ಹೊಸ ಪಕ್ಷದ ಮೂಲಕ ಎಲಾನ್ ಮಸ್ಕ್ ಅಮೆರಿಕದಲ್ಲಿ ನಿಜವಾಗಿಯೂ ರಾಜಕೀಯ ಕ್ರಾಂತಿ ಮಾಡಲಿದ್ದಾರೆಯೆ?

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್, ಹೊಸ ರಾಜಕೀಯ ಪಕ್ಷ ಘೋಷಿಸಿದ್ದಾರೆ.
ಜುಲೈ 3ರಂದು, ಅಮೆರಿಕನ್ ಪಾರ್ಟಿ ಸ್ಥಾಪನೆ ಅಗತ್ಯದ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲು ‘ಎಕ್ಸ್’ನಲ್ಲಿ ಸಮೀಕ್ಷೆ ನಡೆಸಿದ್ದರು. ಈ ಸಮೀಕ್ಷೆಯಲ್ಲಿ, ಅಮೆರಿಕಕ್ಕೆ ಹೊಸ ರಾಜಕೀಯ ಪಕ್ಷ ಬೇಕೇ? ದ್ವಿಪಕ್ಷ ಪದ್ಧತಿ ವ್ಯವಸ್ಥೆಯಿಂದ ಅಮೆರಿಕದ ಜನರು ಸ್ವಾತಂತ್ರ್ಯ ಬಯಸುತ್ತಾರೆಯೇ? ಎಂದು ಜನರನ್ನು ಕೇಳಿದ್ದರು.
ಇದಕ್ಕೆ ಎಕ್ಸ್‌ನಲ್ಲಿ ಹನ್ನೆರಡು ಲಕ್ಷಕ್ಕೂ ಹೆಚ್ಚು ಮಂದಿ ವೋಟ್ ಮಾಡಿ ಶೇ. 65.4 ಜನರು ‘ಹೌದು’ ಎಂದು ಹೇಳಿದ್ದರು.
ಎಕ್ಸ್‌ನ ಮಾಲಕರೂ ಮಸ್ಕ್ ಎಂಬುದನ್ನು ಇಲ್ಲಿ ಮತ್ತೆ ನೆನಪಿಸಿಕೊಳ್ಳುವುದು ಮುಖ್ಯ.
ಈಗ, ದೇಶವನ್ನು ಭ್ರಷ್ಟಾಚಾರದಿಂದ ದಿವಾಳಿ ಮಾಡುವ ಸನ್ನಿವೇಶದಲ್ಲಿ ಜನರಿಗೆ ಸ್ವಾತಂತ್ರ್ಯವನ್ನು ಮರಳಿ ತರಲು ಅಮೆರಿಕನ್ ಪಾರ್ಟಿ ರಚಿಸಲಾಗಿದೆ ಎಂದು ಅವರು ಘೋಷಿಸಿದ್ದಾರೆ.
