ಭಾರತದ ಬುಡಕಟ್ಟು ಪರಂಪರೆ ಮತ್ತು ವೀರರ ಆಚರಣೆ

ಭಾರತದ ಬುಡಕಟ್ಟು ಸಮುದಾಯಗಳು ರಾಷ್ಟ್ರದ ಸಾಮಾಜಿಕ ಮತ್ತು ರಾಜಕೀಯ ಸ್ವರೂಪವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ. ಇತಿಹಾಸದುದ್ದಕ್ಕೂ, ಬುಡಕಟ್ಟು ನಾಯಕರು ವಸಾಹತುಶಾಹಿ ಶೋಷಣೆ ಮತ್ತು ಅನ್ಯಾಯದ ವಿರುದ್ಧ ತಮ್ಮ ಭೂಮಿ, ಸಂಸ್ಕೃತಿ ಮತ್ತು ಘನತೆಯನ್ನು ರಕ್ಷಿಸಲು ಪ್ರಬಲ ಚಳವಳಿಗಳನ್ನು ನಡೆಸಿದ್ದಾರೆ. 18ನೇ ಶತಮಾನದ ಅಂತ್ಯದಿಂದ 20ನೇ ಶತಮಾನದ ಆರಂಭದವರೆಗೆ, ಭಾರತದಾದ್ಯಂತ ವಿವಿಧ ಬುಡಕಟ್ಟು ಸಮುದಾಯಗಳು ತಮ್ಮ ಸಾಂಪ್ರದಾಯಿಕ ಜೀವನ ವಿಧಾನಕ್ಕೆ ಭಂಗ ತರುತ್ತಿದ್ದ ಬ್ರಿಟಿಷ್ ವಸಾಹತುಶಾಹಿ ಆಡಳಿತ, ಸ್ಥಳೀಯ ಜಮೀನುದಾರರು ಮತ್ತು ಲೇವಾದೇವಿಗಾರರ ವಿರುದ್ಧ ದಂಗೆ ಎದ್ದವು.
ಭಗವಾನ್ ಬಿರ್ಸಾ ಮುಂಡಾ ಅವರ ಕೆಚ್ಚೆದೆಯ ಉಲ್ಗುಲಾನ್ ಚಳವಳಿಯಿಂದ ಹಿಡಿದು, ಅಲ್ಲೂರಿ ಸೀತಾರಾಮ ರಾಜು, ತಾಂತಿಯಾ ಭೀಲ್, ವೀರ್ ಗುಂಡಧೂರ್, ರಾಣಿ ಗೈದಿನ್ಲಿಯು, ರಾಮ್ ಜಿ ಗೊಂಡ್, ಶಹೀದ್ ವೀರ್ ನಾರಾಯಣ್ ಸಿಂಗ್, ಸಿಧು-ಕನ್ಹು ಮುಂತಾದವರ ಉಗ್ರ ಪ್ರತಿರೋಧದವರೆಗೆ, ಆದಿವಾಸಿ ಚಳವಳಿಗಳು ಕೇವಲ ಬಿಡಿಬಿಡಿಯಾದ ದಂಗೆಗಳಾಗಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಬದಲಾಗಿ, ಅವು ವಸಾಹತುಶಾಹಿ ದಬ್ಬಾಳಿಕೆಗೆ ಎದುರಾಗಿ ನಿಂತ ನಿರಂತರ ಮತ್ತು ಪ್ರಬಲವಾದ ಪ್ರತಿರೋಧದ ದನಿಗಳಾಗಿದ್ದವು. ಈ ಹೋರಾಟಗಳು ಆದಿವಾಸಿಗಳ ಹಕ್ಕುಗಳನ್ನು ಕಾಪಾಡಿದ್ದು ಮಾತ್ರವಲ್ಲದೆ, ರಾಷ್ಟ್ರದ ಸ್ವಾತಂತ್ರ್ಯ ಮತ್ತು ಸಮಾನತೆಯ ವಿಶಾಲವಾದ ಹೋರಾಟಕ್ಕೂ ಶಕ್ತಿ ತುಂಬಿವೆ.
