ಶ್ರೀ ಗುರು ಬಸವೇಶ್ವರ ದೇವಸ್ಥಾನಕ್ಕೆ ಬೆಳ್ಳಿ ಬಾಗಿಲು ಅಳವಡಿಕೆ: ಭಕ್ತರ ಕನಸು ನನಸಾಗುವುದೇ?
ಅರ್ಧಕ್ಕೆ ನಿಂತ ಕಾಮಗಾರಿ; ಬೆಳ್ಳಿ ಇದ್ದರೂ ಬಾಗಿಲಿಗೆ ಇನ್ನೂ ಬೆಳ್ಳಿ ಭಾಗ್ಯ ಇಲ್ಲ!

ಕೊಟ್ಟೂರು: (ವಿಜಯನಗರ) ಕ್ಷೇತ್ರನಾಥ ಶ್ರೀಗುರುಬಸವೇಶ್ವರ ಸ್ವಾಮಿ ದೇವಸ್ಥಾನವು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಗ್ರೇಡ್-1 ದೇವಸ್ಥಾನವಾಗಿದ್ದು, ಪ್ರತಿವರ್ಷ ನಡೆಯುವ ರಥೋತ್ಸವಕ್ಕೆ ನಾಡಿನಾದ್ಯಂತ ಲಕ್ಷಾಂತರ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆಯುತ್ತಾರೆ. ಇಂತಹ ಪ್ರಸಿದ್ಧ ಕ್ಷೇತ್ರದ ಮುಖ್ಯದ್ವಾರಕ್ಕೆ ಬೆಳ್ಳಿ ಬಾಗಿಲು ನಿರ್ಮಿಸುವ ಯೋಜನೆ ಹಲವು ವರ್ಷಗಳಿಂದ ಭಕ್ತರ ನಿರೀಕ್ಷೆಯಾಗಿ ಉಳಿದಿದೆ.
ದೇವಸ್ಥಾನದ ದ್ವಾರಕ್ಕೆ ಬೆಳ್ಳಿ ಬಾಗಿಲು ನಿರ್ಮಿಸುವ ಕಾಮಗಾರಿ ಆರಂಭಗೊಂಡು ಅರ್ಧಕ್ಕೆ ಸ್ಥಗಿತಗೊಂಡಿದೆ ಎನ್ನಲಾಗಿದ್ದು, ಇದರಿಂದ ಭಕ್ತರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಬಾಗಿಲು ನಿರ್ಮಾಣಕ್ಕೆ ಅಗತ್ಯವಾದ ಬೆಳ್ಳಿ ಲಭ್ಯವಿದ್ದರೂ ಕಾಮಗಾರಿ ಪೂರ್ಣಗೊಳ್ಳದಿರುವುದಕ್ಕೆ ಕಾರಣವೇನು ಎಂಬ ಪ್ರಶ್ನೆ ಭಕ್ತರನ್ನು ಕಾಡುತ್ತಿದೆ.
ಬೆಳ್ಳಿ ಬಾಗಿಲು ನಿರ್ಮಾಣಕ್ಕೆ ಲಕ್ಷಾಂತರ ರೂಪಾಯಿ ಮೊತ್ತದ ಟೆಂಡರ್ ಪ್ರಕ್ರಿಯೆ ನಡೆದಿದ್ದರೂ, ಇಲ್ಲಿಯವರೆಗೆ ದೇವಸ್ಥಾನದ ದ್ವಾರಕ್ಕೆ ಬೆಳ್ಳಿ ಬಾಗಿಲು ಅಳವಡಿಕೆಯಾಗದಿರುವುದು ಚರ್ಚೆಗೆ ಗ್ರಾಸವಾಗಿದೆ. ಕಾಮಗಾರಿ ಯಾವ ಹಂತದಲ್ಲಿದೆ?, ಎಷ್ಟು ಪ್ರಮಾಣದ ಬೆಳ್ಳಿ ಲಭ್ಯವಿದೆ?, ಟೆಂಡರ್ ಮೊತ್ತ ಎಷ್ಟು?, ಕಾಮಗಾರಿ ಸ್ಥಗಿತಕ್ಕೆ ಕಾರಣವೇನು? ಎಂಬ ಪ್ರಶ್ನೆಗಳಿಗೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಂಬಂಧಿಸಿದ ಅಧಿಕಾರಿಗಳು ಸ್ಪಷ್ಟನೆ ನೀಡಬೇಕೆಂಬುದು ಕೇಳಿಬರುತ್ತಿದೆ.