‘‘ನಮ್ಮ ದೇಶವನ್ನು ಭ್ರಷ್ಟಾಚಾರವು ದಿವಾಳಿ ಮಾಡುತ್ತಿದೆ. ನಾವು ಪ್ರಜಾಪ್ರಭುತ್ವದಲ್ಲಲ್ಲ, ಏಕಪಕ್ಷ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಇದನ್ನು ಸರಿ ಮಾಡಲು ಅಮೆರಿಕನ್ ಪಾರ್ಟಿ ಸ್ಥಾಪನೆಯಾಗಿದೆ. ನಿಮ್ಮ ಸ್ವಾತಂತ್ರ್ಯವನ್ನು ನಿಮಗೆ ಮರಳಿ ನೀಡಲು ಅಮೆರಿಕನ್ ಪಾರ್ಟಿ ಶ್ರಮಿಸಲಿದೆ’’ ಎಂದು ಎಲಾನ್ ಮಸ್ಕ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
ಅಧ್ಯಕ್ಷ ಟ್ರಂಪ್ ತಂದಿರುವ ಒನ್ ಬಿಗ್ ಬ್ಯೂಟಿಫುಲ್ ಬಿಲ್ ಕಾಂಗ್ರೆಸ್‌ನ ಎರಡೂ ಸದನಗಳಲ್ಲಿ ಅಂಗೀಕಾರಗೊಂಡು ಜುಲೈ 4ರಂದು ಕಾನೂನಾಗಿದೆ. ಈ ಮಸೂದೆಯನ್ನು ಮಸ್ಕ್ ಅವರು ತೀವ್ರವಾಗಿ ವಿರೋಧಿಸಿದ್ದರು. ಈ ಮಸೂದೆ ತೆರಿಗೆದಾರರ ಮೇಲೆ ಭಾರೀ ಹೊರೆಯಾಗಲಿದೆ ಎಂದು ಮಸ್ಕ್ ಅಭಿಪ್ರಾಯಪಟ್ಟಿದ್ದರು. ಈ ಬಿಲ್‌ಗೆ ಅನುಮೋದನೆ ಸಿಕ್ಕರೆ ಜನರ ಹಿತಾಸಕ್ತಿಗಳಿಗೆ ನಿಜವಾಗಿಯೂ ಆದ್ಯತೆ ನೀಡುವ ಹೊಸ ಪಕ್ಷ ರಚಿಸುವುದಾಗಿ ಹೇಳಿದ್ದರು. ಆದರೆ ಅದು ಈಗ ಕಾನೂನಾಗಿಯೇ ಬಿಟ್ಟಿದೆ.
ಮಸ್ಕ್ ಅವರು ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಲು ದೊಡ್ಡ ಸಹಾಯ ಮಾಡಿದ್ದವರು. ಸುಮಾರು ಮುನ್ನೂರು ಮಿಲಿಯನ್ ಡಾಲರ್ ನಿಧಿಯನ್ನು ಟ್ರಂಪ್ ಪ್ರಚಾರಕ್ಕಾಗಿ ನೀಡಿದ್ದರು. ಅದರ ಜೊತೆಗೆ ತಮ್ಮ ಎಕ್ಸ್ ಸಾಮಾಜಿಕ ಜಾಲತಾಣವನ್ನು ಟ್ರಂಪ್ ಪರ ಪ್ರಚಾರ ವೇದಿಕೆಯಾಗಿ ಮಾಡಿದ್ದರು.
ಎಲ್ಲರ ನಿರೀಕ್ಷೆ ಮೀರಿ ಟ್ರಂಪ್ ಭರ್ಜರಿ ಬಹುಮತ ಪಡೆದು ಗೆದ್ದು ಬಿಟ್ಟರು. ಆಗ ಸರಕಾರಿ ವೆಚ್ಚ ಕಡಿಮೆ ಮಾಡುವ ಹಾಗೂ ದಕ್ಷತೆ ಹೆಚ್ಚಿಸುವ ಬಗ್ಗೆ ಪ್ಲ್ಯಾನ್ ಕೊಡಲು ಟ್ರಂಪ್ ರಚಿಸಿದ ಹೊಸ ಇಲಾಖೆ ‘ಡೋಜ್’ ಗೆ ಮಸ್ಕ್ ಮುಖ್ಯಸ್ಥರಾದರು. ಅಲ್ಲಿ ಮಸ್ಕ್ ಭಾರೀ ಸಂಖ್ಯೆಯಲ್ಲಿ ಸರಕಾರಿ ನೌಕರಿಗಳನ್ನು ಕಡಿಮೆ ಮಾಡಿದರು, ಜೊತೆಗೆ ಅಮೆರಿಕ ಇತರ ದೇಶಗಳಿಗೆ ನೀಡುತ್ತಿದ್ದ ನೆರವು ನಿಧಿಯನ್ನೂ ನಿಲ್ಲಿಸಿದರು. ಒಂದು ಹಂತದಲ್ಲಿ ಮಸ್ಕ್ ಅವರು ಅಧ್ಯಕ್ಷರೇ ಎಂದು ಜನ ಕೇಳುವಷ್ಟು ಅವರು ಪ್ರಭಾವಿಯಾಗಿ ಕಂಡರು. ಅಂತಹ ಪ್ರಶ್ನೆಗಳು ಟ್ರಂಪ್‌ಗೂ ಎದುರಾದವು. ಆದರೆ ಮಸ್ಕ್ ರನ್ನು ಟ್ರಂಪ್ ಬಹಳ ಗಟ್ಟಿಯಾಗಿ ಸಮರ್ಥಿಸಿಕೊಂಡರು. ಮಸ್ಕ್ ಅವರ ಟೆಸ್ಲಾ ಕಾರನ್ನು ಶ್ವೇತ ಭವನಕ್ಕೇ ತಂದು ಅದರ ಮಾರ್ಕೆಟಿಂಗ್ ಅನ್ನೂ ಮಾಡಿದರು ಟ್ರಂಪ್.
