ಸಂಬಳದಲ್ಲಿ ವಿಮೆ ಕಡಿತ; ಪ್ರೀಮಿಯಂ ಪಾವತಿಸದ ಕೆಕೆಆರ್‌ಟಿಸಿ!
► ಸಂಕಷ್ಟದಲ್ಲಿ ನೌಕರರು; ಲಕ್ಷಾಂತರ ರೂ. ದುರ್ಬಳಕೆ ಆರೋಪ ► ಆರ್ಥಿಕ ಸಂಕಷ್ಟಕ್ಕೆ ಸಿಲುಕಿತೇ ಸಾರಿಗೆ ಸಂಸ್ಥೆ...?

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಕೆಕೆಆರ್‌ಟಿಸಿ) ಕಲಬುರಗಿ ವಿಭಾಗ-2ರ ನೂರಾರು ನೌಕರರ ಸಂಬಳದಿಂದ ಪ್ರತಿ ತಿಂಗಳು ಎಲ್‌ಐಸಿ ಪ್ರೀಮಿಯಂ ಮೊತ್ತ ಕಡಿತಗೊಳಿಸಲಾಗುತ್ತಿದ್ದರೂ, ಕಾಲಮಿತಿಯಲ್ಲಿ ಎಲ್‌ಐಸಿ ಕಚೇರಿಗೆ ಹಣ ಪಾವತಿಸದಿರುವ ಆರೋಪ ಕೆಕೆಆರ್‌ಟಿಸಿ ವಿರುದ್ಧ ಕೇಳಿಬಂದಿದೆ. ಇದರಿಂದ ವಿಮಾ ಸೌಲಭ್ಯ ಪಡೆಯಬೇಕಾದರೆ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ನೌಕರರು ಆರೋಪಿಸಿದ್ದಾರೆ.
ಕಲಬುರಗಿ ವಿಭಾಗ-2ರ ವ್ಯಾಪ್ತಿಯ ಜೇವರ್ಗಿ, ಅಫಜಲಪುರ, ಆಳಂದ ಸೇರಿದಂತೆ ಡಿ-2, ಡಿ-3 ಡಿಪೋಗಳು ಹಾಗೂ ವರ್ಕ್‌ಶಾಪ್ ನಲ್ಲಿರುವ ನೂರಾರು ನೌಕರರು ಎಲ್‌ಐಸಿ ಪಾಲಿಸಿ ಹೊಂದಿದ್ದಾರೆ. ಪ್ರತಿ ತಿಂಗಳು ಅವರ ಸಂಬಳದಿಂದ ಪ್ರೀಮಿಯಂ ಮೊತ್ತ ಕಡಿತವಾಗುತ್ತಿದ್ದರೂ, ಅದನ್ನು ನಿಯಮಿತವಾಗಿ ಎಲ್‌ಐಸಿಗೆ ಪಾವತಿಸಲಾಗುತ್ತಿಲ್ಲ ಎನ್ನಲಾಗಿದೆ.
