಗೌತಮ್ ಅದಾನಿ ಅವರ ಸಾಲದಲ್ಲಿ ಮುಳುಗಿದ ಕಂಪೆನಿಗಳನ್ನು ರಕ್ಷಿಸಲು ಸರಕಾರ ಸ್ವಾಮ್ಯದ ಎಲ್‌ಐಸಿಯ(ಭಾರತೀಯ ಜೀವ ವಿಮಾ ನಿಗಮ) ಹಣವನ್ನು ಬಳಸಿಕೊಂಡು 3.9 ಬಿಲಿಯನ್ ಡಾಲರ್ ಮೌಲ್ಯದ ರಕ್ಷಣಾ ಯೋಜನೆಯನ್ನು ರಹಸ್ಯವಾಗಿ ರೂಪಿಸಿತ್ತು ಎಂಬ ವರದಿ ಬಂದು ಎರಡು ತಿಂಗಳುಗಳ ನಂತರ, ಸರಕಾರವು 3 ಡಿಸೆಂಬರ್ 2025ರಂದು ಸಂಸತ್ತಿನಲ್ಲಿ ನೀಡಿದ ಉತ್ತರದಲ್ಲಿ ಎಲ್‌ಐಸಿಯು ಅದಾನಿ ಗ್ರೂಪ್ ಕಂಪೆನಿಗಳಲ್ಲಿ ಒಟ್ಟಾರೆಯಾಗಿ ರೂ. 48,284.62 ಕೋಟಿ ಹೂಡಿಕೆ ಮಾಡಿದೆ - ಇದರಲ್ಲಿ ರೂ. 38,658.85 ಕೋಟಿ ಷೇರುಗಳಲ್ಲಿ ಮತ್ತು ರೂ. 9,625.77 ಕೋಟಿ ಸಾಲದ ರೂಪದಲ್ಲಿ ಎಂದು ತಿಳಿಸಿದೆ.
ಸೆಪ್ಟಂಬರ್ 30ರವರೆಗಿನ ದತ್ತಾಂಶಗಳ ಆಧಾರದ ಮೇಲೆ ಈ ಲಿಖಿತ ಪ್ರತ್ಯುತ್ತರವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನೀಡಿದ್ದಾರೆ. ಇದರಲ್ಲಿ ಅದಾನಿ ಪೋರ್ಟ್ಸ್ ಆಂಡ್ ಸ್ಪೆಷಲ್ ಇಕಾನಮಿಕ್ ರೆನ್ ಲಿಮಿಟೆಡ್‌ನ secured non-convertible debenturesನಲ್ಲಿ ಎಲ್‌ಐಸಿ ರೂ. 5,000 ಕೋಟಿ ಹೂಡಿಕೆ ಮಾಡಿದೆ ಎಂದು ಹೇಳಲಾಗಿದೆ.
ಸಂಸದರಾದ ಮುಹಮ್ಮದ್ ಜಾವೇದ್ ಮತ್ತು ಮಹುವಾ ಮೊಯಿತ್ರಾ ಅವರು ಕೇಳಿದ ಪ್ರಶ್ನೆಗೆ ಸಲ್ಲಿಸಿದ ಟಿಪ್ಪಣಿಯಲ್ಲಿ ಸರಕಾರವು ಎಲ್‌ಐಸಿ ಯಾವ ಖಾಸಗಿ ಕಂಪೆನಿಗಳಲ್ಲಿ ಹೂಡಿಕೆ ಮಾಡಿದೆ ಎಂಬ ಸಂಪೂರ್ಣ ಪಟ್ಟಿಯನ್ನು ನೀಡಿಲ್ಲ ಮತ್ತು ‘ಎಲ್‌ಐಸಿ ಹೂಡಿಕೆ ಮಾಡಿರುವ ಎಲ್ಲ ಕಂಪೆನಿಗಳ ವಿವರವಾದ, ಸೂಕ್ಷ್ಮ ಪಟ್ಟಿಯನ್ನು ನೀಡುವುದು ವಾಣಿಜ್ಯ ದೃಷ್ಟಿಯಿಂದ ಸೂಕ್ತವಲ್ಲ ಮತ್ತು ಅದು ಎಲ್‌ಐಸಿ ಕಾರ್ಯಾಚರಣೆಯ ಸಾಲದ ಹಿತಾಸಕ್ತಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು’ ಎಂದು ಹೇಳಿದೆ.
ಹೀಗೆ...







