Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ದಲಿತ ವಿದ್ಯಾರ್ಥಿಗಳ ಸಾಂಸ್ಥಿಕ ಹತ್ಯೆ:...

ದಲಿತ ವಿದ್ಯಾರ್ಥಿಗಳ ಸಾಂಸ್ಥಿಕ ಹತ್ಯೆ: ಜಾತಿ ಶ್ರೇಣೀಕರಣದ ಮರುಸೃಷ್ಟಿ

ಬಿ. ಶ್ರೀಪಾದ ಭಟ್ಬಿ. ಶ್ರೀಪಾದ ಭಟ್5 Aug 2025 9:45 AM IST
share
ದಲಿತ ವಿದ್ಯಾರ್ಥಿಗಳ ಸಾಂಸ್ಥಿಕ ಹತ್ಯೆ: ಜಾತಿ ಶ್ರೇಣೀಕರಣದ ಮರುಸೃಷ್ಟಿ

ಭಾಗ- 2

ರೋಹಿತ್ ವೇಮುಲಾರ ಸಾಂಸ್ಥಿಕ ಹತ್ಯೆ

ರೋಹಿತ್ ವೇಮುಲಾ ಅವರ ಸಾಂಸ್ಥಿಕ ಹತ್ಯೆಯ ಕುರಿತು ಕಳೆದ ಎಂಟು ವರ್ಷಗಳಿಂದ ತನಿಖೆ ನಡೆಸಿದ ತೆಲಂಗಾಣ ಪೊಲೀಸರು ಅದು ಆತ್ಮಹತ್ಯೆ ಎಂದೂ, ವೇಮುಲಾ ದಲಿತ ಅಲ್ಲ, ಹಿಂದುಳಿದ ವಡ್ಡರ ಜಾತಿಗೆ ಸೇರಿದವರೆಂದೂ ಮತ್ತು ತನ್ನ ಗುಟ್ಟು ಬಯಲಾಗುತ್ತದೆ ಎನ್ನುವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರೆಂದು ವರದಿ ನೀಡಿದರು. ಆಗಿನ ಹೈದರಾಬಾದ್ ಕೇಂದ್ರೀಯ ವಿ.ವಿ.ಯ ಉಪಕುಲಪತಿ ಅಪ್ಪಾರಾವ್, ಆಗಿನ ಕೇಂದ್ರ ಮಂತ್ರಿ ಬಂಡಾರು ದತ್ತಾತ್ರೇಯ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ ಎಂದು ಖುಲಾಸೆಗೊಳಿಸಿದರು. ಆದರೆ ಈ ತನಿಖೆಯು ವೇಮುಲಾರ ಸಮಾಜೋ-ಆರ್ಥಿಕ ಹಿನ್ನೆಲೆಯನ್ನು, ವಿವಿಧ ಸಾಕ್ಷಿಗಳನ್ನು ಪರಿಗಣಿಸದೆ ಪೂರ್ವಾಗ್ರಹಪೀಡಿತರಾಗಿ ವರದಿ ನೀಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.

ಕೊಂಚ ಹಿನ್ನಲೆಯನ್ನು ಗಮನಿಸಿದಾಗ...

