Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅಮಿತ್ ಶಾ ದಾಖಲೆ ಭಾರತ ಹೆಮ್ಮೆ...

ಅಮಿತ್ ಶಾ ದಾಖಲೆ ಭಾರತ ಹೆಮ್ಮೆ ಪಡುವಂತಹದ್ದೇ?

ವಿನಯ್ ಕೆ.ವಿನಯ್ ಕೆ.8 Aug 2025 4:02 PM IST
share
ಅಮಿತ್ ಶಾ ದಾಖಲೆ ಭಾರತ ಹೆಮ್ಮೆ ಪಡುವಂತಹದ್ದೇ?

ಅಮಿತ್ ಶಾ ಗೃಹ ಸಚಿವರಾಗಿ ಸಾಂವಿಧಾನಿಕ ನಿಷ್ಠೆ ಮೆರೆದರೋ ಅಥವಾ ಪಕ್ಷದ ಸಿದ್ಧಾಂತಕ್ಕೆ ತಕ್ಕಂತೆ ನಡೆದರೋ ಎಂಬುದಕ್ಕೆ ಉತ್ತರ ಎದುರಲ್ಲೇ ಇದೆ. ಅವರ ಅವಧಿ, ಭಾರತೀಯ ಪ್ರಜಾಪ್ರಭುತ್ವದ ಮೂಲಭೂತ ತತ್ವಗಳಾದ ಒಕ್ಕೂಟ, ಜಾತ್ಯತೀತತೆ, ಸಾಂಸ್ಥಿಕ ಸ್ವಾಯತ್ತೆ ಮತ್ತು ಭಿನ್ನಾಭಿಪ್ರಾಯದ ಹಕ್ಕುಗಳನ್ನು ಬದಿಗೆ ತಳ್ಳಿತು. ಕಾನೂನು ಜಾರಿ ವ್ಯವಸ್ಥೆಯೆನ್ನುವುದು ಹಿಂದೆಂದಿಗಿಂತಲೂ ಹೆಚ್ಚು ರಾಜಕೀಕರಣಗೊಂಡಿತು. ಭಯದ ವಾತಾವರಣ ಮುಕ್ತ ಅಭಿವ್ಯಕ್ತಿಯನ್ನೇ ಹತ್ತಿಕ್ಕಿತು. ಸರಕಾರ ಮತ್ತು ಅಲ್ಪಸಂಖ್ಯಾತರ ನಡುವಿನ ಸಾಮಾಜಿಕ ಸಾಮರಸ್ಯಕ್ಕೂ ಧಕ್ಕೆಯನ್ನುಂಟು ಮಾಡಿತು.

ಅಮಿತ್ ಶಾ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಗೋವಿಂದ್ ವಲ್ಲಭ ಪಂತ್ ಅವರಂಥ ದಿಗ್ಗಜರನ್ನು ಹಿಂದಿಕ್ಕಿ, ಭಾರತದ ಅತ್ಯಂತ ದೀರ್ಘಾವಧಿಯ ಕೇಂದ್ರ ಗೃಹ ಸಚಿವರಾಗಿ ಮುಂದುವರಿದಿದ್ದಾರೆ.

ಈ ಹೊತ್ತಲ್ಲಿ, ಅವರ ಅಧಿಕಾರಾವಧಿಯ ವಿದ್ಯಮಾನಗಳು ಹೇಗೆ ಕಾಣಿಸುತ್ತಿವೆ ಎಂಬುದನ್ನು ಪರಿಶೀಲಿಸುವುದು ಅಗತ್ಯ.

ಅವರ ಅವಧಿಯಲ್ಲಿ ಗೃಹ ಸಚಿವಾಲಯ ಆಂತರಿಕ ಭದ್ರತೆಯನ್ನು ನಿರ್ವಹಿಸುವುದರ ಆಚೆಗೆ ಏನೆಲ್ಲವನ್ನೂ ಮಾಡಿತು? ಸರಕಾರ, ನಾಗರಿಕರು ಮತ್ತು ಸಂಸ್ಥೆಗಳ ನಡುವಿನ ಸಂಬಂಧದಲ್ಲಿ ಏನೆಲ್ಲ ಬದಲಾವಣೆಗಳು ಕಂಡವು? ಅವರ ಕಾಲ ಹೇಗೆ ವಿವಾದಗಳ ನೆಲೆಯಾಗಿ ಪರಿಣಮಿಸಿದೆ ಎನ್ನುವುದನ್ನು ನೋಡಬೇಕಿದೆ.

ಅವರ ಬೆಂಬಲಿಗರ ದೃಷ್ಟಿಯಲ್ಲಿ, ಅಮಿತ್ ಶಾ ಭವಿಷ್ಯದ ಭಾರತಕ್ಕೆ ಬೇಕಾದ ಬಲಿಷ್ಠ ನಾಯಕ. ಕಾಶ್ಮೀರ ಸಮಸ್ಯೆಯನ್ನು ನಿರ್ಣಾಯಕವಾಗಿ ಪರಿಹರಿಸಿದ ವ್ಯಕ್ತಿ. ಪ್ರಕ್ಷುಬ್ಧ ಈಶಾನ್ಯದಲ್ಲಿ ಶಾಂತಿಯನ್ನು ತಂದಿರುವ ಮತ್ತು ಭಯೋತ್ಪಾದನೆ ಹತ್ತಿಕ್ಕಿದ ಚಾಣಕ್ಯ.

