ಇಸ್ರೇಲ್‌ನ ಸ್ವಪ್ರತಿಷ್ಠೆಯ ಟೊಳ್ಳನ್ನು ಜಗತ್ತಿಗೆ ಬಯಲು ಮಾಡಿದ ಇರಾನ್

ಎರಡು ವಾರಗಳ ಹಿಂದೆ ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಿದಾಗ, ಜಗತ್ತು ಇರಾನ್ ದಿಟ್ಟತನದ ಬಗ್ಗೆ ಸಣ್ಣ ಗ್ರಹಿಕೆಯನ್ನೂ ಮಾಡಿರಲಿಲ್ಲ. ಆದರೆ ಈಗ ಇಸ್ರೇಲ್ ಹೆದರಿಹೋಗಿದೆ.
ಇಸ್ರೇಲ್‌ನ ರಕ್ಷಣಾ ವ್ಯವಸ್ಥೆ, ಇಸ್ರೇಲ್‌ನ ಶಸ್ತ್ರಾಸ್ತ್ರಗಳು, ಇಸ್ರೇಲ್‌ನ ಬೇಹು ಏಜೆನ್ಸಿ ಮೊಸ್ಸಾದ್ ಬಗ್ಗೆ ಸಿಕ್ಕಾಪಟ್ಟೆ ಹೇಳಲಾಗುತ್ತದೆ. ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಇರುವ ಇಸ್ರೇಲ್‌ನ ಭಟ್ಟಂಗಿಗಳು ಮೊಸ್ಸಾದ್ ಬಗ್ಗೆ ಹೇಳಿದ್ದೇ ಹೇಳಿದ್ದು. ಅದನ್ನು ಹೊಗಳಿದ್ದೇ ಹೊಗಳಿದ್ದು. ಆ ಭಟ್ಟಂಗಿಗಳ ಪ್ರಕಾರ ಮೊಸ್ಸಾದ್ ಇಡೀ ಪ್ರಪಂಚದಲ್ಲಿ ಎಲ್ಲಿ ಬೇಕಾದರೂ ಏನು ಬೇಕಾದರೂ ಮಾಡಲು ಸಾಧ್ಯವಿರುವ ಏಕೈಕ ಸಂಸ್ಥೆ. ಅದಕ್ಕೆ ಅಸಾಧ್ಯ ಎಂಬುದು ಯಾವುದೂ ಇಲ್ಲ. ಆದರೆ ಅದೇ ಮೊಸ್ಸಾದ್ ಇರುವ ಇಸ್ರೇಲ್ ಕದನ ವಿರಾಮದ ಹೊಸ್ತಿಲಲ್ಲಿ ಬಂದು ನಿಲ್ಲುವ ಹಾಗೆ ಇರಾನ್ ತಾಕತ್ತು ತೋರಿಸಿದೆ.
ಕದನ ವಿರಾಮ ಉತ್ತಮ ಎಂಬ ಸಂದೇಶವನ್ನು ತಾನು ಇರಾನ್‌ಗೆ ಕಳುಹಿಸಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಸ್ವತಃ ಇಸ್ರೇಲ್ ಊಹಿಸಿರಲಿಲ್ಲ. ಇಸ್ರೇಲ್ ಕದನ ವಿರಾಮ ಬಯಸುತ್ತಿರುವುದಾಗಿ ಇರಾನ್‌ಗೆ ಸಂದೇಶ ಕಳುಹಿಸಿದೆ ಎಂಬ ಸುದ್ದಿ ಬರತೊಡಗಿದಾಗ, ಯುದ್ಧ ಕೊನೆಗೊಳಿಸಲು ಇದು ಸರಿಯಾದ ಸಮಯವಲ್ಲ ಎಂದು ಇರಾನ್ ಹೇಳಿದೆ ಎಂಬ ಸುದ್ದಿಯೂ ಬಂತು. ಅದರ ನಂತರ, ಇರಾನ್ ಖತರ್‌ನಲ್ಲಿರುವ ಅಮೆರಿಕದ ವಾಯುನೆಲೆಯನ್ನು ಗುರಿಯಾಗಿಸಿಕೊಂಡಿರುವ ಸುದ್ದಿ ಕೂಡ ಪ್ರಸಾರವಾಯಿತು. ಇದ್ದಕ್ಕಿದ್ದಂತೆ ಟ್ರಂಪ್ ನಾನು ಎರಡು ದೇಶಗಳ ನಡುವೆ ಕದನ ವಿರಾಮ ತಂದಿದ್ದೇನೆ ಎಂದು ಹೇಳತೊಡಗಿದರು. ಆದರೆ ಇರಾನ್ ಇಸ್ರೇಲ್ ವಿರುದ್ಧ ದಾಳಿ ನಿಲ್ಲಿಸಿರಲಿಲ್ಲ. ಅದು ಮತ್ತೊಮ್ಮೆ ಇಸ್ರೇಲ್ ಮೇಲೆ ಕ್ಷಿಪಣಿಗಳನ್ನು ಹಾರಿಸಿತು. ಅಂತಿಮವಾಗಿ, ಇರಾನ್ ಮತ್ತು ಇಸ್ರೇಲ್ ಎರಡೂ ಪಕ್ಷಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂಬ ಸುದ್ದಿ ಬಂದಿದೆ.
