ಭಾರತದ ಕ್ರೀಡಾ ಪ್ರಗತಿ: ಜಾಗತಿಕ ಪ್ರಾಮುಖ್ಯತೆಯ ಹೊಸ ಶಕೆ

PC: Photo Credit : PTI
2030ರ ಕಾಮನ್ವೆಲ್ತ್ ಶತಮಾನೋತ್ಸವ ಕ್ರೀಡಾಕೂಟದ ಆತಿಥ್ಯವನ್ನು ಭಾರತ ವಹಿಸಲಿದೆ ಎಂದು 2025ರ ನವೆಂಬರ್ 26ರಂದು ಬುಧವಾರ ‘ಕಾಮನ್ವೆಲ್ತ್
ಸ್ಪೋರ್ಟ್ಸ್’ ಸಾಮಾನ್ಯ ಸಭೆಯು ಔಪಚಾರಿಕವಾಗಿ ಘೋಷಿಸಿತು. ಇದು ದೇಶದ ಕ್ರೀಡಾ ಪ್ರಯಾಣದಲ್ಲಿ ನಿರ್ಣಾಯಕ ಕ್ಷಣವಾಗಿದೆ. ಇದು ಪ್ರತಿಷ್ಠಿತ ಕ್ರೀಡಾಕೂಟದ ಆತಿಥ್ಯದ ಹಕ್ಕಿಗಿಂತ ಮಿಗಿಲಾದದ್ದು. ಭಾರತವು ಪ್ರಮುಖ ಅಂತರ್ರಾಷ್ಟ್ರೀಯ ಕ್ರೀಡಾಕೂಟಗಳಿಗೆ ಅತ್ಯಂತ ವಿಶ್ವಾಸಾರ್ಹ ಮತ್ತು ಆದ್ಯತೆಯ ಆತಿಥೇಯ ದೇಶಗಳಲ್ಲಿ ಒಂದಾಗಿ ಹೊರಹೊಮ್ಮಿರುವ ಬಗ್ಗೆ ಜಾಗತಿಕ ಅಂಗೀಕಾರಕ್ಕೆ ಇದು ಸೂಚಕವಾಗಿದೆ. ಇದೇ ವೇಳೆ, 2036ರಲ್ಲಿ ‘ಒಲಿಂಪಿಕ್ ಕ್ರೀಡಾಕೂಟ’ವನ್ನು ಆಯೋಜಿಸುವ ತನ್ನ ದೀರ್ಘಕಾಲೀನ ಮಹತ್ವಾಕಾಂಕ್ಷೆಯತ್ತ ಭಾರತ ವಿಶ್ವಾಸದಿಂದ ಮುನ್ನಡೆಯುತ್ತಿದೆ.
ಅಂತರ್ರಾಷ್ಟ್ರೀಯ ಕ್ರೀಡಾ ಸಮುದಾಯದ ಪಾಲಿಗೆ, ಈ ಘೋಷಣೆಯು ಕಳೆದ ದಶಕದಿಂದಲೂ ಸ್ಥಿರವಾಗಿ ರೂಪುಗೊಳ್ಳುತ್ತಿರುವ ವಾಸ್ತವದ ಪುನರುಚ್ಚಾರವಾಗಿದೆ. ಭಾರತವನ್ನು ಈಗ ವಿಶ್ವಾಸಾರ್ಹ, ಅಗಾಧ ಸಾಮರ್ಥ್ಯದ ಮತ್ತು ಕ್ರೀಡಾಪಟು ಕೇಂದ್ರಿತ ಆತಿಥೇಯ ದೇಶವಾಗಿ ವ್ಯಾಪಕವಾಗಿ ಪರಿಗಣಿಸಲಾಗಿದೆ. ಭಾರತವು ಪ್ರಮಾಣ, ದಕ್ಷತೆ ಮತ್ತು ಆತ್ಮೀಯತೆಯೊಂದಿಗೆ ಜಾಗತಿಕ ಮಾನದಂಡಗಳನ್ನು ಮುಟ್ಟಬಲ್ಲದು ಎಂಬ ವಿಶ್ವಾಸ ಮೂಡಿದೆ. ಈ ಖ್ಯಾತಿಯನ್ನು ಜಾಗತಿಕ ಕ್ರೀಡಾ ನಾಯಕರು ಸದಾ ಅಂಗೀಕರಿಸುತ್ತಾರೆ. ಅಂತರ್ರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿಯ ಅಧ್ಯಕ್ಷರು, ವಿಶ್ವ ಪ್ಯಾರಾ ಅತ್ಲೆಟಿಕ್ಸ್ ಚಾಂಪಿಯಶಿಪ್ಗಾಗಿ ಭೇಟಿ ನೀಡಿದ ಸಂದರ್ಭದಲ್ಲಿ, ಪ್ಯಾರಾ-ಕ್ರೀಡೆಯಲ್ಲಿ ಭಾರತದ ಸಾಂಸ್ಥಿಕ ಶ್ರೇಷ್ಠತೆ ಮತ್ತು ತ್ವರಿತ ಪ್ರಗತಿಯನ್ನು ಶ್ಲಾಘಿಸಿದರು. ಹಲವಾರು ಅಂತರ್ರಾಷ್ಟ್ರೀಯ ಮಟ್ಟದ ಖ್ಯಾತ ಕ್ರೀಡಾಪಟುಗಳು ಭಾರತದಲ್ಲಿನ ಸೌಲಭ್ಯಗಳು, ವೈದ್ಯಕೀಯ ಬೆಂಬಲ, ಸ್ಪರ್ಧೆಯ ನಿರ್ವಹಣೆ ಮತ್ತು ಒಟ್ಟಾರೆ ಕ್ರೀಡಾಪಟುಗಳ ಅನುಭವವನ್ನು ಶ್ಲಾಘಿಸಿದ್ದಾರೆ.
ಅಂತೆಯೇ, ವಿಶ್ವ ಬಾಕ್ಸಿಂಗ್ ಅಧ್ಯಕ್ಷರು, ‘ವಿಶ್ವ ಬಾಕ್ಸಿಂಗ್ ಕಪ್ ಫೈನಲ್’ನಲ್ಲಿ ಭಾಗವಹಿಸಲು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ದೇಶವನ್ನು ಜಾಗತಿಕ ಬಾಕ್ಸಿಂಗ್ ನ ಆಧಾರಸ್ತಂಭ ಎಂದು ಬಣ್ಣಿಸಿದರು. ದೇಶದ ವೃತ್ತಿಪರತೆ ಮತ್ತು ಆತಿಥೇಯ ಸಾಮರ್ಥ್ಯಗಳನ್ನು ಶ್ಲಾಘಿಸಿದರು. ಈ ಅಂತರ್ರಾಷ್ಟ್ರೀಯ ಅನುಮೋದನೆಗಳು ಹೆಚ್ಚು ವಿಶಾಲವಾದ ಭಾವನೆಯನ್ನು ಪ್ರತಿಬಿಂಬಿಸುತ್ತವೆ. ಜಾಗತಿಕ ಕ್ರೀಡಾ ಸಮುದಾಯವು ಭಾರತಕ್ಕೆ ಮತ್ತಷ್ಟು ಹೆಚ್ಚಿನ ಮಹತ್ವದ ಕ್ರೀಡಾಕೂಟಗಳ ಆತಿಥ್ಯವನ್ನು ವಹಿಸುವ ಮಟ್ಟಕ್ಕೆ ದೇಶವು ಬೆಳೆದಿದೆ.