ಅವರ ಟೀಕಾಕಾರರ ದೃಷ್ಟಿಯಲ್ಲಿ, ಅವರು ಕಣ್ಗಾವಲು ಸರಕಾರದ ಹಿಂದಿರುವ ರೂವಾರಿ. ನಾಗರಿಕ ಸ್ವಾತಂತ್ರ್ಯಗಳ ದಮನ, ಪೊಲೀಸ್ ಪಡೆಗಳ ರಾಜಕೀಕರಣ ಮತ್ತು ಭಾರತದ ಸಾಮಾಜಿಕ ರಚನೆಯ ಕುಸಿತ ಎಲ್ಲವೂ ಅವರ ಅವಧಿಯಲ್ಲಿ ಆಗಿವೆ.

ಬಹುಸಂಖ್ಯಾತ ನಿರೂಪಣೆಯನ್ನು ಮುಖ್ಯವಾಹಿನಿಗೆ ತಂದವರೇ ಅವರು.

ಶಾ ಅಧಿಕಾರಾವಧಿಯ ಅತ್ಯಂತ ನಿರ್ಣಾಯಕ ವಿದ್ಯಮಾನ, ಆಗಸ್ಟ್ 5, 2019ರಂದು 370ನೇ ವಿಧಿ ರದ್ದತಿಯೊಂದಿಗೆ ಜಮ್ಮು-ಕಾಶ್ಮೀರದ ವಿಶೇಷ ಸ್ವಾಯತ್ತ ಸ್ಥಾನಮಾನ ತೆಗೆದುಹಾಕಿದ್ದು. ಈ ಕ್ರಮವನ್ನು ಭಾರೀ ಗೌಪ್ಯತೆಯೊಂದಿಗೆ ದಿಢೀರನೇ ತಂದುಬಿಡಲಾಯಿತು.ಮಾತ್ರವಲ್ಲ, ದೊಡ್ಡ ಮಟ್ಟದ ಬಲಪ್ರಯೋಗವೂ ನಡೆಯಿತು. ಸೈನ್ಯದ ನಿಯೋಜನೆ, ತಿಂಗಳುಗಳ ಕಾಲ ಇಂಟರ್‌ನೆಟ್ ಸ್ಥಗಿತದಂಥ ಕ್ರಮ, ಮೂವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಕಣಿವೆಯ ಎಲ್ಲ ಪ್ರಮುಖ ರಾಜಕೀಯ ನಾಯಕರ ಪೂರ್ವಭಾವಿ ಗೃಹಬಂಧನ ಇವೆಲ್ಲವೂ ನಡೆದವು.

ಸರಕಾರ ಹಾಗೂ ಅದರ ಬೆಂಬಲಿಗರ ದೃಷ್ಟಿಯಲ್ಲಿ ಅದು ಐತಿಹಾಸಿಕ ಕ್ರಮವಾಗಿದೆ. ಅದರ ಬಳಿಕ ಭಯೋತ್ಪಾದಕ ದಾಳಿಗಳು ಮತ್ತು ಒಳನುಸುಳುವಿಕೆ ಇಳಿಕೆಯಾಗಿದೆ ಎಂದು ಗೃಹ ಸಚಿವಾಲಯದ ಡೇಟಾಗಳು ತೋರಿಸುತ್ತವೆ.

370ನೇ ವಿಧಿ ಪ್ರತ್ಯೇಕತಾವಾದಕ್ಕೆ ಮೂಲ ಕಾರಣವಾಗಿತ್ತು ಮತ್ತು ಅಭಿವೃದ್ಧಿಗೆ ಅಡ್ಡಿಯಾಗಿತ್ತು ಎಂಬುದು ಸರಕಾರದ ಹಾಗೂ ಆರೆಸ್ಸೆಸ್‌ನ ಪ್ರತಿಪಾದನೆ.

ಕಾಶ್ಮೀರವನ್ನು ಸಂಪೂರ್ಣವಾಗಿ ಭಾರತೀಯ ಒಕ್ಕೂಟಕ್ಕೆ ಒಳಪಡಿಸಲು ಅದರ ರದ್ದತಿ ಅತ್ಯಗತ್ಯವಾಗಿತ್ತು ಎಂದೇ ಪ್ರಚಾರ ಮಾಡಲಾಯಿತು. ಅಮಿತ್ ಶಾ ಅದನ್ನು ರಾಷ್ಟ್ರೀಯ ಸಮಗ್ರತೆಯ ಗೆಲುವು ಎಂದು ಯಶಸ್ವಿಯಾಗಿ ಬಿಂಬಿಸಿದರು. ಆದರೆ ಹಾಗೆ ಹೇಳಲಾಗುವ ಯಶಸ್ಸಿಗೆ ತೆತ್ತ ಬೆಲೆ ಎಂಥದ್ದು?

ಅದಕ್ಕಾಗಿ ಅನುಸರಿಸಿದ ವಿಧಾನ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನೇ ಉಲ್ಲಂಘಿಸಿದ್ದಾಗಿತ್ತು.