ಆದರೆ ಟ್ರಂಪ್ ಹಾಗೂ ಮಸ್ಕ್ ವ್ಯಕ್ತಿತ್ವ ಗೊತ್ತಿರುವವರು ನಿರೀಕ್ಷಿಸಿದ್ದ ಹಾಗೆಯೇ ಬಹಳ ಬೇಗ ಇಬ್ಬರ ನಡುವೆ ಭಿನ್ನಾಭಿಪ್ರಾಯ ತಲೆದೋರಿತು.
ಪ್ರತಿಯೊಂದು ವಿಷಯದಲ್ಲೂ ಮಸ್ಕ್ ಅವರ ಭಿನ್ನಾಭಿಪ್ರಾಯ ಟ್ರಂಪ್ ಗೆ ಕಿರಿಕಿರಿಯಾಯಿತು. ಇನ್ನು ಸಹಿಸಲು ಸಾಧ್ಯವಿಲ್ಲ ಎಂದು ಟ್ರಂಪ್ ಉಲ್ಟಾ ಹೊಡೆಯಲು ಪ್ರಾರಂಭಿಸಿದರು. ಅಲ್ಲಿಗೆ ಇಬ್ಬರ ಸಂಬಂಧ ಸಂಪೂರ್ಣವಾಗಿ ಬಿಗಡಾಯಿಸಿತು.
ಈ ಮಧ್ಯೆ ಟ್ರಂಪ್ ಅವರ ಮಹತ್ವಾಕಾಂಕ್ಷಿ ಒನ್ ಬಿಗ್ ಬ್ಯೂಟಿಫುಲ್ ಬಿಲ್‌ಗೆ ಮಸ್ಕ್ ತೀವ್ರ ವಿರೋಧ ವ್ಯಕ್ತಪಡಿಸಿದರು.
ಒನ್ ಬಿಗ್ ಬ್ಯೂಟಿಫುಲ್ ಕಾಯ್ದೆ ಒಂದೆಡೆ ತೆರಿಗೆ ಕಡಿತಗಳನ್ನು ಘೋಷಿಸುತ್ತದೆ. ಮತ್ತೊಂದೆಡೆ ಗಡಿ ಭದ್ರತೆ, ರಕ್ಷಣೆ ಮತ್ತು ಅಕ್ರಮ ವಲಸಿಗರ ಗಡಿಪಾರಿಗಾಗಿ ಹೆಚ್ಚಿನ ಹಣ ಖರ್ಚು ಮಾಡುವ ಭರವಸೆ ನೀಡುತ್ತದೆ. ತೆರಿಗೆ ಕಡಿತ ಮತ್ತು ಹೆಚ್ಚಿದ ಖರ್ಚಿನಿಂದ ಉಂಟಾಗುವ ಆದಾಯ ನಷ್ಟವನ್ನು ಸರಿದೂಗಿಸಲು, ಅದು ಕೆಲ ಕಲ್ಯಾಣ ಕ್ರಮಗಳು ಮತ್ತು ಸಬ್ಸಿಡಿಗಳನ್ನು ತೆಗೆದುಹಾಕುತ್ತದೆ. ಅಲ್ಲದೆ, ಸರಕಾರದ ಸಾಲದ ಮಿತಿಯನ್ನು ಸಹ ಹೆಚ್ಚಿಸುತ್ತದೆ. ಇದರೊಂದಿಗೆ, ಸರಕಾರ ಸಾಲ ಪಡೆಯಲು ಈಗಿದ್ದ ಮೀತಿಯನ್ನು ಮೀರಲು ಅನುಮತಿ ಕೊಡುತ್ತದೆ.
