ಬಿಹಾರದ ಎಸ್‌ಐಆರ್ ಪ್ರಜಾಪ್ರಭುತ್ವ ನಾಶದ ಒಂದು ವ್ಯವಸ್ಥಿತ ಯತ್ನವೆ?

ಪೌರತ್ವ ಪುರಾವೆಗಳನ್ನು ಕೇಳುವ ಆಯೋಗದ ಡೇಟಾದಲ್ಲಿ ಮತದಾರರ ಹೆಸರುಗಳ ಜಾಗದಲ್ಲಿ ಚುಕ್ಕೆಯಿದೆ ಎಂದಾದರೆ ಅದೆಂಥ ದತ್ತಾಂಶವಾಗುತ್ತದೆ?
ದೋಷಗಳು ಕೇವಲ ಅಸಮರ್ಥತೆಯಿಂದಾಗಿ ಆಗಿವೆ ಎನ್ನುವುದಾದರೆ ಅವನ್ನು ಪರಿಹರಿಸಲು ದಾರಿಗಳಿವೆ. ಆದರೆ ಚುನಾವಣಾ ಆಯೋಗದ ಕ್ರಮಗಳು ಅದನ್ನೂ ಮೀರಿ, ಸತ್ಯವನ್ನು ಮರೆಮಾಚುವ ಉದ್ದೇಶಪೂರ್ವಕ ಪ್ರಯತ್ನಗಳಂತೆ ಕಾಣುತ್ತಿವೆ.
ಬಿಹಾರದಲ್ಲಿನ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ತನಿಖಾ ವರದಿಗಳು, ಡೇಟಾ ವಿಶ್ಲೇಷಣೆಗಳು ಮತ್ತು ಅಲ್ಲಿನ ವಾಸ್ತವಗಳು ಕೊಡುತ್ತಿರುವ ಚಿತ್ರಗಳು ನಿಜಕ್ಕೂ ಭಯಾನಕವಾಗಿವೆ. ಅವು ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಮತದಾರರ ಪಟ್ಟಿಯ ಶುದ್ಧೀಕರಣದ ಹೆಸರಿನಲ್ಲಿ ಶುರುವಾದದ್ದು ಈಗ ಬೇರೆಯದೇ ಸ್ವರೂಪ ಪಡೆದಿದೆ. ಅಲ್ಲಿ ಪಾರದರ್ಶಕತೆ ಇಲ್ಲವಾಗಿದೆ. ಅದು ಸಂಪೂರ್ಣವಾಗಿ ಒಂದು ದುರುದ್ದೇಶಪೂರಿತ ಕಸರತ್ತಿನಂತೆ ಕಾಣಿಸುತ್ತಿದೆ. ಅದು ನಮ್ಮ ಗಣರಾಜ್ಯದ ಮೂಲಭೂತ ಭರವಸೆಯಾದ ‘ಒಬ್ಬ ವ್ಯಕ್ತಿ ಒಂದು ಮತ’ ತತ್ವಕ್ಕೇ ಪೆಟ್ಟು ಕೊಡುತ್ತಿದೆ. ಈ ಎಲ್ಲ ಕಸರತ್ತು ದಿಗ್ಭ್ರಮೆಗೊಳಿಸುವಷ್ಟು ದೊಡ್ಡ ಮಟ್ಟದಲ್ಲಿದೆ.
‘ದಿ ವೈರ್’ಗಾಗಿ ಸ್ವಾತಿ ನಾರಾಯಣ್ ಮಾಡಿರುವ ವರದಿ ಪ್ರಕಾರ, ಆಗಸ್ಟ್ 1ರಂದು ಬಿಡುಗಡೆಯಾದ ಮೊದಲ ಕರಡು ಪಟ್ಟಿಯಲ್ಲಿ ಚುನಾವಣಾ ಆಯೋಗ 65 ಲಕ್ಷಕ್ಕಿಂತಲೂ ಹೆಚ್ಚು ಮತದಾರರ ಹೆಸರುಗಳನ್ನು ಅಳಿಸಿಹಾಕಿದೆ.