ವಿಧಾನಸಭೆಯನ್ನು ವಿಸರ್ಜಿಸಲಾಗಿದ್ದ ರಾಜ್ಯದ ಚುನಾಯಿತ ಪ್ರತಿನಿಧಿಗಳನ್ನು ಸಂಪರ್ಕಿಸದೆ ಆ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ನಂತರ ಇಂಟರ್‌ನೆಟ್ ಸ್ಥಗಿತಗೊಳಿಸಿದ್ದಂತೂ ಪ್ರಜಾಪ್ರಭುತ್ವದಲ್ಲೇ ಅತ್ಯಂತ ದೀರ್ಘ ಅವಧಿಯದ್ದಾಗಿತ್ತು. ಅದು ಅಲ್ಲಿನ ಆರ್ಥಿಕತೆ, ಶಿಕ್ಷಣ ಮತ್ತು ಆರೋಗ್ಯ ಸೇವೆಗೆ ದೊಡ್ಡ ಹೊಡೆತವಾಯಿತು.

ಭಯೋತ್ಪಾದಕ ದಾಳಿಗಳ ಒಟ್ಟು ಸಂಖ್ಯೆ ಕಡಿಮೆಯಾಗಿದ್ದರೂ, ನಾಗರಿಕರನ್ನು, ಅದರಲ್ಲೂ ಪಂಡಿತರು ಮತ್ತು ಸ್ಥಳೀಯರಲ್ಲದ ಕಾರ್ಮಿಕರನ್ನು ಗುರಿಯಾಗಿಸಿ ನಡೆದ ಸರಣಿ ಹತ್ಯೆಗಳು ಭಯ ಸೃಷ್ಟಿಸಿವೆ. ಕಾಶ್ಮೀರಿ ಪಂಡಿತರಂತೂ ತೀವ್ರ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ರಾಜ್ಯ ಸ್ಥಾನಮಾನವನ್ನು ಮರಳಿಸುವ ಭರವಸೆ ಈಡೇರಿಲ್ಲ. ಪೂರ್ತಿ ಪ್ರದೇಶ ಕೇಂದ್ರ ಸರಕಾರದ ನಿಯಂತ್ರಣದಲ್ಲೇ ಇದೆ. ಇದು, ಒಕ್ಕೂಟ ಮತ್ತು ಪ್ರಜಾಸತ್ತಾತ್ಮಕ ಪ್ರಾತಿನಿಧ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಈ ನಡುವೆ ಪಹಲ್ಗಾಮ್‌ನಂತಹ ಭೀಕರ ಭಯೋತ್ಪಾದಕ ದಾಳಿಯೂ ನಡೆದು ಹೋಯಿತು. ಅದರ ಬಗ್ಗೆ ಎದ್ದಿರುವ ಗಂಭೀರ ಪ್ರಶ್ನೆಗಳಿಗೆ ಸರಕಾರ ಉತ್ತರಿಸುವ ಗೋಜಿಗೇ ಹೋಗುತ್ತಿಲ್ಲ.

ಕಾಶ್ಮೀರದಲ್ಲಿ ಇದೆಯೆನ್ನಲಾಗುವ ಶಾಂತಿ, ಹೃದಯಗಳನ್ನು ಗೆಲ್ಲುವ ಮೂಲಕ ಬಂದದ್ದಲ್ಲ. ಬದಲಿಗೆ, ಅದು ಮಿಲಿಟರಿ ಬೂಟುಗಳ ಭಯದಿಂದ ಆವರಿಸಿರುವ ಸ್ಮಶಾನ ಮೌನ ಮಾತ್ರ ಎಂದೇ ವಿಶ್ಲೇಷಕರು ಹೇಳುತ್ತಾರೆ.

ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದು ಸುಮಾರು ಒಂದೂವರೆ ವರ್ಷಗಳ ಕಾಲ ಅದು ಮುಂದುವರಿಯಿತು. ಇವತ್ತಿಗೂ ಅಲ್ಲಿ ಸಂಪೂರ್ಣ ಶಾಂತಿ ನೆಲೆಸಿಲ್ಲ. ಆಗಾಗ ಹಿಂಸೆ ಭುಗಿಲೇಳುತ್ತಲೇ ಇದೆ.

ಅಲ್ಲಿ ಹಿಂಸಾಚಾರಕ್ಕೆ ಕಡಿವಾಣ ಹಾಕುವಲ್ಲಿ ಅಮಿತ್ ಶಾ ಸಂಪೂರ್ಣ ವಿಫಲವಾದರು. ಅಷ್ಟೇ ಅಲ್ಲ, ಅಲ್ಲಿ ಹಿಂಸಾಚಾರ ಭುಗಿಲೇಳಲು ಅಲ್ಲಿನ ಬಿಜೆಪಿ ಸರಕಾರವೇ ಪರೋಕ್ಷವಾಗಿ ಕಾರಣವಾಯಿತು ಎಂಬ ಗಂಭೀರ ಆರೋಪಗಳಿವೆ.

