ನಕಲಿ ಜಾತಿ ಸರ್ಟಿಫಿಕೇಟ್‌ಗಳಿಗೆ ಬಲಿಯಾದ ಮುಗ್ಧ ಜೇನುಕುರುಬರು

ಕಾಡುಕುರುಬ, ಜೇನುಕುರುಬ, ಬೆಟ್ಟಕುರುಬ ಎಂಬ ಕಾಡು ಮತ್ತು ಕಾಡಂಚಿನಲ್ಲೇ ಬದುಕಿರುವ ಅಪ್ಪಟ ಆದಿವಾಸಿ ಸಮುದಾಯಗಳ ಹೆಸರಲ್ಲಿ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ನಕಲಿ ಜಾತಿ ಸರ್ಟಿಫಿಕೇಟ್‌ಗಳನ್ನು ನಗರವಾಸಿಗಳು ಪಡೆದು, ಶಿಕ್ಷಣದಲ್ಲಿ ಮೆಡಿಕಲ್, ಇಂಜಿನಿಯರಿಂಗ್ ಸೀಟು ಪಡೆದವರು, ಉದ್ಯೋಗದಲ್ಲಿ ಗೆಝೆಟೆಡ್ ಮತ್ತು ನಾನ್ ಗೆಝೆಟೆಡ್ ಹುದ್ದೆಗಳನ್ನು ಗಿಟ್ಟಿಸಿ ಈ ಅಮಾಯಕ ಜೇನುಕುರುಬ, ಬೆಟ್ಟಕುರುಬ, ಕಾಡುಕುರುಬರಿಗೆ ದಕ್ಕಬೇಕಾದುದನ್ನು ಅಮಾನುಷವಾಗಿ ಕಸಿದವರ ಮೇಲೆ ಸರಕಾರ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ!
ಜೇನುಕುರುಬ, ಬೆಟ್ಟಕುರುಬ, ಕಾಡುಕುರುಬ ಎಂದಾಗಲೆಲ್ಲ ನನ್ನ ಕಣ್ಣ ಮುಂದೆ ಹಾದುಹೋಗುವುದು ನಾಗರಹೊಳೆ, ಕಾಕನಕೋಟೆ, ಕೊಡಗು ಮತ್ತು ಚಾಮರಾಜನಗರಗಳಲ್ಲಿ ನಾನು ನಿರಂತರ ಸುತ್ತಾಡಿದ ಹಾಡಿಗಳು, ಬಡತನದಲ್ಲೂ ತಮ್ಮ ಗುಡಿಸಲುಗಳನ್ನು ಶುಭ್ರವಾಗಿ ಇಟ್ಟುಕೊಂಡ ಕಾಡಂಚಿನ ಕುಟುಂಬಗಳು, ಅವರು ಪ್ರೀತಿಯಿಂದ ಬಡಿಸಿದ ಮೀನು ಸಾರು, ಮುದ್ದೆ ಮತ್ತು ಇದಕ್ಕೆ ವ್ಯತಿರಿಕ್ತವಾಗಿ ಕಣ್ಣಿಗೆ ರಾಚುವ ಅಪೌಷ್ಟಿಕತೆ, ರಕ್ತ ಹೀನತೆಯಿಂದ ನರಳುವಂತಿರುವ ಕಡುಕಪ್ಪನೆಯ ಮನುಷ್ಯ ಆಕೃತಿಗಳು!
ಸುಮಾರು ಎರಡು ದಶಕಗಳಿಂದಲೂ ನನಗೆ ಜೇನು ಕುರುಬ ಸಮುದಾಯದ ನಿಕಟ ಸಂಪರ್ಕವಿದೆ. ಜೇನುಕುರುಬರ ಚಿಕ್ಕಣ್ಣ, ಸುರೇಶ, ವಿನೋದ ಮುಂತಾದ ಅನೇಕ ಅಪ್ಪಟ ಆದಿವಾಸಿ ಮುಖಚರ್ಯೆಯ ಹುಡುಗರು, ಸಣ್ಣಪುಟ್ಟ ಸಾಲಸೋಲ, ಸಹಾಯಗಳಿಗಾಗಿ ನಮ್ಮ ಕಚೇರಿಗೆ ಬರುತ್ತಾರೆ. ನಮ್ಮ ಅಲೆಮಾರಿ ಬುಡಕಟ್ಟು ಮಹಾಸಭಾದಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಇವರಿಗೆ ಒಂದಷ್ಟು ಸವಲತ್ತುಗಳೂ ದೊರಕಿವೆ. ನಮ್ಮೆಲ್ಲರ ಪ್ರಯತ್ನದಿಂದ ನಮ್ಮ ಜೇನುಕುರುಬ ಚಿಕ್ಕಣ್ಣ ಕರ್ನಾಟಕ ಸರಕಾರದ, ಅರಣ್ಯ ಇಲಾಖೆಯ ವನ್ಯಜೀವಿ ಮಂಡಲಿಯ ಸದಸ್ಯ ಮತ್ತು ಸ್ಥಾಯಿ ಸಮಿತಿಯ ಸದಸ್ಯರೂ ಆಗಿದ್ದಾರೆ. ವನ್ಯಜೀವಿ ಮಂಡಲಿಯ ಅಧ್ಯಕ್ಷರು ಮುಖ್ಯಮಂತ್ರಿಯೇ ಆಗಿರುತ್ತಾರೆ ಎನ್ನುವುದು ಗಮನಾರ್ಹ! ಎಷ್ಟೇ ಬೇಡವೆಂದರೂ ಈ ಜೇನುಕುರುಬ ಹುಡುಗರಾದ ವಿನೋದ, ಸುರೇಶ ಪ್ರೀತಿಯಿಂದ ತಂದುಕೊಡುವ ಕಾಡಜೇನು, ಕಳಲೆ, ನೆಲ್ಲಿಕಾಯಿಗಳು ನನ್ನನ್ನು ಮೂಖನಾಗಿಸುತ್ತವೆ.
ಭಾರತ ಸರಕಾರ ‘ಆದಿಮ ಬುಡಕಟ್ಟು’ (primitive tribe)ಎಂದು ಗುರುತಿಸಿರುವ ಜೇನುಕುರುಬರು ಶತಶತಮಾನಗಳಿಂದಲೂ ಕಾಡನ್ನೇ ನಂಬಿ ಇಂದಿಗೂ ದಟ್ಟ ಕಾಡಿನ ನಡುವೆಯೇ ಬದುಕುವ ಅಪಾರ ಇಚ್ಛೆಯುಳ್ಳವರಾಗಿದ್ದಾರೆ. ಕಾಡಿನ ನಡುವೆಯ ನಿರಂತರ ಅನುಸಂಧಾನದಲ್ಲಿ ಅವರದೇ ಆದ ಆಚರಣೆ, ನಂಬಿಕೆ, ದೈವದ ಪರಿಕಲ್ಪನೆ, ಕೊಂತ ಪೂಜೆ, ಆತ್ಮ ಮತ್ತು ಗಾಳಿಯನ್ನು ಕರೆಯುವ ವಿಧಾನಗಳು ಅತ್ಯಂತ ವಿಶಿಷ್ಟವಾಗಿವೆ. ಇವರು ವಾಸಿಸುವ ಕಾಡಿನ ವಾಸಸ್ಥಳ ಮತ್ತು ಸೀಮೆಯ ಕುರಿತ ಆದಿಮ ನಂಬಿಕೆಗಳಿಗೆ ಇವರನ್ನು ಒಕ್ಕಲೆಬ್ಬಿಸುವ ಸರಕಾರದ ಅಮಾನುಷ ಕ್ರಮಗಳು ಆಗಾಗ ಧಕ್ಕೆಯನ್ನುಂಟು ಮಾಡುತ್ತಿವೆ.