65 ಲಕ್ಷ ಮತದಾರರು ಅಂದರೆ ನೀವೇ ಊಹಿಸಿ ನೋಡಿ... ಅದೆಷ್ಟು ದೊಡ್ಡ ಸಂಖ್ಯೆ?
ಅಂದರೆ, ಕೆಲವೇ ವಾರಗಳ ಅಂತರದಲ್ಲಿ ಮತದಾರರ ಪಟ್ಟಿಯಿಂದ ಇಲ್ಲವಾಗಿರುವವರ ಈ ಸಂಖ್ಯೆ ಸರ್ಬಿಯಾ ದೇಶದ ಒಟ್ಟು ಜನಸಂಖ್ಯೆಯಷ್ಟಿದೆ.
ಇವರಲ್ಲಿ 35 ಲಕ್ಷ ಜನರು ವಲಸೆ ಬಂದವರು ಅಥವಾ ಪತ್ತೆಹಚ್ಚಲಾಗದವರು ಎಂದು ಹೇಳಲಾಗಿದೆ.
ಯಾರನ್ನು ಪತ್ತೆಹಚ್ಚಲಾಗುತ್ತಿಲ್ಲ ಎಂದು ಹೇಳಲಾಗುತ್ತಿದೆಯೋ ಅವರೆಲ್ಲ ಭಾರತದ ಅನೌಪಚಾರಿಕ ಆರ್ಥಿಕತೆಯ ಜೀವಾಳವೇ ಆಗಿರುವವರು.
ಭಾರತದಾದ್ಯಂತದ ಬೇರೆ ಬೇರೆ ನಗರಗಳಲ್ಲಿ ಹರಡಿರುವ ಬಿಹಾರಿ ವಲಸೆ ಕಾರ್ಮಿಕರ ಸಮೀಕ್ಷೆ ಮಾಡಿದಾಗ, ಶೇ. 90 ಜನರಿಗೆ ಎಸ್‌ಐಆರ್ ಬಗ್ಗೆ ಏನೂ ತಿಳಿದಿಲ್ಲ ಎಂಬುದು ಪತ್ತೆಯಾಗಿದೆ. ‘ದಿ ವೈರ್’ನಲ್ಲಿ ಉಲ್ಲೇಖಿಸಲಾದ ‘ಸ್ಟ್ರಾಂಡೆಡ್ ವರ್ಕರ್ಸ್ ಆಕ್ಷನ್ ನೆಟ್‌ವರ್ಕ್’ನ ಆಘಾತಕಾರಿ ವರದಿ ಇದನ್ನು ಹೇಳಿದೆ.
ಅವರೆಲ್ಲ ತಮ್ಮ ಕುಟುಂಬಗಳ ಜೀವನಾಧಾರವಾಗಿರುವವರು.ರಜೆ ಪಡೆದು, ಮಕ್ಕಳೊಂದಿಗೆ ಬಿಹಾರಕ್ಕೆ ಹಿಂದಿರುಗಲಾರದ ಸ್ಥಿತಿಯಲ್ಲಿರುವವರು. ಅವರಿಗೆ, ಹಾಗೆ ಬಿಹಾರಕ್ಕೆ ಹೋಗಬೇಕೆಂದರೂ ಅದಕ್ಕಾಗಿ ಸುಮಾರು 4,500 ರೂ.ಖರ್ಚಾಗುತ್ತದೆ. ಅಂದರೆ, ಅದು ಅವರ ತಿಂಗಳ ಸಂಬಳದ ದೊಡ್ಡ ಭಾಗದಷ್ಟು. ಈಗ ಅವರನ್ನು ಹೊರಗಿಡಲೆಂದೇ ಬಿಹಾರದಲ್ಲಿ ಎಸ್‌ಐಆರ್ ನಡೆಯುತ್ತಿದೆ.