ಈ ವಿಶ್ವಾಸವು, ಕ್ರೀಡಾ ಕ್ಷೇತ್ರ ಮತ್ತು ಆರ್ಥಿಕತೆ ಎರಡರಲ್ಲೂ ಪ್ರಧಾನ ಮಂತ್ರಿ ಮೋದಿ ಸರಕಾರದ ಅಡಿಯಲ್ಲಿ ಕಳೆದ ಒಂದು ದಶಕದ ನಿರಂತರ ಪರಿವರ್ತನೆಯ ಫಲಿತಾಂಶವಾಗಿದೆ. ಭಾರತದ ಸಮಗ್ರ ಆರ್ಥಿಕ ಸ್ಥಿರತೆ, ಹೆಚ್ಚುತ್ತಿರುವ ಜಾಗತಿಕ ಆರ್ಥಿಕ ಶ್ರೇಯಾಂಕ ಮತ್ತು ಬಲಿಷ್ಠ ಹಣಕಾಸಿನ ಸ್ಥಿತಿಯು ಕ್ರೀಡಾ ವಲಯದಲ್ಲಿ ದೇಶದ ಇತಿಹಾಸದಲ್ಲೇ ಸಾಟಿಯಿಲ್ಲದ ಪ್ರಮಾಣದ ಹೂಡಿಕೆಯನ್ನು ಸಕ್ರಿಯಗೊಳಿಸಿದೆ. 2013-14ರಲ್ಲಿ ‘ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ’ಕ್ಕೆ 1,093 ಕೋಟಿ ರೂ.ಗಳ ಅನುದಾನ ಮೀಸಲಿರಿಸಲಾಗಿತ್ತು. 2025-26ರಲ್ಲಿ, ಕ್ರೀಡೆಗೆ ಅನುದಾನ ಹಂಚಿಕೆಯು 3,794 ಕೋಟಿ ರೂ.ಗಳಷ್ಟಿದ್ದು, ಇದು ಕೇವಲ ಒಂದು ದಶಕದಲ್ಲಿ ಸುಮಾರು 250 ಪ್ರತಿಶತದಷ್ಟು ಹೆಚ್ಚಳವನ್ನು ಸೂಚಿಸುತ್ತದೆ.
ಹೂಡಿಕೆಯಲ್ಲಿನ ಈ ಹೆಚ್ಚಳವು ರಾಷ್ಟ್ರವ್ಯಾಪಿ ಕ್ರೀಡಾ ಪುನರುತ್ಥಾನಕ್ಕೆ ದಾರಿ ಮಾಡಿದೆ. ‘ಖೇಲೋ ಇಂಡಿಯಾ’ ಮತ್ತು ‘ಅಸ್ಮಿತಾ ಮಹಿಳಾ ಲೀಗ್’ನಂತಹ ಉಪಕ್ರಮಗಳ ಮೂಲಕ ತಳಮಟ್ಟದ ಅಭಿವೃದ್ಧಿಯು ರಾಜ್ಯಗಳಾದ್ಯಂತ ವಿಸ್ತರಿಸಿದೆ. ಜೊತೆಗೆ 1,050ಕ್ಕೂ ಹೆಚ್ಚು ‘ಖೇಲೋ ಇಂಡಿಯಾ ಕೇಂದ್ರ’ಗಳ ಸ್ಥಾಪನೆ ಮಾಡಲಾಗಿದ್ದು, ಈ ಕೇಂದ್ರಗಳು ಜಿಲ್ಲಾ ಮಟ್ಟದಲ್ಲಿ ತರಬೇತಿ ಮತ್ತು ಸೌಲಭ್ಯಗಳಿಗೆ ಪ್ರವೇಶ ಒದಗಿಸುತ್ತವೆ. ಇದೇ ವೇಳೆ, ಭಾರತವು ‘ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್’ ಮತ್ತು ಹೊಸದಾಗಿ ಪರಿಚಯಿಸಲಾದ ‘ಟಾರ್ಗೆಟ್ ಏಶ್ಯನ್ ಗೇಮ್ಸ್ ಗ್ರೂಪ್’ ಮೂಲಕ ದೃಢವಾದ ಉನ್ನತ ಕಾರ್ಯಕ್ಷಮತೆಯ ಮಾರ್ಗಗಳನ್ನು ರೂಪಿಸಿದೆ. ಇವು ಉನ್ನತ ಶ್ರೇಣಿಯ ತರಬೇತಿ, ಕ್ರೀಡಾ ವಿಜ್ಞಾನ, ಪೋಷಣೆ ಮತ್ತು ಕ್ರೀಡಾಪಟುಗಳು ಜಾಗತಿಕವಾಗಿ ತೆರೆದುಕೊಳ್ಳಲು ಅವಕಾಶ ಒದಗಿಸಿವೆ. ಮೂಲಸೌಕರ್ಯವು ಅಭೂತಪೂರ್ವ ವೇಗದಲ್ಲಿ ಬೆಳವಣಿಗೆ ಕಂಡಿದೆ. ದೇಶಾದ್ಯಂತ 350ಕ್ಕೂ ಹೆಚ್ಚು ಪ್ರಮುಖ ಕ್ರೀಡಾ ಸೌಲಭ್ಯಗಳನ್ನು ನಿರ್ಮಿಸಲಾಗಿದೆ ಅಥವಾ ಅವುಗಳ ಕಾಮಗಾರಿ ಪ್ರಗತಿಯಲ್ಲಿದೆ. ಇದು ವಿಶ್ವದರ್ಜೆಯ ಸ್ಪರ್ಧೆಗಳನ್ನು ಬೆಂಬಲಿಸುವ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತಿದೆ. ಈ ಮೂಲಸೌಕರ್ಯ ಅಭಿವೃದ್ಧಿಯು ನಿರ್ದಿಷ್ಟವಾಗಿ ಕೇವಲ ಯಾವುದೋ ಒಂದು ಕ್ರೀಡಾಕೂಟಕ್ಕೆ ಸೀಮಿತವಾಗದೆ, ಸುಸ್ಥಿರ ಮತ್ತು ದೀರ್ಘಕಾಲೀನ ಕ್ರೀಡಾಪಟುಗಳ ಅಭಿವೃದ್ಧಿಗೆ ವೇದಿಕೆ ಒದಗಿಸುತ್ತವೆ. ಮುಂಬರುವ ದಶಕಗಳವರೆಗೆ ತರಬೇತಿ, ಸ್ಪರ್ಧೆಗಳು ಮತ್ತು ಭವಿಷ್ಯದ ಕ್ರೀಡಾ ಅಗತ್ಯಗಳ ಕೇಂದ್ರವಾಗಿ ಇವು ಕಾರ್ಯನಿರ್ವಹಿಸುತ್ತವೆ.
ಭಾರತದ ಕ್ರೀಡಾಕೂಟ ಆತಿಥ್ಯ ಸಾಮರ್ಥ್ಯವು ಹಿಂದಿನ ಸಾಧನೆಗಳ ಹಿನ್ನೆಲೆಯಲ್ಲಿ ಸುಸ್ಪಷ್ಟವಾಗಿದೆ. ಕಳೆದ ದಶಕದಲ್ಲಿ, ‘ಹಾಕಿ ವಿಶ್ವಕಪ್’, ‘ಚೆಸ್ ಒಲಿಂಪಿಯಾಡ್’, ‘ಫಿಫಾ ಅಂಡರ್ -17 ವಿಶ್ವಕಪ್’, ‘ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್’ ಮತ್ತು ‘ಐಸಿಸಿ ಪುರುಷರ ಮತ್ತು ಮಹಿಳಾ ಕ್ರಿಕೆಟ್ ವಿಶ್ವಕಪ್’ ಸೇರಿದಂತೆ 20ಕ್ಕೂ ಹೆಚ್ಚು ನಗರಗಳಲ್ಲಿ 22 ಪ್ರಮುಖ ಅಂತರ್ರಾಷ್ಟ್ರೀಯ ಕ್ರೀಡಾಕೂಟಗಳನ್ನು ದೇಶವು ಯಶಸ್ವಿಯಾಗಿ ಆಯೋಜಿಸಿದೆ. ಇಂತಹ ಪ್ರತಿ ಕ್ರೀಡಾಕೂಟಗಳೂ ಕ್ರೀಡಾಪಟುಗಳು ಮತ್ತು ಅಧಿಕಾರಿಗಳಿಗೆ ಸುರಕ್ಷತೆ, ವೃತ್ತಿಪರತೆ ಮತ್ತು ಸಾಂಸ್ಕೃತಿಕವಾಗಿ ಆತ್ಮೀಯವಾದ ವಾತಾವರಣವನ್ನು ನೀಡಿವೆ. ಅಷ್ಟೇ ಅಲ್ಲದೆ, ಎಲ್ಲವನ್ನೂ ದೊಡ್ಡ ಪ್ರಮಾಣದಲ್ಲಿ ಮತ್ತು ನಿಖರವಾಗಿ ಕಾರ್ಯಗತಗೊಳಿಸುವ ದೇಶವಾಗಿ ಭಾರತದ ಖ್ಯಾತಿಯನ್ನು ಬಲಪಡಿಸಿವೆ. 2029ರಲ್ಲಿ ‘ವಿಶ್ವ ಪೊಲೀಸ್ ಮತ್ತು ಅಗ್ನಿಶಾಮಕ ಕ್ರೀಡಾಕೂಟ’ವನ್ನು ನಿಗದಿಪಡಿಸಲಾಗಿರುವುದರಿಂದ, ಭಾರತವು 2030ರ ‘ಕಾಮನ್ವೆಲ್ತ್ ಗೇಮ್ಸ್’ಗೆ(ಸಿಡಬ್ಲ್ಯುಜಿ) ಮುಂಚಿತವಾಗಿ ತನ್ನ ಬಹು-ಕ್ರೀಡಾ ಸ್ಪರ್ಧೆಯ ಅನುಭವವನ್ನು ಮತ್ತಷ್ಟು ಬಲಪಡಿಸಲಿದೆ.