ಆದರೆ ಇರಾನ್ ತನ್ನದೇ ಆದ ಷರತ್ತುಗಳ ಮೇಲೆ ಕದನ ವಿರಾಮವನ್ನು ಒಪ್ಪಿರುವುದಾಗಿ ಸ್ಪಷ್ಟಪಡಿಸಿದೆ. ಅದು ಟ್ರಂಪ್ ಅವರ ಆಜ್ಞೆಯ ಮೇರೆಗೆ ಕದನ ವಿರಾಮವನ್ನು ಒಪ್ಪಿಲ್ಲ. ಹಾಗಾದರೆ, ತನಗಿಂತ ಹೆಚ್ಚು ಬಲಿಷ್ಠ ದೇಶವಾದ ಇಸ್ರೇಲ್‌ಗೆ ಇರಾನ್ ಚುರುಕು ಮುಟ್ಟಿಸಿದ್ದು ಹೇಗೆ? ಅಮೆರಿಕದ ಸಂಪೂರ್ಣ ಬೆಂಬಲ ಇರುವ ಇಸ್ರೇಲ್ ಎದುರು ಒಂದಿಷ್ಟೂ ಶರಣಾಗದೆ ಇಸ್ರೇಲನ್ನೇ ಮೆತ್ತಗಾಗಿಸಿದ್ದು ಹೇಗೆ? ಬಹಳ ಕಠಿಣ ಪರಿಸ್ಥಿತಿಯಲ್ಲಿದ್ದ ಇರಾನ್‌ನ ಸರ್ವೋಚ್ಚ ನಾಯಕ ಖಾಮಿನೈ ಮತ್ತೊಮ್ಮೆ ತನ್ನ ದೇಶದ ಅತಿದೊಡ್ಡ ನಾಯಕನಾಗಿ ಹೊರಹೊಮ್ಮುವಂತಾದದ್ದು ಹೇಗೆ?
ಇರಾನ್ ತನ್ನ ದಿಟ್ಟತನದ ಮೂಲಕ ಈಗ, ಇಸ್ರೇಲ್‌ನ ಐರನ್ ಡೋಮ್ ಅಭೇದ್ಯವಲ್ಲ ಎಂಬ ಸಂದೇಶವನ್ನು ಇಸ್ರೇಲ್‌ಗೆ ಮುಟ್ಟಿಸಿದಂತಾಗಿದೆ. ಮಾಧ್ಯಮಗಳಲ್ಲಿ ಇಸ್ರೇಲ್‌ನ ಮಿಲಿಟರಿ ಸಾಮರ್ಥ್ಯದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಇಸ್ರೇಲ್‌ನ ವಾಯು ರಕ್ಷಣಾ ವ್ಯವಸ್ಥೆ ಜಗತ್ತಿನಲ್ಲೇ ಅತ್ಯುತ್ತಮವಾಗಿದೆ, ಅದು ಅಮೆರಿಕಕ್ಕಿಂತಲೂ ಉತ್ತಮವಾಗಿದೆ ಎಂದು ಕೆಲವರು ಹೇಳುತ್ತಿದ್ದರು.
ಅದರ ವಾಯು ರಕ್ಷಣಾ ವ್ಯವಸ್ಥೆ ಎಷ್ಟು ಪ್ರಬಲವಾಗಿದೆ ಎಂದರೆ ಯಾವುದೇ ಕ್ಷಿಪಣಿ ಅಥವಾ ಡ್ರೋನ್ ಇಸ್ರೇಲ್ ಅನ್ನು ಪ್ರವೇಶಿಸಲು ಸಾಧ್ಯವಿಲ್ಲ ಎನ್ನಲಾಗುತ್ತಿತ್ತು. ಆದರೆ ಈ ಬಾರಿ ಇಸ್ರೇಲ್‌ನ ಟೊಳ್ಳನ್ನು ಇರಾನ್ ಜಗತ್ತಿಗೆ ತೋರಿಸಿದೆ. ಇಸ್ರೇಲನ್ನು ಅದು ಪ್ರಪಂಚದ ಮುಂದೆ ಬಹಳ ದುರ್ಬಲಗೊಳಿಸಿದೆ. ಇಸ್ರೇಲ್‌ನ ಐರನ್ ಡೋಮ್ ಅಭೇದ್ಯವಲ್ಲ ಎಂಬ ಸಂದೇಶ ಮುಟ್ಟಿಸಿದೆ.