ಈ ಜನಜಾತೀಯ ನಾಯಕರನ್ನು ಮತ್ತು ಅವರ ಹೋರಾಟವನ್ನು ಗುರುತಿಸುವ ಸಲುವಾಗಿ, 2021ರಲ್ಲಿ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿಯವರು, ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವಾದ ನವೆಂಬರ್ 15 ಅನ್ನು ‘ಜನಜಾತೀಯ ಗೌರವ ದಿವಸ’ ಎಂದು ಆಚರಿಸಲು ಒಂದು ಐತಿಹಾಸಿಕ ನಿರ್ಣಯವನ್ನು ಕೈಗೊಂಡರು. ಈ ಸ್ಮರಣೀಯ ನಿರ್ಧಾರವು ಒಂದು ಮಹತ್ವದ ಮೈಲಿಗಲ್ಲಾಗಿದೆ. ಏಕೆಂದರೆ ಇದು, ತಲೆತಲಾಂತರದ ಆದಿವಾಸಿ ಸ್ವಾತಂತ್ರ್ಯ ಹೋರಾಟಗಾರರ ಶ್ರೀಮಂತ ಪರಂಪರೆ ಮತ್ತು ಹೋರಾಟಗಳ ಕುರಿತು ಹೆಮ್ಮೆಯನ್ನೂ ಹಾಗೂ ಅರಿವನ್ನೂ ಮೂಡಿಸುತ್ತದೆ.
2024ರಲ್ಲಿ ಆರಂಭಗೊಂಡ ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವ ಆಚರಣೆಗಳನ್ನು (ಜನಜಾತೀಯ ಗೌರವ ವರ್ಷ) ಇಂದು ನಾವು ಮುಕ್ತಾಯಗೊಳಿಸುತ್ತಿರುವುದರಿಂದ, ಈ ವರ್ಷದ ಸಂಭ್ರಮಾಚರಣೆಗಳು ಅತ್ಯಂತ ಗಮನಾರ್ಹವಾಗಿವೆ.
ಜನಜಾತೀಯರ ಮಾನ್ಯತೆ : ನನ್ನ ಪಯಣ
ಮಾನ್ಯ ಪ್ರಧಾನಮಂತ್ರಿಗಳಾಗಿದ್ದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ, ಸಂಸತ್ ಸದಸ್ಯನಾಗಿ (ಹನ್ನೆರಡನೇ ಮತ್ತು ಹದಿಮೂರನೇ ಲೋಕಸಭೆ) ಸೇವೆ ಸಲ್ಲಿಸುವ ಸೌಭಾಗ್ಯ ನನಗೆ ಲಭಿಸಿತ್ತು. ಶ್ರೀ ಅಟಲ್ ಜೀ ಯವರ ಕಾಲಘಟ್ಟದಲ್ಲಿಯೇ ‘ಪ್ರತ್ಯೇಕ ಬುಡಕಟ್ಟು ವ್ಯವಹಾರಗಳ ಸಚಿವಾಲಯ’ವನ್ನು ಸ್ಥಾಪಿಸಲಾಯಿತು. ಲೋಕಸಭೆಯ ಸದಸ್ಯನಾಗಿದ್ದ ನಾನು, ಜಾರ್ಖಂಡ್, ಛತ್ತೀಸ್‌ಗಢ ಮತ್ತು ಉತ್ತರಾಖಂಡ ಎಂಬ ಪ್ರತ್ಯೇಕ ರಾಜ್ಯಗಳ ರಚನೆಯನ್ನು ಬೆಂಬಲಿಸಿ ಮತ ಚಲಾಯಿಸಿದ್ದೆ. ನಂತರದ ದಿನಗಳಲ್ಲಿ, ನಾನು ಅದೇ ಜಾರ್ಖಂಡ್ ರಾಜ್ಯದ ರಾಜ್ಯಪಾಲನಾಗಿ ನೇಮಕಗೊಂಡೆ ಎಂಬುದು ನನ್ನ ಅದೃಷ್ಟ.