ಅಲ್ಲಿನ ಬಿಜೆಪಿ ಸಿಎಂ ವಿರುದ್ಧವೂ ಇಂತಹದೇ ಆರೋಪ ಇದ್ದರೂ ಅವರು ತೀರಾ ಇತ್ತೀಚಿನವರೆಗೂ ಅಧಿಕಾರದಲ್ಲೇ ಮುಂದುವರಿದಿದ್ದರು.

ಮೋದಿ ಸರಕಾರ ಹಾಗೂ ಅಮಿತ್ ಶಾ ಮಣಿಪುರದಲ್ಲಿ ಶಾಂತಿ ಸ್ಥಾಪಿಸುವ ವಿಷಯದಲ್ಲಿ ಸಂಪೂರ್ಣವಾಗಿ ನಿಷ್ಕ್ರಿಯರಾದರು.

ಹೊಸ ಸಂಸತ್ ಭವನದಲ್ಲಿ ಕೆಲವರು ನುಗ್ಗಿ ಕಲಾಪ ನಡೆಯುತ್ತಿರುವಾಗಲೇ ಅಲ್ಲಿ ಬಣ್ಣದ ಹೊಗೆ ಬಾಂಬ್ ಹಾಕಿದ ಘಟನೆಯೂ ಅಮಿತ್ ಶಾ ಅವಧಿಯಲ್ಲೇ ನಡೆಯಿತು. ಅಭೂತಪೂರ್ವ ಸುರಕ್ಷತಾ ವ್ಯವಸ್ಥೆ ಇದೆ ಎಂದು ಹೇಳಲಾದ ಹೊಸ ಸಂಸತ್ ಭವನದಲ್ಲೇ ಇಂತಹದೊಂದು ಘಟನೆ ನಡೆದು ಹೋಯಿತು.

ಗೃಹ ಸಚಿವರಾಗಿ ಅಮಿತ್ ಶಾ ರಾಜಧಾನಿ ದಿಲ್ಲಿಯ ಪೊಲೀಸ್ ವ್ಯವಸ್ಥೆ ಮೇಲೆ ನೇರ ಆಡಳಿತಾತ್ಮಕ ನಿಯಂತ್ರಣ ಹೊಂದಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಅದು ಹೇಗೆಲ್ಲ ನಡೆದುಕೊಂಡಿತು ಎಂಬುದು ಕೂಡ ಬಹಳ ಚರ್ಚೆಗೆ ಒಳಗಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ವಿದ್ಯಾರ್ಥಿಗಳ ಪ್ರತಿಭಟನೆಗಳು ಮತ್ತು ಫೆಬ್ರವರಿ 2020ರ ದಿಲ್ಲಿ ಗಲಭೆಗಳನ್ನು ಪೊಲೀಸರು ನಿರ್ವಹಿಸಿದ ರೀತಿ ತೀವ್ರ ಟೀಕೆಗೆ ತುತ್ತಾಗಿದೆ.

ಡಿಸೆಂಬರ್ 2019ರಲ್ಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ವಿಶ್ವವಿದ್ಯಾನಿಲಯದ ಲೈಬ್ರರಿಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ದೃಶ್ಯಗಳು ದೇಶವನ್ನೇ ಬೆಚ್ಚಿಬೀಳಿಸಿದ್ದವು.

50ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡ ಈಶಾನ್ಯ ದಿಲ್ಲಿ ಗಲಭೆಯ ನಂತರದ ತನಿಖೆ ತೀವ್ರ ಪಕ್ಷಪಾತದಿಂದ ಕೂಡಿತ್ತು ಎಂದು ಮಾನವ ಹಕ್ಕುಗಳ ಸಂಘಟನೆಗಳು ಮತ್ತು ನ್ಯಾಯಪರಿಣಿತರು ವ್ಯಾಪಕವಾಗಿ ಖಂಡಿಸಿದ್ದಾರೆ. ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು ಅಥವಾ ಕೆಲ ಸಂದರ್ಭಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿರುದ್ಧದ ಹಿಂಸಾಚಾರದಲ್ಲಿ ಸ್ವತಃ ಭಾಗಿಯಾಗಿದ್ದರು ಎಂದು ಸತ್ಯಶೋಧನಾ ವರದಿಗಳು ಬಹಿರಂಗಪಡಿಸಿವೆ.

ಗಲಭೆಗೆ ಮೊದಲು ‘ಗೋಲಿ ಮಾರೋ’ ಘೋಷಣೆಯಂಥ ಪ್ರಚೋದನಕಾರಿ ಭಾಷಣಗಳನ್ನು ಪ್ರಮುಖ ಬಿಜೆಪಿ ನಾಯಕರೇ ಮಾಡಿದ್ದರು. ಆದರೆ ಅಂಥವರ ಮೇಲೆ ಯಾವುದೇ ಕಾನೂನು ಕ್ರಮಗಳು ಜರುಗಲೇ ಇಲ್ಲ. ತದ್ವಿರುದ್ಧವಾಗಿ, ಶಾಂತಿಯುತ ಸಿಎಎ ವಿರೋಧಿ ಪ್ರತಿಭಟನೆಗಳನ್ನು ಆಯೋಜಿಸಿದ್ದ ವಿದ್ಯಾರ್ಥಿ ಹೋರಾಟಗಾರರು, ಶಿಕ್ಷಣ ತಜ್ಞರು ಮತ್ತು ಸಿವಿಲ್ ಸೊಸೈಟಿ ಸದಸ್ಯರ ಮೇಲೆ ಯುಎಪಿಎ ಅಡಿಯಲ್ಲಿ ಆರೋಪ ಹೊರಿಸಲಾಯಿತು.

ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್‌ರಂಥವರನ್ನು ವರ್ಷಗಳಿಂದ ಜೈಲಿನಲ್ಲಿಡಲಾಗಿದೆ ಮತ್ತು ಜಾಮೀನು ನಿರಾಕರಿಸಲಾಗುತ್ತಿದೆ.

ಕಾನೂನು ಜಾರಿ ವ್ಯವಸ್ಥೆಯನ್ನು ಹೀಗೆ ಸೆಲೆಕ್ಟಿವ್ ಆಗಿ ಬಳಸುತ್ತಿರುವುದು ಶಾ ಅವಧಿಯ ಒಂದು ಪ್ರಮುಖ ಗುಣ ಲಕ್ಷಣವೇ ಆಗಿದೆ. ಅವರ ಅಡಿಯಲ್ಲಿ ಬರುವ ದಿಲ್ಲಿ ಪೊಲೀಸರು ಕಾನೂನು ಸುವ್ಯವಸ್ಥೆಯನ್ನು ತಟಸ್ಥವಾಗಿ ಎತ್ತಿಹಿಡಿಯುವವರಾಗಿ ಉಳಿದಿಲ್ಲ. ಬದಲಾಗಿ, ರಾಜಕೀಯ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಸಾಧನವಾಗಿ ಅವರು ಕೆಲಸ ಮಾಡುತ್ತಿದ್ದಾರೆ ಎಂಬ ಅನುಮಾನವೇ ಗಟ್ಟಿಯಾಗಿದೆ.

ಇದು ಇಲ್ಲಿಗೇ ನಿಲ್ಲುವುದಿಲ್ಲ.

ಸಿಬಿಐ ಮತ್ತು ಈ.ಡಿ. ಥರದ ತನಿಖಾ ಏಜೆನ್ಸಿಗಳ ವಿಷಯದಲ್ಲೂ ಇದೇ ಆಗುತ್ತಿದೆ. ಗೃಹ ಸಚಿವಾಲಯದ ಅಡಿಯಲ್ಲಿ ನೇರವಾಗಿ ಅಲ್ಲದಿದ್ದರೂ, ವಿರೋಧ ಪಕ್ಷದ ನಾಯಕರ ವಿರುದ್ಧ ಅವುಗಳ ಬಳಕೆ ಈ ಅವಧಿಯ ಒಂದು ಪ್ರವೃತ್ತಿಯಾಗಿದೆ. ಬಿಜೆಪಿಯ ವ್ಯವಸ್ಥೆಯಲ್ಲಿ ಅತ್ಯಂತ ಪ್ರಬಲರಾಗಿರುವ ಶಾ ಅವರನ್ನು ಈ ಪ್ರವೃತ್ತಿಯ ಹಿಂದಿನ ಶಕ್ತಿಯೆಂಬಂತೆ ನೋಡಲಾಗುತ್ತದೆ.

ತನಿಖೆಗಳ ಹಾಗೂ ದಾಳಿಯ ಸಮಯ ಮತ್ತು ಟಾರ್ಗೆಟ್ ಕೂಡ ಬೆದರಿಸುವ, ದಮನಿಸುವ ತಂತ್ರಗಾರಿಕೆಯ ಭಾಗವೇ ಆಗಿರುವುದು ಗುಟ್ಟಾಗಿ ಉಳಿದಿಲ್ಲ.

ಇದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ನಿರ್ಣಾಯಕವಾದ ಸಾಂಸ್ಥಿಕ ಸ್ವಾಯತ್ತೆಯನ್ನು ದುರ್ಬಲಗೊಳಿಸಿರುವುದು ಕೂಡ ಕಣ್ಣೆದುರಿನ ಸತ್ಯ.

ಶಾ ಅಧಿಕಾರಾವಧಿಯಲ್ಲಿ ಢಾಳಾಗಿ ಕಾಣಿಸುತ್ತಿರುವ ಮತ್ತೊಂದು ವಿದ್ಯಮಾನ, ಬುಲ್ಡೋಜರ್ ಅಬ್ಬರ.

ಮುಖ್ಯವಾಗಿ ಅಲ್ಪಸಂಖ್ಯಾತರ ವಿರುದ್ಧ ದಂಡನೆಯ ಹೆಸರಲ್ಲಿ ಬುಲ್ಡೋಜರ್ ಬಳಸಿ, ಅವರ ಮನೆಗಳನ್ನು ಕೆಡವಲಾಗುತ್ತವೆ, ಬೀದಿಪಾಲು ಮಾಡಿ ಸಂಭ್ರಮಿಸಲಾಗುತ್ತದೆ.