ಕಳೆದ 12 ದಿನಗಳ ಯುದ್ಧದಲ್ಲಿ ಇಸ್ರೇಲ್‌ಗೆ ದೊಡ್ಡ ಪಾಠವೆಂದರೆ, ಈವರೆಗೆ ಗಾಝಾದಿಂದ ಬರುತ್ತಿದ್ದ ಚಿತ್ರಗಳೇ ಇಸ್ರೇಲ್ ನಗರಗಳಿಂದಲೂ ಬರುವಂತಾದದ್ದು.
ಹಾಗಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ.
ಇಸ್ರೇಲ್‌ನೊಳಗೆ ಇರಾನ್‌ನ ಕ್ಷಿಪಣಿಗಳಿಂದ ನಾಶವಾದ ಬೃಹತ್ ಕಟ್ಟಡಗಳನ್ನು ಮತ್ತೆ ರಾತ್ರೋರಾತ್ರಿ ಕಟ್ಟಲು ಸಾಧ್ಯವೇ? ಎಷ್ಟೆಲ್ಲ ಜನರು ನಿರಾಶ್ರಿತರಾಗುತ್ತಿದ್ದರು ಎಂದು ಯಾರಿಗೆ ತಿಳಿದಿದೆ? ಅದರ ಆರ್ಥಿಕತೆಗೆ ಎಷ್ಟು ದೊಡ್ಡ ಹೊಡೆತ ಬಿದ್ದಿದೆ ಎಂದು ಯಾರಿಗೆ ತಿಳಿದಿದೆ? ಅದೆಷ್ಟು ಜನರು ಬಲಿಯಾಗಿದ್ದಾರೆ ಎಂದು ಇಸ್ರೇಲ್ ಎಂದಾದರೂ ಸತ್ಯ ಹೇಳಲಿದೆಯೇ?
ಇಸ್ರೇಲ್ ಮತ್ತೊಂದು ದೇಶದಲ್ಲಿ ತಾನು ಉಂಟುಮಾಡಿದ್ದ ಭೀಕರ ಪರಿಸ್ಥಿತಿಯನ್ನೇ ಈಗ ತನ್ನ ನೆಲದಲ್ಲಿ ತಾನೇ ನೋಡುವಂತಾಗಿದೆ. ಈಗ ಹೊರಬರುತ್ತಿರುವ ಅಲ್ಲಿನ ಚಿತ್ರಗಳು ಇಂತಹ ಬೀಕರ ಪರಿಸ್ಥಿತಿಗಳನ್ನು ತಾನು ಎದುರಿಸುತ್ತಲೇ ಇರಬೇಕಾಗಬಹುದು ಎಂದು ಇಸ್ರೇಲ್‌ಗೆ ನೆನಪಿಸುತ್ತಲೇ ಇರುತ್ತವೆ.
ಇನ್ನು, ನಾಗರಿಕರ ಸುರಕ್ಷತೆ ಮತ್ತು ಬಂಕರ್‌ಗಳ ಕೊರತೆ ವಿಷಯವೂ ಬಯಲಾಗಿದೆ.
ಇಸ್ರೇಲ್ ನಾಗರಿಕರು ಬಂಕರ್‌ಗಳಲ್ಲಿ ವಾಸಿಸಲು ಒಗ್ಗಿಕೊಂಡಿರುತ್ತಾರೆ ಎಂದು ಹೇಳಲಾಗುತ್ತದೆ.
ಪ್ರತಿಯೊಂದು ಮನೆಯಲ್ಲೂ ಬಂಕರ್ ನಿರ್ಮಿಸಲಾಗಿರುತ್ತದೆ.ಇಸ್ರೇಲ್‌ನಲ್ಲಿ ಬಂಕರ್‌ಗಳಿಗೆ ಕೊರತೆಯಿಲ್ಲ ಎನ್ನಲಾಗುತ್ತಿತ್ತು.
ಆದರೆ ಈ ಬಾರಿ ಈ ಯುದ್ಧ 12 ದಿನಗಳವರೆಗೆ ಮುಂದುವರಿದಾಗ, ಜನರಿಗೆ ಬಂಕರ್‌ಗಳ ಕೊರತೆ ಇರುವ ಬಗ್ಗೆ ಇಸ್ರೇಲ್‌ನ ಒಳಗಿನಿಂದಲೇ ಅನೇಕ ವರದಿಗಳು ಬಂದವು.