ಮಸ್ಕ್ ವಿರೋಧ ಇದ್ದುದೇ ಈ ಸಾಲ ಮಿತಿ ಹೆಚ್ಚಳದ ಬಗ್ಗೆ ಎಂದು ಹೇಳಲಾಗುತ್ತದೆ. ಈ ನಿರ್ಧಾರ ಆರ್ಥಿಕ ಹೊಣೆಗೇಡಿತನದ್ದು ಎಂದು ಅವರು ಹೇಳುತ್ತಾರೆ.
ಗ್ರೀನ್ ಎನರ್ಜಿಯಂಥ ಕೆಲ ವಲಯಗಳಿಗೆ ಸಬ್ಸಿಡಿಗಳನ್ನು ಕಡಿತಗೊಳಿಸುವುದರಿಂದ, ಅದು ಮಸ್ಕ್ ಅವರ ಇಲೆಕ್ಟ್ರಿಕ್ ಕಾರು ಕಂಪೆನಿ ಟೆಸ್ಲಾಗೆ ನೇರ ಏಟು ಕೊಡುತ್ತದೆ.
ಇದು ಅಮೆರಿಕದಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಕೊನೆಗಾಣಿಸುತ್ತದೆ ಮತ್ತು ಅಮೆರಿಕಕ್ಕೆ ಹಾನಿಕರವಾಗಿದೆ, ಇದು ಭವಿಷ್ಯದ ಕೈಗಾರಿಕೆಗಳಿಗೆ ತೀವ್ರ ಹಾನಿ ಮಾಡುತ್ತದೆ ಎಂದು ಮಸ್ಕ್ ಹೇಳಿದ್ದರು.
ಇಲೆಕ್ಟ್ರಿಕ್ ವಾಹನಗಳಂತಹ ಪರಿಸರ ಸ್ನೇಹಿ ತಂತ್ರಜ್ಞಾನಗಳಿಗೆ ಇದು ಹೆಚ್ಚಿನ ಬೆಂಬಲ ನೀಡುವುದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ.
ಈಗ ಇದನ್ನು ವಿರೋಧಿಸಿ ಅವರು ಘೋಷಿಸಿರುವ ಅಮೆರಿಕನ್ ಪಾರ್ಟಿ ಇನ್ನೂ ಒಂದು ಘೋಷಣೆ ಮಾತ್ರವಾಗಿದೆ. ಅದಕ್ಕಿಂತ ಮೀರಿ ಏನೂ ಸ್ಪಷ್ಟತೆಯಿಲ್ಲ.
ಅಮೆರಿಕದ ದ್ವಿಪಕ್ಷ ವ್ಯವಸ್ಥೆ ಮೂಲಭೂತವಾಗಿ ಏಕಪಕ್ಷ ಎನ್ನುವ ಹಾಗಿದೆ ಎಂಬುದು ಮಸ್ಕ್ ತಕರಾರು. ಡೆಮಾಕ್ರಟಿಕ್ ಬೆಂಬಲಿಗರಾಗಿದ್ದ ಮಸ್ಕ್ ಬಳಿಕ ಟ್ರಂಪ್ ಅವರ ಅತಿದೊಡ್ಡ ಬೆಂಬಲಿಗರಾಗಿದ್ದರು. ಈಗ ಹೊಸ ಪಕ್ಷದ ಸ್ಥಾಪಕರಾಗಿದ್ದಾರೆ. ಅವರ ಸ್ವಂತ ರಾಜಕೀಯ ದೃಷ್ಟಿಕೋನಗಳನ್ನು ನಿಖರವಾಗಿ ಹೇಳುವುದು ಕಷ್ಟ ಎಂದೇ ಪರಿಣಿತರು ಭಾವಿಸುತ್ತಿದ್ದಾರೆ.
