ದಲಿತ ವಿದ್ಯಾರ್ಥಿಗಳ ಸಾಂಸ್ಥಿಕ ಹತ್ಯೆ: ಜಾತಿ ಶ್ರೇಣೀಕರಣದ ಮರುಸೃಷ್ಟಿ

ಭಾಗ- 1
The value of a man was reduced to his immediate identity. And nearest possibility. To a vote. To a number. To a thing.
-ರೋಹಿತ್ ವೇಮುಲಾ
ಜಾತಿ ದೌರ್ಜನ್ಯದ ಕೂಪಗಳಾದ ವಿ.ವಿ. ಕ್ಯಾಂಪಸ್
ಇಪ್ಪತ್ತೊಂದನೇ ಶತಮಾನದ ಆರಂಭದಿಂದಲೂ ಭಾರತದ ವಿಶ್ವವಿದ್ಯಾನಿಲಯಗಳಲ್ಲಿ ದಲಿತ ವಿದ್ಯಾರ್ಥಿಗಳ ಸಾಂಸ್ಥಿಕ ಹತ್ಯೆಗಳು ನಡೆಯುತ್ತಿವೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅದರಲ್ಲಿಯೂ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ (ಸ್ಟೆಮ್) ವ್ಯಾಸಂಗ ಮಾಡುತ್ತಿರುವ ದಲಿತರ ಆತ್ಮಹತ್ಯೆಗಳನ್ನು ವಿವರವಾಗಿ ಪರಿಶೀಲಿಸಿದಾಗ ಭಾರತದ ಇಡೀ ಶಿಕ್ಷಣ ವ್ಯವಸ್ಥೆಯು ಪ್ರತ್ಯೇಕತೆ ಮತ್ತು ತಾರತಮ್ಯದ ತಡೆಗೋಡೆಗಳನ್ನು ನಿರ್ಮಿಸಿ ಜಾತಿ ಹಿಂಸೆ ಮತ್ತು ವರ್ಗ ಅಸಮಾನತೆಗಳನ್ನು ಮತ್ತಷ್ಟು ಬಲಗೊಳಿಸಿರುವುದು ಸ್ಪಷ್ಟವಾಗುತ್ತದೆ. ಇಲ್ಲಿ ಜಾತಿಯು ಒಂದು ವ್ಯವಸ್ಥೆಯಾಗಿ ಕೆಲಸ ಮಾಡುತ್ತಿರುತ್ತದೆ. ಶಿಕ್ಷಣ ಸಂಸ್ಥೆಗಳಲ್ಲಿ, ವಿ.ವಿ.ಗಳಲ್ಲಿ, ಕ್ಯಾಂಪಸ್‌ಗಳಲ್ಲಿ ಜಾತಿ ವೈರುಧ್ಯಗಳನ್ನು ಕತ್ತರಿಸಿ ಎಲ್ಲರನ್ನೂ ಒಳಗೊಳ್ಳುವ ಪ್ರಜ್ಞೆಯನ್ನು ರೂಪಿಸಬೇಕಾದ ಇಲ್ಲಿನ ವ್ಯವಸ್ಥೆ ಮತ್ತು ಆಡಳಿತ ವರ್ಗ ತಾನೇ ಸ್ವತಃ ಈ ಬ್ರಾಹ್ಮಣಶಾಹಿಯ ಬಲೆಯಿಂದ ಹೊರಬರಲು ವಿಫಲವಾಗಿವೆ. ಈ ಜಾತಿ, ಧರ್ಮದ ಸಾಮಾಜಿಕ ಒಳರಚನೆಗಳು ದಲಿತರ ಆರ್ಥಿಕ, ಶೈಕ್ಷಣಿಕ ಮೇಲ್ಮುಖ ಚಲನೆಯನ್ನು ನಿಯಂತ್ರಿಸುತ್ತವೆ, ಸಾಧ್ಯವಾದರೆ ಚಿವುಟಿ ಹಾಕುತ್ತವೆ. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಬಂಡವಾಳದಿಂದ ವಂಚಿತರಾಗಿರುವ ದಲಿತರು ಸ್ಟೆಮ್ ವಿಷಯಗಳಲ್ಲಿ ಕಲಿಯುವುದನ್ನು, ವಿಜ್ಞಾನ, ತಂತ್ರಜ್ಞಾನದ ಹೊಸ ಆವಿಷ್ಕಾರಗಳ ಕುರಿತು ಜ್ಞಾನ ಸಂಪಾದನೆಗೆ ತೊಡಗಿಕೊಳ್ಳುವುದನ್ನು, ಪಿಎಚ್.