ವೇಮುಲಾರ ತಾಯಿ ರಾಧಿಕಾ ಅವರ ತಂದೆ ತಾಯಿ ದಲಿತ ಮಾಲಾ ಸಮುದಾಯದವರು. ಅವರನ್ನು ವಡೇರು ಸಮುದಾಯದ ಅಂಜನಿ ಎನ್ನುವವರು ದತ್ತು ಪಡೆದುಕೊಂಡರು. ಆನಂತರ ಅದೇ ಜಾತಿಯ ಮಣಿ ಕುಮಾರ್ ಜೊತೆಗೆ ರಾಧಿಕಾ ಅವರ ವಿವಾಹವಾಯಿತು. ಇವರಿಗೆ ನೀಲಿಮಾ, ರೋಹಿತ್ ವೇಮುಲಾ, ರಾಜು ಮೂವರು ಮಕ್ಕಳು. ಆದರೆ ಆ ಕ್ರೂರಿ ಗಂಡನಿಗೆ ರಾಧಿಕಾ ಅವರ ಜಾತಿ ಹಿನ್ನೆಲೆ ಗೊತ್ತಾಗಿ ‘ನಾನು ಅಸ್ಪಶ್ಯಳನ್ನು ಮದುವೆಯಾದೆ, ನನಗೆ ಮೋಸ ಮಾಡಿದಿರಿ’ ಎಂದು ಮತ್ತಷ್ಟು ಹಿಂಸೆ, ದೌರ್ಜನ್ಯ ನಡೆಸಿದ. ಕಡೆಗೆ ರಾಧಿಕಾ ಅವರು 1990ರಲ್ಲಿ ಗಂಡನನ್ನು ತೊರೆದು ತಮ್ಮ ಮೂವರು ಮಕ್ಕಳೊಂದಿಗೆ ಸಾಕು ತಾಯಿ ಅಂಜನಿ ಅವರ ಬಳಿಗೆ ಮರಳಿದರು. ಆದರೆ ಅಲ್ಲಿಯೂ ಅವರಿಗೆ ಸುಖವಿರಲಿಲ್ಲ. ಆ ಮನೆಯಲ್ಲಿ ಆಳುಗಳಂತೆ ದುಡಿಯುತ್ತಿದ್ದರು. ಅಂಜನಿಯವರ ತಾಯಿ ರಾಧಿಕಾ ಅವರಿಗೆ ಅಸ್ಪಶ್ಯ ಜಾತಿಯನ್ನು ಉದಾಹರಿಸಿ ಬಯ್ಯುತ್ತಿದ್ದರು. ದಲಿತರು ಎನ್ನುವ ಕಾರಣಕ್ಕೆ ದೌರ್ಜನ್ಯ ನಡೆಸುತ್ತಿದ್ದರು. ವೇಮುಲಾ ಮತ್ತು ರಾಜು ಅವರ ವಿದ್ಯಾಭ್ಯಾಸಕ್ಕೂ ಸಹ ಅಂಜನಿ ಕುಟುಂಬದಿಂದ ಯಾವುದೇ ಸಹಕಾರ ದೊರಕಲಿಲ್ಲ.

ಇದಿಷ್ಟೂ ರೋಹಿತ್ ವೇಮುಲಾ ಅವರ ಹಿನ್ನೆಲೆ. ಆದರೆ ಈ ವಿವರಗಳನ್ನು ಅರಿಯುವ ಗೋಜಿಗೆ ಹೋಗದ ತೆಲಂಗಾಣ ಪೊಲೀಸರು ಪೂರ್ವಾಗ್ರಹಪೀಡಿತರಾಗಿದ್ದರು. ದಲಿತ ವಿದ್ಯಾರ್ಥಿ ವೇಮುಲಾ ಅವರ ಸಾಂಸ್ಥಿಕ ಹತ್ಯೆಯನ್ನು ನಿರಾಕರಿಸುವುದು ಮತ್ತು ಬಿಜೆಪಿಯ ಬಂಡಾರು ದತ್ತಾತ್ರೇಯ, ಸ್ಮತಿ ಇರಾನಿ, ಎನ್. ರಾಮಚಂದ್ರ ರಾವ್, ಎಬಿವಿಪಿ ಮುಖಂಡ ಸುಶೀಲ್ ಕುಮಾರ್‌ರನ್ನು ರಕ್ಷಿಸುವುದು ಅವರ ಉದ್ದೇಶವಿದ್ದಂತಿದೆ. ರೋಹಿತ್ ವೇಮುಲಾ ದಲಿತ ಎಂದು ಅಧಿಕೃತ ಪ್ರಮಾಣ ಪತ್ರ ನೀಡಿದ್ದರೂ ಅದನ್ನು ನಿರ್ಲಕ್ಷಿಸಿ ತಮಗೆ ಅನುಕೂಲವಾಗುವಂತೆ ಮಾಹಿತಿಯನ್ನು ಆರಿಸಿಕೊಂಡಿರುವುದು ಅನುಮಾನಾಸ್ಪದವಾಗಿದೆ. ಆದರೆ ಪ್ರಕರಣ ನಡೆದ ಸಂದರ್ಭದಲ್ಲಿ ಗುಂಟೂರು ಜಿಲ್ಲಾಧಿಕಾರಿ ಕಾಂತಿಲಾಲ್ ದಂಡೆ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ ವೇಮುಲಾ ದಲಿತ ಎಂದು ಖಾತರಿಪಡಿಸಿದ್ದಾರೆ. ಆದರೆ ಇದನ್ನು ಪರಿಗಣಿಸದಿರುವುದಕ್ಕೆ ಕಾರಣವೇನು? ಮತ್ತು ಈ ತನಿಖಾ ತಂಡವು ತಾಯಿ ರಾಧಿಕಾ ಅವರ ಹೇಳಿಕೆಯನ್ನು ಪಡೆದಿಲ್ಲ ಎಂದು ಆರೋಪಿಸಲಾಗಿದೆ. ಇಲ್ಲಿನ ಶ್ರೇಣೀಕೃತ ಜಾತಿ ವ್ಯವಸ್ಥೆಯ ಸಂಕೀರ್ಣತೆಯನ್ನು ಗ್ರಹಿಸಲು ವಿಫಲವಾಗಿರುವ ಈ ತನಿಖೆಯು ತುಂಬಾ ಅಸೂಕ್ಷ್ಮತೆಯಿಂದ ವೇಮುಲಾ ದಲಿತ ಅಲ್ಲ ಎಂದು ಸಾಧಿಸಲು ಹರ ಸಾಹಸಪಟ್ಟಿದೆ. ಅಂತರ್‌ಜಾತೀಯ ವಿವಾಹದ ಸಂದರ್ಭದಲ್ಲಿ ಮಗುವಿನ ಜಾತಿಯನ್ನು ಅದರ ಪಾಲನೆ ಆಧರಿಸಿ ನಿರ್ಧರಿಸಲಾಗುತ್ತದೆ. ಈ ಮಕ್ಕಳ ಹಕ್ಕುಗಳ ಕುರಿತು ನಿರ್ಧರಿಸಲು ಸುಪ್ರೀಂಕೋರ್ಟ್ ಪೀಠವು ಒಂದುವೇಳೆ ತಾಯಿಯು ತನ್ನ ಮಗುವನ್ನು ಬೆಳೆಸಿದರೆ ಸಹಜವಾಗಿಯೇ ಆ ತಾಯಿಯ ಜಾತಿಯನ್ನು ಪರಿಗಣಿಸಬೇಕಾಗುತ್ತದೆ ಎಂದು ಹೇಳಿದೆ. ಆದರೆ ತನಿಖಾ ತಂಡವು ಈ ಆದೇಶವನ್ನು ಯಾತಕ್ಕೆ ಕಡೆಗಣಿಸಿದೆ?