ಆದರೆ ಅಮೆರಿಕನ್ನರು ಹೆಚ್ಚಿನ ಮಕ್ಕಳನ್ನು ಹೊಂದುವ ಅಗತ್ಯದ ಬಗ್ಗೆ ಮತ್ತು ಕೈಗಾರಿಕೆಗಳು ಹೇಗೆ ಬೆಳೆಯುತ್ತವೆ ಎಂಬುದರಲ್ಲಿ ಸರಕಾರ ಹೆಚ್ಚು ಹಸ್ತಕ್ಷೇಪ ಮಾಡಬಾರದು ಎಂಬ ಬಗ್ಗೆ ಮಸ್ಕ್ ಮಾತನಾಡಿದ್ದಾರೆ.
ಟ್ರಂಪ್ ಅವರ ಅಧ್ಯಕ್ಷೀಯ ಗೆಲುವಿನ ಸಂಭ್ರಮಾಚರಣೆಯಲ್ಲಿ ಕುಣಿದು ಕುಪ್ಪಳಿಸಿದ್ದ ಮಸ್ಕ್ ವೇದಿಕೆಯಲ್ಲಿ ಮಾತಾಡುವಾಗ ಮಾಡಿದ ಕೈಸನ್ನೆ ಜಾಗತಿಕವಾಗಿ ಚರ್ಚೆಗೊಳಗಾಯಿತು, ಖಂಡನೆಗೂ ಒಳಗಾಯಿತು.
ಅವರು ಮಾಡಿದ್ದು ನಾಝಿ ಸೆಲ್ಯೂಟ್ ಎಂದು ಯುರೋಪಿಯನ್ ದೇಶಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಯಿತು. ಅವರು ತಮ್ಮ ದೇಶಕ್ಕೆ ಬಾರದಂತೆ ನಿರ್ಬಂಧ ವಿಧಿಸಬೇಕು ಎಂದು ಹಲವು ಯುರೋಪಿಯನ್ ದೇಶಗಳ ರಾಜಕೀಯ ಪಕ್ಷಗಳು ಆಗ್ರಹಿಸಿದವು.
ಆದರೆ ಖಟ್ಟರ್ ಸಂಪ್ರದಾಯವಾದಿ ಶ್ವೇತ ವರ್ಣೀಯರು ಅವರನ್ನು ಅಭಿನಂದಿಸಿದರು. ಹಾಗಾಗಿ ಮಸ್ಕ್ ಧೋರಣೆ ಬಗ್ಗೆ ಸಂಶಯಗಳು ಇದ್ದೇ ಇವೆ.
ಯಾವುದೇ ಸಂಶಯವಿಲ್ಲ, ಆತ ಪಕ್ಕಾ ಉದ್ಯಮಿ, ಲಾಭಕೋರ ಹಾಗೂ ತೀವ್ರ ಜನವಿರೋಧಿ ಎಂದು ಹೇಳುವವರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ.
ಇನ್ನು ಮಸ್ಕ್ ಅವರ ಅಮೆರಿಕನ್ ಪಾರ್ಟಿ ಎಷ್ಟು ಬೇಗ ಚುನಾವಣೆಗಳಲ್ಲಿ ನಿಜವಾದ ಸ್ಪರ್ಧಿಯಾಗಬಹುದು ಎಂಬುದು ಈಗ ಪ್ರಶ್ನೆ.