ನಾಲ್ಕು ತಿಂಗಳ ಕಂತು ಬಾಕಿ; ನೌಕರರ ಪರದಾಟ: 2026ರ ಏಪ್ರಿಲ್‌ನಿಂದ ಪ್ರೀಮಿಯಂ ಪಾವತಿಯಲ್ಲಿ ವಿಳಂಬವಾಗಿದ್ದು, ನೌಕರರ ಒತ್ತಡದ ಬಳಿಕ ಏಪ್ರಿಲ್ ಮತ್ತು ಮೇ ತಿಂಗಳ ಕಂತುಗಳನ್ನು ಇತ್ತೀಚೆಗೆ ಪಾವತಿಸಲಾಗಿದೆ ಎನ್ನಲಾಗಿದೆ. ಆದರೆ ಜೂನ್‌ನಿಂದ ಸೆಪ್ಟಂಬರ್‌ವರೆಗಿನ ನಾಲ್ಕು ತಿಂಗಳ ಕಂತುಗಳು ಇನ್ನೂ ಬಾಕಿ ಉಳಿದಿವೆ ಎನ್ನುವ ಆರೋಪವಿದೆ. ಪ್ರತಿ ತಿಂಗಳು ನೌಕರರ ಸಂಬಳದಿಂದ ಸುಮಾರು 5 ಲಕ್ಷ ರೂ.ನಷ್ಟು ಪ್ರೀಮಿಯಂ ಮೊತ್ತ ಕಡಿತವಾಗುತ್ತಿದೆ. ಕಂತುಗಳು ಬಾಕಿ ಉಳಿದು ನೌಕರರು ಆತಂಕಕ್ಕೊಳಗಾಗಿದ್ದಾರೆ. ತುರ್ತು ಸಂದರ್ಭದಲ್ಲಿ ವಿಮಾ ಸೌಲಭ್ಯ ಪಡೆಯಲು ಮುಂದಾದಾಗ ಹಿಂದಿನ ಕಂತುಗಳು ಪಾವತಿಯಾಗಿಲ್ಲ ಎಂದರಿತು ಸಮಸ್ಯೆ ಎದುರಾಗುತ್ತಿದೆ ಎಂದು ನೌಕರರು ಆರೋಪಿಸಿದ್ದಾರೆ.
ಹಣಕಾಸಿನ ಸಂಕಷ್ಟವೋ? ದುರ್ಬಳಕೆಯ ಆರೋಪವೋ?: ನೌಕರರ ಸಂಬಳದಿಂದ ಕಡಿತಗೊಂಡ ವಿಮಾ ಮೊತ್ತವನ್ನು ನಿಗದಿತ ಅವಧಿಯಲ್ಲಿ ಎಲ್‌ಐಸಿಗೆ ಪಾವತಿಸದೆ ವಿಳಂಬ ಮಾಡುತ್ತಿರುವುದೇಕೆ? ಎಂಬ ಪ್ರಶ್ನೆ ನೌಕರರಲ್ಲಿ ಮೂಡಿದೆ. ಕಡಿತಗೊಂಡ ಹಣವನ್ನು ಬೇರೆಡೆ ಠೇವಣಿ ಇಟ್ಟು ಬಡ್ಡಿ ಪಡೆಯಲಾಗುತ್ತಿದೆಯೇ? ಎಂಬ ಅನುಮಾನವೂ ವ್ಯಕ್ತವಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ನೌಕರರು ಆಗ್ರಹಿಸಿದ್ದಾರೆ.
ಒಂದು ವಿಭಾಗದಲ್ಲಿಯೇ ಲಕ್ಷಾಂತರ ರೂಪಾಯಿ ಮೊತ್ತದ ವಿಮಾ ಕಂತುಗಳು ಬಾಕಿ ಉಳಿದಿರುವುದರಿಂದ, ಇತರೆ ವಿಭಾಗಗಳ ಪರಿಸ್ಥಿತಿಯ ಬಗ್ಗೆಯೂ ಪರಿಶೀಲನೆ ನಡೆಸಬೇಕು. ನೌಕರರ ಸಂಬಳದಿಂದ ಕಡಿತಗೊಂಡ ಹಣದ ಪಾವತಿಯಲ್ಲಿ ವಿಳಂಬವಾಗುತ್ತಿರುವುದಕ್ಕೆ ನಿಖರ ಕಾರಣ ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇತ್ತ, ವಿಭಾಗದಲ್ಲಿ ಹಣಕಾಸಿನ ಕೊರತೆಯಿಂದ ವಿಮಾ ಕಂತುಗಳನ್ನು ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಸಂಸ್ಥೆಯ ಅಧಿಕಾರಿಗಳು ಸ್ಪಷ್ಟಪಡಿಸಿರುವುದು, ಕೆಕೆಆರ್‌ಟಿಸಿಯ ಆರ್ಥಿಕ ಪರಿಸ್ಥಿತಿಯ ಬಗ್ಗೆಯೂ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.