ಸ್ಟ್ರಾಂಡೆಡ್ ವರ್ಕರ್ಸ್ ಆಕ್ಷನ್ ನೆಟ್‌ವರ್ಕ್ ವರದಿ ಪ್ರಕಾರ, ಈ ವಲಸೆ ಕಾರ್ಮಿಕರಲ್ಲಿ ಶೇ. 35 ಜನರ ಬಳಿ ಚುನಾವಣಾ ಆಯೋಗ ಕೇಳುತ್ತಿರುವ 11 ದಾಖಲೆಗಳಲ್ಲಿ ಯಾವುದೂ ಇಲ್ಲ.
ಆದರೆ, ಶೇ. 96ರಿಂದ ಶೇ. 99ರಷ್ಟು ಜನರ ಬಳಿ ಆಧಾರ್ ಕಾರ್ಡ್ ಇದೆ. ಆದರೆ ಅದು ಮಾನ್ಯ ದಾಖಲೆಯಲ್ಲ ಎಂದು ಆಯೋಗ ಹೇಳುತ್ತಿದೆ.
ಕಾರ್ಮಿಕರಿಗೆ ಏನೂ ತಿಳಿದಿಲ್ಲ ಎಂಬುದು ಈ ವಲಸೆ ಜನರ ಸಂಕಟ. ಅವರು ತಮ್ಮನ್ನು ಪಟ್ಟಿಯಿಂದಲೇ ಇಲ್ಲವಾಗಿಸಿದ ಇಡೀ ವ್ಯವಸ್ಥೆಯನ್ನೇ ದೂಷಿಸುವಂತಾಗಿದೆ.
ಹೀಗೆ ಇವರನ್ನು ಹೊರಗಿಡುವ ಪ್ರಕ್ರಿಯೆಯಲ್ಲಿ ಮತ್ತೂ ಒಂದು ಭಯಾನಕ ಅಂಶ ಕಂಡಿದೆ.
ಕರಡು ಪಟ್ಟಿಯಿಂದ ಹೊರಗಿಡಲಾಗಿರುವವರಲ್ಲಿ ಶೇ. 55 ಮಹಿಳೆಯರು ಇರುವುದಾಗಿ ‘ದಿ ಸ್ಕ್ರಾಲ್’ ವರದಿ ಹೇಳಿದೆ. ಇನ್ನು ಅವರು ಅನಕ್ಷರಸ್ಥೆಯರು ಎಂಬುದು ಕೂಡ ಇಲ್ಲಿ ಗಮನಿಸಬೇಕಿರುವ ವಿಷಯ. ಅವರು ಆಯೋಗದ ವೆಬ್‌ಸೈಟ್‌ನಲ್ಲಿ ತಮ್ಮ ಹೆಸರು ಹುಡುಕುವುದು ಮತ್ತು ದಾಖಲೆಗಳ ಸಹಿತ ವಿವಿಧ ಫಾರ್ಮ್‌ಗಳನ್ನು ಸಲ್ಲಿಸುವುದು ಹೇಗೆ ಸಾಧ್ಯ? ಆದರೆ ಆಯೋಗ ಅವರೂ ಹೀಗೆ ಮಾಡಬೇಕು ಎಂದು ಬಯಸುತ್ತಿರುವುದು ಕ್ರೂರ ವ್ಯಂಗ್ಯ.
ಎಸ್‌ಐಆರ್ ಅನ್ನು ಒಳನುಸುಳುಕೋರರನ್ನು ತೆಗೆದುಹಾಕುವುದಕ್ಕಾಗಿ ಮಾಡಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು.
ಅದರೊಂದಿಗೆ, ಎಸ್‌ಐಆರ್ ಬಿಹಾರದ ಮುಸ್ಲಿಮರ ವಿರುದ್ಧದ ಅಭಿಯಾನ ಎಂಬುದು ಖಚಿತವಾಗಿತ್ತು.
ಯಾಕೆಂದರೆ ಮೋದಿ, ಅಮಿತ್ ಶಾ ಸಹಿತ ಬಿಜೆಪಿ ಸರಕಾರ ನುಸುಳುಕೋರರು ಎಂಬ ಆರೋಪ ಹೊರಿಸುವುದೇ ಮುಸ್ಲಿಮರ ಮೇಲೆ.