ಉತ್ತರ ಪ್ರದೇಶದಲ್ಲಿ ಜನಪ್ರಿಯವಾಗಿರುವ ಈ ಮಾದರಿಯನ್ನು ಬಿಜೆಪಿ ಸರಕಾರಗಳಿರುವ ಇತರ ರಾಜ್ಯಗಳಲ್ಲಿಯೂ ಬಳಸಲಾಗುತ್ತಿದೆ. ಕೆಲವೊಮ್ಮೆ ಕೋಮು ಘರ್ಷಣೆಗಳ ನಂತರವೂ ಇದೇ ಅಸ್ತ್ರ ಪ್ರಯೋಗಿಸುವುದು ನಡೆದಿದೆ.

ದಿಲ್ಲಿಯ ಜಹಾಂಗೀರ್‌ಪುರಿ ಅಥವಾ ಮಧ್ಯಪ್ರದೇಶದ ಖಾರ್ಗೋನ್‌ನಂಥ ಕಡೆಗಳಲ್ಲಿ, ಗಲಭೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳ, ಮುಖ್ಯವಾಗಿ ಮುಸ್ಲಿಮರ ಮನೆಗಳು ಮತ್ತು ಅಂಗಡಿಗಳನ್ನು ನಿರ್ದಯವಾಗಿ, ನಿರ್ದಾಕ್ಷಿಣ್ಯದಿಂದ ಕೆಡವಲಾಯಿತು. ಬಹಳ ಸಲ ಈ ಕ್ರಮಕ್ಕೆ ಸೂಕ್ತ ಕಾನೂನು ಪ್ರಕ್ರಿಯೆಯನ್ನೂ ಅನುಸರಿಸಿರಲಿಲ್ಲ ಎನ್ನುವುದು ಇದರ ಹಿಂದಿನ ಕ್ರೂರ ಧೋರಣೆಯನ್ನು ಸೂಚಿಸುತ್ತದೆ. ಆಂತರಿಕ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ನೋಡಬೇಕಿದ್ದ ಗೃಹ ಸಚಿವಾಲಯ ಅದನ್ನು ಮರೆತೇಬಿಟ್ಟಂತಿದೆ, ಮತ್ತದರ ಬಗ್ಗೆ ಮೌನವಾಗಿದೆ. ಇದನ್ನು ಅನೇಕರು ಮೌನ ಸಮ್ಮತಿ ಎಂದು ವ್ಯಾಖ್ಯಾನಿಸುತ್ತಾರೆ.

ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಪ್ರತೀಕಾರ ತೀರಿಸಿಕೊಳ್ಳುವುದನ್ನು ಇಲ್ಲಿ ಕಾಣಬಹುದು. ಹೀಗಾಗಿ ಇಲ್ಲಿ ಕಾನೂನೆಂಬುದು ಇಲ್ಲವಾಗಿ, ಅದರ ಜಾಗದಲ್ಲಿ ಅಧಿಕಾರಸ್ಥರ ನಿಯಂತ್ರಣ ಮಾತ್ರ ಕೆಲಸ ಮಾಡುತ್ತದೆ.

ದ್ವೇಷ ಭಾಷಣದ ವಿಷಯವನ್ನೂ ಈ ನೆಲೆಯಿಂದ ನೋಡಬೇಕು.

ಕಳೆದ ಕೆಲ ವರ್ಷಗಳಿಂದ ಬಲಪಂಥೀಯ ಗುಂಪುಗಳ ಮಂದಿ ಮತ್ತು ಅನೇಕ ಸಲ ಚುನಾಯಿತ ಪ್ರತಿನಿಧಿಗಳೇ ಅಲ್ಪಸಂಖ್ಯಾತರ ವಿರುದ್ಧ ಬಹಿರಂಗವಾಗಿಯೇ ದ್ವೇಷ ಕಾರಿದ್ದಾರೆ, ಹಿಂಸಾಚಾರಕ್ಕೆ ಕರೆ ಕೊಟ್ಟಿದ್ದಾರೆ. ಇಂಥ ಹೊತ್ತಲ್ಲೆಲ್ಲ ಗೃಹ ಸಚಿವಾಲಯ ಜಾಣ ಮೌನ ತೋರಿಸಿತ್ತೆಂಬುದು ಕೂಡ ವ್ಯವಸ್ಥಿತ ತಂತ್ರದ ಭಾಗವಲ್ಲದೆ ಮತ್ತೇನಲ್ಲ.

ದ್ವೇಷ ಭಾಷಣ ಮಾಡುವವರ ವಿರುದ್ಧ ನಿರ್ಣಾಯಕ ಕ್ರಮಗಳೆಂದೂ ಜರುಗಲಿಲ್ಲ. ಈ ವೈಫಲ್ಯ ಹಿಂಸಾಚಾರದ ಹಿಂದಿನ ಕೋಮು ಧ್ರುವೀಕರಣಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ಅಮಿತ್ ಶಾ ಅಧಿಕಾರಾವಧಿಯಲ್ಲಿ ಭಿನ್ನಾಭಿಪ್ರಾಯಕ್ಕೆ ಅವಕಾಶಗಳೇ ಇಲ್ಲವೆಂಬಂತಾಗಿದೆ. ಯುಎಪಿಎ ಅಡಿಯಲ್ಲಿ ಹೋರಾಟಗಾರರು, ಪತ್ರಕರ್ತರು ಮತ್ತು ವಿದ್ಯಾರ್ಥಿಗಳ ವಿರುದ್ಧ ಅನ್ಯಾಯವಾಗಿ ಕ್ರಮ ಜರುಗಿಸಲಾಗಿದೆ.