ಡಿ ಅಧ್ಯಯನ ಮಾಡುವುದನ್ನು ಬಲಪಂಥೀಯ ಸಾಮಾಜಿಕ-ರಾಜಕೀಯ ವ್ಯವಸ್ಥೆ ಇಂದಿಗೂ ಮಾನ್ಯ ಮಾಡುವುದಿಲ್ಲ. ಇದರ ವಿರುದ್ಧ ತಮ್ಮೊಳಗಿನ ಅಸಹನೆಯನ್ನು ತಾರತಮ್ಯ ಮತ್ತು ಪ್ರತ್ಯೇಕತೆಯ ಮೂಲಕ ವ್ಯಕ್ತಪಡಿಸುವ ಬ್ರಾಹ್ಮಣಶಾಹಿ ಮನಸ್ಸು ಪರೋಕ್ಷವಾಗಿ ದಲಿತ ವಿದ್ಯಾರ್ಥಿಗಳ ಸಾವಿಗೆ ಕಾರಣವಾಗುತ್ತಿದೆ. ಇದಕ್ಕೆ ಜ್ವಲಂತ ಉದಾಹರಣೆ ರೋಹಿತ್‌ವೇಮುಲಾ ಅವರ ಸಾಂಸ್ಥಿಕ ಹತ್ಯೆ. ಇದು ಇಲ್ಲಿಗೆ ನಿಲ್ಲಲಿಲ್ಲ. ಮೊನ್ನೆ ಕಲಬುರಗಿಯ ಕೇಂದ್ರೀಯ ವಿ.ವಿ.ಯಲ್ಲಿ ಒಡಿಶಾ ಮೂಲದ ದಲಿತ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಹಿಂದೆ ಪಾಯಲ್ ದೇವಿ, ದರ್ಶನ್ ಸೋಳಂಕಿ ಹೀಗೆ ಪಟ್ಟಿ ಮುಂದುವರಿಯುತ್ತದೆ.
ಪ್ರೊ. ಸುಕುಮಾರ್ ಅವರು ತಮ್ಮ ‘ಕ್ಯಾಸ್ಟ್ ಆಂಡ್ ದ ಅಕಾಡಮಿ’ಯ(ಪುಟ 30) ಪುಸ್ತಕದಲ್ಲಿ ‘19 ಜುಲೈ 2011ರಂದು ಯುಜಿಸಿ ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆ ಕುರಿತು ಎಲ್ಲಾ ವಿ.ವಿ.ಗಳ ಕುಲಸಚಿವರಿಗೆ ಎಚ್ಚರಿಸಿ ಸುತ್ತೋಲೆ ಹೊರಡಿಸುತ್ತಾರೆ. 2007-2011ರ ನಾಲ್ಕು ವರ್ಷಗಳ ಅವಧಿಯಲ್ಲಿ ವೃತ್ತಿಪರ ಕೋರ್ಸ್(ಇಂಜಿನಿಯರಿಂಗ್, ವೈದ್ಯಕೀಯ, ವಿಜ್ಞಾನ) ವ್ಯಾಸಂಗ ಮಾಡುತ್ತಿರುವ 20 ದಲಿತ ವಿದ್ಯಾರ್ಥಿಗಳು ತಾರತಮ್ಯ, ಅಸ್ಪಶ್ಯತೆ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶ್ರೀಕಾಂತ್ (ಬಿಟೆಕ್, ಐಐಟಿ ಬಾಂಬೆ), ಅಜಯ್ ಎಸ್.ಚಂದ್ರ(ಪಿಎಚ್.ಡಿ., ಐಐಎಸ್‌ಸಿ ಬೆಂಗಳೂರು), ಜಸ್‌ಪ್ರೀತ್ ಸಿಂಗ್(ಎಂಬಿಬಿಎಸ್, ಸರಕಾರಿ ವೈದ್ಯಕೀಯ ಕಾಲೇಜ್, ಚಂಡಿಗಢ), ಸೆಂತಿಲ್ ಕುಮಾರ್(ಪಿಎಚ್.