‘ದಿ ಹಿಂದೂ’ ವಿಶ್ಲೇಷಿಸಿರುವ ಪ್ರಕಾರ, ಮುಸ್ಲಿಮ್ ಜನಸಂಖ್ಯೆಯ ಪಾಲು ಮತ್ತು ಅಳಿಸಲಾಗುವ ಮತದಾರರ ಸಂಖ್ಯೆ ನಡುವೆ ಸಂಬಂಧವಿದೆ.
ವಿರೋಧ ಪಕ್ಷಗಳು ವ್ಯಕ್ತಪಡಿಸಿದ್ದ ವೋಟ್ ಬಂದಿ ಆತಂಕ ಕೂಡ ಇದೇ ಆಗಿತ್ತು.
ಆದರೆ ಸ್ಕ್ರಾಲ್‌ನಲ್ಲಿ ಆಯುಷ್ ತಿವಾರಿ ಮತ್ತು ಆರ್ಯನ್ ಮಾಡಿರುವ ವರದಿ ಪ್ರಕಾರ, ಮುಸ್ಲಿಮ್ ಬಹುಸಂಖ್ಯಾತ ಸೀಮಾಂಚಲ್ ಪ್ರದೇಶದಲ್ಲಿ ಹಿಂದೂ ಮತದಾರರನ್ನು ಕರಡು ಪಟ್ಟಿಯಿಂದ ದೊಡ್ಡ ಪ್ರಮಾಣದಲ್ಲಿ ಹೊರಗಿಡಲಾಗಿದೆ. ಇದು ಮತ್ತೊಂದು ಬಗೆಯಲ್ಲಿ ಆಘಾತಕಾರಿ.
ಹಿಂದೂಗಳು ಜನಸಂಖ್ಯೆಯ ಶೇ. 57ರಷ್ಟಿರುವ ಅರಾರಿಯಾದಂಥ ಜಿಲ್ಲೆಗಳಲ್ಲಿ, ಅವರು ಹೊರಗಿಡಲಾದ ಮತದಾರರಲ್ಲಿ ಶೇ. 65.4ರಷ್ಟಿದ್ದಾರೆ.
ಸೀಮಾಂಚಲ್‌ನಾದ್ಯಂತ ಇದೇ ರೀತಿಯಾಗಿದೆ.
2020ರ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಗೆದ್ದ ಕ್ಷೇತ್ರಗಳಲ್ಲಿ ಮತದಾರರ ಹೊರಹಾಕುವಿಕೆ ಅತಿ ಹೆಚ್ಚು ಎಂದು ಹೇಳಲಾಗಿದೆ.
ಅಂದರೆ, ಇಲ್ಲಿ ವಿರೋಧ ಪಕ್ಷದ ಮತದಾರರನ್ನು ಗುರಿಯಾಗಿಟ್ಟುಕೊಂಡು ಅವರನ್ನು ಹೊರಗಿಡುವುದು ಕೂಡ ನಡೆದಿದೆ ಎಂಬುದು ಸ್ಪಷ್ಟ.
ನ್ಯೂಸ್ ಲಾಂಡ್ರಿಗಾಗಿ ಸುಮೇಧಾ ಮಿತ್ತಲ್ ನಡೆಸಿದ ತನಿಖೆ ಮತ್ತೊಂದು ಬಗೆಯ ಅಸಂಬದ್ಧತೆಯನ್ನು ಬಹಿರಂಗಪಡಿಸಿದೆ.
ಹೊಸ ಕರಡು ಪಟ್ಟಿಯಲ್ಲಿ 2,92,048 ಮತದಾರರ ಮನೆ ಸಂಖ್ಯೆಯನ್ನು 0 ಎಂದು ಉಲ್ಲೇಖಿಸಲಾಗಿದೆ.