ಮಸ್ಕ್ ಯೋಜನೆಗಳು ಮಹತ್ವಾಕಾಂಕ್ಷೆಯಿಂದ ಕೂಡಿವೆ ಎನ್ನಲಾಗುತ್ತಿದೆ.
ಏಕಪಕ್ಷೀಯ ವ್ಯವಸ್ಥೆಯನ್ನು ಮುರಿಯಲು ಹೊರಟಿರುವುದಾಗಿ ಅವರು ಹೇಳಿಕೊಳ್ಳುತ್ತಿದ್ದಾರೆ.
ಎಲಾನ್ ಮಸ್ಕ್ ಅವರ ಹೊಸ ಪಕ್ಷ 2026ರ ಮಧ್ಯಂತರ ಚುನಾವಣೆಗಳ ಮೇಲೆ ಅಥವಾ ಅದರ ಎರಡು ವರ್ಷಗಳ ನಂತರದ ಅಧ್ಯಕ್ಷೀಯ ಚುನಾವಣೆಯ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಒನ್ ಬಿಗ್ ಬ್ಯೂಟಿಫುಲ್ ಮಸೂದೆಯನ್ನು ಬೆಂಬಲಿಸಿದ ಎಲ್ಲರನ್ನೂ ಮುಂದಿನ ಚುನಾವಣೆಯಲ್ಲಿ ಸೋಲಿಸುವುದಾಗಿ ಮಸ್ಕ್ ಪಣ ತೊಟ್ಟಿದ್ದಾರೆ.
ಮಸ್ಕ್ ಪ್ರಕಾರ, ಈ ರಾಜಕೀಯ ಪಕ್ಷ ಪ್ರಜಾಪ್ರಭುತ್ವವನ್ನು ಜೀವಂತವಾಗಿಡುವ ಮತ್ತು ಮತದಾರರಿಗೆ ಸ್ವಾತಂತ್ರ್ಯ ನೀಡುವ ಉದ್ದೇಶ ಹೊಂದಿದೆ. ಈ ಹೊಸ ಪಕ್ಷ ಬಹುಮತ ಗಳಿಸುವ ವಿಶ್ವಾಸವನ್ನೂ ಮಸ್ಕ್ ವ್ಯಕ್ತಪಡಿಸಿದ್ದಾರೆ.
ಇಲ್ಲಿಯವರೆಗೆ ಉದ್ಯಮಿ ಮತ್ತು ಇತ್ತೀಚೆಗೆ ರಾಜಕಾರಣಿಯಾಗಿದ್ದ ಮಸ್ಕ್ ಈಗ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳಿಗೆ ಸವಾಲು ಹಾಕಲು ನೋಡುತ್ತಿದ್ದಾರೆ.
ಅಸ್ತಿತ್ವದಲ್ಲಿರುವ ಎರಡೂ ಪಕ್ಷಗಳು ಕಾಂಗ್ರೆಸ್‌ನಲ್ಲಿ ಬಹುಮತ ಪಡೆಯದಂತೆ ತಡೆಯುವ ಮೂಲಕ ಛಾಪು ಮೂಡಿಸುವುದು ಅವರ ಅಮೆರಿಕನ್ ಪಾರ್ಟಿಯ ಗುರಿಯಾಗಿದೆ.
ಅಮೆರಿಕನ್ ಪಾರ್ಟಿ ಉದ್ದೇಶಗಳನ್ನು ಕಾರ್ಯಗತಗೊಳಿಸಲು ಒಂದು ಮಾರ್ಗವೆಂದರೆ ಕೇವಲ 2 ಅಥವಾ 3 ಸೆನೆಟ್ ಸ್ಥಾನಗಳು ಮತ್ತು 8 ರಿಂದ 10 ಹೌಸ್ ಜಿಲ್ಲೆಗಳ ಮೇಲೆ ವಿಶೇಷ ಫೋಕಸ್ ಮಾಡುವುದು ಎಂದು ಮಸ್ಕ್ ಸುಳಿವು ನೀಡಿದ್ದಾರೆ.