ಇಸ್ರೇಲ್ ಬಗ್ಗೆ ಹೇಳುವಾಗ ಮೊಸ್ಸಾದ್ ಬಗ್ಗೆ ಬಹಳಷ್ಟು ಹೇಳಲಾಗುತ್ತದೆ. ಇಸ್ರೇಲ್‌ನ ಗುಪ್ತಚರ ಸಂಸ್ಥೆಯಾದ ಮೊಸ್ಸಾದ್ ವಾಸ್ತವವಾಗಿ ಸಿಐಎಗಿಂತ ಮುಂದಿದೆ ಎಂದು ಹೇಳಲಾಗುತ್ತದೆ ಮತ್ತು ಅಂಥ ಅಭಿಪ್ರಾಯಗಳನ್ನು ಅದು ಸಾಬೀತುಪಡಿಸಿರುವ ಬಗ್ಗೆಯೂ ಹೇಳಲಾಗುತ್ತದೆ.
ಈ ಯುದ್ಧ ಪ್ರಾರಂಭವಾದಾಗ, ಜನರು ಆಶ್ಚರ್ಯಚಕಿತರಾದರು.
ಇರಾನ್‌ನ ಆ ಮನೆಯ ಆ ಕೋಣೆಯಲ್ಲಿಯೇ ಇಸ್ರೇಲ್ ಆ ವಿಜ್ಞಾನಿಯನ್ನು ಹೇಗೆ ಕೊಂದುಹಾಕಿತು? ಅಥವಾ ಇರಾನ್‌ನ ಕೆಲ ಉನ್ನತ ನಾಯಕರನ್ನು, ಮಿಲಿಟರಿಯ ಉನ್ನತ ನಾಯಕರನ್ನು ಹೇಗೆ ಅದು ಹತ್ಯೆ ಮಾಡಿತು? ಇದೆಲ್ಲದರ ಬಗ್ಗೆ ಇಡೀ ಜಗತ್ತೇ ಅಚ್ಚರಿಗೊಂಡಿತು.
ಯಾರಾದರೂ ಅಷ್ಟು ನಿಖರವಾಗಿ ಹೇಗೆ ದಾಳಿ ಮಾಡಬಹುದು? ಯಾವುದೇ ಒಂದು ಕಟ್ಟಡದ ನಿರ್ದಿಷ್ಟ ಕೋಣೆಯ ಬಗ್ಗೆ, ಅಂದರೆ, ಆ ಕಟ್ಟಡದ ನಿರ್ದಿಷ್ಟ ಭಾಗದ ಕೋಣೆಯ ಬಗ್ಗೆ ಅಷ್ಟೊಂದು ಅಪ್ಡೇಟ್ ಆದ ಮಾಹಿತಿ ಹೊಂದಿರಲು ಹೇಗೆ ಸಾಧ್ಯ?
ಇದು ಮೊಸ್ಸಾದ್‌ನ ದೊಡ್ಡ ಯಶಸ್ಸು ಮತ್ತು ಇರಾನ್‌ನೊಳಗೆ ಮೊಸ್ಸಾದ್ ಅಷ್ಟು ದೊಡ್ಡ ನೆಟ್ವರ್ಕ್ ಅನ್ನು ಹೊಂದಿದೆ. ಮೊಸ್ಸಾದ್ ಇರಾನ್ ಒಳಗೆ ಎಷ್ಟು ಆಳವಾಗಿ ನುಸುಳಿದೆ ಎಂಬುದಕ್ಕೆ ಅದೆಲ್ಲವೂ ಪುರಾವೆಯಾಗಿದೆ.
ಈ 12 ದಿನಗಳ ಯುದ್ಧವೂ ಅದನ್ನು ತೋರಿಸಿದೆ.
ಆದರೆ ಮೊಸ್ಸಾದ್ ನದರಿನಡಿಯಲ್ಲಿ ಕೂಡ ಇಸ್ರೇಲ್‌ನ ಷೇರು ಮಾರುಕಟ್ಟೆಯ ಮೇಲೆ ದಾಳಿ ಮಾಡಲಾಯಿತು. ಇರಾನ್ ಷೇರು ವಿನಿಮಯ ಕಟ್ಟಡವನ್ನು ಸ್ಫೋಟಿಸಿತು ಎಂಬ ವಿಷಯ ಬೆಳಕಿಗೆ ಬಂದಿತು. ಇಸ್ರೇಲ್‌ನ ಪ್ರಮುಖ ಸ್ಥಳಗಳಲ್ಲಿನ ಎಲ್ಲಾ ಪ್ರಮುಖ ಕಟ್ಟಡಗಳು ಹಾನಿಗೊಳಗಾದವು. ಯುಎಸ್ ರಾಯಭಾರ ಕಚೇರಿಯ ಹತ್ತಿರ ಬಾಂಬ್‌ಗಳನ್ನು ಬೀಳಿಸಲಾಗಿತ್ತು ಎಂದು ತಿಳಿದು ಬಂದಿದೆ.