ಈ ಪರಿವರ್ತನೆಯ ಹೃದಯಭಾಗದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವವಿದೆ. ಅವರು ಕ್ರೀಡೆಯನ್ನು ರಾಷ್ಟ್ರೀಯ ಆದ್ಯತೆಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಮತ್ತು ‘ವಿಕಸಿತ ಭಾರತ 2047’ರ ದೊಡ್ಡ ದೃಷ್ಟಿಕೋನದೊಂದಿಗೆ ಕ್ರೀಡೆಯನ್ನು ಸಂಯೋಜಿಸಿದ್ದಾರೆ. ‘ಖೇಲೋ ಭಾರತ್ ನೀತಿ’ ಮತ್ತು ‘ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ-2025’ನಂತಹ ನೀತಿ ಸುಧಾರಣೆಗಳು ಆಡಳಿತ ರಚನೆಗಳನ್ನು ಆಧುನೀಕರಿಸಿವೆ, ಪಾರದರ್ಶಕತೆಯನ್ನು ಉತ್ತೇಜಿಸಿವೆ ಮತ್ತು ಜಾಗತಿಕ ಉತ್ತಮ ಅಭ್ಯಾಸಗಳಿಗೆ ಹೊಂದಿಕೆಯಾಗುವ ಕ್ರೀಡಾಪಟು-ಮೊದಲ ಕಾರ್ಯವಿಧಾನವನ್ನು ಸಾಧ್ಯವಾಗಿಸಿವೆ. ಈ ಸುಧಾರಣೆಗಳು ಅಂತರ್ರಾಷ್ಟ್ರೀಯ ಒಕ್ಕೂಟಗಳ ದೃಷ್ಟಿಯಲ್ಲಿ ಭಾರತದ ವಿಶ್ವಾಸಾರ್ಹತೆಯನ್ನು ಬಲಪಡಿಸಿವೆ ಜೊತೆಗೆ, ದೇಶವನ್ನು ಜಾಗತಿಕ ಕ್ರೀಡಾ ವ್ಯವಸ್ಥೆಯಲ್ಲಿ ಸಕ್ರಿಯ ಮತ್ತು ಜವಾಬ್ದಾರಿಯುತ ಪಾಲುದಾರರನ್ನಾಗಿ ಮಾಡಿವೆ.