ಡಿ., ಭೌತ ವಿಜ್ಞಾನ ಕಾಲೇಜು, ಹೈದರಾಬಾದ್), ಪ್ರಶಾಂತ್ ಕುರೀಲ್(ಬಿಟೆಕ್, ಐಐಟಿ, ಕಾನ್ಪುರ್), ಜಿ. ಸುಮನ್(ಎಂಟೆಕ್., ಐಐಟಿ ಕಾನ್ಪುರ್), ಅಂಕಿತ ವೆಗ್ಧ(ಬಿಎಸ್‌ಸಿ ನರ್ಸಿಂಗ್, ಸಿಂಘಿ ಇನ್‌ಸ್ಟಿಟ್ಯೂಟ್ ನರ್ಸಿಂಗ್, ಅಹ್ಮದಾಬಾದ್), ಡಿ. ಶ್ಯಾಮಸುಂದರ್(ಬಿಟೆಕ್, ಸರೋಜಿನಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಟೆಕ್ನಾಲಜಿ ವಿಜಯವಾಡ), ಎಸ್. ಅಮರಾವತಿ(ಸೆಂಟರ್ ಆಫ್ ಎಕ್ಸಲೆನ್ಸಿ, ಸ್ಪೋರ್ಟ್ಸ್ ಅಥಾರಿಟಿ ಆಂಧ್ರಪ್ರದೇಶ), ಬಂಡಿ ಅನುಶ(ಬಿಕಾಂ, ವಿಲ್ಲಾ ಮೇರಿ ಕಾಲೇಜ್ ಹೈದರಾಬಾದ್), ಪುಷ್ಪಾಂಜಲಿ ಪೂರ್ತಿ(ಎಂಬಿಎ, ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ., ಬೆಂಗಳೂರು), ಸುಶೀಲ್ ಕುಮಾರ್ ಚೌಧುರಿ(ಎಂಬಿಬಿಎಸ್, ಛತ್ರಪತಿ ಶಿವಾಜಿ ಮಹಾರಾಜ್ ವಿ.ವಿ. ಲಕ್ನೊ), ಬಾಲಮುಕುಂದ್ ಭರ್ತಿ(ಎಂಬಿಬಿಎಸ್, ಏಮ್ಸ್ ಹೊಸದಿಲ್ಲಿ), ಜೆ.ಕೆ. ರಮೇಶ್(ಬಿಎಸ್‌ಸಿ, ಕೃಷಿ ವಿಜ್ಞಾನ ವಿ.ವಿ. ಬೆಂಗಳೂರು), ಮಾಧುರಿ ಸಾಳೆ(ಬಿಟೆಕ್, ಐಐಟಿ ಖರಗಪುರ್), ಜಿ.ವರಲಕ್ಷ್ಮಿ(ಬಿಟೆಕ್, ವಿಜ್ಞಾನ್ ಇಂಜಿನಿಯರಿಂಗ್ ಕಾಲೇಜ್ ಹೈದರಾಬಾದ್), ಮನೀಶ್ ಕುಮಾರ್(ಬಿ.ಟೆಕ್., ಐಐಟಿ ರೂರ್ಕಿ), ಲಿನೇಶ್ ಮೋಹನ್ ಗಾವ್ಳೆ(ಪಿಎಚ್.ಡಿ., ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಮ್ಯುನಾಲಜಿ ಹೊಸದಿಲ್ಲಿ), ರೆಜಾನಿ ಎಸ್. ಅನಂದ್(ಐಎಚ್‌ಆರ್‌ಡಿ, ಇಂಜಿನಿಯರಿಂಗ್ ಕಾಲೇಜ್ ಅಡೂರ್, ಕೇರಳ) ಜನವರಿ 2016ರಲ್ಲಿ ತಮಿಳುನಾಡಿನಲ್ಲಿ ಹೋಮಿಯೋಪತಿ ವ್ಯಾಸಂಗ ಮಾಡುತ್ತಿದ್ದ ಮೂವರು ಮಹಿಳಾ ವಿದ್ಯಾರ್ಥಿಗಳು ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಮೇಲಿನ ಜಾತಿ ದೌರ್ಜನ್ಯದ ಕುರಿತು, ದುಬಾರಿ ಶುಲ್ಕದ ಕುರಿತು ಸಂಸ್ಥೆಯ ಅಧ್ಯಕ್ಷರಿಗೆ, ಆಡಳಿತ ಮಂಡಳಿಗೆ ಮತ್ತು ಸರಕಾರಿ ಅಧಿಕಾರಿಗಳಿಗೆ ಅನೇಕ ಪತ್ರಗಳನ್ನು ಬರೆದಿದ್ದಾರೆ. ಆದರೆ ಅದು ಅರಣ್ಯರೋದನವಾಗಿತ್ತು. 6 ಫೆಬ್ರವರಿ 2013ರಂದು ಪಾಟ್ನಾ ವಿ.ವಿ.ಯ ಭೀಮರಾವ್ ಅಂಬೇಡ್ಕರ್ ವೆಲ್‌ಫೇರ್ ಹಾಸ್ಟೆಲ್‌ನ ವಿದ್ಯಾರ್ಥಿಗಳು ಮೇಲ್ಜಾತಿ ಹಿಂದೂ ಸಮಾಜದಿಂದ ಹಲ್ಲೆ, ಟೀಕೆಗಳಿಗೆ ಒಳಗಾಗಬೇಕಾಯಿತು. ಅವರ ಜಾತಿ ಹಿನ್ನೆಲೆಯನ್ನು ನೆನಪು ಮಾಡಿಕೊಡುತ್ತ ‘‘ನೀವು ಹರಿಜನರು, ನಿಮಗೆ ಓದಲು, ಬರೆಯಲು ಯಾವುದೇ ಹಕ್ಕುಗಳಿಲ್ಲ, ಶೂ, ಚಪ್ಪಲಿ ಹೊಲಿಯುವುದು ನಿಮ್ಮ ಕೆಲಸ, ನಮ್ಮ ಮನೆಗಳಲ್ಲಿ ನಿಮ್ಮನ್ನು ಕೆಲಸಕ್ಕಿಟ್ಟುಕೊಳ್ಳುತ್ತೇವೆ, ಹಾಸ್ಟೆಲ್ ಬಿಡದೇ ಹೋದರೆ ಹತ್ಯಾಕಾಂಡ ನಡೆಸುತ್ತೇವೆ’’ ಎಂದು ಕ್ರೌರ್ಯ ಪ್ರದರ್ಶಿಸಿದರು ಎಂದು ಬರೆಯುತ್ತಾರೆ. ಐಐಟಿ ಸಂಸ್ಥೆಗಳಲ್ಲಿ ಪೋಷಕರ ನಿರೀಕ್ಷೆಯ ಜೊತೆಗೆ ಜಾತಿ ಪ್ರತ್ಯೇಕತೆ ಮತ್ತು ತಾರತಮ್ಯದ ಕಾರಣಕ್ಕೆ ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದೇಶದ ಇತರ ಭಾಗಗಳ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇದೇ ಮಾದರಿಯ ತಾರತಮ್ಯ, ದೌರ್ಜನ್ಯಗಳು ನಡೆದಿವೆ. ಅನೇಕ ಪ್ರಕರಣಗಳು ಬೆಳಕಿಗೆ ಬಂದಿಲ್ಲ.
ಸೆಪ್ಟಂಬರ್ 4, 2014ರಂದು ಬಾಂಬೆ ಐಐಟಿ ವಿದ್ಯಾರ್ಥಿ ಅನಿಕೇತ್ ಅಂಭೋರೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೇ 22, 2019ರಂದು ವೈದ್ಯಕೀಯ ವಿದ್ಯಾರ್ಥಿ ಪಾಯಲ್ ತಾವಡೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫೆಬ್ರವರಿ 12, 2023ರಂದು ಬಾಂಬೆ ಐಐಟಿ ವಿದ್ಯಾರ್ಥಿ ದರ್ಶನ್ ಸೋಳಂಕಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಜುಲೈ 10, 2023ರಂದು ಆಯುಶ್ ಆಶ್ನ, ಸೆಪ್ಟಂಬರ್ 1, 2023ರಂದು ಅನಿಲ್ ಕುಮಾರ್ ಎಂಬ ಇಬ್ಬರು ದಿಲ್ಲಿ ಐಐಟಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2007-2011ರ ಅವಧಿಯಲ್ಲಿ ಸುಮಾರು 20 ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ‘ಪ್ರತಿಭೆಯ ಸಾವು’ ಎನ್ನುವ ಸಾಕ್ಷ್ಯಚಿತ್ರದಲ್ಲಿ ವಿವರಿಸಲಾಗಿದೆ. ಕೇಂದ್ರ ಬಿಜೆಪಿ ಸರಕಾರದ ಶಿಕ್ಷಣ ಮಂತ್ರಿಯಾಗಿದ್ದ ಧರ್ಮೇಂದ್ರ ಪ್ರಧಾನ್ ಅವರು 2014-2021ರ ಅವಧಿಯಲ್ಲಿ ಐಐಟಿ, ಐಐಎಂ, ಎನ್‌ಐಟಿ ಶಿಕ್ಷಣ ಸಂಸ್ಥೆಗಳಲ್ಲಿ 122 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇವರಲ್ಲಿ 68 ದಲಿತ ವಿದ್ಯಾರ್ಥಿಗಳಿದ್ದಾರೆ ಎಂದು ಹೇಳಿದ್ದಾರೆ. ದರ್ಶನ ಸೋಳಂಕಿ ಆತ್ಮಹತ್ಯೆ ಕುರಿತು ರಚಿಸಲಾದ ಸಮಿತಿಯು ತನಗೆ ಕಡಿಮೆ ಅಂಕಗಳನ್ನು ಬಂದಿರುವ ಕಾರಣದಿಂದ ಆತ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿ ನೀಡಿದೆ. ಸೂಕ್ಷ್ಮ ಸಂವೇದನೆಯಿಲ್ಲದೆ, ಇಲ್ಲಿನ ಜಾತಿ ವ್ಯವಸ್ಥೆಯ ಕರಾಳತೆಯ ಅರಿವಿಲ್ಲದ ಈ ಸಮಿತಿಯು ಆತ್ಮಹತ್ಯೆಯನ್ನು ತುಂಬಾ ಸಾಧಾರಣ ಮಟ್ಟದಲ್ಲಿ ಗ್ರಹಿಸಿರುವುದು ಸ್ಪಷ್ಟವಾಗುತ್ತದೆ. ಇದು ಅಕ್ಷಮ್ಯ ಅಪರಾಧವಾಗಿದೆ.
ಮೋದಿ ನೇತೃತ್ವದ ಮೊದಲ ಸರಕಾರದ (2014-19) ಆರಂಭದ ಎರಡು ವರ್ಷಗಳ ಕಾಲ ಶಿಕ್ಷಣ ಮಂತ್ರಿಯಾಗಿದ್ದ ಸ್ಮತಿ ಇರಾನಿ ತಮ್ಮ ಆರೆಸ್ಸೆಸ್ ನಾಯಕರು ಮತ್ತು ಎಬಿವಿಪಿ ಸಂಘಟನೆಯೊಂದಿಗೆ ಸಮಾಲೋಚಿಸಿ ಯುಜಿಸಿ ಯೋಜನೆಯ ಅಡಿಯಲ್ಲಿ ಎಂಫಿಲ್ ಮಾಡುತ್ತಿರುವ ವಿದ್ಯಾರ್ಥಿಗಳ ವಿದ್ಯಾರ್ಥಿವೇತನವನ್ನು ರದ್ದುಗೊಳಿಸಿದ್ದರು. ಇದಕ್ಕೆ ಸೂಕ್ತ ಕಾರಣಗಳನ್ನು ಕೊಡದಿದ್ದರೂ ಇದರ ಗುಪ್ತ ಕಾರ್ಯಸೂಚಿಯ ಕಾರ್ಯತಂತ್ರದ ಅನುಸಾರ ಸಂಶೋಧನಾ ವಿದ್ಯಾರ್ಥಿಗಳು ಎಡಪಂಥೀಯ ಚಿಂತನೆಗಳನ್ನು, ಸಿದ್ಧಾಂತಗಳನ್ನು ಮತ್ತು ಚಾತುರ್ವರ್ಣ ವಿರುದ್ಧದ ಪಠ್ಯಗಳನ್ನು ಅಧ್ಯಯನ ಮಾಡುತ್ತಾರೆ, ಇದು ಬ್ರಾಹ್ಮಣೀಕರಣವನ್ನು ಆಧರಿಸಿದ ಹಿಂದೂ ರಾಷ್ಟ್ರೀಯತೆಗೆ ಮಾರಕ ಎನ್ನುವ ದುರಾಲೋಚನೆಯಿಂದ ಸ್ಕಾಲರ್‌ಶಿಪ್‌ನ್ನು ಮೊಟಕುಗೊಳಿಸಿದ್ದರು. ಆ ಮೂಲಕ ವಿದ್ಯಾರ್ಥಿಗಳ ವ್ಯಾಸಂಗದ ಸ್ವಾತಂತ್ರ್ಯವನ್ನೇ ತಡೆಹಿಡಿದಿದ್ದರು. ಹತ್ತು ವರ್ಷಗಳ ಹಿಂದೆ ಕೇಂದ್ರದಲ್ಲಿ ಬಂಡವಾಳಶಾಹಿ, ಹಿಂದುತ್ವದ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರ ವಹಿಸಿಕೊಂಡಂದಿನಿಂದ ಪ್ರಜಾಪ್ರಭುತ್ವದ ಎಲ್ಲಾ ವಲಯಗಳಲ್ಲಿಯೂ ಆರೆಸ್ಸೆಸ್ ತನ್ನ ಆರ್ಯನ್-ಬ್ರಾಹ್ಮಣ್ಯದ ಸಿದ್ಧಾಂತಗಳನ್ನು ಒಳತೂರಿಸುತ್ತಿದೆ. ಸಣ್ಣ ಸಣ್ಣ ಕಿಂಡಿಗಳನ್ನೂ ಬಿಡುತ್ತಿಲ್ಲ. ಇದರ ಮೊದಲ ಪ್ರಯೋಗಶಾಲೆ ಶಿಕ್ಷಣ ವಲಯ. ಕಳೆದ ಹತ್ತು ವರ್ಷಗಳಲ್ಲಿ ತಾಂತ್ರಿಕ ವಿಶ್ವ ವಿದ್ಯಾನಿಲಯಗಳು, ಯುಜಿಸಿ, ಐಐಟಿ, Iಅಊಖ ನ್ಯಾಷನಲ್ ಬುಕ್ ಟ್ರಸ್ಟ್ ಮತ್ತು ಕೇಂದ್ರೀಯ ವಿ.ವಿ.ಗಳಲ್ಲಿ ಆರೆಸ್ಸೆಸ್ ಹಿನ್ನೆಲೆಯ ವ್ಯಕ್ತಿಗಳನ್ನೇ ನೇಮಕ ಮಾಡಿಕೊಳ್ಳಲಾಗುತ್ತಿದೆ. ಹಿಂದೂ ರಾಷ್ಟ್ರ ಸ್ಥಾಪನೆಗೆ ಅತ್ಯಂತ ಅವಸರದಲ್ಲಿರುವ ಆರೆಸ್ಸೆಸ್‌ಗೆ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿಕೊಂಡು ಹೋಗುವುದು ಅತ್ಯವಶ್ಯಕವಾಗಿದೆ. ಇದರ ಸಾಧನೆಗಾಗಿ ಈ ಶಿಕ್ಷಣ ಮತ್ತು ಸಾಂಸ್ಕೃತಿಕ ವಲಯಗಳನ್ನು ಆಖಾಡವನ್ನಾಗಿ ಬಳಸಿಕೊಳ್ಳುತ್ತಿದೆ ಮತ್ತು ಹಿಂದುತ್ವ ಪರ ಹೋರಾಡಲು ವಿದ್ಯಾರ್ಥಿಗಳನ್ನು ಆಯುಧಗಳಂತೆ ಬಳಸಿಕೊಳ್ಳುತ್ತಿದೆ. ಇದರ ಮೊದಲ ಹೆಜ್ಜೆಯಾಗಿ ಮೋದಿ ಸರಕಾರವು ವಿ.ವಿ.ಗಳಲ್ಲಿ ಚರ್ಚೆ, ಸಂವಾದ, ಭಿನ್ನಾಭಿಪ್ರಾಯದ ಎಲ್ಲಾ ಅವಕಾಶಗಳನ್ನು, ಹಕ್ಕುಗಳನ್ನು ಮೊಟಕುಗೊಳಿಸಿದೆ. ಈ ಕಾರಣಕ್ಕಾಗಿಯೇ ಈ ಹಿಂದೆ ಮದ್ರಾಸ್ ಐಐಟಿನಲ್ಲಿ ಅಂಬೇಡ್ಕರ್ -ಪೆರಿಯಾರ್ ಸ್ಟಡಿ ಸರ್ಕಲ್ ಅನ್ನು ನಿಷೇಧಿಸಿತ್ತು. ಈಗ ಹೈದರಾಬಾದ್ ಕೇಂದ್ರ ವಿವಿಯಲ್ಲಿ ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯ ವಿರುದ್ಧ ಕ್ರಮ ಜರುಗಿಸುತ್ತಿದೆ.