ಫುಲ್ವಾರಿ ಮತ್ತು ಮಾನೇರ್‌ನಂತಹ ಅಭಿವೃದ್ಧಿ ಹೊಂದಿದ ಪಾಟ್ನಾ ಪ್ರದೇಶದ ಕ್ಷೇತ್ರಗಳಲ್ಲಿಯೇ ಅಂಥ ಉಲ್ಲೇಖಗಳು ಸಾವಿರಾರು ಸಂಖ್ಯೆಯಲ್ಲಿವೆ. ಹಾಗಾದರೆ ಪಟ್ಟಿ ಶುದ್ಧೀಕರಣ ಎಂದು ಚುನಾವಣಾ ಆಯೋಗ ಹೇಳಿಕೊಳ್ಳುತ್ತಿರುವುದರ ನಿಜವಾದ ಕಥೆ ಏನು?
ಕೌಪಾ ಗ್ರಾಮದಲ್ಲಿ ಬೂತ್ ಸಂಖ್ಯೆ 106ರ ಮತದಾರರ ಪಟ್ಟಿಯಲ್ಲಿ ಹತ್ತು ಮತದಾರರ ಹೆಸರಿನ ಜಾಗದಲ್ಲಿ ಚುಕ್ಕೆ ಮಾತ್ರ ಇದೆ. ಇದು ಹೇಗೆ ಈ ಇಡೀ ಪ್ರಕ್ರಿಯೆಯೇ ದೋಷಪೂರಿತವಾಗಿದೆ ಎಂಬುದನ್ನು ಹೇಳುತ್ತದೆ.
ಪೌರತ್ವ ಪುರಾವೆಗಳನ್ನು ಕೇಳುವ ಆಯೋಗದ ಡೇಟಾದಲ್ಲಿ ಮತದಾರರ ಹೆಸರುಗಳ ಜಾಗದಲ್ಲಿ ಚುಕ್ಕೆಯಿದೆ ಎಂದಾದರೆ ಅದೆಂಥ ದತ್ತಾಂಶವಾಗುತ್ತದೆ?
ದೋಷಗಳು ಕೇವಲ ಅಸಮರ್ಥತೆಯಿಂದಾಗಿ ಆಗಿವೆ ಎನ್ನುವುದಾದರೆ ಅವನ್ನು ಪರಿಹರಿಸಲು ದಾರಿಗಳಿವೆ. ಆದರೆ ಚುನಾವಣಾ ಆಯೋಗದ ಕ್ರಮಗಳು ಅದನ್ನೂ ಮೀರಿ, ಸತ್ಯವನ್ನು ಮರೆಮಾಚುವ ಉದ್ದೇಶಪೂರ್ವಕ ಪ್ರಯತ್ನಗಳಂತೆ ಕಾಣುತ್ತಿವೆ.
ಆಯುಷ್ ತಿವಾರಿ ವರದಿ ಪ್ರಕಾರ, ಪತ್ರಕರ್ತರು ಮತ್ತು ರಾಜಕೀಯ ಪಕ್ಷಗಳು ಡಿಜಿಟಲ್ ಮತದಾರರ ಪಟ್ಟಿಗಳನ್ನು ವಿಶ್ಲೇಷಿಸಲು ಕಂಪ್ಯೂಟರ್ ಪ್ರೋಗ್ರಾಂಗಳನ್ನು ಬಳಸಲು ಶುರು ಮಾಡುತ್ತಿದ್ದಂತೆಯೇ, ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ಗಳಲ್ಲಿ ಅವುಗಳ ಸ್ಕ್ಯಾನ್ ಮಾಡಲಾದ ಇಮೇಜ್‌ಗಳನ್ನು ಹಾಕಿತು.
ಆಯೋಗದ ಈ ಕ್ರಮವಂತೂ ತೀರಾ ಅನುಮಾನಾಸ್ಪದವಾಗಿದೆ.ಅದಕ್ಕೆ ಏನೋ ಭಯವಿದೆ ಎಂಬುದನ್ನು ಇದು ಸೂಚಿಸುತ್ತದೆ.