ನಗರೀಕರಣದ ಲವಲೇಶವೂ ಗೊತ್ತಿಲ್ಲದ ಈ ಬುಡಕಟ್ಟು ಇಂದಿಗೂ ಕಾಡನ್ನೇ ನಂಬಿ ಆಹಾರ ಸಂಗ್ರಹಣೆಯ ಮೂಲಕವೇ ತನ್ನ ಬದುಕನ್ನು ಕಟ್ಟಿಕೊಳ್ಳುವ ಹಂತದಲ್ಲೇ ಇದೆ ಎಂಬುದು ನಿಜಕ್ಕೂ ಆತಂಕ ಮೂಡಿಸುವಂತಹದ್ದು. ಕಾಡಿನಲ್ಲಿ ಬದುಕಲು ಬಿಡದ ಸರಕಾರಗಳ ಕಟ್ಟುನಿಟ್ಟಿನ ಕ್ರಮಗಳ ನಡುವೆಯೂ ಇಂದಿಗೂ ಜೇನಿಗಾಗಿ ಅಲೆಯುತ್ತಾ ಅರಣ್ಯದ ಕಿರು ಉತ್ಪನ್ನಗಳನ್ನು ಸಂಗ್ರಹಿಸುತ್ತಾ ಹೇಗೋ ಬದುಕುಳಿಯುತ್ತಿದ್ದಾರೆ.
ಕರ್ನಾಟಕದ ಮೈಸೂರು, ಚಾಮರಾಜನಗರ, ಕೊಡಗು ಮತ್ತು ಸ್ವಲ್ಪ ಮಟ್ಟಿಗೆ ಹಾಸನ ಜಿಲ್ಲೆಗಳಲ್ಲಿ ಜೇನುಕುರುಬರ ಹಾಡಿಗಳಿವೆ. ಮೈಸೂರು ಜಿಲ್ಲೆಯ ಪಿರಿಯಾ ಪಟ್ಟಣ, ಹುಣಸೂರು, ನಂಜನಗೂಡು ಮತ್ತು ಹೆಗ್ಗಡದೇವನ ಕೋಟೆಗಳಲ್ಲಿ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ಹಾಸನ ಜೆಲ್ಲೆಯ ಅರಕಲಗೂಡು ಮತ್ತು ಸಕಲೇಶಪುರ, ಕೊಡಗಿನ ವಿರಾಜಪೇಟೆ, ಸೋಮವಾರಪೇಟೆಗಳಲ್ಲಿ ಇವರು ವಾಸಿಸುತ್ತಿದ್ದಾರೆ.
ಮೂಲ ನಿವಾಸಿ ಬುಡಕಟ್ಟು ಸಮುದಾಯವೆಂದೇ ಪರಿಗಣಿಸಲಾದ ಜೇನುಕುರುಬ ಸಮುದಾಯವನ್ನು ಅತ್ಯಂತ ದುರ್ಬಲ ಬುಡಕಟ್ಟು ಗುಂಪಿಗೂ ಸೇರಿಸಲಾಗಿದೆ (PVTG) ಕರ್ನಾಟಕದಲ್ಲಿ ಒಟ್ಟಾರೆ 80,000ದಿಂದ ಒಂದು ಲಕ್ಷ ಜನಸಂಖ್ಯೆಯನ್ನು ಹೊಂದಿರಬಹುದಾದ ಈ ಸಮುದಾಯವು ಬಂಡಿಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಅಂದರೆ ತಮ್ಮ ತಲಾಂತರಗಳಿಂದಲೂ ಜೀವಿಸುತ್ತಾ, ಅಲ್ಲೇ ಸಿಗುವ ಉತ್ಪನ್ನಗಳನ್ನೇ ಜೀವನಕ್ಕಾಗಿ ಅವಲಂಬಿಸಿಕೊಂಡು ಬದುಕನ್ನು ಕಟ್ಟಿಕೊಂಡಿರುತ್ತಾರೆ. ಜೇನುಕುರುಬ, ಬೆಟ್ಟಕುರುಬ, ಕಾಡುಕುರುಬ ಎನ್ನಲಾಗುವ ಈ ಸಮುದಾಯದ ಮೂಲ ಕಸುಬು ಬೇಟೆಯಾಡುವುದು, ಜೇನು ಸಂಗ್ರಹಿಸುವುದು, ಗೆಡ್ಡೆಗೆಣಸುಗಳನ್ನು ಅಗೆದು ಆಹಾರವನ್ನಾಗಿ ಸೇವಿಸುತ್ತಾ ಕಾಲಾಂತರಗಳಿಂದಲೂ ಬದುಕಿರುವುದು, ಈ ಸಮುದಾಯ ಅತಿಹೆಚ್ಚು ಕಾಡನ್ನೇ ನಂಬಿ ಕಾಡಲ್ಲೇ ಸದಾ ಬದುಕುವುದರಿಂದ ಆನೆಯ ತುಳಿತಕ್ಕೆ, ಹುಲಿ ಚಿರತೆಗಳ ದಾಳಿಗೆ ಸಿಕ್ಕಿ ಅತಿಹೆಚ್ಚು ಸಾವುನೋವಿಗೆ ಈಡಾಗಿದ್ದಾರೆ. ಅಂತೆಯೇ ಎಸ್ಟೇಟ್‌ಗಳ ಮಾಲಕರಿಂದ ನಿರಂತರ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಜೇನುಕುರುಬರು ಅನುಭವಿಸಿದ ಚಿತ್ರಹಿಂಸೆಗಳು ಒಂದೆರಡಲ್ಲ, 2010ರಲ್ಲಿ ಎಚ್. ಡಿ. ಕೋಟೆಯ ಜಿ.ಎಂ. ಹಳ್ಳಿ ಹಾಡಿಯ ರಾಜು ಮೊದಲು ಗುಂಡಿನ ದಾಳಿಗೆ ಬಲಿಯಾದ, 2011 ರ ಹುಣಸೆಕುಪ್ಪೆ ಹಾಡಿಯ ಭೀಮಸೇನ ಹಾಗೂ ಅವನ ತಮ್ಮನ ಮೇಲಾದ ಗುಂಡಿನ ದಾಳಿ, 2021- 22ರಲ್ಲಿ ಹೊಸಹಳ್ಳಿ ಕರಿಯಪ್ಪನ ಲಾಕಪ್ ಡೆತ್ ಪ್ರಕರಣಗಳು ಈ ಸಮುದಾಯದವರು ಮುಖ್ಯವಾಹಿನಿಗೆ ಬರಲು ಅಡ್ಡಿಯಾಗುತ್ತಿವೆ.
ಜೇನುಕುರುಬರು ಒಂದು ಕಾಲದಲ್ಲಿ ಕುಮ್ರಿ ಬೇಸಾಯವನ್ನೂ ಮಾಡುತ್ತಿದ್ದರಂತೆ. ಜೇನುಹುಳದ ಹಾರುವಿಕೆಯ ಗತಿಯನ್ನು ಗುರುತಿಸಿ ಜೇನು ಇರುವ ದಿಕ್ಕನ್ನು ಕಂಡುಕೊಳ್ಳುತ್ತಾರೆ. ಗಾಳಿಯಲ್ಲಿ ಬರುವ ಕಾಡುಪ್ರಾಣಿಗಳ ವಾಸನೆಯನ್ನೇ ಹಿಡಿದು ಬೇಟೆ ಮಾಡಬೇಕಾದ ಪ್ರಾಣಿಯ ಇರುವಿಕೆಯನ್ನು ಗುರುತಿಸುತ್ತಾರೆ. ಹೀಗೆ ಕಾಡಿನ ಅತಿಸೂಕ್ಷ್ಮ ಚಲನವಲನಗಳನ್ನು ತಮ್ಮ ಸಾಂಪ್ರದಾಯಿಕ ಜ್ಞಾನದಿಂದ ಅರಿಯುವ ಸೂಕ್ಷ್ಮಮತಿಗಳಿವರು. ಒಂದು ಕಾಲದಲ್ಲಿ ಕಾಡನ್ನೇ ಆಳುವ ರಾಜರಂತಿದ್ದವರು.
ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಇವರ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ! ಕಾಡನ್ನು ರಕ್ಷಿಸುವ ನೆಪದಲ್ಲಿ ಸರಕಾರಗಳಿಂದ ಹಲವು ಕಾಯ್ದೆ ಮತ್ತು ಕಾನೂನುಗಳನ್ನು ಇವರ ಮೇಲೆ ಅಮಾನುಷವಾಗಿ ಹೇರಲಾಯಿತು, ಉದಾಹರಣೆಗೆ 1972ರ ವನ್ಯಜೀವಿ ಸಂರಕ್ಷಣೆ ಕಾಯ್ದೆ ಬಂದ ನಂತರ ಈ ಸಮುದಾಯವು ಮೂರು ವರ್ಗಗಳಾಗಿ ಹರಿದು ಹಂಚಿಹೋಗಿದೆ, ಉದಾಹರಣೆಗೆ:
1) 1972ರಲ್ಲಿ ಕಾಡಿನಿಂದ ಹೊರದೂಡಲ್ಪಟ್ಟ ಶೇ.60 ಜೇನುಕುರುಬ, ಕಾಡುಕುರುಬ, ಬೆಟ್ಟಕುರುಬ ಸಮುದಾಯವು ಅರಣ್ಯದಿಂದ ಹೊರಬಂದು ಅರಣ್ಯದ ಅಂಚಿನಲ್ಲಿ ಮತ್ತು ನಾಗರಿಕ ಸಮಾಜದ ಒಡನಾಟದಲ್ಲೇ ಹೊರಗಿನವರಾಗಿಯೇ ಬದುಕು ಕಟ್ಟಿಕೊಂಡಿದೆ.
2) 2006ರ ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳ ಮಾನ್ಯ ಮಾಡುವ ಅರಣ್ಯಕ್ಕೂ ಈ ಕಾಯ್ದೆ ಜಾರಿಯಾದ ನಂತರ ಶೇ. ಹತ್ತರಷ್ಟು ಜನರನ್ನು ಪುನರ್ವಸತಿ ಹೆಸರಿನಲ್ಲಿ ನಾಗಪುರದ ಏಳು ಬ್ಲಾಕ್‌ಗಳಿಗೆ ಸ್ಥಳಾಂತರಿಸಲಾಯಿತು. ಶೆಟ್ಟಳ್ಳಿ, ಲಕ್ಕಪಟ್ಣ, ಹೆಬ್ಬಾಳ ಹಾಗೂ ಎಚ್.ಡಿ. ಕೋಟೆ ತಾಲೂಕಿನ ಬಸವನಗಿರಿ ಹಾಡಿ ಮತ್ತು ಸೊಳ್ಳೆಪುರ ಹಾಡಿಗಳಲ್ಲಿ ಪುನರ್ವಸತಿ ಹೆಸರಿನಲ್ಲಿ ಇವರನ್ನು ಸ್ಥಳಾಂತರಿಸಲಾಯಿತು.
3. ಈಗಲೂ ಕೂಡ ಅರಣ್ಯದಲ್ಲೇ ವಾಸಿಸುತ್ತಿರುವ ಈ ಸಮುದಾಯ ಅರಣ್ಯ ಹಕ್ಕು ಕಾಯ್ದೆ 2006ರ ಕನಸು ಕಟ್ಟಿಕೊಂಡೇ ಬದುಕನ್ನು ಕಳೆಯುತ್ತಿದೆ! ಶೇ.30ರಷ್ಟು ಈ ಸಮುದಾಯ ಇಂದಿಗೂ ಕೂಡ ತನ್ನತನವನ್ನು ಬಿಡದೆ ಕಾಡಿನಲ್ಲಿಯೇ ಜೀವಿಸಲು ಹೆಣಗಾಡುತ್ತಿದೆ.