ಇರಾನ್ ಮೈಕ್ರೋಸಾಫ್ಟ್‌ನಂತಹ ದೊಡ್ಡ ಯುಎಸ್ ಕಂಪೆನಿಗಳ ಬಳಿ ಬಾಂಬ್‌ಗಳನ್ನು ಬೀಳಿಸಿತು.
ಇದನ್ನು ಇಸ್ರೇಲ್‌ನ ಪೆಂಟಗನ್ ಎಂದು ಪರಿಗಣಿಸಲಾಗುತ್ತದೆ. ಆ ಕಟ್ಟಡದ ಮೇಲೆ ಕ್ಷಿಪಣಿ ಬೀಳಿಸಲಾಯಿತು.
ಇಸ್ರೇಲ್‌ನ ಗುಪ್ತಚರ ವ್ಯವಸ್ಥೆ ತುಂಬಾ ಪ್ರಬಲವಾಗಿದ್ದರೆ, ಅದು ಇರಾನ್‌ನೊಳಗೆ ಬಲವಾದ ದಾಳಿ ಮಾಡಿದ್ದರೆ, ಇರಾನ್ ಕೂಡ ಅದನ್ನು ಚೆನ್ನಾಗಿಯೇ ಮಾಡಿದೆ ಎಂಬುದನ್ನು ಇವೆಲ್ಲವೂ ತೋರಿಸುತ್ತವೆ.
ಇರಾನ್‌ಗೆ ಅಷ್ಟೊಂದು ಬಲವಾದ ಗುಪ್ತಚರ ವ್ಯವಸ್ಥೆ ಇಲ್ಲ ಅಥವಾ ಇರಾನ್‌ನ ಮಿಲಿಟರಿ ಅಷ್ಟೊಂದು ಮುಂದುವರಿದಿಲ್ಲ. ಅದು ಹಲವು ದಶಕಗಳಿಂದ ನಿರ್ಬಂಧಗಳನ್ನು ಎದುರಿಸುತ್ತಿದೆ.
ಅದರ ಮಿಲಿಟರಿ ಅಷ್ಟೊಂದು ಆಧುನೀಕರಣಗೊಳ್ಳಲು ಸಾಧ್ಯವಾಗಲಿಲ್ಲ. ಇದರ ಹೊರತಾಗಿಯೂ, ಇರಾನ್ ಇಸ್ರೇಲ್‌ಗೆ, ಈ ಯುದ್ಧದಿಂದಾಗಿ ಭಾರೀ ಬೆಲೆ ತೆರಬೇಕಾಗಬಹುದು ಎಂಬ ಸಂದೇಶ ಮುಟ್ಟಿಸಿತು.
ಮಾಹಿತಿಗಳ ಪ್ರಕಾರ, ಈ 12 ದಿನಗಳ ಯುದ್ಧದಲ್ಲಿ ಇಸ್ರೇಲ್ 12 ಬಿಲಿಯನ್ ಡಾಲರ್ ಆರ್ಥಿಕ ನಷ್ಟವನ್ನು ಅನುಭವಿಸಿದೆ. ಅಂದರೆ ಸರಾಸರಿ ಇಸ್ರೇಲ್ ಪ್ರತಿದಿನ ಒಂದು ಬಿಲಿಯನ್ ಡಾಲರ್‌ಗಳನ್ನು ಕಳೆದುಕೊಂಡಿದೆ.
ಇದಲ್ಲದೆ, ಹೈಫಾದ ಬಜನ್ ತೈಲ ಸಂಸ್ಕರಣಾಗಾರ ಸ್ಥಗಿತಗೊಂಡಿದೆ. ಟೆಲ್ ಅವೀವ್ ಮತ್ತು ವರ್ಶಿವಾದಲ್ಲಿ ಮೂಲಭೂತ ಸೌಕರ್ಯಗಳಿಗೆ ಹಾನಿಯಾಗಿದೆ.
ವಿದೇಶಗಳಲ್ಲಿ ಸಿಲುಕಿಕೊಂಡಿರುವ 1 ಲಕ್ಷ ಇಸ್ರೇಲಿಗಳಿ ದ್ದಾರೆ. ಇಸ್ರೇಲ್‌ನಿಂದ 40 ಸಾವಿರ ಪ್ರವಾಸಿಗರನ್ನು ಸ್ಥಳಾಂತರಿಸಲಾಗಿದೆ. ಈ ಪರಿಸ್ಥಿತಿ ಇಲ್ಲದಿದ್ದರೆ, ಅವರು ಆರಾಮವಾಗಿ ಸುತ್ತಾಡುತ್ತಿ ದ್ದರು ಮತ್ತು ಇಸ್ರೇಲ್‌ನ ಆರ್ಥಿಕತೆಗೆ ಪ್ರಯೋಜನವಾಗುತ್ತಿತ್ತು. ಇನ್ನೊಂದೆಡೆ, ಶಾಲೆಗಳು ಮುಚ್ಚಲ್ಪಟ್ಟಿವೆ. ನಾಗರಿಕರಲ್ಲಿ ಭಯವಿದೆ.