ದಲಿತ ವಿದ್ಯಾರ್ಥಿಗಳು ಒಂದೆಡೆ ಶಿಕ್ಷಣ ಸಂಸ್ಥೆಗಳ ಆಡಳಿತಾತ್ಮಕ ವಿಭಾಗದಿಂದ ಮತ್ತೊಂದೆಡೆ ಪ್ರತಿಷ್ಠಿತ ಬೋಧಕ ವರ್ಗದಿಂದ ದಿನನಿತ್ಯ ಶೋಷಣೆಗೆ ಒಳಗಾಗುತ್ತಾರೆ. ಮೀಸಲಾತಿ ಕುರಿತಾಗಿ ಸವರ್ಣೀಯರಿಗೆ ಇರುವ ಅಸಹನೆಯು ಕಾಲೇಜು ಕ್ಯಾಂಪಸ್‌ಗಳಲ್ಲಿ ದಲಿತರ ಪ್ರವೇಶವನ್ನು ವಿರೋಧಿಸುವ ಮೂಲಕ ವ್ಯಕ್ತವಾಗುತ್ತದೆ. ವೇಮುಲಾ ಅವರು ತಮ್ಮ ಪತ್ರದಲ್ಲಿ ಬರೆದಂತೆ ದಲಿತ ಸಮುದಾಯದಲ್ಲಿನ ಹುಟ್ಟು ಅವರ ಮಾರಣಾಂತಿಕ ಅಪಘಾತವಾಗಿದೆ. ಅವರ ಸಾಮಾಜಿಕ ಗುರುತು ಶೋಷಣೆಯ ಆರಂಭದ ಹಂತವಾಗಿದೆ. ನಂತರ ಕಾಲೇಜು ಕ್ಯಾಂಪಸ್‌ಗಳಲ್ಲಿ ಸಾಮಾಜಿಕವಾಗಿ ವರ್ಗೀಕರಣ ಮಾಡಲಾಗುತ್ತದೆ. ನಂತರ ಸಾಮಾಜಿಕ ಹೋಲಿಕೆ ಶುರುವಾಗುತ್ತದೆ. ಈ ಮೂರು ಹಂತಗಳ ಮೂಲಕ ದಲಿತ ವಿದ್ಯಾರ್ಥಿಗಳ ವಿರುದ್ಧ ನಕಾರಾತ್ಮಕ ವಾತಾವರಣ ನಿರ್ಮಿಸಲಾಗುತ್ತದೆ. ಈ ಹಂತಗಳಲ್ಲಿ ಸವರ್ಣೀಯ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಶೋಷಣೆಯ ಮುಂಚೂಣಿಯಲ್ಲಿರುತ್ತಾರೆ. ಪ್ರಾಧ್ಯಾಪಕರು ದಲಿತ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸುವುದನ್ನು, ತಮ್ಮ ಸಂಶೋಧನಾ ವಿದ್ಯಾರ್ಥಿಗಳಾಗಿ ಸ್ವೀಕರಿಸುವುದನ್ನು ತಪ್ಪಿಸುತ್ತಾರೆ. ಇವರು ಪಡೆದುಕೊಳ್ಳುವ ಪ.ಜಾತಿ/ ಪ.ಪಂಗಡ ಸ್ಕಾಲರ್‌ಶಿಪ್ ಆಧರಿಸಿ ಇವರನ್ನು ‘ಕೋಟಾವಾಲಾ’ ಎಂದು ಸಾರ್ವಜನಿಕವಾಗಿ ನಿಂದಿಸುತ್ತಾರೆ. ಇಂಗ್ಲಿಷ್ ಉಚ್ಚಾರಣೆಯಲ್ಲಿನ ಸಣ್ಣ ಪುಟ್ಟ ಕೊರತೆಗಳನ್ನು ವೈಭವೀಕರಿಸಿ ಅವರ ಜಾತಿಯೊಂದಿಗೆ ತಳುಕು ಹಾಕುತ್ತಾರೆ, ತರಗತಿಗಳಲ್ಲಿ ಕುಳಿತುಕೊಳ್ಳಲು ಪ್ರತ್ಯೇಕತೆಯನ್ನು ಅನುಸರಿಸುತ್ತಾರೆ. ಅನೇಕ ಸಂದರ್ಭಗಳಲ್ಲಿ ದಲಿತ ವಿದ್ಯಾರ್ಥಿಗಳ ಮಣಿಕಟ್ಟಿನಲ್ಲಿ ಒಂದು ಬಣ್ಣದ ಬ್ಯಾಂಡ್, ಸವರ್ಣೀಯರು ಮತ್ತೊಂದು ಬಣ್ಣದ ಬ್ಯಾಂಡ್ ಕಟ್ಟಿಕೊಂಡಿರುವ ಉದಾಹರಣೆಗಳಿವೆ. ಅನೇಕ ವಿ.