ಜೇನು ಕುರುಬ ಸಮುದಾಯವು ಇಂದು ನಿಜಕ್ಕೂ ಕೆರೆಯಿಂದ ಹೊರ ಹಾಕಿದ ಮೀನಿನಂತೆ ಜೀವಿಸುತ್ತಿದೆ, ಅತ್ತ ಕಾಡೂ ಇಲ್ಲ ಇತ್ತ ನಾಡೂ ಇಲ್ಲ. ಜೀವನ ನಿರ್ವಹಿಸಲು ವಿಧಿಯಿಲ್ಲದೆ ಕಾಫಿ ಮತ್ತು ಟೀ ಎಸ್ಟೇಟ್‌ಗಳಲ್ಲಿ ಕೂಲಿ ಮಾಡುತ್ತಾ ಕಾಫಿ ತೋಟದ ಮಾಲಕರ ಲೈನ್ ಮನೆಗಳಲ್ಲಿ ಜೀತದಾಳುಗಳಾಗಿ ದುಡಿದು ಜೀವನ ನಿರ್ವಹಿಸುತ್ತಿದ್ದಾರೆ. ಇವರನ್ನು ಮುಖ್ಯವಾಹಿನಿಗೆ ತರಲೆಂದು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದರು. ಇವೆಲ್ಲ ಕಾಗದದ ಮೇಲೆ ಮಾತ್ರ ಇವೆ! ಇವು ಯಾವುವೂ ಇಂದಿಗೂ ಅನುಷ್ಠಾನಕ್ಕೆ ಬರಲಿಲ್ಲ. ಈ ಸಮುದಾಯಗಳಿಗಾಗಿ ಮೀಸಲಿಟ್ಟ ಕೋಟಿಗಟ್ಟಲೆ ಹಣವನ್ನು ಅಧಿಕಾರಿಗಳು, ರಾಜಕಾರಣಿಗಳು, ಬ್ರೋಕರ್‌ಗಳು ತಿಂದು ನೀರು ಕುಡಿದಿದ್ದಾರೆಯೇ ಹೊರತು ಈ ನತದೃಷ್ಟ ಸಮುದಾಯಕ್ಕೆ ಒಂದು ಬಿಡಿಗಾಸೂ ಸಿಕ್ಕಿಲ್ಲ! ಈ ಕಾರಣದಿಂದಲೇ ಇವರ ಬದುಕುಗಳು ಇನ್ನೂ ಹೀಗೇ ನಿರ್ಗತಿಕವಾಗಿಯೇ ಇವೆ, ಅಂತೆಯೇ ಜೇನು ಕುರುಬ ಸಮುದಾಯದಲ್ಲಿ ಒಬ್ಬ ಡಾಕ್ಟರ್ ಆಗಲಿ, ಒಬ್ಬ ವಕೀಲರಾಗಲಿ, ಉನ್ನತ ಹುದ್ದೆಯಲ್ಲಿರುವ ಒಬ್ಬ ಅಧಿಕಾರಿಯಾಗಲಿ ಕಾಣಸಿಗಲ್ಲ! ಸರಕಾರದ ಉನ್ನತ ಹುದ್ದೆಗಳನ್ನು ಇವರ ಹೆಸರಲ್ಲಿ ನಕಲಿ ಸರ್ಟಿಫಿಕೇಟ್ ಪಡೆದ ನಗರವಾಸಿಗಳು ಕಸಿದು ಅನುಭವಿಸುತ್ತಿದ್ದಾರೆ.
