ಅರ್ನಬ್ ಗೋಸ್ವಾಮಿಯವರ ಈಗಿನ ಬದಲಾವಣೆ ನಂಬಲರ್ಹವೇ?

ಕಳೆದ ಕೆಲ ವಾರಗಳಿಂದ, ಅರ್ನಬ್ ಗೋಸ್ವಾಮಿ ಬೇರೆಯದೇ ಅವತಾರದಲ್ಲಿ ಕಾಣಿಸುತ್ತಿದ್ದಾರೆ. ಕಳೆದ ಒಂದು ದಶಕದಿಂದ ಪತ್ರಿಕೋದ್ಯಮವನ್ನು ಸರಕಾರದ ಪ್ರಚಾರದ ಆಟವೆಂಬಂತೆ ಬಳಸಿದ್ದ ಅರ್ನಬ್ ಗೋಸ್ವಾಮಿ ಈಗ ಸರಕಾರದ ವಿರುದ್ಧ ಸಿಡಿಸಿಡಿದು ಬೀಳತೊಡಗಿದ್ದಾರೆ.
ಮೋದಿ ಸರಕಾರದ ಗುಣಗಾನದಲ್ಲೇ ಸದಾ ಮೈಮರೆಯುತ್ತ, ಮುಸ್ಲಿಮ್ ದ್ವೇಷವನ್ನು ಮೈಮೇಲೆ ಆವಾಹಿಸಿಕೊಂಡವರಂತೆ ಆಡುತ್ತ, ವಿಪಕ್ಷಗಳ ವಿರುದ್ಧ ಸುಳ್ಳುಸುದ್ದಿಗಳನ್ನೇ ಹರಡುತ್ತಿದ್ದ ಅರ್ನಬ್ ಗೋಸ್ವಾಮಿ ನಿಜವಾಗಿಯೂ ಪತ್ರಿಕೋದ್ಯಮದ ಹಳಿಗೆ ಮರಳಿದ್ದಾರೆಯೆ?
ಸಾಮಾಜಿಕ ಮಾಧ್ಯಮದ ಒಂದು ವರ್ಗ ಹಾಗೆ ಭಾವಿಸುತ್ತಿದೆ. ಕೊನೆಗೂ ಅವರ ಮನಸ್ಸಾಕ್ಷಿ ಮಾತಾಡುತ್ತಿದೆ ಎಂದು ನಂಬುವವರು ನಂಬುತ್ತಿದ್ದಾರೆ. ಆದರೆ, ಅದು ಎಷ್ಟು ನಿಜ?
ನಿಜವಾಗಿಯೂ ಹಾಗಾಗಿದೆಯೆ? ಇದು ಮನಸ್ಸಿನ ಬದಲಾವಣೆ ಎನ್ನುವುದಕ್ಕಿಂತ ಹೆಚ್ಚಾಗಿ, ಲೆಕ್ಕಾಚಾರದ, ಅವಕಾಶವಾದಿ ನಡವಳಿಕೆ ಎನ್ನುವಂತಿದೆ.
ಮಾಧ್ಯಮದ ಇವತ್ತಿನ ಸ್ಥಿತಿ ಎಲ್ಲಿಗೆ ಮುಟ್ಟಿದೆಯೆಂದರೆ, ಅಲ್ಲಿ ಸುಳ್ಳನ್ನು ಸತ್ಯದಿಂದ ಎದುರಿಸುತ್ತಿಲ್ಲ. ಬದಲಿಗೆ ಹೊಸದೇ ಆದ, ಹೆಚ್ಚು ಅತ್ಯಾಧುನಿಕ ವಂಚನೆಯ ಆಟ ನಡೆಯುತ್ತಿದೆ. ಹೀಗಾಗಿ, ಅರ್ನಬ್ ಗೋಸ್ವಾಮಿಯಲ್ಲಿ ಇದ್ದಕ್ಕಿದ್ದಂತೆ ಆದ ಈ ಬದಲಾವಣೆ ಅರ್ಥ ಮಾಡಿಕೊಳ್ಳಲು, ನಿಜವಾಗಿಯೂ ಮೀಡಿಯಾದ ಸ್ಕ್ರೀನ್ ಹಿಂದೆ ಏನು ನಡೆಯುತ್ತಿದೆ ಎಂಬುದನ್ನು ನೋಡಬೇಕು.
ಮಡಿಲ ಮಾಧ್ಯಮದ ಹಿಂದೆ ಮತ್ತು ಅದು ಏನನ್ನು ಪ್ರಸಾರ ಮಾಡಬೇಕು ಮಾಡಬಾರದು ಎಂದು ನಿರ್ಧರಿಸುವ ಹಿರೇನ್ ಜೋಶಿಯಂಥವರ ಕಾಣದ ಕೈಯ ಬಗ್ಗೆಯೂ ಚರ್ಚೆಗಳು ನಡೆದಿವೆ.
ಪ್ರೈಮ್ ಟೈಂನಲ್ಲಿ ರಾಷ್ಟ್ರ ಯಾರನ್ನು ದ್ವೇಷಿಸಬೇಕೆಂದು ನಿರ್ಧರಿಸುವ ಆ ವ್ಯಕ್ತಿ ತಣ್ಣಗಾದ ಬಳಿಕ, ಅತ್ತ ಕಡೆಯಿಂದ ದೈನಂದಿನ ಸ್ಕ್ರಿಪ್ಟ್ ವಾಟ್ಸ್ ಆ್ಯಪ್‌ನಲ್ಲಿ ಬರುವುದು ನಿಂತ ಬಳಿಕ ಮಡಿಲ ಮಾಧ್ಯಮದಲ್ಲಿ ಒಂದು ಬಗೆಯ ಗೊಂದಲ ತಲೆದೋರಿದೆ.
ಹಾಗಾಗಿ, ಅರ್ನಬ್ ಈಗಿನ ಆಟ ನೈತಿಕ ಧೈರ್ಯದಿಂದ ಹುಟ್ಟಿಲ್ಲ.ಅದು ಸೂತ್ರ ಹರಿದ ಗೊಂಬೆಯ ಅವಸ್ಥೆಯ ಪರಿಣಾಮ, ಇದು ಸರಕಾರದ ವಿರುದ್ಧದ ದಂಗೆಯಲ್ಲ. ಬದಲಾಗಿ, ಗಮನವನ್ನು ಸೆಳೆಯುವ ಹತಾಶ, ಕ್ಷುಲ್ಲಕ ಪ್ರಯತ್ನವೆಂದು ನೋಡಬೇಕಾಗಿದೆ.
ಆ್ಯಂಕರ್‌ಗಳು ರೂ. 15 ಕೋಟಿ ಪಡೆಯುತ್ತಿದ್ದಾರೆ ಎಂಬ ಅರ್ನಬ್ ಅವರ ಇತ್ತೀಚಿನ ಟೀಕೆ ಗಮನಿಸಬೇಕು.
ಸರಕಾರದ ಹಂಗಿನಲ್ಲಿರುವ ಆ್ಯಂಕರ್‌ಗಳು ಕಠಿಣ ಪ್ರಶ್ನೆಗಳನ್ನು ಕೇಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು. ಆದರೆ ಪತ್ರಕರ್ತ ಸರಕಾರದ ಅಧೀನವಾಗುವುದನ್ನು ತೋರಿಸಿಕೊಟ್ಟ ವ್ಯಕ್ತಿಯೇ ಇಂಥ ಮಾತಾಡಿದರೆಂಬುದು ಮಾತ್ರ ಹಾಸ್ಯಾಸ್ಪದವಾಗಿತ್ತು.
ಅರ್ನಬ್ ಅವರ ಸಮಸ್ಯೆಯೆಂದರೆ, ಅವರು ಸರಕಾರವನ್ನು ಸಮರ್ಥಿಸಿಕೊಳ್ಳುವಾಗ ಜೈಲಿಗೆ ಹೋದರು. ವಿಚಾರಣೆ, ಕೇಸುಗಳು ಮತ್ತು ಸಾರ್ವಜನಿಕ ಅವಮಾನ ಎದುರಿಸಿದರು.
ಅಷ್ಟಾದ ಮೇಲೆ ಆದದ್ದೇನು? ಅವರು ಒಂಟಿಯಾದರು.
ಮತ್ತೊಂದೆಡೆ, ಶರ್ಟ್ ಬದಲಾಯಿಸುವಷ್ಟೇ ಆರಾಮವಾಗಿ ನಿಷ್ಠೆ ಮತ್ತು ಚಾನೆಲ್‌ಗಳನ್ನು ಬದಲಾಯಿಸುವ ಸುಧೀರ್ ಚೌಧರಿಯಂತಹ ನಿರೂಪಕರಿಗೆ ದೊಡ್ಡ ದೊಡ್ಡ ಅವಕಾಶ ಸಿಗುವ ಬಗ್ಗೆ ಹೇಳಲಾಗುತ್ತದೆ.