ಜಾರ್ಖಂಡ್ ರಾಜ್ಯಪಾಲನಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ, ಆ ಮಹಾನ್ ಸ್ವಾತಂತ್ರ್ಯ ಹೋರಾಟಗಾರನಿಗೆ ಗೌರವ ನಮನಗಳನ್ನು ಸಲ್ಲಿಸಲು ನಾನು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮಸ್ಥಳವಾದ ಉಲಿಹಾತುಗೆ ಪ್ರಯಾಣ ಬೆಳೆಸಿದೆನು. ನನಗೆ ನೆನಪಿರುವಂತೆ, ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿಯವರು ಉಲಿಹಾತುಗೆ ಭೇಟಿ ನೀಡಿದ ಮೊತ್ತಮೊದಲ ಪ್ರಧಾನಮಂತ್ರಿಯಾಗಿದ್ದಾರೆ. ಆ ಭೇಟಿಯು ಕೇವಲ ಗೌರವಾರ್ಪಣೆಗಿಂತ ಹೆಚ್ಚಿನದಾಗಿತ್ತು; ಅದೊಂದು ರಾಷ್ಟ್ರೀಯ ತೀರ್ಥಯಾತ್ರೆಯಂತಿತ್ತು, ಅದು ಇಡೀ ದೇಶದ ದೃಷ್ಟಿಯಲ್ಲಿ ಜನಜಾತೀಯರ ಮಹತ್ವವನ್ನು ಪ್ರತಿಪಾದಿಸಿತು. ವಿಶೇಷವಾಗಿ ದುರ್ಬಲವಾಗಿರುವ ಬುಡಕಟ್ಟು ಸಮುದಾಯಗಳನ್ನು ರಕ್ಷಿಸುವ ಮತ್ತು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ‘ಪಿಎಂ - ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ್ (PM-JANMAN)’ ಯೋಜನೆಯನ್ನು ಮಾನ್ಯ ಪ್ರಧಾನಿಯವರು ಖುಂತಿಯಲ್ಲಿ (ಜಾರ್ಖಂಡ್) ಘೋಷಿಸಿದಾಗ, ನಾನೂ ಸಹ ಅವರೊಂದಿಗೆ ಉಪಸ್ಥಿತನಿದ್ದೆ.
ತಮ್ಮ ಇಡೀ ಜೀವನವನ್ನು ಬುಡಕಟ್ಟು ಸಮುದಾಯಗಳ ಉನ್ನತಿಗಾಗಿಯೇ ಮುಡಿಪಾಗಿಟ್ಟ, ಭಾರತದ ಮಾನ್ಯ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರೇ ಈ ಯೋಜನೆಯ ಪರಿಕಲ್ಪನೆಯ ಹಿಂದಿನ ಪ್ರೇರಣೆ ಎಂದು ಮಾನ್ಯ ಪ್ರಧಾನಮಂತ್ರಿಗಳು ಶ್ಲಾಘಿಸಿದ್ದರು.
ಆದಿವಾಸಿ ಕಲ್ಯಾಣದಿಂದ ಆದಿವಾಸಿ ಸಬಲೀಕರಣದತ್ತ ಗಮನ : ಒಂದು ಮಹತ್ವದ ಬದಲಾವಣೆ
ಕಳೆದ ದಶಕದಲ್ಲಿ, ಆದಿವಾಸಿ ಸಮುದಾಯಗಳಿಗಾಗಿ ರೂಪಿಸಲಾಗುವ ನೀತಿ-ರಚನೆಯಲ್ಲಿ ಒಂದು ಮೂಲಭೂತ ಪಲ್ಲಟವಾಗಿರುವುದನ್ನು ನಾನು ಗಮನಿಸಿದ್ದೇನೆ; ಇದು ‘ಕಲ್ಯಾಣ-ಕೇಂದ್ರಿತ’ ಮನೋಭಾವದಿಂದ ‘ಸಬಲೀಕರಣ-ಕೇಂದ್ರಿತ’ ಧೋರಣೆಗೆ ಹೊರಳಿದೆ. 2023ರಲ್ಲಿ ಪ್ರಾರಂಭವಾದ ದಿನದಿಂದ, ಪಿಎಂ-ಜನ್ಮನ್ ಅಭಿಯಾನವು ಅನೇಕ ಮೈಲಿಗಲ್ಲುಗಳನ್ನು ಸಾಧಿಸಿದೆ. 