17.1.2016 ಹೈದರಾಬಾದ್ ಕೇಂದ್ರೀಯ ವಿ.ವಿ.ಯಲ್ಲಿ ಪಿಎಚ್.ಡಿ. ಮಾಡುತ್ತಿದ್ದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಬರೆದ ಪತ್ರದ ಸಾಲುಗಳು ಹೇಳದೇ ಉಳಿದ ಮನದಾಳವನ್ನು ವ್ಯಕ್ತಪಡಿಸುತ್ತದೆ. ಆದರೆ ಪ್ರತಿಭಾವಂತ ರೋಹಿತ್ ಸಾವು ಸಾಂಸ್ಥಿಕ ಹತ್ಯೆ. ಪ್ರಜಾಪ್ರಭುತ್ವದ ಯಜಮಾನ್ಯ ವ್ಯವಸ್ಥೆ ಮತ್ತು ಅದರ ಭಾಗವಾಗಿರುವ ನಾವೆಲ್ಲಾ ಈ ಸಾವಿಗೆ ಪರೋಕ್ಷ ಹೊಣೆಗಾರರು. ಇದು ಕೇವಲ ವ್ಯವಸ್ಥೆಯ ಸೋಲಲ್ಲ. ಪ್ರಜ್ಞಾವಂತರೆಲ್ಲರ ನೈತಿಕ ಪತನ.