ಪ್ರಶ್ನೆಯೆಂದರೆ, ಅಮೆರಿಕದ ರಾಜಕೀಯ ರಚನೆಯಲ್ಲಿ ದ್ವಿಪಕ್ಷ ಪದ್ಧತಿಯಿದ್ದು, ಹೊಸಬರು ಅದನ್ನು ಭೇದಿಸುವುದು ಕಷ್ಟ. ಗ್ರೀನ್ ಪಾರ್ಟಿ, ಲಿಬರ್ಟೇರಿಯನ್ ಪಾರ್ಟಿ ಮೊದಲಾದವೆಲ್ಲ ಅಂಥ ಪ್ರಯತ್ನ ಮಾಡಿ ಸೋತವುಗಳೇ ಆಗಿವೆ.
ರಾಷ್ಟ್ರೀಯ ಮಟ್ಟದ ಚುನಾವಣೆಗಳನ್ನು ಎದುರಿಸಲು, ಹೊಸ ಪಕ್ಷ ಫೆಡರಲ್ ಚುನಾವಣಾ ಆಯೋಗದಲ್ಲಿ ನೋಂದಾಯಿಸಿಕೊಳ್ಳಬೇಕು.
ಅದರ ನಂತರವೇ ಅದು ಚುನಾವಣೆಗಳಿಗಾಗಿ ಒಂದು ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಬಹುದು.
ಮಸ್ಕ್ ಅವರ ಪಕ್ಷ ಇನ್ನೂ ನೋಂದಾಯಿಸಿಕೊಳ್ಳಬೇಕಾಗಿದೆ.
ಅಲ್ಲದೆ, ರಾಜ್ಯಗಳು ತಮ್ಮದೇ ಆದ ನಿಯಮಗಳನ್ನು ಹೊಂದಿವೆ.
ಒಂದು ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಎಲ್ಲಾ 50 ರಾಜ್ಯಗಳಲ್ಲಿ ಮತಪತ್ರದಲ್ಲಿ ಕಾಣಿಸಿಕೊಳ್ಳಲು, ಅದು ಪ್ರತಿಯೊಂದು ರಾಜ್ಯದ ಅವಶ್ಯಕತೆಗಳನ್ನು ಪ್ರತ್ಯೇಕವಾಗಿ ಪೂರೈಸಬೇಕಿರುತ್ತದೆ.
ಇವೆಲ್ಲದಕ್ಕೂ ತಳಮಟ್ಟದ ತೊಡಗಿಸಿಕೊಳ್ಳುವಿಕೆ ಮತ್ತು ಅಪಾರ ತಾಳ್ಮೆ ಬೇಕು.
ಮಸ್ಕ್ ಅವರ ವೈಯಕ್ತಿಕ ಪ್ರಭಾವ ಏನೇ ಇದ್ದರೂ, ತಾಂತ್ರಿಕವಾಗಿ ಮತ್ತು ಸಂಘಟನೆಯಾಗಿ ಹೊಸ ಪಕ್ಷದ ದಾರಿ ಅಷ್ಟು ಸುಲಭದ್ದಲ್ಲ ಎನ್ನುವುದಂತೂ ನಿಜ. ಅಲ್ಲದೆ, ಮಸ್ಕ್ ದಕ್ಷಿಣ ಆಫ್ರಿಕಾ ಮೂಲದವರು. ಆದ್ದರಿಂದ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ.