75 ‘ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳನ್ನು’ (PVTGs) ಗುರಿಯಾಗಿಸಿಕೊಂಡ ಈ ಯೋಜನೆಯು, ಅವರನ್ನು ಬಡತನ ರೇಖೆಗಿಂತ ಮೇಲೆತ್ತಲು ಒಂಭತ್ತು ಪ್ರಮುಖ ಸಚಿವಾಲಯಗಳ ಚಟುವಟಿಕೆಗಳನ್ನು ಒಗ್ಗೂಡಿಸುತ್ತದೆ. ಪಕ್ಕಾ ಮನೆ, ರಸ್ತೆ ಸಂಪರ್ಕ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಆರೋಗ್ಯ ಸೌಲಭ್ಯ, ಶಿಕ್ಷಣ, ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು; ಹಾಗೂ ವನ ಧನ ವಿಕಾಸ ಕೇಂದ್ರಗಳ ಮೂಲಕ ಜೀವನಾಧಾರ ಅವಕಾಶಗಳನ್ನು ಕಲ್ಪಿಸುವುದು-ಹೀಗೆ 11 ನಿರ್ಣಾಯಕ ಮಧ್ಯಸ್ಥಿಕೆಗಳ ಮೂಲಕ ಇದನ್ನು ಸಾಧಿಸಲಾಗುತ್ತದೆ. 2023-2024 ರಿಂದ ಮೂರು ಆರ್ಥಿಕ ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಿದ್ದ ಈ ಅಭಿಯಾನವು, ಈಗಾಗಲೇ ಎರಡು ವರ್ಷಗಳ ಅನುಷ್ಠಾನವನ್ನು ಪೂರ್ಣಗೊಳಿಸಿದೆ. ರೂ. 24,104 ಕೋಟಿ ಒಟ್ಟು ಹಂಚಿಕೆಯೊಂದಿಗೆ ಈ ಯೋಜನೆಯು 18 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 207 ಜಿಲ್ಲೆಗಳಲ್ಲಿ ವ್ಯಾಪಿಸಿದ್ದು, ಸುಮಾರು 48.18 ಲಕ್ಷ ಆದಿವಾಸಿಗಳ ಕೊನೆಯ ಮೈಲಿಯನ್ನೂ ತಲುಪುತ್ತಿವೆ.
ಸರಕಾರದ ಮತ್ತೊಂದು ಗಮನಾರ್ಹ ಪ್ರಯತ್ನವೆಂದರೆ ‘ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನ’. ಭಗವಾನ್ ಬಿರ್ಸಾ ಮುಂಡಾ ಅವರ ಹೆಸರಿಡಲಾದ ಈ ಪರಿವರ್ತನಾಶೀಲ ಅಭಿಯಾನದ ಧ್ಯೇಯೋದ್ದೇಶವೆಂದರೆ, 17 ಕೇಂದ್ರ ಸಚಿವಾಲಯಗಳ 25 ಕ್ರಮಗಳ ಸಮನ್ವಯದ ಮೂಲಕ, 63,000ಕ್ಕೂ ಹೆಚ್ಚು ಆದಿವಾಸಿ-ಬಹುಸಂಖ್ಯಾತ ಗ್ರಾಮಗಳಲ್ಲಿ ಮೂಲಭೂತ ಸೇವೆಗಳನ್ನು ಶೇ. 100 ರಷ್ಟು ಪರಿಪೂರ್ಣವಾಗಿ ತಲುಪಿಸುವುದು ಮತ್ತು ಸಮಗ್ರ ಸಾಮಾಜಿಕ-
ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವುದಾಗಿದೆ. ಆದಿವಾಸಿ ಉತ್ಪನ್ನಗಳಿಗೆ ‘ಜಿಯೋಟ್ಯಾಗಿಂಗ್’ ಮಾಡುವುದು, ‘ಆದಿವಾಸಿ ವ್ಯಾಪಾರ ಸಮಾವೇಶ’ ಹಾಗೂ ಸರಕಾರದ ಇಂತಹ ಇತರ ಉಪಕ್ರಮಗಳು, ಬುಡಕಟ್ಟು ಸಮುದಾಯಗಳ ಸಬಲೀಕರಣದ ನಿಟ್ಟಿನಲ್ಲಿ ಇಟ್ಟ ದೃಢವಾದ ಹೆಜ್ಜೆಗಳಾಗಿವೆ. ಸರಕಾರದ ಈ ಪ್ರಯತ್ನಗಳ ಫಲವಾಗಿ, ಆದಿವಾಸಿ ಸಮುದಾಯಗಳು ಕೇವಲ ಪ್ರತ್ಯೇಕಗೊಂಡ ಗುಂಪುಗಳಾಗಿ ಉಳಿಯದೆ, ರಾಷ್ಟ್ರದ ಮುಖ್ಯವಾಹಿನಿಯ ಭಾಗವಾಗಲು ಸಾಧ್ಯವಾಗಿದೆ.