ಇಡೀ ಆರ್ಥಿಕತೆ ಕುಸಿದಿದೆ, ವಿಮಾನ ನಿಲ್ದಾಣಗಳು ಮುಚ್ಚಿವೆ. ಇರಾನ್ ಹೇಗಾದರೂ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯಾಗಿದೆ. ಅದು ಇಸ್ರೇಲ್‌ಗಿಂತ ಬಹಳ ಹಿಂದಿದೆ. ಆದರೆ ಇಸ್ರೇಲ್ ಈ ವಿಷಯಗಳಲ್ಲಿ ಬಹಳ ಮುಂದಿದೆ. ಅದಕ್ಕಾಗಿಯೇ ಅದಕ್ಕಾಗಿರುವ ಈ ಎಲ್ಲ ನಷ್ಟಗಳು ಅದರ ಪಾಲಿಗೆ ದೊಡ್ಡ ಹಿನ್ನಡೆಯಾಗುತ್ತವೆ.
ಇಸ್ರೇಲ್‌ನಲ್ಲಿ ಮತ್ತೊಮ್ಮೆ ಅಮೆರಿಕಕ್ಕೆ ವಲಸೆ ಹೋಗಬಹುದಾದಷ್ಟು ದೊಡ್ಡ ಸಂಖ್ಯೆಯ ಯಹೂದಿಗಳಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಈ ಭಯ ಮತ್ತು ನಿರಂತರ ಯುದ್ಧದ ಭಯದಲ್ಲಿ ಯಾರಾದರೂ ಹೇಗೆ ಬದುಕಲು ಸಾಧ್ಯ?
ಇಸ್ರೇಲ್‌ನಿಂದ ವಿಶ್ವದ ದೇಶಗಳಿಗೆ ವಲಸೆ ಅಷ್ಟಾಗಿ ಇರಲಿಲ್ಲ. ಅದು ನಿಂತಿತ್ತು. ಈಗ ಇದರ ನಂತರ ವಲಸೆ ಹೆಚ್ಚಾಗಬಹುದು.ಜನರು ಸಹ ಅಂತಹ ಭಯ ವ್ಯಕ್ತಪಡಿಸುತ್ತಿದ್ದಾರೆ. ಇಸ್ರೇಲ್ ಈಗ ಇದನ್ನೆಲ್ಲ ಮನವರಿಕೆ ಮಾಡಿಕೊಂಡಂತಿದೆ.
ಇನ್ನು, ಇರಾನ್ ಸಹ ಅನೇಕ ಪಾಠಗಳನ್ನು ಕಲಿತಿದೆ. ಬಲಿಷ್ಠ ಇರಾನ್ ತನ್ನಲ್ಲಿ ವಾಯು ರಕ್ಷಣಾ ವ್ಯವಸ್ಥೆಯೇ ಇಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿದೆ.
ಆರಂಭಿಕ ದಿನಗಳಲ್ಲಿ ಇಸ್ರೇಲ್ ನಿರಂತರವಾಗಿ ದಾಳಿ ಮಾಡುವಾಗ, ಅದಕ್ಕೆ ಪ್ರತ್ಯುತ್ತರ ಕೊಡಲು ಏನೂ ಇರಲಿಲ್ಲ. ಇಸ್ರೇಲ್ ಇರಾನ್‌ನ ಸಂಪೂರ್ಣ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಿತ್ತು.
ಇದರ ಹೊರತಾಗಿ, ಚೀನಾ ಮತ್ತು ರಶ್ಯ ಇರಾನ್ ಅನ್ನು ಬೆಂಬಲಿಸುವ ಹೇಳಿಕೆಗಳನ್ನು ನೀಡಬಹುದಾದರೂ, ಅವು ಇರಾನ್ ಯುದ್ಧದಲ್ಲಿ ನೇರವಾಗಿ ಇಳಿದು ಹೋರಾಡುವುದಿಲ್ಲ ಎಂಬುದು ಕೂಡ ಇರಾನ್‌ಗೆ ಈಗ ಅರ್ಥವಾಗಿರುತ್ತದೆ. ಯುದ್ಧವಾದರೆ, ತಾನು ಮಾತ್ರ ಹೋರಾಡಬೇಕಾಗುತ್ತದೆ ಎಂಬುದು ಅದಕ್ಕೆ ಅರ್ಥವಾಗಿದೆ.