ಸ್ಕ್ಯಾನ್ ಮಾಡಿದ ಚಿತ್ರಗಳು ಕಡಿಮೆ ರೆಸಲ್ಯೂಶನ್ ಚಿತ್ರಗಳಾಗಿವೆ. ಹುಡುಕಲು ಸಾಧ್ಯವಿಲ್ಲ. ಅಲ್ಲದೆ, ದೊಡ್ಡ ಪ್ರಮಾಣದ ಡೇಟಾ ವಿಶ್ಲೇಷಣೆ ಮಾಡುವುದು ಕೂಡ ಕಷ್ಟವಾಗುತ್ತದೆ.
ನಕಲಿ ಮತದಾರರು ಬಯಲಿಗೆ ಬರುತ್ತಾರೆ ಎಂಬ ಕಾರಣಕ್ಕಾಗಿಯೇ ಆಯೋಗ ಡಿಜಿಟಲ್ ಪಟ್ಟಿಗಳನ್ನು ಹಂಚಿಕೊಳ್ಳಲು ನಿರಾಕರಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ ಕೆಲವೇ ದಿನಗಳಲ್ಲಿ ಈ ಬದಲಾವಣೆ ನಡೆದಿದೆ.
ಆಯೋಗ ಈಗ ಮಾಡಿರುವುದು ಅದ್ಕಕಿರುವ ಆ ಭಯ ನಿಜವೆಂಬುದನ್ನು ಸಾಬೀತು ಮಾಡುತ್ತದೆ.
ಎಸ್‌ಐಆರ್ ಬಗ್ಗೆ ಆಕ್ಷೇಪವಿರುವುದು ತಪ್ಪಾಗಿ ಮತದಾರರ ಹೆಸರು ತೆಗೆದು ಹಾಕುತ್ತಿರುವ ಕಾರಣಕ್ಕಾಗಿ ಮಾತ್ರವಲ್ಲ. ಇದಕ್ಕಿಂತ ಆತಂಕಕಾರಿ ಸಂಗತಿಯೆಂದರೆ, ಮೋಸದ ಸೇರ್ಪಡೆಗಳು ಹಾಗೆಯೇ ಬಾಕಿ ಉಳಿದಿವೆ. ಅವುಗಳನ್ನು ಯಾರೂ ಅಳಿಸಿ ಹಾಕಿಲ್ಲ.
ಬಿಹಾರದ ವಾಲ್ಮೀಕಿನಗರ ಕ್ಷೇತ್ರದಲ್ಲಿ ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ನಡೆಸಿದ ಸ್ಫೋಟಕ ತನಿಖೆ ಇದನ್ನು ಬಯಲು ಮಾಡಿದೆ.
ಈ ಒಂದೇ ವಿಧಾನಸಭಾ ಸ್ಥಾನದ ಹೊಸ ಕರಡು ಪಟ್ಟಿಯಲ್ಲಿ 5,000ಕ್ಕೂ ಹೆಚ್ಚು ಅನುಮಾನಾಸ್ಪದ, ನಕಲಿ ಮತದಾರರು ಪತ್ತೆಯಾಗಿದ್ದಾರೆ. ಅವರಲ್ಲಿ 1,000ಕ್ಕೂ ಹೆಚ್ಚು ಜನರು ಉತ್ತರ ಪ್ರದೇಶದ ಮತದಾರರ ಪಟ್ಟಿಯಲ್ಲಿ ಅದೇ ರೀತಿಯ ಹೆಸರುಗಳು, ವಯಸ್ಸು ಮತ್ತು ಸಂಬಂಧಿಕರ ಹೆಸರುಗಳೊಂದಿಗೆ ಕಾಣಿಸಿಕೊಂಡಿದ್ದರು. ಆದರೆ ಬೇರೆ ಎಪಿಕ್ ಸಂಖ್ಯೆಗಳನ್ನು ಹೊಂದಿದ್ದರು. ಇದು ಚುನಾವಣಾ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ.
ಯುಪಿಯಲ್ಲಿ ಕಾಣಿಸಿಕೊಂಡ ಶಬ್ನಮ್ ಖಾತೂನ್ ಎಂಬ ಹೆಸರೇ ಬಿಹಾರದಲ್ಲಿಯೂ ಕಾಣಿಸಿದೆ. ಇದು ಕೇವಲ ಒಂದು ಉದಾಹರಣೆ.