ಈ ಹಿಂದೆ ದೇವಸ್ಥಾನದ ದ್ವಾರದಲ್ಲಿದ್ದ ಹಿತ್ತಾಳೆಯ ಬಾಗಿಲು ಭಕ್ತರ ಗಮನ ಸೆಳೆಯುವಂತಿತ್ತು. ಅದನ್ನು ತೆರವುಗೊಳಿಸಿ ತೇಗದ ಬಾಗಿಲು ಅಳವಡಿಸಲಾಗಿದ್ದು, ಅದಕ್ಕೆ ಬೆಳ್ಳಿಯ ಲೇಪನ ಅಥವಾ ಬೆಳ್ಳಿ ಅಲಂಕಾರ ಮಾಡುವ ಪ್ರಕ್ರಿಯೆ ಯಾವಾಗ ಮುಗಿಯಲಿದೆ ಎಂಬುದೇ ಭಕ್ತರ ಪ್ರಶ್ನೆಯಾಗಿದೆ.
ಗ್ರೇಡ್-1 ದೇವಸ್ಥಾನವಾಗಿರುವ ಶ್ರೀಗುರುಬಸವೇಶ್ವರ ಸ್ವಾಮಿ ಕ್ಷೇತ್ರದ ಅಭಿವೃದ್ಧಿ ಹಾಗೂ ಸೌಂದರ್ಯೀಕರಣಕ್ಕೆ ಸಂಬಂಧಿಸಿದ ಕಾಮಗಾರಿಗಳು ಯಾವುದೇ ಕಾರಣಕ್ಕೂ ಅನಗತ್ಯವಾಗಿ ವಿಳಂಬವಾಗಬಾರದು. ಅರ್ಧಕ್ಕೆ ನಿಂತಿರುವ ಬೆಳ್ಳಿ ಬಾಗಿಲಿನ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ, ಬಹುದಿನಗಳ ನಿರೀಕ್ಷೆ ಈಡೇರಿಸಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.
ಟೆಂಡರ್ ನಿಯಮಗಳನ್ವಯ ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ಒಪ್ಪಿಕೊಂಡಿದ್ದರೂ, ಬೆಳ್ಳಿ ಬಾಗಿಲು ಕಾಮಗಾರಿ ಇನ್ನೂ ಪೂರ್ಣಗೊಳ್ಳದೆ ವಿಳಂಬವಾಗುತ್ತಿರುವುದು ಯಾಕೆ ಎಂಬ ಪ್ರಶ್ನೆ ಭಕ್ತರಿಂದ ಕೇಳಿಬಂದಿದೆ.
ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಬೆಳ್ಳಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಟೆಂಡರ್ ಮಾಡಲಾಗಿದೆ. ಆದಷ್ಟು ಬೇಗ ಬೆಳ್ಳಿ ಬಾಗಿಲು ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಟಿ.ಕೊಟ್ರೇಶ ತಿಳಿಸಿದ್ದಾರೆ.
ದೇವಸ್ಥಾನದ ಆಡಳಿತ ಸ್ಪಷ್ಟ ಉತ್ತರ ನೀಡುವುದರ ಜೊತೆಗೆ, ಬೆಳ್ಳಿ ಬಾಗಿಲು ನಿರ್ಮಾಣದ ಕಾಮಗಾರಿಗೆ ನಿಗದಿತ ಕಾಲಮಿತಿ ಪ್ರಕಟಿಸಬೇಕೆಂಬುದು ಭಕ್ತರ ನಿರೀಕ್ಷೆಯಾಗಿದೆ ಎಂದು ಪ್ರದೀಪ್, ರಮೇಶ್ ಹೇಳಿದರು.