ಭಾರತದ ಪುರೋಹಿತಶಾಹಿ ವ್ಯವಸ್ಥೆಯು ಇಂದಿಗೂ ತಳಸಮುದಾಯಗಳು ಜ್ಞಾನವನ್ನು, ಅಕ್ಷರ ಪಡೆಯುವುದನ್ನು ಸಹಿಸುತ್ತಿಲ್ಲ. ಆಧುನಿಕತೆ, ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಂವಿಧಾನದಂತಹ ಸಮಾನತೆಯನ್ನು ಪ್ರತಿಪಾದಿಸುವ ಮೆಟ್ಟಿಲುಗಳಿದ್ದರೂ ತಳಸಮುದಾಯಗಳಿಗೆ ಅವಮಾನ, ದೌರ್ಜನ್ಯದಿಂದ ವಿಮೋಚನೆ ದೊರಕಿಲ್ಲ. ಪ್ರತ್ಯೇಕತೆ ಮತ್ತು ತಾರತಮ್ಯದಿಂದ ಮುಕ್ತಿ ದೊರಕಲಿಲ್ಲ. ವಿಪುಲವಾದ ಅಧ್ಯಯನಗಳ ಮೂಲಕ ಸಾಮಾಜಿಕ-ಶೈಕ್ಷಣಿಕ-ಆರ್ಥಿಕ ಅಭಿವೃದ್ಧಿ ಈ ವಿಮೋಚನೆಯನ್ನು ತಂದುಕೊಡುತ್ತವೆ ಎಂದು ಹೇಳಲಾಯಿತು. ಆದರೆ ನವ ಉದಾರೀಕರಣದ ಭಾರತದಲ್ಲಿ ಬ್ರಾಹ್ಮಣವಾದವು ತನ್ನ ಕರ್ಮಠತನಕ್ಕೆ ಅನುಕೂಲವಾಗುವಂತೆ ಆಧುನಿಕತೆಯನ್ನು ಪಳಗಿಸಿಕೊಂಡಿದೆ ಎನ್ನುವ ಕಟುಸತ್ಯವನ್ನು ನಾವೆಲ್ಲ ಅರಿಯುವಲ್ಲಿ ವಿಫಲರಾಗಿದ್ದು ಒಂದು ದುರಂತ. ಆಧುನಿಕ ಭಾರತದಲ್ಲಿ ಈ ಪುರೋಹಿತಶಾಹಿಯು ತನ್ನ ಜಾತೀಯತೆಯ ವರಸೆಗಳನ್ನು ಮತ್ತು ಪ್ರಯೋಗಗಳನ್ನು ಮಾತ್ರ ಬದಲಿಸಿಕೊಂಡಿದೆ ಅಷ್ಟೇ. ಅದರ ಮೂಲಭೂತವಾದದ ಎಲ್ಲಾ ಚಿಂತನೆಗಳು ಕೊಂಚವೂ ಬದಲಾಗಿಲ್ಲ. ಜಾಗತೀಕರಣ ಭಾರತದಲ್ಲಿ ನೆಲೆಯೂರುತ್ತಿದ್ದಂತೆಯೇ ತೊಂಭತ್ತರ ದಶಕದಲ್ಲಿ ಕೋಮುವಾದವು ವಿಜೃಂಭಿಸುತ್ತಿತ್ತು. ಈ ತೊಂಭತ್ತರ ದಶಕದಲ್ಲಿ ಪುರೋಹಿತಶಾಹಿಯು ಬಹುಸಂಖ್ಯಾತವಾದದ ಹೆಸರಿನಲ್ಲಿ ಬ್ರಾಹ್ಮಣ್ಯದ ಹಿಂದುತ್ವವಾದವನ್ನು ಕೊಂಚ ಹಿಗ್ಗಿಸಿ ಅದರೊಳಗೆ ಬ್ರಾಹ್ಮಣೇತರ ಬಲಿಷ್ಠ ಜಾತಿಗಳನ್ನು ಸೆಳೆದುಕೊಂಡು ರಾಜಕೀಯ ಅಧಿಕಾರ ನೀಡಿತು. ಆ ಮೂಲಕ ಪುರೋಹಿತಶಾಹಿಯ ಮೂಲಭೂತವಾದಕ್ಕೆ ತೋಳ್ಬಲವೂ ಕೈಜೋಡಿಸಿ ತಳಸಮುದಾಯಗಳ ಮೇಲಿನ ದೌರ್ಜನ್ಯ ಮತ್ತು ಹಲ್ಲೆಗಳು ಕೊಲೆಗಳಲ್ಲಿ ಪರ್ಯಾವಸಾನಗೊಂಡಿತು. ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ, ಪುರಾವೆಗಳಿವೆ. ಈ ದೌರ್ಜನ್ಯಗಳ ಸಂದರ್ಭದಲ್ಲಿ ದಲಿತರ ಆರ್ಥಿಕ ಚೈತನ್ಯವನ್ನು ಬಿಂಬಿಸುತ್ತಿದ್ದ ಮೇಜು, ಕುರ್ಚಿ, ರೆಫ್ರಿಜರೇಟರ್‌ಗಳಂತಹ ವಸ್ತುಗಳನ್ನು ಧ್ವಂಸ ಮಾಡಲಾಗುತ್ತಿತ್ತು. ತಳ ಸಮುದಾಯಗಳಿಗೆ ವೇತನದಲ್ಲಿ, ನೇಮಕಾತಿಯಲ್ಲಿ, ಭಡ್ತಿಯಲ್ಲಿ ಇಂದಿಗೂ ತಾರತಮ್ಯ ಮುಂದುವರಿದಿದೆ.