ಇದರ ಜೊತೆಗೇ, ಇರಾನ್‌ಗೆ ಈ ಯುದ್ಧ ಹೊಸ ಶಕ್ತಿಯನ್ನು ತಂದಂತಿದೆ.
ಸುಪ್ರೀಂ ಲೀಡರ್ ಖಾಮಿನೈ ವಿರುದ್ಧ ದೇಶದಲ್ಲಿ ಎದ್ದಿದ್ದ ಅಸಮಾಧಾನ, ಈಗ ಅವರು ದೇಶಕ್ಕೆ ಮರಳಿ ಗೌರವ ತಂದಿರುವುದರಿಂದ ಬದಲಾಗಲಿದೆ ಮತ್ತು ಮಧ್ಯಪ್ರಾಚ್ಯದಲ್ಲಿ ಅವರು ಮತ್ತೊಮ್ಮೆ ಇರಾನ್‌ನ ಪ್ರಾಬಲ್ಯವನ್ನು ಸ್ಥಾಪಿಸಿದ ರೀತಿ ಕೂಡ ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತದೆ. ಜನರು ತಮ್ಮ ವಿರುದ್ಧ ಹೊಂದಿದ್ದ ಅಸಮಾಧಾನವನ್ನು ಅವರು ಈಗ ದೊಡ್ಡ ಪ್ರಮಾಣದಲ್ಲಿ ತೊಡೆದುಹಾಕುವಲ್ಲಿ ಸ್ಪಷ್ಟವಾಗಿ ಯಶಸ್ವಿಯಾಗಿದ್ದಾರೆ.
ಟೆಹರಾನ್‌ನ ಮಾಧ್ಯಮಗಳು ಹಂಚಿಕೊಂಡ ಚಿತ್ರಗಳನ್ನು ಗಮನಿಸಿದರೆ, ಇರಾನ್ ಯುಎಸ್ ವಾಯುನೆಲೆಯ ಮೇಲೆ ದಾಳಿ ಮಾಡಿದಾಗ, ಜನರು ಅದನ್ನು ಬೀದಿಗಳಲ್ಲಿ ಸಂಭ್ರಮಿಸಿದ್ದನ್ನು ನೋಡಬಹುದು. ಅಮೆರಿಕದಂತಹ ದೇಶದ ವಾಯುನೆಲೆಯ ಮೇಲೆ ದಾಳಿ ಮಾಡಿದ್ದು ಇರಾನ್‌ಗೆ ಒಂದು ದೊಡ್ಡ ಮಾನಸಿಕ ವಿಜಯವಾಗಿದೆ.
ಇರಾನ್‌ಗೆ ಅನೇಕ ದೌರ್ಬಲ್ಯಗಳಿದ್ದವು. ಇಸ್ರೇಲ್‌ಗೂ ಹಲವು ದೌರ್ಬಲ್ಯಗಳಿದ್ದವು. ಆದರೆ ಇಸ್ರೇಲ್ ಇಡೀ ಪ್ರಪಂಚದ ಮುಂದೆ ಬಯಲು ಮಾಡಿಕೊಂಡಿರುವ ದೊಡ್ಡ ದೌರ್ಬಲ್ಯವೆಂದರೆ ಅಮೆರಿಕವಿಲ್ಲದೆ ಅದು ಏನೂ ಅಲ್ಲ ಎಂಬುದು.
ಕೊನೆಯಲ್ಲಿ, ಅಮೆರಿಕ ತನ್ನ ಬೆಂಬಲಕ್ಕೆ ಬರದಿದ್ದರೆ ಮತ್ತು ಅಮೆರಿಕ ಇರಾನ್‌ನಲ್ಲಿರುವ ಪರಮಾಣು ತಾಣಗಳ ಮೇಲೆ ಬಾಂಬ್ ದಾಳಿ ಮಾಡದಿದ್ದರೆ, ಇಸ್ರೇಲ್ ದೊಡ್ಡ ತೊಂದರೆಯಲ್ಲಿ ಸಿಲುಕುತ್ತಿತ್ತು. ಇಸ್ರೇಲ್ ಮೂರು ದಿನಗಳಿಂದ ಅಮೆರಿಕವನ್ನು ತನ್ನ ಬೆಂಬಲಕ್ಕೆ ಬರುವಂತೆ ಬೇಡಿಕೊಳ್ಳುತ್ತಿತ್ತು.
ಹೀಗೆ, ಇಸ್ರೇಲ್‌ನ ಈ ದೌರ್ಬಲ್ಯವನ್ನು ಜಗತ್ತಿನ ಮುಂದೆ ಮಾತ್ರವಲ್ಲದೆ, ಸ್ವತಃ ಇಸ್ರೇಲ್ ಜನರ ಮುಂದೆ ಇರಾನ್ ಬಯಲು ಮಾಡಿದೆ.