ವಿ.ಗಳಲ್ಲಿ ಸವರ್ಣೀಯರಿಗೆ ಪ್ರತ್ಯೇಕ ಊಟದ ವ್ಯವಸ್ಥೆಯಿರುತ್ತದೆ. ಮಾಂಸಾಹಾರಿಗಳು ಮತ್ತು ಸಸ್ಯಾಹಾರಿಗಳು ಎಂದು ವಿಭಜಿಸಲಾಗಿದೆ. ಕೆಲವು ಕಾಲೇಜುಗಳಲ್ಲಿ ದಲಿತ ವಿದ್ಯಾರ್ಥಿಗಳು ತಮ್ಮ ಜಾತಿಯನ್ನು ಮರೆಮಾಚಿ ಸವರ್ಣೀಯ ವಿದ್ಯಾರ್ಥಿಗಳೊಂದಿಗೆ ಬೆರೆಯಲು ಪ್ರಯತ್ನಿಸುತ್ತಾರೆ, ಆದರೆ ಆ ಗುಂಪಿನಲ್ಲಿ ದಲಿತರ ವಿರುದ್ಧದ ಕೀಳುಮಟ್ಟದ ಮಾತುಗಳನ್ನು ಕೇಳಬೇಕಾದ ಆದರೆ ಏನೂ ಮಾಡಲಾಗದ ಸ್ಥಿತಿಯಲ್ಲಿರುತ್ತಾರೆ. ಅಂದರೆ ದಲಿತ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಪ್ರವೇಶ ಪಡೆಯುವ ಹಂತ ಮತ್ತು ವ್ಯಾಸಂಗದ ಹಂತ ಎರಡು ಹಂತಗಳಲ್ಲಿ ಜಾತಿ ತಾರತಮ್ಯಕ್ಕೆ ಒಳಗಾಗುತ್ತಾರೆ. ಈ ಪ್ರಕ್ರಿಯೆಯಲ್ಲಿ ಖಿನ್ನತೆಗೆ, ಅವಮಾನಕ್ಕೆ ಒಳಗಾಗುತ್ತಾರೆ. ಇದು ನೇರವಾಗಿಯೇ ಸಾಂಸ್ಥಿಕ ಹತ್ಯೆಯಾಗಿದೆ.
ಸಮಾನ ಅವಕಾಶಗಳು ಮತ್ತು ಕಾನೂನಿನ ಮುಂದೆ ಎಲ್ಲರೂ ಸಮಾನರು ನೀತಿಗೆ ಬೆಂಬಲವಾಗಿ ಅಸ್ಪಶ್ಯತೆ (ಅಪರಾಧಗಳು) ಕಾಯ್ದೆ 1955 ಇದನ್ನು 1979ರಲ್ಲಿ ತಿದ್ದುಪಡಿ ಮಾಡಿ ಮಾನವ ಹಕ್ಕುಗಳ ರಕ್ಷಣೆ (ಪಿಸಿಆರ್) ಕಾಯ್ದೆ 1955 ಜಾರಿಗೊಳಿಸಲಾಗಿದೆ. ಪ.ಜಾತಿ ಮತ್ತು ಪ.ಪಂಗಡ (ದೌರ್ಜನ್ಯ ನಿಯಂತ್ರಣ ಕಾಯ್ದೆ) 1989 ಜಾರಿಗೊಳಿಸಲಾಗಿದೆ. ಈ ಎರಡು ಪ್ರಬಲವಾದ ಕಾಯ್ದೆಗಳಿದ್ದರೂ ಸಹ ವಿ.ವಿ. ಕ್ಯಾಂಪಸ್‌ಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ವ್ಯವಸ್ಥಿತವಾಗಿ ಜಾತಿ ತಾರತಮ್ಯವನ್ನು ಆಚರಿಸಲಾಗುತ್ತಿದೆ.