ಆದ್ದರಿಂದ ಭಾರತವನ್ನು 2030ರ ‘ಕಾಮನ್ವೆಲ್ತ್ ಕ್ರೀಡಾಕೂಟ’ದ ಆತಿಥ್ಯ ದೇಶವೆಂದು ಘೋಷಿಸಿರುವುದು ತೀರಾ ಬಿಡಿಯಾದ ಬೆಳವಣಿಗೆಯೇನಲ್ಲ. ಅಥವಾ ಒಂದೇ ಸುಧಾರಣೆ ಅಥವಾ ಒಂದೇ ಒಂದು ಯಶಸ್ಸಿನ ಫಲವಲ್ಲ. ಇದು ಮೂಲಸೌಕರ್ಯದಲ್ಲಿ, ಕ್ರೀಡಾಪಟುಗಳ ಅಭಿವೃದ್ಧಿಯಲ್ಲಿ, ತಳಮಟ್ಟದ ಭಾಗವಹಿಸುವಿಕೆಯಲ್ಲಿ, ಆಡಳಿತ ಸುಧಾರಣೆಗಳಲ್ಲಿ ಮತ್ತು ಕ್ರೀಡಾ ಪರಿಸರ ವ್ಯವಸ್ಥೆಯ ಆರ್ಥಿಕ ಬಲವರ್ಧನೆಯಲ್ಲಿ ಹಲವು ವರ್ಷಗಳ ನಿರಂತರ ಹೂಡಿಕೆಯ ಪರಾಕಾಷ್ಠೆಯಾಗಿದೆ. ವಿಶ್ವದ ಅತ್ಯಂತ ಅನುಕೂಲಕರ ಕ್ರೀಡಾ ರಾಷ್ಟ್ರವಾಗಿ ಭಾರತದ ಸ್ಥಾನವನ್ನು ಭದ್ರಪಡಿಸುವಂತಹ ವ್ಯವಸ್ಥೆಗಳು, ಸಂಸ್ಥೆಗಳು ಮತ್ತು ಸಾಮರ್ಥ್ಯಗಳನ್ನು ನಿರ್ಮಿಸುವ ನರೇಂದ್ರ ಮೋದಿ ಅವರ ಸರಕಾರದ ಒಂದು ದಶಕದ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ.
ಭಾರತ ಆಗಮನಕ್ಕಾಗಿ ಸಜ್ಜಾಗುತ್ತಿಲ್ಲ, ಭಾರತ ಈಗಾಗಲೇ ಆಗಮಿಸಿ ಆಗಿದೆ. ಕಳೆದ ದಶಕದಲ್ಲಿ, ರಾಷ್ಟ್ರವು ಸೀಮಿತ ಮೂಲ ಸೌಕರ್ಯ ಮತ್ತು ವಿರಳ ಫಲಿತಾಂಶಗಳನ್ನು ಹೊಂದಿತ್ತು. ಆ ಸ್ಥಿತಿಯಿಂದ ಪ್ರಸ್ತುತ ಜಾಗತಿಕ ಸ್ಥಾನಮಾನ, ವಿಶ್ವ ದರ್ಜೆಯ ಸೌಲಭ್ಯಗಳು, ಸ್ಥಿರವಾದ ಅಂತರ್ರಾಷ್ಟ್ರೀಯ ಪ್ರದರ್ಶನ ಮತ್ತು ದೇಶದ ಪ್ರತಿಯೊಂದು ಪ್ರದೇಶವನ್ನು ವ್ಯಾಪಿಸಿರುವ ರಚನಾತ್ಮಕ ಕ್ರೀಡಾ ಪರಿಸರ ವ್ಯವಸ್ಥೆಯತ್ತ ದೇಶವು ಪ್ರಗತಿ ಸಾಧಿಸಿದೆ. ‘ಕಾಮನ್ವೆಲ್ತ್ ಕ್ರೀಡಾಕೂಟ-2030’ರ ಘೋಷಣೆಯು ಈ ರೂಪಾಂತರವನ್ನು ಜಗತ್ತು ಔಪಚಾರಿಕವಾಗಿ ಅಂಗೀಕರಿಸುವುದನ್ನು ಸೂಚಿಸುತ್ತದೆ.
ವಿಶ್ವದ ಪ್ರಮುಖ ಕ್ರೀಡಾ ರಾಷ್ಟ್ರಗಳಲ್ಲಿ ಒಂದಾಗಿ ಜಾಗತಿಕ ವೇದಿಕೆಯಲ್ಲಿ ಮಿಂಚಲು ಭಾರತವು ಆರ್ಥಿಕವಾಗಿ, ಸಾಂಸ್ಥಿಕವಾಗಿ ಮತ್ತು ಕ್ರೀಡಾ ದೃಷ್ಟಿಯಿಂದ ಸನ್ನದ್ಧವಾಗಿದೆ.