ಆದಿವಾಸಿ ಸಮುದಾಯಗಳ ಸಬಲೀಕರಣದ ಕಡೆಗೆ ನೀತಿಯಲ್ಲಿನ ಈ ಪಲ್ಲಟವನ್ನು ಮನಗಂಡು, ನಾನು ಜಾರ್ಖಂಡ್, ತೆಲಂಗಾಣ ಮತ್ತು ತದನಂತರ ಮಹಾರಾಷ್ಟ್ರ ರಾಜ್ಯಗಳ ರಾಜ್ಯಪಾಲನಾಗಿದ್ದ ಅವಧಿಯಲ್ಲಿ, ಹೆಚ್ಚಿನ ಪ್ರಯೋಜನಗಳು ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ, ಏಕಲವ್ಯ ಮಾದರಿ ವಸತಿ ಶಾಲೆಗಳ ವಿಸ್ತರಣೆಯ ವಿಷಯವನ್ನು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವರೊಂದಿಗೆ ವೈಯಕ್ತಿಕವಾಗಿಯೇ ಪ್ರಸ್ತಾಪಿಸಿದ್ದೆನು. ದೇಶಾದ್ಯಂತ 728 EMR ಶಾಲೆಗಳನ್ನು ಸ್ಥಾಪಿಸಲು ಸರಕಾರವು ಗುರಿ ನಿಗದಿಪಡಿಸಿದೆ ಎಂದು ತಿಳಿಯಲು ನನಗೆ ಅತೀವ ಸಂತಸವಾಗಿದೆ. ಇವುಗಳಲ್ಲಿ ಈಗಾಗಲೇ 479 ಶಾಲೆಗಳು ಕಾರ್ಯಾರಂಭ ಮಾಡಿದ್ದು, ಸುಮಾರು 3.5 ಲಕ್ಷ ಆದಿವಾಸಿ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಬುಡಕಟ್ಟು ನಾಯಕರ ಕಥೆಗಳು ಚಿರಸ್ಥಾಯಿಯಾಗುವಂತೆ ಮಾಡಲು ಸರಕಾರವು ಉಪಕ್ರಮಗಳನ್ನು ಕೈಗೊಂಡಿರುವುದನ್ನು ತಿಳಿದು ನನಗೆ ಸಂತೋಷವಾಗಿದೆ. 10 ರಾಜ್ಯಗಳಲ್ಲಿ ಒಟ್ಟು 11 ಅತ್ಯಾಧುನಿಕ ‘ಆದಿವಾಸಿ ಸ್ವಾತಂತ್ರ್ಯ ಹೋರಾಟಗಾರರ ಸಂಗ್ರಹಾಲಯ’ಗಳಿಗೆ ಮಂಜೂರಾತಿ ನೀಡಲಾಗಿದ್ದು, ಈ ಪೈಕಿ 4 ಸಂಗ್ರಹಾಲಯಗಳನ್ನು ಈಗಾಗಲೇ ಉದ್ಘಾಟಿಸಲಾಗಿದೆ.