ಅವರಿಗೆ ಪ್ರಧಾನಿ ಮತ್ತು ಉನ್ನತ ಕ್ಯಾಬಿನೆಟ್ ಮಂತ್ರಿಗಳೊಂದಿಗೆ ವಿಶೇಷ ಸಂದರ್ಶನದ ಅವಕಾಶ ನೀಡಲಾಗುತ್ತದೆ. ದೂರದರ್ಶನದಲ್ಲಿ ಸುಧೀರ್ ಚೌಧರಿಗೆ ವಾರ್ಷಿಕ ರೂ. 15 ಕೋಟಿಯ ಪ್ಯಾಕೇಜ್ ಸಿಗುತ್ತದೆ. ಆದರೆ ಅರ್ನಬ್ ಅವರನ್ನು ತಪ್ಪಿಸಲಾಗುತ್ತದೆ.
ಹಾಗಾಗಿ, ಈಗಿನ ಅರ್ನಬ್ ಆಕ್ರೋಶ ಸಾರ್ವಜನಿಕ ಹಿತಾಸಕ್ತಿ ಹೋರಾಟವಲ್ಲ. ಬದಲಾಗಿ, ದೊರೆಗೆ ಹತ್ತಿರವಿರುವ ಅವಕಾಶ ಪಡೆಯಲು ಇಬ್ಬರು ಆಸ್ಥಾನ ಕಲಾವಿದರ ನಡುವೆ ತಲೆದೋರಿರುವ ಕದನ ಇದಾಗಿದೆ.
ಸರಕಾರದ ಬಗ್ಗೆ ಅರ್ನಬ್ ಕೋಪಗೊಂಡಿಲ್ಲ. ಆದರೆ ಆ ವೈಫಲ್ಯಗಳನ್ನು ಮುಚ್ಚಿಹಾಕುವ ಕೆಲಸವನ್ನು ಸರಕಾರ ತನ್ನ ಪ್ರತಿಸ್ಪರ್ಧಿಗಳಿಗೆ ವಹಿಸುತ್ತಿದೆ ಎಂಬುದಕ್ಕಾಗಿ ಅವರ ಸಿಟ್ಟು. ಲೂಟಿಯಲ್ಲಿ ತನಗೂ ಪಾಲು ಬೇಕೆಂದು ಅರ್ನಬ್ ಹೋರಾಟ ಮಾಡುತ್ತಿದ್ದಾರೆ ಅಷ್ಟೆ.
ಇದರ ಹೊರತಾಗಿಯೂ ಅರ್ನಬ್ ಬದಲಾದ ಶೈಲಿಯ ಹಿಂದೆ ಮತ್ತೂ ಒಂದು ಕಾರಣವಿದೆ ಎಂಬುದನ್ನು ಕೂಡ ಮರೆಯುವ ಹಾಗಿಲ್ಲ.
ಪ್ರಜಾಪ್ರಭುತ್ವದಲ್ಲಿ, ಭಿನ್ನಾಭಿಪ್ರಾಯವನ್ನು ಪೂರ್ತಿ ದಮನಿಸದೆ, ಆಗಾಗ ಅದು ಹೊರಬರುತ್ತಿರಲು ಬಿಡಬೇಕೆಂಬ ತಂತ್ರಗಾರಿಕೆ ಅರ್ನಬ್ ನಡೆಯ ಹಿಂದೆ ಕೆಲಸ ಮಾಡುತ್ತಿರುವ ಹಾಗಿದೆ. ಬುದ್ಧಿವಂತ ಸರ್ವಾಧಿಕಾರಿಗಳು ಮತ್ತು ಚುರುಕಾದ ಕಾರ್ಪೊರೇಟ್‌ಗಳು ಅನುಸರಿಸುವ ತಂತ್ರಗಾರಿಕೆ ಇದು.
1980ರ ದಶಕದಲ್ಲಿ ಕಾರ್ಪೊರೇಟ್ ಒಕ್ಕೂಟಗಳು ಇದನ್ನೇ ಮಾಡಿದ್ದವು. ತಮಗೆ ಪ್ರತಿಕೂಲವಾದ ಕಮ್ಯುನಿಸ್ಟ್ ಒಕ್ಕೂಟದ ವಿರುದ್ಧ ಹೋರಾಡುವ ಬದಲು, ತಮ್ಮದೇ ಆದ ಕಂಪೆನಿ ಒಕ್ಕೂಟವನ್ನು ರಚಿಸುವುದು ಬುದ್ಧಿವಂತಿಕೆ ಎಂದು ಕಂಪೆನಿಗಳು ಅರಿತುಕೊಂಡವು.