ಇಸ್ರೇಲ್ ಅಮೆರಿಕವಿಲ್ಲದೆ ನಿಲ್ಲಲು ಸಾಧ್ಯವಿಲ್ಲ ಎಂಬುದೇ ಇಸ್ರೇಲ್ ಪಾಲಿಗೆ ತುಂಬಾ ಅಪಾಯಕಾರಿ ಸಂಗತಿಯೂ ಆಗಿದೆ.
ಇನ್ನು ಈ ಯುದ್ಧದಿಂದ, ಅಮೆರಿಕ ನೆಲೆಗಳ ಮೇಲೆ ಇರಾನ್ ನಡೆಸಿದ ದಾಳಿಯಿಂದ ಗಲ್ಫ್ ಆಡಳಿತವೂ ಪಾಠ ಕಲಿತಿದೆ.
ವಾಸ್ತವವಾಗಿ, ಟ್ರಂಪ್ ಅವರನ್ನು ಕದನ ವಿರಾಮಕ್ಕೆ ಒತ್ತಾಯಿಸಿದ್ದೇ ಗಲ್ಫ್ ಆಡಳಿತ ಎಂದು ಹೇಳಲಾಗುತ್ತಿದೆ.
ತನ್ನ ಪ್ರದೇಶದಲ್ಲಿ ಅಮೆರಿಕದ ನೆಲೆಗಳಿದ್ದರೆ ಅದು ಎಷ್ಟು ಅಪಾಯಕಾರಿಯಾಗಬಹುದು ಎಂಬುದನ್ನೂ ಕೂಡ ಕೊಲ್ಲಿ ದೇಶಗಳು ಗ್ರಹಿಸಿವೆ. ಹಾಗಾಗಿಯೇ, ತಮ್ಮ ಪ್ರದೇಶದಿಂದ ನೆಲೆಯನ್ನು ಸ್ಥಳಾಂತರಿಸುವಂತೆ ಅಮೆರಿಕವನ್ನು ಅವು ಒತ್ತಾಯಿಸಿವೆ.
ಇರಾನ್ ತನ್ನ ಅತಿದೊಡ್ಡ ಹೋರಾಟದಲ್ಲಿ ಒಂದು ಪ್ರಮುಖ ಉದ್ದೇಶವನ್ನು ಸಾಧಿಸಿದೆ.
ಇರಾನ್‌ನ ಯುರೇನಿಯಂ ಪುಷ್ಟೀಕರಣದ ಕುರಿತು ಯಾವುದೇ ಮಾತುಕತೆಗಳು ಈಗ ಇಲ್ಲ. ಯುದ್ಧಕ್ಕೂ ಮೊದಲು ಇದ್ದಂಥ ಸ್ಥಿತಿ ಎಅPಔಂ ಆಯ್ಕೆಗಳು ಈಗ ಅದರ ಎದುರು ಇವೆ.
ಅಮೆರಿಕನ್ ನೆಲೆಗಳ ಮೇಲಿನ ದಾಳಿಗಳು ಸಾಂಕೇತಿಕವಾಗಿರಲಿಲ್ಲ. ಅವು ಒಂದು ಸ್ಪಷ್ಟ ಸಂದೇಶವನ್ನು ಕೊಟ್ಟಿವೆ.
ಇರಾನ್ ಮೇಲೆ ದಾಳಿ ಮಾಡುವುದು ಜಾಗತಿಕ ಇಂಧನ ಮತ್ತು ಭದ್ರತೆಗೆ ವಿನಾಶಕಾರಿ ಎಂಬುದು ಮನದಟ್ಟಾಗಿದೆ.
ಇದು ಇರಾನ್‌ಗೆ ಗೆಲುವಲ್ಲ. ಆದರೆ ಅದು ನಿಜಕ್ಕೂ ಆಟವನ್ನು ಸೋಲದೆಯೇ ಚೆನ್ನಾಗಿ ಕೊನೆಗೊಳಿಸಿದೆ. ಅಲ್ಲೀಗ ಸರಕಾರ ಬದಲಾವಣೆ ಇಲ್ಲ, ಪರಮಾಣು ಕಾರ್ಯಕ್ರಮಕ್ಕೂ ಕೊನೆ ಹಾಡಬೇಕಿಲ್ಲ.
ಅಂತೂ ಒಂದು ಹಂತದ ಯುದ್ಧ ಮುಗಿದಿದೆ. ಆದರೆ, ಯುದ್ಧ ನಿಜವಾಗಿಯೂ ಮುಗಿದಿದೆಯೇ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ.