ರಾಂಚಿಯಲ್ಲಿರುವ ‘ಭಗವಾನ್ ಬಿರ್ಸಾ ಮುಂಡಾ ಸ್ಮಾರಕ ಉದ್ಯಾನವನ-ಹಾಗೂ-ಸ್ವಾತಂತ್ರ್ಯ ಹೋರಾಟಗಾರರ ಸಂಗ್ರಹಾಲಯ’ಕ್ಕೆ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಭೇಟಿಯ ಸಂದರ್ಭದಲ್ಲಿ ನಾನು ಸಹ ಅವರ ಜೊತೆಗಿದ್ದೆ. ಡಿಜಿಟಲ್ ಹಾಗೂ ತಲ್ಲೀನಗೊಳಿಸುವ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿರುವ ಈ ವಸ್ತುಸಂಗ್ರಹಾಲಯಗಳು, ಇತಿಹಾಸದ ಮಂಕಾದ ಪುಟಗಳಿಗೆ ಜೀವ ತುಂಬುತ್ತಾ, ರಾಷ್ಟ್ರೀಯ ಏಕತೆ ಮತ್ತು ಸ್ವಾತಂತ್ರ್ಯಕ್ಕಾಗಿ ಬುಡಕಟ್ಟು ಸಮುದಾಯ ಮಾಡಿದ ತ್ಯಾಗವನ್ನು ಜೀವಂತ ನಿರೂಪಣೆಗಳ ಮೂಲಕ ಬಿಂಬಿಸುವ ರೋಮಾಂಚಕ ಶೈಕ್ಷಣಿಕ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ.
ಹಿನ್ನುಡಿ
ಬುಡಕಟ್ಟು ನಾಯಕರು ಮತ್ತು ಅವರ ಹೋರಾಟಗಳು ಭಾರತದ ಕಾಡುಗಳು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಸ್ವಾತಂತ್ರ್ಯ ಮತ್ತು ಘನತೆಗಾಗಿ ನಡೆದ ಹೋರಾಟವು ಎಷ್ಟು ಆಳವಾಗಿ ಬೇರೂರಿತ್ತು ಎಂಬುದನ್ನು ಸದಾ ನೆನಪಿಸುತ್ತವೆ. ಅವರ ಧೈರ್ಯ, ತ್ಯಾಗ ಮತ್ತು ಅಚಲವಾದ ಚೈತನ್ಯವು ಇಂದಿಗೂ ರಾಷ್ಟ್ರದಾದ್ಯಂತ ಸಾಮಾಜಿಕ ನ್ಯಾಯ, ಪರಿಸರ ಸಮತೋಲನ ಮತ್ತು ಮಾನವ ಹಕ್ಕುಗಳ ಹೋರಾಟಗಳಿಗೆ ಸ್ಫೂರ್ತಿ ನೀಡುತ್ತಿವೆ.
ಧರ್ತಿ ಆಬಾ ಭಗವಾನ್ ಬಿರ್ಸಾ ಮುಂಡಾ ಅವರು ಕೇವಲ 25 ವರ್ಷಗಳ ಕಾಲ ಬದುಕಿದ್ದರೂ, ಅವರು ಹೊತ್ತಿಸಿದ ದೇಶಪ್ರೇಮದ ಕಿಚ್ಚು ಮುಂದಿನ ಪೀಳಿಗೆಗಳಿಗೆ, ಬಹುಶಃ ಇನ್ನೊಂದು 2,500 ವರ್ಷಗಳವರೆಗೆ, ಉರಿಯುತ್ತಲೇ ಇರುತ್ತದೆ. ಮನುಷ್ಯರು ಬರಬಹುದು, ಮನುಷ್ಯರು ಹೋಗಬಹುದು, ಆದರೆ ಧರ್ತಿ ಆಬಾ ಮತ್ತು ಇತರ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಪರಂಪರೆ ಶಾಶ್ವತವಾಗಿ ಮುಂದುವರಿಯುತ್ತದೆ ಎಂದು ಹೇಳುವುದು ಸೂಕ್ತ.
ಜೈ ಹಿಂದ್! ಜೈ ಭಾರತ್!