ಇದಕ್ಕೆ ಶಾ ಅಧಿಕಾರಾವಧಿಗಿಂತ ಮುಂಚಿನದ್ದಾದ, ಆದರೆ ಅವರ ಅಡಿಯಲ್ಲಿ ತನಿಖೆ ತೀವ್ರಗೊಂಡ ಭೀಮಾ ಕೋರೆಗಾಂವ್ ಪ್ರಕರಣ ಒಂದು ಭಯಾನಕ ಉದಾಹರಣೆ. ಇದರಲ್ಲಿ 16 ಮಂದಿ ಹೋರಾಟಗಾರರು, ವಕೀಲರು ಮತ್ತು ಶಿಕ್ಷಣ ತಜ್ಞರನ್ನು ಜೈಲಿಗೆ ತಳ್ಳಲಾಯಿತು. ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ 84 ವರ್ಷದ ಫಾದರ್ ಸ್ಟ್ಯಾನ್ ಸ್ವಾಮಿ ಕೂಡ ಅವರಲ್ಲಿ ಸೇರಿದ್ದರು. ಕಡೆಗೆ ಅವರು ವಿಚಾರಣಾಧೀನರಾಗಿಯೇ ಕಸ್ಟಡಿಯಲ್ಲಿ ಸಾವನ್ನಪ್ಪಿದರು.

ಇಂಥ ಕ್ರಮಗಳನ್ನೆಲ್ಲ ಸಮರ್ಥಿಸಿಕೊಳ್ಳುವಾಗ ಗೃಹ ಸಚಿವಾಲಯ ಯಾವಾಗಲೂ ರಾಷ್ಟ್ರೀಯ ಭದ್ರತೆ ಎಂಬುದನ್ನು ಮುಂದೆ ಮಾಡುತ್ತದೆ. ಸರಕಾರವನ್ನು ಪ್ರಶ್ನಿಸುವವರೇ ಇಂಥವುಗಳಲ್ಲಿ ಹೆಚ್ಚಾಗಿ ಗುರಿಯಾಗುತ್ತಾರೆ. ಸರಕಾರವನ್ನು ವಿರೋಧಿಸಿದರೆ ರಾಷ್ಟ್ರ ವಿರೋಧಿ ಎಂದು ಹಣೆಪಟ್ಟಿ ಕಟ್ಟಲಾಗುತ್ತದೆ. ಪ್ರಜಾಪ್ರಭುತ್ವದ ಜೀವಾಳವಾಗಿರುವ ವಿರೋಧಿಸುವಿಕೆ ಮತ್ತು ಟೀಕೆಗಳನ್ನು ಕಾನೂನುಬಾಹಿರ ಎಂದು ಬಿಂಬಿಸುವ ಅಪಾಯಕಾರಿ ನಿರೂಪಣೆ ಇದಾಗಿದೆ.

ಮುಸ್ಲಿಮ್ ಎಂಬ ಏಕೈಕ ಕಾರಣಕ್ಕೆ ತಮ್ಮ ಪ್ರಾಣವನ್ನು ನಡು ಬೀದಿಯಲ್ಲಿ ಅಮಾನುಷವಾಗಿ ಕಳೆದುಕೊಂಡ ಅದೆಷ್ಟೋ ಜನರು ಶಾ ಅವಧಿಯಲ್ಲಿದ್ದಾರೆ. ಗುಂಪು ಹತ್ಯೆ ಎಂಬ ಭಯಾನಕ ವಿದ್ಯಮಾನ ಸಾಮಾನ್ಯವಾದದ್ದು ಇದೇ ಅವಧಿಯಲ್ಲಿ.

ಮಹಿಳಾ ಸುರಕ್ಷತೆಯ ವಿಷಯಕ್ಕೆ ಬಂದರೆ, ಪ್ರಮುಖ ಪ್ರಕರಣಗಳಲ್ಲಿ ಗೃಹ ಸಚಿವಾಲಯದ ಪ್ರತಿಕ್ರಿಯೆ ತೀವ್ರ ಟೀಕೆಗೆ ಗುರಿಯಾಗಿದೆ.

2020ರಲ್ಲಿ ನಡೆದ ಹಾತರಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಿಜೆಪಿ ಸರಕಾರವೇ ಇದ್ದ ಉತ್ತರ ಪ್ರದೇಶ ಪೊಲೀಸರು ಸಂತ್ರಸ್ತೆಯ ಶವದ ಅಂತ್ಯಕ್ರಿಯೆಯನ್ನು ಆಕೆಯ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ರಾತ್ರೋ ರಾತ್ರಿ ಮಾಡಿದರು. ಇದು ಗೃಹ ಸಚಿವಾಲಯದ ನಿಷ್ಕ್ರಿಯತೆ ಮತ್ತು ನಂತರದ ವ್ಯವಸ್ಥಿತ ನಡೆಗಳನ್ನು ನ್ಯಾಯಕ್ಕೆ ಎಸಗಿದ ದ್ರೋಹ ಎಂದೇ ಹೇಳಲಾಗಿದೆ.

ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಗುಜರಾತ್ ಸರಕಾರ ಅಪರಾಧಿಗಳನ್ನು ಅವಧಿಗೆ ಮೊದಲು ಬಿಡುಗಡೆ ಮಾಡುವುದಕ್ಕೆ ಗೃಹ ಸಚಿವಾಲಯವೇ ಒಪ್ಪಿತ್ತೆಂಬುದು ಮತ್ತೊಂದು ಆಘಾತಕಾರಿ ಸಂಗತಿ.

2002ರ ಗುಜರಾತ್ ಗಲಭೆ ಸಮಯದಲ್ಲಿನ ಅತ್ಯಂತ ಘೋರ ಅಪರಾಧಿಗಳನ್ನು ಬಿಡುಗಡೆ ಮಾಡುವ ಈ ನಿರ್ಧಾರ ಅಲ್ಪಸಂಖ್ಯಾತ ಮಹಿಳೆಯರಿಗೆ ನ್ಯಾಯ ನೀಡುವಲ್ಲಿನ ಸರಕಾರದ ಬದ್ಧತೆಯ ಬಗ್ಗೆಯೇ ದೊಡ್ಡ ಪ್ರಶ್ನೆಗಳನ್ನು ಹುಟ್ಟುಹಾಕಿತು.

ಶಾ ಗೃಹ ಸಚಿವರಾಗಿ ಸಾಂವಿಧಾನಿಕ ನಿಷ್ಠೆ ಮೆರೆದರೋ ಅಥವಾ ಪಕ್ಷದ ಸಿದ್ಧಾಂತಕ್ಕೆ ತಕ್ಕಂತೆ ನಡೆದರೋ ಎಂಬುದಕ್ಕೆ ಉತ್ತರ ಎದುರಲ್ಲೇ ಇದೆ. ಅವರ ಅವಧಿ, ಭಾರತೀಯ ಪ್ರಜಾಪ್ರಭುತ್ವದ ಮೂಲಭೂತ ತತ್ವಗಳಾದ ಒಕ್ಕೂಟ, ಜಾತ್ಯತೀತತೆ, ಸಾಂಸ್ಥಿಕ ಸ್ವಾಯತ್ತೆ ಮತ್ತು ಭಿನ್ನಾಭಿಪ್ರಾಯದ ಹಕ್ಕುಗಳನ್ನು ಬದಿಗೆ ತಳ್ಳಿತು. ಕಾನೂನು ಜಾರಿ ವ್ಯವಸ್ಥೆಯೆನ್ನುವುದು ಹಿಂದೆಂದಿಗಿಂತಲೂ ಹೆಚ್ಚು ರಾಜಕೀಕರಣಗೊಂಡಿತು. ಭಯದ ವಾತಾವರಣ ಮುಕ್ತ ಅಭಿವ್ಯಕ್ತಿಯನ್ನೇ ಹತ್ತಿಕ್ಕಿತು. ಸರಕಾರ ಮತ್ತು ಅಲ್ಪಸಂಖ್ಯಾತರ ನಡುವಿನ ಸಾಮಾಜಿಕ ಸಾಮರಸ್ಯಕ್ಕೂ ಧಕ್ಕೆಯನ್ನುಂಟು ಮಾಡಿತು.

ಶಾ ಅಧಿಕಾರಾವಧಿಯಲ್ಲಿ ಗೃಹ ಸಚಿವಾಲಯ ಆಡಳಿತಾತ್ಮಕವಾಗಿ ಇರುವುದಕ್ಕಿಂತಲೂ ಸರಕಾರದ ರಾಜಕೀಯ ಮತ್ತು ಸೈದ್ಧಾಂತಿಕ ಯೋಜನೆಯ ಮುಖ್ಯ ಕೇಂದ್ರವೆಂಬಂತೆ ಬದಲಾಯಿತು.

ರಾಜಕೀಯ ಗುರಿಗಳನ್ನು ಸಾಧಿಸಲು ಅಧಿಕಾರವನ್ನು ಮುಲಾಜಿಲ್ಲದೆ ಚಲಾಯಿಸುವುದಕ್ಕೆ ಅವರು ನಿದರ್ಶನವಾದರು.

ಅವರು ಪ್ರಭಾವಿ ಗೃಹ ಸಚಿವರು ಎನ್ನುವಾಗಲೇ, ಅವರು ದೀರ್ಘಾವಧಿಯ ಗೃಹ ಸಚಿವರು ಎನ್ನುವಾಗಲೇ, ಅವರು ರೂಪಿಸುತ್ತಿರುವ ಭಾರತ ಅದರ ನಿರ್ಮಾತೃಗಳು ಕಲ್ಪಿಸಿಕೊಂಡ ಪ್ರಜಾಸತ್ತಾತ್ಮಕ, ಬಹುತ್ವ ಮತ್ತು ಉದಾರವಾದಿ ಭಾರತವಾಗಿ ಉಳಿದಿದೆಯೇ ಎಂಬುದು ದೊಡ್ಡ ಪ್ರಶ್ನೆ.

share
ವಿನಯ್ ಕೆ.
ವಿನಯ್ ಕೆ.
Next Story
X