ಇದು ಶುದ್ಧೀಕರಣವಲ್ಲ. ಬದಲಾಗಿ, ಮತದಾರರ ಪಟ್ಟಿಯನ್ನು ಇದು ಉದ್ದೇಶಪೂರ್ವಕವಾಗಿ ಇನ್ನೂ ಕೊಳಕಾಗಿಸಿದೆ.
ಎರಡು ರಾಜ್ಯಗಳಲ್ಲಿ ಮತ ಚಲಾಯಿಸಬಹುದಾದ ನಕಲಿ ಮತದಾರರನ್ನು ಸೃಷ್ಟಿಸುವುದು ಹೀಗೆ ನಡೆದಿದೆ.
ಇದೆಲ್ಲದರ ಮತ್ತೊಂದು ರೀತಿಯ ಪರಿಣಾಮ ನಿಜಕ್ಕೂ ಬೆಚ್ಚಿಬೀಳಿಸುವಂಥದ್ದು.
ಪತ್ರಿಕೆಗಳಲ್ಲಿ ವರದಿಯಾಗಿರುವಂತೆ, ಮತದಾರರ ಪಟ್ಟಿಯಲ್ಲಿ ಸತ್ತವರು ಎಂದು ಘೋಷಿಸಲಾಗಿದ್ದ 17 ವ್ಯಕ್ತಿಗಳನ್ನು ಆರ್‌ಜೆಡಿ ಸಂಸದ ಸುಧಾಕರ್ ಸಿಂಗ್ ಅವರು ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಕರೆತಂದರು.
‘‘ನಮಗೆ ರೈಲು ನೀಡಿ. ಸತ್ತವರು ಎಂದು ಘೋಷಿಸಲಾದ ಜನರನ್ನು ಅದರಲ್ಲಿ ತುಂಬಿಸಿ ಕರೆತರುತ್ತೇವೆ’’ ಎಂದು ಅವರು ಚುನಾವಣಾ ಆಯೋಗಕ್ಕೆ ಸವಾಲು ಹಾಕಿದರು. ಇದು ರಾಷ್ಟ್ರದಾದ್ಯಂತ ಸಂಚಲನ ಮೂಡಿಸಿತು.
ಯೋಗೇಂದ್ರ ಯಾದವ್, ‘‘ಇದು ಐತಿಹಾಸಿಕವಾಗಿ ಹಿಂದೆಂದೂ ನಡೆದಿರದ ರೀತಿಯ ಪರಿಷ್ಕರಣೆ. ಇದು ಸೇರ್ಪಡೆ ಅಥವಾ ಸರಿಪಡಿಸುವ ಬದಲು ಅಳಿಸುವುದಕ್ಕಾಗಿಯೇ ರೂಪಿಸಲಾದ ಪ್ರಕ್ರಿಯೆ’’ ಎಂದು ವಾದಿಸಿದ್ದಾರೆ.
ಅವರೂ ಇಬ್ಬರು ಮತದಾರರನ್ನು ಸುಪ್ರೀಂ ಕೋರ್ಟ್ ಎದುರು ಹಾಜರು ಪಡಿಸಿದರು. ಅವರನ್ನು ಮೃತರು ಎಂದು ಪಟ್ಟಿಯಲ್ಲಿ ತೋರಿಸಲಾಗಿತ್ತು.
ಬಿಹಾರದಲ್ಲಿ ಎಸ್‌ಐಆರ್ ಎಲ್ಲ ರೀತಿಯಿಂದಲೂ ವಿಫಲವಾಗಿದೆ. ವಲಸೆ ಕಾರ್ಮಿಕರು, ಮಹಿಳೆಯರು, ದಲಿತರು ಮತ್ತು ಬಡವರನ್ನು ಇದು ಹೊರಗಿಟ್ಟಿದೆ.