ಈ ಒಕ್ಕೂಟಗಳು ಕೂಗುತ್ತವೆ, ಪ್ರತಿಭಟಿಸುತ್ತವೆ ಮತ್ತು ಹಕ್ಕುಗಳಿಗಾಗಿ ಬೇಡಿಕೆ ಇಡುತ್ತವೆ. ಆದರೆ ಅವುಗಳ ನಾಯಕರು ಅದೇ ಕಂಪೆನಿಗಳ ಸಂಬಳಕ್ಕಿರುವವರು.
ಅರ್ನಬ್ ಗೋಸ್ವಾಮಿ ಈ ಕಂಪೆನಿ ಒಕ್ಕೂಟದ ನಾಯಕನಂತಿದ್ದಾರೆ.
ಅಂದರೆ, ನಿರುದ್ಯೋಗ, ಹಣದುಬ್ಬರ ಮತ್ತು ಸರಕಾರದ ವೈಫಲ್ಯದ ಬಗ್ಗೆ ರವೀಶ್ ಕುಮಾರ್ ಅಂಥ ಪತ್ರಕರ್ತರು ಆಕ್ರೋಶ ಹೊರಹಾಕಿದಾಗ ಅದು ತೀವ್ರ ಪರಿಣಾಮ ಬೀರುತ್ತದೆ.
ಹಾಗಾಗಿ, ಅಂಥ ಸ್ಫೋಟದ ತೀವ್ರತೆ ತಗ್ಗಿಸಲೆಂದೇ ತಮ್ಮವರ ಕಡೆಯಿಂದಲೇ ವಿರೋಧ ಹೊರಹಾಕಿಸುವುದು ಈ ತಂತ್ರ.
ಅರ್ನಬ್ ಹೀಗೆ ನಿಜವಾದ ಆಕ್ರೋಶದ ಅಪಾಯ ತಗ್ಗಿಸುವ ಸೇಫ್ಟಿ ವಾಲ್ವ್ ಆಗಿದ್ದಾರೆಯೇ? ಎಂಬ ಸಂಶಯವೂ ಇದೆ.
ಅವರು ಪ್ರಶ್ನೆಗಳನ್ನು ಕೇಳುತ್ತಾರೆ, ವೈಫಲ್ಯದ ಬಗ್ಗೆ ಕಿರುಚಾಡುತ್ತಾರೆ, ಸರಕಾರದ ವಿರುದ್ಧ ಮುಗಿಬಿದ್ದವರಂತೆ ಕಾಣುತ್ತಾರೆ. ಆದರೆ ಅಲ್ಲೆಲ್ಲ ಅವರು ಸುರಕ್ಷಿತ ಮಿತಿಯನ್ನು ದಾಟುವುದಿಲ್ಲ. ಗದ್ದಲ ಸೃಷ್ಟಿಸಿಂದತಿರುತ್ತದೆ. ಪ್ರಶ್ನೆ ಕೇಳಿದಂತಿರುತ್ತದೆ. ಆದರೆ ಅವರು ನಾಯಕನ ಇಮೇಜ್‌ಗೆ ಯಾವುದೇ ಧಕ್ಕೆಯಾಗದ ವಿಷಯಗಳ ಬಗ್ಗೆಯಷ್ಟೇ ಚರ್ಚಿಸುತ್ತಾರೆ.
ಸರಕಾರವೇ ಹೊಗಳಿಕೆ ಮತ್ತು ಟೀಕೆ ಎರಡನ್ನೂ ನಿಯಂತ್ರಿಸಿದಾಗ, ನಿಜವಾದ ಪ್ರಜಾಪ್ರಭುತ್ವದ ಕಥೆ ಏನು ಎಂಬುದೇ ಇಲ್ಲಿರುವ ಪ್ರಶ್ನೆ.
ಅರ್ನಬ್ ಹೊಸ ಅವತಾರ ವಿರೋಧ ಪಕ್ಷದ ಪ್ರಭಾವವನ್ನು ತಗ್ಗಿಸುವ ಒಂದು ಆಟವಾಗಿದೆ. ಸರಕಾರದ ಕಟ್ಟಾ ಬೆಂಬಲಿಗರು ಮತ್ತು ಅದರ ವಿಮರ್ಶಕರು ಇಬ್ಬರೂ ಅರ್ನಬ್ ಪ್ರೋಗ್ರಾಮ್ ನೋಡಲು ಟ್ಯೂನ್ ಮಾಡಿದಾಗ ಒಂದು ಬಲೆ ಸಿದ್ಧವಾಗುತ್ತದೆ.