ಬ್ರಾಹ್ಮಣಶಾಹಿಯ ಏಕರೂಪಿ ಸಂಸ್ಕೃತಿಯನ್ನು ಸಮರ್ಥಿಸುತ್ತ ತಳಸಮುದಾಯಗಳ ಬಹುರೂಪಿ ಶ್ರಮಣ ಸಂಸ್ಕೃತಿಯನ್ನು ನಾಶಮಾಡಲಾಯಿತು. ಉನ್ನತ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವ ದಲಿತ ವಿದ್ಯಾರ್ಥಿಗಳು ಅಸಮಾನತೆಯ ಅವಮಾನದಿಂದ ಆತ್ಮಹತ್ಯೆ ಮಾಡಿಕೊಳ್ಳತೊಡಗಿದ ನಂತರ ಶಿಕ್ಷಣದ ಮೂಲಕ ಪ್ರತ್ಯೇಕತೆಯನ್ನು ಕೊನೆಗೊಳಿಸಬಹುದೆನ್ನುವ ಆಶಯಗಳು ಭಗ್ನಗೊಂಡಿವೆ. ಇಪ್ಪತ್ತೊಂದನೇ ಶತಮಾನದ ಆಧುನಿಕ ಭಾರತದಲ್ಲಿ, ಬಲಪಂಥೀಯ ಚಿಂತನೆಗಳ ಪಕ್ಷ ಕೇಂದ್ರದಲ್ಲಿ ಬಹುಮತ ಪಡೆದು ಅಧಿಕಾರಕ್ಕೇರಿದ ನಂತರ ಈ ಪುರೋಹಿಶಾಹಿಯು ಅಭಿವೃದ್ಧಿ ಮತ್ತು ಬಹುಸಂಖ್ಯಾತವಾದದ ಮುಖವಾಡದಲ್ಲಿ ಪ್ರತ್ಯೇಕತೆ ಮತ್ತು ತಾರತಮ್ಯಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ. ಇದನ್ನು ಸಂಪತ್ತಿನ ಅಸಮಾನ ಹಂಚಿಕೆಯ ಮೂಲಕ, ಕ್ರೂನಿ ಬಂಡವಾಳದ ಮೂಲಕ, ಬಾಬರಿ ಮಸೀದಿಯ ಧ್ವಂಸದಿಂದ ಹಾಥರಸ್ ಘಟನೆಗಳ ಮೂಲಕ, ಶಿಕ್ಷಣದಲ್ಲಿ ಸನಾತನವಾದದ ಸಂಸ್ಕೃತಿಯ ಯಾಜಮಾನ್ಯದ ಮೂಲಕ ಸಾಧಿಸಲಾಗುತ್ತಿದೆ

ಪ್ರಜ್ಞಾವಂತರ ಪ್ರಗತಿಪರ ಸಿದ್ಧಾಂತಗಳು ತಮ್ಮ ಕೇಂದ್ರದಿಂದ ಕಳಚಿಕೊಂಡು ಚೆಲ್ಲಾಪಿಲ್ಲಿಯಾಗಿ ಚೆದುರಿಹೋಗಿವೆ. ನ್ಯಾಯಕ್ಕಾಗಿ ನಡೆಸುತ್ತಿದ್ದ ಸಂಘರ್ಷವು ಪ್ರಭುತ್ವದೊಂದಿಗೆ ಸಂಧಾನಕ್ಕೆ ತೊಡಗಿಸಿಕೊಂಡಿದೆ. ಈ ಆತ್ಮವಂಚನೆ, ನಿಷ್ಕ್ರಿಯತೆಯ ಫಲವಾಗಿ ಹೊಸ ತಲೆಮಾರಿನ ನೂರಾರು ರೋಹಿತ್ ವೇಮುಲಾರಂತಹ ಸೂಕ್ಷ್ಮ ಮನಸ್ಸಿನವರು ಬಲಿಯಾಗುತ್ತಿದ್ದಾರೆ. ಸಾಂಸ್ಥಿಕ ಹತ್ಯೆಗೆ ಒಳಗಾಗುತ್ತಿದ್ದಾರೆ.

share
ಬಿ. ಶ್ರೀಪಾದ ಭಟ್
ಬಿ. ಶ್ರೀಪಾದ ಭಟ್
Next Story
X