ಅಮೆರಿಕ ಸಂವಿಧಾನದ ಆರ್ಟಿಕಲ್ ಎರಡು ಹಾಗೂ ಸೆಕ್ಷನ್ ಒಂದರ ಪ್ರಕಾರ ಅಧ್ಯಕ್ಷೀಯ ಅಭ್ಯರ್ಥಿ ಅಮೆರಿಕದಲ್ಲೇ ಹುಟ್ಟಿದ ನಾಗರಿಕನಾಗಿರಬೇಕು. ತಾನು ಆಫ್ರಿಕಾದಲ್ಲಿ ಹುಟ್ಟಿದ್ದರಿಂದ ಅಧ್ಯಕ್ಷನಾಗಲು ಸಾಧ್ಯವಿಲ್ಲ ಎಂದು ಮಸ್ಕ್ ಸ್ವತಃ ಈ ಹಿಂದೆ ಹೇಳಿದ್ದರು. ಹಾಗಾಗಿ, ಅವರು ಹೊಸ ಪಕ್ಷ ಕಟ್ಟುವಾಗಲೇ, ತನ್ನ ಪರವಾಗಿ ದೊಡ್ಡ ಪ್ರಭಾವವಿರುವ ಅಧ್ಯಕ್ಷೀಯ ಅಭ್ಯರ್ಥಿಯನ್ನೂ ಹುಡುಕಬೇಕಾಗಿದೆ.
ಇನ್ನು ತನಗೇ ಸವಾಲು ಹಾಕಿರುವ ಮಸ್ಕ್‌ಗೆ ಟ್ರಂಪ್ ಹೇಗೆಲ್ಲ ಸೆಡ್ಡು ಹೊಡೆಯಲಿದ್ದಾರೆ ಎಂಬುದೂ ಕುತೂಹಲಕಾರಿ.
ಟ್ರಂಪ್ ತನಗೆ ಸವಾಲು ಹಾಕುವವರನ್ನು ಸಹಿಸುವುದಿಲ್ಲ. ಈಗಾಗಲೇ ‘‘ನಿಮ್ಮ ಸಬ್ಸಿಡಿ ಎಲ್ಲ ಬಂದ್ ಮಾಡಿ ಮತ್ತೆ ದಕ್ಷಿಣ ಆಫ್ರಿಕಾಕ್ಕೆ ಹೋಗುವ ಹಾಗೆ ಮಾಡಬಲ್ಲೆ’’ ಎಂದು ಮಸ್ಕ್‌ಗೆ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಮಸ್ಕ್ ಅಮೆರಿಕದ ಈ ಹಿಂದಿನ ಹಾಗೂ ಈಗಿನ ಟ್ರಂಪ್ ಸರಕಾರದಿಂದ ಸಾಕಷ್ಟು ಪ್ರಯೋಜನ ಪಡೆದಿದ್ದಾರೆ. ಹಾಗಾಗಿಯೇ ಅವರೀಗ ವಿಶ್ವದ ಅತಿ ಶ್ರೀಮಂತ ಉದ್ಯಮಿ.
ಟ್ರಂಪ್ ಈಗ ಮುಖ್ಯವಾಗಿ ಮಸ್ಕ್‌ರ ಉದ್ಯಮ ಹಿತಾಸಕ್ತಿಗಳನ್ನೇ ಟಾರ್ಗೆಟ್ ಮಾಡಿ ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆ ಇದೆ.
ಆದರೆ ಮಸ್ಕ್ ಕೂಡ ಕಡಿಮೆ ಹಠದ ವ್ಯಕ್ತಿಯಲ್ಲ.
ಆದರೆ ಬುಡಕ್ಕೇ ಬಂದರೆ ತಕ್ಷಣ ಹಠ ಬಿಟ್ಟು ಬೇರೇನೇ ಮಾತಾಡಿದರೂ ಅಚ್ಚರಿಯಿಲ್ಲ.
ಹಾಗಾಗಿ ಈ ಮಾಜಿ ಫ್ರೆಂಡ್ಸ್ ಹಾಗೂ ಹಾಲಿ ಶತ್ರುಗಳ ‘ಜಗಳ್ ಬಂದಿ’ ಎಲ್ಲಿವರೆಗೆ ತಲುಪಲಿದೆ ಎಂದು ಕಾದು ನೋಡಬೇಕಿದೆ.