ಜೇನುಕುರುಬ, ಕಾಡುಕುರುಬ, ಬೆಟ್ಟಕುರುಬರನ್ನು ಮೈಸೂರು ದಸರಾದ ಆನೆ ಮಾವುತ ಮತ್ತು ಕಾವಡಿಗಳನ್ನಾಗಿ ಮಾತ್ರ ಬಳಸಿಕೊಂಡು ಸರಕಾರ ಇವರ ಶ್ರಮದಲ್ಲಿ ವಿಶ್ವದಾದ್ಯಂತ ಖ್ಯಾತಿ ಪಡೆಯುತ್ತಿದೆ! ಇಂದಿಗೂ ಭೂತಗನ್ನಡಿ ಹಾಕಿ ಹುಡುಕಿದರೂ ಅರಣ್ಯ ಇಲಾಖೆಯ ಉನ್ನತ ಹುದ್ದೆಗಳಲ್ಲಿ ಈ ಸಮುದಾಯದವರು ಒಬ್ಬರೂ ಇಲ್ಲ. ಗ್ರೂಪ್ ‘ಡಿ’ಯಲ್ಲಿ ಹಾಗೂ ಆಶ್ರಮ ಶಾಲೆಗಳಲ್ಲಿ ತಾತ್ಕಾಲಿಕ ಅಡುಗೆಯವರಾಗಿ, ಅಡುಗೆ ಸಹಾಯಕರಾಗಿ ಮತ್ತು ಅರಣ್ಯ ಇಲಾಖೆಯಲ್ಲಿ ತಾತ್ಕಾಲಿಕ ದಿನಗೂಲಿ ನೌಕರರನ್ನಾಗಿ ಇವರನ್ನು ನೋಡಲು ಮಾತ್ರ ಸಾಧ್ಯ!. ನಕಲಿ ಸರ್ಟಿಫಿಕೇಟ್ ಗಳ ಮತ್ತು ಪ್ರಭಾವಿ, ಸಂಘಟಿತ ‘ಆದಿವಾಸಿ’ ಪಟ್ಟಿಯಲ್ಲಿರುವ ಬಲಿಷ್ಠರ ಪೈಪೋಟಿಯಲ್ಲಿ ಜೇನುಕುರುಬರು ನೌಕರಿ ಪಡೆದುಕೊಳ್ಳುವುದು ಮರೀಚಿಕೆಯಾಗಿಯೇ ಉಳಿದಿದೆ.
ಕಾಡುಕುರುಬ, ಜೇನುಕುರುಬ, ಬೆಟ್ಟಕುರುಬ ಎಂಬ ಕಾಡು ಮತ್ತು ಕಾಡಂಚಿನಲ್ಲೇ ಬದುಕಿರುವ ಅಪ್ಪಟ ಆದಿವಾಸಿ ಸಮುದಾಯಗಳ ಹೆಸರಲ್ಲಿ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ನಕಲಿ ಜಾತಿ ಸರ್ಟಿಫಿಕೇಟ್‌ಗಳನ್ನು ನಗರವಾಸಿಗಳು ಪಡೆದು, ಶಿಕ್ಷಣದಲ್ಲಿ ಮೆಡಿಕಲ್, ಇಂಜಿನಿಯರಿಂಗ್ ಸೀಟು ಪಡೆದವರು, ಉದ್ಯೋಗದಲ್ಲಿ ಗೆಝೆಟೆಡ್ ಮತ್ತು ನಾನ್ ಗೆಝೆಟೆಡ್ ಹುದ್ದೆಗಳನ್ನು ಗಿಟ್ಟಿಸಿ ಈ ಅಮಾಯಕ ಜೇನುಕುರುಬ, ಬೆಟ್ಟಕುರುಬ, ಕಾಡುಕುರುಬರಿಗೆ ದಕ್ಕಬೇಕಾದುದನ್ನು ಅಮಾನುಷವಾಗಿ ಕಸಿದವರ ಮೇಲೆ ಸರಕಾರ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ! ಸದಾ ಇಂತಹ ಕಟ್ಟಕಡೆಯ ಸಮುದಾಯಗಳ ಕುರಿತು ವೇದಿಕೆಗಳ ಮೇಲೆ ಮಾತನಾಡುವ, ‘ಸಾಮಾಜಿಕ ನ್ಯಾಯದ ಹರಿಕಾರ’ರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಮ್ಮ ಕಣ್ಣ ಮುಂದೆಯೇ ನಡೆಯುತ್ತಿರುವ ಈ ‘ಸಾಮಾಜಿಕ ಅನ್ಯಾಯ’ ಕಾಣದಿರುವುದು ನಿಜಕ್ಕೂ ಸೋಜಿಗ..!!