ಅರ್ನಬ್ ಸರಕಾರವನ್ನು ಬೈಯುತ್ತಿರುವಾಗ, ಸರಕಾರದ ಟೀಕಾಕಾರರಿಗೆ ತಾವೇ ಸ್ವತಃ ಪ್ರತಿಭಟಿಸುವ ಅಗತ್ಯ ಕಾಣುವುದಿಲ್ಲ. ಆದರೆ ಅರ್ನಬ್ ರಿಮೋಟ್ ಕಂಟ್ರೋಲ್ ದಿಲ್ಲಿ ಅಥವಾ ನಾಗಪುರದಲ್ಲಿದೆ ಎಂಬುದು ಗೊತ್ತಾಗುವುದೇ ಇಲ್ಲ.
ಇದೆಲ್ಲದರ ಹಿಂದೆ ಟಿಆರ್‌ಪಿ ಲೆಕ್ಕಾಚಾರವೂ ಇದೆ.
ರಿಪಬ್ಲಿಕ್ ಭಾರತ್ ವೀಕ್ಷಕರು ತೀವ್ರವಾಗಿ ತಗ್ಗಿರುವಾಗ ಮತ್ತು ಹಿಂದೂ-ಮುಸ್ಲಿಮ್ ಸ್ಕ್ರಿಪ್ಟ್ ಪರಿಣಾಮ ಬೀರದೇ ಇರುವಾಗ, ಹೊಸ ಆಟ ಶುರುಮಾಡುವ ಅನಿವಾರ್ಯತೆ ಅರ್ನಬ್‌ಗೆ ಎದುರಾಗಿದೆ.ಹಾಗಾಗಿಯೇ ಈ ಬದಲಾವಣೆ ಕಾಣುತ್ತಿದೆ.
ಅರ್ನಬ್ ಕಳೆದೊಂದು ದಶಕದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಮಾಡಿರುವ ಅಪಾರ ಹಾನಿ, ಆ ವ್ಯಕ್ತಿ ಇನ್ನು ಇಪ್ಪತ್ತೈದು ವರ್ಷ ಸತತ ಈ ಸರಕಾರವನ್ನು ಪ್ರಶ್ನಿಸುತ್ತಿದ್ದರೂ ಸರಿಪಡಿಸಲಾಗದು.
ಈ ದೇಶದ ರಾಜಕೀಯ, ಸಾಮಾಜಿಕ ಹಂದರವನ್ನು ತಮ್ಮ ಸುಳ್ಳು ಹಾಗೂ ದ್ವೇಷ ಪ್ರಚಾರದ ಮೂಲಕ ಅರ್ನಬ್ ಗೋಸ್ವಾಮಿ ಅದೆಷ್ಟು ಹಾಳು ಮಾಡಿದ್ದಾರೆ ಅಂದರೆ ಈಗ ಅವರು ಅದೆಷ್ಟು ಪ್ರಶ್ನೆ ಕೇಳಿದರೂ ಅದರಿಂದ ಆಗುವ ಪ್ರಯೋಜನ ಅಷ್ಟಕ್ಕಷ್ಟೇ
ಸರಕಾರದ ತುತ್ತೂರಿಯಾಗುವುದು ಲಾಭದಾಯಕ ಎಂದು ಗೊತ್ತಾಗುತ್ತಿದ್ದಂತೆ ಒಂದು ಕ್ಷಣವೂ ಮೀನಮೇಷ ಮಾಡದೇ ಇದೇ ಅರ್ನಬ್ ಗೋಸ್ವಾಮಿ ಮತ್ತೆ ಸರಕಾರದ ಲ್ಯಾಪ್‌ಡಾಗ್ ಆಗಿ ಅರಚಾಡಲು ಶುರುಮಾಡುತ್ತಾರೆ.
ಅಲ್ಲಿಯವರೆಗೂ, ಅರ್ನಬ್ ಸರಕಾರವನ್ನು ಬೈಯುವುದನ್ನು ವಿರಾಮದ ಹೊತ್ತಿನ ವಿಶೇಷ ರಂಜನೆ ಎಂದು ಆನಂದಿಸಬಹುದು ಅಷ್ಟೇ.