ಅಂಕಿಅಂಶಗಳ ನ್ಯಾಯಸಮ್ಮತತೆಯನ್ನು ನೋಡುವಲ್ಲಿಯೂ ವಿಫಲವಾಗಿದೆ. ದತ್ತಾಂಶಗಳಲ್ಲಿನ ಅಸಾಧಾರಣ ಲೋಪಗಳು ಭಯಬೀಳಿಸುವಂತಿರುವುದಂತೂ ದೊಡ್ಡ ವೈಫಲ್ಯವಾಗಿದೆ.
ಲಕ್ಷಾಂತರ ಶೂನ್ಯ ವಿಳಾಸದ ಮತದಾರರು ಮತ್ತು ಚುಕ್ಕೆಗಳಿಂದ ಗುರುತಿಸಲಾದ ಮತದಾರರ ಕುಟುಂಬಗಳೊಂದಿಗೆ ಪಟ್ಟಿಗಳನ್ನು ತಯಾರಿಸಲಾಗಿದೆ. ಪಾರದರ್ಶಕತೆಯಂತೂ ಇಲ್ಲವೇ ಇಲ್ಲ ಎಂಬುದು ಮತ್ತೂ ಶೋಚನೀಯ ಸಂಗತಿಯಾಗಿದೆ.
ದಿ ವೈರ್, ಸ್ಕ್ರಾಲ್, ದಿ ಹಿಂದೂ, ನ್ಯೂಸ್‌ಲಾಂಡ್ರಿ ಮತ್ತು ದಿ ರಿಪೋರ್ಟರ್ಸ್ ಕಲೆಕ್ಟಿವ್‌ನ ಪುರಾವೆಗಳು ತೋರಿಸುತ್ತಿರುವ ಲೋಪಗಳು ಸಣ್ಣವಲ್ಲ. ಅವೆಲ್ಲವೂ ವಿಫಲ ವ್ಯವಸ್ಥೆಯನ್ನು ತೋರಿಸಿವೆ. ದುರುದ್ದೇಶಪೂರ್ವಕವಾಗಿ ಪಕ್ಷಪಾತಿಯಾಗಿರುವ ವ್ಯವಸ್ಥೆಯನ್ನು ಬಯಲು ಮಾಡಿವೆ.
ಚುನಾವಣಾ ಪ್ರಜಾಪ್ರಭುತ್ವ ಉಳಿಯುತ್ತದೆಯೇ ಎಂಬುದು ಈಗ ದೇಶ ಎದುರಿಸುತ್ತಿರುವ ಅತ್ಯಂತ ತುರ್ತು ಮತ್ತು ಭಯಾನಕ ಪ್ರಶ್ನೆಯಾಗಿದೆ.
ಬಿಹಾರದಲ್ಲಿ ಆಗಿರುವುದು ಮತದಾರ ಪಟ್ಟಿಯ ಆಡಿಟ್ ಅಲ್ಲ; ಅದು ಮತದಾರರ ಪಟ್ಟಿಯ ಮೇಲಿನ ದಾಳಿಯಾಗಿದೆ.
ನಾಗರಿಕರ ಹಕ್ಕುಗಳ ಮೇಲೆ, ಚುನಾವಣಾ ಪ್ರಕ್ರಿಯೆಯ ಸಮಗ್ರತೆಯ ಮೇಲೆ ಮತ್ತು ಜನರಿಂದ, ಜನರಿಗಾಗಿ ಜನರ ಸರಕಾರ ಎಂಬ ಕಲ್ಪನೆಯ ಮೇಲೆಯೇ ಈ ದಾಳಿಯಾಗಿದೆ.
ಈ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಮತ್ತು ಪಾರದರ್ಶಕ, ಸ್ವತಂತ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಬೇಕಾಗಿದೆ. ಇಲ್ಲದೇ ಹೋದರೆ, ಪ್ರಜಾಪ್ರಭುತ್ವದ ಅಡಿಪಾಯವೇ ಇಲ್ಲವಾಗುವುದನ್ನು ಸುಮ್ಮನೆ ನೋಡುತ್ತ ನಿಲ್ಲಬೇಕಾಗುತ್ತದೆ.







